ಶಾಲೆಯ ದಾರಿಯಲ್ಲಿ ಸೂರ್ಯನೆಂಜಲು ಹುಳ

ಶಾಲೆಯ ದಾರಿ ಯಾಕೊ ಆ ವಯಸ್ಸಿನಲ್ಲಿ ನನಗೆ ವ್ಯಥೆ ತರಿಸುತ್ತಿತ್ತು. ಸುತ್ತಲಿನ ಕಾಡು, ಅಲ್ಲಿದ್ದ ನೇರಳೆ,ಸಳ್ಳೆ, ಜಡ್ಡ್ಮುಳ್, ಕಿಸ್ಕಾರ,ಸೂರಿಹಣ್ಣು ಗರ್ಚನಹಣ್ಣು, ಬುಗುರಿಕಾಯಿ, ಆರ್ಕಿಡ್-ಗುಬ್ಬಿಹೂ, ಸೀತಾದಂಡೆ ಈ ಎಲ್ಲವನ್ನೂ ಮೀರಿ ಅಥವಾ ಇವೆಲ್ಲವನ್ನೂ ಒಳಗೊಂಡು ಯಾವುದೋ ಶೋಕ ಆವರಿಸಿಬಿಡುತ್ತಿತ್ತು.

ಶಾಲೆಯ ದಾರಿಯಲ್ಲಿ ಸೂರ್ಯನೆಂಜಲು ಹುಳ

ನಾವು ನೀರು ತರುವ ದಾರಿಯಲ್ಲಿ ನಾನೊಬ್ಬಳೇ ಬರುವಾಗ ಕೇದಗೆ ಹಿಂಡಲಿನ ಕಡೆಯಿಂದ ಒಂದು ಹಾವು ಓಡಿಸಿಕೊಂಡು ಬರುತ್ತಿತ್ತು. ಹಳದಿ ಬಣ್ಣದ, ಕಪ್ಪು ಕಣ್ಣುಗಳ ಆ ಹಾವು ಮನುಷ್ಯರಂತೆ ನಡೆಯುತ್ತಾ ಅಟ್ಟಿಕೊಂಡು ಬಂದು ನಾನು ಓಡಲೂ ಆಗದೆ, ನಿಲ್ಲಲೂ ಆಗದೆ ಹೆದರಿಕೆಯಿಂದ ನಡುಗುತ್ತಿದ್ದಾಗ……

ನನ್ನ ಕಿರಿಯ ಪ್ರಾಥಮಿಕ ಶಾಲೆಯ ದಾರಿ ಗದ್ದೆಗಳು, ಕೆರೆ,ತೋಡು , ಸಂಕ,ಹಾಡಿ-ಅದರಲ್ಲಿನ ಬೃಹತ್ ಮರಗಳು, ಹಕ್ಕಲು, ಎಲ್ಲವನ್ನೂ ಒಳಗೊಂಡಿತ್ತು. ತೋಟ,ಕಾಡುಗಳ ಹಿನ್ನೆಲೆಯಲ್ಲಿ ಹಸಿರು ಗದ್ದೆಗಳ ನಡುವೆ ಹುದುಗಿಕೊಂಡ ಮನೆಯಿಂದ ಹೊರಟರೆ ಕ್ರಮಪ್ರಕಾರವಾಗಿ ಮೇಲಿನ ಎಲ್ಲವನ್ನೂ ದಾಟಿಕೊಂಡು ಶಾಲೆಯ ಬಯಲನ್ನು ತಲುಪಬೇಕಾಗಿತ್ತು. ಒಂದನೇ ತರಗತಿಗೂ ಒಂದು