ಸುಳ್ಳುಗಳು ಸಂಭ್ರಮಿಸುತ್ತವೆ : ಸತ್ಯಗಳು ಸೊರಗುತ್ತವೆ..!!

ಸರ್ಕಾರ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲದೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಈ  ಸಂಪುಟಗಳನ್ನು ತಂದಿದೆ ಆದರೆ ಈ ಪ್ರಶ್ನೆ ಮಾಡುವವರ್ಯಾರೂ ಇವನ್ನು ಅಪ್ಪಿತಪ್ಪಿಯೂ ಕೊಳ್ಳಲ್ಲ, ಓದಲ್ಲ! ಬದಲಿಗೆ ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂಬುದನ್ನು ಸಾಬೀತುಮಾಡಲು ಸಾಕ್ಷಾಧಾರಗಳನ್ನು ಹುಡುಕುತ್ತಿರುತ್ತಾರೆ

ಸುಳ್ಳುಗಳು ಸಂಭ್ರಮಿಸುತ್ತವೆ : ಸತ್ಯಗಳು ಸೊರಗುತ್ತವೆ..!!

"ಅಂಬೇಡ್ಕರವರೊಬ್ಬರೇ ಸಂವಿಧಾನ ಬರೆದರೆ..?" ಎನ್ನುವ ಕ್ಲೀಷೆಯ ಪ್ರಶ್ನೆಯನ್ನೇ ಮತ್ತೊಮ್ಮೆ ಅಡ್ರೆಸ್ ಮಾಡುತಿದ್ದೇನೆ. ಈ ಪ್ರಶ್ನೆಗೆ ಅನೇಕ ಸಲ ದಾಖಲೆಗಳ ಸಮೇತ ಉತ್ತರಿಸಿದರೂ ಮತ್ತೆ ಮತ್ತೆ ಈ ಪ್ರಶ್ನೆಯನ್ನೇ ಎತ್ತುತ್ತಿರುವುದರಿಂದ ಇಂತಹ ಪ್ರಶ್ನೆ ಎತ್ತುತ್ತಿರುವವರ ಬಗ್ಗೆಯೇ ಸಂಶಯದಿಂದ ಪ್ರಶ್ನಿಸಬೇಕಿದೆ!?

ಇಂತವರಿಗೆ ನೀವು ಎಷ್ಟೇ ಆಧಾರಗಳನ್ನಿಟ್ಟುಕೊಂಡು ಉತ್ತರಿಸಿದರೂ ಅವರು ಒಪ್ಪಲ್ಲ!? ಮತ್ತೆ ಮತ್ತೆ ಕೇಳಿದ್ದನ್ನೇ ಕೇಳುವ ಇವರಿಗೆ ತಮ್ಮ ಪ್ರಶ್ನೆಗೆ ಸಿಗುವ ಉತ್ತರಕ್ಕಿಂತಲೂ ಅವರಲ್ಲಿ ಬೃಹದಾಕಾರದಲ್ಲಿ ಆಕ್ರಮಿಸಿಕೊಂಡ ಜಾತಿಯ ವ್ಯಸನ! ಅಸಹನೆಯ ರೋಗ ಉಲ್ಬಣಗೊಂಡು ಬ್ರಹ್ಮಾಂಡ ಕುಷ್ಟದಿಂದ ನರಳುತಿದ್ದಾರೆ!! 

