ಸರಣಿ ಕೊಲೆಪಾತಕಿ ಜಾಲಿ : ಪೊಲೀಸರು ಬಿಚ್ಚಿಟ್ಟ ಮೈಜುಮ್ಮೆನ್ನಿಸುವ ಸತ್ಯಗಳು

2002 ರಿಂದ 2016ರ ವರೆಗೆ ನಡೆದ ಸರಣಿಸಾವಿನ ಪ್ರಕರಣವನ್ನು ಕೇರಳ ಪೊಲೀಸರು ಕೊನೆಗೂ ಭೇದಿಸಿದರು

ಸರಣಿ ಕೊಲೆಪಾತಕಿ ಜಾಲಿ : ಪೊಲೀಸರು ಬಿಚ್ಚಿಟ್ಟ ಮೈಜುಮ್ಮೆನ್ನಿಸುವ ಸತ್ಯಗಳು

ಉತ್ತರ ಕೇರಳದ ಕೋಯಿಕ್ಕೋಡ್ ಗೆ ಸೇರಿದ ಕೊಡತಾಯಿ ಪಟ್ಟಣದಲ್ಲಿ 2002 ರಿಂದ 2016 ರ ನಡುವೆ ಒಂದು ವರ್ಷದ ಹೆಣ್ಣುಮಗು ಸೇರಿದಂತೆ, ಒಂದೇ ಕುಟುಂಬಕ್ಕೇ ಸಂಬಂಧಪಟ್ಟ ಆರು ಜನರ ಸರಣಿ ಸಾವುಗಳು ಸಂಭವಿಸಿತ್ತು. ಈ ಆರು ಸಾವುಗಳು ಕೂಡ ಕೊಲೆಗಳೆಂದೂ ಬಹು ಸಮಯದವರೆಗೆ ಪೊಲೀಸರೂ ಸೇರಿದಂತೆ ಊರಿನ ಯಾರಿಗೂ ಸಂಶಯವೇ ಬರದಷ್ಟು ವ್ಯವಸ್ಥಿತವಾಗಿ ಈ ಎಲ್ಲಾಕೊಲೆಗಳನ್ನು ಮಾಡಲಾಗಿತ್ತು.

ಅಕ್ಟೋಬರ್ 5ನೇ ಶನಿವಾರ ಈ ಆರು ಸರಣಿ ಸಾವುಗಳ ತನಿಖೆ ನಡೆಸುತ್ತಿದ್ದ ಕೇರಳ ಪೋಲೀಸರು 47 ವರ್ಷದ ಜಾಲಿ ಜೋಸೆಫ್ ಎಂಬವಳನ್ನು ಬಂಧಿಸಿದ್ದಾರೆ.

ಜಾಲಿ ಜೋಸೆಫ್ ಕಳೆದ ಇಪ್ಪತ್ತು ವರ್ಷಗಳಿಂದಲೂ ಸೌಂದರ್ಯ ಉಪಚಾರಕಿ(ಬ್ಯೂಟಿಷಿಯನ್)ಯಾಗಿ ಕಾರ್ಯನಿರ್ವಹಿಸುತ್ತಿದ್ದವಳು. ಆದರೆ ತನ್ನೆರಡೂ ಮಕ್ಕಳನ್ನೂ ಸೇರಿದಂತೆ ಇಡೀ ಪಟ್ಟಣಕ್ಕೆ ತಾನು ಕೋಯಿಕ್ಕೋಡ್ ಕೇಂದ್ರೀಯ ತಂತ್ರಜ್ಣಾನ ವಿದ್ಯಾಲುದಲ್ಲಿ (ಎನ್.ಐ.ಟಿ)ಯಲ್ಲಿನ ಉಪನ್ಯಾಸಕಿ ಎಂದು ನಂಬಿಸಿದ್ದಳು. ಈ ಒಂದು ಸುಳ್ಳು ಆರು ಸಾವುಗಳ ಹಿಂದಿರುವ  ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಸುಳಿವು ನೀಡಿತ್ತು.

