ಜೆಟ್ ಏರ್ವೇಸ್‌ನ ಏಳು-ಬೀಳು

ಜೆಟ್ ಏರ್ವೇಸ್‌ನ ಏಳು-ಬೀಳು

ಭಾರತದಲ್ಲಿ ವಿಮಾನಗಳ ಮೂಲಕ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಆದರೆ ಅದಕ್ಕೆ ತಕ್ಕಂತೆ ಏರಬೇಕಿದ್ದ ಏರ್ಲೈನ್ಗಳ ಲಾಭದ ಮೊತ್ತ ಮಾತ್ರ ಶೂನ್ಯವನ್ನು ಮುಟ್ಟಿದೆ. ಪ್ರತಿಯೊಂದು ಏರ್ಲೈನ್ಕಂಪನಿಗಳೂ ಕೂಡ ಸಾಲ ಬಾಧೆಯಲ್ಲಿ ಸಿಲುಕಿಕೊಂಡಿವೆ. ಕುರಿತು ವೀರನಾರಾಯಣ ಅವರ ವಿಶ್ಲೇಷಣೆ ಇಲ್ಲಿದೆ
ಕಿಂಗ್ ಫಿಷರ್ ಏರ್ಲೈನ್ಸ್ ನಂತರ ಇದೀಗ ಸಂಕಷ್ಟಕ್ಕೆ ಸಿಲುಕಿರುವುದು ಜೆಟ್ ಏರ್ವೇಸ್. ಕಳೆದ ದಶಕದಲ್ಲಿ ದೇಶದ ಮೂರು ಅಗ್ರಮಾನ್ಯ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದುದು ಸಹ ಇದೇ ಜೆಟ್ ಏರ್ವೇಸ್.
ನಿಮಗೆ ಗೊತ್ತಿರಲಿ, ಇವತ್ತು ಜಗತ್ತಿನಲ್ಲೇ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ವಿಮಾನಯಾನ ವಲಯ ಎಂದರೆ ಅದು ಭಾರತದ್ದು. ಅಜಮಾಸು 130 ಕೋಟಿ ಜನರಿರುವ ಬೃಹತ್ ಭಾರತದಲ್ಲಿ ಆರ್ಥಿಕವಾಗಿ ಕೆಳವರ್ಗದವರು ಮಧ್ಯಮ ವರ್ಗಕ್ಕೂ, ಮಧ್ಯಮ ವರ್ಗದವರು ಮೇಲ್ಮಧ್ಯಮ ವರ್ಗಕ್ಕೂ, ಮೇಲ್ಮಧ್ಯಮ ವರ್ಗದವರು ಶ್ರೀಮಂತ ವರ್ಗಕ್ಕೂ ಅತಿ ವೇಗದಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಅಂತಾರಾಷ್ಟ್ರೀಯವಾಗಿ ಮಾತ್ರವಲ್ಲದೆ, ದೇಶೀಯವಾಗಿಯೂ ಸಂಚಾರಕ್ಕೆ ವಿಮಾನ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ವರದಿ ಅನುಸಾರ, 2018ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 138.9 ದಶಲಕ್ಷ ಪ್ರಯಾಣಿಕರು ವಿಮಾನ ಬಳಸಿದ್ದಾರೆ. 2017ಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆ ಶೇ. 18.6ರಷ್ಟು ಏರಿಕೆಯಾಗಿದೆ. ವರ್ಷೇ ವರ್ಷೇ ಈ ಪ್ರಮಾಣ ಏರುತ್ತಲೇ ಇದೆ. ಇದೀಗ ಉಡಾನ್ ಯೋಜನೆಯಿಂದಾಗಿ ಸಣ್ಣ ನಗರ-ಪಟ್ಟಣಗಳ ಜನರೂ ವಿಮಾನ ಬಳಕೆಯ ಆಕರ್ಷಣೆಗೆ ಒಳಗಾಗಿದ್ದಾರೆ.
