ಆರ್ಥಿಕ ಸುಧಾರಣೆಗೆ ಬೇಕಾಗಿದೆ ಮತ್ತಷ್ಟು ದಿಟ್ಟ ಕ್ರಮಗಳು

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಉಂಟಾದರೂ ಭಾರತದಲ್ಲಿ ಅದರ ಪರಿಣಾಮ ಆಗದಂತೆ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಅರ್ಥ ತಜ್ಞ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ, ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಮುಂತಾದವರು ಎಚ್ಚರ ವಹಿಸಿದ್ದು ನಿಜಕ್ಕೂ ಶ್ಲಾಘನೀಯ.

ಆರ್ಥಿಕ ಸುಧಾರಣೆಗೆ ಬೇಕಾಗಿದೆ ಮತ್ತಷ್ಟು ದಿಟ್ಟ ಕ್ರಮಗಳು

ದೇಶದ ಉದ್ಯಮ, ವಾಣಿಜ್ಯ, ಕೃಷಿ ಮತ್ತು ಸೇವಾ ವಲಯದಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಕುರಿತು ಚರ್ಚಿಸುವವರಲ್ಲಿ ಎದ್ದು ಕಾಣುತ್ತಿರುವುದು “ಆರ್ಥಿಕ ಹಿಂಜರಿತ”. ವಾಣಿಜ್ಯ ವ್ಯವಹಾರಗಳನ್ನು ಕುರಿತ ಮಾಧ್ಯಮಗಳಲ್ಲೂ ಇದೇ ಚರ್ಚೆ. ದೇಶ ವಿದೇಶಗಳಲ್ಲೂ ಇದೇ ಮಾತುಕತೆ. ಹೆಸರಾಂತ ಆರ್ಥಿಕ ತಜ್ಞರಂತು ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ತಮ್ಮದೇ ಹಲವಾರು ಅಂಕಿ ಅಂಶ ಮತ್ತು ಮಾಹಿತಿಯೊಡನೆ ವಿಶ್ಲೇಷಿಸುತ್ತಿದ್ದಾರೆ. ಸದ್ಯದ ಆರ್ಥಿಕ ಹಿಂಜರಿತಕ್ಕೆ ಕಾರಣಗಳನ್ನು ಹುಡುಕುತ್ತಾ ಆರೋಪ- ಪ್ರತಿ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ದೇಶದ ಆಂತರಿಕ ವಲಯದಲ್ಲಿನ ಚರ್ಚೆಗಿಂತ ಅಮೆರಿಕ ಮತ್ತು ವಿಶ್ವದ ಇತರೆ ರಾಷ್ಟ್ರಗಳ ಆರ್ಥಿಕ ವಿಷಯಗಳ ವೇದಿಕೆಗಳಲ್ಲಿ, ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾರತದ ಆರ್ಥಿಕ ಕುಸಿತದ ಬಗೆಗೆ ಆರ್ಥಿಕ ತಜ್ಞರು ದೇಶಕ್ಕೆ ಎಚ್ಚರಿಕೆ, ಸಲಹೆ ಮತ್ತು ಆತಂಕಕಾರಿ ಬೆಳವಣಿಗೆಗಳ ಬಗೆಗೆ ಮುನ್ಸೂಚನೆ ನೀಡುತ್ತಿದ್ದಾರೆ.

ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕ ಆರ್ಥಿಕ ಪ್ರಗತಿಯ ದರವನ್ನು ನೋಡಿದಾಗ ವಾಹನಗಳ ತಯಾರಿಕೆ, ಮಾರಾಟ ಮತ್ತು ಕೊಳ್ಳುವ ವಾಸ್ತವ ಸ್ಥಿತಿಯಲ್ಲಿ ಇಳಿಕೆ, ಹಾಗೆಯೇ ವಸತಿ ನಿರ್ಮಾಣ, ಖರೀದಿ, ಬ್ಯಾಂಕ್ ಗಳಲ್ಲಿನ ಸಾಲ ಪಡೆಯುವುದರಲ್ಲಿ ನಿರಾಸಕ್ತಿ ಹೀಗೆ ಸೇವಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿ ಕುಂಠಿತ ಕಂಡು ಬಂದಿರುವುದೇ ಈ ಆತಂಕಕ್ಕೆ ಕಾರಣ.

