'ಲಂಕೇಶ್ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನು ಚಾಚೂತಪ್ಪದೆ ಅನುಸರಿಸಿದ ಕೃತಿ’

ಮೋಹನ್ ರಾಂ ಅವರ ‘ದ ಕ್ಯಾಪಿಟಲ್’ ಕೃತಿಯಲ್ಲಿ ಚಿತ್ರಿತವಾಗಿರುವ ಲಂಕೇಶ್ ಹಾಗೂ ಗೌರಿ ಲಂಕೇಶ್ ಚಾರಿತ್ರ್ಯಗಳನ್ನು ಗಮನಿಸಿದರೆ ಗ್ರೀಕ್ ಪುರಾಣದ(ದೊರೆ ಈಡಿಪಸ್ ಮತ್ತು ಆಂತಿಗೊನೆ) ಆ ಎರಡು ದುರಂತ ಪಾತ್ರಗಳೇ ನಮ್ಮ ಕಾಲದಲ್ಲಿ ಪುನರಭಿನಯಗೊಂಡಿವೆ ಎಂಬಂತೆ ಭಾಸವಾಗುತ್ತದೆ.

'ಲಂಕೇಶ್ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನು ಚಾಚೂತಪ್ಪದೆ ಅನುಸರಿಸಿದ ಕೃತಿ’

ಕೃತಿಯ ಹೆಸರು: ದ ಕ್ಯಾಪಿಟಲ್ ಲಂಕೇಶ್ ಪ್ರೈವೆಟ್ ಲಿಮಿಟೆಡ್
ಲೇಖಕರು: ಎನ್.ಕೆ. ಮೋಹನ್ ರಾಂ
ಪ್ರಕಾಶಕರು: ಐಬಿಎಚ್ ಪ್ರಕಾಶನ, 77, 2ನೇ ಮುಖ್ಯರಸ್ತೆ,
ರಾಮರಾವ್ ಲೇಔಟ್, ಬನಶಂಖರಿ 3ನೇ ಸ್ಟೇಜ್, ಬೆಂಗಳೂರು
ಪ್ರಕಟಣಾ ವರ್ಷ: 2018
ಪುಟ ಸಂಖ್ಯೆ: 246 + x
ಬೆಲೆ: ರೂ. 220/- 

ಎನ್. ಕೆ. ಮೋಹನ್ ರಾಂ ತಮ್ಮ ‘ದ ಕ್ಯಾಪಿಟಲ್ ಲಂಕೇಶ್ ಪ್ರೈವೆಟ್ ಲಿಮಿಟೆಡ್’ ಕೃತಿಯಲ್ಲಿ ಲಂಕೇಶರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಇದು ಲಂಕೇಶ್ ಅಲ್ಲದ ವ್ಯಕ್ತಿಯೊಬ್ಬ ಬರೆದ ಲಂಕೇಶರದ್ದೇ ಆದ ಆತ್ಮಚರಿತ್ರೆಯಾಗಿದೆ ಎಂದು ಮುನ್ನುಡಿಯಲ್ಲಿ ಹೇಳುತ್ತಾರೆ “ನಾನುಗಳಿಂದ ತುಂಬಿರುವ ಬಹುತೇಕ ಆತ್ಮ ಚರಿತ್ರೆಗಳಲ್ಲಿ ಕಾಣೆಯಾಗುವುದು ಆತ್ಮ ಮತ್ತು ಚರಿತ್ರೆ. ಬೇಕಾಗಿರುವುದು ನಾನಿಲ್ಲದ ಆತ್ಮ ಚರಿತ್ರೆಗಳು. ಇದು ಲಂಕೇಶರ ನಾನಿಲ್ಲದ ಆತ್ಮ ಚರಿತ್ರೆ ಎಂದು ಓದಿಕೊಳ್ಳಬೇಕಾಗಿದೆ” ಎಂದು ಓದುಗರಿಗೆ ಸೂಚಿಸುತ್ತಾರೆ (ದ ಕ್ಯಾಪಿಟಲ್, ಮುನ್ನುಡಿ).

ಲಂಕೇಶ್ ತೀರಿಕೊಂಡ ಮೇಲೆ ಎನ್.ಎಸ್. ಶಂಕರ್, ನಟರಾಜ್ ಹುಳಿಯಾರ್, ಇಂದಿರಾ ಲಂಕೇಶ್ ಮುಂತಾದವರು ಬರೆದ ಸ್ಮೃತಿಚಿತ್ರಗಳು ಮತ್ತು ಅವರು ಬದುಕಿದ್ದಾಗ ಮತ್ತು ಅನಂತರ ಅಭಿನಂದನಾ ಗ್ರಂಥದ ರೂಪದ ಹಲವು ಕೃತಿಗಳು (ತಲೆಮಾರಿನ ತಳಮಳ, ಬೋದಿಲೇರನ ಸಖ, ಮುಂತಾದವು) ಪ್ರಕಟವಾಗಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಕೃತಿ ‘ದ ಕ್ಯಾಪಿಟಲ್’.

