ಮೀಟೂ ,ಕೂಟೂ : ದಾಖಲಾಗದ ದೌರ್ಜನ್ಯದ ಕಥನಗಳು 

ಪುರುಷಾಧಿಪತ್ಯ, ಪಾಳೆಗಾರಿಕೆ ಎನ್ನುವುದು ಭಾರತವಷ್ಟೇ ಅಲ್ಲ ವಿಶ್ವದ ಬಹುತೇಕ ಭಾಗಗಳಿಗೆ ಹಿಡಿದ ರೋಗವಾಗಿದೆ. ಮಹಿಳೆಯ ಉಡುಗೆ ತೊಡುಗೆಗಳೂ ಸದಾ ಒಂದಲ್ಲ ಒಂದು ಕಾರಣದಿಂದ ಚರ್ಚೆಗೊಳಗಾಗುತ್ತಲೆ ಇರುತ್ತವೆ.ಇಂಥ ಲಕ್ಷಾಂತರ ಅನಕ್ಷರಸ್ಥ -ಅಸಹಾಯಕ ಮಹಿಳೆಯರಿರುವ ಈ ಸಮಾಜದಲ್ಲಿ “Me too ಶಬ್ದದ ಪರಿಧಿಯಿಂದಾಚೆಗೂ ಈಚೆಗೂ ! ಅವರ ಅನುಭವಗಳು ಎಲ್ಲೂ ದಾಖಲಾಗದೇ ಕಣ್ಣೀರು ಆವಿಯಾಗಿ ಗಾಳಿಯಲ್ಲಿ ಲೀನವಾಗುತ್ತದಷ್ಟೆ.  

ಮೀಟೂ ,ಕೂಟೂ  : ದಾಖಲಾಗದ ದೌರ್ಜನ್ಯದ ಕಥನಗಳು 

ಕಳೆದ ಅಕ್ಟೋಬರ್ ನಾಲ್ಕಕ್ಕೆ ಭಾರತದಲ್ಲಿ ಸಂಚಲನ ಹುಟ್ಟಿಸಿದ್ದ ಮೀಟೂ ಅಭಿಯಾನಕ್ಕೆ ಒಂದು ವರ್ಷವಾಯ್ತು. ಮೀಟೂ ವಾರ್ಷಿಕೋತ್ಸವ ಅನ್ನಲು ಯಾಕೋ ಮನಸ್ಸು ಬಾರದು. ಯಾಕೋ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಮೌನವಿತ್ತು. ಕೆಲ ಟ್ವೀಟುಗಳು ನೆನಪಿಸಿಕೊಂಡಿದ್ದವು. ಪುರುಷ ಪ್ರಧಾನ ಸಮಾಜದಲ್ಲಿನ ಮಹಿಳೆಯರು ಗಂಟಲಲ್ಲಿಯೇ ಅಡಗಿಸಿಟ್ಟುಕೊಂಡಿದ್ದ  ಸೂಜಿಮೊನೆಯ ಶೋಷಣೆ, ಲೈಂಗಿಕ ಕಿರುಕುಳವನ್ನು ಭಾರತೀಯ ಮಹಿಳೆಯರು ಕೊನೆಗೂ ಮುಂದೆ ಬಂದು ಬಾಯಿತೆರೆದು ಹೇಳುವ ಧೈರ್ಯ ತೋರಿದರು. ಇಂಥ ಮೀಟೂ ಆಂದೋಲನಕ್ಕೆ ಈಗ ವರ್ಷದ ನೆನಪುಗಳು.    