2018ರ ಏಪ್ರಿಲ್- ಜೂನ್ ನಲ್ಲಿ ಇದ್ದ ಕಾರುಗಳ ತಯಾರಿಕೆ, ಮಾರಾಟ, ಸ್ಟೀಲ್ ಉಪಕರಣಗಳ ತಯಾರಿಕೆ, ಕಾರು ಡೀಲರ್ ಗಳ ವಹಿವಾಟು ಮತ್ತು ವಾಹನಗಳ ಖರೀದಿಗಾಗಿ ಬ್ಯಾಂಕುಗಳಲ್ಲಿ ಪಡೆಯುತ್ತಿದ್ದ ಸಾಲದ ಪ್ರಮಾಣದಲ್ಲಿ ಇಳಿಕೆ. ಹೀಗೆ 2019ರ ಮೊದಲ ತ್ರೈಮಾಸಿಕ ಏಪ್ರಿಲ್ –ಜೂನ್ ಅವಧಿಯಲ್ಲಿ ಶೇ. 23.3ರಷ್ಟು ಕುಸಿತ ಕಂಡು ಬಂದಿದೆ.

ಇದರ ಪರಿಣಾಮವಾಗಿ ಅನೇಕ ಕಾರು ತಯಾರಿಕೆಯ ಉದ್ದಮಗಳಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ. ಸುಮಾರು 300 ವಾಹನಗಳ ಮಾರಾಟಗಾರರು ಮಾರಾಟವಿಲ್ಲದೆ ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ, ಟೈಯರ್ ಉದ್ಯಮ ಮತ್ತು ವಾಹನಗಳ ಬಿಡಿ ಭಾಗಗಳ ತಯಾರಿಕೆಯ ವಲಯದಲ್ಲಿ ಹತ್ತು ಲಕ್ಷದಷ್ಟು ಜನರಿಗೆ ಉದ್ಯೋಗದ ಸಮಸ್ಯೆ ಉಂಟಾಗಿದೆ. ಬ್ಯಾಂಕುಗಳಲ್ಲಿ ವಾಹನ ಸಾಲ ಕಡಿಮೆ ಆಗಿ ಅವರ ವ್ಯವಹಾರದಲ್ಲಿ ಕುಸಿತ ಕಂಡುಬಂದಿದೆ. ವಿವಿಧಿ ಸಮೀಕ್ಷೆಗಳ ಪ್ರಕಾರ ಒಟ್ಟಾರೆ 2. 30 ಲಕ್ಷ ಕೆಲಸಗಾರರು ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಪರಿಸ್ಥಿತಿ ವಸತಿ ಕ್ಷೇತ್ರದಲ್ಲೂ ಆತಂಕದ ಪರಿಸ್ಥಿತಿ ಉಂಟಾಗಿದೆ. 2018ರಲ್ಲಿ ಇದ್ದ ಆಂತರಿಕ ಪ್ರಗತಿಯ ಉತ್ಪನ್ನ (ಜಿಡಿಪಿ) ಶೇ. 7.2 ಇದ್ದದ್ದು 2019ರ ಈ ಮೊದಲ ತ್ರೈಮಾಸಿಕ ಪ್ರಗತಿಯಲ್ಲಿ ಅದು ಶೇ. 6.1ಕ್ಕೆ ಕುಸಿದಿದೆ. ಇದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನಿರಾಶಾಧಾಯಕವಾಗಿ ಇರುವುದಾಗಿ ಆತಂಕ ವ್ಯಕ್ತವಾಗುತ್ತಿದೆ.

ಈವೊಂದು ಪರಿಸ್ಥಿತಿಗೆ 2016 ನವೆಂಬರ್ ನಲ್ಲಿ ತೆಗೆದುಕೊಂಡ ಡಿಮಾನಿಟೈಜೇಷನ್ (ರೂಪಾಯಿ ಅಮಾನೀಕರಣ), ಇಡೀ ದೇಶದಾದ್ಯಂತ ಎಲ್ಲ ವಸ್ತುಗಳ ಮೇಲಿನ ಏಕರೂಪ ತೆರಿಗೆ ಜಾರಿ( ಜಿಎಸ್ ಟಿ) ಪ್ರಮುಖ ಕಾರಣಗಳೆಂದು ನಮ್ಮ ಹಿಂದಿನ ಪ್ರಧಾನಿ, 90ರ ದಶಕದ ಮುಕ್ತ ಆರ್ಥಿಕ ನೀತಿಯ ಸುಧಾರಕ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್, ಅವರ ಕಾಲದ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ಅಮೆರಿಕದಲ್ಲಿ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಡಾ. ರಘುರಾಂ ರಂಗರಾಜನ್ ಮತ್ತು ಕಳೆದ ವಾರವಷ್ಠೇ ಆರ್ಥಿಕ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀ ಸಂಜಾತ ಡಾ. ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಹಲವು ಅರ್ಥ ತಜ್ಞರು ಹೇಳುತ್ತಿದ್ದಾರೆ.