ಮೋಹನ್ ರಾಂ 1970ರಿಂದ 1983ರವರೆಗೆ, ಅಂದರೆ ಲಂಕೇಶ್ ಉಪನ್ಯಾಸಕರಾಗಿದ್ದ ಕಾಲದಿಂದ ಹಿಡಿದು ಲಂಕೇಶ್ ಪತ್ರಿಕೆ ಪ್ರಾರಂಭವಾದ ಮೂರು ವರ್ಷಗಳವರೆಗೆ, ಲಂಕೇಶರ ಒಡನಾಟದಲ್ಲಿದ್ದರು. ಈ ಅವಧಿಯಲ್ಲಿ ತಾವು ಕಂಡ ಲಂಕೇಶರ ಹಲವು ಮುಖಗಳನ್ನು, ಮಹತ್ವಾಕಾಂಕ್ಷೆಗಳನ್ನು, ಒಲವು-ತೆವಲುಗಳನ್ನು, ಜಗಳ-ರಗಳೆಗಳನ್ನು, ಲಂಕೇಶ್ ಪ್ರಮಾಣಿಸಲು ಹವಣಿಸುತ್ತಿದ್ದ ಹಲವು ಸುಳ್ಳುಗಳನ್ನು ದಾಖಲಿಸಲು ಪ್ರಯತ್ನಿಸಿದ್ದಾರೆ.

ಮೇಲ್ನೋಟಕ್ಕೆ ಅವರು ಲಂಕೇಶರ ಕಟುವಿಮರ್ಶಕರಂತೆ ಕಾಣಿಸಿದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಅವರು ಲಂಕೇಶರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಈ ಕೃತಿಯಲ್ಲಿ ಚಾಚೂ ತಪ್ಪದೆ ಅನುಸರಿಸಿರುವುದು ಕಂಡು ಬರುತ್ತದೆ. ಲಂಕೇಶ್ ಪ್ರತಿಯೊಂದನ್ನೂ ತಮ್ಮ ಮೂಗಿನ ನೇರಕ್ಕೆ ತೆಗೆದುಕೊಳ್ಳುತ್ತಿದ್ದರು, ತಾವು ಕಲ್ಪಿಸಿಕೊಂಡ ಯಾವುದೋ ನೈತಿಕ ಮಾನದಂಡದೊಂದಿಗೆ ಅನ್ಯರ ಬಗ್ಗೆ ತೀರ್ಮಾನಕ್ಕೆ ಬರುತ್ತಿದ್ದರು, ಯಾವುದೇ ಸನ್ನಿವೇಶವನ್ನು ವಸ್ತುನಿಷ್ಠವಾಗಿ ನೋಡದೆ ಪ್ರತಿಯೊಂದನ್ನೂ ವೈಯಕ್ತಿಕ ನೆಲೆಗೆ ತಂದು ಚಾರಿತ್ರ ಹರಣ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಗುರುವಿನ (ಅವರೇ ಹೇಳುವಂತೆ ಅವರ ಮೇಷ್ಟರ) ಈ ಎಲ್ಲ ಪ್ರವೃತ್ತಿಗಳಿಂದ ಶಿಷ್ಯನೂ ಪ್ರಭಾವಿತನಾಗಿರುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಮೋಹನ್ ರಾಂ ಅವರ ದ ಕ್ಯಾಪಿಟಲ್, ಸಾಹಿತ್ಯ ಪ್ರಕಾರವಾಗಿ ಒಂದು ಅಭಿನಂದನೆಯ ಗ್ರಂಥವಲ್ಲ; ಬದಲಾಗಿ ಒಂದು ಅವಹೇಳನೆಯ ಗ್ರಂಥವಾಗಿದೆ. ಲಂಕೇಶ್ ಏನಾದರೂ ತಮ್ಮ ಸಮಕಾಲೀನನಾದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಬರೆದಿದ್ದರೆ ಅವರೂ ಸಹ ಈ ಶೈಲಿಯಲ್ಲೇ ಬರೆಯುತ್ತಿದ್ದರು ಎನಿಸುತ್ತದೆ. ಆದರೆ ಕೇವಲ ಸ್ತುತಿ ಅಥವಾ ಕೇವಲ ನಿಂದನೆ ವ್ಯಕ್ತಿಯನ್ನು ಅಪೂರ್ಣವಾಗಿ ಪರಿಚಯಿಸುವ ಕಾರಣ ಅಭಿನಂದನೆ ಮತ್ತು ಅವಹೇಳನೆಗಳ ನಡುವೆ ಮೂಲಭೂತವಾಗಿ ಅಂಥ ವ್ಯತ್ಯಾಸವೇನೂ ಇರುವುದಿಲ್ಲ.