ಜಾಲಿ ಜೋಸೆಫ್  ಆರು ಜನರನ್ನೂ ಸೈನೈಡ್ ನ ಮೂಲಕ ಕೊಂದಿದ್ದರೂ, ತಾನು ಮಾಡಿದ ಒಂದೊಂದು ಕೊಲೆಯೂ ಪತ್ತೆಯಾಗದೆ ಹೋದ ಹಾಗೆಯೇ ಆಕೆಯ ವಿಶ್ವಾಸ ಹೆಚ್ಚಾಗುತ್ತಲೇ ಹೋಯಿತು. ಪೊಲೀಸ್ ವಶದಲ್ಲಿರುವ ಜಾಲಿ ಜೋಸೆಫ್ ಗೆ ತಾನು ಮಾಡಿದ ಕೊಲೆಗಳ ಬಗ್ಗೆ ಯಾವುದೇ ಪಶ್ಚಾತಾಪ ಇಲ್ಲ. ಬದಲಾಗಿ ತಾನು ಬಂಧನಕ್ಕೆ ಒಳಗಾದ ಬಗ್ಗೆ ಬೇಸರ ಇದೆ ಅನ್ನೋದು ತನಿಖಾಧಿಕಾರಿ ಕೆ.ಜಿ ಸೈಮಾನ್ ಅವರ ಮಾತು.
 

ಸುಳ್ಳಿನಿಂದಲೇ ಊರಿನವರ ಗೌರವಕ್ಕೆ ಪಾತ್ರವಾಗಿದ್ದಳು ಜಾಲಿ ಜೋಸಫ್

ಊರಿನ ಜನರ ಪ್ರಕಾರ ಆಕೆ ದೊಡ್ಡ ಮಟ್ಟದ ಸ್ನೇಹಿತರ ಬಳಗವನ್ನೇ ಹೊಂದಿದ್ದಳು, ಚರ್ಚ್ ಗೆ ಹೋಗೋದು, ತನ್ನ ಮನೆಯಲ್ಲಿ ಧಾರ್ಮಿಕ ಪ್ರಾರ್ಥನೆಗಳನ್ನು ಆಯೋಜಿಸುವುದು, ಹೀಗೆ ಆಕೆ ಸದಾ ಕಾಲ ಚಟುವಟಿಕೆಯಿಂದ ಇರುತಿದ್ದಳು. ಹಾಗೂ ಇಡೀ ಊರಿನವರನ್ನು ತಾನು ಕೇಂದ್ರೀಯ ತಂತ್ತಜ್ಞಾನ ವಿದ್ಯಾಲಯದ ಉಪನ್ಯಾಸಕಿ ಎಂದು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಳು. ಈ  ಒಂದು ಸುಳ್ಳು ಆಕೆಯ ಕುಟುಂಬದಲ್ಲಾಗುತ್ತಿದ್ದ ಅಸ್ವಾಭಾವಿಕ ಸಾವುಗಳಿಂದ ಅವಳನ್ನು ದೂರ ಇಟ್ಟಿತ್ತು. ಮತ್ತು ಉಪನ್ಯಾಸಕಿ ಎಂಬ ಕಾರಣದಿಂದಲೇ ಆಕೆಯನ್ನು ಊರಿನ ಜನರ ಗೌರವಕ್ಕೂ ಪಾತ್ರಳಾಗಿದ್ದಳು. ಆಕೆಯ ಇಪ್ಪತ್ತೊಂದು ವರ್ಷದ ಮಗ ಯಾವಾಗ ತಾನು ಉಪನ್ಯಾಸಕಿ ಅನ್ನೋದರ ಬಗ್ಗೆ ತನ್ನ ಅನುಮಾನವನ್ನು ವ್ಯಕ್ತಪಡಿಸಿದನೋ ಅವತ್ತಿಂದ ಆಕೆ ತನ್ನ ಕಾರಿಗೆ ಎನ್. ಐ. ಟಿ ಯ ಶಿಕ್ಷಕಿ ಎಂಬ ಬೋರ್ಡ್ ಹಾಕಿಕೊಂಡು ತಿರುಗಾಡಲು ಪ್ರಾರಂಭಿಸಿದ್ದಳು. ಇದು ಆಕೆಯನ್ನು ಜನರು ಮತ್ತಷ್ಟು ಗೌರವಿಸುವಂತೆ ಮಾಡಿತ್ತು.

