ಸೊಟ್ಟನಾಗಪ್ಪನ ಮಾಯಾ ದರ್ಪಣ!

ಅವನ ಕಣ್ಣಿಗೆ ಬಿದ್ದರೆ ಮುಗಿದೇ ಹೋಯ್ತು, ತಾರಾಮಾರಾ ಎತ್ತಿ ಮುಖಮೂತಿನೋಡದೆ ಲೊಚಲೊಚ ಮುದ್ದಿಸಿಬಿಡುತಿದ್ದ. ಅವನ ಈ ಮುದ್ದಿಸುವಿಕೆ ಇವತ್ತಿಗೂ ನನಗೆ ಭಯಂಕರ ನೆನಪಾಗಿ ಉಳಿದುಬಿಟ್ಟಿದೆ. ಮೊದಲೆಲ್ಲಾ ಅವನು ಮುದ್ದಿಸುವಾಗ ನಾನು ಸುಮ್ಭನೆ ಇರುತಿದ್ದೆ. ನಂತರ, ಅವನ ಆ ಘಾಟು ಬೆವರಿನ ವಾಸನೆ, ಕುರುಚಲು ಗಡ್ಡದ ಚುಚ್ಚುವಿಕೆಗೆ ಬೆದರಿ, ನಾಗಪ್ಪ ಕಂಡೊಡನೆ ನಾನೇ ಫೇರಿ ಕೀಳುತಿದ್ದೆ

ಸೊಟ್ಟನಾಗಪ್ಪನ ಮಾಯಾ ದರ್ಪಣ!

ನಾಗಪ್ಪನನ್ನು ನೆನೆದಾಗೆಲ್ಲ ನನಗೆ ಕುವೆಂಪು ಅವರ ಕಥೆಗಾರ ಮಂಜಣ್ಣ ನೆನಪಾಗುತ್ತಾನೆ. ಅವನೇ ಇವನೋ, ಇವನೇ ಅವನೋ ಅನ್ನುವಷ್ಟು ಸಾದೃಶ್ಯದಿಂದಾಗಿ ನಾನೇ ಹಲವು ಬಾರಿ ದಂಗಾಗಿದ್ದೇನೆ. ಈಗಲೂ ಅವನನ್ನು ನೆನೆದಾಗೆಲ್ಲ ನಾನು ಕಣ್ಣೀರಾಗುತ್ತೇನೆ. ಅಂಥ ನಿಷ್ಕಲ್ಮಶ, ನಿಸ್ವಾರ್ಥದ ಜೀವ ಅದು. ನಮ್ಮ ನಾಗಪ್ಪನನ್ನು ಊರಲ್ಲಿ ಎಲ್ಲರೂ ಸೊಟ್ಟನಾಗಪ್ಪ ಎಂದೇ ಕರೆಯುತಿದ್ದರು. ತನ್ನ ತಾರುಣ್ಯದ ದಿನಗಳಲ್ಲಿ ಅವನು ನಮ್ಮ ಮನೆಯಲ್ಲಿ ದನ ಕಾಯುತಿದ್ದ, ಆಗ ದನ ಮೇಯಿಸುತ್ತ ಕಲ್ಮಟ್ಟಿಯ ಕುರುಚಲು ಕಾಡಿನಲ್ಲಿ, ಹಳ್ಳದ ಮುಳ್ಳುಕಳ್ಳಿಗಳಲ್ಲಿ ತಿರುಗಾಡಲೇಬೇಕಿತ್ತು. ಆಗ ಕಾಲಲ್ಲಿ ನೆಟ್ಟ ಮುಳ್ಳುಗಳನ್ನು ತೆಗೆಯದೇ ಹಾಗೇ ಬಿಟ್ಟ ಪರಿಣಾಮ ಅವು ಆಣಿಗಳಾಗಿಬಿಟ್ಟವು. ಆಣಿ ಒತ್ತುತಿದ್ದರಿಂದ ನಾಗಪ್ಪ ಸ್ವಲ್ಪ ಅಡ್ಡಾದಿಡ್ಡಿಯಾಗಿ, ಮೆಟ್ಟಿದ ಕೆರಗಳನ್ನು ಅಂದಾದುಂದಿಯಾಗಿ ಎಳೆಯುತ್ತ ನಡೆಯುತ್ತಿದ್ದುದೆ ಅವನಿಗೆ ಸೊಟ್ಟನಾಗಪ್ಪ ಎಂಬ ಹೆಸರು ಬರಲು ಕಾರಣವಾಗಿತ್ತು.