ಈ ಅರ್ಥತಜ್ಞರು ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಲಾಗದು. ಈ ಆರ್ಥಿಕ ಕುಸಿತಕ್ಕೆ ನೀಡುವ ಕಾರಣಗಳಿಗೆ ಪೂರಕ ಎನ್ನುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ 28,000 ಕೋಟಿ ಮತ್ತು ಈ ವರ್ಷ 1.76 ಲಕ್ಷ ಹೆಚ್ಚುವರಿ ಹಣವನ್ನು ಮತ್ತೆ ಕೇಂದ್ರ ಸರ್ಕಾರಕ್ಕೆ ನೀಡಿದೆ. ರಿಸರ್ವ್ ಬ್ಯಾಂಕಿನಲ್ಲಿದ್ದ ಹೆಚ್ಚುವರಿ ಈ ಹಣದ ವರ್ಗಾವಣೆಯೇ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿಯನ್ನು ಹೇಳುತ್ತದೆ.

ಇಂತಹ ಆರ್ಥಿಕ ಕುಸಿತ ಮತ್ತು ಬಿಕ್ಕಟ್ಟಿನ ನಡುವೆಯು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯ ಮತ್ತು ಜಪಾನ್ ಗೂ ಆರ್ಥಿಕ ನೆರವಿನ ಘೋಷಣೆ ಮಾಡಿರುವುದು ಅಚ್ಚರಿಯ ಸಂಗತಿ.

ಈ ಆರ್ಥಿಕ ಕುಸಿತಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಉದಾರವಾಗಿ ಭಾರೀ ಉದ್ಯಮಿಗಳಿಗೆ ಮರುಪಾವತಿ ಆಗದ ಕೋಟ್ಯಂತರ ರೂಪಾಯಿ ಸಾಲ, ಹೀಗೆ ಸಾಲ ಪಡೆದು ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ ಮುಂತಾದವರು ಕಾರಣ. ಇವರಿಗೆ ನೀಡಿದ ಕೋಟ್ಯಂತರ ರೂಪಾಯಿ ಬ್ಯಾಂಕುಗಳಿಗೆ ವಾಪಸ್ ಬಾರದಿರುವುದು, ಇಂತಹ ಸಾಲದಿಂದ ಉಂಟಾಗಿರುವ ನಾನ್ ಫರ್ಮಾರ್ಮಿಂಗ್ ಅಸೆಟ್. ಭಾರೀ ಮೊತ್ತದ ಸಾಲ ನೀಡಿಕೆಗೆ ಉನ್ನತ ಮಟ್ಟದ ರಾಜಕಾರಣಿಗಳ ಶಿಫಾರಸು, ಬ್ಯಾಂಕುಗಳ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ, ಪಕ್ಷಪಾತ ಧೋರಣೆಗಳು ಪ್ರಮುಖ ಕಾರಣಗಳು ಎನ್ನಲಾಗಿದೆ.

ಈ ಎಲ್ಲದರ ನಡುವೆ ಎರಡು ವರ್ಷಗಳ ಹಿಂದೆ ಜಾರಿಗೆ ಬಂದ ಜಿಎಸ್ ಟಿ ತೆರಿಗೆ ನೀತಿ ಅನೇಕ ಉದ್ಯಮಗಳಿಗೆ ಭಾರಿ ಪೆಟ್ಟು ನೀಡಿತು. ಜೊತೆಗೆ ಕೊಳ್ಳುವವರಿಗೂ ವಸ್ತುಗಳು ದುಬಾರಿಯಾಗಿ ಮಾರಾಟದ ಮೇಲೆ ದುಷ್ಪರಿಣಾಮ ಉಂಟಾಯಿತು. ಇದರಿಂದ ತಯಾರಿಕೆ ಮತ್ತು ಸೇವಾ ವಲಯದ ಮೇಲೂ ಕೆಟ್ಟ ಪರಿಣಾಮ ಬೀರಿತು.

