ನಿಜ ಸಮಾಜವಾದಿಯ ಆದರ್ಶ ಪತ್ನಿ  : ಸೋನಕ್ಕ ಹೋಗಿ ಬನ್ನಿ,  ನಮಸ್ಕಾರ

ಮುಖ್ಯಮಂತ್ರಿ ಹುದ್ದೆ ಮನೆ ಬಾಗಿಲಿಗೆ ಬಂದಿದ್ದರೂ ಅದನ್ನೊಪ್ಪದೆ, ಜನ ಸಾಮಾನ್ಯ ರಾಜಕಾರಣಿಯಾಗೇ ಉಳಿದುಹೋದ ಶಾಂತವೇರಿ ಗೋಪಾಲಗೌಡರನ್ನ ನಾಡು ಮರೆಯುವಂತಿಲ್ಲ.

ನಿಜ ಸಮಾಜವಾದಿಯ ಆದರ್ಶ ಪತ್ನಿ  : ಸೋನಕ್ಕ ಹೋಗಿ ಬನ್ನಿ,  ನಮಸ್ಕಾರ
ಗೋಪಾಲಗೌಡ ಶಾಂತವೇರಿ ಮತ್ತು ಸೋನಕ್ಕ

ಇನ್ನೆರಡು ತಿಂಗಳಲ್ಲಿ ಅಧಿಕಾರಕ್ಕೇರುವುದು ನಾವೇ ಎಂಬ ಮಾತುಗಳನ್ನ ದಶದಿಕ್ಕುಗಳಲ್ಲೂ ಮೊಳಗಿಸುವವರು, ನನಗಲ್ಲದಿದ್ದರೆ ಕುಟುಂಬದ ಯಾರಿಗಾದರೂ ಟಿಕೆಟ್ ಕೊಡಲೇಬೇಕೆಂಬ ಚೌಕಾಸಿ ರಾಜಕಾರಣ ಎಲ್ಲೆಡೆಯೂ ಪಸರಿಸಿದೆ.

ಇದೆಲ್ಲಕ್ಕು ಮೀರಿದ ಸಾತ್ವಿಕ ಸಿಟ್ಟಿನ ರಾಜಕಾರಣ ಮಾಡಿ, ಮುಖ್ಯಮಂತ್ರಿ ಹುದ್ದೆ ಮನೆ ಬಾಗಿಲಿಗೆ ಬಂದಿದ್ದರೂ ಅದನ್ನೊಪ್ಪದೆ, ಜನ ಸಾಮಾನ್ಯ ರಾಜಕಾರಣಿಯಾಗೇ ಉಳಿದುಹೋದ ಶಾಂತವೇರಿ ಗೋಪಾಲಗೌಡರನ್ನ ನಾಡು ಮರೆಯುವಂತಿಲ್ಲ.

1952,1962 ಮತ್ತು 1967 ರಲ್ಲಿ ಮೂರು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲಗೌಡರ ವೈಯಕ್ತಿಕ ಬದುಕು ತೆರೆದಿಟ್ಟ ಪುಸ್ತಕ ಹೇಗೋ, ಹೋರಾಟ ಸಾಮಾಜಿಕ ತುಡಿತಕ್ಕಾಗಿ  ಬಿಡಿಗಾಸಿಗೂ ಪರದಾಡುತ್ತಿದ್ದ ಇವರ ಹೆಸರು ನಿತ್ಯನೂತನವಾಗುವುದರಲ್ಲಿ ಪತ್ನಿ ಸೋನಕ್ಕ ಪಾತ್ರ ಮರೆಯುವಂತೆಯೇ ಇಲ್ಲ. 

