ಕತ್ತಲಿನಿಂದ ಬೆಳಕು?!

ಕತ್ತಲಿನಿಂದ ಬೆಳಕು?!

ರಾತ್ರಿಯೆಂದರೆ ಕತ್ತಲು, ಸ್ವಲ್ಪ ಬೆಳಕಿದ್ದರೆ ಚೆನ್ನಿತ್ತು ಅನಿಸುವುದು ಸಹಜ. ಅದೇ ರಾತ್ರಿಯ ಕತ್ತಲಿನಿಂದ ಬೆಳಕು ಪಡೆಯುವ ಯೋಚನೆ ಅದ್ಭುತ. ಹೌದು ಆ ಒಂದು ಯೋಚನೆ ವಿಜ್ಞಾನಿ ಅಶ್ವಥ್ ರಾಮನ್ ರವರಿಗೆ 2013 ನೇ ಇಸವಿಯಲ್ಲೇ ಬಂದು ಅಂತಹದೊಂದು ಕೆಲಸಕ್ಕೆ  ಕೈ ಹಾಕಿದರು. ಹೇಗೆ ಬಿಸಿಲಿನಿಂದ ಸೋಲಾರ್ ಪ್ಯಾನೆಲ್ ಗಳು ವಿದ್ಯುತ್ ಉತ್ಪಾದಿಸುತ್ತವೆಯೋ ಹಾಗೆ ಕತ್ತಲಿನಿಂದ ವಿದ್ಯುತ್ ಉತ್ಪಾದನೆ ಮಾಡುವಂತಿದ್ದರೆ ಎಂಬ ಅವರ ಯೋಚನೆ ಈಗ ಸಾಕಾರ ಗೊಂಡಿದೆ. 

ಈ ಗುರುವಾರ ಪ್ರಕಟವಾದ ಜರ್ನಲ್ ಜೌಲ್ ನ ಸಂಶೋಧನಾ ವರದಿಯ ಪ್ರಕಾರ ಡಾ || ರಾಮನ್ ರವರು ಕತ್ತಲಿನಿಂದ ವಿದ್ಯುತ್ ಉತ್ಪಾದಿಸುವ ಬಗೆಯನ್ನು ತೋರಿಸಿದ್ದಾರೆ. ಅವರ ಸಾಧನವು ರೇಡಿಯೇಟಿವ್ ಕೂಲಿಂಗ್ ತತ್ವವನ್ನು ಆಧರಿಸಿದೆ. ಹೇಗೆ ಸಂಜೆ ಹೊತ್ತು ಕಟ್ಟಡಗಳು, ಪಾರ್ಕ್ ಗಳು ಸುತ್ತಲಿನ ವಾತಾವರಣಕ್ಕಿಂತಲೂ ಬಹು ಬೇಗ ತಂಪಾಗುತ್ತವೆಯೋ ಹಾಗೆ ರಾಮನ್ ರ ಸಾಧನವು ಅದರ ಉಷ್ಣತೆಯನ್ನು ಅನಿಯಮಿತವಾಗಿ ಹೊರ ಚೆಲ್ಲುತ್ತದೆ. ಸಾಧನದ  ಮೇಲ್ಭಾಗ ತಂಪಾಗಿದ್ದರೆ ಕೆಳಭಾಗ ಬಿಸಿಯಾಗಿರುತ್ತದೆ. ಈ ಉಷ್ಣತೆಯಲ್ಲಿನ ಏರುಪೇರೇ ವಿದ್ಯುತ್ ಉತ್ಪಾದಿಸಲು ಕಾರಣವಾಗುತ್ತದೆ. 

ತಮ್ಮ ಸಂಶೋಧನಾ ಪ್ರಬಂಧದಲ್ಲಿ ಡಾ || ರಾಮನ್ ಅವರೇ ಹೇಳಿರುವಂತೆ ಹೀಗೆ ಉತ್ಪಾದಿಸಲಾದ ವಿದ್ಯುತ್ ಅನ್ನು ವೋಲ್ಟೇಜ್ ಕನ್ವರ್ಟರ್ ಗೆ ಜೋಡಿಸಿ ಒಂದು ಬಿಳಿ ಎಲ್ ಇ ಡಿ ಬಲ್ಬನ್ನು ಹೊತ್ತಿಸಬಹುದಾಗಿದೆ. ಅವರ ಪ್ರಕಾರ ತಂಪಾಗುವುದೇ ಅವರ ಸಾಧನದ ವಿಶೇಷತೆಯಾಗಿದೆ ಮೆಸ್ಸಾಚುಸೆಟ್ಸ್  ಇನ್ಸ್ಟಿಟ್ಯೂಟ್  ಆಫ್  ಟೆಕ್ನಾಲಜಿ ಯ  ಮೆಟೀರಿಯಲ್ಸ್  ವಿಜ್ಞಾನಿ ಯಾದ ಜೆಫ್ರಿ. ಸಿ. ಗ್ರೋಸ್ಸ್ಮನ್ ರವರು ಫಾಸ್ಸಿವ್ ಕೂಲಿಂಗ್ ಮತ್ತು ಸೌರ ತಂತಜ್ಞಾನ ಅಭ್ಯಸಿಸಿದ್ದು, ಅವರು ಹೇಳುವಂತೆ ಈ ಅನ್ವೇಷಣೆಯು ವಿಸ್ಮಯಕಾರಿಯಾಗಿದ್ದು, ರಾತ್ರಿಯ ಸಮಯದಲ್ಲಿ ಕಡಿಮೆ ವಿದ್ಯುತ್ ನ್ನು ಉಪಯೋಗಿಸಬಹುದಾದ ಉಪಕರಣಗಳನ್ನು ಸೃಷ್ಟಿಸಬಹುದು ಎಂದು. 

