ಕನ್ನಡದ ಸಂವರ್ಧನೆಯ ಪ್ರಶ್ನೆ

ಕನ್ನಡ ಕುಲವು ಸ್ವತಃ ತಾನೇ ತನ್ನ ಸಾಂಸ್ಕೃತಿಕ ಕಚ್ಚಾಸಾಮಾಗ್ರಿಗಳಿಂದ ತನ್ನ ಶೈಕ್ಷಣಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ಆವಶ್ಯಕವಾದ ಸಿದ್ಧಾಂತಗಳನ್ನು, ಒಟ್ಟಿನಲ್ಲಿ ಪರಿಹಾರಗಳನ್ನೂ ಕಂಡುಕೊಳ್ಳಲೆತ್ನಿಸಬೇಕು. ನಮ್ಮ ಸಾಮಾಗ್ರಿಗಳನ್ನು ವಿಶ್ಲೇಷಿಸಿ ಹೊರಗಿನವರು ಸಿದ್ಧಪಡಿಸಿ ನೀಡಿದ ಸಿದ್ಧಾಂತಗಳ ದಾಸರಾಗುವ ಬದಲು-ಪರೋಪಜೀವಿಗಳಾಗುವ ಬದಲು - ಕನ್ನಡಿಗರು ತಾವೇ ತಮ್ಮ ಸಾಮಾಗ್ರಿಗಳನ್ನು ಬಳಸಿ ತಮ್ಮ ಸಿದ್ಧಾಂತಗಳನ್ನು ಸ್ವತಃ ರೂಪಿಸಿ ಅವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕವಾಗಿ ಮಂಡಿಸಬೇಕು.

ಕನ್ನಡದ ಸಂವರ್ಧನೆಯ ಪ್ರಶ್ನೆ

ಡಾ.ಡಿ.ಆರ್.ನಾಗರಾಜ್ ‘ಕನ್ನಡ ಸಂವರ್ಧನೆ’ ಎಂಬ ತಮ್ಮದೊಂದು ಲೇಖನದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯ ಸಂವರ್ಧನೆಯ ಕುರಿತು ಚರ್ಚಿಸಿದ್ದಾರೆ. ಆ ಲೇಖನದ ನೆರವಿನಿಂದ ಮೇಲಿನ ಪ್ರಶ್ನೆಯನ್ನು ಪರಿಶೀಲಿಸುವ ಒಂದು ಪುಟ್ಟ ಪ್ರಯತ್ನ.

ಭಾಷಿಕ ಕುಲವೊಂದರ ಭಾಷೆಯನ್ನೂ ಒಳಗೊಂಡ ಅಖಂಡ ಸಂಸ್ಕೃತಿಯ ಬಲಸಂವರ್ಧನೆಯ ಪ್ರಶ್ನೆಯನ್ನು ಆ ಭಾಷಿಕ ಕುಲದ ರಾಜಕೀಯಾರ್ಥಿಕ ಸಾಮಾಜಿಕ ಬಲಸಂವರ್ಧನೆಯ ಪ್ರಶ್ನೆಯೊಂದಿಗೆ ಸಂಬಂಧಿಸಿ ಚರ್ಚಿಸುವುದು ವಿಷಯದ ಒಂದು ಬಹು ಮುಖ್ಯ ಆಯಾಮವನ್ನು  ಒಳಗೊಳ್ಳುತ್ತದೆ. ಇಲ್ಲಿ ‘ರಾಜಾಕೀಯಾರ್ಥಿಕ ಸ್ವಾವಲಂಬನೆ-ಬಲಸಂವರ್ಧನೆ ಆ ಭಾಷಿಕ ಕುಲದ ಸಂಸ್ಕೃತಿಯ ಬಲವರ್ಧನೆಗೆ ತುಂಬಾ ಅವಶ್ಯ’ ಎಂಬುದೊಂದು, ಇದಕ್ಕೆ ವಿರುದ್ಧವಾಗಿ ‘ಅಷ್ಟೇನೂ ಅವಶ್ಯಕವಿಲ್ಲ’ ಎಂಬ ಇನ್ನೊಂದು, ಹೀಗೆ ಎರಡು ನಿಲುವುಗಳು ನುಲಿಯುತ್ತವೆ. ‘ಭಾಷಿಕ ಕುಲವೊಂದು ರಾಜಕೀಯವಾಗಿ ಏಕಾಗ್ರತೆಯಿಂದ ಶಕ್ತಿಶಾಲಿಯಾಗಲು ಪ್ರಯತ್ನಿಸಿದ ಹಾಗೆಲ್ಲ ಅದರ ಸಂಸ್ಕೃತಿಗೆ ಪೆಟ್ಟುಬೀಳುತ್ತದೆ’ಎಂಬ ನೀಷೆಯ ಅಭಿಪ್ರಾಯ ಇಲ್ಲಿ ಎರಡನೇ ಪಕ್ಷವಾಗುತ್ತದೆ. ಡಾ.ನಾಗರಾಜ್ ಈ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪುವುದಿಲ್ಲ.

ನನ್ನ ಪ್ರಸ್ತುತ ಲೇಖನದ ಉದ್ದೇಶ ಈ ಪ್ರಶ್ನೆಯನ್ನು ಇನ್ನೊಂದು ದಿಕ್ಕಿನಿಂದ ಪರಿಶೀಲಿಸುವುದು. ಭಾಷಿಕ ಕುಲವೊಂದರ ಸಂಸ್ಕೃತಿಯ ರಕ್ಷಣೆಗೆ ರಾಜಕೀಯಾರ್ಥಿಕ ಸ್ವಾವಲಂಬನೆ ಅವಶ್ಯಕವಾಗಿದ್ದರೂ ಆ ಸಮಸ್ಯೆ ಕೇವಲ ‘ರಾಜಕೀಯಾರ್ಥಿಕ ಸ್ವಾವಲಂಬನೆ’ಯ ಪ್ರಶ್ನೆಯಲ್ಲದೇ ಇನ್ನೂ ಬೇರೆ ಕೆಲವು ಸಮಸ್ಯೆಗಳಿಗೆ ತಳುಕುಹಾಕಿಕೊಂಡಿದೆ. ಅದನ್ನೊಂದಿಷ್ಟು ವಿವರವಾಗಿ ಚರ್ಚಿಸಬಹುದು.