ಆದರೆ ಪೋಲಿಸರು ಜಾಲಿಯ ಕೆಲಸ ಮತ್ತು ವಿದ್ಯಾರ್ಹತೆಯ ಬಗ್ಗೆ ಯಾವಾಗ ಪ್ರಶ್ನೆ ಹಾಕಿದರೋ ಆವಾಗಲೇ ಈಕೆ ಹೇಳುತ್ತಿರುವುದು ಎಲ್ಲವೂ ನಿಜವಲ್ಲ ಅನ್ನೋ ಅನುಮಾನ ಬರತೊಡಗಿತ್ತು. ‘ಕೇಂದ್ರೀಯ ತಂತ್ರಜ್ಞಾನ ವಿದ್ಯಾಲಯದಲ್ಲಿ’ ಉಪನ್ಯಾಸಕಿಯಾಗಿರುವ ನಿನ್ನ ವಿದ್ಯಾರ್ಹತೆ ಏನು ಎಂದು ಕೇಳಿದ ತನಿಖಾಧಿಕಾರಿಗಳಿಗೆ  ‘ಬಿಕಾಂ’ ಎಂದು ಉತ್ತರ ಕೊಟ್ಟಿದ್ದಳು ಜಾಲಿ ಜೋಸೆಫ್. ಇದೇ ಒಂದು ಉತ್ತರ ಪೋಲಿಸರಿಗೆ ಕೊಲೆಯ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಸಾಕಿತ್ತು.

ಎಲ್ಲಾ ಕೊಲೆಯನ್ನು ಜಾಲಿ ಜೋಸೆಫ್ ಆಸ್ತಿಗಾಗಿ ಕೊಲೆ ನಡೆಸಿದ್ದಾಳೆ ಎಂದು  ಪೊಲೀಸರು ಆರಂಭಿಕ ತನಿಖಾ ವರದಿ ನೀಡಿದ್ದರು, ಆದರೆ ಪ್ರತಿ ಕೊಲೆಯೂ ಅದರದ್ದೇ ಆದ ಉದ್ದೇಶ ಹೊಂದಿತ್ತು ಎಂಬುದು ನಂತರದ ತನಿಖೆಯಿಂದ ಬಯಲಾದ ಸತ್ಯ. ಹಾಗಾದರೆ ಈ ಕೊಲೆಗಳು ಯಾಕಾಗಿ ಮತ್ತು ಹೇಗೆ ನಡೆಯಿತು ಎಂಬುದರ ಮಾಹಿತಿ ಇಲ್ಲಿದೆ.

ಜಾಲಿ ಮೊದಲು ಬಲಿ ತೆಗೆದುಕೊಂಡದ್ದು ತನ್ನ ಅತ್ತೆಯನ್ನು

ತನ್ನ ಮೊದಲ ಕೊಲೆಯನ್ನು ಜಾಲಿ ಹೇಗೆ ಮಾಡಿದಳು ಎಂಬುದು  ನಿಖರವಾಗಿ ತಿಳಿದು ಬಂದಿಲ್ಲ. ತನ್ನ ಅತ್ತೆಗೆ ಹಲವು ಕಾಯಿಲೆಗಳು ಇತ್ತು ಎಂಬುದು ಅವಳಿಗೆ ತಿಳಿದಿತ್ತು, ಆದ್ದರಿಂದ ನಿಧಾನಗತಿಯ ವಿಷವನ್ನು ನೀಡಿರಬಹುದು ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

