ದೀದಿಗೆ ಡೀಡಿ ಕೊಡಲು ದಾದಾಗೆ ಅಧ್ಯಕ್ಷ ಪಟ್ಟ

ಪಶ್ಚಿಮ ಬಂಗಾಳದಲ್ಲಿ ಗಂಗೂಲಿಯ ಜನಪ್ರಿಯತೆ ತಿಳಿದದ್ದೇ. ಅಲ್ಲಿ ದೀದಿಯ ಪ್ರಾಬಲ್ಯವನ್ನು ಹೊಡೆಯಲು ದಾದಾ ಎಂದೇ ಕರೆಯಲ್ಪಡುವ ಗಂಗೂಲಿಯನ್ನು ಬಿಜೆಪಿ ಬಿಸಿಸಿಐ ಮುಖ್ಯಸ್ಥನ ಹುದ್ದೆಯ ಆಮಿಷ ನೀಡುವುದರ ಮೂಲಕ ಬಳಸಿಕೊಳ್ಳುವ ತಂತ್ರವನ್ನು ಹೆಣೆದಿರುವುದರಲ್ಲಿ ಅನುಮಾನವೇ ಬೇಡ

ದೀದಿಗೆ ಡೀಡಿ ಕೊಡಲು ದಾದಾಗೆ ಅಧ್ಯಕ್ಷ ಪಟ್ಟ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನ ಅಧ್ಯಕ್ಷರಾಗಿ ಸೌರವ್ ಚಂಡೀದಾಸ್ ಗಂಗೂಲಿ ಆಯ್ಕೆಯಾಗಿದ್ದಾರೆ. ವಿದ್ಯುಕ್ತವಾಗಿ ಅವರು ಮತ್ತು ಬಿಸಿಸಿಐನ ಇತರೇ ಪದಾಧಿಕಾರಿಗಳು  ಈ ತಿಂಗಳ 23 ರಂದು ಅಧಿಕಾರವನ್ನು ವಹಿಸಿಕೊಳುತ್ತಿದ್ದಾರೆ. ಶಾಪಗ್ರಸ್ತ ಭಾರತ ಕ್ರಿಕೆಟ್ ಆಡಳಿತ ಕಳೆದ ಮೂರು ವರ್ಷಗಳಿಂದ ಆಡಳಿತ ಸಮಿತಿಯ (Committee of Administration) ಸುಪರ್ದಿಯಲ್ಲಿತ್ತು.  ಲೋಧಾ ಆಯೋಗ ಸೂಚಿಸಿದಂತೆ ಗಂಗೂಲಿಯ ಅಧ್ಯಕ್ಷಾವಧಿ 10 ತಿಂಗಳುಗಳಿಗೆ ಸೀಮಿತವಾಗಿರುತ್ತದೆ. ಈಗಾಗಲೇ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಐದು ವರ್ಷ ಸೇವೆ ಸಲ್ಲಿಸಿರುವ ಗಂಗೂಲಿ ಸತತವಾಗಿ ಆರು ವರ್ಷ ಮಾತ್ರ ಆಡಳಿತಾತ್ಮಕ ಹುದ್ದೆಯಲ್ಲಿ ಮುಂದುವರಿಯಬಹುದು.

ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸುವ  ಮೂಲಕ  ಸರಣಿಯನ್ನು ಬುಟ್ಟಿಗೆ ಹಾಕಿಕೊಂಡಿದೆ. ಮೊದಲ ಟೆಸ್ಟ್ ಗೆದ್ದಾಗ  ಪ್ರವಾಸೀ ತಂಡಗಳೊಂದಿಗೆ ಸತತವಾಗಿ ಹತ್ತು ಸರಣಿಗಳನ್ನು ಗೆದ್ದ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಭಾರತ ಸರಿಗಟ್ಟಿತ್ತು. ಮೊನ್ನೆಯ ಗೆಲುವಿನೊಂದಿಗೆ ನೂತನ ವಿಶ್ವ ದಾಖಲೆ ನಿರ್ಮಿತವಾಗಿದೆ. ವಿಕ್ರಮದ ಸಂಭ್ರಮದಲ್ಲಿರುವ ಭಾರತಕ್ಕೆ ಗಂಗೂಲಿ ದೇಶದ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದಿರುವುದು ಅನುಕೂಲವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ. ಲೇಖಕ, ಆಡಳಿತಗಾರ, ಬಂಡವಾಳ ಹೂಡಿಕೆದಾರ, ವೀಕ್ಷಕ ವಿವರಣೆ ಪರಿಣತನಾಗಿ ಹೆಸರುವಾಸಿಯಾಗಿರುವ ಗಂಗೂಲಿಗೆ ದಟ್ಟ ಅನುಭವವಿದೆ. ಬಿಸಿಸಿಐ ಸಮಸ್ಯೆ ಮತ್ತು ಸವಾಲುಗಳ ಪರಿಚಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತ ಪಕ್ಷದ ಬೆಂಬಲವಿದೆ.

ಬಿಸಿಸಿಐನ ವಿವಿಧ ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೆಷನ್ ನಲ್ಲಿ  ಸೇವೆ ಸಲ್ಲಿಸಿ  ಅಪಾರ ಆಡಳಿತಾತ್ಮಕ ಅನುಭವ ಹೊಂದಿರುವ ಬ್ರಿಜೇಶ್ ಪಟೇಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿತ್ತು. ಅದರ ಬಗ್ಗೆ ಕಡೆಯ ಗಳಿಗೆವರೆವಿಗೂ ಯಾವುದೇ ಸಂಶಯಗಳಿರಲಿಲ್ಲ. ಆದರೆ ಶನಿವಾರ ಗಂಗೂಲಿ ಬಿಜೆಪಿ ಧುರೀಣ ಮತ್ತು ಕೇಂದ್ರ  ಸಚಿವ  ಅಮಿತ್ ಶಾರನ್ನು ಭೇಟಿ ಮಾಡುತ್ತಾರೆ. ತದನಂತರದಲ್ಲಿ ದೆಹಲಿಯಿಂದ ಮುಂಬಯ್ ಗೆ ಫೋನ್ ಕರೆ ಹರಿದುಬರುತ್ತದೆ. ಕ್ರಿಕೆಟ್ ಆಡಳಿತದ ವಿವಿಧ ಜವಾಬ್ದಾರಿ ಬರಿಸಿದ ಹಿರಿತಲೆಗಳೆಲ್ಲ ಒಟ್ಟಿಗೆ ಸೇರುತ್ತವೆ. ಸುದೀರ್ಘ ಗುಸುಗುಸು ಚರ್ಚೆಯ ನಂತರ ಬ್ರಿಜೇಶ್ ನಾಮಪತ್ರ ಸಲ್ಲಿಸದೇ ಕಣದಿಂದ ಹಿಂದುಳಿಯುತ್ತಾರೆ. ಗಂಗೂಲಿಯ ಆಯ್ಕೆ ಅವಿರೋಧವಾಗುತ್ತದೆ. ಅಮಿತ್ ಶಾರ ಪುತ್ರ ಹಾಗೂ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ನ ಹಿಂದಿನ ಜಂಟೀ ಕಾರ್ಯದರ್ಶಿ ಜಯ್ ಶಾ ನೂತನ ಕಾರ್ಯದರ್ಶಿಯಾಗಿಯೂ, ಕೇರಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಯೇಶ್ ಜಾರ್ಜ್ ಜಂಟೀ ಕಾರ್ಯದರ್ಶಿಯಾಗಿಯೂ, ಮಾಜಿ ಬಿಸಿಸಿಐ ಅಧ್ಯಕ್ಷ  ಕೇಂದ್ರ  ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಹೋದರ ಅರುಣ್ ಸಿಂಗ್ ಧುಮಾಲ್ ಖಜಾಂಚಿಯಾಗಿಯೂ ಆಯ್ಕೆಯಾಗಿರುತ್ತಾರೆ.