ಥೆರ್ಮೋಡೈನಮಿಕ್ಸ್  ನಿಯಮದ ಪ್ರಕಾರ ಪ್ರತಿಯೊಂದು ವಸ್ತುವೂ ಉಷ್ಣತೆಯನ್ನು ಹೊರಸೂಸುತ್ತದೆ. ರಾತ್ರಿಯಲ್ಲಿ ಭೂಮಿಯ ಒಂದು ಭಾಗವು ಸೂರ್ಯನಿಂದ ದೂರವಿದ್ದು, ಅದರ ಕಟ್ಟಡಗಳು ಮತ್ತು ಬೀದಿಗಳು ತಣ್ಣಗಾಗುತ್ತವೆ. ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ಮೋಡಗಳು ಆಕಾಶದಲ್ಲಿ ಇಲ್ಲದೆ ಹೋದರೆ ಭೂಮಿಯ ಮೇಲಿನ ವಸ್ತುಗಳು ಅತಿ ವೇಗವಾಗಿ ಉಷ್ಣತೆಯನ್ನು ಕಳೆದುಕೊಂಡು ಸುತ್ತಲಿನ ಗಾಳಿಗಿಂತಲೂ ತಂಪಾಗಿ ಬಿಡುತ್ತವೆ. ಮೋಡವಿಲ್ಲದ ಆಕಾಶವು ಭೂಮಿಯ ಮೇಲಿನ ಉಷ್ಣತೆಯು ಅತಿವೇಗವಾಗಿ ಹರಿದು ಹೋಗುವಂತೆ ಮಾಡುತ್ತದೆ. 

ಈ ವಿದ್ಯಮಾನ ಹೊಸದೇನಲ್ಲ. ಈ ವಿಚಾರವನ್ನು ಆಧರಿಸಿ ಆರುಸಾವಿರ ವರ್ಷದ ಹಿಂದೆಯೇ, ಈಗಿನ ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿದ್ದ ಜನರು ಯಾಕ್ಚಲ್ ಎಂಬ ಜೇನುಗೂಡಿನಾಕೃತಿಯಂತಾದನ್ನು, ಮಂಜುಗಡ್ಡೆ ಪಡೆಯಲು ಮತ್ತು ಶೇಖರಿಸಲು ಮರಳುಗಾಡಿನಲ್ಲಿ ಬಳಸುತ್ತಿದ್ದರು. ಇದು ಫಾಸ್ಸಿವ್ ಕೂಲಿಂಗ್ ಎಫೆಕ್ಟ್ ಅನ್ನು ಆಧರಿಸಿ ರೂಪಿಸಿದ್ದ ಮಾದರಿಯಾಗಿತ್ತು. ಆಧುನಿಕ ವಿಜ್ಞಾನಿಗಳು ಭೂಮಿಯ ಮೇಲಿನ ಹಗಲು ರಾತ್ರಿಯಾಟದ ಉಷ್ಣತೆಯಲ್ಲಾಗುವ ಏರುಪೇರಿನಿಂದ ಹೇಗೆ ಶಕ್ತಿಯನ್ನು ಪಡೆಯಬಹುದೆಂದು, ಅಧ್ಯಯನ ನಡೆಸಿದ್ದರಾದರೂ ಅದು ಪುಸ್ತಕಕ್ಕೆ ಸೀಮಿತವಾಗಿತ್ತು. 