2002 ರ ಒಂದು ದಿನ ಜಾಲಿಯ ಅತ್ತೆ ಅನ್ನಮ್ಮ ಥೋಮಸ್ ಮಟನ್ ಸೂಪ್ ಸೇವಿಸಿದ ನಂತರ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಎರೆಡೆರಡು ಆರೋಗ್ಯ ಪರೀಕ್ಷೆಗಳ ನಂತರವೂ ವೈದ್ಯರು  ಅಣ್ಣಮ್ಮಳ ದೇಹದಲ್ಲಿ  ಏನನ್ನೂ ಪತ್ತೆಹಚ್ಚಲಿಲ್ಲ, ಇದಾದ ಕೆಲವೇ ದಿನಗಳ ನಂತರ ಆಕೆ ಸಾವನ್ನಪ್ಪಿದ್ದಳು. ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ವಿರುದ್ದ ವೈದ್ಯಕೀಯ ನಿರ್ಲಕ್ಷ್ಯದ ದೂರು ನೀಡಿದರಾದರೂ ಆಸ್ಪತ್ರೆಯ ಆಡಳಿತ ಮಂಡಲಿ ನಮಗೆ ಅನ್ನಮ್ಮ ಅವರ ದೇಹದಲ್ಲಿ ಯಾವುದೇ ರೀತಿಯ ದೋಷಗಳು ಕಂಡುಬಂದಿಲ್ಲ ಎಂದೇ ವಾದಿಸಿ ಪ್ರಕರಣವನ್ನು ಕೊನೆಗೊಳಿಸಿದರು.

ಆಸ್ತಿಗಾಗಿ  ನಡೆದಿತ್ತು ಎರಡನೇ ಕೊಲೆ

ಮೊದಲನೆಯ ಕೊಲೆ ನಡೆದದ್ದು ಕುಟುಂಬದ ಹಣಕಾಸಿನ ವ್ಯವಹಾರದ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುವ ಸಲುವಾಗಿ.  ಕುಟುಂಬದ ಹಣಕಾಸಿನ ವ್ಯವಹಾರವನ್ನು ಜಾಲಿಯ ಅತ್ತೆ ಅನ್ನಮ್ಮನವರೇ  ನಿಭಾಯಿಸುತ್ತಿದ್ದರು. ಈ ಕೊಲೆಯ ಸಂದಂರ್ಭದಲ್ಲಾದ ಕೆಲವೊಂದು ಎಡವಟ್ಟುಗಳನ್ನು ಸರಿಪಡಿಸಲು ಎರಡನೇ ಕೊಲೆ ಮಾಡಿದ್ದಳು ಜಾಲಿ.

ಕೆಲವು ಆಸ್ತಿಗಳನ್ನು ಮಾರಿದ್ದ ಜಾಲಿಯ ಮಾವ ಟಾಮ್ ಥೋಮಸ್, ಒಂದು ನಿರ್ದಿಷ್ಟ ಮೊತ್ತವನ್ನಷ್ಟೇ ತೋರಿಸಿ, ಆಸ್ತಿ ಮಾರಿದ್ದರಿಂದ ಸಿಕ್ಕ ಹಣ ಇಷ್ಟೇ ಎಂದು ಹೇಳಿದ್ದು, ಇದರಿಂದ ಜಾಲಿ ತನ್ನ ಮಾವನಿಗೆ ವಿರುದ್ದವಾಗಿದ್ದಳು ಮಾತ್ರವಲ್ಲ ಕಿರಿಯ ಮಗನೊಂದಿಗೆ ಅಮೆರಿಕಕ್ಕೇ ತೆರಳಿ ಅಲ್ಲೇ ಉಳಿದು ಬಿಡುವ ಮಾವನ ಯೋಜನೆಯನ್ನು ನಿಲ್ಲಿಸಿದ್ದಳು.

