ಕೊಲ್ಕೊತಾದಲ್ಲಿ ಗುಲಾಬಿಯ ರಂಗು

ಭಾರತೀಯ ಸೈನ್ಯದ ಪ್ಯಾರಾಟ್ರೂಪರ್ ಗಳು ಆಟದ ಮೈದಾನದಲ್ಲಿ ಇಳಿದು ಉಭಯ ತಂಡಗಳ ನಾಯಕರುಗಳಿಗೆ ಪಿಂಕ್ ಬಾಲನ್ನು ನೀಡಲಿದ್ದಾರೆ. ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಪಿಂಕ್ ಬಾಲ್ ಬಳಕೆಯಾಗುತ್ತಿರುವುದು ಇದೇ ಮೊದಲು. ಇದು ಭಾರತ ಸ್ಪರ್ಧಿಸುತ್ತಿರುವ 540 ನೇ ಟೆಸ್ಟ್ ಎಂಬುದೂ ವಿಶೇಷ.

ಕೊಲ್ಕೊತಾದಲ್ಲಿ ಗುಲಾಬಿಯ ರಂಗು

ಕೋಲ್ಕೊತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಭಾರತದ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಐವತ್ತು ಮತ್ತು ಇಪ್ಪತ್ತು ಓವರ್ ಗಳ ಪಂದ್ಯಗಳಿಗೆ ಸೀಮಿತವಾಗಿದ್ದ ಹಗಲು-ರಾತ್ರಿ ಆವಿಷ್ಕಾರವನ್ನು ಟೆಸ್ಟ್ ಕ್ರಿಕೆಟ್ಟಿಗೂ ವಿಸ್ತರಿಸಲು ಮುಖ್ಯವಾದ ಕಾರಣ ಕಡಿಮೆಯಾಗುತ್ತಿರುವ ದೀರ್ಘಾವಧಿ ಕ್ರಿಕೆಟ್ ನ ಜನಪ್ರಿಯತೆಯನ್ನು ಮತ್ತೆ ಹೆಚ್ಚಿಸಲು. ಉದಾಹರಣೆಗೆ, ಇತ್ತೀಚಿಗೆ ನಡೆದ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಗಳಿಗೆ ಪ್ರೇಕ್ಷಕರ ಕೊರತೆಯಿಂದಾಗಿ ಸ್ಟೇಡಿಯಂಗಳು ಬಿಕೋ ಅನ್ನುತ್ತಿದ್ದವು. ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಶುಕ್ರವಾರ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಪ್ರಸಕ್ತ ಸರಣಿಯ ಎರಡನೇ ಹಾಗು ಅಂತಿಮ ಟೆಸ್ಟ್ ನ ಮೊದಲ ನಾಲ್ಕು ದಿನಗಳಿಗೆ ಟಿಕೆಟ್ ಮಾರಾಟವಾಗಿಬಿಟ್ಟಿದೆ.  67000 ಪ್ರೇಕ್ಷಕರನ್ನು ಒಡಲಿನಲ್ಲಿ ಕೂಡಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈಡನ್ ಸ್ಟೇಡಿಯಂ ಅಲ್ಲದೇ ಕೋಲ್ಕತಾದ ಮುಖ್ಯ ಪ್ರದೇಶಗಳು ಮತ್ತು ಕಟ್ಟಡಗಳು ಸಿಂಗರಿಸಿಕೊಂಡು ಶುಕ್ರವಾರದ ಐತಿಹಾಸಿಕ ಟೆಸ್ಟನ್ನು ಬರಮಾಡಿಕೊಳ್ಳಲಿವೆ.