ಅಕ್ಟೋಬರ್ 4, 2018 ರ ಬೆಳಿಗ್ಗೆ, ಅನಪೇಕ್ಷಿತ ನಗ್ನ ಫೋಟೋಗಳನ್ನು ಕಳುಹಿಸಿದ್ದಕ್ಕಾಗಿ  ಒಬ್ಬ ಮಹಿಳೆ ಹಾಸ್ಯನಟ ಉತ್ಸವ ಚಕ್ರವರ್ತಿಯ ಕುರಿತು ಟ್ವೀಟ್ ಮಾಡಿದ್ದಳು.  ಆಗಾಗಲೇ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ವಿರುದ್ಧದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ್ದು ಸುದ್ದಿಯಲ್ಲಿತ್ತು, ಹೀಗೇ ಆರಂಭವಾದ ಮೀಟೂ ಕಾಳ್ಗಿಚ್ಚು ಧಗಧಗ ಹೊತ್ತಿ ಉರಿಯಲಾರಂಭಿಸಿತ್ತು. ವರ್ಷದ ನಂತರ ಇಂದು ನಾವೆಲ್ಲರೂ ಮತ್ತೊಮ್ಮೆ ಕೇಳಿಕೊಳ್ಳಬೇಕಾಗಿದೆ.  ಹೊತ್ತಿದ ಆ ಕಿಡಿ ಆರಿಹೋಯಿತೆಂದೇ ಕೆಲವರ ಅಭಿಪ್ರಾಯ.  ಆದರೆ ಕಿಡಿ ಉರಿದು ಬೂದಿಯ ರಾಶಿಯಾಗಿದ್ದರೂ ಆ ಬೂದಿಯ ಒಡಲಲ್ಲಿ ಸಮಯ ಸಂದರ್ಭಕ್ಕೆ  ಹೊತ್ತಿಕೊಳ್ಳುವ ತಾಕತ್ತುಳ್ಳ ಆರದ ಕಿಡಿಗಳು ಅಸಂಖ್ಯವಿರುತ್ತವೆ. ಒಂದು ಸಣ್ಣ ಬದಲಾವಣೆಯೂ ಕಾಲಾಂತರದಲ್ಲಿ ದೊಡ್ಡ ಬದಲಾವಣೆಯಾಗಿ ಗೋಚರವಾಗಬಹುದು.  

ಪುರುಷಾಧಿಪತ್ಯ, ಪಾಳೆಗಾರಿಕೆ ಎನ್ನುವುದು ಭಾರತವಷ್ಟೇ ಅಲ್ಲ ವಿಶ್ವದ ಬಹುತೇಕ ಭಾಗಗಳಿಗೆ ಹಿಡಿದ ರೋಗವಾಗಿದೆ. ಮಹಿಳೆಯ ಉಡುಗೆ ತೊಡುಗೆಗಳೂ ಸದಾ ಒಂದಲ್ಲ ಒಂದು ಕಾರಣದಿಂದ ಚರ್ಚೆಗೊಳಗಾಗುತ್ತಲೆ ಇರುತ್ತವೆ.  ಟೆನಿಸ್ ತಾರಾಂಗಣದಲ್ಲಿ ನಮ್ಮದೇ ಮನೆ ಮಗಳು ಸಾನಿಯಾ ಮಿರ್ಜಾಳ  ತುಂಡು ಉಡುಗೆ ಅವಳ ಸಮುದಾಯದ ಕರ್ಮಠರನ್ನು ಕೆರಳಿಸಿದ್ದು ಇನ್ನೂ ಹಸಿರಾಗಿಯೇ ಇದೆ. ನ್ಯಾಯಮಂದಿರವಾದ ಕೋರ್ಟಿನಲ್ಲಿಯೂ ಮಹಿಳೆಯರಿಗೆ ವಸ್ತ್ರಸಂಹಿತೆಯಿದೆ. ಚೈತನ್ಯ ತಮ್ಹಾನೆ ನಿರ್ದೇಶನದ ಚೊಚ್ಚಲ ಮರಾಠಿ ಚಿತ್ರ 'ಕೋರ್ಟ್' ನ ಒಂದು ದೃಶ್ಯದಲ್ಲಿ ಕೋರ್ಟಿಗೆ ಸ್ಕರ್ಟ್ ತೊಟ್ಟು ಬಂದ ಕ್ರೈಸ್ತ ಮಹಿಳೆಯ ಕೇಸನ್ನು ಆ ದಿನ ಆಲಿಸದೇ ಮುಂದೂಡುತ್ತದೆ ನ್ಯಾಯಮಂದಿರ.  ಕಾರಣ ಮಹಿಳೆ ತೊಟ್ಟ ಉಡುಗೆ. .    