ಹೆತ್ತವರು ಬಿಟ್ಟುಹೋದ ಆಸ್ತಿಯಲ್ಲಿ ಹೆಚ್ಚಿನ ಪಾಲು ಹಿರಿಯ ಮಕ್ಕಳಿಗೆ ಸಿಗಬೇಕು ಎಂದು ತೀರ್ಮಾನವಾದ ಕೇಲವೇ ದಿನಗಳಲ್ಲಿ ಜಾಲಿಯ 66 ವರ್ಷದ ಮಾವ ಟಾಮ್ ಥೋಮಸ್ ಹೃದಯಘಾತದಿಂದ ಸಾವನಪ್ಪಿದ್ದ, ಮತ್ತು ಇದನ್ನು ಸಹಜ ಸಾವೆಂದು ಪರಿಗಣಿಸಿ ಪೊಲೀಸರು ತನಿಖೆಯನ್ನು ಕೈಬಿಟ್ಟಿದ್ದರು.

ತಾನು ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಲೆ ಮಾಡಿದಳು ಜಾಲಿ

ಜಾಲಿ ಕೇರಳದ ಇಡುಕ್ಕಿ ಭಾಗದವಳು.1998 ರಲ್ಲಿ ರಾಯ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಳು. 2011ರಲ್ಲಿ ತನ್ನ ಗಂಡನನ್ನು ಕೊಂದ ಜಾಲಿ, ಗಂಡ ಹೃದಯಘಾತದಿಂದ ಮೃತಪಟ್ಟ ಎಂದು ಜನರನ್ನು ನಂಬಿಸಲು ಸಿದ್ದತೆಯನ್ನು ಮೊದಲೇ ಮಾಡಿಕೊಂಡಿದ್ದಳು. ರಾಯ್ ಹೃದಯಾಘಾತದಿಂದ ಸಾಯುವುದಕ್ಕೆ ಮುಂಚೆ ಅವರಿಗೆ ಪ್ರಿಯವಾದ ಮೊಟ್ಟೆಯನ್ನು ರಾತ್ರಿಯ ಊಟಕ್ಕೆ ಹೇಗೆಲ್ಲಾ ತಯಾರಿಸಿದೆ ಎಂದು ಬಂದವರೆಲ್ಲರ ಬಳಿಯೂ ವಿಸ್ತಾರವಾದ ಕಥೆಯೊಂದನ್ನು ಹೇಳುತಿದ್ದಳು.

ಆದರೆ ಮರಣೋತ್ತರ ವರದಿಯು ರಾಯ್ ಅವರ ದೇಹದಲ್ಲಿ ಜೀರ್ಣವಾಗದ ಅನ್ನ ಮತ್ತು ಕಡೆಲೆಬೇಳೆ ಮಾತ್ರ ಇತ್ತು ಎಂಬುದನ್ನು ಸ್ಪಷ್ಟವಾಗಿ ತೋರಿಸಿತ್ತು, ಮತ್ತು ಆಹಾರದ ಮೂಲಕ ರಾಯ್ ದೇಹಕ್ಕೆ ವಿಷವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದರು.

ರಾಯ್ ಅವರು ಜಾಲಿಯವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ನಿಜಸಂಗತಿಗಳನ್ನು ತಿಳಿದಿದ್ದು, ಮತ್ತು ಆಕೆಯ ಬಗ್ಗೆ ರಾಯ್ ಗೆ  ಇದ್ದ ಭಿನ್ನಾಭಿಪ್ರಾಯಗಳೇ ಮೂರನೇ ಕೊಲೆಗೆ ಕಾರಣವಾಯಿತು.