ವರ್ಷ ಮುಂಚೆಯೇ ಶಾಲೆಗೆ ಹೋದ ನನ್ನನ್ನು ಈ ದಾರಿಯ ಒಂಟಿತನ ದಿನವೂ ಕಾಡುತ್ತಿತ್ತು. ದಾರಿಯ ಕೆಲವೆಡೆ ಅಮ್ಮ ಮಾಡುತ್ತಿದ್ದ ಹೆಸರುಗಂಜಿಯನ್ನು ನೆನಪಿಸುವ ಪಾಚಿಮಣ್ಣಿನ ಪುಡಿ ಇರುತ್ತಿತ್ತು. ಇನ್ನು ಹಲವು ಕಡೆ ಕೆಂಪು ವೆಲ್ವೆಟ್ ತುಂಡುಗಳಂತೆ ಸೂರ್ಯನೆಂಜಲು ಹುಳಗಳು ಬಿದ್ದುಕೊಂಡಿರುತ್ತಿದ್ದವು. ರಕ್ತಕೆಂಪು ಬಣ್ಣದ ಈ ಹುಳಗಳು ಮಳೆ ಸ್ವಲ್ಪ ಕಡಿಮೆಯಾದ ಸಂದರ್ಭದಲ್ಲಿ ಇರುತ್ತಿದ್ದ ನೆನಪು. ಬಾನಿನ ಆಚೆಯ ಯಾವುದೋ ಲೋಕದಿಂದ ಬಂದ ಚಿಂತೆಯ ತುಣುಕುಗಳಾಗಿ, ಅರಿಯದೆ ಚೆಲ್ಲಿಹೋದ ರಕ್ತದ ಬಿಂದುಗಳಾಗಿ ಕಂಡು ಅವು ಭಯಪಡಿಸುತ್ತಿದ್ದವು. ಶಾಲೆಯ ದಾರಿ ಯಾಕೊ ಆ ವಯಸ್ಸಿನಲ್ಲಿ ನನಗೆ ವ್ಯಥೆ ತರಿಸುತ್ತಿತ್ತು. ಸುತ್ತಲಿನ ಕಾಡು, ಅಲ್ಲಿದ್ದ ನೇರಳೆ,ಸಳ್ಳೆ, ಜಡ್ಡ್ಮುಳ್, ಕಿಸ್ಕಾರ,ಸೂರಿಹಣ್ಣು ಗರ್ಚನಹಣ್ಣು, ಬುಗುರಿಕಾಯಿ, ಆರ್ಕಿಡ್-ಗುಬ್ಬಿಹೂ, ಸೀತಾದಂಡೆ ಈ ಎಲ್ಲವನ್ನೂ ಮೀರಿ ಅಥವಾ ಇವೆಲ್ಲವನ್ನೂ ಒಳಗೊಂಡು ಯಾವುದೋ ಶೋಕ ಆವರಿಸಿಬಿಡುತ್ತಿತ್ತು. ಮುಗಿಲಿಗೆ ಕಪ್ಪು ಕವಿದುಕೊಂಡು ಕಪ್ಪು ಕಾಡಿನ ಕಡೆಯಿಂದ ಆರ್ಭಟಿಸುತ್ತ ವರ್ಷದ ನಾಲ್ಕು ತಿಂಗಳುಗಳ ಕಾಲ ಎಡೆಬಿಡದೆ ಸುರಿಯುತ್ತಿದ್ದ ಮಳೆಯೂ ಏಕಾಂಗಿತನದ ಭಾವಕ್ಕೆ ಕಾರಣವಿರಬಹುದು.

