ಪ್ರಕೃತಿ ಸೊಬಗಿಗೇ ಕಾಂಕ್ರೀಟ್ : ಭಾರೀ ವಿರೋಧ

ಪ್ರಕೃತಿ ಸೊಬಗಿಗೇ ಕಾಂಕ್ರೀಟ್ : ಭಾರೀ ವಿರೋಧ

ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಮಡಿಕೇರಿಯಲ್ಲಿ, ಪ್ರವಾಸೋದ್ಯಮ ಅಭಿವೃದ್ದಿ ಹೆಸರಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಭಾರೀ ವಿವಾದಕ್ಕೆ ಎಡೆಯಾಗಿದೆ.

ದಕ್ಷಿಣ ಭಾರತದ ಕಾಶ್ಮೀರ, ಭಾರತದ ಸ್ಕಾಟ್‍ಲ್ಯಾಂಡ್ ಎಂಬಿತ್ಯಾದಿ ವಿಶೇಷತೆ ಹೊಂದಿರುವ ಮಂಜಿನ ಮಡಿಕೇರಿಯಲ್ಲಿ ಇರುವ ಪ್ರವಾಸಿ ತಾಣಗಳಲ್ಲಿ ರಾಜಾಸೀಟ್ ಕೂಡ ಮುಖ್ಯವಾದುದು. ರಾಜರು ಇಲ್ಲಿ ಕುಟುಂಬ ಸಮೇತ ಕೂತು ಭೂರಮೆಯ ಸೊಬಗನ್ನು, ಕ್ಷಿತಿಜದಂಚಿನ ಮನಮೋಹಕ ದೃಶ್ಯಗಳನ್ನು ಸವಿಯುತ್ತಿದ್ದ ತಾಣವಾಗಿರುವ ಇಲ್ಲೀಗೆ ತೋಟಗಾರಿಕೆ ಇಲಾಖೆ ಉದ್ಯಾನವನ ನಿರ್ಮಿಸಿ, ಪ್ರವಾಸಿಗರು ಬಂದು ಹೋಗುವಂತೆ ಮಾಡಿದೆ.

ಇದಕ್ಕೆ ಒತ್ತಿಕೊಂಡಂತಿರುವ ಕುಂದೂರು ಮೊಟ್ಟೆ ದೇವಾಲಯದ ಸಮೀಪದಲ್ಲೀಗ 95 ಲಕ್ಷ ರುಗಳ ವೆಚ್ಚದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಹೊರಟಿದೆ. ಇಲ್ಲಿನ ಮಳಿಗೆಗಳಲ್ಲಿ ಸ್ವಸಹಾಯ ಮಹಿಳಾ ಸಂಘಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ತಯಾರಿಸಿದ ಉತ್ಪನ್ನಗಳು ಮತ್ತು ನೆರೆ ಸಂತ್ರಸ್ತರಾಗಿ ಬದುಕು ಕಳೆದುಕೊಂಡವರಿಗೆ ಇಲ್ಲಿ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುವುದಕ್ಕಾಗಿ ಎಂಬ ನೆಪವನ್ನು ಹೇಳಿದೆ.

ಯಾವುದೇ ಟೆಂಡರ್ ಕರೆಯದೆಯೇ, ಮಳಿಗೆ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ಯಾವ ಕಾರಣಕ್ಕೂ ಪ್ರಕೃತಿ ಸೌಂದರ್ಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇವೆ ಎಂದೇಳುತ್ತಿದೆ. ಆದರೆ ಈ ಯೋಜನೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಸಹಜ ಸೌಂದರ್ಯವನ್ನು ಬಲಿ ಕೊಡಲಾಗುತ್ತಿದೆ, ರಾಜಾಸೀಟ್ ನ ಆಜುಬಾಜನ್ನು ಕಟ್ಟಡ ಮಯಗೊಳಿಸಲಾಗುತ್ತಿದೆ, ಇಂಥದ್ದು ಬೇಡವೇ ಬೇಡ ಎಂದು ಹೋರಾಟಕ್ಕೆ ಇಳಿಯಲಾಗಿದೆ.

ಸದರಿ ಭೂಮಿ ಮೂಲತಃ ಮೇರಿಯಂಡ ಕುಟುಂಬಕ್ಕೆ ಸೇರಿದ್ದು, ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಈ ಕುಟುಂಬದವರು.ನಲವತ್ತು ವರ್ಷಗಳ ಹಿಂದೆಯೇ, ಅನೇಕ ಮರಗಳು, ನೈಸರ್ಗಿಕ ನೀರಿನ ಹರಿವು, ಅಂತರ್ಜಲ ಸಮೃದ್ದಿ ಆಗಿರುವ ಈ ಭೂಮಿಯನ್ನು ಸರ್ಕಾರ ತೆಗೆದುಕೊಂಡಿದೆ. ಇಲ್ಲಿಂದಲೇ ರಾಜಾಸೀಟ್‍ ನ ಉದ್ಯಾನವನಕ್ಕೆ ನೀರಿನ ಸೌಲಭ್ಯ ಮಾಡಿಕೊಂಡಿದೆ.

ಒಂದು ದಿಕ್ಕಿನಲ್ಲಿ ಓಂಕಾರೇಶ್ವರ ದೇವಾಲಯ, ಇನ್ನೊಂದು ದಿಕ್ಕಿನಲ್ಲಿ ನೆಹರು ಮಂಟಪ, ಇವೆರಡರ ನಡುವಣ ರಾಜಾಸೀಟ್ ಮೌನದ ನಡುವೆಯೇ ಪ್ರಕೃತಿಯನ್ನು ಆ ಸ್ವಾದಿಸುವ ಅಪೂರ್ವ ಐತಿಹಾಸಿಕ ತಾಣ. ಇದಕ್ಕೆ ಹೊಂದಿಕೊಂಡಂತೆ ಈಗ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹೊರಟಿರುವುದು, ಇಲ್ಲಿನ ಮೌನವನ್ನೇ ನುಂಗಿಹಾಕಲಿದೆ. ನೈಸರ್ಗಿಕ ಸೊಬಗಿಗೆ ಕಾಂಕ್ರೀಟ್ ಕಟ್ಟಡ ಕನ್ನ ಹಾಕಲಿದೆ.