ರಾಜಕೀಯಾರ್ಥಿಕ ಸ್ವಾವಲಂಬನೆ ಜನಾಂಗವೊಂದರ ಭೌತಿಕ ಬದುಕಿನ ಪ್ರಗತಿಗೆ ಕೊಂಡೊಯ್ಯತ್ತದೆ. ಸ್ವಾತಂತ್ರೋತ್ತರ ಕರ್ನಾಟಕದ ವಿಭಿನ್ನ ಜನಾಂಗಗಳ ಬದುಕಿನ ಸ್ಥಿತಿಗತಿಗಳಲ್ಲುಂಟಾದ ಬದಲಾವಣೆಗಳು ಈ ಮಾತನ್ನು ಸಾಕ್ಷಿಸುತ್ತವೆ. ಆದರೆ, ವಿರ‍್ಯಾಸವೆಂದರೆ, ಭೌತಿಕ ಬದುಕಿನ ಪ್ರಗತಿ ಸಾಂಸ್ಕೃತಿಕ ಅವನತಿಯತ್ತ ಕೊಂಡೊಯ್ದಿರುವುದನ್ನೂ ದಿಗ್ದರ್ಶಿಸುತ್ತದೆ. ಹೇಗೆ ? ಸರ್ಕಾರದ ವಿವಿಧ ಯೋಜನೆಗಳು ಜನರ ಬದುಕನ್ನು ಸುಧಾರಿಸಿದಂತೆಲ್ಲಾ, ಜನರು ತಮ್ಮನ್ನು ಆಧುನಿಕ ಶಿಕ್ಷಣಕ್ಕೆ, ವಿಜ್ಞಾನ-ತಂತ್ರಜ್ಞಾನಗಳಿಗೆ, ಜಾಗತೀಕರಣಕ್ಕೆ, ತೆರೆದುಕೊಂಡತೆಲ್ಲಾ ಕನ್ನಡತನ ಅವರ ಬದುಕಿನಿಂದ ದೂರವಾಗಿದೆ ಎಂಬುದಕ್ಕೆ ಅವರ ಬದುಕಿನ ಎಲ್ಲಾ ರಂಗಗಳೂ ಪುರಾವೆಗಳನ್ನು ಒದಗಿಸುತ್ತವೆ. ಜನರ ವೇಷ-ಭೂಷಣ, ಆಹಾರ, ಭಾಷೆ, ಮನೆ-ಮಠ, ಹಬ್ಬ-ಹರಿದಿನ, ಇತ್ಯಾದಿ ಯಾವುದೇ ರಂಗವನ್ನು ಇಣುಕಿದರೂ ಅಲ್ಲೆಲ್ಲೂ ಕನ್ನಡತನವಿಲ್ಲ! ಅಲ್ಲಿ ಗೋಚರಿಸುವುದು : ಮಿಸಳಭಾಜಿ ಲಕ್ಷಣ.

ನನ್ನ ಪ್ರಕಾರ, ಅಚ್ಚಕನ್ನಡತನವಿರುವುದು ಜಾನಪದ ಲೋಕದಲ್ಲಿ. ಕನ್ನಡದ ಪರಿಶಿಷ್ಟ ಲೋಕದಲ್ಲಿ. ಕನ್ನಡದ ಶಿಷ್ಟಲೋಕ ಪ್ರಥಮದಲ್ಲಿ ಸಂಸ್ಕೃತೀಕರಣಕ್ಕೊಳಗಾಯಿತು. ತದನಂತರ ಅದು ಆಂಗ್ಲೀಕರಣಕ್ಕೊಳಗಾಗಿ ‘ಕಂಗ್ಲೀಷಾಗಿ’ ಪರಿವರ್ತಿತವಾಯಿತು. ಈ ‘ಕಂಗ್ಲೀಷ’ಪರವಾದ ಬೀಜವನ್ನು ವಿಜ್ಞಾನ ತಂತ್ರಜ್ಞಾನಗಳು ಶಿಕ್ಷಣದ ಮೂಲಕ ಬಿತ್ತಿದರೆ, ಅದಕ್ಕೆ ಅಗ್ಗದ ಪ್ರಚಾರವನ್ನು ಪತ್ರಿಕೆ, ಟಿವಿ, ಸಿನಿಮಾ, ಮುಂತಾದ ಮಾಧ್ಯಮಗಳು ನೀಡಿ ಇನ್ನಷ್ಟೂ ಬಲಗೊಳಿಸುತ್ತಿವೆ. ಈ ವಿಷಯದಲ್ಲಿ ಜನಪ್ರಿಯ ಕಾದಂಬರಿಗಳ ಪಾತ್ರವೂ ಇದೆ. ಬದುಕಿನ ಬದಲಾದ ಸನ್ನಿವೇಶಗಳು ಇಂದು ಈ ಕಂಗ್ಲೀಷ ಪರವಾಗಿವೆಯೋ ಹೊರತು, ಕನ್ನಡದ ಪರವಾಗಿಲ್ಲ. ಇದು ಆರೋಪ ಅಲ್ಲ, ವಾಸ್ತವ ಕುರಿತ ವಿಷಾದ!