ಇತ್ತೀಚೆಗೆ ಇಂಡಿಯಾನಾದ  ನೊಟ್ರೆಡೆಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪತ್ರಿಕೆಗೆ ಮೆರಿಯನ್ ವೈಟ್ ಎಂಬ ತಾಯೊಬ್ಬಳು ಪತ್ರ ಬರೆದಿದ್ದಳು. ಯುವತಿಯರು ಬಿಗಿಯಾದ ಲೆಗಿಂಗ್ಸ್ ಹಾಕುವುದರಿಂದ ತನ್ನ ಗಂಡುಮಕ್ಕಳ ಮನಸ್ಸು ಚಂಚಲವಾಗುತ್ತದೆ. ಓದಿನಲ್ಲಿ ಏಕಾಗ್ರತೆ ಇರುವುದಿಲ್ಲ. ಆದ್ದರಿಂದ  ಯುವತಿಯರು ಲೆಗ್ಗಿಂಗ್ಸ್ ಹಾಕುವುದನ್ನು ಕ್ಯಾಂಪಸ್ಸಿನಲ್ಲಿ  ನಿಷೇಧಿಸಬೇಕು ಎಂಬುದು ಆಕೆಯ ಮನವಿ. 

ನೊಟ್ರೆಡೇಮಿನ ಯುವತಿಯರು ಮಾರ್ಚ್ 26ರಂದು ಬೀದಿಗಿಳಿದು “ಲೆಗ್ಗಿಂಗ್ಸ್ ಡೇ’ ನಡಿಗೆಯಿಂದ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಟ್ವಿಟ್ಟರಿನಲ್ಲಿ ಹ್ಯಾಷ್ ಟ್ಯಾಗ್   leggingsdayND  ಲವ್ ಯುವರ್ ಲೆಗ್ಗಿಂಗ್ಸ್ ಡೇ ಯಾಕೆಂದರೆ ನಾವೇನು ತೊಡಬೇಕೆಂಬುದು ನಮ್ಮ ಖಾಸಗಿ ಆಯ್ಕೆ. ನಾವು ಧರಿಸಿರುವದು ಸಂಪೂರ್ಣವಾಗಿ ನಮ್ಮ ಸ್ವಂತ ಆಯ್ಕೆಯಾಗಿದೆ!" ಎಂಬ ಇತ್ಯಾದಿ ಪ್ರತಿಭಟನೆಯ ಧ್ವನಿಗಳು ಒಕ್ಕೊರಲಾದವು. ಅನೇಕ ಯುವತಿಯರು ವಿಧವಿಧದ  ಲೆಗ್ಗಿಂಗ್ಸ್ ತೊಟ್ಟು (instagram) ಇನ್ಸ್ತಾಗ್ರ್ಯಾಂನಲ್ಲಿ ಫೋಟೋ ಪ್ರತಿಭಟನೆಯನ್ನು ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಲೆಗ್ಗಿಂಗ್ಸ್ ಡೇ ಚರ್ಚೆಗೆ ಬಂದಿದ್ದನ್ನು ಗಮನಿಸಬಹುದು.  

ಕಳೆದ ವರ್ಷ  ಪುನಾದ ಒಂದು ಪ್ರಸಿದ್ಧ ಶಾಲೆ ವಿದ್ಯಾರ್ಥಿನಿಯರು ಇಂಥದ್ದೇ ಬಣ್ಣದ ಒಳ ಉಡುಪು ಹಾಕಬೇಕೆಂದು ವಿಧಿಸಿದ ನಿಯಮ ಭಾರಿ ಟೀಕೆಗೆ ಆಕ್ರೋಶಕ್ಕೆ ಒಳಗಾದ  ಸುದ್ದಿ ನೆನಪಿರಬಹುದು. 