ಅದು ಏಕೋಪಾಧ್ಯಾಯ ಶಾಲೆ. ಹಂಚಿನ ಮಾಡಿನ, ಎರಡು ಕಿಟಕಿಗಳ ಪುಟ್ಟ ಕೋಣೆಯೇ ನಮ್ಮ ಶಾಲೆ. ಮಾಡಿನ ನಾಲ್ಕು ಕಡೆ ಪಾರಿವಾಳಗಳ ಗೂಡು ಇತ್ತು. ಕಡ್ಡಿ, ಮುಳ್ಳುಗಳು, ಒಣಗಿದ ಗಟ್ಟಿ ನಾರುಗಳನ್ನೆಲ್ಲ ಸೇರಿಸಿ ಅವುಗಳು ಮನೆ ಕಟ್ಟಿಕೊಂಡಿದ್ದು ನಮಗೆ ಕೆಳಗಿನಿಂದಲೇ ಅಂದಾಜಾಗುತ್ತಿತ್ತು. ಪಾಠದ ಜೊತೆಗೆ ಪಾರಿವಾಳಗಳ' ಗೂ ಗೂ' ಧ್ವನಿಯನ್ನೂ ಕೇಳಿಸಿಕೊಳ್ಳುತ್ತಿದ್ದೆವು. ದಿನವೂ ಬೆಳಿಗ್ಗೆ ಶಾಲೆಯಲ್ಲಿದ್ದ ಏಳೆಂಟು ಬೆಂಚುಗಳ ಮೇಲೆಲ್ಲ ಅವುಗಳ ಗಲೀಜು, ಗೂಡಿನ ಕೆಲಕಡ್ಡಿಗಳು ಬಿದ್ದಿರುತ್ತಿದ್ದವು. ಹಾಗಾಗಿ ನಮ್ಮ ಮೊದಲ ಕೆಲಸವೇ ಅವುಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿ, ಗುಡಿಸಿ,ಕೊಡಪಾನಗಳಲ್ಲಿ ನೀರು ತಂದಿಡುವುದಾಗಿತ್ತು. ನೀರು ತರಲು ಮಾತ್ರ ಪಾತಾಳ ಸದೃಶ ಬಾವಿಯ ಬಳಿ ಹೋಗಬೇಕಾಗಿತ್ತು. ನಾವು ಮೂರು_ನಾಲ್ಕು ಜನ ಹುಡುಗಿಯರು ಶಾಲೆಯಿಂದ ಸ್ವಲ್ಪ ದೂರ ಸಮತಟ್ಟಿನ ಜಾಗದಲ್ಲಿ ನಡೆದು ಆಮೇಲೆ ಕಣಿವೆಯಂತಹ ಮಾರ್ಗದಲ್ಲಿ ಇಳಿದು ಕೇದಗೆ ಹಿಂಡಲಿನ ಮಧ್ಯೆ ಮುಚ್ಚಿಕೊಂಡಿದ್ದ ದೇವಸ್ಥಾನದ ಬಗ್ಗುಬಾವಿಯಿಂದ ನೀರೆಳೆದು ಹೊತ್ತುಕೊಂಡು ಬರುತ್ತಿದ್ದೆವು. ಆ ಕೇದಗೆ ಹಿಂಡಲೋ, ನೂರಾರು ಕೇದಗೆ ಗಿಡಗಳು ಬೆಳೆದು ದೊಡ್ಡ ಕೆರಯ ದಡದಲ್ಲಿ ಹಬ್ಬಿಕೊಂಡಿತ್ತು. ಅಲ್ಲಿ ದೇವರಹಾವು ಅಂದರೆ ಸರ್ಪನ ಹಾವು ಇದೆ ಎಂದು ಮಕ್ಕಳೆಲ್ಲ ಮಾತಾಡಿಕೊಳ್ಳುತ್ತಿದ್ದರು. ಇಂದಿಗೂ ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿರುವ ಚಿತ್ರಣವೆಂದರೆ ಈ ಬಾವಿ ಮತ್ತು ಕೇದಗೆ ಹಿಂಡಲಿನ ಕುರಿತಾಗಿ ನನಗೆ ಪದೇ ಪದೇ ಬೀಳುತ್ತಿದ್ದ ಒಂದು ಕನಸು. ನಾವು ನೀರು ತರುವ ದಾರಿಯಲ್ಲಿ ನಾನೊಬ್ಬಳೇ ಬರುವಾಗ ಕೇದಗೆ ಹಿಂಡಲಿನ ಕಡೆಯಿಂದ ಒಂದು ಹಾವು ಓಡಿಸಿಕೊಂಡು ಬರುತ್ತಿತ್ತು. ಹಳದಿ ಬಣ್ಣದ, ಕಪ್ಪು ಕಣ್ಣುಗಳ ಆ ಹಾವು ಮನುಷ್ಯರಂತೆ ನಡೆಯುತ್ತಾ ಅಟ್ಟಿಕೊಂಡು ಬಂದು ನಾನು ಓಡಲೂ ಆಗದೆ, ನಿಲ್ಲಲೂ ಆಗದೆ ಹೆದರಿಕೆಯಿಂದ ನಡುಗುತ್ತಿದ್ದಾಗ ಅಚಾನಕ್ ಎಚ್ಚರವಾಗುತ್ತಿತ್ತು. ಆದರೆ ಈ ಕನಸಿನ ವಿಷಯವನ್ನು ನಾನು ಯಾವತ್ತೂ ಮನೆಯಲ್ಲಿ ಹೇಳಲಿಲ್ಲ, ಹೇಳುವಷ್ಟು ಆತ್ಮೀಯ ವಾತಾವರಣವೂ ಇರಲಿಲ್ಲ.