ಇಂತಹ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುವವರು ಬಹುತೇಕ ಒಂದೇ ಜಾತಿಗೆ ಸೇರಿದವರಾಗಿರುತ್ತಾರೆ ಅನ್ನುವುದು ವಿಶೇಷ! ಅಥವಾ ಸದರಿ ಜಾತಿಯವರಿಂದ ಪ್ರೇರೇಪಿತರಾದವರಾಗಿರುತ್ತಾರೆ ಅಥವಾ ವೈದಿಕ ಸಿದ್ದಾಂತಕ್ಕೆ ನೇತುಬಿದ್ದವರಾಗಿರುತ್ತಾರೆ. "ಡಾ.ಅಂಬೇಡ್ಕರ್ ರವರು ದಲಿತರು, ಅಸ್ಪೃಷ್ಯರು ಅಂತವರಿಗೆ ಸಂವಿಧಾನದಂತಹ ಮೇರು ಕೃತಿಯನ್ನು ಬರೆಯಲು ಸಾಧ್ಯವೆ?" ಎನ್ನುವ ಅನುಮಾನದ ರೋಗ! ಅವರ ಮನಸ್ಸು ಈ ನಿಷ್ಠುರ, ಕಟು ಸತ್ಯವನ್ನು ಒಪ್ಪಲು ಯಾವ ಕಾರಣಕ್ಕೂ ತಯಾರಿರುವುದಿಲ್ಲ! ಇಲ್ಲಿ ಸಂವಿಧಾನವನ್ನು ಬೆಳಗಲ್ ನರಸಿಂಹರಾವ್ ಅಥವಾ ಮತ್ಯಾರೋ ಅವರ ಜಾತಿಯವರೇ ಬರೆದಿದ್ದಾರೆ‌ ಎನ್ನಲಿಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಅಂಬೇಡ್ಕರ್ ಅವರಿಗೆ ಬರೆಯಲು ಮತ್ಯಾರೋ ಸಹಾಯ ಮಾಡಿದ್ದಾರೆ ಎನ್ನಲೂ ದಾಖಲೆಗಳು ಲಭ್ಯವಾಗುತ್ತಿಲ್ಲ. ಆದರೂ ಅವರ ಮೊಂಡುತನದ ಅನುಮಾನದ ಭೂತ ಬಿಡುತ್ತಿಲ್ಲ!  ಇಂತಹದ್ದೊಂದು‌, ಅವರಿಗೆ 'ಅನಿಷ್ಟ'ವಾದುದನ್ನು ಒಪ್ಪಿಕೊಳ್ಳಲು ಅವರ ಭೀಕರ ಜಾತಿವ್ಯಾದಿ ರೋಗಿಷ್ಟ ಮನಸ್ಸು ಸರ್ವತಾ ಸಿದ್ದವಿಲ್ಲ. 

'ಡಾ.ಅಂಬೇಡ್ಕರ್ ಒಬ್ಬರೇ ಬರೆಯಬೇಕಾಯಿತು ..' ಎನ್ನುವ  ಮಾತುಗಳನ್ನು ಡಾ.ರಾಜೇಂದ್ರಪ್ರಸಾದ್, ಜವಹರಲಾಲ್ ನೆಹರು ಮತ್ತು ಸಂವಿಧಾನ ಸಮಿತಿಯಲ್ಲಿದ್ದ ಟಿ.ಟಿ.ಕೃಷ್ಣಮಾಚಾರಿಯಂತ ಮಹಾಮಹಿಮರೇ ಹೇಳಿದರೂ ಅವರ ಮನಸ್ಸು ಈ ಕಹಿಸತ್ಯಗಳನ್ನು ಒಪ್ಪುತ್ತಿಲ್ಲ..! "ಇದೆಲ್ಲಾ ಸುಳ್ಳಾಗಬಾರದೆ..?" ಎಂದು ಅವರ ಆತ್ಮ ವಿಲವಿಲನೆ ಒದ್ದಾಡುತ್ತಿದೆ, ತೊಳಲಾಡುತ್ತಿದೆ! ಈ ಕಾರಣಕ್ಕೇ ಈ ಪ್ರಶ್ನೆಯನ್ನು ಸಂವಿಧಾನ ರಚನೆಯ ದಿನದಿಂದ ಇಂದಿನವರೆಗೂ ಜೀವಂತವಾಗಿಯೇ ಇಟ್ಟಿದ್ದಾರೆ!