ಡಾ || ರಾಮನ್ ರವರ ಸಾಧನವು ಹಾಕಿ ಯ ಪುಕ್ ನಂತಿದ್ದು ಒಳಗೆ ಚ್ಯಾಫಿಂಗ್ ಡಿಶ್ ಅನ್ನು ಒಳಗೊಂಡಿದೆ. ಈ ಪುಕ್ ಪೊಲಿಸ್ಟ್ರಿನ್ ಡಿಸ್ಕ್ ಆಗಿದ್ದು ಒಳಭಾಗದಲ್ಲಿ ಕಪ್ಪು ಬಣ್ಣ ಬಳಿಯಲ್ಪಟ್ಟಿದೆ. ಹಾಗೂ ಅದನ್ನು ಗಾಳಿಯಿಂದ ತಡೆಯಲು ಬಳಸುವ ಶೀಲ್ಡ್ ನಿಂದ ಮುಚ್ಚಲಾಗಿದೆ. ಮಧ್ಯದಲ್ಲಿ ಥೆರ್ಮೋ ಎಲೆಕ್ಟ್ರಿಕ್ ಜನರೇಟರ್ ಅಳವಡಿಸಿದ್ದು, ಇದು ಉಷ್ಣತೆಯಲ್ಲಾಗುವ ಏರಿಳಿತದ ಮೇಲೆ ವಿದ್ಯುತನ್ನು ಉತ್ಪಾದಿಸುತ್ತದೆ. ಇದು ವಾತಾವರಣದಲ್ಲಿರುವ ಉಷ್ಣತೆಯನ್ನು ಸಂಪನ್ಮೂಲವಾಗಿ ಬಳಸುತ್ತಿದ್ದು,  ಇದರ ಪ್ರಸ್ತುತ ವಿದ್ಯುತ್ ಉತ್ಪಾದನಾ ಮಟ್ಟವು ಕಡಿಮೆಯಿದೆ. ಇದು 25 ಮಿಲಿ ವ್ಯಾಟ್ ನಷ್ಟು ಉತ್ಪಾದಿಸುತ್ತದೆ. ಆದರೆ ಅನೇಕ ಪರಿಣಿತರ ಪ್ರಕಾರ ಇದನ್ನು ರೂಪಿಸಿದ ವೆಚ್ಚವು ಕಡಿಮೆಯಿರುವುದು ಬಹಳ ಮುಖ್ಯವಾಗಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮಗೊಂಡು ವಿದ್ಯುತ್ ಉತ್ಪಾದಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ. 

2014 ರಲ್ಲಿ ಹಾರ್ವರ್ಡ್ ನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನ ಪ್ರೊಫೆಸರ್ ಫೆಡೆರಿಕೊ ಕ್ಯಾಪಸ್ಸೋ ನೇತೃತ್ವದ ಸಂಶೋಧನಾ ತಂಡವು ಒಂದು ಚದರ ಮೀಟರ್ ತಂಪು ಸ್ಥಳದಿಂದ 4 ವ್ಯಾಟ್ ಗಳಷ್ಟು ವಿದ್ಯುತ್ ಮತ್ತು ಸೋಲಾರ್ ಪ್ಯಾನೆಲ್ ನಿಂದ  ಸೂರ್ಯನ ಬೆಳಕಿನಲ್ಲಿ 200 ವ್ಯಾಟ್ ವಿದ್ಯುತ್ ಪಡೆಯಬಹುದೆಂದು ಅಂದಾಜು ಮಾಡಿತ್ತು. ಡಾ || ರಾಮನ್ ಹೇಳುವಂತೆ ಈ ಥೆರ್ಮೋ ಎಲೆಕ್ಟ್ರಿಕ್ ಸಾಧನವು ಸೌರಶಕ್ತಿ ಚಾಲಿತ ಲೈಟ್ ಗಳಲ್ಲಿ, ಬ್ಯಾಟರಿ ಬದಲಿಸಲು ಸಾಧ್ಯವಾಗದ  ಬೀದಿ ದೀಪಗಳಲ್ಲಿ, ಎಲೆಕ್ಟ್ರಿಕಲ್ ಗ್ರಿಡ್ ನಿಂದ ದೂರವಿರುವ  ಸ್ಥಳಗಳಲ್ಲಿ ಉಪಯೋಗಿಸಬಹುದು ಎಂದು. ಏನೇ ಆದರೂ ವಿದ್ಯುತ್ ಉತ್ಪಾದಿಸುವ ಪ್ರಮಾಣವು ಕಡಿಮೆಯಿದ್ದರೂ ಕೂಡಾ ಸೂರ್ಯನ ಬೆಳಕಿಲ್ಲದಿದ್ದರೆ ಸೋಲಾರ್ ಪ್ಯಾನೆಲ್ ಗಳು ವಿದ್ಯುತ್ ಉತ್ಪಾದಿಸಲಾರವು. ಬೆಳಕಿಲ್ಲದಿದ್ದರೆ ಗಾಳಿಯ ತೀವ್ರತೆಯು ಕಡಿಮೆ ಯಾಗಿ ವಿಂಡ್ ಮಿಲ್ ಗಳು ಕೆಲಸ ಮಾಡಲಾರವು. ಕತ್ತಲಲ್ಲಿ ಬೆಳಕು ಉತ್ಪಾದಿಸುವುದು ವಿಸ್ಮಯದ ಸಂಗತಿ.