ಉಪಚುನಾವಣೆ ಟಿಕೆಟ್ ಯಾರಿಗೆಂದೇ ಅಂತಿಮವಾಗಿಲ್ಲ: ಪ್ರಚಾರಕ್ಕೆ ಹೊರಟಿದ್ದಾರೆ ಬೂಸಿ

ಒಂದೇ ಪ್ರವಾಸ ಕಾರ್ಯದಿಂದ ಮೂರು ದಿಕ್ಕಿಗೂ ಕಲ್ಲು ಹೊಡೆಯುವ ಪ್ರಯತ್ನವಾಗಿಯೇ ಮುಖ್ಯಮಂತ್ರಿ ಪ್ರಚಾರಕ್ಕಿಳಿಯುತ್ತಿದ್ದಾರೆ. ಆದರೆ ಇದಕ್ಕೆ ವಿರೋಧಿ ಪಾಳಯ ಕೊಂಕು ಎತ್ತಿರುವುದು ಮುಂದೆ ಯಾವ ದಿಕ್ಕಿಗೆ ತಿರುಗಿಕೊಳ್ಳುತ್ತೆ ಎಂದೀಗಲೇ ಹೇಳಲಾಗುತ್ತಿಲ್ಲ.

ಉಪಚುನಾವಣೆ ಟಿಕೆಟ್ ಯಾರಿಗೆಂದೇ ಅಂತಿಮವಾಗಿಲ್ಲ: ಪ್ರಚಾರಕ್ಕೆ ಹೊರಟಿದ್ದಾರೆ ಬೂಸಿ

ನ್ಯಾಯಾಲಯದ ತೀರ್ಪೇ ಬಂದಿಲ್ಲ, ಟಿಕೆಟ್ ಅತಂತ್ರರಿಗೆ ಖಚಿತವಾ ಎಂಬುದೇ ಇನ್ನೂ ನಿಗೂಢವಾಗಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರ ಕಣಕ್ಕೆ ಧುಮುಕಲು ಸನ್ನದರಾಗಿದ್ದಾರೆ.

ಅವರಿಗೂ ನಮಗೂ ಸಂಬಂಧವಿಲ್ಲವೆನ್ನುತ್ತಿರುವ ಲಕ್ಷ್ಮಣ ಸವದಿ ವಿರುದ್ದ ವರಿಷ್ಠರಿಗೆ ದೂರು ಕೊಡಲು ರೇಣುಕಾಚಾರ್ಯ ಮುಂದಾಗಿದ್ದಾರೆ.  ಎಲ್ಲ ಅತಂತ್ರರಿಗೂ ಟಿಕೆಟ್ ಬೇಡ ಎಂದು ಸಂತೋಷ್ ಬಳಗ ಪಟ್ಟು ಹಿಡಿದಿದೆ. ಮೂಲ ಪಕ್ಷೀಯರೂ ಹಿಡಿದ ಹಠ ಬಿಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೊನೇ ಕ್ಷಣದಲ್ಲಿ ಏನು ಬೇಕಾದರೂ  ಆಗಬಹುದು ಎಂಬಂತಿದ್ದರೂ, ಬಿಎಸ್‍ವೈ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಇದರ ಹಿಂದೆ ಮೂರು ಉದ್ದೇಶಗಳಿರುವುದು ಸ್ಪಷ್ಟ.