ಬ್ರಿಜೇಶ್ ಗುಜರಾತಿಯಾಗಿದ್ದೂ ಸ್ಪರ್ಧೆಯಿಂದ ಹಿಂದುಳಿದರೆಂಬುದು ಗಮನಾರ್ಹ. ಅತ್ತ, ಗಂಗೂಲಿಯಾದರೋ ಅಮಿತ್ ಶಾ ರೊಂದಿಗೆ ತಮ್ಮ ಭೇಟಿಗೆ ಯಾವುದೇ ರಾಜಕೀಯದ ಬಣ್ಣ ಕಟ್ಟಬೇಕಿಲ್ಲ, ಹಿಂದೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿ ನೀಡಿದಾಗಲೂ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿತ್ತು ಎಂದಿದ್ದಾರೆ.

ಗಂಗೂಲಿಯ ಸಮಜಾಯಿಷಿ ಏನೇ  ಇರಲಿ, ಅವರ ಮತ್ತು ಶಾ ಭೇಟಿ ಉಭಯ ಕುಶಲೋಪರಿಯನ್ನು ಮೀರಿದ್ದೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಗಂಗೂಲಿಯ ಜನಪ್ರಿಯತೆ ತಿಳಿದದ್ದೇ. ಅಲ್ಲಿ ದೀದಿಯ ಪ್ರಾಬಲ್ಯವನ್ನು ಹೊಡೆಯಲು ದಾದಾ ಎಂದೇ ಕರೆಯಲ್ಪಡುವ ಗಂಗೂಲಿಯನ್ನು ಬಿಜೆಪಿ ಬಿಸಿಸಿಐ ಮುಖ್ಯಸ್ಥನ ಹುದ್ದೆಯ ಆಮಿಷ ನೀಡುವುದರ ಮೂಲಕ ಬಳಸಿಕೊಳ್ಳುವ ತಂತ್ರವನ್ನು ಹೆಣೆದಿರುವುದರಲ್ಲಿ ಅನುಮಾನವೇ ಬೇಡ. ಕಳೆದ ತಿಂಗಳಷ್ಟೇ ಗಂಗೂಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥರಾಗಿ ಪುನರಾಯ್ಕೆಗೊಂಡಿದ್ದರು. ಆ ಕಾರಣಕ್ಕೆ, ಬಿಸಿಸಿಐನ ಹೊಸ ಸಂವಿಧಾನದ ಅನ್ವಯ  ಅವರ ಬಿಸಿಸಿಐ ಅಧ್ಯಕ್ಷಾವಧಿ ಕೇವಲ ಹತ್ತು ತಿಂಗಳುಗಳಿಗಷ್ಟೇ ಸೀಮಿತವಾಗಿರುತ್ತದೆ.

ಕ್ರಿಕೆಟ್ ಜಗತ್ತಿನ ಅತ್ಯಂತ ಸಂಪದ್ಭರಿತ ಆಡಳಿತ ಮಂಡಳಿ ಎಂದೇ ಪ್ರಸಿದ್ಧಿ ಹೊಂದಿರುವ ಬಿಸಿಸಿಐ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಗಂಗೂಲಿ 20 ಲಕ್ಷ ರೂ ಬೆಲೆಯ ರೋಲೆಕ್ಸ್ ಸೆಲಿನಿ ವಾಚ್ ಧರಿಸಿದ್ದರು. (ಇಟಲಿಯ ರೆನೈಸಾನ್ಸ್  ಕಲಾವಿದ ಬೆನ್ವೆಂಟೋ ಸೆಲಿನಿಯಿಂದ ವಿನ್ಯಾಸಗೊಂಡ ಈ ವಾಚು  ಚಂದ್ರನ ಚಲನೆಯನ್ನು ಕರಾರುವಕ್ಕಾಗಿ 122 ವರ್ಷ ತೋರಬಲ್ಲ ಸಾಮರ್ಥ್ಯ ಹೊಂದಿದೆ.) ದಿಢೀರ್ ಬೆಳವಣಿಗೆಯಿಂದ ಆಯ್ಕೆಗೊಂಡದ್ದು ತಮಗೂ ಆಶ್ಚರ್ಯ ತಂದಿದೆ ಎಂದ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪದವಿಯನ್ನಲಂಕರಿಸುತ್ತಿರುವ ಎರಡನೇ ಟೆಸ್ಟ್ ಆಟಗಾರನಷ್ಟೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೂರು-ಟೆಸ್ಟ್ ಸರಣಿಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ವಿಝಿಯನಗರಂ ಮಹಾರಾಜ 1954 ರಿಂದ '56 ರವರೆವಿಗೂ ಆ ಹುದ್ದೆಯನ್ನಲಂಕರಿಸಿದ್ದರು.  