ಜಪಾನಿನಲ್ಲಿ ದುಡಿಯುವ ಮಹಿಳೆಯರು ಆಫೀಸಿಗೆ ಬರುವಾಗ ಅಲಂಕರಿಸಿಕೊಂಡು ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡೇ ಬರಬೇಕೆನ್ನುವ ವಸ್ತ್ರಸಂಹಿತೆಯಿದೆ. ಇಡೀ ದಿನ ಹೈಹೀಲ್ಡ್ ಹಾಕಿಕೊಂಡೇ ಇರಬೇಕಾದ ಹಿಂಸೆ ಮಹಿಳೆಯರಿಗೆ. ಅದರಿಂದ  ಕಾಲು, ಮೀನಗಂಡ, ಕೆಳಬೆನ್ನು ನೋವು, ಬೆನ್ನುಹುರಿ ನೋವಿನ ಸಮಸ್ಯೆಗಳಿಂದ ಮಹಿಳೆಯರು ಬಳಲುತ್ತಿದ್ದಾರೆ. ಇದು  ಶಿಕ್ಷೆಯೇ ಹೊರತು ಶಿಸ್ತು ಅಲ್ಲ. ಇದೇ ಕಾರಣದಿಂದ ಜಪಾನಿ ಮಹಿಳೆಯರು  (#MeToo) ಮೀಟೂ ಅಭಿಯಾನದಂತೆ ಹ್ಯಾಷ್ ಟ್ಯಾಗ್ (KuToo) ಕುಟೂ ಅಭಿಯಾನವನ್ನು ಆರಂಭಿಸಿದ್ದರು. ಸಾರ್ವಜನಿಕರಿಂದ ಈ ಕುಟೂ ಅಭಿಯಾನಕ್ಕೆ ಬೆಂಬಲವೇನೋ ಸಿಕ್ಕಿತು ಆದರೆ ಸರಕಾರ ಮಾತ್ರ ತಟಸ್ಥವಾಗಿದೆಯೆಂದು ನ್ಯೂಸ್18 ವರದಿ ಹೇಳುತ್ತದೆ. 

ಲೇಖಕಿ ಹಾಗೂ ಅಭಿನೇತ್ರಿಯೂ ಆಗಿರುವ 32 ವಯಸ್ಸಿನ ಯೂಮಿ ಇಶಿಕಾವಾ ಹೈಹೀಲ್ಟ್ ಚಪ್ಪಲಿಯ ಹಿಂಸಾಮುಕ್ತಿಗಾಗಿ ಇತ್ತೀಚೆಗೆ ಇಪ್ಪತ್ತು ಸಾವಿರ ಮಹಿಳೆಯರ ಹಸ್ತಾಕ್ಷರಗಳುಳ್ಳ ಯಾಚಿಕಾ ಪತ್ರವನ್ನು  ಸರಕಾರಕ್ಕೆ ಸಲ್ಲಿಸಿದ್ದಾಳಂತೆ. ಆ ನಂತರವೇ  ಉದ್ಯೋಗಸ್ಥ ಮಹಿಳೆಯರ ಈ ಆಂದೋಲನ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆಯಂತೆ. ಜಪಾನಿ ಭಾಷೆಯಲ್ಲಿ ಚಪ್ಪಲಿಗಳಿಗೆ “ಕುತ್ಸು” ಮತ್ತು ನೋವಿಗೆ “ಕುತ್ಸೂ” ಅಂತ ಹೆಸರಿದೆಯಂತೆ. ಇವೆರಡು ಶಬ್ಧದಿಂದ ಈ ಕುಟೂ ಅಭಿಯಾನ ಜನ್ಮತಾಳಿದೆ. 