ಪೂರ್ವ ಪಾಕಿಸ್ತಾನವಾಗಿ ತುಂಡಾಗಿಹೋಗುವ ಮುನ್ನ  ಅವಿಭಾಜ್ಯ ಭಾರತದ ಭಾಗವೇ ಆಗಿದ್ದ ಇಂದಿನ ಬಾಂಗ್ಲಾದೇಶ ಪಕ್ಕದ ಪಶ್ಚಿಮ ಬಂಗಾಳದಲ್ಲಿ ಇಂತಹ ಕ್ರೀಡಾ ಇತಿಹಾಸದ ಮೈಲಿಗಲ್ಲನ್ನು ಮುಟ್ಟುತ್ತಿರುವುದು ರೋಮಾಂಚಕಾರಿಯೇ ಸರಿ.  ಕ್ರಿಕೆಟ್ ಜಗತ್ತಿನ ನವಪ್ರಬಲ ರಾಷ್ಟ್ರವಾದ ಭಾರತದ ವಿರುದ್ಧ ಸೆಣಸುವ ರೋಮಾಂಚನವೂ ಅದಕ್ಕೆ ಸೇರಿದೆ. ಬಾಂಗ್ಲಾದೇಶ ಟೆಸ್ಟ್ ರಾಷ್ಟ್ರವಾಗಿ ಪಾದಾರ್ಪಣೆ ಮಾಡಿದ್ದು 2000 ರಲ್ಲಿ, ಇದೇ ಈಡನ್ ಗಾರ್ಡನ್ಸ್ ನಲ್ಲಿ. ಅಂದಿನ ತಂಡದ ಕ್ರಿಕೆಟಿಗರೆಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅಷ್ಟೇ ಏಕೆ, ಪಂದ್ಯವನ್ನು ಸಾಂಪ್ರದಾಯಿಕ ಗಂಟೆಯನ್ನು ಮೊಳಗುವುದರ ಮೂಲಕ  ವಿದ್ಯುಕ್ತವಾಗಿ ಉದ್ಘಾಟಿಸಲು  ಬಾಂಗ್ಲಾ ಪ್ರಧಾನಮಂತ್ರಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯರನ್ನು ಆಹ್ವಾನಿಸಲಾಗಿದೆ.        

ಭಾರತೀಯ ಸೈನ್ಯದ ಪ್ಯಾರಾಟ್ರೂಪರ್ ಗಳು ಆಟದ ಮೈದಾನದಲ್ಲಿ ಇಳಿದು ಉಭಯ ತಂಡಗಳ ನಾಯಕರುಗಳಿಗೆ ಪಿಂಕ್ ಬಾಲನ್ನು ನೀಡಲಿದ್ದಾರೆ. ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಪಿಂಕ್ ಬಾಲ್ ಬಳಕೆಯಾಗುತ್ತಿರುವುದು ಇದೇ ಮೊದಲು. ಇದು ಭಾರತ ಸ್ಪರ್ಧಿಸುತ್ತಿರುವ 540 ನೇ ಟೆಸ್ಟ್ ಎಂಬುದೂ ವಿಶೇಷ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೋರಿಕೆಯ ಮೇರೆಗೆ  ಮೀರತ್ ನಲ್ಲಿರುವ ಚಿರಪರಿಚಿತ  ಕ್ರಿಕೆಟ್ ಪರಿಕರ ತಯಾರಿಕಾ ಕಂಪೆನಿಯಾದ ಎಸ್ ಜಿ (ಸಂಪರೆಲ್ಲಾ ಗ್ರೀನ್ ಲ್ಯಾಂಡ್ಸ್) ಈಗಾಗಲೇ 6 ಡಜನ್ ಪಿಂಕ್ ಬಾಲ್ ಗಳನ್ನು ಸಿದ್ಧವಾಗಿಸಿದೆ.