ಬ್ರಿಜೇಶ್ ಬೆನ್ನೆಲುಬಾಗಿ ಬಿಸಿಸಿಐನ ವಿವಾದಾಸ್ಪದ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ನಿಂತಿದ್ದರು. ಡಾಕ್ಸ್ ನ ರಾಜ್ಯಗಳ ಕ್ರಿಕೆಟ್ ಅಸೋಸಿಯೇಷನ್ ಗಳೂ, ಉತ್ತರ ಮತ್ತು ಪಶ್ಚಿಮ ಭಾಗಗಳ ಕ್ರಿಕೆಟ್ ಘಟಕಗಳ ಬೆಂಬಲವೂ ಅವರಿಗೆ ಖಚಿತವಾಗಿತ್ತು. ಕ್ರಿಕೆಟ್ ನಿಂದ ಸದ್ಯಕ್ಕೆ ದೂರ ಉಳಿದಿರುವ ಕೇಂದ್ರ ಮಂತ್ರಿ ಠಾಕೂರ್ಗೆ ಆಡಳಿತಗಾರರ ಸಮಿತಿಯನ್ನು ಕಂಡರೆ ಅಷ್ಟಕ್ಕಷ್ಟೆ. ಶ್ರೀನಿವಾಸನ್ ಮತ್ತು ಠಾಕೂರರಿಬ್ಬರ  ನಡುವೆ ಭಿನ್ನಾಭಿಪ್ರಾಯಗಳ ಬೃಹತ್ ಬಿರುಕಿರುವುದು ಸರ್ವವಿದಿತ. ಆದರೆ ಅವರಿಬ್ಬರಿಗೂ ಆಡಳಿತಗಾರರ ಸಮಿತಿ ಆಗಬಾರದ್ದು. ಇದೊಂದೇ ಕಾರಣಕ್ಕೆ ಅವರಿಬ್ಬರೂ ಕೈಜೋಡಿಸಿದ್ದು ಗಂಗೂಲಿಯ ಆಯ್ಕೆಯನ್ನು ಸುಗಮವಾಗಿಸಿತು. ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಳಿತ ದಿಕ್ಕಾಪಾಲಾಗಿದ್ದು ಅದನ್ನು ಮತ್ತೆ ಹಳಿಮೇಲೆ ತರುವ ಕಾತುರ ಠಾಕೂರರಿಗಿದ್ದು ಆ ಉದ್ದೇಶ ಸಾಧನೆಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಿರ್ದಿಷ್ಟ ರೂಪುಕೊಡಲು ಮುಂಚೂಣಿಗೆ ಬಂದಿದ್ದರು. ಅಮಿತ್ ಶಾ ಸೂಚನೆಯಂತೆ ಅವರು ಕಾರ್ಯ ನಿರ್ವಹಿಸಿರುವ ಸಾಧ್ಯತೆ ಇದ್ದೇ ಇದೆ.