ಸಂವಿಧಾನವನ್ನು ಡಾ.ಅಂಬೇಡ್ಕರ್‌ ಅವರು ಬರೆದರೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಬಾಬಾಸಾಹೇವರ ಇಪ್ಪತ್ತೆರಡು ಸಾವಿರ ಪುಟಗಳ ಬರಹಗಳನ್ನು ಮತ್ತು ಭಾಷಣಗಳನ್ನಾದರೂ ಓದಬಹುದಿತ್ತು. ಸರ್ಕಾರ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲಲ್ಲದೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಈ  ಸಂಪುಟಗಳನ್ನು ತಂದಿದೆ ಆದರೆ ಈ ಪ್ರಶ್ನೆ ಮಾಡುವವರ್ಯಾರೂ ಇವನ್ನು ಅಪ್ಪಿತಪ್ಪಿಯೂ ಕೊಳ್ಳಲ್ಲ, ಓದಲ್ಲ! ಬದಲಿಗೆ ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂಬುದನ್ನು ಸಾಬೀತುಮಾಡಲು ಸಾಕ್ಷಾಧಾರಗಳನ್ನು ಹುಡುಕುತ್ತಿರುತ್ತಾರೆ ಅಥವಾ ಇದರ ಬಗ್ಗೆ ಹೈಪಾಥಿಟಿಕಲ್ ಪ್ರಶ್ನೆಗಳನ್ನು ಎತ್ತಲು ತಾಲೀಮು ನಡೆಸುತ್ತಿರುತ್ತಾರೆ. ಅಥವ ಸಿಕ್ಕಸಿಕ್ಕವರ ಬಳಿ‌ ಅವರ ಅಮಾಯಕತೆ ಮತ್ತು ಮುಗ್ದತೆಗನುಗುಣವಾಗಿ ಅವರಲ್ಲಿ "ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಬರೆದರೆ?" ಎಂಬ ಪ್ರಶ್ನೆಯ ಹುಳ ಬಿಟ್ಟು ತಮ್ಮ ವಿಕೃತಿಗೆ ತಾವೇ ಸಂತೋಷಪಟ್ಟುಕೊಳ್ಳುತ್ತಿರುತ್ತಾರೆ!

ಮೊನ್ನೆ ಸಕಲೇಶಪುರದ ಜಿಲ್ಲಾ ಹಿರಿಯ ನ್ಯಾಯಾದೀಶೆ ಪೂರ್ಣಿಮ ಎನ್ ಪೈ ಅನ್ನುವ 'ಸಂವಿಧಾನ ತಜ್ನರು' ಮಾತನಾಡುತ್ತಾ "ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಎಲ್ಲಾ ಕಡೆ ಹೇಳ್ತಾರೆ, ಹಂಗಾದ್ರೆ ಸಂವಿಧಾನವನ್ನು ಬರೆದವರು ಅಂಬೇಡ್ಕರೇನ..? ಕೇವಲ ಅವರೊಬ್ಬರೆ ಸಂವಿಧಾನವನ್ನು ಬರೆದವರ..?" ಎಂದು ಪ್ರಶ್ನಿಸುತ್ತಾರೆ. ಯಾರಾದರೂ ಇವರ ಮಾತುಗಳನ್ನು ಪೂರ್ವಾಗ್ರಹ ಬಿಟ್ಟು ಕೇಳಿಸಿಕೊಂಡರೆ ಇವರ ಧ್ವನಿಯಲ್ಲಿರುವ ಅಂಬೇಡ್ಕರ್ ವಿರುದ್ದದ ಅಸಹನೆ ಡಾಳಾಗಿ ಕಾಣುತ್ತೆ! ಅಂತೆಯೇ ನ್ಯಾಯಾದೀಶೆ ಪೈ ಅವರು ತಮ್ಮ ಮಾತಿಗೆ ಸಪೋರ್ಟ್ ಆಗಿ ಜಸ್ಟೀಸ್ ಹೆಚ್.ಆರ್.ಖನ್ನ ಅವರನ್ನು ಉದ್ದರಿಸುತ್ತಾ 'ಮಿನರ್ವ ಮಿಲ್ಸ್,'  'ಕೇಶವಾನಂದ ಭಾರತಿ' ಮತ್ತು 'ಹೇಬಿಯಸ್ ಕಾರ್ಪಸ್' ಎಂಬ ಸರ್ವೋಚ್ಚ ನ್ಯಾಯಾಲಯದ ಪ್ರಖ್ಯಾತ ಪ್ರಕರಣಗಳ ಬಗ್ಗೆ ಹೇಳುತ್ತಾ ಈ ಕೇಸುಗಳಲ್ಲಿ ಜಸ್ಟೀಸ್ ಹೆಚ್.ಆರ್.ಖನ್ನ ಅವರೊಬ್ಬರೆ 'ಡಿಸೆಂಟ್' ನೋಟ್ ಬರೆದ ಬಗ್ಗೆ ತಮ್ಮ ಭಾಷಣದಲ್ಲಿ ಕೋಟ್ ಮಾಡಿ ಹೇಳುತ್ತಾರೆ. ಆದರೆ ನಮ್ಮ 'ಲೀಗಲ್ ರಿಪೋರ್ಟ್' ಗಳು ನೀಡುವ ದಾಖಲೆಗಳ ಪ್ರಕಾರ ಮಿನರ್ವ ಮಿಲ್ಸ್ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾಗಿ ಭಾಗಿಯಾಗಿದ್ದು ನ್ಯಾಯಮೂರ್ತಿಗಳಾದ ಚಂದ್ರಚೂಡ್, ನ್ಯಾ. ಭಗವತಿ, ನ್ಯಾ.ಎ.ಸಿ.ಗುಪ್ತ, ನ್ಯಾ.ಎನ್.ಎಲ್.ಉಂಟ್ಯಾಲಿಯ ಮತ್ತು ನ್ಯಾ.ಕೈಲಾಸಂ ರವರು. ಇಲ್ಲಿ 'ಡಿಸ್ಸೆಂಟ್' ನೋಟ್ ಬರೆದವರು ನ್ಯಾ.ಭಗವತಿ! ಪೂರ್ಣಿಮಾ ಪೈ ಎಂಬ 'ಜಡ್ಜ್ ಮೇಡಂ' ಹೇಳುವಂತೆ  ನ್ಯಾ ಎಚ್.ಆರ್ ಖನ್ನ ಇಲ್ಲಿ ಎಲ್ಲಿದ್ದರು!? ಎಂದು ತಲಾಷ್ ಮಾಡಿ ಹೇಳಬೇಕು!