ಅಚ್ಚರಿಯ ಸಂಗತಿ ಎಂದರೆ ವಿಶ್ವದ ಯಾವ ಪ್ರಸಿದ್ಧ ಅರ್ಥ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ತೆಗೆದುಕೊಂಡ ನೋಟು ಅಮಾನೀಕರಣ ಯೋಜನೆಯನ್ನು ಮೆಚ್ಚಿಲ್ಲದಿರುವುದು. ಈ ನಿರ್ಧಾರವು ದೇಶದ ಉದ್ಯಮ, ಕೃಷಿ ಮತ್ತು ಸೇವಾ ಕ್ಷೇತ್ರದ ಆರ್ಥಿಕ ಚಟುವಟಿಕೆಯನ್ನು ನಿಯಂತ್ರಣಗೊಳಿಸಿ ಜನರ ಬಳಿ ಮುಕ್ತವಾಗಿ ಹಣದ ಚಲಾವಣೆ ಇಲ್ಲದಂತೆ ಮಾಡಿತು ಎನ್ನುವ ಆರೋಪಗಳಿವೆ.

ಕೇಂದ್ರ ಸರ್ಕಾರದ ಕೆಲವು ತಪ್ಪು ಆರ್ಥಿಕ ನೀತಿಯನ್ನು ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾವiನ್ ಅವರ ಪತಿ ಅರ್ಥ ತಜ್ಞ ಪರಿಕಾಲ ಪ್ರಭಾಕರ್ ಅವರೂ ಸಹಾ ಟೀಕೆ ಮಾಡಿರುವುದು ಗಂಭೀರವಾದ ವಿಷಯ. ಆದರೂ, ಡಾ. ಮನಮೋಹನ್ ಸಿಂಗ್ ಮತ್ತು ಡಾ. ರಘುರಾಂ ರಂಗರಾಜನ್ ಅವರ ಕಾಲದ ಕೆಲವು ತಪ್ಪು ಆರ್ಥಿಕ ನೀತಿಗಳಿಂದ ಬ್ಯಾಂಕಿಂಗ್ ವಲಯದಲ್ಲಿ ಕುಂಠಿತ ಕಾಣಲು ಕಾರಣ ಎಂಬ ಸಚಿವೆ ನಿರ್ಮಲಾ ಸೀತಾರಾವiನ್ ಅವರು ನ್ಯೂಯಾರ್ಕ್ನ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವಾಗ ಮಾಡಿರುವ ಟೀಕೆ ಈಗ ನಗೆಪಾಟಲಾಗಿದೆ.

ಬೆಂಗಳೂರು, ಚೆನ್ನೈ, ಮುಂಬೈ, ಪುಣೆ ಮತ್ತು ದೆಹಲಿಯಂತಹ ನಗರಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರುಗಳು ಕಾರುಗಳನ್ನು ಖರೀದಿಸುವ ಬದಲಿಗೆ ಓಲಾ ಮತ್ತು ಊಬರ್ ಟ್ಯಾಕ್ಸಿಗಳನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ಕಾರುಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಇದು ಆಟೋಮೊಬೈಲ್ ಕ್ಷೇತ್ರದ ಹಿಂಜರಿತಕ್ಕೆ ಕಾರಣ ಎಂದು ಕೆಲವು ದಿನಗಳ ಹಿಂದೆ ನೀಡಿದ ಹೇಳಿಕೆಯೂ ಒಬ್ಬ ಹಣಕಾಸು ಸಚಿವೆಯಾಗಿ ನೀಡುವ ಕಾರಣವೇ ಎನ್ನುವಂತೆ ಅವರ ಹಣಕಾಸು ವ್ಯವಹಾರದ ಜ್ಞಾನವನ್ನೇ ಪ್ರಶ್ನಿಸುವಂತಾದದ್ದು ದುರಂತ.