ಗಂಗೂಲಿ ಮತ್ತು ನೂತನ ಪದಾಧಿಕಾರಿಗಳ  ಆಯ್ಕೆ ಬಹುತೇಕ ಎಲ್ಲರ ಅನುಮೋದನೆ ಗಳಿಸಿದೆ. ಅವರನ್ನು ಅಭಿನಂದಿಸಿದ ಮೊದಲಿಗರಲ್ಲಿ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ವೀರೇಂದರ್ ಸೆಹ್ವಾಗ್, ಕೆವಿನ್ ಪೀಟರ್ಸನ್, ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರೈ, ಮಾಜಿ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಮುಂತಾದವರಿದ್ದಾರೆ.  ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮಾತ್ರ ಜೈ ಶಾ ಆಯ್ಕೆ ಕುರಿತು ಕೊಂಕು ನುಡಿದಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ, ನನ್ನ ತಂದೆ ಸಚಿವರಾಗಿದ್ದ ಸಮಯದಲ್ಲಿ ನಾನೇನಾದರೂ ಬಿಸಿಸಿಐನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ ಭಕ್ತರು ನನ್ನನ್ನು ಹುರಿದು ಮುಕ್ಕುತ್ತಿದ್ದರು, ಎಂದು ನುಡಿದಿದ್ದಾರೆ.

ಅವರ ಮಾತನ್ನು ಖಂಡಿಸಿ ಈಗಾಗಲೇ ಟ್ವಿಟ್ಟರಿಗರು ವಾಗ್ದಾಳಿ ನಡೆಸಿದ್ದಾರೆ. ವಾಸ್ತವವೆಂದರೆ, ಕ್ರಿಕೆಟನ್ನೂ ಸೇರಿದಂತೆ ಕ್ರೀಡಾರಂಗ ರಾಜಕಾರಣಿಗಳ ಕಪಿಮುಷ್ಟಿಯಲ್ಲಿದೆ. ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ರಾಜೀವ್ ಶುಕ್ಲ, ಸಿಪಿ ಜೋಶಿ, ಜ್ಯೋತಿರಾದಿತ್ಯ ಸಿಂಧಿಯಾ, ಶ್ರೀಕಂಠ ದತ್ತ ಒಡೆಯರ್, ವಿಲಾಸ್ ರಾವ್ ದೇಶಮುಖ್ ಮುಂತಾದವರ ಪ್ರಾಬಲ್ಯವನ್ನು ನಾವು ಕಂಡಿದ್ದೇವೆ. ಸ್ವಯಂ ಕಾರ್ತಿ ಚಿದಂಬರಂ ತಮಿಳ್ ನಾಡು ಟೆನಿಸ್ ಅಸೋಸಿಯೇಷನ್ ಪದಾಧಿಕಾರಿ.

ಇಷ್ಟೆಲ್ಲದರ ನಡುವೆ ಗಂಗೂಲಿ, ತಮ್ಮ ಅಲ್ಪ ಅಧಿಕಾರಾವಧಿಯಲ್ಲಿ, ಹೆಚ್ಚಿನದನ್ನು  ಸಾಧಿಸುವರೆಂದು ನಿರೀಕ್ಷಿಸಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ನ ಅಭಿವೃದ್ಧಿಯತ್ತ ತಕ್ಷಣ ಗಮನಹರಿಸುವುದಾಗಿ ಹೇಳಿದ್ದಾರೆ. ಅದು ಜರೂರ್ ಆಗಬೇಕಾದ ಕೆಲಸವೆಂಬುದರಲ್ಲಿ ಎರಡು ಮಾತಿಲ್ಲ.

ಕೆಲವು ಮಾಜಿ ಕ್ರಿಕೆಟ್ ಆಟಗಾರರ ಹೆಸರು ಹಿತಾಸಕ್ತಿಯ ಸಂದಿಗ್ಧವನ್ನೆದುರಿಸುತ್ತಿರುವುದರ ಅರಿವು ತಮಗಿದೆಯೆಂದು ಗಂಗೂಲಿ ನುಡಿದಿದ್ದಾರೆ. ಅದು ಸರಳವಾಗಿ ಬಹೆಹರಿಯಬಲ್ಲ ಸಮಸ್ಯೆಯಲ್ಲ. ಅದನ್ನು ಹೇಗೆ ಪರಹರಿಸಬಲ್ಲರೆಂಬುದು ಕುತೂಹಲ ಸೃಷ್ಟಿಸಿದೆ.

