ಮಡಿಕೇರಿಯ ಐತಿಹಾಸಿಕ ಅರಮನೆ : ಮೇಲೆಲ್ಲ ಥಳುಕು, ಒಳಗೆಲ್ಲ ಹುಳುಕು

ಮಡಿಕೇರಿಯ ಐತಿಹಾಸಿಕ ಅರಮನೆ : ಮೇಲೆಲ್ಲ ಥಳುಕು, ಒಳಗೆಲ್ಲ ಹುಳುಕು

ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ಮತ್ತು ಸ್ಥಳೀಯರ ನಿರ್ಲಕ್ಷ್ಯದಿಂದಾಗಿ ಮಡಿಕೇರಿಯ ಐತಿಹಾಸಿಕ ಅರಮನೆ ಅನಾಥವಾಗಿದೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವರದಿ.

ಕಳೆದ ಸಾಲಿನ ವರ್ಷಧಾರೆಗೆ ಕನಲಿ ಹೋಗಿದ್ದ ಮಡಿಕೇರಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲ. ಜನ ಗಾಳಿಸುದ್ದಿಗಳಿಂದಲೇ ಇನ್ನಷ್ಟು ಹೆದರಿಕೊಂಡು ಇರುವಂತಾಗಿದೆ.  ಇದರ ನಡುವಲ್ಲೇ ತನ್ನದೇ ಆದ ಇತಿಹಾಸ ಹೊಂದಿರುವ ಅರಮನೆ ಕಟ್ಟಡವೂ ಕುಸಿದು ಬೀಳುವ ಹಂತ ತಲುಪಿದ್ದರೂ, ಇದರ ದುರಸ್ತಿ ಯಾರದ್ದು ಎಂಬ ಜಟಾಪಟಿ ನಡೆದಿದೆ.

ಮಡಿಕೇರಿಯ ಹೃದಯ ಭಾಗದಲ್ಲೇ ಇರುವ ಕೋಟೆ ಮತ್ತು ಅರಮನೆ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿರುವ ಕಲ್ಲಿನ ಆನೆಗಳು ಮನಮೋಹಕವಾದವು. 17 ನೇ ಶತಮಾನದಲ್ಲಿ ಮುದ್ದುರಾಜ ಕೋಟೆ ಕಟ್ಟಿದ್ದವರಾಗಿದ್ದು, ಟಿಪ್ಪು ಸುಲ್ತಾನ್ ಇದನ್ನ ಮರುನಿರ್ಮಾಣ ಮಾಡಿ ಜಾಫರ್‍ಬಾದ್ ಎಂದು ಹೆಸರಿಟ್ಟಿದ್ದ. 1790 ರಲ್ಲಿ ದೊಡ್ಡ ವೀರರಾಜೇಂದ್ರ ಈ ಕೋಟೆಯ ನಿಯಂತ್ರಣ ಹೊಂದಿದ್ದರು. 1812-14 ರಲ್ಲಿ ಲಿಂಗರಾಜ ಇದನ್ನ ಮತ್ತಷ್ಟು ಆಕರ್ಷಕಗೊಳಿಸಿದ್ದರು. ಇಂಗ್ಲಿಷರು ಇದನ್ನ 1834 ರಲ್ಲಿ ಹೊಕ್ಕು ಮದ್ರಾಸ್ ಸರ್ಕಾರದ ನಿಧಿಯನ್ನ ಬಳಸಿ ಅರಮನೆ ಆವರಣದಲ್ಲಿ ಸೇಂಟ್ ಮಾಕ್ರ್ಸ್ ಚರ್ಚನ್ನು 1859 ರಲ್ಲಿ ನಿರ್ಮಿಸಿದ್ದರು.