ಇವೆಲ್ಲಾ ಸರಿ. ಆದರೆ ವಿಮಾನಯಾನ ಸಂಸ್ಥೆಗಳು ಏಕೆ ನಷ್ಟಕ್ಕೆ ಒಳಗಾಗುತ್ತಿವೆ? ದೇಶದಲ್ಲಿ ಭವಿಷ್ಯದ ವಿಮಾನಯಾನ ವಲಯದ ಅವಕಾಶ, ಬೃಹತ್ ಮಾರುಕಟ್ಟೆ ಪರಿಗಣಿಸಿ ವಿಮಾನಯಾನ ಸಂಸ್ಥೆಗಳು ಸಾರ್ವಭೌಮನಾಗಲು ದರ ಸಮರಕ್ಕೆ ಮುಂದಾಗಿದ್ದೇ ಈ ಅಧೋಮುಖಕ್ಕೆ ಮುಖ್ಯ ಕಾರಣ ಎನ್ನಬಹುದು. 
ಇವೆಲ್ಲಾ ಆರಂಭವಾಗಿದ್ದು ಇಸವಿ 2000ದಲ್ಲಿ. ಪ್ರಯಾಣಿಕರನ್ನು ಸೆಳೆಯಲು ವಿಮಾನಯಾನ ಸಂಸ್ಥೆಗಳು ನಾ-ಮುಂದು, ತಾ-ಮುಂದು ಎಂಬಂತೆ ಪ್ರಯಾಣ ಶುಲ್ಕ ಇಳಿಸತೊಡಗಿದವು. ಜತೆಗೆ ಪ್ರಯಾಣದ ವೇಳೆ ಪುಕ್ಕಟೆ ಊಟ, ಇಂಟರ್ನೆಟ್ ಮತ್ತಿತರ ಸೌಲಭ್ಯಗಳನ್ನು ಸ್ಪರ್ಧಾತ್ಮಕವಾಗಿ ನೀಡತೊಡಗಿದವು. ಮತ್ತೊಂದೆಡೆ ನಿರ್ವಹಣಾ ವೆಚ್ಚ ಏರತೊಡಗಿತು. ಅದರಲ್ಲೂ ವಿಮಾನ ಇಂಧನದ ಮೇಲಿನ ತೆರಿಗೆಯೇ ಶೇ. 30ಕ್ಕೆ ಮುಟ್ಟಿತು.
ಜೆಟ್ ಏರ್ವೇಸ್ ಸಹ ದರ ಸಮರದಲ್ಲಿ ಹಿಂದೆ ಬೀಳಲಿಲ್ಲ. ಹಿತಕರ ಪ್ರಯಾಣ ಅನುಭವ ನೀಡುವುದಕ್ಕೆ ಹೆಸರಾದ ಜೆಟ್ ಏರ್ವೇಸ್ ಶುಲ್ಕ ದರ ಇಳಿಸಿದರೂ, ಇತರ ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆಗಳಂತೆ ಪ್ರಯಾಣಿಕರಿಗೆ ಸೌಲಭ್ಯ ನೀಡುವಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಬಹುತೇಕ ಸೌಲಭ್ಯಗಳನ್ನು ಉಚಿತವಾಗಿಯೇ ನೀಡತೊಡಗಿತು. ಈ ಎಲ್ಲ ಕಾರಣಗಳಿಂದ ಸಂಸ್ಥೆಯ ಸಾಲದ ಮೊತ್ತ ಬೆಳೆಯುತ್ತಲೇ ಹೋಯಿತು. ಒಂದು ಅಂದಾಜಿನ ಪ್ರಕಾರ ಸಂಸ್ಥೆಯ ಮೇಲೆ ಒಂದು ಶತಕೋಟಿ ಡಾಲರ್ ಸಾಲದ ಹೊರೆ ಇದೆ.