ಇನ್ನು ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾಗಿಯಾಗಿದ್ದ ನ್ಯಾಯಮೂರ್ತಿಗಳು ಮತ್ತು ಡಿಸ್ಸೆಂಟ್ ನೋಟ್ ಬರೆದವರ ವಿವರ ನಮ್ಮ ಕಾನೂನು ಪುಸ್ತಕಗಳ ದಾಖಲೆಯಲ್ಲಿ ಈ ಕೆಳಕಂಡಂತಿದೆ.. ಅದನ್ನು ನಿಮ್ಮ ಅವಗಾಹನೆಗಾಗಿ ಯತಾವತ್ತಾಗಿ ನೀಡುತಿದ್ದೇನೆ..

Majority

Sikri C. J. Hegde and Mukherjea, JJ.; Shelat and Grover, JJ.; Jaganmohan Reddy, J.; Khanna, J.

Dissent

Ray J.; Palekar J.; Mathew J.; Beg J.; Dwivedi J.; Chandrachud J. 

ಇಲ್ಲೂ ಕೂಡ ನಮ್ಮ 'ಜಡ್ಜ್ ಮೇಡಂ' ಹೇಳಿದ್ದು ಸತ್ಯಕ್ಕೆ ಬಲು ದೂರ..!

ನ್ಯಾಯದೀಶೆ ಪೂರ್ಣಿಮಾ ಪೈ ಹೇಳಿರುವಂತೆ ನ್ಯಾ.ಎಚ್.ಆರ್.ಖನ್ನ ರವರು ಡಿಸೆಂಟ್ ನೋಟ್ ಬರೆದಿರುವುದು ಹೇಬಿಯಸ್ ಕಾರ್ಪಸ್ ಪ್ರಕರಣದಲ್ಲಿ ಅಷ್ಟೇ.