ಸ್ವಾತಂತ್ರ್ಯ ಬಳಿಕ ಚರ್ಚ್ ಮುಚ್ಚಲ್ಪಟ್ಟು, ರಾಜ್ಯ ಸರ್ಕಾರ 1971 ರಲ್ಲಿ ಇದನ್ನ ತನ್ನ ಆಡಳಿತಕ್ಕೆ ತೆಗೆದುಕೊಂಡಿದ್ದು, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿಯಂಥ ಸರ್ಕಾರೀ ಅಂಗಗಳು ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿವೆ.. ಅರಮನೆ ಮತ್ತು ಕೋಟೆಯ ಉತ್ತರಾಧಿಕಾರಿ ನಾನು, ಹಾಲೇರಿ ಮನೆತನದವರೆಂದು ಪ್ರತಿಪಾದಿಸುವ ಮೈಸೂರಿನ ವ್ಯಕ್ತಿಯೊಬ್ಬ ಆಗಿನಿಂದಲೂ ನ್ಯಾಯಾಲಯದಲ್ಲಿ ಬಡಿದಾಡುತ್ತಿದ್ದಾರೆ. ಆಗಾಗ್ಗೆ ಕಚೇರಿಗಳಿಗೆ ಬೀಗ ಜಡಿಯುವುದು ಇತ್ಯಾದಿ ಯತ್ನಗಳನ್ನೆಲ್ಲ ಮಾಡಿ ಸುದ್ದಿಯಾಗುತ್ತಿದಾರೆ.

ಸದರಿ ಅರಮನೆಯಲ್ಲಿ ಜಿ.ಪಂ. ಕಚೇರಿ ಇರುವುದರಿಂದ ಪುರಾತತ್ವ ಇಲಾಖೆ ಸಂಪೂರ್ಣವಾಗಿ ತನ್ನ ವಶಕ್ಕೆ ಇದನ್ನ ವಹಿಸಿಕೊಳ್ಳಲಾಗಿಲ್ಲ. ಬದಲಿಗೆ ಕೋಟೆಯ ಕಾಂಪೌಂಡ್ ಮಾತ್ರ ಇದರ ಹಿಡಿತದಲ್ಲಿದೆ. ಹಾಗಾಗಿ ಕೋಟೆಯನ್ನ ಮಾತ್ರ ದುರಸ್ತಿ ಮಾಡಿಸಿಕೊಂಡು, ಸುಣ್ಣಬಣ್ಣ ಬಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ.

ಆದರೆ ಜಿ.ಪಂ. ಕಚೇರಿಯಿರುವ ಅರಮನೆ ದುಸ್ಥಿತಿಗೆ ತಲುಪಿದೆ. ಇದು ನಮ್ಮ ಸುಪರ್ದಿಯಲ್ಲಿಲ್ಲ ಎಂದು ಪುರಾತತ್ವ ಇಲಾಖೆ ದುರಸ್ತಿ ಮಾಡಿಸುತ್ತಿಲ್ಲ. ನೀವು ಖಾಲಿ ಮಾಡಿ ನಮಗೆ ವಹಿಸಿ ಆಮೇಲೆ ಸರಿಮಾಡಿಕೊಳ್ಳುತ್ತೇವೆ ಎಂಬುದು ಇವರ ವಾದವಾದರೆ, ನಮಗಿನ್ನೂ ಸ್ವಂತ ಕಟ್ಟಡವಾಗಿಲ್ಲ, ಪುರಾತತ್ವ ಇಲಾಖೆಯಡಿಯ ಅರಮನೆಯನ್ನ ನಾವು ದುರಸ್ತಿ ಮಾಡಿಸಲು ಆಗಲ್ಲ, ನೀವೆ ಮಾಡಿಸಿ ಎಂದು ಜಿ.ಪಂ.ನವರು ಕೂತಿದ್ದಾರೆ.

ಇವರಿಬ್ಬರ ನಡುವಣ ಬಡಿದಾಟದಲ್ಲಿ ಐತಿಹಾಸಿಕ ಅರಮನೆ ಅಳಿವಿನಂಚಿಗೆ ತಲುಪುತ್ತಿದ್ದರೆ, ಇದರ ಕೋಟೆ ಗೋಡೆಗಳು ಮಾತ್ರ ನಳನಳಿಸುತ್ತಿವೆ. ಮೇಲೆಲ್ಲ ಥಳುಕು ಒಳಗೆಲ್ಲ ಹುಳುಕು ಎಂಬುದರ ಸತ್ಯದರ್ಶನ ಮಾಡಿಸುತ್ತಿದೆ.