ಕನ್ನಡಪರವಾದ ಬದುಕಿನ ಸನ್ನಿವೇಶಗಳು ಶುದ್ಧ ಜಾನಪದ ಲೋಕದವು. ಹಳೆಯ, ಸಾಂಪ್ರದಾಯಿಕ ಜೀವನದ, ಕೃಷಿ-ಪಶುಪಾಲನೆ, ಗುಡಿಕೈಗಾರಿಕಾ ಲೋಕದವು. ಸೂಕ್ಷ್ಮವಾಗಿ ನೋಡಿದರೆ, ಇವೆಲ್ಲವೂ ಮನವರಿಕೆಯಾಗುತ್ತವೆ. ಎತ್ತು-ಕೋಣಗಳಿಗೆ ನೊಗ ಹೇರಿ ಮಾಡುತ್ತಿದ್ದ ಉತ್ತುವ-ಬಿತ್ತುವ ಕೃಷಿ ಜೀವನ ಇಲ್ಲವಾಯಿತು! ಅದರ ಪರಿಣಾಮವಾಗಿ ಆ ಬದುಕಿನೊಂದಿಗೆ ಶತ-ಶತಮಾನಗಳಿಂದ ಉಳಿದು ಬೆಳೆದು ಬಂದಿದ್ದ ಕನ್ನಡ ಸಂಸ್ಕೃತಿ ನಾಶವಾಯಿತು. ಕೃಷಿಬದುಕಿನ ಮೂಲಜನ್ಯ ಪದಗಳು, ನುಡಿಗಟ್ಟುಗಳು, ಗಾದೆಗಳು, ಪರಿಭಾಷೆಗಳಿಂದ ಹಿಡಿದು, ಹಾಡುಗಳು, ಕತೆಗಳು, ಕಲ್ಪನೆಗಳು, ನಂಬಿಕೆಗಳು, ಹಬ್ಬ-ಆಚರಣೆಗಳು, ಇವೆಲ್ಲವೂ ಇಂದು ವಿನಾಶಗೊಂಡಿವೆ ಇಲ್ಲವೇ ವಿರೂಪಗೊಂಡಿವೆ. ಕೊಯ್ಯುವ, ಹೇರುವ, ಒಕ್ಕುವ, ತೂರುವ, ಕುಟ್ಟುವ, ಬೀಸುವ, ಹಸನ ಮಾಡುವ, ಗಾಣ ಆಡುವ, ಎಣ್ಣೆ ತೆಗೆಯುವ, ಇನ್ನೂ ಮುಂತಾದ ನೂರಾರು ಬಗೆಯ ಕೃಷಿಕೆಲಸಗಳಿಲ್ಲವಾದವು, ಅಂತೆಯೇ ಆ ಎಲ್ಲಾ ಕೆಲಸಗಳೊಟ್ಟಿಗೆ ಹುಟ್ಟಿ ಬೆಳೆದು ಬಂದಿದ್ದ ಕನ್ನಡ ಭಾಷಿಕರ ಬುದ್ಧಿ-ಭಾವನೆ-ನಂಬುಗೆಗಳ ಉತ್ಪನ್ನವಾದ ಹಾಡು-ಭಾಷೆ-ಆಚರಣೆಗಳೆಲ್ಲವೂ ಮಾಯವಾದವು. ಜನಪದ ವಿದ್ವಾಂಸರ ಪ್ರಯತ್ನದಿಂದಾಗಿ ಒಂದಷ್ಟು ಹಾಡು-ಪದ-ಗಾದೆಗಳು ಗ್ರಂಥಸ್ಥವಾಗಿವೆಯಷ್ಟೆ! ಆದರೆ, ಸಂಸ್ಕೃತಿ ಕುರಿತ ಆ ಬಗೆಯ ಪ್ರಯತ್ನಗಳು ಚರಿತ್ರೆಯ ದಾಖಲೆಯ ದೃಷ್ಟಿಯಿಂದ ಅವಶ್ಯವೋ ಹೊರತು, ಚರಿತ್ರೆಯನ್ನು ನಿರ್ಮಿಸುವ - ಸೃಷ್ಟಿಸುವ-ಕಟ್ಟುವ ದೃಷ್ಟಿಯಿಂದಲ್ಲ! ಚರಿತ್ರೆಯನ್ನು ಬರೆಯುವುದೆಂದರೆ - ದಾಖಲಿಸುವುದೆಂದರೆ ಚರಿತ್ರೆಯನ್ನು ಸೃಷ್ಟಿಸಿದಂತಲ್ಲ! ರಕ್ಷಿಸಿದಂತೆಯೂ ಅಲ್ಲ! ಚರಿತ್ರೆಯನ್ನು ಬರೆಯುವುದು ಒಂದು ಪ್ರಜ್ಞಾವಂತಿಕೆಯ ಜವಾಬ್ಧಾರಿ - ಕಾಳಜಿಯನ್ನು ಮಾತ್ರ ಬಿಂಬಿಸುತ್ತದೆ. ಆದರೆ ಚರಿತ್ರೆಯನ್ನು-ಕಾಪಾಡುವುದು ಸೃಷ್ಟಿಸುವುದು ತನ್ನ ಸಂಸ್ಕೃತಿಯ ಬಗ್ಗೆ ಜನಾಂಗವೊಂದು ತಾಳಿದ ಪ್ರೀತಿ,  ಶ್ರದ್ಧೆ, ಅಭಿಮಾನ, ಈ ಎಲ್ಲವುಗಳನ್ನೂ ಅವಲಂಬಿಸಿದೆ. ಸಂಸ್ಕೃತಿಯೊಂದರ ಹುಟ್ಟು-ಬೆಳವಣಿಗೆ-ರಕ್ಷಣೆ ಈ ಎಲ್ಲವೂ ಸಾಧ್ಯವಾಗುವುದು, ಆ ಜನಾಂಗ ಅಂತಹ ಸಂಸ್ಕೃತಿಯನ್ನು ‘ಬದುಕಬೇಕು’ ಮತ್ತು ಅದು ವಂಶವಾಹಿನಿಯೋಪಾದಿಯಲ್ಲಿ ತಲೆಯಿಂದ ತಲೆಗೆ ಪೀಳಿಗೆಯಿಂದ ಪೀಳಿಗೆಗೆ ಹರಿಯುವಂತೆ-ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು. ಕೇವಲ ಗ್ರಂಥ ರಚಿಸಿದರೆ, ಉತ್ಸವಗಳಲ್ಲಿ ಹಾಡು-ಕುಣಿತ-ಸ್ಥಬ್ಧಚಿತ್ರ ಇತ್ಯಾದಿಗಳನ್ನು ಪ್ರದರ್ಶಿಸಿದರೆ ಸಂಸ್ಕೃತಿಯೊಂದನ್ನು ಉಳಿಸಿ ಬೆಳೆಸಿದಂತಲ್ಲ.