ಹೊಸದಾಗಿ ಟ್ಯಾಬ್ಲಾಯ್ಡ್ ಪತ್ರಿಕೆ ಪ್ರಾರಂಭಿಸಿದ ಒಬ್ಬ ಪತ್ರಕರ್ತ ತನ್ನ ಪತ್ರಿಕೆಗೆ ಬೇಡಿಕೆ ಹೆಚ್ಚುತ್ತಿದ್ದು ಪ್ರತಿವಾರ ಹೆಚ್ಚುಹೆಚ್ಚು ಹಣ ಸಂಪಾದನೆಯಾಗುತ್ತಿದೆ ಎಂದು ಹಿಗ್ಗಿದರೆ ಅದನ್ನೊಂದು ನೈತಿಕ ಪ್ರಶ್ನೆಯನ್ನಾಗಿಸಿ ಅವನನ್ನು ತೆಗಳಲೂ ಸಾಧ್ಯವಿದೆ. ಹಾಗಲ್ಲದೆ ಅದನ್ನೊಂದು ವ್ಯಾವಹಾರಿಕ ಪ್ರಶ್ನೆಯನ್ನಾಗಿಸಿ ಅವನ ಪ್ರತಿಭೆ, ವ್ಯಾವಹಾರಿಕ ಬುದ್ಧಿಗಳನ್ನು ಹೊಗಳಲೂ ಸಾಧ್ಯವಿದೆ. ಸದರಿ ಕೃತಿ ತನ್ನ ನೈತಿಕ ನಿಕಷದಲ್ಲಿ ಪ್ರತಿ ಹಂತದಲ್ಲೂ ಲಂಕೇಶರನ್ನು ಪರೀಕ್ಷಿಸುತ್ತ ಅವರ ಸುತ್ತಲಿನ ಪ್ರಭಾವಳಿಯನ್ನು ನಿರಸನಗೊಳಿಸುವ ಉದ್ದೇಶದ್ದಾಗಿದೆ. ಹಾಗಲ್ಲದೆ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲೆಂದು ಲಂಕೇಶ್ ಪಟ್ಟ ಪಾಡು, ಮಾಡಿದ ಸಾಹಸ ಮತ್ತು ತೋರಿಸಿದ ಚಾಣಾಕ್ಷತನವನ್ನು ವಿವರವಾಗಿ ನಿರೂಪಿಸುವ ಈ ಕೃತಿಗೆ ಅವರು ಮೇಲಿನ ತರಹದ ಶೀರ್ಷಿಕೆ ಇಡುತ್ತಿರಲಿಲ್ಲ.

ಲಂಕೇಶರ ಖಾಸಗಿ ಸ್ವತ್ತಾಗಿದ್ದ, ಅವರು ತೀರಿಕೊಂಡ ಮೇಲೆ ಅವರ ಸಂತಾನದ ಸ್ವತ್ತಾಗಿರುವ ಲಂಕೇಶ್ ಪತ್ರಿಕೆಯಂತಹ ಒಂದು ಪತ್ರಿಕೆಯನ್ನು ಇಂದಿನ ಎಡಪಂಥೀಯ ಯುವ ಬರಹಗಾರರು ‘ಒಂದು ವಿಶ್ವವಿದ್ಯಾಲಯ' ಎಂದು ಕರೆವುದು ಒಂದು ಅತಿರೇಕವಾದರೆ ಅದಕ್ಕೆ 'ಪ್ರೈವೆಟ್ ಲಿಮಿಟೆಡ್' ಎಂಬ ಅಭಿಧಾನ ನೀಡುವುದು ಮತ್ತೊಂದು ಅತಿರೇಕವಾಗಿದೆ. ಸತ್ಯವೆಂಬುದು ಎಲ್ಲೋ ಇವೆರಡರ ಮಧ್ಯದಲ್ಲಿ ಇರಬೇಕು ಎನಿಸುತ್ತದೆ. ಲಂಕೇಶರನ್ನು ಹಾಡಿ ಹೊಗಳುವ ಕೆಲವು ಬೆರಳೆಣಿಕೆಯಷ್ಟು ಮಂದಿಗೆ ಪ್ರತಿಕ್ರಿಯಿಸಲೆಂದೇ ಮತ್ತು ಅವರನ್ನು ಪ್ರಚೋದಿಸಲೆಂದೇ ಮೋಹನ್ ರಾಂ ಈ ಕೃತಿಯನ್ನು ಬರೆದಂತಿದೆ. ಬೆರಳೆಣಿಕೆಯಷ್ಟು ಮಂದಿಯನ್ನು ಗಮನದಲ್ಲಿ ಇರಿಸಿಕೊಂಡು ರಚನೆಯಾಗುವ ಕೃತಿಗಳು ಕಾಲಾಂತರದಲ್ಲಿ ತಮ್ಮ ಸಾಂಸ್ಕೃತಿಕ ಮಹತ್ವ ಕಳೆದುಕೊಂಡು ಬಿಡುತ್ತವೆ. 