ಯಾವ ಯಾವ ಕಂಪನಿಗಳಲ್ಲಿ ಹೈಹೀಲ್ಡ್ ಚಪ್ಪಲಿ ಕಡ್ದಾಯವಾಗಿದೆಯೋ ಆಯಾ ಕಂಪನಿಗಳ ವಿರುದ್ಧ ಈ ಹೋರಾಟ. ಪುರುಷ ಕರ್ಮಿಗಳಿಗೆ ಯಾವ ನಿಯಮಗಳೂ ಇಲ್ಲ. ಅವರು ಶರ್ಟ್ ಟೈ ಜೊತೆ ಸೂಟ್ ಹಾಕಬಹುದು, ಬೇಸಿಗೆಯ ದಿನಗಳಲ್ಲಿ ಅರ್ಧ ತೋಳಿನ ಶರ್ಟ್ ತೊಟ್ಟು ಬರಬಹುದು. ಪುರುಷರಿಗೆ ’ಹೈ ಹೀಲ್ಡ್ ಶೂ’ ಅಂತೇನೂ ಕಡ್ಡಾಯ ನಿಯಮವಿಲ್ಲ. ಮಹಿಳೆಯರು ಮಾತ್ರ ಕಡ್ಡಾಯವಾಗಿ ಅಲಂಕರಿಸಿಕೊಳ್ಲಬೇಕು ಮತ್ತು ಹೈಹೀಲ್ಡ್ ಚಪ್ಪಲಿ,ಸ್ಯಾಂಡಲ್ಸ್ ಹಾಕಿಕೊಳ್ಳಬೇಕು. ಉಪಾಯ ಕಾಣದೇ ರೊಚ್ಚಿಗೆದ್ದ  ಜಪಾನಿ ಮಹಿಳೆಯರು ಈಗ ಕೂಟೂ  ಆಂದೋಲನಕ್ಕಿಳಿದಿದ್ದರು.

ಜಪಾನಿ ಸರಕಾರ ಮಹಿಳೆಯರ ಯಾಚನೆಗೆ ಓಗೊಟ್ಟು ಸಂಸದೀಯ ಸಮಿತಿಯನ್ನು ರಚಿಸಿದೆ. ಮಹಿಳೆಯ ಆರೋಗ್ಯ ಮತ್ತು ಸುರಕ್ಷತೆಯ ಎಷ್ಟು ಅಗತ್ಯವೋ ಅಷ್ಟೇ ಕೆಲವು ನಿರ್ದಿಷ್ಟ ಉದ್ಯೋಗಗಳಿಗೆ ಅಲಂಕಾರ ಮತ್ತು ಹೈಹೀಲ್ಡ ಅಗತ್ಯವೆಂದೂ ಹೇಳಿದೆ. ಆರೋಗ್ಯ ಸಚಿವಾಲಯ ಇನ್ನೂ ಈ ಬಗ್ಗೆ ಚಿಂತನೆಗಳನ್ನು ನಡೆಸುತ್ತಿದೆ.  

ಚೀನಾದಲ್ಲಿ ಮಹಿಳೆಯರ ಪಾದಗಳು ಮಾಟವಾಗಿ ಸುಂದರವಾಗಿ ಇರಲು ಎಳವೆಯಿಂದಲೇ ಬಿಗಿಯಾಗಿ ಪಾದಗಳನ್ನು ಕಟ್ಟುವ  ಪದ್ಧತಿಯಿದೆ. ಪುಟ್ಟಪಾದಗಳನ್ನು ಉಳಿಸಿಕೊಳ್ಳಬೇಕಾದ ಮಹಿಳೆಯನ್ನು ಪುರುಷ ತನ್ನ ಕಾಮಾಸಕ್ತಿಯ ಭಾಗವಾಗಿ, ಮನೆವಾಳ್ತನಕ್ಕೆ ಮಾತ್ರ ಸೀಮಿತವಾಗಿರುವಂತೆ ಕಟ್ಟಳೆಯನ್ನು ವಿಧಿಸಿದ್ದ. ಇಪ್ಪತ್ತನೇ ಶತಮಾನದಲ್ಲಿ ಈ ಪದ್ಧತಿಯನ್ನು ನಿಷೇಧಿಸಿ ಆಂದೋಲನಗಳು ತೀವ್ರವಾಗಿದ್ದವು. ಚೀನಾದ ಸ್ತ್ರೀವಿಮೋಚನಾ ಚಳವಳಿಗಳು ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ತಡೆಗಟ್ಟುವಲ್ಲಿ ಕೆಲಮಟ್ಟಿಗೆ ಯಶಸ್ವಿಯಾದವು.    