ವಿಜಯ್ ಮಲ್ಯ ಒಡೆತನದ ಕಿಂಗ್ಫಿಷರ್ ವಿಮಾನಯಾನ ಸಂಸ್ಥೆ 2012ರಲ್ಲಿ ಕದ ಮುಚ್ಚಿದ ನಂತರ, ಸಂಕಷ್ಟಕ್ಕೆ ಒಳಗಾಗಿದ್ದು, ಸ್ಪೈಸ್ ಜೆಟ್ ಸಂಸ್ಥೆ. ಆದರೂ ಸಕಾಲದಲ್ಲಿ ಆ ಸಂಸ್ಥೆಯ ಮಾಲೀಕರು ಮತ್ತು ಮ್ಯಾನೇಜ್ಮೆಂಟ್ ತಂಡ ಮುಂಜಾಗ್ರತೆ ವಹಿಸಿದ್ದರಿಂದ ಸ್ಪೈಸ್ ಜೆಟ್ ಸಂಕಷ್ಟದ ಸುಳಿಯಿಂದ ಪಾರಾಯಿತು. ಸಾರ್ವಜನಿಕ ವಲಯದ ಇಂಡಿಯನ್ ಏರ್ಲೈನ್ಸ್ ಪರಿಸ್ಥಿತಿ ಕೂಡಾ ಭಿನ್ನವಾಗಿಲ್ಲ. ಇದಕ್ಕೂ ನೂರಾರು ಕೋಟಿ ರೂಪಾಯಿ ಸಾಲ ನೆರವು ನೀಡಿದ್ದರಿಂದ ಸಂಸ್ಥೆ ಮುನ್ನಡೆಯುತ್ತಿದೆ. ಹಾಗೆ ನೋಡಿದರೆ ಒಂದು ಇಂಡಿಗೋ ಸಂಸ್ಥೆ ಮಾತ್ರ ಯಾವುದೇ ಹೆಚ್ಚುವರಿ, ಐಶಾರಾಮಿ ಸೌಲಭ್ಯಗಳನ್ನು ನೀಡದೆ ವೆಚ್ಚಕ್ಕೆ ಕಡಿವಾಣ ಹಾಕಿ, ಒಂದಿಷ್ಟು ಲಾಭ ಕಾಣುತ್ತಿದೆ. ಉಳಿದ ಸಂಸ್ಥೆಗಳದ್ದೂ ನಷ್ಟದ ಹಾದಿಯೇ.
ಜೆಟ್ ಏರ್ವೇಸ್ ವಿಚಾರಕ್ಕೆ ಮರಳುವುದಾದರೆ, ಉದ್ಯಮಿ ನರೇಶ್ ಗೋಯಲ್ ಅವರು 1993ರಲ್ಲಿ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ್ದ ಸಂಸ್ಥೆ ಇದು. ಒಂದೊಮ್ಮೆ ನರೇಶ್ ಗೋಯಲ್ ಅವರು ಭಾರತದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದ್ದೂ ನಿಜ. 1996ರಲ್ಲಿ ವಾರ್ಷಿಕ 24 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಜೆಟ್ ಏರ್ವೇಸ್, ದೇಶದ ವಿಮಾನಯಾನ ಮಾರುಕಟ್ಟೆಯ ಶೇ.20ರಷ್ಟು ಪಾಲು ಹೊಂದಿತ್ತು. ಸರ್ಕಾರಿ ಒಡೆತನದ ಇಂಡಿಯನ್ ಏರ್ಲೈನ್ಸ್ ನಂತರ 2ನೇ ಬೃಹತ್ ವಿಮಾನಯಾನ ಸಂಸ್ಥೆಯಾಗಿತ್ತು. 
