ವೇಶ್ಯಾವಾಟಿಕೆ ಧಂದೆ, ರಹಸ್ಯ ತಾಣವೂ, ಸಿಕ್ಕಿಬಿದ್ದ ಮಾಸ್ಟರ್ ಮೈಂಡ್ ಎಸ್ಕೇಪ್ ಬಾಬುವೂ...

ಯಾವುದೋ ಕಾರಣಕ್ಕಾಗಿ ಧಂದೆಗೆ ಸಿಲುಕಿದ ಅದೆಷ್ಟೋ ಹುಡುಗಿಯರು, ದಾಳಿಯಾದಾಗ ಇವನು ರೂಪಿಸಿಕೊಟ್ಟ, ಗಾಳಿಬೆಳಕು ಇಲ್ಲದ, ಕೈಕಾಲು ಅಲುಗಾಡಿಸಲು ಆಸ್ಪದವೇ ಇಲ್ಲದ ಅಡಗುದಾಣದಲ್ಲಿ ಗಂಟೆಗಟ್ಟಲೆ ಕೂತು ಆರ್ತನಾದ ಗೈದಿದ್ದಾರೆ.ಇಂತಲ್ಲಿ ಅವಿತು ಉಸಿರಾಟಕ್ಕೂ ಕಷ್ಟವಾದವರನ್ನ ಒಡನಾಡಿಯವರೇ ಆಸ್ಪತ್ರೆಗೆ ಸೇರಿಸಿರುವಂಥ ಪ್ರಕರಣಗಳೂ ಇವೆ.ಮುಂದೇನು?

ವೇಶ್ಯಾವಾಟಿಕೆ ಧಂದೆ, ರಹಸ್ಯ ತಾಣವೂ, ಸಿಕ್ಕಿಬಿದ್ದ ಮಾಸ್ಟರ್ ಮೈಂಡ್ ಎಸ್ಕೇಪ್ ಬಾಬುವೂ...

ಎಷ್ಟೇ ತಡಕಾಡಿ ಹಿಡಿದರೂ, ಅಂತ್ಯವೆಂಬುದೇ ಕಾಣದ ಧಂದೆಗಳ ಪೈಕಿ ವೇಶ್ಯಾವಾಟಿಕೆಯದ್ದೂ ಅಗ್ರಸ್ಥಾನ.ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಲ ಹರಡಿರುವ ಇದನ್ನ ಬಗೆದಷ್ಟೂ ಭರ್ತಿಯಾಗುತ್ತಲೇ ಹೋಗುತ್ತಿರುವಂಥದ್ದು, ಆಗಾಗ್ಗೆ ಈ ಧಂದೆಯನ್ನ ಪತ್ತೆ ಹಚ್ಚುವಂಥದ್ದು ಸುದ್ದಿಯಾಗುತ್ತಿರುವುದು ಇದೆಯಾದರೂ, ಇಂಥ ದಾಳಿ ಸಮಯದಲ್ಲಿ ಹುಡುಗಿಯರು ಅಡಗಿಕೊಳ್ಳುವ ತಾಣಗಳ ರೀತಿಯೇ ಯಾವ ಸಿನಿಮಾದ ಖಳನಾಯಕನ ಡೆನ್ ಗಳಿಗಿಂತ ರಣರೋಚಕವಾದದು.ಮನೆಯ ಹಾಲ್ ಗೋಡೆಯಲ್ಲೇ ಕಬೋರ್ಡ್, ಮಧ್ಯದಲ್ಲಿ ಎಲ್ಇಡಿ ಟಿವಿ ಇಟ್ಟು ಇಡೀ ಗೋಡೆಯನ್ನಅಲಂಕರಣಗೊಳಿಸಿರಲಾಗುತ್ತೆ. ಅದು ನಿಜವಾದ ಗೋಡೆಯೇ ಅಲ್ಲ.

