ನೆಲೆ ಕಾಣದ ಅಲೆಮಾರಿ ಜೀವನ..!

ಅಲೆಮಾರಿಗಳಿಗಿಲ್ಲ ಸ್ಥಿರ ಜೀವನ...! ತುತ್ತು ಅನ್ನಕ್ಕಾಗಿ ಹಗಲಿರುಳು ದುಡಿಯುವ ಶ್ರಮಿಕರು, ಮೂರು ಹೊತ್ತಿನ ತುತ್ತು ಅನ್ನಕ್ಕೂ ಇವರದು ಅಲೆದಾಟ.

ನೆಲೆ ಕಾಣದ ಅಲೆಮಾರಿ ಜೀವನ..!

ನಿಲ್ಲಲೂ ಒಂದು ಸೂಕ್ತ ಸ್ಥಳವಿಲ್ಲ. ಸ್ವಂತ ಗ್ರಾಮವಿಲ್ಲ. ಊರೂರು ಅಲೆದರೇ ಮಾತ್ರ ಚೋಟು ಹೊಟ್ಟಿಗಿಷ್ಟು ಹಿಟ್ಟು, ಗೇಣುದ್ದೂ ಬಟ್ಟೆಗಿಷ್ಟು ದುಡ್ಡು. ಒಂದೆಡೆ ಇಂದ ಇನ್ನೊಂದೆಡೆ ಸಾಗಲು ವಾಹನವೂ ಇಲ್ಲ. ಸಾಕು ಪ್ರಾಣಿಗಳಾದ ಕುದುರೇ ಕತ್ತೆಗಳೇ ಇವರಿಗೆ ಆಸರೆ...! ಇವರ ಕಣ್ಣಿರ ಕತೆಗೆ ಕೊನೆಯೆಂದು.

ಅಲೆಮಾರಿಗಳಿಗಿಲ್ಲ ಸ್ಥಿರ ಜೀವನ...! ತುತ್ತು ಅನ್ನಕ್ಕಾಗಿ ಹಗಲಿರುಳು ದುಡಿಯುವ ಶ್ರಮಿಕರು, ಮೂರು ಹೊತ್ತಿನ ತುತ್ತು ಅನ್ನಕ್ಕೂ ಇವರದು ಅಲೆದಾಟ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು.. ಎಲ್ಲೋ ಸಾಗೋ ದಾರಿ ದೀಪಗಳು...! ಎನ್ನುವ ಹಾಡಿನ ಪಾತ್ರಧಾರಿಗಳಿವರು. ಹುಟ್ಟಿದ್ದು ಎಲ್ಲಿಯೋ ಗೊತ್ತಿಲ್ಲ, ಇರುವುದು ಒಂದೆಡೆ, ಬೇಯಿಸಿ ತಿನ್ನುವುದು ಇನ್ನೊಂದೆಡೆ, ಮರಣ ಮೃದಂಗ ಕೇಳುವವರೆಗೂ ಅಲೆದಾಟವೇ ಇವರು ಪ್ರಮುಖ ಜೀವನ. ನಿರ್ಧಿಷ್ಠ ಊರು, ಹುಟ್ಟಿದ ಸ್ಥಳ, ಮನೆ, ಪಡಿತರ ಚೀಟಿ, ಆಧಾರ್, ಗುರುತಿನ ಚೀಟಿ ಇದ್ದರೂ ಸಹ ನೆಮ್ಮದಿ ಜೀವನ ಸಾಗಿಸಲು ಹೆಣಗಾಡುವ ಈ ಕಾಲದಲ್ಲಿ, ಯಾವುದೇ ರೀತಿಯ ಸೌಕರ್ಯ ಸೌಲಭ್ಯಗಳಿಂದ ವಂಚಿತ ಈ ಜನಾಂಗ ಕತ್ತಲಲ್ಲಿ ಕೈ ತೋಳೆಯುತ್ತಿರುವುದು ಮಾತ್ರ ವಿಪರ್ಯಾಸ. 

ನಮಗೆ ದುಡಿದುವುದಕ್ಕೆ ಒಂದು ಕೆಲಸವಿದೆ. ಅದಕ್ಕೆ ತಿಂಗಳ ಸಂಬಳವಿದೆ. ಆದ್ರೆ, ಈ ಜನಾಂಗಕ್ಕೆ ನಿರ್ದಿಷ್ಟ ಕಾಯಕವಿಲ್ಲ. ಯಾವ ಪ್ರದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಸಿಕ್ಕ ಸಿಕ್ಕ ಕೆಲಸ ಮಾಡಿ ಹೊಟ್ಟೆ ಹೊರೆದು ಬಟ್ಟೆ ಧರಿಸುತ್ತಾರೆ.