ಅಜ್ಜನ ಕಾಲದಲ್ಲಿ ಉತ್ತಮವಾಗೇ ಇದ್ದ ಕುಟುಂಬವಾದರೂ, ಗೋಪಾಲಗೌಡರು ಜನಿಸುವ ವೇಳೆಗೆ ಉತ್ತಮ  ಸ್ಥಿತಿ ಇರಲಿಲ್ಲ. ಇದು ಇವರು ರಾಮಮನೋಹರ ಲೋಹಿಯಾರಂಥವರ ನೆಚ್ಚಿನ ಅನುಯಾಯಿಯಾಗಿ ಹೋರಾಟಗಳನ್ನ ಕಟ್ಟಿ, ಸರ್ಕಾರಕ್ಕೆ ಸಿಂಹಸ್ವಪ್ನ ಎನಿಸಿಕೊಂಡಾಗಲೂ ಇದ್ದ ವಾಸ್ತವ ಸ್ಥಿತಿ.  ಅಂಥವೆಲ್ಲ ನಾಜೂಕಿನ ಸ್ಥಿತಿಯನ್ನ ತನ್ನ ಸಂಬಳದಿಂದಲೇ ನಿಭಾಯಿಸುತ್ತಾ, ಮಕ್ಕಳಾದ  ರಾಮಮೋಹನ ಮತ್ತು ಇಳಾಳನ್ನ ಬೆಳೆಸಿದ್ದೆಲ್ಲ ಸರ್ಕಾರೀ ಉಪಾಧ್ಯಾಯಿನಿಯಾಗಿದ್ದ ಸೋನಕ್ಕ.

ಹುಬ್ಬಳ್ಳಿ-ಧಾರವಾಡದವರಾದ ಇವರು ಪತಿ ರಾಜಕಾರಣದಲ್ಲಿ ದೊಡ್ಡ ಹೆಸರಾದರೂ, ಒಂದಿನಿತೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲೂ ಇಲ್ಲ, ಮನೆ ಮಕ್ಕಳಿಗಾಗಿಯಾದರೂ ರಾಜಿಯಾಗಿ ಎಂದು ಪತಿಗೆ ಹೇಳಲೇ ಇಲ್ಲ. ಅವರು ಮಾಡಿದ್ದಕ್ಕೇ, ತೆಗೆದುಕೊಂಡ ನಿಲುವಿಗೇ ಜಯಕಾರವಾಕುತ್ತಾ, ಮಕ್ಕಳಿಬ್ಬರ ಲಾಲನೆಪಾಲನೆಯಲ್ಲಿಯೇ ಸಾರ್ಥಕತೆ ಪಡೆದ ಇವರು ಒಂದರ್ಥದಲ್ಲಿ ಐಹಿಕ ವಾಂಛೆಗಳನ್ನ ತ್ಯಾಗ ಮಾಡಿದ್ದರ ದ್ಯೋತಕವಾಗಿಯೇ ಶಾಂತವೇರಿ ಗೋಪಾಲಗೌಡರು ಸಾರ್ವಜನಿಕ ವ್ಯಕ್ತಿಯಾಗಿ ಬೆಳೆದು, ಚಿರಸ್ಮರಣೀಯರಾಗಿ ಉಳಿಯಲು ಕಾರಣವೆಂದರೂ ಅತಿಶಯವಲ್ಲ

ಶಾಸಕ-ಹೋರಾಟಗಾರ ಗೋಪಾಲಗೌಡರ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲೂ  ಅಡ್ಡಬರದೆ, ದೂರದಲ್ಲಿದ್ದುಕೊಂಡೇ  ಕುಟುಂಬ ನಿರ್ವಹಣೆ ಮಾಡಿದ ಹೆಗ್ಗಳಿಕೆ ಸೋನಕ್ಕ ಅವರದಾಗಿದೆ. ಶಾಸಕರಾಗಿದ್ದಾಗಲೂ ಬಾಡಿಗೆ ಮನೆ ಬದಲಾಯಿಸುತ್ತಾ, ಬಾಡಿಗೆ ಕಟ್ಟಲು ಕಷ್ಟಪಡುತ್ತಿದ್ದಂಥ ಸ್ಥಿತಿಯಲ್ಲೆಲ್ಲ ಕೊಂಕು ನುಡಿಯದೇ ಇದ್ದ ಇವರಿಂದಾಗಿಯೇ, ಗೋಪಾಲಗೌಡರು ಮನೆ ಮತ್ತು ಮಕ್ಕಳ ಬಗ್ಗೆ ಯೋಚಿಸುವಂತೆಯೇ ಇರಲಿಲ್ಲ. ತನ್ನ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು.