ಕಳೆದ ವಾರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಸಹಾ ಇಂತಹದ್ದೇ ಬಾಲಿಶವಾದ ಹೇಳಿಕೆ ನೀಡಿದ್ದೂ ಕೇಂದ್ರ ಸಚಿವರ ಹಣಕಾಸು ವ್ಯವಹಾರದ ಜ್ಞಾನವನ್ನು ಜನರು ಪ್ರಶ್ನಿಸುವಂತಾದದ್ದು ದುರ್ದೈವ. ಹಿಂದಿ ಸಿನೆಮಾಗಳು ಒಂದೇ ವಾರದಲ್ಲಿ ನೂರು ಕೋಟಿ ಗಳಿಕೆ ಮಾಡಿದನ್ನು  ಉಲ್ಲೇಖಿಸಿ, ದೇಶದಲ್ಲಿ ಎಲ್ಲಿದೆ ಆರ್ಥಿಕ ಕುಸಿತ ಎನ್ನುವ ಹೇಳಿಕೆ ಸಾರ್ವಜನಿಕ ಟೀಕೆಗೆ ಒಳಗಾದದ್ದು ವಿಚಿತ್ರ ಬೆಳವಣಿಗೆ.

ಈ ಆತಂಕಕಾರಿ ಅರ್ಥ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ನಿಜ. ಕೆಲವು ದಿನಗಳ ಹಿಂದೆ ಆಟೋಮೊಬೈಲ್ ಉದ್ಯಮಕ್ಕೆ ವಿಧಿಸಿದ್ದ ಜಿಎಸ್ ಟಿಯನ್ನು ಶೇ. 35ರಿಂದ ಶೇ 25ಕ್ಕೆ ಇಳಿಸಲಾಯಿತು. ಇನ್ನೂ ಕೆಲವು ಸುಧಾರಿತ ಕ್ರಮಗಳನ್ನು ಕೈಗೊಂಡರೂ ಸಾರ್ವಜನಿಕವಾಗಿ ಮನೆ ಮಾಡಿರುವ ಆತಂಕ ಕಡಿಮೆ ಆಗಿಲ್ಲ. ಅಂದರೆ ಕೇಂದ್ರ ಸರ್ಕಾರ ಈಗ ಕೈಗೊಂಡ ಕ್ರಮಗಳು ಈಗಿನ ಆರ್ಥಿಕ ಪರಿಸ್ಥಿತಿಯನ್ನು ಸರಿ ದಾರಿಗೆ ತರಲು ಏನೇನೂ ಸಾಲದು. 

ಕೃಷಿ ಕ್ಷೇತ್ರದಲ್ಲಿ ಆಹಾರ ಉತ್ಪಾದನೆ ಹೆಚ್ಚಳವಾಗಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗ ಲಭ್ಯವಾಗಬೇಕು. ಉದ್ಯಮ ವಲಯದಲ್ಲಿ ವಿದೇಶಿ ಮತ್ತು ಸ್ವದೇಶಿ ಬಂಡವಾಳ ಹೂಡಿಕೆ ಮತ್ತೆ ಶುರುವಾಗಬೇಕು. ಸ್ಥಗಿತವಾಗಿರುವ ವಸತಿ ನಿರ್ಮಾಣ ಉದ್ಯಮ ಚೇತರಿಕೆ ಕಾಣಬೇಕು. ಡೋಲಾಯಮಾನ ಸ್ಥಿತಿಯಲ್ಲಿರುವ ಬ್ಯಾಂಕುಗಳ ವಹಿವಾಟು, ಜನರು ಯಾವ ಭಯವೂ ಇಲ್ಲದೆ ಠೇವಣಿ ಇಡುವುದು ಮತ್ತು ಅವುಗಳು ಠೇವಣಿದಾರರಿಗೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಕಾರ್ಯಗಳಿಗೆ ಉದಾರವಾಗಿ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಬೇಕು. ಬಡ್ಡಿಯಲ್ಲಿ ಇಳಿಕೆ ಮಾಡುವ ಮೂಲಕ ಜನರನ್ನು ಉತ್ಪಾದನೆಯಲ್ಲಿ ತೊಡಗಿಸುವ ಕಾರ್ಯ ನಡೆಯಬೇಕಿದೆ. ಇಂತಹ ತೀರ್ಮಾನಗಳ ಮೂಲಕ ಆರ್ಥಿಕ ಚಟುವಟಿಕೆ ಚುರುಕಾಗಬೇಕು.ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ನೀತಿ ಬದಲಾಗಬೇಕು ಎಂಬುದು ಅನೇಕ ಅರ್ಥ ತಜ್ಞರ ಅಭಿಪ್ರಾಯ.

ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಮತ್ತು ಚೀನಾ, ಜಪಾನ್ ಹಾಗು ಅಮೆರಿಕದಂತಹ ರಾಷ್ಟ್ರಗಳ ಹಲವು ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆ ಒದಗಿಸುವ ದೇಶವಾದ್ದರಿಂದ ಹಲವು ರಾಷ್ಟ್ರಗಳು ಇಲ್ಲಿನ ಆರ್ಥಿಕ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿವೆ. ಹಾಗಾಗಿ ನಮ್ಮ ನಿರ್ಧಾರಗಳು ಎಲ್ಲವನ್ನೂ ಒಳಗೊಂಡಿರುವಂತಿರಬೇಕಾಗುತ್ತದೆ.

2008-09ರ ಅವಧಿಯಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗ ಅಲ್ಲಿನ 150 ವರ್ಷ ಹಳೆಯದಾದ ಹೈವನ್ ಬ್ರದರ್ಸ್ ಆಟೋಮೊಬೈಲ್ ಉದ್ಯಮ ಸೇರಿದಂತೆ ಹಲವು ಉದ್ಯಮಗಳು ಮುಚ್ಚಿ ಹೋದವು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಉಂಟಾದರೂ ಭಾರತದಲ್ಲಿ ಅದರ ಪರಿಣಾಮ ಆಗದಂತೆ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಅರ್ಥ ತಜ್ಞ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ, ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಮುಂತಾದವರು ಎಚ್ಚರ ವಹಿಸಿದ್ದು ನಿಜಕ್ಕೂ ಶ್ಲಾಘನೀಯ.

ಇದೇನೇ ಇದ್ದರೂ ಈಗ ಇಂಟರ್ ನ್ಯಾಷನಲ್ಲ ಫಂಡ್ (ಐಎಂಎಫ್)ನ ನೂತನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲಿನಾ ಗಾರ್ಜೆವಿಯಾ ಅವರು, ಅಕ್ಟೋಬರ್ 15ರಂದು ವಿಶ್ವದ ಆರ್ಥಿಕ ಪರಿಸ್ಥಿತಿ ಕುರಿತ ವರದಿಯೊಂದನ್ನು ಬಿಡುಗಡೆ ಮಾಡುತ್ತಾ, 2019ರಲ್ಲಿ ಶೇ. 90ರಷ್ಟು ರಾಷ್ಟ್ರಗಳಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಆದರೂ ಭಾರತದಲ್ಲಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ತನ್ನ ಜಿಡಿಪಿಯ ಶೇ 6.1ರಷ್ಟು ದರವನ್ನು ಹೆಚ್ಚಿಸಬಹುದು. ಹಾಗೆಯೇ 2020ರ ಏಪ್ರಿಲ್ ವೇಳೆಗೆ ಜಿಡಿಪಿಯ ದರವನ್ನು ಶೇ. 7. 3ಗೆ ತರುವ ಎಲ್ಲ ಸಾಧ್ಯತೆಗಳಿವೆ. ಎಲ್ಲ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಐಎಂಎಫ್ ಸಹಕಾರ ನೀಡಲಿದೆ ಎಂದೂ ಭರವಸೆ ನೀಡಿದ್ದಾರೆ

ಅಂತರ್ ರಾಷ್ಟ್ರೀಯ ಹಣಕಾಸು ನಿಧಿಯ ಈ ಎಚ್ಚರಿಕೆ ಮತ್ತು ಭರವಸೆಯೊಡನೆ ಮತ್ತು ಕೇಂದ್ರ ಸರ್ಕಾರ ದೇಶದ ಪ್ರಮುಖ ಅರ್ಥ ತಜ್ಞರ ಸಲಹೆ ಸಹಕಾರವನ್ನು ಪಡೆಯುವ ಮೂಲಕ ಆರ್ಥಿಕ ಕುಸಿತ ಕಂಡಿರುವ ಕ್ಷೇತ್ರಗಳನ್ನು ಸರಿದಾರಿಗೆ ತರಬೇಕಿದೆ. ಇಲ್ಲವಾದರೆ ಜನರ ಬದುಕು ಮೂರಾ ಬಟ್ಟೆ ಅಗುವುದರಲ್ಲಿ ಅಚ್ಚರಿ ಇಲ್ಲ.