ಜೆಎನ್‍ಯು ವಿದ್ಯಾರ್ಥಿ, ಬೋಧಕರ ಮೇಲಿನ ದಾಳಿ, ಹಲ್ಲೆ ಹಿಂದಿತ್ತೇ ಪೂರ್ವ ಸಿದ್ಧತೆ!

ಜೆಎನ್‍ಯು ವಿದ್ಯಾರ್ಥಿ, ಬೋಧಕರ ಮೇಲಿನ ದಾಳಿ, ಹಲ್ಲೆ ಹಿಂದಿತ್ತೇ  ಪೂರ್ವ ಸಿದ್ಧತೆ!

ನವದೆಹಲಿ: ದೇಶದ ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ನಿನ್ನೆ ರಾತ್ರಿ ಮುಸುಕುಧಾರಿಗಳು ನಡೆಸಿರುವ ದಾಳಿ ಪೂರ್ವ ಯೋಜಿತವಾಗಿತ್ತೇ,  ಇದರ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪಾತ್ರವಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲೆ ಮುಸುಕುಧಾರಿಗಳು ನಡೆಸಿದ್ದ ದಾಳಿ, ಹಲ್ಲೆ ಪ್ರಕರಣಗಳ ವಿರುದ್ಧ ದೇಶಾದ್ಯಾಂತ ಪ್ರತಿಭಟನೆಗಳು ವ್ಯಕ್ತವಾಗಿವೆ. ಇದೇ ಹೊತ್ತಿನಲ್ಲಿಯೇ, ದಾಳಿ ನಡೆಯುವುದಕ್ಕೂ ಮುನ್ನವೇ ದಾಳಿ ಮಾಡಲು ಪೂರ್ವ ತಯಾರಿ ನಡೆಸಲಾಗಿತ್ತು ಎಂಬ ಆರೋಪಗಳನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳು ದೊರೆಯಲಾರಂಭಿಸಿವೆ.

ದಾಳಿ ನಡೆಸುವ ಕುರಿತು ವಾಟ್ಸಾಪ್‌ ಗ್ರೂಪ್‌ವೊಂದನ್ನು ರಚಿಸಿಕೊಂಡಿದ್ದ ಆರೋಪಿಗಳು ದಾಳಿ ನಡೆಸಲು ಸಂದೇಶಗಳನ್ನು ತಮ್ಮ ತಮ್ಮಲ್ಲಿ ಹಂಚಿಕೊಂಡು ಮೊದಲೇ ತಯಾರಿ ನಡೆಸಿತ್ತು. ಇದರ ನೇತೃತ್ವವನ್ನು ಎಬಿವಿಪಿ ವಹಿಸಿತ್ತು ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಾಟ್ಸಾಪ್‌ ಸಂದೇಶದ ಸ್ಕ್ರೀನ್ ಶಾಟ್‍ಗಳು ನಿರೂಪಿಸುತ್ತಿವೆ.

ಭಾನುವಾರ(ಜ.5)ಸಂಜೆ 5.39 ರ ಹೊತ್ತಿಗೆ ‘ಫ್ರೆಂಡ್ಸ್ ಆಫ್ ಆರ್‍ಎಸ್‍ಎಸ್’ ಎನ್ನುವ ವಾಟ್ಸಾಪ್‌ ಗುಂಪಿನಿಂದ ‘ಎಡ ಪಂಥೀಯ ಭಯೋತ್ಪಾದಕರ ವಿರುದ್ಧ ಹೋರಾಡಲು ಈ ಗುಂಪನ್ನು ಸೇರಿಕೊಳ್ಳಿ. ಅವರನ್ನು ಹೊಡೆಯುವುದೊಂದೆ ಅವರಿಗೆ ನೀಡುವ ಚಿಕಿತ್ಸೆ’ ಎಂದು ಒಬ್ಬ ವ್ಯಕ್ತಿ ಸಂದೇಶ ಕಳಿಸಿದ್ದಾನೆ.