ಮಿಕ್ಕಂತೆ ನ್ಯಾಯಾದೀಶೆ ಪೂರ್ಣಿಮ ಎನ್ ಪೈ ರವರು ಕೋಟ್ ಮಾಡುವ ನ್ಯಾ.ಎಚ್.ಆರ್.ಖನ್ನ ಅವರ 'ಮೇಕಿಂಗ್ ಆಫ್ ಇಂಡಿಯನ್ ಕಾನ್ಸ್ಟಿಟೂಷನ್' ನಲ್ಲಿ ಬರೆದಿದೆಯೆಂದು ಹೇಳಲಾದ ಸಂವಿಧಾನದ ನಾಲ್ಕು ಕಂಬಗಳು ಡಾ.ರಾಜೇಂದ್ರ ಪ್ರಸಾದ್, ಜವಹರಲಾಲ್ ನೆಹರು, ವಲ್ಲಭಾಯ್ ಪಟೇಲ್ ಮತ್ತು ಚಂದ್ರಶೇಖರ ಅಜಾದ್(?!) ಎನ್ನುತ್ತಾರೆ. ಲೋಕಸಭೆಯೇ ಐದು ಸಂಪುಟಗಳಲ್ಲಿ ಪ್ರಕಟಿಸಿರುವ constitutional debates ನಲ್ಲಿ ಪೈ ಮೇಡಂ ಹೆಸರಿಸಿರುವ ರಾಜೇಂದ್ರ ಪ್ರಸಾದ್, ನೆಹರು, ಪಟೇಲರೇ ಮುಂತಾದವರು "ಸಂವಿಧಾನವನ್ನು ಬರೆಯುವ ಜವಾಬ್ದಾರಿ ಅಂಬೇಡ್ಕರ್ ಅವರ ಒಬ್ಬರ ಮೇಲೆಯೇ ಬಿತ್ತು.." ಎನ್ನುತ್ತಾರೆ! ಇಂತಹ ಸತ್ಯಗಳನ್ನು ಅರಿಯಲು ಪೈ ಅವರ ಮನಸ್ಸು ಒಪ್ಪಲ್ಲ! ಮಿಕ್ಕಂತೆ ಚಂದ್ರಶೇಖರ ಅಜಾದ್ ಅವರು ಸಂವಿಧಾನ ಬರೆದಾಗ ಇರಲಿಲ್ಲ, ಈ ಅಪ್ರತಿಮ ದೇಶಪ್ರೇಮಿ 1931 ರಲ್ಲೇ ಹುತಾತ್ಮರಾದ ವಿಷಯ ಜಡ್ಜ್ ಮೇಡಂ ಗೆ ತಿಳಿದಂತಿಲ್ಲ!! ಕಾನೂನು ಪದವಿಗಾಗಿ ನಾವು constitutional history  ಯನ್ನು ಒಂದು ವಿಷಯವಾಗಿ ಓದಬೇಕು ಆದರೆ ಮೇಡಂ ಮಾತಾಡುವುದನ್ನು ನೋಡಿದರೆ ಅವರ ಓದಿನ ಬಗ್ಗೆ ಅನುಮಾನ ಬರುತ್ತದೆ!

ಇಂತಹ ಹಿನ್ನೆಲೆ ಹಾಗೂ ಜಾತೀಯ ಪೂರ್ವಾಗ್ರಹವಿರುವ ನ್ಯಾಯಾದೀಶೆ ಅದು ಹೇಗೆ  ಸಕಲೇಶಪುರದಲ್ಲಿ ನ್ಯಾಯ ವಿತರಣೆ ಮಾಡುತಿದ್ದಾರೋ ಯೋಚಿಸಬೇಕು? ಇವರ ತೀರ್ಪುಗಳನ್ನು ಸಾರ್ವಜನಿಕ ಹಾಗೂ ಸಾಮಾಜಿಕ ಹಿತದೃಷ್ಟಿಯಿಂದ ಉಚ್ಚ ನ್ಯಾಯಾಲಯದವರು ಪುನರ್ ಪರಿಶೀಲನೆ ಮಾಡಬೇಕು. ಈ ಪ್ರಾಜ್ನರು ಹೈಕೋರ್ಟಿಗೆ ಹೋಗುವ ಅವಕಾಶವೂ ಇಲ್ಲದಿಲ್ಲ! ಇಂತಹ ಜಾತಿಗ್ರಸ್ಥ ಮನಸ್ಥಿತಿಯವರು ಹೈಕೋರ್ಟಿಗೆ ಹೋದರೆ ಆಗಬಹುದಾದ ಅನಾಹುತದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ!

ಒಂದು ಕಡೆ ಸತ್ಯಗಳನ್ನು ಈ ರೀತಿಯಲ್ಲಿ ವ್ಯವಸ್ಥಿತವಾಗಿ ತಿರುಚುತಿದ್ದರೆ ಮತ್ತೊಂದು ಕಡೆ ಸುಳ್ಳುಗಳನ್ನು ವಿಜೃಂಭಿಸುವ ಕೆಲಸಗಳು 'ವಿದ್ಯಾವಂತರ' ವಲಯದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ!?