ಒಂದು ಸಂಸ್ಕೃತಿಯ ವಿಕಾಸ ಕ್ರಮದಲ್ಲಿ ವ್ಯಕ್ತಿಯ ಪ್ರಕೃತಿ ಸ್ವಭಾವಕ್ಕಿಂತ ಅವನ ಪ್ರತಿಭೆ ಮತ್ತು ಕೊಡುಗೆಗಳು ಮುಖ್ಯವಾಗುತ್ತವೆ. ಟಿ.ಎಸ್. ವೆಂಕಣ್ಣಯ್ಯನವರನ್ನು ಹಾಡಿ ಹೊಗಳುವ ಹಲವು ಅಭಿನಂದನಾ ಗ್ರಂಥಗಳಿರಬಹುದು, ಸಾಕ್ಷಾತ್ ಕುವೆಂಪುವೇ ತಮ್ಮ ಕನಸಿನ ಕೃತಿಯನ್ನು ಅವರಿಗೆ ಸಮರ್ಪಿಸಿರಬಹುದು. ಆದರೆ ಇಂದು ನಾವು ವೆಂಕಣ್ಣಯ್ಯನವರನ್ನು ನೆನೆವುದು ಅವರ ‘ಪ್ರಾಚೀನ ಸಾಹಿತ್ಯ’ದಿಂದಾಗಿ, ಬಸವರಾಜ ದೇವರ ರಗಳೆ, ನಾಗವರ್ಮನ ಕಾದಂಬರೀ ಮುಂತಾದ ಹಳಗನ್ನಡ ಕಾವ್ಯಗಳ ಸಂಪಾದನೆಯ ಕಾರಣದಿಂದಾಗಿ. ಇದನ್ನು ಮನಗಂಡೇ ನವೋದಯ ಕಾಲದ ವಿದ್ವಾಂಸರು ಅಭಿನಂದನಾ ಗ್ರಂಥದ ನೆವದಲ್ಲಿ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನಾ ಪ್ರಬಂಧಗಳು ಪ್ರಕಟಣೆಯಾಗಲಿ ಎಂದು ಆಶಿಸಿದ್ದು. ಶ್ರೀಕಂಠ ತೀರ್ಥ (ತೀನಂಶ್ರೀ ಅಭಿನಂದನಾ ಗ್ರಂಥ), ಮಣಿಹ (ಹಳಕಟ್ಟಿಯವರ ಅಭಿನಂದನಾ ಗ್ರಂಥ)ದಂತಹ ಕೃತಿಗಳನ್ನು ಸಾಹಿತ್ಯದ ವಿದ್ಯಾರ್ಥಿಗಳು ಈಗಲೂ ಶ್ರದ್ಧೆಯಿಂದ ಅಧ್ಯಯನ ಮಾಡುವುದನ್ನು ಮತ್ತು ಮುಖಸ್ತುತಿಯ ಅಭಿನಂದನಾ ಗ್ರಂಥಗಳ ಮೇಲೆ ಸದಾ ಒಂದಿಂಚು ಧೂಳು ಕೂತಿರುವುದನ್ನು ನಾವು ಕಾಣಬಹುದಾಗಿದೆ. ಇನ್ನು ತನ್ನ ಅಭಿನಂದನಾ ಗ್ರಂಥವನ್ನು ಪ್ರಕಟಿಸಲು ತಾನೇ ತರಾತುರಿಯಿಂದ ಓಡಾಡುವ ಲೇಖಕರೂ ನಮ್ಮಲ್ಲುಂಟು. ತಮ್ಮ ಸಭ್ಯತೆ ಕಾಪಾಡಿಕೊಳ್ಳಬೇಕೆಂದು ಬಯಸುವವರು ಅಂತಹವರ ಬಗ್ಗೆ ಚರ್ಚಿಸದಿರುವುದೇ ಕ್ಷೇಮ.

ಕನ್ನಡ ಗದ್ಯ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿಸಿರುವ ಮತ್ತು ಜಾಣ ಜಾಣೆಯರಾದ ನೂರಾರು ಲೇಖಕರನ್ನು, ಪತ್ರಕರ್ತರನ್ನು ಬೆಳೆಸಿ ಪ್ರಭಾವಿಸಿರುವ, ಈಗಲೂ ಪ್ರಭಾವಿಸುತ್ತಿರುವ ಲಂಕೇಶ್ ನಮ್ಮ ಕಾಲದ ಅಗಾಧ ದೈತ್ಯ ಪ್ರತಿಭೆ ಎನ್ನುವುದು ನಿರ್ವಿವಾದ. ಇಷ್ಟಾಗಿಯೂ ಲಂಕೇಶ್ ಟೀಕೆ-ಟಿಪ್ಪಣಿಗಳಲ್ಲಿ ತಮ್ಮನ್ನು ತಾವು ‘ಹುಲುಮಾನವ’ ಎಂದೇ ಶಿಷ್ಟಾಚಾರಕ್ಕಾದರೂ ಕರೆದುಕೊಳ್ಳುತ್ತಿದ್ದರು. ಅಂದ ಮೇಲೆ ಹಲವು ಸನ್ನಿವೇಶಗಳನ್ನು ಉದಾಹರಿಸಿ ಅವರು ಕೇವಲ ಹುಲುಮಾನವರಾಗಿದ್ದರು ಎಂದು ವಾದಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಲಂಕೇಶ್ ಬಗ್ಗೆ ಇಲ್ಲದ ಭ್ರಮೆ ಕಟ್ಟಿಕೊಂಡು ಅಮಲಿನಲ್ಲಿ ತೇಲುತ್ತಿರುವ ಕೆಲವರಿಗೆ ಮೋಹನ್ ರಾಂ ಅವರ ‘ದ ಕ್ಯಾಪಿಟಲ್’ ಒಂದು ‘ಆಂಟಿಡಾಟ್’ (ವಿಷಪರಿಹಾರಕ) ಆಗಬಹುದೇನೋ. ಲಂಕೇಶರ ಬಗ್ಗೆ ಯಾವುದೇ ರಾಗ ದ್ವೇಷವಿಲ್ಲದ ಸಾಹಿತ್ಯದ ಓದುಗರಿಗೆ ಈ ಬಗೆಯ ವಿಷಪರಿಹಾರಕ ನಿರಾಶೆಯನ್ನೇ ಉಂಟು ಮಾಡುತ್ತದೆ. ಲಂಕೇಶರನ್ನು ಕೆಲವು ಓದುಗ ಭಕ್ತರು ಆರಾಧಿಸಬಹುದು, ಕೆಲವು ಭಕ್ತಿಹೀನ ಓದುಗರು ದ್ವೇಷಿಸಬಹುದು. ಆದರೆ ಎಲ್ಲ ಕಾಲದಲ್ಲೂ ರಾಗ ದ್ವೇಷಗಳಿಂದ ನಿರ್ಲಿಪ್ತವಾದ ಮತ್ತು ಸಂವೇದನಾಶೀಲವಾದ ಒಂದು ಓದುಗ ವರ್ಗ ಇದ್ದೇ ಇರುತ್ತದೆ. ಅಂತಹ ಪ್ರಜ್ಞಾವಂತ ಓದುಗರನ್ನು ಲೆಕ್ಕಿಸದೆ ಹೋದಾಗ ಕವಿಯ ವೈಯಕ್ತಿಕ ದೌರ್ಬಲ್ಯಗಳನ್ನು ವಿವರಿಸುವ ಸಾಂಸ್ಕೃತಿಕ ಮಹತ್ವದ್ದಲ್ಲದ ವ್ಯಕ್ತಿನಿಷ್ಠವಾದ ಪುಸ್ತಕಗಳು ಹುಟ್ಟಿಕೊಳ್ಳುತ್ತವೆ. 