ಅತ್ಯಂತ ಪುಟ್ಟ, ವಿಶ್ವದ ಅಭಿವೃದ್ಧಿ ಹೊಂದಿದ ಶ್ರೀಮಂತ ಪಾರಂಪರಿಕ ಹಿನ್ನೆಲೆಯುಳ್ಳ ಜಪಾನಿನಂತ ದೇಶ ಲಿಂಗ ತಾರತಮ್ಯತೆಯ ಪಟ್ಟಿಯಲ್ಲಿ ವಿಶ್ವದ 149 ದೇಶಗಳ ಪಟ್ಟಿಯಲ್ಲಿ 110 ನೇಯ ಸ್ಥಾನದಲ್ಲಿದೆ. ಸ್ತ್ರೀ ಪುರುಷರ ಅಸಮಾನತೆಯ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ.  

ಮಹಿಳೆಯರಿಗಾಗಿ ಭಾರತದಂಥ ಅಸುರಕ್ಷಿತ ದೇಶ ಮತ್ತೊಂದಿಲ್ಲ ಎನ್ನುವ ಆತಂಕಕಾರಿ ಹಿಂಸಾಚಾರ, ಲಿಂಗ ತಾರತಮ್ಯತೆಯ ನಾನಾ ಸ್ವರೂಪಗಳು ನಮ್ಮ ಮುಂದೆಯೇ ಇವೆ.  ನಮ್ಮದೇ ನಗರಗಳ ಮಾಲ್‍ಗಳಲ್ಲಿ ಆಗ ತಾನೇ ಪದವಿ ಮುಗಿಸಿ ಕೆಲಸಕ್ಕೆ ಸೇರಿದ ಹಳ್ಳಿ ಮತ್ತು ನಗರಗಳ ಮಹಿಳೆಯರು ಊಟಕ್ಕೆ ಮತ್ತು ಶೌಚಕ್ಕೆ ಹೋದ ಸಮಯವನ್ನೂ ಲೆಕ್ಕಹಾಕಿ ಸಂಬಳ ಕೊಡುವ ಮಹಾನುಭಾವರಿದ್ದಾರೆ. ಪ್ರಜಾಪ್ರಭುತ್ವದ ಹರಿಕಾರ ಎಂದು ಕರೆದುಕೊಳ್ಳುವ ಅಮೇರಿಕದಲ್ಲಿ ಕೋಳಿ ಮಾಂಸ ಸಂಸ್ಕರಣಾ ಕಂಪನಿಯೊಂದು 8 ತಾಸು ದುಡಿಮೆಯ ಮಧ್ಯದಲ್ಲಿ ಶೌಚಕ್ಕೂ ಸಮಯ ನೀಡದೆ, ಅಲ್ಲಿನ ಮಹಿಳಾ ನೌಕರರಿಗೆ ಡೈಪರ್ ಒದಗಿಸುವುದು ಅವರಿಗೆ ಅಮಾನವೀಯ ಅನ್ನಿಸುವುದೇ ಇಲ್ಲ.  