ಸಂವಿಧಾನದ ವಿಷಯದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಸಂಶಯ ಪಡುವವರು ಕನ್ನಂಬಾಡಿ ಕಟ್ಟೆಯನ್ನು ವಿಶ್ವೇಶ್ವರಯ್ಯನವರೊಬ್ಬರೇ ಕಟ್ಟಿದಂತೆ ಅಪದ್ದದ ಕತೆಗಳನ್ನು ಹೇಳುತ್ತಾ ವಿಜೃಂಭಿಸುತ್ತಾರೆ! ಇಲ್ಲಿ ಕನ್ನಂಬಾಡಿ ಕಟ್ಟಲು ತಮ್ಮ ಮನೆಯವರ ಒಡವೆಗಳನ್ನು ಮಾರಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್, ಮೂಲ ಸ್ಕೆಚ್ ಹಾಕಿದ ಬ್ರಿಟೀಶ್ ಇಂಜಿನಿಯರ್  ಗಳು, ಇಪ್ಪತ್ತೆರಡು ವರ್ಷ ದುಡಿದ ಏಳು ಜನ ಮುಖ್ಯ ಇಂಜಿನಿಯರ್ ಗಳು, ತಂತ್ರಜ್ಞರು, ಗಾರೆಯವರು, ಕೂಲಿಯವರೇ ಮುಂತಾದ ಬೆವರು, ನೆತ್ತರು ಬಸಿದವರು ಯಾರೂ ನೆನಪಾಗಲ್ಲ! "ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ.. ಕನ್ನಂಬಾಡಿಯ ಕಟ್ಟದಿದ್ದರೆ.." ಎಂದು ಹಾಡು ಕಟ್ಟಿ ಹಾಡುತ್ತಾ ವಿಜೃಂಭಿಸುತ್ತಾರೆ!