ಪಂಪ, ರನ್ನ ಮುಂತಾದ ಪ್ರಾಚೀನ ಕವಿಗಳು ತಮ್ಮ ಆಶ್ರಯದಾತರಿಗೆ ತೋರಿಸುತ್ತಿದ್ದ ಭಟ್ಟಂಗಿತನ, ಹರಿಹರ, ಕುಮಾರವ್ಯಾಸ ಮುಂತಾದ ಮಧ್ಯಕಾಲೀನ ಕವಿಗಳ ಜಾತೀಯತೆ ಮತ್ತು ಕೋಮುಭಾವನೆ, ಸಂಸ, ಕೈಲಾಸಂ, ಕಿರಂರಂತಹ ಹೊಸಕಾಲದ ಸಾಹಿತಿಗಳ ಅತಿರೇಕಗಳು, ಗೋಕಾಕ್, ಅನಂತಮೂರ್ತಿಯಂತಹ ಲೇಖಕರ ರಾಜಕೀಯ ಮಹತ್ವಾಕಾಂಕ್ಷೆ, ಬೇಂದ್ರೆಯ ಜಗಳಗಂಟತನ,.. ಹೀಗೆ ನಮ್ಮ ಕವಿಗಳ ಅವಗುಣಗಳನ್ನು ಕುರಿತು ಪುಟಗಟ್ಟಲೆ, ಸಂಪುಟಗಟ್ಟಲೆ ಬರೆಯಬಹುದು. ಆದರೆ ಇವಾವುವೂ ಸಂಸ್ಕೃತಿಯ ಸಮಗ್ರ ಸ್ವರೂಪವನ್ನು ಕಟ್ಟಬಲ್ಲ ಮೂಲಧಾತುಗಳಲ್ಲ. ಅಂತಿಮವಾಗಿ ಉಳಿಯುವುದು ಸಂಸ್ಕೃತಿಗೆ ಅವರಿಂದ ಸಂದ ಕೊಡುಗೆಗಳು ಮಾತ್ರ. 

ಕವಿಗಳ ಗುಣಗಳ ಜೊತೆಗೆ ಅವಗುಣಗಳನ್ನೂ ಪರಿಗಣಿಸಿ ಅವಲೋಕಿಸಿದಾಗ ಅವರ ಕೊಡುಗೆಗಳೇನು ಎಂಬುದನ್ನು ಸಮಗ್ರವಾಗಿ ತಿಳಿಯಬಹುದಾಗಿದೆ. ಆಗ ಗುಣಾವಗುಣಗಳು ಪರಸ್ಪರ ವೈರುದ್ಧ್ಯಕರ ಅಂಶಗಳಲ್ಲ, ಗುಣಗಳಷ್ಟೇ ಅವಗುಣಗಳಿಂದಲೂ ಸಂಸ್ಕೃತಿಗೆ ಕಾಯಕಲ್ಪವಾಗಿದೆ ಎಂದು ತಿಳಿಯುತ್ತದೆ. ಲಂಕೇಶರಂತಹ ಕವಿಗಳಲ್ಲಿ ಹತಾಶೆ, ಮಾತ್ಸರ್ಯ, ಲಾಭಕೋರತನ, ಕೃತಘ್ನತೆಗಳಂತಹ ‘ಅವಗುಣ’ಗಳು ಇರದೆ ಹೋಗಿದ್ದರೆ ಸುತ್ತಲಿನ ಪ್ರಪಂಚಕ್ಕೆ ಅಷ್ಟು ತೀವ್ರವಾಗಿ ಸ್ಪಂದಿಸಿ ಬರೆಯಲು ಪ್ರಾಯಶಃ ಅವರಿಗೆ ಸಾಧ್ಯವಾಗುತ್ತಿರಲಿಲ್ಲವೇನೋ! ಕವಿಸಹಜವಾದ ಈ ಅವಗುಣಗಳ ಕುರಿತೇ ಫ್ರೆಡರಿಕ್ ನೀಷೆ “ರೋಗವೆಂಬುದಿಲ್ಲದೆ ಇದನ್ನೆಲ್ಲ ನಮ್ಮಿಂದ ಮಾಡಲಾದೀತೇ? ಮಹತ್ವದ ವೇದನೆಗಳೇ ಮಹತ್ವದ ಬಿಡುಗಡೆಯನ್ನು ನೀಡುವುದು” ಎಂದಿದ್ದು. 