ಶಾಲೆಯ ಕಿಟಕಿಯಲ್ಲಿ ನಾವೇ ನೆಟ್ಟಿದ್ದ ಪಚ್ಚೆಕದಿರು, ಅಬ್ಬಲಿಗೆ, ಗೊಂಡೆ, ಗೋರಟೆ, ರುದ್ರಗೋರಟೆ, ಮುತ್ತುಮಲ್ಲಿಗೆ ಮುಂತಾದ ಗಿಡಗಳು ಹೂಬಿಟ್ಟು ನಿಂತಿರುತ್ತಿದ್ದವು. ಶಾಲೆಯಲ್ಲಿ ಒಂದು ಮರದ ಪೆಟ್ಟಿಗೆ ಇತ್ತು. ನಮ್ಮ ಮಾಷ್ಟ್ರಿಗೆ ಕುರ್ಚಿ,ಟೇಬಲ್ ಇದ್ದವು. ನಮಗೆಲ್ಲ ಕುಳಿತುಕೊಳ್ಳಲು ತಗ್ಗಾದ ಬೆಂಚುಗಳಿದ್ದವು. ಆ ಸಣ್ಣ ಕೋಣೆಯಲ್ಲೇ ನಾಲ್ಕೂ ತರಗತಿಗಳು ನಡೆಯುತ್ತಿದ್ದವು. ಮಾಷ್ಟ್ರು ಒಂದು ಕ್ಲಾಸಿಗೆ ಪಾಠ ಮಾಡುತ್ತಿದ್ದರೆ ಉಳಿದ ಮಕ್ಕಳೂ ಕೇಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ನಾವು ನಮ್ಮಷ್ಟಕ್ಕೆ ಕುಳಿತು "ಕಷ್ಟಶಬ್ದ" ಬರೆಯುತ್ತಿರಬೇಕು ಎಂಬ ಮಾಷ್ಟರ ಆಣತಿಯನ್ನು ಪಾಲಿಸುತ್ತಿದ್ದೆವು.

