ಅತ್ಯಾಚಾರ ಪ್ರಕರಣ : ನ್ಯಾಯಾಲಯದಲ್ಲಿ ಖುದ್ದು ಹಾಜರಿ ವಿನಾಯಿತಿಗೆ ಬಿಡದಿ ನಿತ್ಯಾನಂದ ಸುಳ್ಳು ಮಾಹಿತಿ ?

ಬಿಡದಿಯ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಹಾಗೆಯೇ ನ್ಯಾಯಾಂಗ ವಲಯವನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾನೆ.

ಅತ್ಯಾಚಾರ ಪ್ರಕರಣ : ನ್ಯಾಯಾಲಯದಲ್ಲಿ ಖುದ್ದು ಹಾಜರಿ ವಿನಾಯಿತಿಗೆ ಬಿಡದಿ ನಿತ್ಯಾನಂದ ಸುಳ್ಳು ಮಾಹಿತಿ ?

ಬಿಡದಿ ಧ್ಯಾನಪೀಠದ ಭಕ್ತೆ ಆರತಿರಾವ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ನಿತ್ಯಾನಂದ, ನ್ಯಾಯಾಲಯದ ಪರಿಧಿಯಿಂದ ಕಳೆದ ಒಂದೂವರೆ ವರ್ಷದ ಹಿಂದೆಯೇ ಪರಾರಿಯಾಗಿದ್ದರೂ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆದು ನ್ಯಾಯಾಂಗ ವಲಯವನ್ನೇ ಅಚ್ಚರಿಯಲ್ಲಿ ಮುಳುಗಿಸಿದ್ದಾನೆ.

ದಕ್ಷಿಣ ಅಮೆರಿಕದ ಈಕ್ವೆಡಾರ್ ಸಮೀಪ ಖಾಸಗಿ ದ್ವೀಪವನ್ನು ಖರೀದಿಸಿ ಅದನ್ನೇ ತನ್ನ ದೇಶವೆಂದು ಬಿಂಬಿಸುತ್ತಿರುವ ಬೆನ್ನಲ್ಲೇ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆದಿರುವ ವಿಚಾರವೂ ಮುನ್ನೆಲೆಗೆ ಬಂದಿದೆ. ಹಾಗೆಯೇ ನಿತ್ಯಾನಂದ ತನ್ನ ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ರಾಮನಗರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೇಗೆ ಪುರಸ್ಕರಿಸಿತು ಎಂಬುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಭಕ್ತೆ ಆರತಿರಾವ್ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇದೇ ಡಿಸೆಂಬರ್ 9ರಂದು ವಿಚಾರಣೆ ನಡೆಯಲಿದೆ. ಈ ವಿಚಾರಣೆಗೆ ಖುದ್ದು ಹಾಜರಾತಿಯಿಂದ ನಿತ್ಯಾನಂದನಿಗೆ ವಿನಾಯಿತಿ ದೊರೆತಿದೆ ಎಂದು ಸರ್ಕಾರಿ ಅಭಿಯೋಜಕ ರಘು ಅವರು 'ಡೆಕ್ಕನ್'ನ್ಯೂಸ್ ಗೆ ಖಚಿತಪಡಿಸಿದ್ದಾರೆ.

'ಸಾಕ್ಷಿದಾರರು ಹಾಜರಾದರೆ ವಿಚಾರಣೆಗೆ ಅಡ್ಡಿ ಪಡಿಸುವುದು ಮತ್ತು ಆರೋಪಿಯ ಗುರುತು ಹಚ್ಚುವಿಕೆ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ ಎಂಬ ವಕೀಲರ ಹೇಳಿಕೆಗೆ ಮನ್ನಣೆ ನೀಡಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ,' ಎಂದು ರಘು ಅವರು ಪ್ರತಿಕ್ರಿಯಿಸಿದರು.

