ಕಸ್ತೂರಿ ರಂಗನ್ ವರದಿ, ತಪ್ಪದ ರಗಳೆ

ದಶಕಕ್ಕೂ ಹೆಚ್ಚು ಕಾಲದಿಂದ ತೂಗು ಉಯ್ಯಾಲೆಯಲ್ಲೇ ಇರುವ ಕಸ್ತೂರಿ ರಂಗನ್ ವರದಿಯ ಶಿಫಾರಸ್ಸಿನಲ್ಲಿರುವ ಅಂಶಗಳನ್ನು ಯಥಾವತ್ತು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮತ್ತೆ ವಿರೋಧಿಸಿದೆ.

ಕಸ್ತೂರಿ ರಂಗನ್ ವರದಿ, ತಪ್ಪದ ರಗಳೆ

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದಾದ್ಯಂತ 1 ಲಕ್ಷದ 64 ಸಾವಿರದ 200 ಚ.ಕಿ.ಮೀ ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟ ಹರಡಿದೆ. ಇದರಲ್ಲಿ 1 ಲಕ್ಷದ 59 ಸಾವಿರದ 940 ಚ.ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮವಲಯ ಎಂದು ಕಸ್ತೂರಿ ರಂಗನ್ ವರದಿ ಹೇಳಿದೆ. ಇದರಲ್ಲಿ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಯ 4156 ಗ್ರಾಮಗಳು ಸೂಕ್ಷ್ಮ ಪರಿಸರ ವಲಯದಲ್ಲಿ ಬರುತ್ತವೆ. 20 ಸಾವಿರದ 668 ಚ.ಕಿ.ಮೀ ವಿಸ್ತಾರದ ಈ ಪ್ರದೇಶದಲ್ಲಿ ಶೇ. 63 ರಷ್ಟು ಜನ ವಾಸಿಸುತ್ತಿದ್ದಾರೆ.

ಸೂಕ್ಷ್ಮ ಪರಿಸರ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಮೊಬೈಲ್, ಕಾಂಕ್ರೀಟ್ ರಸ್ತೆ, ಸರ್ಕಾರಿ ಮನೆ, ಸರ್ಕಾರಿ ಅನುದಾನ, ಪರಿಹಾರ ಕೊಡಬಾರದು, ಗಣಿಗಾರಿಕೆ, ಮರಳುಗಾರಿಕೆ, ಮೀನುಗಾರಿಕೆ ನಡೆಯಬಾರದು, ಷರತ್ತುಬದ್ದವಾಗಿ ಜಲ ವಿದ್ಯುತ್ ಘಟಕ ಇರಬಹುದಾದರೂ, ಶಾಖೋತ್ಪನ್ನ ಘಟಕಗಳು ಇರಲೇಬಾರದು, ಪವನ ವಿದ್ಯುತ್ ತಯಾರಿಕೆ ಸಲ್ಲದು ಎಂಬಿತ್ಯಾದಿ ಅಂಶಗಳನ್ನು ವರದಿ ಹೇಳಿದ್ದು, ಪ್ರಾಪಂಚಿಕ ತಾಪಮಾನ ಕಾಯ್ದುಕೊಳ್ಳುವುದು, ಪಶ್ಚಿಮ ಘಟ್ಟ ಮತ್ತು ಜೀವ ಪರಿಸರವನ್ನು ಉಳಿಸಿಕೊಳ್ಳಲು ಸೂಕ್ಷ್ಮ ಪರಿಸರ ವಲಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು ಎಂಬುದು ಇದರ ಸಾರವಾಗಿದೆ.

ಕರ್ನಾಟಕದ ಇಷ್ಟೊಂದು ವ್ಯಾಪ್ತಿಯನ್ನು ಸೂಕ್ಷ್ಮ ವಲಯದಲ್ಲಿ ಗುರುತಿಸಿದ್ದರೆ, ಕೇರಳದಲ್ಲಿ ಈ ವ್ಯಾಪ್ತಿಗೆ 123 ಗ್ರಾಮಗಳು ಮಾತ್ರವೇ ಬರುತ್ತವೆ. ಹೀಗಾಗಿಯೇ ಮೊದಲು ಇದ್ದ ಗಾಡ್ಗೀಳ್ ವರದಿ, ಈಗಿನ ಕಸ್ತೂರಿ ರಂಗನ್ ವರದಿ ಉಪಗ್ರಹದ ನೆರವು ಪಡೆದು, ಹವಾ ನಿಯಂತ್ರಿತ ಕೊಠಡಿಯಲ್ಲಿ ಕೂತು ಸಿದ್ದಗೊಳಿಸಿದ್ದೇ ಹೊರತು, ವಾಸ್ತವವಾಗಿ ಆ ಪ್ರದೇಶಗಳನ್ನೆಲ್ಲ ಅಭ್ಯಾಸಿಸಿ ತಯಾರು ಮಾಡಿದ್ದಲ್ಲ ಎಂಬ ಆರೋಪಗಳಿವೆ.

ಕೇಂದ್ರ ಸರ್ಕಾರ ಇದನ್ನು ಅನುಷ್ಟಾನಿಸಲು ಅಧಿಸೂಚನೆಯನ್ನು ಪ್ರಕಟಿಸಿದೆ. ಆದರೆ ರಾಜ್ಯದ ಸರ್ಕಾರಗಳು ಹಿಂದಿನಿಂದಲೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಇಷ್ಟೊಂದು ದೊಡ್ಡ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿಸಬೇಕಿಲ್ಲ. 850 ಗ್ರಾಮಗಳಿಗೆ ಸೀಮಿತಗೊಳಿಸಿ. ಇದನ್ನು ಅನುಷ್ಠಾನಿಸಿದರೆ ಜನರ ಜೀವನೋಪಾಯ ಸಂಕಷ್ಟಕ್ಕೀಡಾಗುತ್ತೆ, ಆರ್ಥಿಕ ದುಷ್ಪರಿಣಾಮ ಬೀರುತ್ತೆ ಎಂಬಿತ್ಯಾದಿ ಅಂಶಗಳನ್ನು ಮುಂದಿಟ್ಟು, ಅಧಿಸೂಚನೆಗೆ ಮತ್ತೊಮ್ಮೆ ವಿರೋಧಿಸಿದೆ. ಪರಿಣಾಮವಾಗಿ ಮತ್ತೊಮ್ಮೆ ಈ ವಿಚಾರ ಸಂದಿಗ್ದತೆಗೆ ಸಿಲುಕಿದೆ.