ನಂತರದ ವರ್ಷಗಳಲ್ಲಿ ಏರುಮುಖವಾಗಿಯೇ ನಡೆದ ಜೆಟ್ ಏರ್ವೇಸ್, ಏರ್ ಸಹರಾ ಸಂಸ್ಥೆಯನ್ನೂ ಖರೀದಿಸಿತು. ಪ್ರತಿಸ್ಪರ್ಧಿ ಕಿಂಗ್ಫಿಷರ್ನೊಂದಿಗೆ ಸಂಚಾರ ಮಾರ್ಗ ಸಹಕಾರ ಒಪ್ಪಂದ ಏರ್ಪಡಿಸಿಕೊಂಡಿತು. ಕಾಲಾಂತರದಲ್ಲಿ ಆ ಸಂಸ್ಥೆಯ ಪ್ರಯಾಣಿಕರ ನೆಲೆಯನ್ನೂ ತಾನೇ ಆವರಿಸಿಕೊಂಡಿತು. 
ಭಾರತೀಯ ವಿಮಾನಯಾನ ಸಂಸ್ಥೆಗಳ ಶೇಕಡ 49ರಷ್ಟು ಷೇರುಗಳನ್ನು ವಿದೇಶಿ ಸಂಸ್ಥೆಗಳು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ಜೆಟ್ ಏರ್ವೇಸ್ನ ಶೇಕಡ 26ರಷ್ಟು ಷೇರುಗಳನ್ನು ಅಬುಧಾಬಿಯ ಎಟಿಹಾಡ್ ಸಂಸ್ಥೆಗೆ ಮಾರಾಟ ಮಾಡಲಾಯಿತು. 
ನಂತರದ ವರ್ಷಗಳಲ್ಲಿ ಜೆಟ್ ಏರ್ವೇಸ್ನ ಯಶಸ್ಸು ಬಹುಕಾಲ ನಡೆಯಲಿಲ್ಲ. ಸ್ಪೈಸ್ ಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ಮಾರುಕಟ್ಟೆ ಪ್ರವೇಶಿಸಿ ಕಡಿಮೆ ದರ ಮೂಲಕ ಪ್ರಯಾಣಿಕರನ್ನು ಆಕರ್ಷಿಸತೊಡಗಿದಾಗ, ಜೆಟ್ ಏರ್ವೇಸ್ ಕೂಡಾ ದರ ಸಮರಕ್ಕೆ ಮುಂದಾಯಿತು.
ಇದರ ಪರಿಣಾಮ ನಷ್ಟದ ಹೊರೆ ಹೆಚ್ಚಿದಂತೆ ಜೆಟ್ ಏರ್ವೇಸ್ ಕೂಡಾ, ಕಿಂಗ್ ಫಿಷರ್ನಂತೆ ತನ್ನ ಸಿಬ್ಬಂದಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡತೊಡಗಿತು. ಹೀಗಾಗಿ ಆ ಸಿಬ್ಬಂದಿ ಕೂಡಾ ಈಗ ಮುಷ್ಕರದ ಹಾದಿ ಹಿಡಿದಿದ್ದಾರೆ. ಇದಲ್ಲದೆ ವಿಮಾನಕ್ಕೆ ಇಂಧನ ಪೂರೈಸುವ ಸಂಸ್ಥೆಯ ಬಾಕಿ ಸಹ ಏರತೊಡಗಿತು. ಇದರಿಂದಾಗಿ ಏಪ್ರಿಲ್ 5ರಂದು ಜೆಟ್ ಏರ್ವೇಸ್ ವಿಮಾನಗಳಿಗೆ ಇಂಧನ ಪೂರೈಕೆ ಸರಬರಾಜು ನಿಲ್ಲಿಸಲಾಯಿತು. ಇದಲ್ಲದೆ ಗುತ್ತಿಗೆ ಪಡೆದ ವಿಮಾನಗಳ ಬಾಡಿಗೆ ಪಾವತಿ ಕೂಡಾ ಮಾಡಲಾಗದೆ ಜೆಟ್ ಏರ್ವೇಸ್, ಬಹುತೇಕ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸುತ್ತಿದೆ. ಒಂದೊಮ್ಮೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾಗಿದ್ದ ಜೆಟ್ ಏರ್ವೇಸ್ ಇದೀಗ ಅಧೋಮುಖಿಯಾಗಿದೆ.