ಈ ಮೂರನೇ ಕೊಲೆ ಇಡೀ ಪ್ರಕರಣದಲ್ಲೊಂದು ಮಹತ್ವದ ತಿರುವು, ದೇಹದಲ್ಲಿ ವಿಷವಿರುವುದನ್ನು ಮರಣೋತ್ತರ ಪರೀಕ್ಷೆ ವರದಿ ಒತ್ತಿ ಹೇಳಿದ್ದರೂ, ಪತಿಯ ಕೊಲೆ ಹೃದಯಾಘಾತದಿಂದ ಸಂಭವಿಸಿದೆ ಎಂದು ನಂಬಿಸಲು ಪ್ರಯತ್ನಿಸಿದ್ದ ಜಾಲಿಯ ಕುರಿತು ಯಾವ ಅನುಮಾನವೂ ಪೋಲೀಸರನ್ನು ಕಾಡಲೇ ಇಲ್ಲ. ತನಿಖಾಧಿಕಾರಿಯಾಗಿದ್ದ ಸಬ್ ಇನ್ಸ್ ಪೆಕ್ಟರ್ ರಾಮನುನ್ನಿ ರಾಯ್ ದೇಹಕ್ಕೆ ಸೈನೈಡ್ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸುವುದರ ಬದಲಾಗಿ ಇದೊಂದು ಆತ್ಮಹತ್ಯೆ ಎಂದು ಬರೆದು ಪ್ರಕರಣದ ತನಿಖೆಯನ್ನು ಕೊನೆಗೊಳಿಸಿದ್ದರು. ಅಂದೇ ಸಬ್ ಇನ್ಸ್ ಪೆಕ್ಟರ್ ಸೈನೈಡ್ ರಾಯ್ ದೇಹಕ್ಕೆ ಹೇಗೆ ಸೇರಿತ್ತು ಎಂಬುದರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಂಡಿದ್ದರೆ ಮತ್ತೆ ಮೂರು ಕೊಲೆಗಳು ಆಗಿರುತ್ತಿರಲಿಲ್ಲವೇನೊ.

ನಾಲ್ಕನೇ ಬಲಿ ಮ್ಯಾಥ್ಯು...

ರಾಯ್ ಅವರ ಸಾವಿನ ಪ್ರಕರಣದಲ್ಲಿ ಪೋಲೀಸ್ ತನಿಖೆಯು ಜಾಲಿ ಅವರತ್ತ ಬೆರಳು ತೋರಿಸದಿದ್ದರೂ, ರಾಯ್ ಅವರ ಮಾವನಿಗೆ ಜಾಲಿ ಮೆಲೆ ದಟ್ಟವಾದ ಅನುಮಾನವಿತ್ತು. ಈ ಕಾರಣದಿಂದಲೇ ಮಾವ ಮ್ಯಾಥ್ಯು ಅವರು ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದರು.

ಆದರೆ 2014 ರಲ್ಲಿ ಮಾಥ್ಯು, ಹೆಂಡತಿ ಮನೆಯಲ್ಲಿಲ್ಲದ  ಸಮಯದಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದರು, ಈ ವಿಷಯವನ್ನು ಜಾಲಿಯೇ ಹತ್ತಿರದವರಿಗೆ ತಿಳಿಸಿದ್ದಳು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪಟ್ಟರು. 

ಮ್ಯಾಥ್ಯುಗೆ ಜಾಲಿಯ ಮೇಲೆ ಅನುಮಾನವಿದ್ದದ್ದು ಜಾಲಿಗೆ ಗೊತ್ತಾಗಿತ್ತು. ಮತ್ತು ರಾಯ್ ಶವಪರೀಕ್ಷೆಗೆ ಅವರೇ ಒತ್ತಾಯಿಸಿದ್ದು ಜಾಲಿಗೆ ಕಸಿವಿಸಿ ತರಿಸಿತ್ತು.  ಮ್ಯಾಥ್ಯು ಅವರನ್ನು ಕೊಲೆಮಾಡಿರುವುದು ತಾನೇ ಎಂದು ಪೋಲೀಸ್ ವಶದಲ್ಲಿರುವ ಜಾಲಿ  ಈಗ ಒಪ್ಪಿ ಕೊಂಡಿದ್ದಾಳೆ.

ಪ್ರೀತಿಗಾಗಿ ನಡೆಯಿತು ತಾಯಿ ಮಗುವಿನ ಕೊಲೆ

ಅಕ್ಟೋಬರ್ 5ನೇ ಸೋಮವಾರ ಜಾಲಿಯ ಎರಡನೇ ಗಂಡ ಮತ್ತು ಮೊದಲ ಗಂಡನ ಸಹೋದರ ಸಂಬಂಧಿಯಾದ ಶಾಹು ತನ್ನ ಹೆಂಡತಿ ಮತ್ತು ತನ್ನ  ಮಗಳನ್ನು ಕೊಲ್ಲಲು ಜಾಲಿಗೆ ಸಹಾಯ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