ಏಕದಿವಸೀಯ ಪಂದ್ಯಗಳು ಕ್ರಿಕೆಟ್ ಪಂದ್ಯಕ್ಕೆ ಹೊಸ ರಂಗನ್ನೇ ತಂದುಕೊಟ್ಟವು. ವೇಗವಾಗುತ್ತಲೇ ಹೋಗುವ ಜೀವನಶೈಲಿಗೆ ತಕ್ಕಂತೆ ಬದಲಾಗುತ್ತಿರುವ ಸನ್ನಿವೇಶಕ್ಕೆ ಕ್ರಿಕೆಟ್ ಕೂಡ ಹೊಂದಿಕೊಳ್ಳಬೇಕಾಯಿತು. ಟೀ-20 ಪಂದ್ಯಗಳು ಕ್ರಿಕೆಟ್ ಕೊಡುವ ಮಜಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡುಹೋಗುತ್ತಲೇ, ಡ್ರಾ ಎಂಬ ಪರಿಕಲ್ಪನೆಯನ್ನೇ ಕಿತ್ತುಹಾಕಿತು. ನಿರ್ದಿಷ್ಟ ಫಲಿತಾಂಶ ದೊರಕಿಸಿಕೊಟ್ಟರಷ್ಟೇ ಕ್ರಿಕೆಟ್ ಅಭಿಮಾನಿಗಳ ಆಸಕ್ತಿಯನ್ನು ಉಳಿಸಿಕೊಳ್ಳಬಹುದೆಂಬ ನಂಬಿಕೆಯೇ  ಈ ಬದಲಾವಣೆಗಳ ಮೂಲ. ಸ್ಪರ್ಧಿಗಳು ಸೋಲಿನಿಂದ ತಪ್ಪಿಸಿಕೊಳ್ಳಲು ಋಣಾತ್ಮಕ ನೀತಿಯನ್ನು ಅನುಸರಿಸುವುದನ್ನು ತಡೆಯಲು ಈ ಮಾರ್ಪಾಡುಗಳು ಅವಶ್ಯವಾಗಿತ್ತು, ಆಗಿವೆ.

ಕ್ರಿಕೆಟ್ ನ ನೂತನ ಅವಿಷ್ಕಾರಗಳೊಂದಿಗೆ  ಬ್ಯಾಟ್ಸ್ ಮ್ಯಾನ್ ಗಳ ಪ್ರಾಬಲ್ಯವೂ ಹೆಚ್ಚುತ್ತಿದ್ದು, ಬ್ಯಾಟ್ ತಯಾರಿಕಾ ತಂತ್ರಜ್ಞಾನವೂ ಆ ಪ್ರಾಬಲ್ಯಕ್ಕೆ ತನ್ನದೇ ಆದ ಗುರುತರ ಕಾಣಿಕೆ ನೀಡಿದ್ದು, ಟೆಸ್ಟ್ ಪಂದ್ಯಗಳು ನೀರಸ ಡ್ರಾನಲ್ಲಿ ಪರ್ಯಾವಸಾನವಾಗುವುದಕ್ಕೆ ಮುಖ್ಯವಾದ ಕಾರಣ. (ಪ್ರಬಲ ತಂಡಗಳು ಡ್ರಾದ ನೀರವತೆಯನ್ನು ತೊಡೆದುಹಾಕಿರುವುದು ಈ ನಿಯಮಕ್ಕೆ ಅಪವಾದ.)