ಸುಮಾರು ಸಂಜೆ 6 ಗಂಟೆಗೆ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಾಸ್ಟೆಲ್‌ಗೆ ನುಗ್ಗಿದ ಮುಸುಕುಧಾರಿಗಳು ಕೈಯಲ್ಲಿ ರಾಡ್‍ಗಳನ್ನು ಹಿಡಿದುಕೊಂಡು ಬಂದಿದ್ದಾರೆ. ಅವರನ್ನು ಕಂಡಾಗ ವಿದ್ಯಾರ್ಥಿಗಳೆಲ್ಲ  ಗಾಬರಿಗೊಂಡು ವಿಚಲಿತರಾಗಿರುವ ದೃಶ್ಯಗಳು ಹರಿದಾಡುತ್ತಿವೆ.
ಇದಾದ ನಂತರ ಸಂಜೆ 7 ರ ಹೊತ್ತಿಗೆ ಹಾಸ್ಟೆಲ್‌ಗೆ ನುಗ್ಗಿ ಅವರನ್ನು ಹೊಡೆಯೋಣ ಎಂಬ ಸಂದೇಶಗಳು ಎಬಿವಿಪಿಯ ವಾಟ್ಸಾಪ್‌ ಗ್ರೂಪ್‍ಗಳಲ್ಲಿ ಹರಿದಾಡಿವೆ. ಅಷ್ಟೇ ಅಲ್ಲದೆ, ಇನ್ನೊಂದು ಗುಂಪಿನಲ್ಲಿ ಇಂದು ಇವರನ್ನು ಹೊಡೆಯದಿದ್ದರೆ ಮತ್ತೆ ಯಾವಾಗ? ಇವರೆಲ್ಲಾ ಗಲೀಜು ಮಾಡಿದ್ದಾರೆ ಎಂಬ ಸಂದೇಶಗಳು ಕಿಚ್ಚನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಇನ್ನು ರಾತ್ರಿ 8.41ರ ಹೊತ್ತಿಗೆ ‘ಯುನಿಟಿ ಅಗೆನೆಸ್ಟ್‌ ಲೆಫ್ಟ್‌’ ಎಂಬ ಗುಂಪಿನಲ್ಲಿ  ‘ಪೊಲೀಸ್‌ ಬಂದ್ರಾ ಅಣ್ಣಾ?, ಈ ಗುಂಪಿನಲ್ಲಿ ಎಡ ಪಂಥೀಯರೂ ಸೇರಿಕೊಂಡಿದ್ದಾರೆ ಎಂದು  ತಿಳಿಸಿರುವ ಒಬ್ಬ, ಹಾಗೆಯೇ ಈ ಲಿಂಕ್‍ನ್ನು ಎಲ್ಲರಿಗೂ ಶೇರ್ ಮಾಡಿದ್ದಿರಾ? ಎಂದು ಮತ್ತೊಬ್ಬ ಕೇಳಿದ್ದಾನೆ.
ಇವನ ಫೋನ್ ನಂಬರ್ ಅನ್ನು ಪರಿಶೀಲಿಸಿದಾಗ ಇವನ ಹೆಸರು ಓಂಕಾರ್ ಶ್ರೀವಾತ್ಸವ್ ಎಂದು ತಿಳಿದು ಬಂದಿದೆ. ಇವನು ದೆಹಲಿ ಎಬಿವಿಪಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಎಬಿವಿಪಿಯ ಮಾಜಿ ಉಪಾಧ್ಯಕ್ಷ ಎಂದು ಗೊತ್ತಾಗಿದೆ. ಸದ್ಯ ಇವನು ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ರಾಷ್ಟ್ರೀಯ ಸುದ್ದಿ ಜಾಲ ತಾಣವೊಂದು ವರದಿ ಮಾಡಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಂಘಟನೆಯ ಮೇಲೆ ನಡೆದಿರುವ ಈ ಹಿಂಸಾಚಾರವನ್ನು ವಿದ್ಯಾರ್ಥಿಗಳ ಒಕ್ಕೂಟ ಖಂಡಿಸಿದೆಯಲ್ಲದೆ,  ಭಾರತೀಯ ಜನತಾ ಪಾರ್ಟಿ ನಾಯಕತ್ವದ ರಾಷ್ಟ್ರೀಯ ಸ್ವಯಂಸೇವಕ  ಸಂಘ, ಎಬಿವಿಪಿ, ಸ್ಟೂಡೆಂಟ್ ಫೆಡರೇಷನ್‌ ಆಫ್‌ ಇಂಡಿಯಾ ಈ ತೊಂದರೆಯನ್ನು ಸೃಷ್ಟಿಸುತ್ತಿವೆ ಎಂದೂ ವರದಿಯಲ್ಲಿ ದಾಖಲಿಸಿದೆ.