ಏತನ್ಮಧ್ಯೆ, ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ  ಮುಂದಿನ ಕೆಲ ವರ್ಷಗಳಲ್ಲಿ ನಿಯೋಜಿಸಲು ಮುಂದಾಗಿರುವ ಪಂದ್ಯಾವಳಿಗಳು ಬಿಸಿಸಿಐನ ಬೊಕ್ಕಸಕ್ಕೆ ಹರಿದು ಬರುವ ಹಣಕ್ಕೆ ತಡೆ ಒಡ್ಡಲಿವೆ. ಉದಾಹರಣೆಗೆ, ಐಸಿಸಿ ಟಿ-20 ವಿಶ್ವ ಕಪ್ಪನ್ನು ಪ್ರತಿ ವರ್ಷ ನಡೆಸಲು ಉದ್ದೇಶಿಸಿದೆ. ಟಿವಿ ಪ್ರಸಾರ ಹಕ್ಕನ್ನು ಮಾರಾಟಮಾಡುವುದರಿಂದ ಐಸಿಸಿ ಹೇರಳವಾಗಿ ಲಾಭ ಮಾಡಿಕೊಳ್ಳುತ್ತದೆ. ಟಿವಿ ಚಾನೆಲ್ ಗಳಿಂದ ಬಿಸಿಸಿಐಗೆ ಬರುವ ಹಣದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದರ ಬಗ್ಗೆ ಈಗಾಗಲೇ ಆತಂಕ ವ್ಯಕ್ತವಾಗಿದೆ. ಗಂಗೂಲಿಗೆ ಇದರ ಬಗ್ಗೆ ತಿಳಿಹೇಳಬೇಕಿಲ್ಲ. ಐಸಿಸಿಗೆ ಸಂದಾಯವಾಗುವ ಹಣದಲ್ಲಿ ಶೇಕಡಾ ಸುಮಾರು 75ರಷ್ಟು ಭಾರತದಿಂದಲೇ ವರ್ಗಾವಣೆಯಾಗುತ್ತದೆ. ಅಷ್ಟು ಬೃಹತ್ ಸಂಸ್ಥೆಯಾದ ಬಿಸಿಸಿಐಗೆ ಹೇಳಿಕೊಳ್ಳುವಂಥ ಯಾವುದೇ ವರ್ಗಾವಣೆ ಆಗುತ್ತಿಲ್ಲ ಎಂದು ಗಂಗೂಲಿ ಈಗಾಗಲೇ ಹೇಳಿದ್ದಾರೆ.

ಹಿಂದಿನ ಆಡಳಿತಗಾರ ದಿವಂಗತ ಜಗಮೋಹನ್ ದಾಲ್ಮಿಯಾ ಗರಡಿಯಲ್ಲಿ ಪಳಗಿರುವ ಗಂಗೂಲಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ಟವಾಗಲಾರದು. ಭಾರತ ಕ್ರಿಕೆಟ್ ನ ನವ ನಿರ್ಮಾತೃಗಳ ಹೆಸರುಗಳಲ್ಲಿ ಗಂಗೂಲಿ ಹೆಸರು ಮುಖ್ಯವಾದದ್ದು. ಕ್ರಿಕೆಟ್ ಬೆಟ್ಟಿಂಗ್ ಹಗರಣದಿಂದ ನಲುಗಿದ್ದ ಭಾರತ ಕ್ರಿಕೆಟ್ ಗೆ ಆಗ ತಾನೇ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗಂಗೂಲಿ ಕಾಯಕಲ್ಪ ಒದಗಿಸಿದರು. ನಾಯಕನಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯುವರಾಜ್ ಸಿಂಗ್ ಮುಂದೆ ಬರಲು, ವೀರೇಂದರ್ ಸೆಹ್ವಾಗ್ ಟೆಸ್ಟ್ ನಲ್ಲಿ ಆರಂಭಿಕ ಆಟಗಾರನಾಗಲು, ರಾಹುಲ್ ದ್ರಾವಿಡ್ ಏಕದಿವಸೀಯ ಪಂದ್ಯಗಳಲ್ಲಿ ಕೀಪಿಂಗ್ ಗ್ಲೋವ್ಸ್ ತೊಟ್ಟು ಆಟಗಾರನಾಗಿ ಮುಂದುವರೆಯಲು ಗಂಗೂಲಿ ತೆಗೆದುಕೊಂಡ ನಿರ್ಧಾರಗಳೇ ಕಾರಣ.