ಅಕ್ಷರಶಃ ಬರಿಗೈ ದಾಸ ಎಂದಾಗಿದ್ದ ಗೋಪಾಲಗೌಡರಿಗೆ ಒಂದಷ್ಟು ಹಿತೈಷಿಗಳು ಬಿಡಿಎ ಯಿಂದ ನಿವೇಶನ ಕೊಡಿಸುವ ಯತ್ನ ಮಾಡಿದರೂ, ಅದಕ್ಕೆ ಅವರು ಒಪ್ಪದಿದ್ದಾಗ ಸೋನಕ್ಕ ಹೆಸರಲ್ಲಿ ಅರ್ಜಿ ಕೊಡಿಸಿ ನಿವೇಶನ ಮಂಜೂರು ಮಾಡಲಾಗಿತ್ತು. ಅಲ್ಲೊಂದು ಮನೆ ಕಟ್ಟಲು ಸೋನಕ್ಕ ಮಾಡಿದ್ದ ಯತ್ನಗಳು, ಪಟ್ಟ ಕಷ್ಟಗಳು ಒಂದೆರಡಲ್ಲ. ಎಂಥದ್ದೆ ಕಷ್ಟಗಳೆದುರಾದರೂ ಪತಿಗೆ ಬೆನ್ನೆಲುಬಾಗಿ, ಅವರ ಆದರ್ಶಕ್ಕೆ ಎಳ್ಳಿನಷ್ಟೂ ದಕ್ಕೆಯಾಗದಂತೆ ಜತೆಜತೆಯಾಗಿಯೇ ಸಾಗಿದ ಇವರದು, ಗಂಭೀರ ಸ್ವರೂಪ. ಯಾವುದಕ್ಕೂ ಆಸೆ ಪಡದ ಜೀವಿಯಾಗಿಯೇ ಇದ್ದವರು.

ಪತಿಯ ಹೆಸರಲ್ಲೇ ಏನು ಬೇಕಾದರೂ ಮಾಡಿಕೊಳ್ಳಬಹುದಿತ್ತು, ಅಥವಾ ಅವರ ಉತ್ತರಾಧಿಕಾರಿಯಾಗಿ ರಾಜಕೀಯದ ಮಜಲನ್ನ ಸುಲಭವಾಗಿ ಏರಬಹುದಾಗಿದ್ದರೂ, ಟೀಚರಿಕೆಯಿಂದಾಚೆಗೆ ಕಾಲಿಡಲೂ ಇಲ್ಲ. ಗೋಪಾಲಗೌಡರ ಹೆಸರನ್ನೆಂದು ದುರ್ಬಳಕೆ ಮಾಡಿಕೊಳ್ಳಲೇ ಇಲ್ಲ. ಸಮಚಿತ್ತದಿಂದಲೇ ಬದುಕಿನ ಬವಣೆಗಳನ್ನೆಲ್ಲ ಉಂಡ ಸೋನಕ್ಕ ಮಾದರಿ ಮಹಿಳೆ ಎಂಬುದರಲ್ಲಿ ಎರಡನೇ ಮಾತಿಲ್ಲ.