ಹಗಲು-ರಾತ್ರಿ ಟೆಸ್ಟ್ ಗೆ ಸಂಸ್ಕರಿಸಿದ ಕ್ರಿಕೆಟ್ ನ ಖದರು ಒದಗಿಸಿಕೊಡುವ ಪ್ರಯತ್ನದ ಒಂದು ಮುಖ್ಯ ಭಾಗವೇ ಪಿಂಕ್ ಬಾಲ್. ಇದುವರೆವಿಗೂ ಟೆಸ್ಟ್ ಗಳಲ್ಲಿ ಬಳಸಲಾಗುತ್ತಿರುವ ಚೆಂಡುಗಳ ತಯಾರಕರು ಇಂಗ್ಲೆಂಡ್ ನ ಡ್ಯೂಕ್, ಮೆಲ್ಬರ್ನ್, ಆಸ್ಟ್ರೇಲಿಯಾದ ಕುಕಬೂರ, ಮತ್ತು ಭಾರತದ ಎಸ್ ಜಿ. ಕಳೆದ ಕಾಲು ಶತಮಾನದಲ್ಲಿ ಭಾರತದಲ್ಲಿ ನಡೆದಿರುವ ಎಲ್ಲ ಟೆಸ್ಟ್ ಗಳಿಗೂ ಎಸ್ ಜಿ ಚೆಂಡುಗಳನ್ನೇ ಬಳಸಲಾಗಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆದಿರುವ ಟೆಸ್ಟ್ ಗಳಿಗೆ ಡ್ಯೂಕ್ ಚೆಂಡುಗಳನ್ನೂ, ಭಾರತ, ಇಂಗ್ಲೆಂಡ್ ಮತ್ತು ವಿಂಡೀಸ್ ಗಳ ಹೊರಗೆ ನಡೆದಿರುವ ಎಲ್ಲಾ ಟೆಸ್ಟ್ ಗಳಲ್ಲಿ ಕೂಕಬೂರ ಚೆಂಡುಗಳನ್ನು ಬಳಸಲಾಗಿದೆ. ನಿಯಮಿತ ಓವರ್ ಕ್ರಿಕೆಟ್ಗ ಗೆ ಬಳಸಲಾಗುವ ಬಿಳಿಯ ಚೆಂಡನ್ನು ಕುಕಬೂರ ಕಂಪನಿ ವಿತರಿಸುತ್ತಾ ಬಂದಿದೆ.

ಕೆಂಪು, ಬಿಳಿ, ಮತ್ತು ಗುಲಾಬಿ (ಪಿಂಕ್) ಬಾಲ್ ಗಳನ್ನು ಕೂಲಂಕುಷವಾಗಿ ನೋಡೋಣ. ಮೊದಲಿಗೆ, ಎಸ್ ಜಿ, ಡ್ಯೂಕ್, ಮತ್ತು ಕುಕಬೂರ ತಯಾರಿಸುವ ಚೆಂಡುಗಳ ಮೂಲ ದ್ರವ್ಯ ಹಸುವಿನ ಚರ್ಮ. ಚೆಂಡಿನ ಎರಡೂ ಅರ್ಧ ಗೋಳಗಳ ಉದ್ದಕ್ಕೂ ಮೂರು ಹೊಲಿಗೆಗಳ ಸಾಲಿದ್ದು, ಡ್ಯೂಕ್ ಮತ್ತು ಎಸ್ ಜಿ ಬಾಲ್ ಗಳ ಹೊಲಿಗೆ ಕೈಯಿಂದ ಹೊಲಿಯಲ್ಪಡುತ್ತವೆ;  ಕುಕಬೂರ ಚೆಂಡಿನ ಒಳಗಿನ ಎರಡು ಸಾಲು ಮಾತ್ರ ಕೈಯಲ್ಲಿ ಹೊಲಿಯಲ್ಪಟ್ಟಿದ್ದು, ಉಳಿದ ನಾಲ್ಕು ಸಾಲುಗಳು ಯಂತ್ರದಿಂದ ಹೊಲಿಯಲ್ಪಡುತ್ತವೆ ಮತ್ತು ಆ ನಾಲ್ಕು ಸಾಲುಗಳು ಗೋಳವನ್ನು ಸಂಪೂರ್ಣವಾಗಿ ಸುತ್ತುವರಿಯುವುದಿಲ್ಲ. ಸೀಮ್ ಎಂದು ಕರೆಯಲಾಗುವ ಈ ಹೊಲಿಗೆಗಳ ಸಾಲು ಎಸ್ ಜಿ ಮತ್ತು ಡ್ಯೂಕ್ ಬಾಲ್ ಗಳಲ್ಲಿ ಹೆಚ್ಚು ಬಾಳಿಕೆ ಬರುತ್ತದೆ. ಕೈಯಿಂದ ಹೊಲಿಯುವ ಕಾರಣಕ್ಕಾಗಿ ಸೀಮ್ ಎದ್ದು ಕಾಣುತ್ತದೆ.