ಒಟ್ಟು ನನ್ನ ತರ್ಕ: ಕನ್ನಡ ಸಂಸ್ಕೃತಿಯ ತಾಜಾತನದ ಪುನರುತ್ಥಾನವು ಆ ಮೂಲತನ ಉಳಿದು ಮುಂದಕ್ಕೆ ಹರಿದು ಹೋಗಬಹುದಾದಂತಹ ಹಳೆಯ ಪಾರಂಪರಿಕ ಬದುಕಿನ ಪರಿಸ್ಥಿತಿಗಳು ಮತ್ತೇ ನಿರ್ಮಾಣವಾದಾಗ ಮಾತ್ರ ಸಾಧ್ಯ! ಆದರೆ, ಇದೊಂದು ಮೂರ್ಖ ಆಲೋಚನೆಯೂ ಹೌದು! ಕಾಲದ ಚಕ್ರವನ್ನು ಹಿಂದಕ್ಕೆ ತಿರುಗಿಸಬಲ್ಲೆ ಎಂಬುದು ಕೇವಲ ಭ್ರಮೆ! ಹೀಗಿರುವಾಗ, ವರ್ತಮಾನದ ಬದಲಾದ ಬದುಕಿನ ಸನ್ನಿವೇಶಗಳಿಗೆ ಹೊಂದಿಕೊಂಡು ಬದುಕುತ್ತಿರುವಾಗಲೇ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಸಾಗಾಕುವ ಜವಾಬ್ಧಾರಿ ಇಂದಿನ ತಲೆಮಾರಿನವರ ಮೇಲಿದೆ. ಇದಕ್ಕಿರುವ ಮಾರ್ಗ, ಡಾ.ನಾಗರಾಜ್‌ರ ಪದಗಳನ್ನೇ ಉಪಯೋಗಿಸಿ ಹೇಳುವುದಾದರೆ, ‘ಅನುಸಂಧಾನ’ದ ಮಾರ್ಗ. ಇಂಗ್ಲೀಷ್ ಸೇರಿದಂತೆ ಒಟ್ಟಿನ ಎಲ್ಲಾ ಪರಕೀಯ ಸಂಸ್ಕೃತಿಗಳನ್ನು ‘ಅನುಸಂಧಾನಿಸುತ್ತಲೇ’ ಕನ್ನಡ ಸಂಸ್ಕೃತಿಯು ತನ್ನ ಮೂಲ ಸೆಲೆಯನ್ನು ಉಳಿಸಿಕೊಳ್ಳಬೇಕು, ಮತ್ತು ಹೊಸದನ್ನು ಸ್ವೀಕರಿಸುತ್ತಲೇ ಬೆಳೆಯಬೇಕು. ಜಗತ್ತಿನ ಪ್ರತಿ ರಾಷ್ಟç-ಜನಾಂಗಗಳ ದ್ವಾರಗಳು ವಿಶ್ವದ ಎಲ್ಲಾ ದಿಕ್ಕುಗಳ ಗಾಳಿಗೆ ತೆರೆದುಕೊಂಡು ಬದುಕುತ್ತಿರುವ ಇಂದಿನ ಸನ್ನಿವೇಶದಲ್ಲಿ ಒಂದರ ಪ್ರಭಾವ ಇನ್ನೊಂದರ ಮೇಲಾಗುವುದು ಸಹಜವೇ! ಆದರೆ, ಯಾವುದೇ ಜನ ಕುಲವು ಹೊರಗಿನವುಗಳ ಆಕರ್ಷಣೆಗೆ ಪ್ರಜ್ಞಾಹೀನವಾಗಿ ಒಳಗಾಗಿ, ಹೊರಗಿನದನ್ನು ಕುರುಡಾಗಿ ಅನುಕರಿಸಿ ತನ್ನ ಸಾಂಸ್ಕೃತಿಕ ಸಾಹಚರ್ಯತೆಯನ್ನು, ವಿಶಿಷ್ಟತೆಯನ್ನು, ಅನನ್ಯತೆಯನ್ನು ಕಳೆದುಕೊಳ್ಳುವುದು ಮೂರ್ಖತನವಾದೀತು. ಆದ್ದರಿಂದ ಹೊರಗಿನದನ್ನು ಕುರುಡಾಗಿ ಅನುಕರಿಸಬಾರದು, ಅನುಸಂಧಾನಿಸಬೇಕು. ಅನುಸಂಧಾನ ಮಾರ್ಗವು ‘ಮಿತ-ಸ್ವೀಕಾರ’ವನ್ನೇನು ಬೇಡ ಎನ್ನುವುದಿಲ್ಲ! ಅನ್ಯ ಸಂಸ್ಕೃತಿಗಳೊಂದಿಗಿನ ಸಂಘರ್ಷಾತ್ಮಕ ಮುಖಾಮುಖಿಯಲ್ಲಿ ಯಾವುದನ್ನು ಸಂಸ್ಕೃತಿಯೊಂದು ಇನ್ನೊಂದರಿಂದ ಸ್ವೀಕರಿಸಬೇಕು-ಸ್ವೀಕರಿಸಬಾರದು ಎಂಬುದನ್ನು ಆ ಸಂಸ್ಕೃತಿಯ ಜನಕುಲದ ಪ್ರಜ್ಞಾವಂತಿಕೆ ನಿರ್ಣಯಿಸುತ್ತದೆ. ಆದ್ದರಿಂದ ಈ ವಿಷಯ ಭಾಷಿಕ ಕುಲವೊಂದರ ರಾಜಕೀಯ ಶಕ್ತಿ-ಆರ್ಥಿಕ ಸ್ವಾವಲಂಬನೆಗೆ ಸಂಬಂಧಿಸಿದ ಪ್ರಶ್ನೆಯಾಗದೇ, ಆ ಜನಕುಲದ ಅರಿವಿನ, ಪ್ರಜ್ಞೆಯ ಪ್ರಶ್ನೆಯಾಗುತ್ತದೆ.