ಸಮಾಜದ ನಾನಾ ಕ್ಷೇತ್ರಗಳ ಬಗ್ಗೆ ಬೆರಗುಗಣ್ಣು. ಒಳನೋಟಗಳನ್ನಿಟ್ಟುಕೊಂಡಿದ್ದ ಗೋಪಾಲಗೌಡರಿಗೆ, ಮೆಚ್ಚಿನ ಗೆಳತಿ, ಮಡದಿಯಾಗಿಯೂ ಇದ್ದರು. ರಾಜಕೀಯ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಪತ್ನಿಯೊಡನೆ ಪತ್ರ ಮುಖಾಂತರವೇ ಚರ್ಚಿಸುತ್ತಿದ್ದುದು ಉಂಟು. ಪತಿ ಬಗ್ಗೆ ಪತ್ನಿ ಸೋನಕ್ಕ ಎಷ್ಟು ಅಭಿಮಾನ ಹೊಂದಿದ್ದರು ಎಂಬುದಕ್ಕೆ, 28.3.64 ರಲ್ಲಿ ಧಾರವಾಡದಿಂದ ಸೋನಕ್ಕ ಬರೆದಿದ್ದ ಪತ್ರವೇ ಸಾಕ್ಷಿ.

ಆ ಪತ್ರದಲ್ಲಿ ಪೇಪರಿನಲ್ಲಿ ತಮ್ಮ ಬಗೆಗಿನ ಸುದ್ದಿಯನ್ನ ಓದಿದ ನಮ್ಮ್ ಫ್ರೆಂಡ್ ಸರ್ಕಲ ನನ್ನನ್ನ ಚುಡಾಯಿಸಿಬಿಟ್ಟರು ನಾನು ಮೊದಲ ದಿನವೇ ರೇಡಿಯೋದಲ್ಲಿ ಒಂದೇ ಮಾತಿನಲ್ಲಿ ಮುಗಿಸಿದ, ಸುದ್ದಿಯನ್ನ ಮರು ದಿನ ಪೇಪರಿನಲ್ಲಿ ಆ ಸುದ್ದಿಯನ್ನ ವಿವರವಾಗಿ ನೋಡುವುದಕ್ಕೇ ಅಪೇಕ್ಷಿಸಿ ಆತುರಳಾಗಿದ್ದೆ.

ಇದೀಗ ನಮ್ಮ ಧಾರವಾಡದ ಜನರಿಗೆ ನೀವು ಬಹು ಪರಿಚಿತರಾಗಿದ್ದೀರಿ, ಪ್ರೀತಿಗೆ ಪಾತ್ರರೂ ಆಗಿದ್ದೀರಿ.ಜನ ಪ್ರಗತಿ, ಗೋಕುಲ ಗಳಲ್ಲಿ ಫೋಟೋ, ಸತ್ಕಾರಗಳ ಬಗ್ಗೆ ನೋಡಿದೆ ಆ ದಿನ ಬೆಂಗಳೂರಲ್ಲಿ ತೆಗೆದ ಫೋಟೋಗಳ ಪ್ರತಿಗಳು ಬಂದಿದ್ದರೆ ಕಳಿಸಿ..

ಹೀಗೇ ಪತಿ ಗೋಪಾಲಗೌಡರ ಬಗ್ಗೆ ತಮಗಿದ್ದ ಅಭಿಮಾನವನ್ನ ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರವಾಗಿ  ಗೋಪಾಲಗೌಡರು, ಶಾಸಕರ ಭವನ ವಿಳಾಸ ಕೊಟ್ಟು 30.3.64 ರಲ್ಲಿ ಬರೆದ ಒಂದು ಪತ್ರವನ್ನ ಇಲ್ಲಿ ಯಥಾವತ್ತಾಗಿ ಉಲ್ಲೇಖಿಸುವುದಾದರೆ, ಅದರಲ್ಲಿ

ಪ್ರಿಯ ಸೋನು,

ನಿನ್ನ ಮೊದಲ ಪತ್ರ ಮುಟ್ಟಿತು. ಅಪಾರ ಆನಂದವಾಯಿತು. ನಾನು ಮೊದಲು ಬರೆಯಲಿ ಎಂದು ನೀನು, ನೀನು ಮೊದಲು ಬರೆಯಲಿ ಎಂದು ನಾನು(ಪಹಿಲೆ ಆಫ್!) ಈ ಆಟದಲ್ಲಿ ನೀನು ಸೋತೆ. ಮದುವೆಗೆ ಮುಂಚೆಯೇ ನಾನು ಬರೆಯಬೇಕೆಂದಿದ್ದೆ, ಏನೋ ಸಂಕೋಚದಿಂದ ಬರೆದಿರಲಿಲ್ಲ. ಈಗ ನಮ್ಮಿಬ್ಬರ ಮಧ್ಯೆ ಅಂತಹ ಯಾವ ಆತಂಕಕ್ಕೂ ಎಡೆಯಿಲ್ಲ.