ಬದಲಿಗೆ ಮೂಲ ಗೋಡೆಯ ಮುಂದೆ ಒಂದರಿಂದಒಂದೂವರೆ ಅಡಿಯಷ್ಟು ಅಂತರ ಬಿಟ್ಟು ಕಟ್ಟಿರುವ ಗೋಡೆ ಅದಾಗಿದ್ದು, ಎಲ್ಇಡಿ ಟಿವಿ ಹಿಂದೆಯೇ ರಹಸ್ಯ ರಂಧ್ರಕೊರೆದಿರಲಾಗುತ್ತೆ. ದಾಳಿಯಾದ ಸಮಯದಲ್ಲಿ ಹುಡುಗಿಯರು ಈ ರಹಸ್ಯ ಕಿಂಡಿಯೊಳಕ್ಕೆ ನುಗ್ಗಿ, ಗೋಡೆ ಗೋಡೆಗಳ ನಡುವಣ ಅಂತರದಲ್ಲಿರುವ ಜಾಗದಲ್ಲಿ ಅವಿತಿಟ್ಟು ಕೂರುತ್ತಾರೆ.ಮನೆಯ ನೀರು ಹರಿದು ಹೋಗುವ ಬಚ್ಚಲು, ಅದು ನೆಲದ ಗುಂಡಿಗೆ ಹೋಗಲು ವಾಲ್ವ್ಗಳನ್ನ ಅಳವಡಿಸುವುದು ಸಾಮಾನ್ಯ.ಇದೇ ವಾಲ್ ನಲ್ಲಿಯೇ ಕಳ್ಳ ಕಿಂಡಿ ತೆರೆಯುವಂತೆ ಮಾಡಿ, ಅದರೊಳಕ್ಕೆ ಇಳಿದು ನೆಲದೊಳಗಿನ ಕಿಷ್ಕಿಂದೆಯಂಥ ಸುರಂಗದಲ್ಲಿ ಹುಡುಗಿಯರು ಬಚ್ಚಿಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ದಾಳಿಯಾದ ಸಂದರ್ಭದಲ್ಲಿ ಚರಂಡಿಗೆ ನೀರು ಬಿಡುವುದರಿಂದ ಆರಕ್ಷಕರ ಗಮನ ಅತ್ತ ಹೋಗುವುದೇ ಇಲ್ಲ.

ಮನೆಯೊಳಗಿನ ಶೌಚಾಲಯ ಗಬ್ಬೆದ್ದು ನಾತ ಬರುವಂತೆ ಉದ್ಧೇಶಪೂರ್ವಕವಾಗಿಯೇ ಮಾಡಿರಲಾಗುತ್ತೆ. ಆದರೆ ಕಮೋಡ್ಪಕ್ಕದಲ್ಲೇ ರಹಸ್ಯ ಕಿಂಡಿಯನ್ನ ಅಳವಡಿಸಿ ಯಾವುದೇ ಅನುಮಾನ ಬರದಂತೆ ಟೈಲ್ಗಳನ್ನ ಹಾಕಿರಲಾಗುತ್ತೆ. ಆ ಕಿಂಡಿಯೊಳಗೆನುಸುಳಿ ಬಚ್ಚಿಟ್ಟುಕೊಳ್ಳಲು ನೆಲಮಾಳಿಗೆ ಇರುತ್ತೆ.ಮನೆಯೊಳಗಿನ ಎರಡು ಗೋಡೆಗಳು ಸಂಧಿಸುವ ಸ್ಥಳದಲ್ಲೇ ಕಳ್ಳಕಿಂಡಿ, ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇಡುವ ಜಾಗದಿಂದಲೇ ನೆಲಮಾಳಿಗೆಗೆ ದಾರಿ, ನಾಲ್ಕನೇ ಅಂತಸ್ತಿನಿಂದ ತಳ ಮಹಡಿವರೆಗೂ ಸುರಂಗ....ಹೀಗೇ ನೂರಾರು ಬಗೆಯಅಡಗುತಾಣಗಳ ರಚನೆಯಾಗಿರುವುದು ಅನೇಕ ವೇಶ್ಯಾವಾಟಿಕೆ ಜಾಲ ಪತ್ತೆ ಹಚ್ಚಿರುವ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಂ ಅವರ ಗಮನಕ್ಕೆ ಬಂದಿದ್ದು ವಿಶೇಷವೇನಲ್ಲ.

ಆದರೆ ಅತಿ ಸೂಕ್ಷ್ಮವಾಗಿ ಗಮನಿಸಿದರೂ, ಅನುಮಾನವೇ ಬರದ ರೀತಿಯಲ್ಲಿ ಅಡಗುದಾಣ ಕಟ್ಟುವವನು ಯಾರು ಎಂಬುದೇ ಇವರ ಕುತೂಹಲ ಮತ್ತು ಗುಮಾನಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲೇ ಕೆಲ ತಿಂಗಳ ಹಿಂದೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು, ರೆಸಾರ್ಟ್ ಮತ್ತು ವಸತಿ ಗೃಹಗಳಲ್ಲಿ ಸುರಂಗಗಳು, ರಹಸ್ಯ ಅಡಗುತಾಣಗಳಿರುವಂಥವನ್ನ ಪತ್ತೆ ಹಚ್ಚಬೇಕು ಎಂದು ವರದಿಯೊಂದನ್ನ ಸಲ್ಲಿಸಿದ್ದರು. ಅದರ ಮೇರೆಗೆ ಆಯೋಗ ಆರಕ್ಷಕ ಇಲಾಖೆಗೆ ಇಂಥದ್ದನ್ನ ಪತ್ತೆ ಹಚ್ಚಲು ಕ್ರಮ ತೆಗೆದುಕೊಳ್ಳಿ ಎಂಬ ಸೂಚನೆಯನ್ನೂ ಕೊಟ್ಟಿದೆ.