ನಾಗಪ್ಪ ನಮ್ಮ ಮನೆಯ ಆಳುಮಗನಾಗಿದ್ದ. ಹಾಗೆ ನೋಡಿದರೆ ಆತ ನಮಗೆ ಹತ್ತಿರದ ರಕ್ತಸಂಬಂಧಿಯೂ ಹೌದು. ಚಿಕ್ಕವಯಸ್ಸಿನಿಂದಲೆ ನಮ್ಮನೆಯಲ್ಲಿದ್ದುಕೊಂಡು ಕಸಮುಸುರೆ ತೊಳೆಯುವುದು, ಹಾಲು ಹಿಂಡುವುದು ಅವನ  ಮೊದಮೊದಲಿನ ಕೆಲಸವಾಗಿದ್ದವು. ಅನುಭವ ಬಂದಂತೆಲ್ಲ ಅವನಿಗೆ ಎತ್ತಿನ ಚಾಕರಿ, ಕಮ್ತದ ಉಸ್ತುವಾರಿ‌ಯನ್ನೂ ವಹಿಸಲಾಯಿತು. ಇವನ ಜೊತೆಗೆ ಲಮಾಣಿ ನಾಗಪ್ಪ, ಪುಟ್ಟಪ್ಪ ಕೂಡ ದನಕರದ ಚಾಕರಿ, ಕಮ್ತದ ಕೆಲಸಗಳನ್ನು ನಿಭಾಯಿಸುತಿದ್ದರು. ಸಂಬಂಧದ ರೀತ್ಯಾ ನೋಡುವುದಾದರೆ ಸೊಟ್ಟನಾಗಪ್ಪ ನನಗೆ ಮಾವನಾಗುತಿದ್ದ.

ಮನೆಯಲ್ಲಿ ನಮ್ಮ ಅಮ್ಮ ಪಾರ್ವತಮ್ಮಳಿಗೆ ಕಸಮುಸುರೆ ಕೆಲಸಗಳಲ್ಲಿ ಸಹಾಯ ಮಾಡುತಿದ್ದರಿಂದ ಅವಳಿಗೆ ನಾಗಪ್ಪನ ಮೇಲೆ ವಿಶೇಷ ಅಕ್ಕರೆ. ಅಪ್ಪ ಮತ್ತು ಕಾಕಾನ ಬಿಟ್ಟರೆ ಅಮ್ಮನಿಗೆ ಹೆಣ್ಣುಸಂತಾನವಿರಲಿಲ್ಲವಾಗಿ ಮನೆಯ ಕೆಲಸಗಳು ಅದರಲ್ಲೂ ಮನೆಯಲ್ಲಿ ಎಲ್ಲರೂ ಗಂಡುಮಕ್ಕಳೆ ಇದ್ದುದರಿಂದ ಅಡುಗೆ ಮಾಡುವುದೇ ಅವಳಿಗೆ ಹವನಾಗುತಿತ್ತು.