ಎಸ್ ಜಿ ತಯಾರಿಸುವ ಕೆಂಪು ಬಾಲಿಗೆ (ಮುಂಚೆಯೇ) ಬಣ್ಣಕಟ್ಟಿದ ತೊಗಲನ್ನು ಉಪಯೋಗಿಸಲಾಗುತ್ತದೆ. ಪಿಂಕ್ (ಮತ್ತು ಬಿಳಿ) ತೆಳುವಾದ ಬಣ್ಣವಾದ್ದರಿಂದ ಲೆದರ್, ಬಣ್ಣವನ್ನು ಯಶಸ್ವಿಯಾಗಿ ಹೀರಿಕೊಳ್ಳುವುದಿಲ್ಲ. ಆ ಕಾರಣಕ್ಕಾಗಿ ಬಣ್ಣವನ್ನು (ನಂತರದಲ್ಲಿ) ಲೇಪಿಸಲಾಗುತ್ತದೆ.  ಬಿಳಿ ಚೆಂಡಿನ ಉದ್ದೇಶವೇ ಬೌಲರ್-ಬ್ಯಾಟ್ಸ್ ಮ್ಯಾನ್ ಗಳ ಸಾಮರ್ಥ್ಯಗಳ ನಡುವೆ ಸಮತೋಲನವನ್ನು ಸ್ಥಾಪಿಸುವುದಾಗಿದ್ದು, ಅದು ಸ್ವಿಂಗ್ (ಮತ್ತು ವೇಗದ) ಬೌಲರ್ ಗಳಿಗೆ ರಿವರ್ಸ್ ಸ್ವಿಂಗ್ ಅನುವು ಮಾಡಿಕೊಡುವುದರ ಮೂಲಕ ಮತ್ತು ಸ್ಪಿನ್ನರ್ ಳಿಗೆ ಹೆಚ್ಚು ತಿರುಗಿಸುವಲ್ಲಿ ಸಹಾಯ ಮಾಡಿಕೊಡುವುದರ ಮೂಲಕ ಸಹಾಯ ಮಾಡುತ್ತದೆ. ಕೆಂಪು ಬಣ್ಣಕ್ಕೆ ಬಿಳಿಯ ಬಣ್ಣವನ್ನು ಮಿಶ್ರ ಮಾಡಿದರೆ ದೊರಕುವ ಮಿಶ್ರ ವರ್ಣವೇ ಗುಲಾಬಿ. ಅಂತೆಯೇ, ನೂತನ ಗುಲಾಬಿ ಬಣದ ಚೆಂಡು ಕೆಂಪು, ಬಿಳಿ ಚೆಂಡುಗಳ ತಂತ್ರಜ್ಞಾನದ ಮಿಶ್ರಣವಾಗಿದೆ.

ಕಳೆದ ವರ್ಷವೇ ಆಸ್ಟ್ರೇಲಿಯಾ, ಪ್ರವಾಸಿ ಭಾರತ ತಂಡಕ್ಕೆ ಹಗಲು-ರಾತ್ರಿ ಟೆಸ್ಟ್ ಒಂದನ್ನು ಅಡಿಲೇಡ್ ನಲ್ಲಿ  ಆಡಲು ಆಹ್ವಾನ ನೀಡಿತು. ಪೂರ್ವಸಿದ್ಧತೆಯಿಲ್ಲದೇ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುವುದನ್ನ ತಂಡದ ಕೋಚ್ ರವಿ ಶಾಸ್ತ್ರಿ ನಿರಾಕರಿಸಿ 18 ತಿಂಗಳುಗಳ ಕಾಲಾವಧಿ ಬೇಕೆಂದರು. ವಾಸ್ತವವೇನೆಂದರೆ, ಪಿಂಕ್ ಬಾಲನ್ನು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಮೂರು ಸೀಸನ್ ಗಳಿಂದಲೇ ಬಳಸಲಾಗುತ್ತಿದೆ. ಕುಲದೀಪ್ ಯಾದವ್, ದಿನೇಶ್ ಕಾರ್ತಿಕ್ ಮುಂತಾದ ಕ್ರಿಕೆಟಿಗರು ಆ ಚೆಂಡು ತನ್ನ ಉದ್ದೇಶವನ್ನು ಈಡೇರಿಸುತ್ತಿಲ್ಲವೆಂದು ಹೇಳಿದ್ದಲ್ಲದೇ ಸೂಯಾಸ್ತಮದ ವೇಳೆಯಲ್ಲಿ ಸ್ಪಷ್ಟವಾಗಿ ಗೋಚರವಾಗುವುದಿಲ್ಲವೆಂದು ದೂರಿದ ಹಿನ್ನೆಲೆಯಲ್ಲಿ ಈ ಸೀಸನ್ ನಲ್ಲಿ ಅದನ್ನು ಬಳಸಲಾಗಲಿಲ್ಲ

