ನೋಟು ಅಮಾನ್ಯೀಕರಣದ ನಂತರವೂ ನಿಂತಿಲ್ಲ ನಕಲಿ ನೋಟುಗಳ ಹಾವಳಿ!

ನೋಟು ಅಮಾನ್ಯೀಕರಣದ ನಂತರವೂ ನಿಂತಿಲ್ಲ ನಕಲಿ ನೋಟುಗಳ ಹಾವಳಿ!

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದ (ಎನ್ಸಿಆರ್ಬಿ) ಹೊಸ ದತ್ತಾಂಶವು 2017 ರಲ್ಲಿ 28.1 ಕೋಟಿ ರೂ. ಮೌಲ್ಯದ ನಕಲಿ ಭಾರತೀಯ ರುಪಾಯಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಇದು 2016 ರಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳ ಮೌಲ್ಯಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ (15.1 ಕೋಟಿ ರೂ.).

ಈ ವಾರ ಬಿಡುಗಡೆಯಾದ ‘ಕ್ರೈಮ್ ಇನ್ ಇಂಡಿಯಾ - 2017’ ವರದಿಯ ಪ್ರಕಾರ (ಪುಟಗಳು 1261 ರಿಂದ 1263), 2017 ರಲ್ಲಿ ವಶಪಡಿಸಿಕೊಂಡ ಒಟ್ಟು ನಕಲಿ ನೋಟುಗಳ ಸಂಖ್ಯೆ 3.55 ಲಕ್ಷ. ಇದು 2016 ರಲ್ಲಿ ಅಧಿಕಾರಿಗಳು ವಶಪಡಿಸಿಕೊಂಡ ನಕಲಿ ನೋಟುಗಳ ಸಂಖ್ಯೆಗಿಂತ ಗಣನೀಯವಾಗಿ ಹೆಚ್ಚಾಗಿದೆ.

ವರದಿಯು ಪ್ರದೇಶವಾರು ವಿಶ್ಲೇಷಣೆಯೊಂದಿಗೆ ಇದ್ದು, ಇದರಲ್ಲಿ ಗುಜರಾತ್ ಅತ್ಯಧಿಕ ನಕಲಿ ಕರೆನ್ಸಿಯ ಮೌಲ್ಯವನ್ನು ವಶಪಡಿಸಿಕೊಂಡ ರಾಜ್ಯವಾಗಿದೆ (9 ಕೋಟಿ ರೂ.), ನಂತರ ದೆಹಲಿ (6.7 ಕೋಟಿ ರೂ.), ಉತ್ತರ ಪ್ರದೇಶ (2.8 ಕೋಟಿ ರೂ.) ಮತ್ತು ಪಶ್ಚಿಮ ಬಂಗಾಳ (1.9 ಕೋಟಿ ರೂ.)ದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಈ ದತ್ತಾಂಶ ಹೇಳುತ್ತಿರುವುದೇನು?

2016 ರ ನವೆಂಬರ್ನಲ್ಲಿ ಎನ್ಡಿಎ ಸರ್ಕಾರವು ನೋಟು ನಿಷೇಧವನ್ನು ಮಾಡಿದಾಗ, ನೀಡಿದ  ಕಾರಣಗಳಲ್ಲಿ ನೋಟು ನಿಷೇಧವು ಕಪ್ಪು ಹಣ, ಭ್ರಷ್ಟಾಚಾರ, ನಕಲಿ ನೋಟುಗಳು ಮತ್ತು ಭಯೋತ್ಪಾದಕ ನಿಧಿಯ ವಿರುದ್ಧ ಹೋರಾಡುತ್ತದೆ ಎಂಬುದು ಪ್ರಮುಖ ಕಾರಣವಾಗಿತ್ತು.

