ಪತನದ ಅಂಚಿನಲ್ಲಿ ಸಿದ್ಧಾರ್ಥ ಸಾಮ್ರಾಜ್ಯ : ಕೆಫೆ ಕಾಫಿ ಡೇ ಸೋದರ ಸಂಸ್ಥೆಗಳಿಗಿಲ್ಲ ಮೊದಲಿದ್ದ ಮೌಲ್ಯ

ಸಿದ್ದಾರ್ಥ ಆತ್ಮಹತ್ಯೆ ನಂತರ ಅವರ ಪತ್ನಿ ಮತ್ತು ಮಗ ಕೆಫೆ ಕಾಫಿ ಡೇ ಮತ್ತು ಸೋದರ ಸಂಸ್ಥೆಗಳನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದರೂ ಮಾರುಕಟ್ಟೆ ಬೆಲೆಯ ಅರ್ಧ ಬೆಲೆ ಕೊಡುವವರೂ ಸಿಗುತ್ತಿಲ್ಲ!

ಪತನದ ಅಂಚಿನಲ್ಲಿ ಸಿದ್ಧಾರ್ಥ ಸಾಮ್ರಾಜ್ಯ : ಕೆಫೆ ಕಾಫಿ ಡೇ ಸೋದರ ಸಂಸ್ಥೆಗಳಿಗಿಲ್ಲ ಮೊದಲಿದ್ದ ಮೌಲ್ಯ

ಸಹಸ್ರಾರು ಕೋಟಿ ವ್ಯವಹಾರವಿದ್ದ ಕೆಫೆ ಕಾಫಿ ಡೇ ಹಾಗು ಸೋದರ ಸಂಸ್ಥೆಗಳ ಆಸ್ತಿಯನ್ನೀಗ ಅದರ ನೈಜ ಮೌಲ್ಯಕ್ಕಿಂತಲೂ ಕಡಿಮೆಗೆ ಕೇಳುತ್ತಿರುವುದರಿಂದ, ಅದನ್ನ ಮಾರಲೂ ಆಗದೆ, ಮಾರದೇ ಇರಲೂ ಆಗದೆ ಮಾಲೀಕ ವರ್ಗ ಪರಿತಪಿಸುತ್ತಿದೆ.

ಕಾಫಿ ಕಿಂಗ್ ಎನಿಸಿಕೊಂಡಿದ್ದ ಸಿದ್ದಾರ್ಥ ಹೆಗ್ಡೆ ಜುಲೈ 27 ರಂದು ಆತ್ಮಹತ್ಯೆಗೆ ಶರಣಾದರು. ಇದಕ್ಕೆ ಸಾಲದ ಶೂಲ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಾಟ ಕಾರಣ ಎಂಬುದೇ ಜನಜನಿತವಾಗಿದೆ. ಇವರು ಬರೆದಿದ್ದು ಎನ್ನಲಾಗುವ ಪತ್ರದ ಸತ್ಯಾಸತ್ಯತೆ ಬಗ್ಗೆ ತನಿಖೆ ಮುಂದುವರಿದಿದ್ದು, ಸಾವಿಗೇನು ಕಾರಣ ಎಂಬುದನ್ನ ಅರಿಯಲು ರಚಿಸಿರುವ ತಂಡ ಈ ತಿಂಗಳಾಂತ್ಯದಲ್ಲಿ ವರದಿ ಕೊಡಬೇಕಿದ್ದರೂ, ಅನಿವಾರ್ಯ ಕಾರಣದಿಂದ ಮತ್ತೊಂದು ತಿಂಗಳು ವಿಸ್ತರಣೆ ಪಡೆದಿದೆ. ಹೀಗಾಗಿ ಸಿದ್ದಾರ್ಥ ಒಡೆತನ ಕಂಪನಿಯನ್ನ ನೋಡಿಕೊಳ್ಳುತ್ತಿರುವ ಅವರ ಪತ್ನಿ ಮಾಳವಿಕಾ ಮತ್ತು ಪುತ್ರ ಅಮಾತ್ರ್ಯ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತಿಲ್ಲ.