ಮೊದಲನೆಯದಾಗಿ ಎಲ್ಲರಿಗೂ ಟಿಕೆಟ್ ಇಲ್ಲ ಎಂದು ಹೇಳುತ್ತಿರುವವರಿಗೆ ಟಾಂಗ್ ಕೊಟ್ಟು, ನೀವು ಹೇಳಿದ್ದಕ್ಕೆಲ್ಲ ತಲೆಯಾಡಿಸಿಕೊಂಡು ಕೂರಲ್ಲ ಎಂಬ ಖಡಕ್ ಸಂದೇಶ ರವಾನಿಸುವುದು ಆಗಿದೆ. ಎರಡನೆಯದಾಗಿ ಅತಂತ್ರರಲ್ಲಿ ಬಹು ಜನರಿಗೆ ಟಿಕೆಟ್ ಸಿಗುತ್ತಾ ಇಲ್ಲವಾ ಎಂಬ ಶಂಕೆಯಿಂದ ಅತ್ತಿತ್ತ ಕಣ್ಣಾಡಿಸುತ್ತಲೂ ಇದ್ದಾರೆ. ಇವರೇನಾದರೂ ಬೇರೆಯವರ ಗಾಳಕ್ಕೆ ಸಿಕ್ಕಿಬಿದ್ದರೆ, ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಗಳೆಲ್ಲ ನೀರು ಪಾಲಾಗಿಬಿಡುತ್ತೆ. ಇದನ್ನ ತಪ್ಪಿಸಿ ಅತಂತ್ರರಲ್ಲಿ ಧೈರ್ಯ ತುಂಬುವ ತಂತ್ರದ ಭಾಗವಾಗಿ ಈ ಪ್ರಚಾರ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಮೂರನೆಯದಾಗಿ ಟಿಕೆಟ್ ನಮಗೇ ಬೇಕು ಎಂದು ಸ್ವಪಕ್ಷೀಯರು ಎತ್ತಿರುವ ಧ್ವನಿಗೆಲ್ಲ ಕಿಲುಬು ಕಾಸಿನ ಬೆಲೆಯಿಲ್ಲ, ನಾವು ಹೇಳಿದ ಅಭ್ಯರ್ಥಿಯನ್ನ ಒಪ್ಪಿಕೊಂಡಿರಿ ಎಂಬುದನ್ನ ಬಿಂಬಿಸುವುದೇ ಆಗಿದೆ.

ಒಂದೇ ಪ್ರವಾಸ ಕಾರ್ಯದಿಂದ ಮೂರು ದಿಕ್ಕಿಗೂ ಕಲ್ಲು ಹೊಡೆಯುವ ಪ್ರಯತ್ನವಾಗಿಯೇ ಮುಖ್ಯಮಂತ್ರಿ ಪ್ರಚಾರಕ್ಕಿಳಿಯುತ್ತಿದ್ದಾರೆ. ಆದರೆ ಇದಕ್ಕೆ ವಿರೋಧಿ ಪಾಳಯ ಕೊಂಕು ಎತ್ತಿರುವುದು ಮುಂದೆ ಯಾವ ದಿಕ್ಕಿಗೆ ತಿರುಗಿಕೊಳ್ಳುತ್ತೆ ಎಂದೀಗಲೇ ಹೇಳಲಾಗುತ್ತಿಲ್ಲ.

ಪಕ್ಷದಲ್ಲಿ ಆಂತರಿಕವಾಗಿ ಇಂಥ ಚಟುವಟಿಕೆಗಳೇನಾದರೂ ಇರಲಿ, ಆಯಾ ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕಾಗಿ ಬೇಕಿರುವ ತಂತ್ರಗಳನ್ನೆಲ್ಲ ರಹಸ್ಯವಾಗಿಯೇ ಪ್ರಯೋಗಿಸುತ್ತಿದೆ. ಉದಾಹರಣೆಗೆ ಕೆ.ಆರ್. ಪೇಟೆ ಕ್ಷೇತ್ರವನ್ನೇ ನೋಡುವುದಾದರೆ, ಮುಖ್ಯಮಂತ್ರಿ ಇದೇ ವ್ಯಾಪ್ತಿಯವರು. ತವರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕಾದ ಹಠ ಇದೆ. ಇಲ್ಲಿ ದಳದ ಅತಂತ್ರ ಶಾಸಕ ನಾರಾಯಣ ಗೌಡರೇ ಬಿಜೆಪಿ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಮಾಜಿ ಸಭಾಧ್ಯಕ್ಷ ಕೃಷ್ಣ, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಹಿಂಬಾಲಕ ಪಡೆ ಇದೆ. ಇವರ ಜತೆ ಈಗಿನ ಸಂಸದೆ ಸುಮಲತಾ ಅಂಬರೀಶ್ ಪ್ರಭಾವವೂ ಇರುತ್ತೆ ಎಂಬ ಅಂದಾಜಿದೆ.