ಶಾಲೆಯಲ್ಲಿ ದಿನವೂ ಓದಲು, ಬರೆಯಲು ಬಾರದ ಮಕ್ಕಳಿಗೆ ಪೆಟ್ಟು ಬೀಳುವಾಗ ಅವೆಲ್ಲ ನನಗೇ ಅನ್ನಿಸಿ ಭಯವಾಗುತ್ತಿತ್ತು. ಅಕ್ಷರವೊಂದೂ ಬಾರದ ತೀರಾ ದಡ್ಡ ಮಕ್ಕಳಿಗೆ ಕೋಲುಗಳು ಪುಡಿಯಾಗುವಂತೆ ಹೊಡೆಯುತ್ತಿದ್ದರು. ನಮ್ಮ ಮಾಷ್ಟರಿಗೆ ಭಯಂಕರ ಸಿಟ್ಟು. ಸ್ಲೇಟಿನಲ್ಲಿ ಅಂತಹ ಮಕ್ಕಳ ತಲೆಗೆ ಬಡಿಯುವುದು, ಆ ಮಕ್ಕಳ ತಲೆಯನ್ನೇ ನೇರವಾಗಿ ಗೋಡೆಗೆ ಹಿಡಿದು ಜಪ್ಪುವುದು ಎಲ್ಲವನ್ನೂ ಮಾಡುತ್ತಿದ್ದರು. ಆಗೆಲ್ಲ ನನ್ನ ಎದೆಯೊಳಗೆ ಹೇಳತೀರದ ಕೋಲಾಹಲವಾಗಿ ಕಣ್ಣೀರು ಹರಿಯುತ್ತಿತ್ತು. ಆ ದಡ್ಡ ಮಕ್ಕಳಂತು ನಿಂತಲ್ಲಿಯೇ ಮೂತ್ರ ಮಾಡಿಕೊಳ್ಳುತ್ತಿದ್ದರು. ಇವೆಲ್ಲ ನಿದ್ದೆಗಣ್ಣಿನಲ್ಲಿಯೂ ನೆನಪಾಗಿ ಮರುದಿನ ಶಾಲೆಗೆ ಹೋಗುವುದೇ ಬೇಡ ಎಂಬ ತಳಮಳವಾಗುತ್ತಿತ್ತು. ಆದರೆ ಮನೆಯಲ್ಲಿ ಬಯ್ಯುತ್ತಾರೆಂಬ ಕಾರಣಕ್ಕೆ ತಪ್ಪದೆ ಶಾಲೆಗೆ ಹೋಗಬೇಕಾಗಿತ್ತು. ನಾಲ್ಕನೆಯ ತರಗತಿಗೆ ಬಂದಾಗ ತುಸು ಹಾಯಾದ ವಾತಾವರಣವಿತ್ತು. ಶಾಲೆಯಲ್ಲಿ ದೊಡ್ಡ ತರಗತಿಯವರಾದ ನಮಗೆ ಗೌರವವಿತ್ತು.ಕ್ಲಾಸಿನಲ್ಲಿ ನಾವು ಇದ್ದದ್ದೇ ನಾಲ್ಕು ಮಂದಿ ಹುಡುಗಿಯರು ಮತ್ತು ಆರು ಜನ ಹುಡುಗರು. ಎಲ್ಲರೂ ಅನ್ಯೋನ್ಯವಾಗಿದ್ದೆವು. ಸಂಜೆ ಎದುರಿನ ಬಯಲಿನಲ್ಲಿ ಗುಬ್ಬಿಆಟ, ಎಂಜಲುಆಟ, ಟೊಂಕಾಲ್, ಮುಟ್ಟಾಟ ಆಡುತ್ತಿದ್ದೆವು.

ಒಂದು ಸೋಮವಾರ ಬೆಳಿಗ್ಗೆ ನನ್ನ ಭಯ ಹೆಚ್ಚಿಸುವ ಘಟನೆ ಕಾದಿತ್ತು. ಆವತ್ತು ಶಾಲೆಗೆ ಹೋದಾಗ ಜಗಲಿಯಲ್ಲಿ ಒಬ್ಬಳು ಹುಚ್ಚಿ ಮತ್ತವಳ ಗಂಟು ಮೂಟೆಗಳನ್ನು ಕಂಡೆವು. ಜಗಲಿಯೆಲ್ಲ ಹೊಲಸಾಗಿತ್ತು. ಮಾಷ್ಟ್ರು ಬರುವ ತನಕ ನಡುಗುತ್ತ ಕಾದೆವು. ಅವರು ಬಂದು ಜಗಲಿ ಶುಚಿಗೊಳಿಸುವ ವ್ಯವಸ್ಥೆ ಮಾಡಿದರು. ಹುಚ್ಚಿಯನ್ನು ಅವಳ ಗಂಟುಮೂಟೆ ಸಮೇತ ಹುಡುಗರು ಓಡಿಸಿದರು. ಆರೆ ಆ ಘಟನೆ ನನ್ನ ಸುಪ್ತಮನಸ್ಸನ್ನು ಪ್ರವೇಶಿಸಿ ಅಲ್ಲೇ ಕೂತುಬಿಟ್ಟಿತು. ಹುಚ್ಚಿಯಾದ ಅ ಹೆಣ್ಣಿನ ವ್ಯಥೆ, ಅನಾಥಸ್ಥಿತಿ ವಿಕಾರ ಚಿತ್ರಗಳನ್ನು ಬಿಡಿಸುತ್ತ ನನ್ನ ಪುಟ್ಟಮನಸ್ಸಿಗೆ ಘಾಸಿಮಾಡಿತು. ನಮ್ಮ ಶಾಲೆಯ ಎದುರು ಎರಡು ಗುಡ್ಡಗಳಿದ್ದವು. ಆ ಗುಡ್ಡಗಳಾಚೆ ನಾನೆಂದೂ ಕಂಡಿರದ ಹಳ್ಳಿಯಲ್ಲಿ ಹುಚ್ಚನೊಬ್ಬನಿದ್ದಾನೆ ಎಂಬ ವಿಚಿತ್ರ ಕತೆಗಳನ್ನು ನನ್ನ ಗೆಳೆಯ ಗೆಳತಿಯರು ಹೇಳುತ್ತಿದ್ದರು. ಅವನು ಓಡಿಸಿಕೊಢು ಬರುತ್ತಾನೆ, ಹೊಡೆಯುತ್ತಾನೆ ಎಂದೆಲ್ಲ ಅವರು ಹೇಳುವಾಗ  ಶಾಲೆಗೇ ಬಂದುಬಿಟ್ಟರೆ ಗತಿಯೇನು ಅನಿಸುತ್ತಿತ್ತು. ಗುಡ್ಡಗಳ ತುದಿಯಲ್ಲಿ ತಲೆಕೆದರಿಕೊಂಡ ಎರಡು ಮುರಿನ್ ಹಣ್ಣಿನ( ಪುನರ್ಪುಳಿ) ಮರಗಳಿದ್ದವು. ನನಗೆ ಅವೇ ಹುಚ್ಚನ ಪ್ರತೀಕಗಳಾಗಿ ಕಾಣುತ್ತಿದ್ದವು. ಅನೇಕ ಬಾರಿ ಆ ಮರಗಳನ್ನು ನೋಡಲಾಗದೆ ಕಣ್ಣುಮುಚ್ಚಿಕೊಳ್ಳುತ್ತಿದ್ದೆ.

ನಮ್ಮ ಹಳ್ಳಿಯ ಶಾಲೆ ನಾಲ್ಕನೇ ತರಗತಿಗೆ ಕೊನೆಯಾದ್ದರಿಂದ ಹಿರಿಯ ಪ್ರಾಥಮಿಕ ಶಾಲೆಗೆ ಹಾಲಾಡಿಗೆ ಹೋಗಬೇಕಾಯಿತು. ದಿನವು ಬೆಳಿಗ್ಗೆ ಮತ್ತು ಸಂಜೆ ಎರಡೂವರೆ ಮೈಲಿ ದೂರ ನಡೆಯುವುದು ಅನಿವಾರ್ಯವಾಯಿತು. ಆ ದಾರಿಯೂ ಕಾಡುಗಳು, ಗದ್ದೆಗಳು, ದೊಡ್ಡ ಸಂಕವನ್ನು ಹೊಂದಿತ್ತು. ಸಾಮಾನ್ಯವಾಗಿ ಇಬ್ಬರು ಮೂರು ಜನ ಹುಡುಗಿಯರು ಒಟ್ಟಾಗಿ ಹೋಗುತ್ತಿದ್ದೆವು. ಕೊಯ್ಕಾಡಿ ಎಂಬ ಊರಿನಲ್ಲಿ ದೊಡ್ಡ ತೋಡಿತ್ತು. ಆ ತೋಡಿಗೆ ಉದ್ದನೆಯ ಸಂಕವಿತ್ತು. ತೋಡಿನಲ್ಲಿ ಹೆಚ್ಚು ನೀರಿಲ್ಲದಿದ್ದರೂ ಆ ದೊಡ್ಡ ಸಂಕವನ್ನು ದಾಟುವುದು ಹೆದರಿಕೆಯ ವಿಷಯವೇ...