ಮೊನ್ನೆಯಷ್ಟೇ ಸಿಜಿಎಚ್ಎಸ್ ಆಸ್ಪತ್ರೆಗೆ ನನಗೆ ಬೇಕಿದ್ದ ಔಷಧಗಳ ಇಂಡೆಂಟ್ ಹಾಕಿಸಲು ಹೋಗಿದ್ದೆ. ಸರತಿಯಲ್ಲಿಯೇ ನಿಂತಿದ್ದೆ. ಅರ್ಧಗಂಟೆಯಾದರೂ ನನ್ನ ಸರತಿ ಬರಲಿಲ್ಲ. ಒಳಗಿದ್ದ ವ್ಯಕ್ತಿ ತಮ್ಮ ಮನೆಯದೇ ಮೂರು ಜನರ  ಮೂರು ಕಾರ್ಡುಗಳನ್ನು ಒಂದೊಂದಾಗಿ ತೋರಿಸಿ ಮೆಡಿಸಿನ್ ಇಂಡೆಂಟ್ ಹಾಕಿಸುತ್ತಿದ್ದರು. ನನ್ನ ಮುಂದಿನ ವ್ಯಕ್ತಿಗೆ ನಾನು ನನಗೆ ಆಫೀಸಿಗೆ ಹೋಗಲು ತಡವಾಗುತ್ತಿದೆ, ನಾನು ಹೋಗಲೇ ? ಅಂತ ವಿನಂತಿಸಿದರೂ ಆತ ಒಪ್ಪಲಿಲ್ಲ. ಆತ ಅದೇ ಗಂಟುಮುಖದಲ್ಲಿ ’ಇಲ್ಲ’ ನನಗೂ ಅರ್ಜೆಂಟಿದೆ ಅಂದ. ಸರತಿಯಲ್ಲಿ ನನ್ನ ಹಿಂದಿದ್ದವರು - ಹೋಗಿ ಮೇಡಂ ನೀವು ಅಂತ ದನಿಗೂಡಿಸಿದರು

ನನ್ನ ಸರತಿ ಬಂದಾಗ ಡಾಕ್ಟರ್ ಕಂಪ್ಯೂಟರ್ ನಲ್ಲಿ ನನ್ನ ಕಾರ್ಡ್ ಸರಿಯಾಗಿ ರಿಜಿಸ್ಟರ್ ಆಗಿಲ್ಲವೆಂದು ನೆಪ ಹೇಳಿ ಚಹಕುಡಿಯಲು ಎದ್ದ…ಇದಕ್ಕಾಗಿ ನಾನು ಮುಕ್ಕಾಲುತಾಸು ಸಾಲಿನಲ್ಲಿ ನಿಂತಿದ್ದೆ.  ಹೀಗೆ ನಮ್ಮ ಸುತ್ತಮುತ್ತಲೇ ಮಹಿಳೆಯರನ್ನು ತಾತ್ಸಾರದಿಂದ ಕಾಣುವ, ತಾವೇ ಎಲ್ಲದರಲ್ಲೂ ಮೇಲುಗೈಯಾಗಬೇಕೆನ್ನುವ ಪುರುಷಲೋಕದಲ್ಲಿ ಹೆಣ್ಣು ಇರುವುದೇ ಅವರಿಗೆ ಬೇಕಾದಂತೆ ದುಡಿಸಿಕೊಳ್ಳಲು, ಮಣಿಸಿಕೊಳ್ಲಲು, ಹಿಂಸಿಸಲು ಎನ್ನುವ ಧೋರಣೆಯ ಬೇರುಗಳು ನರನಾಡಿಗಳಲ್ಲಿ ಹೆಣೆದುಕೊಂಡಿವೆ.  