ಇದೊಂದು ಅಲೆಮಾರಿ ಜನಾಂಗ. ಗುರುತಿಸಿಕೊಳ್ಳುವುದಕ್ಕೆ ಸರ್ಕಾರ ಇವರಿಗೆ ಯಾವುದೇ ರೀತಿಯ ಗುರುತಿನ ಚೀಟಿ ಅಥವಾ ಆಧಾರ ನೀಡಿಲ್ಲ. ಇವರಿಗೆ ಸ್ವಂತ ಊರಿಲ್ಲ. ಆದ್ದರಿಂದ ಇವರೂ ಒಂದು ಊರಿಂದ ಇನ್ನೊಂದು ಊರಿಗೆ ಕೆಲಸ ಅರಸಿ ಹೋಗುತ್ತಲೇ ಇರುತ್ತಾರೆ.

ಒಂದು ಊರಲ್ಲಿ ಕೆಲ ದಿನಗಳು, ಇಲ್ಲವೇ ತಿಂಗಳುಗಳ ಕಾಲ ಊರ ಆಚೆಗಿರುವ ಈ ಜನಾಂಗ ದೇವಸ್ಥಾನದ ಹಿಂದೆ, ಬಯಲು ಜಾಗೆಯಲ್ಲಿ ಸಣ್ಣ - ಸಣ್ಣ ತಾಡಪತ್ರೆಯ ಸೆಡ್ಡು ಇಲ್ಲವೇ ಗುಡಿಸಲುಗಳನ್ನು ಹಾಕಿಕೊಂಡು ವಾಸವಿರುತ್ತಾರೆ.

ಈ ಜನಾಂಗದ ಪುರುಷರು ಗ್ರಾಮದ ಒಳಗೆ ಹೋಗಿ ಕೂಲಿ, ಇಲ್ಲವೇ ಕಟ್ಟಿಗೆ ಕಡಿಯುವ, ಬೆಳೆಗೆ ನೀರು ಬಿಡುವ ಕೆಲಸ ಸೇರಿದಂತೆ ಇತರ ಕಾರ್ಯ ಮಾಡುತ್ತಾರೆ. ಮಹಿಳೆಯರು ಮಕ್ಕಳನ್ನು ಕರೆದುಕೊಂಡು ಮನೆ-ಮನೆಗೆ ಹೋಗಿ ಭಿಕ್ಷೆ ಬೇಡಿಕೊಂಡು ಬರುವುದು ಇವರ ನಿತ್ಯದ ಬದುಕಾಗಿದೆ.

ಈ ಜನಾಂಗದಲ್ಲಿಯೇ ಇನ್ನೂ ಕೆಲವರು ಕಲ್ಲು ಕಟೆಯುವ ಕಸುಬನ್ನು ಮಾಡುತ್ತಿದ್ದು, ಕಲ್ಲಿನಲ್ಲಿ ಖಾರ ಕುಟ್ಟುವ, ರೊಟ್ಟಿ ಮಾಡುವ, ಬಿಸುವ ಪರಿಕರಗಳನ್ನು ಕಟೆದು, ಕೆತ್ತಿ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುತ್ತಾರೆ. ಒಂದು ಪರಿಕರಕ್ಕೆ 300 ಇಲ್ಲವೇ 500 ಎಂದು ದರ ನಿಗದಿ ಮಾಡಿ ಗ್ರಾಮಗಳಿಗೆ ಹೋಗಿ ಮಹಿಳೆಯರು ಮಾರಿಕೊಂಡು ಬರುತ್ತಾರೆ.

ಇದೇ ಜನಾಂಗದವರು ಕುರಿಗಳನ್ನು ಸಾಕುತ್ತಾರೆ. ಹೊಲ-ಗದ್ದೆಗಳಲ್ಲಿ ಬೆಳೆ ತೆಗೆದ ನಂತರ ಕುರಿಗಳನ್ನು ಅಲ್ಲಿ ಬಿಡುತ್ತಾರೆ. ಗದ್ದೆ ಮಾಲೀಕನಿಗೆ ಕುರಿಗಳ ಹಿಕ್ಕಿ ಹಿಂದ ಗೊಬ್ಬರ ಸಿಗುತ್ತದೆ. ಅಲೆಮಾರಿ ಜನಾಂಗಕ್ಕೆ ಇರಲು ಇಂದು ನೆಲೆಯೂ ಸಿಕ್ಕಿದಂತಾಗುತ್ತದೆ.

ಇನ್ನೂ ಕೆಲವರು ಕಂಬಾರಿಕೆ ಕಸುಬನ್ನು ಮಾಡುತ್ತಿದ್ದು, ರಸ್ತೆಯ ಇಕ್ಕೆಲುಗಳಲ್ಲಿ ಸಣ್ಣ ಸಣ್ಣ ಜೋಪಡಿಗಳನ್ನು ಹಾಕಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.  ಅಲ್ಲಿಯೇ ಇಂದು ತಿದಿ (ಬೆಂಕಿ ಹಚ್ಚಿಸುವ ಸಾಧನ)ಯನ್ನು ಮಾಡಿಕೊಂಡಿರುತ್ತಾರೆ.