ಕಳೆದ ಮುವ್ವತ್ತು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದ ವಿರುದ್ದ ಹೋರಾಡುತ್ತ ಬಂದಿರುವ ಒಡನಾಡಿಯ ಸ್ಟ್ಯಾನ್ಲಿ ಮತ್ತು ಪರಶುರಾಂ ಅವರಿಗೆ, ಇಡೀ ಧಂದೆಯ ಭಾಗವಾಗಿ ನಾನಾ ನಮೂನೆಯ ಅಡಗುತಾಣ ಕಟ್ಟಿಕೊಡುತ್ತಿರುವವನು ಯಾರುಎಂಬುದೇ ಬಿಡಿಸಲಾಗದ ಒಗಟಾಗಿತ್ತು. ಈ ಒಗಟಿಗೆ ಈಗ ಉತ್ತರ ಸಿಕ್ಕಿದೆ.

ಕೋಟ್ಯಂತರ ರೂಪಾಯಿ ಬಂಗಲೆಯೊಳಗೆ;ಹೆಚ್ಚು ಜನವಸತಿ ಇಲ್ಲದೆಡೆ ಮನೆಗಳನ್ನ ಬಾಡಿಗೆಗೆ ಪಡೆದು, ವೇಶ್ಯಾವಾಟಿಕೆ ಧಂದೆ ನಡೆಸುತ್ತಿರುವ ಅನೇಕ ಪ್ರಕರಣಗಳು ಪತ್ತೆಯಾಗಿವೆ. ಅಂಥ ಬಾಡಿಗೆ ಮನೆಗಳಲ್ಲೇ ಕಳ್ಳ ತಾಣಗಳನ್ನೂ ನಾಜೂಕಾಗಿಯೇ ರೂಪಿಸಿಕೊಂಡಿದ್ದೂ ಇದೆ.

ಅಂತೆಯೇ ಮೈಸೂರಿನಿಂದ ಹನ್ನೆರಡು ಕಿಮೀ ದೂರದಲ್ಲಿ ನಗುವಿನಹಳ್ಳಿ ಇದೆ, ಇದು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಗ್ರಾಮ. ಇಲ್ಲಿ ಹತ್ತು ಕೊಠಡಿಗಳಿರುವ ಬಂಗಲೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಕಟ್ಟಲಾಗಿದೆ. ಇದನ್ನ ಬಾಡಿಗೆಗೆ ಪಡೆದಿರುವವರು ವೇಶ್ಯಾವಾಟಿಕೆ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲಿ ದಾಳಿ ನಡೆಸಿದಾಗ ಯಾರೂ ಊಹಿಸಿರದ ರೀತಿಯಲ್ಲಿ ಎಸ್ಕೇಪ್ ಬಾಬು ಸಿಕ್ಕಿಬಿದ್ದಿದ್ದಾನೆ.

ಈ ಎಸ್ಕೇಪ್ ಬಾಬುವೇ ರಾಜ್ಯದಾದ್ಯಂತ 25 ವರ್ಷಗಳಿಂದಲೂ ಈ ಧಂದೆಯ ಪ್ರಮುಖ ಭಾಗವಾಗಿ, ರಹಸ್ಯ ತಾಣಗಳನ್ನನಿರ್ಮಿಸಿಕೊಡುತ್ತಿರುವ ಅತೀ ಚಾಣಾಕ್ಷ, ನಂಬಿಗಸ್ಥ, ನಾಜೂಕಿನ ಗಾರೆ ಕೆಲಸ ಮಾಡುವ ವ್ಯಕ್ತಿ. ಹರಿಹರ ತನ್ನೂರು ಎಂದೇಳಿಕೊಂಡಿದ್ದರೂ, ಇನ್ನೂ ಸತ್ಯ ಸಮಾಚಾರ ಹೊರಬರಬೇಕಿದೆ. ಜತೆಗೆ ಈತ ಇದುವರೆಗೆ ಎಲ್ಲೆಲ್ಲಿ ಇಂಥ ಅಡಗುದಾಣ ಕಟ್ಟಿಕೊಂಡಿದ್ದಾನೆ ಎಂಬುದನ್ನ ಬಿಚ್ಚಿಟ್ಟರೆ, ಹಲವು ಕಟ್ಟಡಗಳ ಒಳಗಿನ ಆರ್ತನಾದದ ಕತೆಗಳು ಬಯಲಿಗೆ ಬರಲಿವೆ.