ಪ್ರಸಕ್ತ ಭಾರತೀಯ ತಂಡದಲ್ಲಿ ಪಿಂಕ್ ಬಾಲ್ ನಲ್ಲಿ ಆಡಿದ ಅನುಭವ ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ, ರೋಹಿತ್ ಶರ್ಮ ಮುಂತಾದ ಕೆಲವರಿಗೆ ಮಾತ್ರವೇ ಇದ್ದು, ಮೊದಲ ಟೆಸ್ಟ್ ನಲ್ಲಿ ಅಮೋಘ ಜಯ ಸಾಧಿಸಿದ ನಂತರದಲ್ಲೇ ತಂಡದ ಸದಸ್ಯರು ನೆಟ್ಸ್ ನಲ್ಲಿ ಪಿಂಕ್ ಬಾಲನ್ನು ಬಳಸುವಲ್ಲಿ ತರಬೇತಿ ಪಡೆದುಕೊಳ್ಳಲಾರಂಭಿಸಿದರು. ನಂತರ, ದೊರಕಿದ ಅಲ್ಪಾವಧಿಯಲ್ಲೇ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ಅಜಿಂಕ್ಯ ರಹಾನೆ, ಮಾಯಾಂಕ್ ಅಗರ್ವಾಲ್, ಪೂಜಾರ, ಮತ್ತು ಶಮಿ ಮತ್ತಷ್ಟು ಅಭ್ಯಾಸ ನಡೆಸಿದರು.

ಇಷ್ಟರ ನಡುವೆ, ಹೊಸ ಅನುಭವವನ್ನು ಪಡೆಯಲು, ಪಿಂಕ್ ಬಾಲ್ ಎಸೆಯುವ ಹೊಸ ಸವಾಲನ್ನು ಎದುರಿಸಲು ಉಭಯ ತಂಡಗಳ ಸದಸ್ಯರು ಆತಂಕ-ಮಿಶ್ರಿತ ಕಾತುರದಿಂದ ಎದುರು ನೋಡುತ್ತಿದ್ದಾರೆ.

ಈ ಸಂದರ್ಭದಲ್ಲಿ, ನ್ಯೂಜಿಲ್ಯಾಂಡ್ ಪ್ರವಾಸ ಮಾಡಿದ ಇಂಗ್ಲೆಂಡ್ ತಂಡ ಪಿಂಕ್ ಬಾಲ್ ಎದುರಿಸುವಲ್ಲಿ (ಮೊದಲ ಇನ್ನಿಂಗ್ಸ್ ನಲ್ಲಿ) ವಿಫಲವಾಗಿ ಕೇವಲ 68 ರನ್ ಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡ ದಾಖಲೆ ಸ್ಮರಣಾರ್ಹ. ಯಶಸ್ಸು ಗಳಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಆಸ್ಟ್ರೇಲಿಯಾ ಈವರೆವಿಗೂ ಆಡಿರುವ ಐದೂ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನೂ ಗೆದ್ದಿದೆ.