ಇದೀಗ ಸುಧಾಮೂರ್ತಿ ಎಂಬ ಇನ್ಪೋಸಿಸ್ಸಿನ ಒಡೆಯರು, ಸಜ್ಜನರು  ಹಾಗೂ ಕೋಟ್ಯಾದೀಶರಾದರೂ 'ಸರಳ ವ್ಯಕ್ತಿ'ಯಾಗಿಯೇ ಇರುವವರನ್ನು ವ್ಯವಸ್ಥಿತವಾಗಿ ಪ್ರೊಜೆಕ್ಟ್ ಮಾಡುವ ಕಾರ್ಯ ನಡೆಯುತ್ತಿದೆ! ಈಚೆಗೆ ಸಾಲುಮರದ ತಿಮ್ಮಕ್ಕನೊಂದಿಗೆ ಈಕೆಯ ಚಿತ್ರಗಳನ್ನು ಹಾಕಿ ಮೆರೆಸುತಿದ್ದಾರೆ. ಕಳೆದ ವರ್ಷ ನಾನು ಮುಖ್ಯಅಥಿತಿಯಾಗಿ ಹೋಗಿದ್ದ ಜಯನಗರದ ಶಾಲೆಯೊಂದರ ಸ್ವಾತಂತ್ರ   ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮನ ವೇಶ ಹಾಕಿದ್ದರು ಅವರ ನಡುವೆ ನಮ್ಮ ಸುಧಾಮೂರ್ತಿಯವರ ಪಾತ್ರಧಾರಿಯ ಮಗುವೂ ಇದ್ದದ್ದು ಕಂಡು ಆಶ್ಚರ್ಯವಾಯಿತು! ಈ ಹೆಣ್ಣುಮಗಳು ಇವರೆಲ್ಲಾ ಹೇಳುವಂತೆ ಒಳ್ಳೆಯವರೇ ಇರಬಹುದು,ಹಿಂದೊಮ್ಮೆ ನನ್ನ ಪ್ರವಾಸ ಕಥನ ಓದಿ, ಹೇಗೋ ನನ್ನ ಪೋನ್ ನಂಬರ್ ಸಂಗ್ರಹಿಸಿ ನನಗೆ ಪೋನ್ ಮಾಡಿ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.. ಅಷ್ಟು ಸೌಜನ್ಯ ಉಳ್ಳವರು, ಇವರ ಬಗ್ಗೆ ನನಗೆ ಯಾವ ಪೂರ್ವಾಗ್ರಹವೂ ಇಲ್ಲ, ಬದಲಿಗೆ ಗೌರವವಿದೆ, ಇವರ ಬಗ್ಗೆ ಎಲ್ಲಾ ಗೌರವಗಳನ್ನಿಟ್ಟುಕೊಂಡೇ ಈ ಪ್ರಶ್ನೆ ಕೇಳುತಿದ್ದೇನೆ.. ಕಿತ್ತೂರು ರಾಣಿ ಚೆನ್ನಮ್ಮ, ಸಾಲುಮರದ ತಿಮ್ಮಕ್ಕನೊಂದಿಗೆ ಸಮಾನವಾಗಿ ಇವರನ್ನು ಕೊಂಡೊಯ್ಯುವವರಿಗೆ ಕೇಳುವ ಪ್ರಶ್ನೆ.. ಸಮಾಜಕ್ಕೆ ಇವರ ಕೊಡುಗೆ ಏನು? "ಇವರು ಅಸಂಖ್ಯಾತ ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆ.." ಎನ್ನುತ್ತಾರೆ, ಆದರೆ "ಉದ್ಯೋಗ ಪಡೆದವರಾರು?..ಅವರ ಹಿನ್ನೆಲೆಯೇನು..?" ಎಂಬ ಪ್ರಶ್ನೆ ಇಲ್ಲಿ ಪ್ರಶ್ನೆಯಾಗೇ ಉಳಿದುಬಿಡುತ್ತೆ!  ಅನಂತಕುಮಾರ್ ತೀರಿಕೊಂಡಾಗ "ನಾವೆಲ್ಲಾ ಸಂಘ ಪರಿವಾರದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುತಿದ್ದೆವು.." ಎಂದು ಅವರೇ ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಅವರು ಮತ್ತವರ ಪತಿ ಇನ್ನೂ ಸಂಘಪರಿವಾರದ ಸಿದ್ದಾಂತದಿಂದ ದೂರವಾಗಿಲ್ಲ.. ದಯವಿಟ್ಟು ಹೇಳಿ..? ಇವರನ್ನು  ಇಲ್ಲಿ ಇಷ್ಟೊಂದು ಪ್ರೊಜೆಕ್ಟ್ ಮಾಡಲು ಬ್ರಾಹ್ಮಣ್ಯವನ್ನು ಬಿಟ್ಟು ಬೇರೇನಾದರೂ ಕಾರಣಗಳುಂಟೆ..?  ನನ್ನಂತವರು ಇದ್ದದ್ದನ್ನು ಇದ್ದಹಾಗೆ ಹೇಳುತ್ತಾ ಸಾಂಧರ್ಬಿಕವಾಗಿ ಬ್ರಾಹ್ಮಣ್ಯದ ಷಡ್ಯಂತರಗಳ ಕುರಿತು ಧ್ವನಿಯೆತ್ತಿದ ಆ ಕ್ಷಣ ನನ್ನನ್ನು ಯಾವ ಯಾವ ಭಾಷೆಯಲ್ಲಿ ಕುಟುಕುತ್ತಾರೆ ಎನ್ನುವುದು ತಿಳಿದಿದೆ. ಆದರೆ ನಮ್ಮ ಗುರುಗಳು (ಲಂಕೇಶ್) ಹೇಳಿಕೊಟ್ಟಿರುವುದು "ಎಷ್ಟೇ ಅಪ್ರಿಯವಾಗಿರಲಿ, ನಿಷ್ಠುರವಾಗಿರಲಿ ನಿನಗೆ ಮನದಟ್ಟಾದ ಸತ್ಯವನ್ನು ಸಾರ್ವಜನಿಕವಾಗಿ ಹೇಳಲು ಹಿಂಜರಿಯಬೇಡ.." ಎನ್ನುವುದನ್ನು ಜೀವವಿರುವವರೆಗೂ ಪಾಲಿಸುತ್ತೇನೆ..