ಎಸ್ಕೇಪ್ ಬಾಬು ಸುತ್ತ;

ಇಡೀ ಧಂದೆಯಲ್ಲಿ ಅತೀ ನಂಬಿಗಸ್ಥನಾಗಿರುವ ಎಸ್ಕೇಪ್ ಬಾಬು ಮೊದಲು ಮನೆ ಹಾಗು ಸುತ್ತಲ ಪರಿಸರವನ್ನ ನೋಡಿ, ಯಾವ ರೀತಿಯ ಅಡಗುದಾಣ ರೂಪಿಸಬಹುದು ಎಂಬ ಯೋಜನೆ ಹಾಕಿಕೊಳ್ಳುತ್ತಿದ್ದ. ರಹಸ್ಯ ಕಾಯ್ದುಕೊಳ್ಳುವುದಕ್ಕಾಗಿ ಸಹಾಯಕ್ಕೆ ಒಬ್ಬ ನನ್ನ ಮಾತ್ರವೇ ಇಟ್ಟುಕೊಳ್ಳುತ್ತಿದ್ದ. ಗಾರೆ ಕೆಲಸ ಇತ್ಯಾದಿಯೇನಿದ್ದರೂ ರಾತ್ರಿ ವೇಳೆ ಮಾತ್ರವೇ ಮಾಡುತ್ತಿದ್ದ. ಬೆಳಗ್ಗಿನ ಸಮಯದಲ್ಲಿ ಇವನ ಮೋಜು ಮಸ್ತಿಗೆ ಬೇಕಾದೆಲ್ಲವನ್ನ ಧಂದೆಯ ಕಿಂಗ್ಪಿನ್ ಒದಗಿಸುತ್ತಿದ್ದರು.

ಬಾಡಿಗೆಗೆ ಕೊಟ್ಟಿರುವ ಮನೆ ಮಾಲೀಕನಿಗೂ ಒಂಚೂರು ಅನುಮಾನ ಬರದಂತೆ ಸುರಂಗ, ನೆಲಮಾಳಿಗೆ, ಪರಾರಿಯಾಗುವ ಜಾಗ, ಕೃತಕ ಗೋಡೆ ನಿರ್ಮಾಣ ಇವೆಲ್ಲವನ್ನ ಮಾಡುವುದರಲ್ಲಿ ನಿಷ್ಣಾತನಾಗಿರುವ ಬಾಬು, ಇವೆಲ್ಲವನ್ನೂ ವಾಸ್ತು ಪ್ರಕಾರವೇ ಮಾಡುತ್ತಿದ್ದುದಷ್ಟೇ ವಿಶೇಷವಲ್ಲ, ನಿರ್ಮಾಣ ಪೂರ್ತಿಗೊಳಿಸಿದಾಗ ಒಳ್ಳೆ ದಿನ ನೋಡಿ, ಪೂಜೆ ಹವನ ಮಾಡಿ, ಇವತ್ತಿಂದ ಇದನ್ನಬಳಸಿ ಎಂದು ಬಿಟ್ಟುಕೊಡುವ ಸಂಪ್ರದಾಯತನವನ್ನೂ ಕಾಪಾಡಿಕೊಂಡು ಬಂದಿದ್ದಾನೆ ಎಂಬುದೇ ಅಚ್ಚರಿದಾಯಕ ಸಂಗತಿ.ಒಂದು ಅಡಗುತಾಣ ರೂಪಿಸಲು ಒಂದು ವಾರದಷ್ಟು ತೆಗೆದುಕೊಳ್ಳುವುದಕ್ಕೆ, ಆಯಾ ಮಾದರಿಯನ್ನಾಧರಿಸಿ ಒಂದೂವರೆ ಲಕ್ಷ ರೂಗಳಷ್ಟು ಹಣ ಪಡೆಯುತ್ತಿದ್ದ ಮಾಹಿತಿಗಳು ದೊರೆತಿವೆ.