ಆದರೆ ಮಳೆಗಾಲದಲ್ಲಂತೂ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆಯ ಮಧ್ಯೆಯೇ ಸಂಕ ದಾಟಬೇಕಿತ್ತು. ತುಂಬ ಆಳವಾಗಿದ್ದ ತೋಡಿನಲ್ಲಿ ಕೆನ್ನೀರ ಪ್ರವಾಹ ತುಂಬಿ ನೆರೆ ಬಂದಾಗ ಸಂಕದ ಮೇಲೂ ನೀರು ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ವಾಪಸ್ಸು ಮನೆಗೆ ಹೋಗಿ ಪ್ರಾಣ ಉಳಿಸಿಕೊಳ್ಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದ ನಾವುಗಳು 'ಶಾಲೆಗೆ ರಜೆಯಾಗಬಾರದು' ಎಂಬ ಕಾರಣಕ್ಕೆ ಆ ಸಂಕ ದಾಟುವ ಸಾಹಸಕ್ಕೆ ಮುಂದಾಗುತ್ತಿದ್ದೆವು.  ಶಾಲೆಗೆ ಒಂದೇ ಒಂದು ದಿನ ರಜೆ ಮಾಡುವುದೂ ಮಹಾ ಪಾಪದ ಕೆಲಸ ಎಂಬುದು ನನ್ನಂತ ವಿದ್ಯಾರ್ಥಿಗಳ  ಭಯವಾಗಿತ್ತು; ಜ್ವರ ಬಂದು ತಲೆತಿರುಗಿ ಬಿದ್ದರೂ ಸರಿ ಶಾಲೆಗೆ ರಜೆ ಹಾಕುತ್ತಿರಲಿಲ್ಲ. ಮನೆಯ ಹಿರಿಯರಿಗೂ ಈ ಕುರಿತು ಸ್ವತಂತ್ರ ಅಭಿಪ್ರಾಯ ಇದ್ದಂತಿರಲಿಲ್ಲ. ... ಒಂದುವೇಳೆ ಆ ಸಂಕ ಚೂರೂ ಕಾಣದಷ್ಟು ಮುಳುಗಿದರೆ ಇನ್ಯಾವುದೋ ಮೂರು_ ನಾಲ್ಕು ಮೈಲಿ ಸುತ್ತುಹಾಕಿ ತಲುಪುವಂತಹ ದಾರಿ ಹಿಡಿದು ಗಾಳಿ ಮಳೆಯಲ್ಲಿ ಪೂರ್ತಿ ನೆನೆದುಕೊಂಡು ಶಾಲೆ ಮುಟ್ಟುತ್ತಿದ್ದೆವು.

ಇಂಗ್ಲಿಷ್ ಹಿಂದಿಯಲ್ಲಿ ಕನಿಷ್ಠ ಅಕ್ಷರಜ್ಞಾನ, ಬಾಯಿಪಾಠ ಮಾಡಿ ಬರೆಯುವ ಜ್ಞಾನ ಇಷ್ಟನ್ನು ಕಲಿಸಿದ ಹಿರಿಯ ಪ್ರಾಥಮಿಕ ಶಾಲೆಯೂ ಏಳನೇ ಕ್ಲಾಸಿಗೆ ಕೊನೆಯಾಯಿತು. ಪ್ರೌಢಶಾಲೆಗೆ ಹೋಗಬೇಕಾದರೆ ಮನೆಯಿಂದ ಎರಡೂವರೆ ಮೈಲಿ ನಡೆದು ಮತ್ತೆ ಬಸ್ಸಿನಲ್ಲಿ ಹೋಗಬೇಕಿತ್ತು. ಆಗ ಇದ್ದ ಕೆಲವೇ ಕೆಲವು ಬಸ್ಸುಗಳು ಇಪ್ಪತ್ತು ಪೈಸೆಯ ಪಾಸಿನ ಮಕ್ಕಳೆಂದು ನಮ್ಮನ್ನು ಸಸಾರ ಮಾಡಿ ಬಸ್ಸು ಹತ್ತಿಸಿಕೊಳ್ಳುತ್ತಲೇ ಇರಲಿಲ್ಲ. ಏಜೆಂಟರು ನಮ್ಮನ್ನು ಬಸ್ಸಿಗೆ ಹತ್ತುವುದನ್ನು ತಡೆದು ರೈಟ್ ಹೇಳುತ್ತಿದ್ದರು. ಕೊನೆಗೊಮ್ಮೆ ಕನಿಷ್ಠ ನಿಲ್ಲಲಾದರೂ ಜಾಗ ಸಿಗುವ ಬಸ್ಸೊಂದಕ್ಕೆ ಹತ್ತಿ ಶಾಲೆ ಕಡೆ ಹೊರಟಾಗ ಆ ದಿನದ ದೊಡ್ಡ ಸಮಧಾನ ಅದೇ ಆಗಿರುತ್ತಿತ್ತು! ಪ್ರೌಢಶಾಲೆ ಎಂದರೆ ಹದಿಹರೆಯದ ದೈಹಿಕ ಗೊಂದಲಗಳ ಕಾಲ. ಶಾಲೆಯಲ್ಲಿ ಇದ್ದ ಪ್ರಬಂಧ, ಭಾಷಣಗಳಂತಹ ಸ್ಪರ್ಧೆಗಳು ನನ್ನಲ್ಲಿ ಒಂದಷ್ಟು ಉತ್ಸಾಹ ಹುಟ್ಟಿಸುತ್ತಿದ್ದವು. ಉಳಿದಂತೆ ತಿಂಗಳ ಮೂರು ಪ್ಲಸ್ ಮೂರು ದಿನಗಳನ್ನು ಹೇಗೆ ಕಳೆಯುವುದು ಎಂಬ ಚಿಂತೆಯೇ ತಲೆಮೇಲೆ ದೊಡ್ಡ ಮೂಟೆಯಂತೆ ಕುಳಿತಿರುತ್ತಿತ್ತು. ಋತುಸ್ರಾವ ಎಂದರೆ ಏನು? ಆ ದಿನಗಳನ್ನು ಎದುರಿಸುವ ಉಪಾಯಗಳೇನು ಎಂಬಂತಹ ಯಾವ ಸಣ್ಣ ಸೂಚನೆಯನ್ನೂ ಹಿರಿಯರು ಕೊಡದ ಕಾರಣ ಈ ವಿಷಯದಲ್ಲಿ ವಿಪರೀತ ಗೊಂದಲ, ಭಯ, ಕಷ್ಟಗಳನ್ನು ಎದುರಿಸಬೇಕಾಯಿತು.

ಪಿಯುಸಿವರೆಗಿನ ನನ್ನ ಶಾಲೆ ಕಾಲೇಜುಗಳು ಆತ್ಮವಿಶ್ವಾಸವನ್ನು ತುಂಬಿದ ನೆನಪುಗಳು ತೀರಾ ವಿರಳ; ಇದ್ದ ಅಲ್ಪಸ್ವಲ್ಪ ಧೈರ್ಯವನ್ನು ಕಸಿಯುವಂತೆ ಕುಸಿಯುವಂತೆ ªಮಾಡಿದ ಸಂದರ್ಭಗಳೇ ಪದರಪದರಗಳಾಗಿವೆ. ಆದರೆ ಸಮಾಧಾನದ ಮಾತೆಂದರೆ ತುಳಿದ ಮಣ್ಣು ಹದಗೊಳ್ಳುತ್ತದೆ.....ಚಿವುಟಿದ ಚಿಗುರು ಹಸಿರಾಗುತ್ತದೆ; ಗಿಡದ ಪೂರ್ತಿ ವಿನ್ಯಾಸ ಬದಲಾಗುತ್ತದೆ ಎಂಬ ಸತ್ಯದೊಂದಿಗೆ !!