ಕೊನೆಯ ಎರಡು ಕಾರಣಗಳಂತೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಮಾಧ್ಯಮ ವರದಿಗಳಲ್ಲಿ ಅನೇಕ ಸಂದರ್ಭಗಳಲ್ಲಿ ಹೆಚ್ಚಾಗಿ ಸದ್ದುಮಾಡಿತ್ತು. ನೋಟು ನಿಷೇಧದ ನಂತರ, ಪಾಕಿಸ್ತಾನದ ನಕಲಿ ನೋಟು ಮುದ್ರಣಾಲಯಗಳು ಸ್ಥಗಿತಗೊಂಡಿವೆ ಮತ್ತು ಭಯೋತ್ಪಾದಕ ಹಣಕಾಸು ಕಡಿಮೆಯಾಗಿದೆ ಎಂಬ ವರದಿಗಳ ಸರಮಾಲೆಗಳೇ ಕೆಲವು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು.

‘ಕ್ರೈಮ್ ಇನ್ ಇಂಡಿಯಾ - 2017’ ವರದಿಯನ್ನು ವಿಶ್ಲೇಷಿಸುವಲ್ಲಿನ ಸಮಸ್ಯೆ ಏನೆಂದರೆ, ನಕಲಿ ನೋಟುಗಳ ಕುರಿತು ನಮ್ಮಲ್ಲಿ ಎರಡು ಸಾರ್ವಜನಿಕ ಮಾಹಿತಿಯ ಮೂಲಗಳಿವೆ.

ಮೊದಲನೆಯದ್ದು ಎನ್ಸಿಆರ್ಬಿ ದತ್ತಾಂಶವಾಗಿದ್ದು, ದೇಶಾದ್ಯಂತ ಕಾನೂನು ಜಾರಿ ಅಧಿಕಾರಿಗಳು ಎಷ್ಟು ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದರ ಕುರಿತು ಈ ವರದಿ ಮಾತನಾಡುತ್ತದೆ.
ಎರಡನೆಯದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ದತ್ತಾಂಶ. ಅದರ ವಾರ್ಷಿಕ ವರದಿಗಳ ಮೂಲಕ, ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶಿಸಿದ ನಂತರ ಆರ್ಥಿಕ ವರ್ಷದ ಕೊನೆಯಲ್ಲಿ ಎಷ್ಟು ನಕಲಿ ನೋಟುಗಳು ಪತ್ತೆಯಾಗಿವೆ ಎಂಬುದು.

ಎನ್ಸಿಆರ್ಬಿ ದತ್ತಾಂಶವು ನಕಲಿ ನೋಟುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಸೂಚಿಸಿದರೆ, ಆರ್ಬಿಐ ದತ್ತಾಂಶವು ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಪತ್ತೆಯಾದ ನಕಲಿ ನೋಟುಗಳ ಸಂಖ್ಯೆ ಕುಸಿದಿದೆ ಎಂದು ತೋರಿಸುತ್ತದೆ. ಆರ್ ಬಿ ಐ ವರದಿಯ ಪ್ರಕಾರ 2017ರ ಆರ್ಥಿಕ ವರ್ಷದಲ್ಲಿ 7.62 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದರೆ, ಆರ್ಥಿಕ ವರ್ಷ 2018 ರಲ್ಲಿ 5.22 ಲಕ್ಷ ನಕಲಿ ನೋಟುಗಳು ಮತ್ತು ಆರ್ಥಿಕ ವರ್ಷ 2019 ರಲ್ಲಿ 3.17 ಲಕ್ಷ ನೋಟುಗಳಿಗೆ ಇಳಿದಿದೆ ಎಂದು ತೋರಿಸಲಾಗಿದೆ.

ಉತ್ತಮ ಗುಣಮಟ್ಟದ ನಕಲಿ ನೋಟುಗಳ ಬಗ್ಗೆ!

ಅದೇನೇ ಇದ್ದರೂ, ನೋಟು ಅಮಾನ್ಯೀಕರಣವು ನಕಲಿ ಕರೆನ್ಸಿಯ ಸಮಸ್ಯೆಯನ್ನು ಪರಿಹರಿಸುತ್ತದೆ ಎಂಬ ಪ್ರತಿಪಾದನೆಯು ಸ್ಪಷ್ಟವಾಗಿ ಸುಳ್ಳು. ಉದಾಹರಣೆಗೆ, ಎನ್ಸಿಆರ್ಬಿ ದತ್ತಾಂಶವು 2017 ರಲ್ಲಿ 74,498 ನಕಲಿ ರೂ.2,000ದ ನೋಟುಗಳನ್ನೇ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತೋರಿಸುತ್ತದೆ. ಆರ್ಥಿಕ ವರ್ಷ 2019 (21, 847) ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಪತ್ತೆಯಾದ ನಕಲಿ ರೂ .2,000 ನೋಟುಗಳ ಸಂಖ್ಯೆಯೂ ಅತ್ಯಲ್ಪವಲ್ಲ. ಹೊಸ ರೂ .2,000 ಮತ್ತು 500 ರೂ ನೋಟುಗಳನ್ನು ನಕಲಿ ಮಾಡಲು ಕಷ್ಟವೇ ಎಂಬುದು ಎರಡನೆಯ ಆಲೋಚನೆ. ಎನ್ಸಿಆರ್ಬಿ ಮತ್ತು ಆರ್ಬಿಐ ಡೇಟಾ ಇದಕ್ಕೆ ಸಂಪೂರ್ಣವಾಗಿ ವಿರುದ್ದವಾದ ದತ್ತಾಂಶವನ್ನೇ ಸೂಚಿಸುತ್ತದೆ.

ಜುಲೈ 2019 ರಲ್ಲಿ, ಇಂಡೋ-ಬಾಂಗ್ಲಾದೇಶ ಗಡಿಯಿಂದ ನಕಲಿ ಕರೆನ್ಸಿಯ ಹರಿವು ಮುಂದುವರೆದಿದೆ ಎಂಬ ವರದಿಗಳಿಗೆ ಪ್ರತಿಕ್ರಿಯೆಯಾಗಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ, ಒಳಹರಿವಾದ ನಕಲಿ ನೋಟುಗಳು ಕಡಿಮೆ ಗುಣಮಟ್ಟದ ಅಂದರೆ ಕಂಪ್ಯೂಟರ್ ಉತ್ಪಾದಿಸಿದ ಕಡಿಮೆ ಕುಶಲತೆಯಿಂದ ಕೂಡಿದೆ" ಎಂದು ಹೇಳಿದ್ದರು. ಮತ್ತು 2019 ರ ಆರಂಭದವರೆಗೆ ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು 2,000 ಮತ್ತು 500 ರೂ.ಗಳನ್ನು ವಶಪಡಿಸಿಕೊಂಡ ಪ್ರಕರಣಗಳು ವರದಿಯಾಗಿಲ್ಲ" ಎಂದು ಸೀತಾರಾಮನ್ ವಿಶ್ವಾಸದಿಂದ ಹೇಳಿದ್ದರು.

ಆದರೆ ಸೀತಾರಾಮನ್ ಅವರ ಹೇಳಿಕೆಯನ್ನು ಬಲವಾಗಿ ಅಲ್ಲಗಳೆದಿರುವ ‘ದಿ ಹಿಂದೂ’, ಅಕ್ಟೋಬರ್ 2019 ರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆಯು ಎನ್ಎಸ್ಎ ಮುಖ್ಯಸ್ಥ ಅಜಿತ್ ದೋವಲ್ ಅವರ ಸಮ್ಮುಖದಲ್ಲಿಯೇ "ಉತ್ತಮ-ಗುಣಮಟ್ಟದ” ನಕಲಿ ಕರೆನ್ಸಿ ನೋಟುಗಳನ್ನು ಪಾಕಿಸ್ತಾನವು ಉತ್ಪಾದಿಸುತ್ತಿದೆ ಎಂಬುದನ್ನು ಪುರಾವೆಗಳ ಮೂಲಕ ದೃಡಪಡಿಸಿದೆ ಎಂದು ವರದಿ ಮಾಡಿದೆ.