ಮೋಹನ ರಾಂ ಗಮನಿಸಿದಂತೆ ಲಂಕೇಶರಲ್ಲಿ ಸೋಗಲಾಡಿತನ ಮತ್ತು ವಿರೋಧಾಭಾಸಗಳು ಇಲ್ಲದಿರಲಿಲ್ಲ. ಉದಾಹರಣೆಗೆ, ಬರಹಗಾರನಾದವನು ಪ್ರಭುತ್ವದ ಮನ್ನಣೆಯಿಂದ ಸದಾ ದೂರವಿರಬೇಕೆಂಬ ತಮ್ಮ ಸಮಾಜವಾದೀ ನಿಲುವಿಗೆ ವ್ಯತಿರಿಕ್ತವಾಗಿ ಅವರು ಪ್ರಶಸ್ತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವುದು, ತಮ್ಮ ಸಿನಿಮಾಗಳಿಗೆ ಅನುದಾನ ಸಬ್ಸಿಡಿಗಳನ್ನು ಪಡೆಯಲು ಮಂತ್ರಿಗಳ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುವುದು, ಅನಂತಮೂರ್ತಿ, ಹಾಮಾನಾ, ತೇಜಸ್ವಿ ಮುಂತಾದ ಲೇಖಕರ ವಿರುದ್ಧ ಅಕಾರಣವಾಗಿ ಆಧಾರರಹಿತವಾಗಿ ಗುರುತರ ಆರೋಪಗಳನ್ನು ಮಾಡುವುದು ಇತ್ಯಾದಿಗಳು. ಲಂಕೇಶರ ಈ ಸಣ್ಣತನ, ಸೋಗಲಾಡಿತನಗಳು ಇಂದು ಗುಟ್ಟಾಗೇನೂ ಉಳಿದಿಲ್ಲ. ಆ ಕುರಿತು ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಬಹು ಹಿಂದೆಯೇ ‘ಸರ್ಕಾರ ಸಾಹಿತಿ ಪ್ರಶಸ್ತಿ’ ಎಂಬ ಕಿರುಹೊತ್ತಗೆಯಲ್ಲಿ ವಿಶದವಾಗಿ ಬರೆದಿದ್ದಾರೆ. ಅದರ ಕೆಲವು ಭಾಗಗಳನ್ನು ಲೇಖಕರೂ ಸಹ ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ (ಪುಟ 159). ಎಲ್ಲಕ್ಕಿಂತ ಮಿಗಿಲಾಗಿ, ತಮ್ಮ ಈ ಬಗೆಯ ಅವಗುಣಗಳಿಗೆ ಲಂಕೇಶ್ ಆಗಾಗ ತಕ್ಕ ಬೆಲೆಯನ್ನೂ ತೆತ್ತಿರುವುದುಂಟು. 

ಬೇಂದ್ರೆ ಕುವೆಂಪು ಮುಂತಾದವರು ತಮ್ಮ ಬರಹಗಳ ಕೃತಿಸ್ವಾಮ್ಯವನ್ನು ಮಕ್ಕಳಿಗೆ ವರ್ಗಾಯಿಸಿದರೆಂದು ಛೇಡಿಸುವ ಲಂಕೇಶ್ ಕೊನೆಗೆ - ಕೊನೆಗೇನು ಬಂತು ಮೊದಲಿನಿಂದಲೂ - ತಾವೂ ಅದೇ ಹಾದಿ ಹಿಡಿದದ್ದು ವಿಪರ್ಯಾಸ! ಅವರ ಈ ದ್ವಂದ್ವ ಮತ್ತು ಸೋಗಲಾಡಿತನಗಳು ಇಂದು ಕನ್ನಡಿಗರೆದುರು ಬಯಲಾಗಿದೆ.