ಶಾಲೆಗೆ ಸೇರುವ ದಿನ ನಾಗಪ್ಪನೆ ತನ್ನ ಹೆಗಲ ಮೇಲೆ ನನ್ನನ್ನು ಹೊತ್ತುಕೊಂಡು ಹೋಗಿ, ಶಾಲೆಯ ಮಕ್ಕಳು ಮಾಸ್ತರರಿಗೆ ಮಂಡಕ್ಕಿ ಕೊಬ್ರಿ ಬೆಲ್ಲ ಹಂಚಿ ಬಂದಿದ್ದನಂತೆ, ಹಾಗಂತ ಅವನೇ ಆಗಾಗ ನನಗೆ ಹೇಳುತಿದ್ದ. ಕಥೆಗಾರ ಮಂಜಣ್ಣನ ಬಗ್ಗೆ ಓದಿದ ಮೇಲಂತೂ ನನಗೆ ನಮ್ಮ ನಾಗಪ್ಪ ಕುವೆಂಪು ಅವರ ಕಥೆಗಾರ ಮಂಜಣ್ಣನಾಗಿಯೆ ಕಾಣಿಸತೊಡಗಿದ. ಮಂಜಣ್ಣ‌ನ ಬದುಕಿನ ರೀತಿಯನ್ನೆ ಹೋಲುತಿದ್ದ ನಾಗಪ್ಪನ ವ್ಯಕ್ತಿತ್ವ ಅವನ ಎರಡನೇ ಅವತಾರ ಇವನೆ ಏನೋ ಎಂಬ ಗುಮಾನಿ ನನ್ನನ್ನು ಕಾಡುವಂತೆ ಮಾಡಿತ್ತು. ಆದರೆ, ನಮ್ಭ ಸೊಟ್ಟನಾಗಪ್ಪ ಮಂಜಣ್ಣನಂತೆ ಕಥೆಗಾರ ಆಗಿರಲಿಲ್ಲ. ಬದಲಾಗಿ ಆ ಕಾಲಕ್ಕೆ ಅವನೇ ನಮ್ಮ ಊರಿನ ಪ್ರಮುಖ ಸುದ್ದಿಗಾರನಾಗಿದ್ದ.!ನಾಗಪ್ಪನ ಬಾಯಲ್ಲಿ ಊರಲ್ಲಿನ ಮನೆಮನೆಯ ಸುದ್ದಿ ಸದಾ ಬಿಸಿಬಿಸಿ ಚಹಾದ ಕಪ್ಪಿನಿಂದೇಳುವ ಹಬೆಯಂತೆ ಪಸರಿಸುತ್ತಲೆ ಇರುತಿದ್ದವು. ಸುದ್ದಿಗಳಿಗೆ ಅವನಲ್ಲಿ ಎಂದಿಗೂ ಬರವಿರಲಿಲ್ಲ.

ಎಲೆಯಡಕೆ, ತಂಬಾಕಿನ ಜೊತೆಗೆ ಕನ್ನಡಿ ಹಳ್ಳನ್ನು ಒಳಗೊಂಡ ಸುಣ್ಣದ ಪೆಟ್ಟಿಗೆಯೊಡನೆ ಸುದ್ದಿಗಳೂ ಅವನ ಸಂಗಾತಿಗಳಾಗಿದ್ದವು. ಸಂಜೆ ಹೊಲದಿಂದ ಬಂದು, ಹಿಟ್ಟು ಬೀಸುವಾಗ, ಹಗ್ಗ ಹೊಸೆಯುವಾಗ ನಂತರ ಉಂಡು ಅಂಗಳದಲ್ಲಿ ಹಾಸಿಕೊಂಡು ಮಲಗಿದ ನಂತರವೂ ಅವನ ಸುದ್ದಿಗಳು ಪ್ರಸಾರ ಆಗುತ್ತಲೆ ಇರುತಿದ್ದವು. ಮನೆಮನೆಯ ಆಗುಹೋಗುಗಳು, ಜಗಳ ವೈಷಮ್ಯ, ಕನ್ಯಾನ್ವೇಷಣೆ ಇಲ್ಲವೇ ವರಾನ್ವೇಷಣೆ, ಮದುವೆ, ಬೀಗತನ ಹೀಗೆ ಅವನ ಸುದ್ದಿಬತ್ತಳಿಕೆಯಲ್ಲಿನ ಸಂಗತಿಗಳಿಗೆ ಕೊನೆಯೆಂಬುದೇ ಇರಲಿಲ್ಲ.