ಕಳೆದ ಆಗಸ್ಟ್ ವರೆವಿಗೂ ವಿದೇಶೀ ನೆಲದಲ್ಲಿ ಭಾರತಕ್ಕೆ ಟೆಸ್ಟ್ ಗಳಲ್ಲಿ  ಅತಿ ಹೆಚ್ಚು ಯಶಸ್ಸು ಗಳಿಸಿಕೊಟ್ಟ ನಾಯಕರ ಹೆಸರುಗಳ ಪಟ್ಟಿಯಲ್ಲಿ ಗಂಗೂಲಿಯ ಹೆಸರು ಅಗ್ರಸ್ಥಾನದಲ್ಲಿತ್ತು.

2003 ರ ವಿಶ್ವ ಕಪ್ ಪಂದ್ಯದಲ್ಲಿ ಭಾರತ ಫೈನಲ್ ತಲುಪಿದ್ದು ಗಂಗೂಲಿಯ ನೇತೃತ್ವದಲ್ಲಿ.  ಪೂರ್ವಭಾವಿಯಾಗಿ  ವಿರುದ್ಧ ಲಾರ್ಡ್ಸ್ ನಲ್ಲಿ ನ್ಯಾಟ್ವೆಸ್ಟ್ ಫೈನಲ್  ಪಂದ್ಯವನ್ನು ರೋಚಕವಾಗಿ ಗೆದ್ದುಕೊಟ್ಟ ಕೀರ್ತಿ ಸೌರವ್ ಗಂಗೂಲಿಯದು. ಗೆದ್ದ  ನಂತರ ತೊಟ್ಟ ಜರ್ಸಿಯನ್ನು ಕಳಚಿ ಸುದರ್ಶನ ಚಕ್ರದಂತೆ ಗಿರಗಿರನೆ ತಿರುಗಿಸಿ ವಿಜಯೋತ್ಸಹ ಮೆರೆದದ್ದು ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಕಟ್ಟಿದೆ.

ಹಿರಿಯರ ಅನುಮತಿ ಸಿಗಲಿಲ್ಲವೆಂದು ಪ್ರೀತಿಸಿದ ಡೊನಾಳೊಂದಿಗೆ ಓಡಿಹೋಗಿದ್ದ ಗಂಗೂಲಿ, ಹೊಸ ಹುದ್ದೆಯ ಒತ್ತಡಗಳನ್ನು ಭದ್ರವಾಗಿ ನಿಂತು ನಿಭಾಯಿಸುತ್ತಾರೆಂದು ನಿರೀಕ್ಷಿಸೋಣ. ಅವರ ಮಾತಿನಲ್ಲೇ ಹೇಳುವುದಾದರೆ, ಕಳೆದ ಮೂರು ವರ್ಷ ಬಿಸಿಸಿಐ ತುರ್ತುಪರಿಸ್ಥಿತಿ ಅನುಭವಿಸುತ್ತಿತ್ತು. ಈಗ ಆಯ್ಕೆಯಾಗಿರುವ ಹೊಸ ಪದಾಧಿಕಾರಿಗಳ ತಂಡ ದಿಟ್ಟ, ಸೂಕ್ತ, ಮತ್ತು ಪ್ರಾಮಾಣಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿ. ಪ್ರಜ್ವಲಿಸುತ್ತಿರುವ ಭಾರತೀಯ ಕ್ರಿಕೆಟನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವಂತೆ ವರ್ತಿಸಲಿ.