ಡಾ.ನಾಗರಾಜ ಅವರು ‘ಕನ್ನಡ ಸಂಸ್ಕೃತಿಯನ್ನು ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಆಕರ್ಷಕವಾಗಿ ಹೊರ ಜಗತ್ತಿಗೆ ಮಂಡಿಸುವ’ಬಗ್ಗೆ ಆಲೋಚಿಸುತ್ತಾರೆ. ಅವರೆನ್ನುವಂತೆ ಈ ‘ಶೈಕ್ಷಣಿಕ-ಬೌದ್ಧಿಕ ಯೋಜನೆಯ ದಾರಿ’ಯಲ್ಲಿಯೂ ನವ-ವಸಾಹತೀಕರಣದ ಎಲ್ಲಾ ಸಮಸ್ಯೆಗಳೂ ತಲೆಹಾಕುವಂತಹ ಅಪಾಯಗಳಿವೆ. ಬಹಳ ಮುಖ್ಯವಾಗಿ ಈ ಯತ್ನದಲ್ಲಿ ದೇಸೀಯ ಸಂಸ್ಕೃತಿಗಳು ತಮ್ಮನ್ನು ತಾವು ಸರಕೀಕರಣಗೊಳಿಸಿಕೊಳ್ಳುವಂತಹ ಅಪಾಯಗಳೂ ಇವೆ. ಹಾಗಾಗಿ ಈ ‘ವೈರುಧ್ಯವನ್ನು ದಾಟಲು ಇರುವ ಒಂದು ಮಾರ್ಗ ಎಂದರೆ, ಕನ್ನಡ ಬೌದ್ಧಿಕ ಪರಂಪರೆಗಳು ತಾವು ತೀವ್ರವಾಗಿ ಅಂತರ್ಮುಖಿಯಾಗಿ ಬೆಳೆಯುತ್ತಾ ಹೋಗುವುದು’. ‘ಕನ್ನಡ ಕುಲ ತೀವ್ರವಾಗಿ ಅಂತರ್ಮುಖಿಯಾದಷ್ಟು ಅದರ ಶಕ್ತಿ ಸಂವರ್ಧಿಸುತ್ತದೆ. ನವವಸಾಹತೀಕರಣದಿಂದ ಪಾರಾಗಲು ಇದೊಂದು ಸಮರ್ಥ ದಾರಿ’ ಎಂತಲೂ ಡಾ.ನಾಗರಾಜ್ ಸೂಚಿಸುತ್ತಾರೆ.

ಸಧ್ಯದ ನನ್ನ ಗಮನ ಈ ‘ಅಂತರ್ಮುಖೀಕರಣ’ದ ಮೇಲೆ. ಕನ್ನಡ ಕುಲವು ತೀವ್ರವಾಗಿ ಅಂತರ್ಮುಖಿಯಾಗುವುದು ಎಂದರೇನು? ನನಗನ್ನಿಸುವಂತೆ, ಕನ್ನಡ ಕುಲ ತನ್ನ ಮೂಲ ಸಂಸ್ಕೃತಿಯ ಒಳತಿರುಳನ್ನು ತಳಮಟ್ಟದಿಂದ ಪುರ್ನಶೋಧಿಸಿಕೊಳ್ಳುವುದು, ಆಧುನಿಕ ಸಂದರ್ಭದಲ್ಲಿ ನಿಂತುಕೊಂಡು ಅದನ್ನು ಆತ್ಮಾನುಸಂಧಾನಿಸುವುದು. ಈ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಆಧುನೀಕರಣದ ಹೊಡೆತಗಳಿಂದ ಕಲುಷಿತಗೊಂಡ, ಶಕ್ತಿಗುಂದಿದ, ತಾಜಾತನವನ್ನು ಕಳೆದುಕೊಂಡ ಕನ್ನಡ ಪ್ರಜ್ಞೆಗೆ , ಕನ್ನಡ ಸಾಂಸ್ಕೃತಿಕ ಜೀವಕೋಶಕ್ಕೆ ಶಕ್ತಿ ಮರುಕಳಿಸುತ್ತದೆ. ಕನ್ನಡ ಕುಲದ ಸಾಂಸ್ಕೃತಿಕ ಸಮಸ್ಯೆಗಳಿಗೆ ಕನ್ನಡ ಸಂಸ್ಕೃತಿಯ ಕಪಾಟುಗಳಲ್ಲಿಯೇ ಹೂತುಹೋಗಿರುವ ಅಡಗಿಕೊಂಡಿರುವ ಪರಿಹಾರಗಳನ್ನು ಆಗ ಮಾತ್ರ ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ. ‘ಹೊರಹೊಡೆತ-ನಿರೋಧಕ-ತಡೆಗೋಡೆಗಳು’ ಆಗ ಸಹಜವಾಗಿಯೇ ಕನ್ನಡ ನೆಲದಲ್ಲಿ ನಿರ್ಮಾಣವಾಗುತ್ತವೆ. ಹೊರಗಿನವರಿಗೆ ನಮ್ಮನ್ನು ಆಕರ್ಷಕವಾಗಿ ಪ್ರತಿಬಿಂಬಿಸಿಕೊಳ್ಳಲು ಹೋಗಿ ನಮ್ಮನ್ನು ನಾವು ವಾಣಿಜ್ಯೀಕರಿಸಿಕೊಂಡರೆ, ನಮ್ಮ ಜನಕುಲಗಳ ಜೀವನದಂಗಳದಿಂದಲೇ ಕಚ್ಚಾಸಾಮಾಗ್ರಿ ಪಡೆದುಕೊಂಡು ಅವುಗಳನ್ನೇ ಸಿದ್ಧಸರಕುಗಳನ್ನಾಗಿಸಿ ಮತ್ತೇ ನಮಗೇ ಮಾರುವುದರ ಮೂಲಕ ನವ-ವಸಾಹತುಶಾಹಿಯು ನಮ್ಮನ್ನು ಶೋಷಿಸುತ್ತದೆ. ಇಲ್ಲಿಯವರೆಗೆ ನಮ್ಮ ನಾಡನ್ನು ನಾವು ಹೊರಗಿನವರಿಗೆ ಕೇವಲ ಕ್ಷೇತ್ರಕಾರ್ಯದ ಸ್ಥಳವನ್ನಾಗಿಸಿಕೊಂಡಿದ್ದೇವೆ. ಆದರೆ ಸಿದ್ಧಾಂತಗಳು ಹೊರದೇಶದವು! ಹೀಗೆ ನಾವು ಹೊರಗಿನವರಿಗೆ ಕೇವಲ ಕಚ್ಚಾಸಾಮಾಗ್ರಿಯಾಗುವ ಅವಮಾನಕಾರೀ ವ್ಯಾಪಾರವನ್ನು ಇಲ್ಲೇ ಒಲ್ಲೆ ಎಂದಾಗ ಮಾತ್ರ ಸಂಸ್ಕೃತಿಯೊಂದರ ಆತ್ಮಗೌರವ ಸಂವರ್ಧಿಸುತ್ತದೆ’ ಎನ್ನುತ್ತಾರೆ ನಾಗರಾಜ್.

ಇದರರ್ಥ ಕನ್ನಡ ಕುಲವು ಸ್ವತಃ ತಾನೇ ತನ್ನ ಸಾಂಸ್ಕೃತಿಕ ಕಚ್ಚಾಸಾಮಾಗ್ರಿಗಳಿಂದ ತನ್ನ ಶೈಕ್ಷಣಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ಆವಶ್ಯಕವಾದ ಸಿದ್ಧಾಂತಗಳನ್ನು, ಒಟ್ಟಿನಲ್ಲಿ ಪರಿಹಾರಗಳನ್ನೂ ಕಂಡುಕೊಳ್ಳಲೆತ್ನಿಸಬೇಕು. ನಮ್ಮ ಸಾಮಾಗ್ರಿಗಳನ್ನು ವಿಶ್ಲೇಷಿಸಿ ಹೊರಗಿನವರು ಸಿದ್ಧಪಡಿಸಿ ನೀಡಿದ ಸಿದ್ಧಾಂತಗಳ ದಾಸರಾಗುವ ಬದಲು-ಪರೋಪಜೀವಿಗಳಾಗುವ ಬದಲು - ಕನ್ನಡಿಗರು ತಾವೇ ತಮ್ಮ ಸಾಮಾಗ್ರಿಗಳನ್ನು ಬಳಸಿ ತಮ್ಮ ಸಿದ್ಧಾಂತಗಳನ್ನು ಸ್ವತಃ ರೂಪಿಸಿ ಅವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕವಾಗಿ ಮಂಡಿಸಬೇಕು. ಹೀಗಂದರೆ, ಒಟ್ಟಾರೆ ಹೊರಗಿನದೆಲ್ಲವನ್ನೂ ಸಾರಾಸಗಟು ತಿರಸ್ಕರಿಸಬೇಕೆಂದು ಅರ್ಥವಲ್ಲ. ಈ ಕುರಿತು ಡಾ.ನಾಗರಾಜ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ‘ಹೊರಜಗತ್ತಿನ ಶೈಕ್ಷಣಿಕ, ಬೌದ್ಧಿಕ ಅಧಿಕಾರ ಕೇಂದ್ರಗಳ ಜತೆಗೆ ಸಂಬಂಧವೇ ಇರಕೂಡದು ಎಂದೇನಿಲ್ಲ. ಆಧುನಿಕ ಜಗತ್ತಿನ ಇನ್ನೊಂದು ವಿಸಂಗತಿ ಇದು. ಅಧಿಕಾರ ಕೇಂದ್ರಗಳ ಜತೆಗೆ ಅನುಸಂಧಾನ ಇರದಿದ್ದರೆ, ನಮ್ಮ ದುರ್ಬಲ ಸ್ಥಿತಿಯಿಂದ ಪಾರಾಗುವುದು ಕೂಡಾ ಕಷ್ಟವೇ. ಪಶ್ಚಿಮದ ಅತ್ಯಂತ ಶಕ್ತಿಶಾಲಿ ಶೈಕ್ಷಣಿಕ ಬೌದ್ಧಿಕ ಪರಂಪರೆ, ಪ್ರಕ್ರಿಯೆಗಳ ಜತೆಗೆ ಸೆಣಸಾಡುತ್ತಲೇ ಕನ್ನಡವು ತನ್ನ ಶಕ್ತಿ ಸಂವರ್ಧಿಸಿಕೊಳ್ಳಬೇಕಾಗಿದೆ. ಇದು ಅನುಕರಣದ ಮಾದರಿಯಲ್ಲಿ ನಡೆದರೆ ಪ್ರಯೋಜನವಿಲ್ಲ. ಅನುಸಂಧಾನದ ಮಾರ್ಗದಲ್ಲಿ ಆಗಬೇಕಿದೆ.’

ಅಂದರೆ ಹೊರ ಜಗತ್ತಿನ ಬೌದ್ಧಿಕ-ಶೈಕ್ಷಣಿಕ ವಿದ್ಯಾಮಾನಗಳನ್ನು ಅನುಸಂಧಾನಿಸುತ್ತಲೇ ಕನ್ನಡ ಜನಕುಲ ತನ್ನ ಬೌದ್ಧಿಕ ಶೈಕ್ಷಣಿಕ ಶಕ್ತಿಯನ್ನು ಸಂವರ್ಧಿಸಿಕೊಳ್ಳಬೇಕು. ಅದು ತನಗೆ ಅಗತ್ಯವೆನ್ನಿಸಿದ್ದನ್ನು, ತನ್ನಲ್ಲಿಲ್ಲದ್ದನ್ನು, ತನ್ನ ಶಕ್ತಿಯನ್ನು ಬೆಳೆಸಿಕೊಳ್ಳಲು ಪೂರಕವಾದುದನ್ನು ಹೊರಗಿಂದ ಸ್ವೀಕರಿಸಿಕೊಳ್ಳುತ್ತಲೇ ತನ್ನ ಸ್ವಂತ ಶಕ್ತಿಯನ್ನು ತನ್ನ ವಿಶಿಷ್ಟತೆಯನ್ನು ವೃದ್ಧಿಸಿಕೊಳ್ಳುವಂತಾಗಬೇಕು. ಧರ್ಮ, ಭಾಷೆ, ಸಮಾಜ, ರಾಜಕಾರಣ, ವೈದ್ಯಕೀಯ, ವಿಜ್ಞಾನ - ತಂತ್ರಜ್ಞಾನ ಹೀಗೆ ಬಹುತೇಕ ಕ್ಷೇತ್ರಗಳ ಸಂಶೋಧನೆಗಳಲ್ಲಿ ಕನ್ನಡಿಗರು ಹೊರಗಿನ ಬೌದ್ಧಿಕ ಕ್ಷೇತ್ರಗಳ ನೆರವಿಲ್ಲದೇ ಸ್ವತಂತ್ರವಾಗಿ ಬೆಳೆಯಲಾರರು. ಅದೇ ಹೊತ್ತಿನಲ್ಲಿ ತಮ್ಮದೇ ಸ್ವಂತ ಜ್ಞಾನಧಾತುವನ್ನೂ ನಿರುಪಯುಕ್ತವೆಂದು ತಳ್ಳುವುದು ಉಚಿತವಲ್ಲ.