2014ರಲ್ಲಿ ಶಾಹುನ ಒಂದು ವರ್ಷದ ಮಗಳು ಆಹಾರ ಸೇವಿಸಿದ ತಕ್ಷಣ ಉಸಿರುಗಟ್ಟಿ ಮೃತಪಟ್ಟಿದ್ದಳು. ಈ ಸಮಯದಲ್ಲಿ ಜಾಲಿ ಮನೆಯಲ್ಲಿಯೇ ಇದ್ದಳು.  ಇದಾದ ಎರಡು ವರ್ಷದ ನಂತರ ಶಾಹುನ ಹೆಂಡತಿ ಸಿಲ್ಲಿ ದಂತವೈದ್ಯರೊಬ್ಬರ ಕಚೇರಿಯಲ್ಲಿ ನೀರು ಕುಡಿದ ತಕ್ಷಣ ಕುಸಿದು ಬಿದ್ದಿದ್ದಳು ಮತ್ತು ಅಲ್ಲೇ ಜಾಲಿಯ ತೊಡೆಯ ಮೇಲೆಯೇ ತನ್ನ ಜೀವ ಬಿಟ್ಟಿದ್ದಳು. ಜಾಲಿ ಮತ್ತು ನಾನು ಒಟ್ಟಿಗೆ ಇರಬೇಕೆಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಶಾಹು ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮತ್ತೊಂದು ಕೊಲೆ ನಡೆಯುವುದರಲ್ಲಿತ್ತು

ಜಾಲಿಯ ಮೊದಲ ಪತಿ ರಾಯ್ ಅವರ ಸಹೋದರಿ ರಿಜಿ ಜಾಲಿ 2002 ರಲ್ಲಿ ತಾಯಿ ಅನ್ನಮ್ಮನನ್ನು ಕೊಂದ ನಂತರ ನನ್ನನ್ನೂ ಕೊಲ್ಲಲೂ ಪ್ರಯತ್ನಿಸಿದ್ದಳು ಎಂದು ಆರೋಪಿಸಿದ್ದಾಳೆ. ಒಂದು ಆಯುರ್ವೇದಿ ಔಷದಿ ಕುಡಿದ ನಂತರ ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗಿ ನಂತರ ಗುಣಮುಖರಾಗಿದ್ದ ರಿಜಿ ಇದೊಂದು ಕೊಲೆಯ ಪ್ರಯತ್ನ ಎಂದು ಭಾವಿಸಿರಲಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಯಿಂದ ಜಾಲಿ ತನ್ನನ್ನು ಕೊಲೆಮಾಡಲು ಪ್ರಯತ್ನಿಸಿದ್ದಾಳೆ ಎಂದು ಶಂಕಿಸಿದ್ದಾಳೆ. ರಿಜಿ ಪ್ರಮುಖ ಸಾಕ್ಷಿಯಾಗಿರುವುದರಿಂದ ಪೊಲೀಸರು ಆಕೆಯ ಹೇಳಿಕೆಯನ್ನಾಧರಿಸಿ ಎಫ್ ಐ ಆರ್ ದಾಖಲಿಸಿದ್ದಾರೆ.

ರಿಜಿಯನ್ನು ಹೊರತು ಪಡಿಸಿ ಸ್ಥಳೀಯ ರಾಜಕಾರಣಿಯ ಕುಟುಂಬವೊಂದು ಈ ಸಾವುಗಳ ಹಿಂದೆ ಜಾಲಿಯ ಕೈವಾಡ ಇರಬಹುದೆಂದು ಶಂಕಿಸಿದೆ. ಜಾಲಿ ಈ ಕುಟುಂಬದೊಂದಿಗೆ ಹಣಕಾಸಿನ ವ್ಯವಹಾರಗಳನ್ನು ಹೊಂದಿದ್ದಳು. ಆದ್ದರಿಂದ ರಾಜಕಾರಣಿಯ ಮಗನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.