ನಾವು ಅವರ ಹಾಸ್ಟೆಲ್ ಪ್ರವೇಶ ಮಾಡಿ ಅವರನ್ನು ಹೊಡೆಯೋಣ ಎಂಬ ಸಂದೇಶವು ಸೌರಬ್ ದುಬೈ ಎಂಬುವವರಿಂದ ಮೊದಲು ರವಾನೆಯಾಗಿತ್ತು.  ಈತನ ಫೇಸ್‍ಬುಕ್ ಪ್ರೊಫೈಲ್ ಗಮನಿಸಿದಾಗ ದೆಹಲಿಯ ಶಾಹಿದ್ ಭಗತ್‍ಸಿಂಗ್ ಸಂಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದಾನೆ ಎಂದು ತಿಳಿದು ಬಂದಿದೆ. ಜೆನ್ಯುಟಿ ಫಾರ್ ಮೋದಿ ಎಂಬ ವಾಟ್ಸಾಪ್‌ ಗುಂಪನ್ನು ಇವನು ಹೊಂದಿರುವುದು ಪರಿಶೀಲನೆ ವೇಳೆಯಲ್ಲಿ ಗೊತ್ತಾಗಿದೆ.

ಎಬಿವಿಪಿ ಅಲ್ಲದ ಮತ್ತು ಆರ್‍ಎಸ್‍ಎಸ್ ಅಲ್ಲದ ಜನರು ಈ ಗುಂಪಿನ ಲಿಂಕ್ ಬಳಸಿ ಗುಂಪನ್ನು ಪ್ರವೇಶಿಸಿದಾಗ ಈ ಸಂದೇಶಗಳು ಸಾರ್ವಜನಿಕವಾಗಿ ಕಂಡುಬಂದಿವೆ. ಸಂದೇಶಗಳ ಸ್ಕ್ರೀನ್ ಶಾಟ್‍ಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಹಿಂಸಾಚಾರಕ್ಕೆ ಮುಸ್ಲಿಮರು ಮತ್ತು ಎಡಪಂಥೀಯರನ್ನು ಹೊಣೆಗಾರರನ್ನಾಗಿಸಲು ಹೊಸ ಫೋನ್ ನಂಬರ್‌ಗಳನ್ನು  ದುರುದ್ದೇಶದಿಂದ ಸೇರಿಸಲಾಗಿದೆ. ನಂತರ ಬಲಪಂಥೀಯ ಕಾರ್ಯಕರ್ತರು ಸಾಮೂಹಿಕವಾಗಿ ಗುಂಪಿನಿಂದ ನಿರ್ಗಮಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಶಿವಂ ಶಂಕರ್ ಹೇಳಿದ್ದಾರೆ.

ಈ ಗುಂಪುಗಳಲ್ಲಿ ಸಿಕ್ಕ ಮತ್ತೊಂದು ಫೋನ್ ನಂಬರ್ ಆನಂದ್ ಮಂಗಲೆ ಅವರ ಹೆಸರಿನಲ್ಲಿದೆ.  ಇವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ್ದವರು. ಮಾಹಿತಿಯನ್ನು ಹಾಗೂ ಸ್ಪಷ್ಟೀಕರಣವನ್ನು ಪಡೆಯಲು ಈ ಗುಂಪಿಗೆ ಸೇರಿದ್ದರು ಎಂದು ಹೇಳಲಾಗುತ್ತಿದೆ.