ಸೊಟ್ಟನಾಗಪ್ಪನ ಅಡಕಿಯೆಲೆಯ ಕಂಚಿ ಮತ್ತು ಅದರೊಳಗಿನ ಸುಣ್ಣದ ಡಬ್ಬಿ ನನಗೆ ಯಾವಾಗಲೂ ವಿಸ್ಣಯದ ವಸ್ತುಗಳಾಗಿದ್ದವು. ಕಂಚಿಯಲ್ಲಿ ಅಡಕಿಯೆಲೆ ಸುಣ್ಣದ ಡಬ್ಬಿ, ತಂಬಾಕು ಮಾತ್ರ ಇರುತಿತ್ತಾದರೂ ಅದರಲ್ಲಿ ಮತ್ತಿನ್ನೇನಾದರೂ ಇದ್ದಿರಬಹುದೆಂಬ ಕುತೂಹಲ ನನ್ನಲ್ಲಿ ಸದಾ ಕೊರೆಯುತಿತ್ತು. ಸುಣ್ಣದ ಡಬ್ಬಿಯ ಮುಚ್ಚಳದಲ್ಲಿ ಕನ್ನಡಿ ಹಳ್ಳು ಇತ್ತು.  ಆ ಕನ್ನಡಿ ಹಳ್ಳನ್ನು ಇದಿರು ಹಿಡಿದು ಮೊದಲ ಬಾರಿ ನನಗೆ ನನ್ನನ್ನೇ ತೋರಿಸಿದ ಮಹಾನುಭಾವ ಇವನೇ ಇರಬೇಕೆಂಬುದು ಈಗಲೂ ನನ್ನ ಅಚಲ ನಂಬಿಕೆಯಾಗಿಯೇ ಉಳಿದಿದೆ. ಆ ಕನ್ನಡಿ ಹಳ್ಳಿನ ಸುಣ್ಣದ ಡಬ್ಬಿ ಒಂದು ಮಾಯಾದರ್ಪಣವೇನೋ ಎಂದು ನಾನು ಹಲವಾರು ಬಾರಿ ಸೋಜಿಗಗೊಂಡದ್ದಿದೆ. ಏಕೆಂದರೆ,  ಸೊಟ್ಟನಾಗಪ್ಪ ಯಾವದಾದರೂ ಸುದ್ದಿ ಮಾತನಾಡುವಾಗ ಸುಣ್ಣದ ಡಬ್ಬಿಯನ್ನು ಕೈಯೊಳಗಿರಿಸಿಕೊಂಡೇ ಇರುತಿದ್ದ ಮತ್ತು ಅದನ್ನೊಮ್ಮೆ, ಮತ್ತೆ ತನ್ನೆದುರು ಕೂತವರ ಕಡೆಗೊಮ್ಮೆ  ದೃಷ್ಟಿ ನೆಟ್ಟಿರುತಿದ್ದ.!

ಊರಲ್ಲಿನ ಎಲ್ಲ ವಿದ್ಯಮಾನಗಳೂ ಅವನಿಗೆ ಆ ಸುಣ್ಣದ ಡಬ್ಬಿಯಲ್ಲಿನ ಕನ್ನಡಿಹಳ್ಳಿನಲ್ಲಿಯೇ ಸಾಕ್ಷಾತ್ ಗೋಚರಿಸುತ್ತವೇನೋ ಎಂಬಂತೆ ನಾಗಪ್ಪನ ಸುದ್ದಿವಿವರಣೆ ನಿರಾಂತಕವಾಗಿ ನಿರರ್ಗಳವಾಗಿ ಮುಂದುವರೆದಿರುತಿತ್ತು. ಈ ಕಾರಣಕ್ಕೆ ಅವನ ಸುಣ್ಣದ ಡಬ್ಬಿಯ ಕನ್ನಡಿಹಳ್ಳು ನನಗೆ ಮಾಯಾದರ್ಪಣದಂತೆ ಭಾಸವಾಗುತಿತ್ತು.