'ನ್ಯಾಯಾಲಯದ ಪರಿಧಿಯೊಳಗೆ ಇರುವ ಆರೋಪಿ ಮಾತ್ರ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ತನ್ನ ವಕೀಲರಿಗೆ ಮನವಿ ಸಲ್ಲಿಸಬಹುದು. ಆ ಮನವಿಯನ್ನು ನ್ಯಾಯಾಲಯದ ಮುಂದೆ ವಕೀಲರು ಮಂಡಿಸಿ ವಿನಾಯಿತಿ ಪಡೆಯಬಹುದು,' ಎಂದು ಹಿರಿಯ ವಕೀಲರೊಬ್ಬರು ಡೆಕ್ಕನ್ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ನಿತ್ಯಾನಂದ ಕಳೆದ ಒಂದೂವರೆ ವರ್ಷದ ಹಿಂದೆಯೇ ರಾಮನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಪರಿಧಿಯಿಂದ ಓಡಿ ಹೋಗಿದ್ದರೂ ತಾನು ಇನ್ನೂ ನ್ಯಾಯಾಲಯದ ಪರಿಧಿಯೊಳಗೆ ಇರುವೆನೆಂದು ಅವರ ವಕೀಲರ ಮೂಲಕ ನ್ಯಾಯಾಲಯಕ್ಕೆ ಹೇಳಿದ್ದಾದರೂ ಹೇಗೆ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ನ್ಯಾಯಾಲಯವೇ ಈ ವಿಚಾರದ ಬಗ್ಗೆ ಗಂಭಿರವಾಗಿ ಗಮನಹರಿಸಿದರೆ ನಿತ್ಯಾನಂದನ ವಕೀಲರು ಮತ್ತು ಸರ್ಕಾರಿ ಅಭಿಯೋಜಕರು ಸಮಸ್ಯೆಯ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂಬ ಅಭಿಪ್ರಾಯಗಳೂ ನ್ಯಾಯಾಂಗದ ವಲಯದಲ್ಲಿ ಕೇಳಿ ಬರುತ್ತಿವೆ.

ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ನಿತ್ಯಾನಂದ ಸಲ್ಲಿಸಿದ್ದ ಅರ್ಜಿಯನ್ನು ರಾಮನಗರದ ಅಧೀನ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿದ್ದ ನಿತ್ಯಾನಂದ ಹೈಕೋರ್ಟ್ ಮೆಟ್ಟಿಲೇರಿದ್ದ.

8 ವರ್ಷಗಳಷ್ಟು ಹಳೆಯದಾದ ತಮ್ಮ ವಿರುದ್ಧದ ಅತ್ಯಾಚಾರ ಆರೋಪಗಳನ್ನು ಕೈಬಿಡುವಂತೆ ಸ್ವಾಮೀಜಿ, ಸಿವ ವಲ್ಲಭನೇನಿ, ರಾಗಿಣಿ ವಲ್ಲಭನೇನಿ, ಧನಶೇಖರ್ ಮತ್ತು ಜಮುನಾರಾಣಿ ಸಲ್ಲಿಸಿದ್ದ ಅರ್ಜಿಯನ್ನು 2018ರ ಫೆ.19ರಂದು ವಜಾಗೊಳಿಸಿದ್ದ ರಾಮನಗರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಆರೋಪ ನಿಗದಿಗೆ ಮಾಡುವಂತೆ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು 2017ರ ಡಿಸೆಂಬರ್ ನಲ್ಲಿ ಸಲ್ಲಿಸಿದ್ದ  ಅರ್ಜಿ ಕುರಿತು ನ್ಯಾಯಪೀಠ ವಿಚಾರಣೆ ಪೂರ್ಣಗೊಳಿಸಿತ್ತು. ಆದರೂ ಮತ್ತೆ ಹೊಸದಾಗಿ ವಿಚಾರಣೆ ನಡೆಸುವಂತೆ ಮಾಡಿದ್ದ ಮನವಿ ಕೂಡ ತಿರಸ್ಕೃತಗೊಂಡಿತ್ತು.

2010ರಲ್ಲಿ ನಿತ್ಯಾನಂದ ಸ್ವಾಮೀಜಿಯ ಕಾರು ಚಾಲಕನಾಗಿದ್ದ ಲೆನಿನ್ ಕುರುಪ್ಪನ್, ನಿತ್ಯಾನಂದ ಸ್ವಾಮೀಜಿ ಆರತಿರಾವ್ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಚೆನ್ನೈನ ಕೇಂದ್ರ ಅಪರಾಧ ತನಿಖಾ ವಿಭಾಗದ ಎದುರು ದೂರು ನೀಡಿದ್ದರು. ನಂತರ ಈ ದೂರು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಸಿಐಡಿ ಪೊಲೀಸರು 2010ರ ಅ.27ರಂದು ಸ್ವಾಮೀಜಿ ಮತ್ತಿತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಈತನ ವಿರುದ್ಧ ಐಪಿಸಿ 376(ಅತ್ಯಾಚಾರ) 377, 420(ವಂಚನೆ), 114(ಕ್ರಿಮಿನಲ್ ಅಪರಾಧ), 201( ತಪ್ಪು ಮಾಹಿತಿ) 120 ಬಿ (ಕ್ರಿಮಿನಲ್ ಸಂಚು) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.