ಈ ಜನಾಂಗ ಕುಟುಂಬ ಸಮೇತ ಒಂದೂರಿಂದ ಇನ್ನೋಂದುರಿಗೆ ಅಲೆದಾಡುತ್ತಿದ್ದು ಇದರ ಪರಿಣಾಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕನಸಿನ ಮಾತಾಗಿದೆ ಬದಲಾಗಿ ಅವರನ್ನು ಭಿಕ್ಷಾಟನೆಗೆ ಮತ್ತು ಗ್ರಾಮದ ಮನೆಗೆಲಸಕ್ಕೆ ಕಳುಹಿಸುತ್ತಾರೆ. ಅವರು ಕೊಡುವ ರೊಟ್ಟಿ, ಪಲ್ಯಗಳೇ ಈ ಮಕ್ಕಳಿಗೆ ಮೃಷ್ಟಾನ್ನ ಭೋಜನ.

ಕೆಲವೊಮ್ಮೆ ಗ್ರಾಮಗಳಲ್ಲಿ ಜಾತ್ರೆಗಳಿದ್ದರೆ, ವಿಶೇಷ ಕಾರ್ಯಕ್ರಮಗಳಿದ್ದರೇ ಅಲ್ಲಿಯೇ ಪಾತ್ರೆಗಳನ್ನು ತೊಳೆದು ಊಟ ಮಾಡಿ ಮಕ್ಕಳಿಗೆ ಸೆರಗಲ್ಲಿ, ಇಲ್ಲವೇ ಎಲೆಯಲ್ಲಿ ಊಟವನ್ನು ತಂದಿರುತ್ತಾರೆ. ಮಕ್ಕಳನ್ನು ಮುದ್ದು ಮಾಡಿ ಒಂದೊಂದು ತುತ್ತು ತಿನ್ನಿಸಿ, ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಭೂಮಿಯನ್ನೇ ಹಾಸಿಗೆ ಮಾಡಿ, ಆಕಾಶವನ್ನೆ ಹೋದಿಕೆ ಮಾಡಿಕೊಂಡು ಸೀರೆ ಸೆರಗಲ್ಲಿ ಮಕ್ಕಳನ್ನು ಮುಚ್ಚಿಕೊಂಡು ನೆಮ್ಮದಿಯ ನಿದ್ದೆಗೆ ಜಾರುತ್ತಾರೆ.
ಸ್ವಾಭಿಮಾನ ಎನ್ನುವುದು ಈ ಜನಾಂಗದವರ ವಿಶೇಷ ಗುಣ. ಬೇಡಿ ತಿಂದರೂ ಅದಕ್ಕೆ ಪ್ರತಿಫಲವಾಗಿ ಅವರ ಕಾರ್ಯ ಮಾಡಿಕೊಟ್ಟಿರುತ್ತಾರೆ. ಮಹಿಳೆಯರು ತಮ್ಮ ವಿಶೇಷ ದಿನಗಳಾದ ಮುಟ್ಟು, ಹೆರಿಗೆಯನ್ನು ಯಾವುದೇ ಆಸ್ಪತ್ರೆಯಲ್ಲಿ ಕಳೆಯದೆ ಅದೇ ಹರಕು ಮುರುಕು ಗುಡಿಸಲಲ್ಲಿಯೇ ಕಳೆಯುವುದು ಇವರ ದುರಂತ ಬದುಕಿನ ಕೈಗನ್ನಡಿ.

ಹೆರಿಗೆಯಾಗಿ ತಿಂಗಳೂಗಟ್ಟಲೇ ವಿಶ್ರಾಂತಿಯಲ್ಲಿರುವ ಇಂದಿನ ಮಹಿಳೆಯರಿಗೆ ಈ ಜನಾಂಗದ ಮಹಿಳೆಯರು ತತ್ವಿರುದ್ದ. ಹೆರಿಗೆಯಾದ ಕೇವಲ 15 ದಿನಗಳಲ್ಲಿ ನವ ಜಾತ ಶಿಶುವನ್ನು ಬಗಲಿಗೆ, ಇಲ್ಲವೇ ಬೆನ್ನಿಗೆ ಕಟ್ಟಿಕೊಂಡು ತಮ್ಮ ಕಾರ್ಯದಲ್ಲಿ ತೊಡಗುವರು. ಇನ್ನೂ ಕೆಲವು ಮಹಿಳೆಯರು ಕಸಬರಿಗೆ, ಕಲ್ಲಿನ ಪರಿಕರಗಳನ್ನು ಮಾರಲು ಹೋಗುತ್ತಾರೆ.

ಇದು ಅಲೆಮಾರಿ ಜನಾಂಗದ ಬದುಕಿನ ನೈಜ ಚಿತ್ರಣ. ಇವರ ದುಸ್ಥರ ಬದುಕಿಗೆ ಆಸರೆಯಾಗಬೇಕಿದ್ದ ಸರ್ಕಾರ ಕುಂಭ ಕರ್ಣ ನಿದ್ದೆಗೆ ಜಾರಿದೆ. ಇನ್ನಾದರೂ ಎಚ್ಚೆತ್ತುಕೊಂಡು  ತುತ್ತು ಅನ್ನಕ್ಕೂ ಪರಿತಪಿಸುವ ಇಂತಹ ಮುಗ್ದರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಾಗಲಿ ಎನ್ನುವುದೇ ನಮ್ಮ ಆಶಯ.