ನನಗೆ ತಿಳಿವಳಿಕೆ ಬಂದಂತೆ ನಾಗಪ್ಪ ನನಗೆ ವಾಚಾಳಿ ಅನ್ನಿಸತೊಡಗಿದ. ಅವನಿಗೆ ನಾನೆಂದರೆ ಅದೇನೊ ಎಲ್ಲಿಲ್ಲದ ಕಕ್ಕುಲತೆ! ಅವನ ಕಣ್ಣಿಗೆ ಬಿದ್ದರೆ ಮುಗಿದೇ ಹೋಯ್ತು, ತಾರಾಮಾರಾ ಎತ್ತಿ ಮುಖಮೂತಿನೋಡದೆ ಲೊಚಲೊಚ ಮುದ್ದಿಸಿಬಿಡುತಿದ್ದ. ಅವನ ಈ ಮುದ್ದಿಸುವಿಕೆ ಇವತ್ತಿಗೂ ನನಗೆ ಭಯಂಕರ ನೆನಪಾಗಿ ಉಳಿದುಬಿಟ್ಟಿದೆ. ಮೊದಲೆಲ್ಲಾ ಅವನು ಮುದ್ದಿಸುವಾಗ ನಾನು ಸುಮ್ಭನೆ ಇರುತಿದ್ದೆ. ನಂತರ, ಅವನ ಆ ಘಾಟು ಬೆವರಿನ ವಾಸನೆ, ಕುರುಚಲು ಗಡ್ಡದ ಚುಚ್ಚುವಿಕೆಗೆ ಬೆದರಿ, ನಾಗಪ್ಪ ಕಂಡೊಡನೆ ನಾನೇ ಫೇರಿ ಕೀಳುತಿದ್ದೆ. ಅದಕ್ಕೂ ಬಗ್ಗದ ಅವನು ಮರೆಯಿಂದಲಾದರೂ ಬಂದು ಎತ್ತಿ ಮುದ್ದಿಸಿಬಿಡುತಿದ್ದ. ಅವನ ಅಡಕಿಯೆಲೆಯ ರಸಗಂಪೆಲ್ಲ ನನ್ನ ಮುಖದಲ್ಲಿ ಓಕುಳಿಯಾಡಿ ನನ್ನ ಮುಖ ಕೆಂಪಾಗಿ ಅತ್ತುಬಿಡುತಿದ್ದೆ. ನಾಗಪ್ಪ ಹಾಗೆಲ್ಲ ನಾನು ಅತ್ತಾಗ ಮರಾಠಿ ಮರಾಠಿ ಎಂದು ಗಹಗಹಿಸಿ ನಗುತಿದ್ದ. ಆಗ ಮರಾಠಿ ಎಂದರೆ ಏನೆಂಬುದೇ ನನಗೆ ತಿಳಿದಿರಲಿಲ್ಲ. ಅವನದೇ ಸಮಜಾಯಿಶಿ ಪ್ರಕಾರ ನಾನು ಕೆಂಪಗಿದ್ದುದೇ ಹಾಗೇ ಕರೆಯಲು ಕಾರಣ ಎಂಬುದು ನಂತರ ತಿಳಿಯಿತು.

ನನಗೆ ಕರೆಯುತ್ತಿದ್ದಂತೆಯೆ, ಬೇರೆಯವರಿಗೆ ಅಡ್ಡ ಹೆಸರು, ಉಪನಾಮ ಇಡುವುದರಲ್ಲೂ ನಾಗಪ್ಪ ತನ್ನದೇ ಆದ ವಿಶಿಷ್ಟತೆಯನ್ನು  ಪಡೆದಿದ್ದ. ಸಿಟ್ಟಿನ ವ್ಯಕ್ತಿಗೆ ಮಿರ್ಚಿ, ಕಪ್ಪಗಿರುವನಿಗೆ ಬೈಗಾನು, ಸುಳ್ಳುಬುರುಕನಿಗೆ ಜರ್ಝರಿ ಹೀಗೆ ಅವನ ಪದ ಸಂಪತ್ತು ಸೋಜಿಗ ಪಡುವಂತೆ ಇತ್ತು.