ಇನ್ನೊಮ್ಮೆ ತನ್ನ ಕಂಪನಿಯಲ್ಲಿ ಪರಿಚಿತಳೊಬ್ಬಳಿಗೆ ಕೆಲಸ ಕೊಡಿಸಿದವನೊಬ್ಬ ಆ ಉಪಕಾರದ ಬದಲಿಗೆ “ ಖಾತಿರದಾರಿ “ ಮಾಡು ಎಂದು ಚೇಷ್ಟೆಮಾಡುತ್ತಾ,  ಮೊದ ಮೊದಲು ನಯವಾಗಿ,  ಸವಿಯಾಗಿ, ನಂತರ ಒರಟಾಗಿಯೇ ಆಕೆಗೆ ಲೈಂಗಿಕ ಕಿರುಕುಳ ಕೊಡತೊಡಗಿದ. “ನೋಡು ನಿನ್ನನ್ನು ಕೆಲಸಕ್ಕಿಟ್ಟುಕೊಳ್ಳುವ ಅಗತ್ಯವೇ ಇದ್ದಿಲ್ಲ, ನಿನಗಾಗಿ ಎಷ್ಟೆಲ್ಲ ಮಾಡಿದ್ದೇನೆ, ನನಗಾಗಿ ಸಹಕರಿಸಬೇಕು ನೀನು ಎಂದು ಪೀಡಿಸತೊಡಗಿದ್ದ. ಕೈ ಮೈ ಮುಟ್ಟುವ ಯತ್ನವನ್ನೂ ಮಾಡುತ್ತಿದ್ದ.  ಕೊನೆಗೊಮ್ಮೆ “ಕುಛ್ ಕರೋ , ಇಲ್ಲಾಂದ್ರೆ ನಿನಗಿಲ್ಲಿ ಜಾಗವಿಲ್ಲ “ ಎಂದೂ ಘೋಷಿಸಿ ಬಿಟ್ಟ. 

ಆಕೆ ಧೈರ್ಯಮಾಡಿ ಕಂಪನಿಯ ಚೇರ್ಮನ್ ಗೆ ನೇರವಾಗಿಯೇ ಇಮೇಲ್ ಬರೆದು ತನ್ನ ಪರಿಸ್ಥಿತಿ ಮತ್ತು ಆತ ಕೊಡುವ ಕಿರುಕುಳದ ಬಗ್ಗೆ ವಿವರಿಸಬೇಕಾಯ್ತು.  ಎಲ್ಲ ವಿಚಾರಣೆಗಳು ನಡೆದು , ಅವನು ತಪ್ಪೊಪ್ಪಿಕೊಂಡ ನಂತರ ಕಂಪನಿ ಆ ಮ್ಯಾನೇಜರ್ ನನ್ನೇ ತೆಗೆದುಹಾಕಿತು.  ಇದು ಎರಡು ವರ್ಷದ ಹಿಂದೆ ನಡೆದದ್ದು. ಅಮೇರಿಕದಲ್ಲಿ “ಮೀಟೂ“ ಅಭಿಯಾನ ಹುಟ್ಟುವ ಮುಂಚಿನ ಘಟನೆ.     

ಮೊನ್ನೆ ಮೊನ್ನೆ ಎಂಭತ್ತು ವರ್ಷದ ಮುದುಕನೊಬ್ಬ “ಅಂಕಲ್ ಎಂದು ಗೌರವದಿಂದ ಊಟ ಕೊಡುತ್ತಿದ್ದ ಅಡುಗೆಯವಳ ಕುಪ್ಪುಸಕ್ಕೆ ಕೈ ಹಾಕಿದ. ಆಕೆ ಅತ್ತು ಕರೆದು ಹೋದವಳು ಇತ್ತ ಮತ್ತೆ ತಲೆ ಹಾಕಲಿಲ್ಲ. 

ಇಂಥ ಲಕ್ಷಾಂತರ ಅನಕ್ಷರಸ್ಥ -ಅಸಹಾಯಕ ಮಹಿಳೆಯರಿದ್ದಾರೆ ಈ “Me too ಶಬ್ದದ ಪರಿಧಿಯಿಂದಾಚೆಗೂ ಈಚೆಗೂ ! ಅವರ ಅನುಭವಗಳು ಎಲ್ಲೂ ದಾಖಲಾಗದೇ ಕಣ್ಣೀರು ಆವಿಯಾಗಿ ಗಾಳಿಯಲ್ಲಿ ಲೀನವಾಗುತ್ತದಷ್ಟೆ.