ಹೀಗೆ ಒಬ್ಬ ಖ್ಯಾತ ಸಾಹಿತಿ ತನ್ನ ಗುಣಾವಗುಣಗಳನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಹೊರಲೋಕಕ್ಕೆ ಅವು ಬಯಲಾಗುತ್ತಲೇ ಇರುವ ಕಾರಣ ಗುಣದ ಸ್ತುತಿಯಾಗಲಿ, ಅವಗುಣದ ನಿಂದೆಯಾಗಲಿ ಲೋಕಕ್ಕೆ ಅನವಶ್ಯಕ. ಎಷ್ಟೋ ಸಂದರ್ಭದಲ್ಲಿ ಖ್ಯಾತ ಲೇಖಕರು ತಮ್ಮ ಅವಗುಣಗಳನ್ನು ತಮಗರಿವಿಲ್ಲದೆಯೇ ತಾವೇ ಸ್ವತಃ ಬಯಲು ಮಾಡಿಕೊಂಡುಬಿಡುವುದುಂಟು. ಉದಾಹರಣೆಗೆ, ಲಂಕೇಶರು ಸಂಪಾದಿಸಿರುವ ‘ಅಕ್ಷರ ಹೊಸ ಕಾವ್ಯ’ ಸಂಕಲನವು ಕನ್ನಡ ಕಾವ್ಯಾಧ್ಯಯನಕ್ಕೆ ಅಪೂರ್ವ ಕೊಡುಗೆಯಾಗಿದೆ. ಆ ಸಂಕಲನದ ಕೆಲವು ಮಿತಿ ಹಾಗೂ ನ್ಯೂನತೆಗಳನ್ನು ಒಪ್ಪಿಯೂ ಈ ಮಾತುಗಳನ್ನು ಹೇಳಬೇಕಾಗುತ್ತದೆ. ಲಂಕೇಶರ ಈ ಸಾಧನೆಯನ್ನು ಯು.ಆರ್. ಅನಂತಮೂರ್ತಿ ಮತ್ತು ಹಾಮಾನಾ ಇಬ್ಬರೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿ ಅವರಿಗೆ ಅಪಚಾರವಾಗದಂತೆ ಅದರ ಓರೆಕೋರೆಗಳನ್ನು ಕನ್ನಡಪ್ರಭದಲ್ಲಿ ವಿಮರ್ಶಿಸಿದಾಗ ಲಂಕೇಶರು ಕೆರಳಿಬಿಟ್ಟಿದ್ದರು. ಅವರಿಬ್ಬರಿಗೆ ಪ್ರತಿಕ್ರಿಯಿಸಿ ತಮ್ಮ ಸಂಕಲನದ ಹಿರಿಮೆಯನ್ನು ಅವರು ಎಷ್ಟೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೂ ಓದುಗನಿಗೆ ಲಂಕೇಶರ ಸಮರ್ಥನೆಗಳು ಬರೀ ಹಟಮಾರಿತನದಂತೆ, ಬಾಲಿಶ ವಾದದಂತೆ ತೋರುತ್ತದೆ. ಊರಲ್ಲಿ ಇರುವವರನ್ನೆಲ್ಲ ಟೀಕಿಸುವ ಈ ಲೇಖಕನಿಗೆ ಒಂದೇ ಒಂದು ವಸ್ತುನಿಷ್ಠವಾದ ಟೀಕೆಯನ್ನು ಸ್ವೀಕರಿಸಲು ಸಂಕಟವಾಗುತ್ತದಲ್ಲ ಎಂದು ಅವರ ಬಗ್ಗೆ ಮರುಕವಾಗುತ್ತದೆ. ಆಗ ಕನ್ನಡಪ್ರಭದಲ್ಲಿ ಪ್ರಕಟವಾದ ಪತ್ರಗಳು ಹಾಗೂ ಪ್ರತಿಕ್ರಿಯೆಗಳನ್ನು ಲೇಖಕರು ಕೃತಿಯಲ್ಲಿ ಯಥಾವತ್ತಾಗಿ ದಾಖಲಿಸಿ ಉಪಕಾರ ಮಾಡಿದ್ದಾರೆ.   

ಈ ಕೃತಿ ಗೌರಿ ಲಂಕೇಶ್ ಹತ್ಯೆಯಾದ ಮೇಲೆ ಪ್ರಕಟವಾಗಿದ್ದು ಲೇಖಕರು ಇದರ ಕೊನೆಯ ಒಂದು ಅಧ್ಯಾಯವನ್ನು ಆಕೆಗೆಂದೇ ಮೀಸಲಿಟ್ಟಿದ್ದಾರೆ. ತಂದೆ-ಮಗಳ ಚಿತ್ರಗಳೆರಡೂ ಇದರಲ್ಲಿ ಒಟ್ಟಿಗೆ ಕಾಣಸಿಗುತ್ತವೆ. ಗೌರಿ ತಂದೆಯಷ್ಟು ಪ್ರತಿಭಾಶಾಲಿಯಲ್ಲ, ಅವರಂತೆ ಪರಿಣಾಮಕಾರಿಯಾಗಿ ಬರೆಯಬೇಕೆಂಬ ಹಂಬಲವೂ ಆಕೆಗೆ ಇದ್ದಂತಿರಲಿಲ್ಲ. ಆರಕ್ಕೇರದ ಮೂರಕ್ಕಿಳಿಯದ ಒಬ್ಬ ಪತ್ರಕರ್ತೆಯೆಂದೇ ಲೇಖಕರು ಆಕೆಯನ್ನು ಗುರುತಿಸುತ್ತಾರೆ. 