ಮೊನ್ನೆಯಷ್ಟೇ ಚಿಕ್ಕಮಗಳೂರಿನಲ್ಲಿದ್ದ ಇವರ ಪೀಠೋಪಕರಣ ತಯಾರಿಕಾ ಕಾರ್ಖಾನೆ ಮುಚ್ಚಿದೆ. 243 ಕ್ಕೂ ಹೆಚ್ಚು ನಗರಗಳಲ್ಲಿರುವ 1750 ಕೆಫೆ ಕಾಫಿ ಡೇಯಲ್ಲಿ ಮೊದಲಿನಷ್ಟು ವ್ಯವಹಾರ ಆಗುತ್ತಿಲ್ಲ. ಹೀಗಾಗಿ ನಷ್ಟವಾಗುತ್ತಿರುವ ಕೆಫೆಗಳನ್ನ ದಿನಸಿ ಮಾರಾಟ ಮಳಿಗೆಯನ್ನಾಗಿ ಮಾರ್ಪಡಿಸುವಂಥದ್ದಕ್ಕೆ ಚಾಲನೆ ಕೊಡಲಾಗಿದೆ. ಸಿಡಿ ಗ್ಲೋಬಲ್, ಸಿಕಾರ್ ಲಾಜಿಸ್ಟಿಕ್, ಟಾಂಘಿಯಾ ಡೆವಲಪರ್, ವೇ2 ವೆಲ್ತ್, ಕಾಫಿ ಡೆ ಹಾಸ್ಪಿಟಾಲಿಟೀಸ್, ಗ್ಲೋಬಲ್ ವಿಲೇಜ್ ಟೆಕ್ನೋ ಪಾರ್ಕ್ ಸೇರಿದಂತೆ ಅನೇಕಾನೇಕ ಸೋದರ ಸಂಸ್ಥೆಗಳಲ್ಲಿ ಸಿದ್ದಾರ್ಥ ಕುಟುಂಬದ ಷೇರುಗಳೇ ಶೇ.53.93 ರಷ್ಟಿದೆ.  ಆಸ್ತಿ ಹೆಚ್ಚು ಇದ್ದರೂ, ಕಾಫಿ ಬೆಳೆಗಾರರಿಗೆ ಕೊಡಬೇಕಾದ ಬಾಬತ್ತೂ ಸೇರಿದಂತೆ ಮಾಡಲಾಗಿರುವ ಸಾಲ ತೀರಿಸಲಾಗದ ಸಂಕಷ್ಟವಿದ್ದು, ಇದರಿಂದ ಹೊರಬರುವುದಕ್ಕಾಗಿ ಆಸ್ತಿ ಮಾರಾಟಕ್ಕೆ ಯತ್ನಿಸುತ್ತಲೇ ಇದೆ.

ಆದರೆ ಮಾರುಕಟ್ಟೆ ಬೆಲೆಗಿಂತಲೂ ಅರ್ಧಕ್ಕೆ ಕೊಳ್ಳಲು ಖರೀದಿದಾರರು ಬರುತ್ತಿರುವುದರಿಂದ, ಆಸ್ತಿ ಮಾರಾಟವೂ ಸಲೀಸಾಗುತ್ತಿಲ್ಲ. ಕೋಕಾಕೋಲಾ, ಐಟಿಸಿ ಯಂಥ ಸಂಸ್ಥೆಗಳೊಡನೆ ಮಾತುಕತೆಗಳಾಗುತ್ತಿದ್ದರೂ ಯಾವುದೂ ಫಲ ಕೊಟ್ಟಿಲ್ಲ. ಗ್ಲೋಬಲ್ ವಿಲೇಜ್ ಟೆಕ್ ಪಾರ್ಕನ್ನು ಬ್ಲಾಕ್‍ಸ್ಟೋನ್ ಸಂಸ್ಥೆಗೆ 2800 ಕೋಟಿ ರು.ಗೆ ಮಾರುವ ಒಪ್ಪಂದವಾದರೂ ಅದಿನ್ನೂ ಪೂರ್ಣಗೊಂಡಿಲ್ಲ. ಪರಿಣಾಮವಾಗಿ ಆಸ್ತಿಯಿದ್ದರೂ ಅದನ್ನ ಮಾರಿ ಇರುವ ಸಾಲ ತೀರಿಸಿಕೊಂಡು, ಒಂದಷ್ಟು ಸಂಸ್ಥೆಗಳ ಸಾಮ್ರಾಜ್ಯವನ್ನೇ ಮುಂದುವರಿಸಿಕೊಂಡು ಹೋಗುವ ಎಂದರೂ ಸಾಧ್ಯವಾಗುತ್ತಿಲ್ಲ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಕೂಡ ಆಸ್ಥೆ ವಹಿಸಿ ಬೇರೆ ಬೇರೆ ಸಂಸ್ಥೆಗಳೊಡನೆ ವ್ಯವಹಾರ ಕುದುರಿಸಲು ಮಾರ್ಗೋಪಾಯಗಳನ್ನು ತೋರಿಸುತ್ತಿದ್ದರೂ, ಹೇಳಿಕೊಳ್ಳುವ ಮಟ್ಟಿಗೆ ಫಲ ಕೊಡುತ್ತಿಲ್ಲವಾದ್ದರಿಂದ, ಸಿದ್ದಾರ್ಥ ಕಟ್ಟಿದ್ದ ಸಾಮ್ರಾಜ್ಯವಿನ್ನೂ ಸಂಕಷ್ಟದಲ್ಲಿಯೇ ಇದೆ.