ಯಾವುದೋ ಕಾರಣಕ್ಕಾಗಿ ಧಂದೆಗೆ ಸಿಲುಕಿದ ಅದೆಷ್ಟೋ ಹುಡುಗಿಯರು, ದಾಳಿಯಾದಾಗ ಇವನು ರೂಪಿಸಿಕೊಟ್ಟ, ಗಾಳಿಬೆಳಕು ಇಲ್ಲದ, ಕೈಕಾಲು ಅಲುಗಾಡಿಸಲು ಆಸ್ಪದವೇ ಇಲ್ಲದ ಅಡಗುದಾಣದಲ್ಲಿ ಗಂಟೆಗಟ್ಟಲೆ ಕೂತು ಆರ್ತನಾದ ಗೈದಿದ್ದಾರೆ.ಇಂತಲ್ಲಿ ಅವಿತು ಉಸಿರಾಟಕ್ಕೂ ಕಷ್ಟವಾದವರನ್ನ ಒಡನಾಡಿಯವರೇ ಆಸ್ಪತ್ರೆಗೆ ಸೇರಿಸಿರುವಂಥ ಪ್ರಕರಣಗಳೂ ಇವೆ.ಮುಂದೇನು?

ರಾಜ್ಯದಾದ್ಯಂತ ಅದೆಷ್ಟೋ ವೇಶ್ಯಾವಾಟಿಕೆ ಗೃಹಗಳಿಗೆ ಕಳ್ಳ ಸ್ಥಳಗಳನ್ನ ರೂಪಿಸಿಕೊಂಡಿರುವ ಮಾಸ್ಟರ್ ಮೈಂಡ್ ಎಸ್ಕೇಪ್ ಬಾಬು ಅನಿರೀಕ್ಷಿತವಾಗಿ ಸಿಕ್ಕಿಬಿದ್ದಿದ್ದಾನೆ. ಇವನಿಂದ ಸತ್ಯಗಳನ್ನ ಸಂಗ್ರಹಿಸಿಕೊಂಡರೆ ಆರಕ್ಷಕ ಇಲಾಖೆಗೆ, ಮಾನವ ಹಕ್ಕು ಆಯೋಗ ನೀಡಿರುವ ಸೂಚನೆ ಅನುಸರಿಸಲು ಸುಲಭವಾಗುತ್ತೆ. ವೇಶ್ಯಾವಾಟಿಕೆಗೆ ಬಳಸುತ್ತಿರುವ ಅದೆಷ್ಟೋ ಗೃಹಗಳು, ರೆಸಾರ್ಟ್ಗಳು, ವಸತಿಗೃಹಗಳ ರಹಸ್ಯ ತಾಣಗಳು ಬೆಳಕಿಗೆ ಬರಲಿವೆ.

ಅಂದಹಾಗೆ ಗೊತ್ತಿಲ್ಲದೆ ಮನೆ ಬಾಡಿಗೆಗೆ ಕೊಟ್ಟು, ಅದು ಇಂಥ ಧಂದೆಗೆ ಬಳಸುತ್ತಿದ್ದ ವಿಷಯ ಗೊತ್ತಾದ ನಂತರ, ಮಾಲೀಕರುಕೆಲವೊಂದಷ್ಟು ಮನೆಗಳನ್ನೇ ಒಡೆಸಿಹಾಕಿರುವುದುಂಟು. ಇನ್ನು ಕೆಲ ಕಡೆ ಇಂಥ ಸ್ಥಳಗಳಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ಕಲ್ಪನೆ ತಗುಲಿ ಹಾಕಿಕೊಂಡು ಹೆಚ್ಚು ಬಾಡಿಗೆಗೆ ಬೇರೆಯವರು ಬಂದಿರುವಂಥದ್ದೂ ಉಂಟು. ಇಂಥವೆರಡು ಲೆಕ್ಕಾಚಾರಗಳ ನಡುವೆ ಅದೆಷ್ಟೊ ಹೆಂಗಳೆಯರ ಅಳು, ಆರ್ತನಾದ, ಕೂಗು, ನೋವುಗಳ ಅಂದಾಜು ಯಾರಲ್ಲು ಬರುತ್ತಿಲ್ಲ.ತಮ್ಮ ಮುವ್ವತ್ತು ವರ್ಷಗಳ ಹೋರಾಟದಲ್ಲಿ ಗೊತ್ತೇ ಆಗದೆ, ನಿಶಾಚರಿಯಾಗಿ ಓಡಾಡುತ್ತಿದ್ದ ಎಸ್ಕೇಪ್ ಬಾಬು ಅಚಾನಕ್ ಆಗಿ ಸಿಕ್ಕಿಬಿದ್ದಿರುವ ಖುಷಿ ಸ್ಟ್ಯಾನ್ಲಿ ಮತ್ತು ಪರಶುರಾಂಗಿದ್ದು, ಆರಕ್ಷಕರೀಗ ಬಾಬು ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ., ಅವನ ಬಾಯಿ ಬಿಡಿಸಬೇಕಿದೆ.