ಹೀಗಾಗಿಯೇ ಇವಾಗಾಗಲೇ ಸಿದ್ದರಾಮಯ್ಯ ನಡುನೀರಲ್ಲೇ ಕೈಬಿಟ್ಟರು ಎಂದು ಕುದಿಯುತ್ತಿರುವ ಕೃಷ್ಣ ಬೆಂಬಲಿಗರು, ರೆಹಮಾನ್ ಖಾನ್ ಬೆಂಬಲಿಗ ಮತ್ತು ಸಮುದಾಯದವರನ್ನ ಕಮಲ ಒಲಿಸಿಟ್ಟುಕೊಂಡಿದೆ. ಸುಮಲತಾ ಅಂಬರೀಶ್ ಗೆದ್ದ ನಂತರ ಇಲ್ಲಿನ ರೈತರ ಸಮಸ್ಯೆಗಳತ್ತ ತಿರುಗಿಯೂ ನೋಡುತ್ತಿಲ್ಲ ಎಂಬ ಕೂಗೂ ಕೇಳಿಬಂದಿದೆ.  ಸಂಸದೆಯಾದಾಗಿನಿಂದ ಈಕೆ ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಜತೆಗಿಟ್ಟುಕೊಂಡೇ ಓಡಾಡುತ್ತಿರುವುದು ಇನ್ನೊಂದು ಬಗೆಯ ಅಸಮಾಧಾನಕ್ಕೂ ಕಾರಣವಾಗಿದೆ. ಈ ಅಸಮಾಧಾನದಿಂದ ಪಾರಾಗಲು ಸಂಸದೆ ನೇರಾನೇರ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಬೇಕಾದಂಥ ಅನಿವಾರ್ಯ ಸ್ಥಿತಿ ನಿರ್ಮಿಸಲಾಗುತ್ತಿದೆ.

ಇದು ಸಾಲದೆಂಬಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ)ನ ಒಂದಷ್ಟು ಮಂದಿ ಆಲಂಬಾಡಿಯ ಕಬ್ಬಿನ ಗದ್ದೆಯಲ್ಲಿ ಅನುಮತಿ ಇಲ್ಲದೆ ಕವಾಯತು ಮಾಡುತ್ತಿದ್ದವರನ್ನ ಬಂಧಿಸಿ, ವಿಧ್ವಂಸಕ ಕೃತ್ಯದ ಆರೋಪದಲ್ಲಿ ಎಫ್.ಐ.ಆರ್.ದಾಖಲಿಸಲಾಗಿದೆ. ಇದರ ಹಿಂದೆ ದುರುದ್ದೇಶವಿಲ್ಲ ನಮ್ಮ ಸಂಘಟನೆಯ ಕಾರ್ಯಕ್ರಮಕ್ಕಾಗಿ ತಾಲೀಮು ಮಾಡಿಕೊಳ್ಳುತ್ತಿದ್ದೆವು ಎಂಬುದು ಸಂಘಟನೆಯ ವಾದ.  ಇಲ್ಲಿ ತಪ್ಪು ಯಾರದಿದೆಯೋ ಎಂಬುದಕ್ಕಿಂತ ಇಡೀ ಘಟನೆ ಈಗ ಸೂಕ್ಷ್ಮ ವಿಚಾರವಾಗಿ ರೂಪಾಂತರಗೊಂಡು ಈ ಸಂಘಟನೆ ನಿಷೇಧಿಸಿ ಎಂದು ಬಂದ್‍ಗೆ ಕರೆಕೊಡಲಾಗಿದೆ.   ಕೊನೆ ಕೊನೆಗೆ ಇದು ರಾಜಕೀಯ ವಿಚಾರವಾಗಿ ಬದಲಾಗುವುದು ಅಸಹಜವೇನಲ್ಲ.  ಇಂಥವೆಲ್ಲ ಉಪಚುನಾವಣೆ ಸನಿಹದಲ್ಲೇ ಆಗುತ್ತಿರುವುದರ ಒಟ್ಟು ಲಾಭ ಬಿಜೆಪಿಗೆ ಆಗಲೇಬೇಕೆಂದು ಕಾರ್ಯಸೂಚಿ ಸಿದ್ದಗೊಂಡಿವೆ.

ಇಂಥ ಯೋಜನಾಬದ್ದ ಪ್ರಚಾರಗಳತ್ತ ಬಿಜೆಪಿ ವಾಲುತ್ತಿದ್ದರೆ, ಕಾಂಗ್ರೆಸ್‍ನಲ್ಲಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುವುದನ್ನೇ ಆದ್ಯತೆ ಮಾಡಿಟ್ಟುಕೊಳ್ಳಲಾಗಿದೆ. ದಳ ಯಾರ ಪರ ಎಂಬ ಗೊಂದಲವನ್ನಿಟ್ಟುಕೊಂಡೇ ದಾಳ ಉರುಳಿಸುತ್ತಿದೆ. ಪರಿಣಾಮವಾಗಿ ಉಪ ಚುನಾವಣೆ ಕುರಿತ ರಾಜಕೀಯ ಚಟುವಟಿಕೆಗಳು ಪಾಶ್ರ್ವವಾಯುಗೆ ತುತ್ತಾಗಿವೆ.