ಹಲವು ಸಾವಿರ ವರ್ಷಗಳ ಪ್ರಾಚೀನ ಬುಡಕಟ್ಟು ನಂಬಿಕೆ-ಆಚರಣೆಗಳನ್ನೇ ಆಧುನಿಕ ಭಾರತದ ನವೀಕೃತ ಧರ್ಮಗಳು ಇಂದಿಗೂ ಹೊಂದಿವೆ. ಇವುಗಳ ಸತ್ಯಾಸತ್ಯತೆಗಳ ತಳ ಶೋಧಿಸಲು ನಾವು ಕೇವಲ ದೇಸೀಯ ಪುರಾಣಗಳ ಮೊರೆ ಹೋದರೆ ಸಾಲದು. ಇಲ್ಲಿ ಹೊರಗಿನ ವೈಜ್ಞಾನಿಕ ಸಂಶೋಧನಾ ಫಲಿತಗಳ ಮತ್ತು ಸಿದ್ಧಾಂತಗಳ ನೆರವು ಬೇಕೇ ಬೇಕು. ಹಾಗೆಯೇ ನಮ್ಮ ದೇಸೀಯ ನಂಬುಗೆ, ಆಚರಣೆ, ಪುರಾಣಗಳನ್ನು, ಗಿಡಮೂಲಿಕೆ ಔಷಧಗಳನ್ನೂ, ದೇಸೀಯ ವೈದ್ಯಕೀಯ ಪದ್ಧತಿಗಳನ್ನೂ, ಹೊರಗಿನ ವಿಜ್ಞಾನ ಶಾಸ್ತ್ರಗಳ ಜತೆಗೇ ನಮ್ಮದೇ ಆದ ದೇಸೀಯ ವಿಧಾನಗಳಿಂದಲೂ ವಿಶ್ಲೇಷಿಸಿಕೊಳ್ಳಬೇಕಾದ ಅವಶ್ಯಕತೆಯೂ ಇದೆ. ಕನ್ನಡ ನಾಡಿನ ಪಾರಂಪರಿಕ ಆಹಾರ ಪದ್ಧತಿಗಳು, ಯೋಗಪದ್ಧತಿ ಆರೋಗ್ಯಕ್ಕೆ ಅದೆಷ್ಟು ಪೂರಕವಾಗಿದ್ದವು ಅಥವಾ ಇಲ್ಲ ಎಂಬುನ್ನು ಪಾಶ್ಚಾತ್ಯ ವೈದ್ಯಕೀಯ ಸಂಶೋಧನೆಗಳ ನೆರವಿನಿಂದಲೂ ವಿಶ್ಲೇಷಿಸಬೇಕು. ಇಲ್ಲಿಯ ಪ್ರಾಚೀನ ಕಟ್ಟಡಗಳು ಶಿಲ್ಪ ಇತ್ಯಾದಿಗಳೆಲ್ಲಾ ಗಟ್ಟಿತನದಲ್ಲೂ ಬಾಳಿಕೆಯಲ್ಲೂ ಸೌಂದರ್ಯದಲ್ಲ್ಲೂ ಆಧುನಿಕ ಕಟ್ಟಡಗಳನ್ನೂ ಶಿಲ್ಪಗಳನ್ನೂ ಹೇಗೆ ಎಷ್ಟು ಮೀರಿ ನಿಲ್ಲಬಲ್ಲವೆಂಬುದನ್ನು ಇಂದಿನ ವೈಜ್ಞಾನಿಕ ಅಧ್ಯಯನಗಳ ಬೆಳಕಿನಲ್ಲಿ ಮನಗಾಣಬೇಕು. ‘ಕಂಗ್ಲೀಷ್ ಮಾರ್ಗ’ದಲ್ಲಿ ನಡೆದು ಅವಸಾನದತ್ತ ಸಾಗುತ್ತಿರುವ ಇಂದಿನ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಈ ಎಲ್ಲಾ ಪ್ರಯತ್ನಗಳು ಹೊಸ ಶಕ್ತಿಯನ್ನು ತಂದುಕೊಡಬಲ್ಲವು ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಕನ್ನಡದ ಭೀಮಬಲವೂ ಪ್ರದರ್ಶನವಾಗಬಲ್ಲದು. ಹೀಗೆ ಅನುಸಂಧಾನದ,  ಕೊಡು-ಕೊಳೆಯ ಈ ಸಹಕಾರದ ಮಾರ್ಗದಲ್ಲಿ ಕನ್ನಡ ಜನ ಕುಲ ತನ್ನ ಬೌದ್ಧಿಕ-ಭಾವನಾತ್ಮಕ ಸಾಂಸ್ಕೃತಿಕ ಶಕ್ತಿಯನ್ನು ಸಂವರ್ಧಿಸಿಕೊಳ್ಳಬೇಕಿದೆ.