.....ಹೀಗೆ ಪತ್ರದಲ್ಲಿ ತಮ್ಮ ರಾಜಕೀಯ, ಸೋನಕ್ಕ ಪರೀಕ್ಷೆಗೆ ಕೂರುವ ವಿಚಾರವನ್ನೆಲ್ಲಬರೆದು,  ಭಾಷೆ ಮೆಚ್ಚಿದೆ, ಅಕ್ಷರ ಮಾತ್ರ ಉತ್ತಮವಾಗಿರಬೇಕು. ಬಹುಶ: ಭಯದಿಂದ ಕೈ ನಡುಗುತ್ತಿದ್ದಿರಬೇಕು !  

ಟ್ರಂಕ್ ಕಾಲ್ ಮಾಡಿ ಪಕ್ಕದ ಮನೆಯವರಿಗೇಕೆ ಪದೇ ಪದೇ ತೊಂದರೆ ಕೊಡುವುದು ಎಂದು ಪತ್ರವನ್ನೇ ಬರೆಯುತ್ತಿದ್ದೇನೆ. ಅವಸರಲ್ಲಿಯೇ ಬರೆದೆ. `ನೀನು' ಎಂತಲೇ ಸಂಬೋಧಿಸಿದ್ದೇನೆ. ಸರಿಯಷ್ಟೆ. ಅತ್ತೆಮಾವಂದರಿಗೂ, ನೇಮಣ್ಣ ಮತ್ತು ಅಅವರ ಪತ್ನಿಯವರಿಗೂ ಮತ್ತು ನಿನ್ನ ತಂಗಿಯರಿಗೂ ನಿನ್ನ ಸಹೋದ್ಯೋಗಿ ಮಿತ್ರರಿಗೂ ನನ್ನ ನಮಸ್ಕಾರ ತಿಳಿಸು. ಗೆಳೆಯ ಪೂಜಾರರ ಮತ್ತು ಡಾ. ಪಾಲ್ ಇವರ ಮನೆಗಳಿಗೆ ಹೋಗಿ ಬಾ ಎಂದು ನಿನ್ನ ಸಹಿ/ಗೋಪಾಲಗೌಡ ಶಾಂತವೇರಿ ಎಂದು ಬರೆದಿರುವುದು ಗೋಪಾಲಗೌಡ ಮತ್ತು ಸೋನಕ್ಕ ನಡುವಣ ಆಪ್ತತೆಯನ್ನ ತಿಳಿಸಬಲ್ಲದು.ಅಷ್ಟು ಮಾತ್ರವಲ್ಲ ಪ್ರತಿಯೊಂದರಲ್ಲೂ ಸೋನಕ್ಕ  ಪತಿಗೆ ಬೆನ್ನೆಲುಬಾಗಿ, ಪ್ರೋತ್ಸಾಕರಾಗಿದ್ದರು ಎಂಬುದರ ಪ್ರತೀಕವೂ ಆಗಿವೆ. ರಾಜಕೀಯ ಇತಿಹಾಸ ಪುರುಷನ ಏಳಿಗೆಯಲ್ಲಿ ತನ್ನ ಪ್ರಮುಖ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿ, ಸದ್ದಿಲ್ಲದೆ ಕಾಯಂ ನೇಪಥ್ಯಕ್ಕೆ ಸೋನಕ್ಕ ಸರಿದುಬಿಟ್ಟಿದ್ದಾರೆ. ಅವರಿಗೊಂದು ಅಂತಿಮ ನಮನ.