ಪತ್ರಿಕೋದ್ಯಮದಲ್ಲಿ ತನ್ನ ಛಾಪು ಮೂಡಿಸಲು ವಿಫಲಳಾದುದರಿಂದಲೇ ಆಕೆ ಪತ್ರಿಕೋದ್ಯಮದ ಜೊತೆಜೊತೆಗೆ ನಕ್ಸಲ್ ಪರವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳೆಂದು ಅವರು ವಿಶ್ಲೇಷಿಸುತ್ತಾರೆ. ಲಂಕೇಶ್ ತೀರಿಕೊಂಡ ಮೇಲೆ ಪತ್ರಿಕೆ ಇನ್ನೆಂದೂ ಮೇಲೇಳದಂತೆ ಮಕಾಡೆ ಮಲಗಿಬಿಟ್ಟಿತು. ಪತ್ರಿಕೆಯನ್ನು ಹೇಗಾದರೂ, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಪ್ರಕಟಿಸುವ ಮೂಲಕವಾದರೂ, ಜೀವಂತವಾಗಿ ಇರಿಸಲು ಪ್ರಯತ್ನಿಸಿದ ಗೌರಿ ಯಾವುದೇ ಸರ್ಕಾರೀ ಸವಲತ್ತುಗಳಿಗೆ ಹಾತೊರೆಯಲಿಲ್ಲ. ಗೌರಿಯ ನೈತಿಕ ಬದ್ಧತೆಯ ಬಗ್ಗೆ ಆಕೆಯನ್ನು ಬಾಲ್ಯದಿಂದಲೂ ಬಲ್ಲ ಲೇಖಕರಿಗೆ ಅಪಾರವಾದ ಹೆಮ್ಮೆ ಇದೆ. ಗೌರಿಯ ಹತ್ಯೆಯಾದಾಗ “ಗುಂಡೇಟಿನಿಂದ ಸಾಯದಿದ್ದರೆ ಅವಳಿಗೆ ಇಷ್ಟು ಪ್ರಚಾರ ದೊರಕುತ್ತಿರಲಿಲ್ಲ” ಎಂದು ಬರೆದಿದ್ದ ಒಬ್ಬ ಪತ್ರಕರ್ತನ ಧೋರಣೆಯನ್ನು ‘ವಿಕೃತಿ’ ಎಂದು ಖಂಡಿಸುವ ಲೇಖಕರು “ಆತ ಗುಂಡೇಟಿನಿಂದಲೇ ಸತ್ತಿದ್ದರೂ ಅವನಿಗೆ ಇಷ್ಟು ಪ್ರಚಾರ ದೊರಕುತ್ತಿರಲಿಲ್ಲ” ಎಂದು ಬರೆಯುತ್ತಾರೆ. 

ತಂದೆ ಮಗಳ ಚಿತ್ರಗಳೆರಡನ್ನೂ ಒಂದೇ ಕೃತಿಯಲ್ಲಿ ಓದಿದಾಗ ಲಂಕೇಶ್ ಅನುವಾದಿಸಿದ ‘ದೊರೆ ಈಡಿಪಸ್ ಮತ್ತು ಅಂತಿಗೊನೆ’ ನಾಟಕ ನೆನಪಾಗುತ್ತದೆ. ವಿಧಿಯ ಕೈವಾಡದಿಂದಾಗಿ ತಾಯಿಯ ಕೈಹಿಡಿದ ಈಡಿಪಸ್ ಟೈರೀಷಿಯಸ್ನಂತಹ ಗುರುಹಿರಿಯರನ್ನು ಹಗುರವಾಗಿ ಕಾಣುತ್ತ, ತನ್ನ ಶೋಕಿಯಲ್ಲಿ, ದುರಹಂಕಾರ, ಅಧಿಕಾರ ಮದಗಳಲ್ಲಿ ಮುಳುಗಿ ಕೊನೆಗೆ ಪಶ್ಚಾತ್ತಾಪದಿಂದ ಉದಾತ್ತ ಸಾವನ್ನು ಬರಮಾಡಿಕೊಂಡರೆ ಅವನ ಮಗಳಾದ ಅಂತಿಗೊನೆ ಪಿತೃಪ್ರೇಮ, ಕುಟುಂಬ ವಾತ್ಸಲ್ಯದಿಂದಾಗಿ ಮತ್ತು ತಾನು ತಂದೆಯಿಂದ ಕಲಿತ ಮೌಲ್ಯಗಳನ್ನು ಪಾಲಿಸುವ ಸಲುವಾಗಿ ಹುಂಬತನದಿಂದ ಪ್ರತಿಷ್ಠಿತ ಶಕ್ತಿಯನ್ನು ಎದುರುಹಾಕಿಕೊಂಡು ಅಕಾಲ ಮೃತ್ಯುವನ್ನು ಆಹ್ವಾನಿಸಿಕೊಳ್ಳುತ್ತಾಳೆ. ಮೋಹನ್ ರಾಂ ಅವರ ‘ದ ಕ್ಯಾಪಿಟಲ್’ ಕೃತಿಯಲ್ಲಿ ಚಿತ್ರಿತವಾಗಿರುವ ಲಂಕೇಶ್ ಹಾಗೂ ಗೌರಿ ಲಂಕೇಶ್ ಚಾರಿತ್ರ್ಯಗಳನ್ನು ಗಮನಿಸಿದರೆ ಗ್ರೀಕ್ ಪುರಾಣದ ಆ ಎರಡು ದುರಂತ ಪಾತ್ರಗಳೇ ನಮ್ಮ ಕಾಲದಲ್ಲಿ ಪುನರಭಿನಯಗೊಂಡಿವೆ ಎಂಬಂತೆ ಭಾಸವಾಗುತ್ತದೆ. ತನ್ನ ಮತ್ತು ತನ್ನ ಸಂತಾನದ ನಿಶ್ಚಿತ ವಿಧಿಯನ್ನು ಮುಂಗಾಣ್ಕೆಯಿಂದ ಅರಿತುಕೊಂಡೇ ಲಂಕೇಶ್ ಈಡಿಪಸ್ ಮತ್ತು ಅಂತಿಗೊನೆ ನಾಟಕವನ್ನು ಅನುವಾದಿಸಿರಬಹುದೇ ಎಂಬ ಊಹಾಕಲ್ಪನೆಗೆ ರೆಕ್ಕೆ ಪುಕ್ಕಗಳನ್ನು ಮೂಡಿಸುವ ಶಕ್ತಿ ಮೋಹನ್ ರಾಂ ಅವರ ಈ ಕೃತಿಗೆ ಇದೆ.