ಕೊನೆಯದಾಗಿ,  ಕ್ರಿಕೆಟ್ ಆಟವೊಂದೇ ನೂರಾರು ಜನಪದೀಯ ಆಟಗಳನ್ನು ಕೊಂದು ಹಾಕಿದೆ. ‘ಆಂಟಿ’ ಎನ್ನುವ ಒಂದೇ ಒಂದು ಮಾತು ಅತ್ತೆ ಚಿಕ್ಕಮ್ಮ ದೊಡ್ಡಮ್ಮ ಮುಂತಾದ ಕನ್ನಡದ ಹತ್ತಾರು ಸಂಬಂಧಸೂಚಕ ಪದಗಳನ್ನು ಮೂಲೆಗುಂಪು ಮಾಡಿದೆ. ಪಾಶ್ಚಾತ್ಯರ ಪ್ಯಾಂಟ್ ಶರ್ಟ ಜೀನ್ಸ್ ಇತ್ಯಾದಿಗಳು ನಮ್ಮ ಕನ್ನಡ ಸಂಸ್ಕೃತಿಯ ವಿಶಿಷ್ಟತೆಯ ದ್ಯೋತಕವಾಗಿದ್ದ ಅನೇಕ ಉಡುಗೆಗಳನ್ನು ಕಣ್ಮರೆಯಾಗಿಸಿವೆ. ವೈಜ್ಞಾನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಅವಿಷ್ಕಾರಗೊಂಡ ಪ್ಲಾಷ್ಟಿಕ್ ಸಿಂಥೆಟಿಕ್ ಸಾಮಾಗ್ರಿಗಳ ಉತ್ಪಾದನೆಯಿಂದಾಗಿ ಕುಂಬಾರಿಕೆ ಕಮ್ಮಾರಿಕೆಯಂತಹ ದೇಸೀಯ ಕರಕುಶಲ ಕಲೋದ್ಯಮಗಳು ಆಗಲೇ ವಿನಾಶದ ಅಂಚಿನಲ್ಲಿವೆ. ಬದಲಾದ ಬದುಕಿನ ಸನ್ನಿವೇಶಗಳು ವೀರಗಾಸೆ, ಕೋಲಾಟ, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಹಲಗೆ ವಾದ್ಯ, ಸಮಾಳ, ಡಪ್ಪು, ತೊಗಲುಗೊಂಬೆಯಾಟ, ಬಯಲಾಟ, ಯಕ್ಷಗಾನ, ನಾಟಕ, ಹುಲಿವೇಷ, ಕರಡಿವೇಷ, ಮುಂತಾದ ನೂರಾರು ಜನಪದ ಕಲೆಗಳು ಕಣ್ಮರೆಯಾಗುವಂತೆ ಮಾಡಿವೆ. ಒಂದು ಕಾಲದಲ್ಲಿ ನಿತ್ಯಬದುಕಿನ ನೈಜ ಭಾಗವಾಗಿದ್ದ ಇವು ಇಂದು ಸಂದರ್ಭೋಚಿತ ಪ್ರದರ್ಶನಕ್ಕಷ್ಟೇ ಸೀಮಿತವಾಗಿವೆ. ಮದುವೆ ಮುಂಜಿ ಹುಟ್ಟು ಸಾವು ಮೈ ನೆರೆಯುವುದು ಮುಂತಾದ ಸಂದರ್ಭಗಳಲ್ಲಿ ಹಿಂದೆ ಬಹು ಗಟ್ಟಿಯಾಗಿ ಬೆಳೆದಿದ್ದ ಎಷ್ಟೋ ಆಚಾರ-ವಿಚಾರಗಳು ಇಂದು ಮೂಲೆಗುಂಪಾಗಿವೆ. ಬಿತ್ತುವ, ಕೊಯ್ಯುವ, ಗೂಡು ಹಾಕುವ, ಹೇರುವ, ಒಕ್ಕುವ, ರಾಸಿ ಮಾಡುವ ಮುಂತಾದ ಕೃಷಿ ಬದುಕಿನ ಭಾಗವಾಗಿದ್ದ ಆಚರಣೆಗಳು ಇಂದು ಬಹುತೇಕ ಮಾಯವಾಗಿವೆ. ಹೀಗೆ ಯೋಚಿಸುತ್ತಾ ಹೋದರೆ ಮೂಲ ಕನ್ನಡತನದ ಸಾಂಸ್ಕೃತಿಕ ಮಹತ್ವ ಸಾರುವ ನೂರಾರು ವಿಷಯಗಳು ಗಮನಕ್ಕೆ ಬರುತ್ತವೆ. ಇವೆಲ್ಲವೂ ಇಂದಿನ ಕನ್ನಡಿಗರ ಪ್ರಜ್ಞಾವಂತಿಕೆಯ ಅಂತರ್-ಪರಿಶೋಧನಾ ವಿಷಯಗಳೇ ಆಗಿವೆ. ಇವುಗಳನ್ನೆಲ್ಲಾ ಬಿಟ್ಟೇ ನಾವು ಹೊಸ ಕನ್ನಡತನ-ಕನ್ನಡ ಸಂಸ್ಕೃತಿ ಬೆಳೆಸಬಲ್ಲೆವು ಎಂಬ ವಿಚಾರವನ್ನು ನಾನು ಮಂಡಿಸಲಾರೆ. ಆದರೆ ಆಧುನಿಕ ಬದುಕಿನ ಸಂದರ್ಭದಲ್ಲಿಯೂ ಆ ಎಲ್ಲಾ ಮೂಲ ಕನ್ನಡಾಂಶಗಳನ್ನು ಹೇಗೆ ರಕ್ಷಿಸಿಕೊಂಡು ಹೋಗಬೇಕು? ಹೇಗೆ ಅವುಗಳ ಸಂವರ್ಧನೆಗೆ ತೊಡಗಬೇಕು ಎನ್ನುವತ್ತ ಆಲೋಚಿಸುವ ಪ್ರಯತ್ನ ನನ್ನದು. ಈ ನಿಟ್ಟಿನಲ್ಲಿ ಡಾ.ನಾಗರಾಜ್ ಅವರ ನಿಲುವಿನಿಂದ ಅಷ್ಟೇನೂ ದೂರ ಕ್ರಮಿಸಿಲ್ಲವೆಂದು ನಾನು ಭಾವಿಸಿದ್ದೇನೆ.