ಈರುಳ್ಳಿ ಜತೆಯೇ ಕೈ ಸುಡುತ್ತೆ ಎಣ್ಣೆ

ದಿನದಿಂದ ದಿನಕ್ಕೆ ಈರುಳ್ಳಿ ದರ ಏರುತ್ತಿರುವಾಗಲೇ ಇದರ ಜೊತೆ ಅಡುಗೆ ಎಣ್ಣೆ ಹಾಗೂ ಅಡುಗೆ ಅನಿಲವು ಸೇರಿ ಗ್ರಾಹಕರಿಗೆ ಇನ್ನಷ್ಟು ಕೈ ಸುಡುವಂತ ಪರಿಸ್ಥಿತಿ ಉಂಟಾಗಿದೆ. ಮಲೇಷಿಯಾ ಹಾಗೂ ಇಂಡೋನೇಷಿಯಾದಲ್ಲಿಗ ಬಯೋ ಪ್ಯೂಯಲ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದರಿಂದ ಗ್ರಾಹಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಈರುಳ್ಳಿ ಜತೆಯೇ ಕೈ ಸುಡುತ್ತೆ ಎಣ್ಣೆ

ಸಚಿವರಾದವರು ಏನನ್ನು ತಿನ್ನಲ್ಲವೋ ಅಂಥ ಆಹಾರ ಪದಾರ್ಥದ ಬೆಲೆ ಏರಿಕೆಯಾದರೂ, ನಿಯಂತ್ರಿಸುವ ಹೊಣೆ ನಮಗಿಲ್ಲ ಎಂಬರ್ಥದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದಕ್ಕೂ, ಈಗ ಈರುಳ್ಳಿ ಬೆಲೆ ಗಗನಕ್ಕೇ ಏರಿರುವುದೂ ಸರಿ ಹೋಗಿದೆ.

ಶ್ರೀಸಾಮಾನ್ಯರು ಈರುಳ್ಳಿ ಬೆಲೆ ಕೇಳಿಯೇ ಕಣ್ಣಲ್ಲಿ ನೀರು ಸುರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಅಡುಗೆ ಎಣ್ಣೆ ಬೆಲೆಯೂ ಏರಿಕೆಯಾಗುವುದು ನಿಚ್ಚಳವಾಗಿದೆ. ಏಕೆಂದರೆ ಅಧಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ತೈಲ ಕಾಳುಗಳು, ಸೋಯಾಬೀನ್ ಇಳುವರಿ ಕುಸಿದಿರುವುದು ಒಂದೆಡೆಯಾದರೆ, ಅತ್ಯಧಿಕ ಪ್ರಮಾಣದಲ್ಲಿ ಮಲೇಷಿಯಾ ಮತ್ತು ಇಂಡೋನೇಷಿಯಾದಿಂದ ತರಿಸಿಕೊಳ್ಳುತ್ತಿದ್ದ ಕಚ್ಚಾ ಫಾಮ್ ಎಣ್ಣೆ ಪೂರೈಕೆಯೂ ಕುಸಿದಿದೆ.

ಎಣ್ಣೆ ತೆಗೆಯುವ ಸಾಸಿವೆ ದರ ಕಳೆದ ತಿಂಗಳು ಕ್ವಿಂಟಾಲ್‍ಗೆ 3,711 ರು ಇದ್ದುದು, ಈಗ 4,100 ರು ಗೇರಿರುವಂತೆ, 759 ರು ಇದ್ದ ಸೋಯಾಬೀನ್ ದರ 829 ರುಪಾಯಿ ಏರಿದೆ. ಇದು ಹವಾಮಾನ ವೈಫರಿತ್ಯದಿಂದಾಗಿ ಫಸಲೇ ಇಲ್ಲದ್ದರಿಂದ ಆಗಿರುವ ಬೆಲೆ ಏರಿಕೆಯಾಗಿದೆ.

ಕಚ್ಚಾ ಫಾಮ್‍ ನ್ನು ಪೂರೈಸುತ್ತಿದ್ದ ಮಲೇಷಿಯಾ ಮತ್ತು ಇಂಡೋನೇಷಿಯಾದಲ್ಲೀಗ ಬಯೋ ಫ್ಯೂಯಲ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ. ಹಾಗಾಗಿ ಕಚ್ಚಾ ಫಾಮ್ ಎಣ್ಣೆ ಸಿಗುತ್ತಿಲ್ಲ. 21,5 ಲಕ್ಷ ಟನ್‍ ನಷ್ಟು ಮಾತ್ರವೇ ದಾಸ್ತಾನಿದೆ. ಇದು ಮಾಮೂಲಿಗಿಂತ ಶೇ.8.5 ರಷ್ಟು ಮಾತ್ರದ ದಾಸ್ತಾನು ಮಾತ್ರ. ಇದೆಲ್ಲದರ ಪರಿಣಾಮವಾಗಿ ಅಡುಗೆ ಎಣ್ಣೆ ದರ 10 ಕೆಜಿಗೆ 544ರು ಇದ್ದದು, ಈಗ 692 ರುಪಾಯಿಯಷ್ಟಾಗಿದೆ. ಇದು ಇನ್ನೂ ಹೆಚ್ಚಳವಾಗುವುದು ಪಕ್ಕಾ ಆಗಿದ್ದು, ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯೂ ಒಲೆ ಮೇಲೆ ಇಡುವ ಮುನ್ನವೇ ಜನಸಾಮಾನ್ಯನ ಕೈ ಮತ್ತು ಜೇಬನ್ನೂ ಒಟ್ಟೊಟ್ಟಿಗೆ ಸುಡಲಿದೆ.

ಮೋದಿ ಅಧಿಕಾರಕ್ಕೇರಿದ ನಂತರ ಅನಿಲ ಸಿಲಿಂಡರ್ ಬೆಲೆಯೂ ಏರಿದೆ. ಇವೆಲ್ಲವನ್ನು ಒಟ್ಟುಗೂಡಿಸಿಕೊಂಡರೆ, ಪಕೋಡ ಮಾರುವುದೂ ಉದ್ಯೋಗವಲ್ಲವೇ ಎಂದು ಸಮರ್ಥಿಸಿಕೊಳ್ಳುತ್ತಿದ್ದವರು ಈಗ ಪಕೋಡಕ್ಕೆ ಬೇಕಾದ ಈರುಳ್ಳಿ, ಎಣ್ಣೆ, ಗ್ಯಾಸ್ ಇವೆಲ್ಲದರ ಬೆಲೆಯೂ ಏರಿರುವುದರಿಂದ ಇತರೆ ಕ್ಷೇತ್ರಗಳಂತೆ ಪಕೋಡಾ ಉದ್ಯಮವೂ ತಳಹಿಡಿಯುವಂತಾಗಿದೆ ಎಂದು ಹೇಳಬಹುದು.