ಹಾಗಂತ, ಉದ್ಯಮ ವಲಯದಲ್ಲಿ ಒಂದು ಸಂಸ್ಥೆಯ ನಷ್ಟವನ್ನು ಅದೊಂದು ಖಾಸಗಿ ಅವನತಿ ಎಂದು ನಿರ್ಲಕ್ಷಿಸಿ ಸುಮ್ಮನಿರಲಾಗದು. ಸಂಸ್ಥೆಯೊಂದರ ನಷ್ಟ ಅಥವ ಅವನತಿ ಹಲವು ಸರಣಿ ಪರಿಣಾಮಗಳನ್ನು ಉಂಟು ಮಾಡಿ, ಸದರಿ ವಲಯವನ್ನು ಅಲ್ಲೋಲ ಕಲ್ಲೋಲ ಮಾಡುವುದರ ಜತೆಗೆ ಒಟ್ಟಾರೆ ದೇಶದ ಆರ್ಥಿಕತೆಯ ಬುಡವನ್ನೂ ಅಲುಗಿಸುತ್ತದೆ. ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗ ಸೃಷ್ಟಿಸುತ್ತದೆ. ಸದರಿ ನಿರುದ್ಯೋಗಿಗಳ ಖರೀದಿ ಸಾಮರ್ಥ್ಯ ಕುಗ್ಗಿಸುತ್ತದೆ. ಇದರ ಪ್ರತ್ಯಕ್ಷ, ಪರೋಕ್ಷ ಪರಿಣಾಮಗಳು ಮಾರುಕಟ್ಟೆ ಮತ್ತು ಆರ್ಥಿಕತೆಯ ಮೇಲೆ ಉಂಟಾಗುತ್ತದೆ.
ಹೀಗಾಗಿ ಸಂಸ್ಥೆಯೊಂದರ ನಷ್ಟವನ್ನು ಕಡಿಮೆ ಮಾಡುವುದು ಹಾಗೂ ಸಂಕಷ್ಟದಲ್ಲಿರುವ ಸಂಸ್ಥೆಯ ಚೇತರಿಕೆಗೆ ನೆರವು ನೀಡುವುದು ಆರೋಗ್ಯಕರ ಆರ್ಥಿಕತೆಯ ಬಹುಮುಖ್ಯ ಜವಾಬ್ದಾರಿ. ಎಲ್ಲಕ್ಕಿಂತ ಮುಖ್ಯವಾಗಿ ಆ ಸಂಸ್ಥೆ ಹೊಂದಿರುವ ಬ್ಯಾಂಕ್ ಸಾಲದ ಸುರಕ್ಷಿತ ವಾಪಸಾತಿಗಾದರೂ ಅದನ್ನು ಪುನಶ್ಚೇತನಗೊಳಿಸಬೇಕಲ್ಲವೆ? 
ಹೀಗಾಗಿ, ಈ ಪುನಶ್ಚೇತನ ಅರ್ಥಾತ್ ಬೇಲೌಟ್ ನೆರವಿಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮುಂದಾಗಿವೆ. ಸಂಸ್ಥೆ 114 ದಶಲಕ್ಷ ಹೊಸ ಷೇರುಗಳನ್ನು ಬಿಡುಗಡೆ ಮಾಡಲು ಹಾಗೂ ಸಂಸ್ಥೆಯ ಶೇಕಡ 50.1ರಷ್ಟು ಷೇರುಗಳನ್ನು ಒಂದು ರೂಪಾಯಿ ದರದಲ್ಲಿ ಖರೀದಿಸಲು ಎಸ್ಬಿಐ ಪ್ರಸ್ತಾವ ಮುಂದಿಟ್ಟಿದೆ. 
ಅಧೋಮುಖಿಯಾಗಿರುವ ಜೆಟ್ ಏರ್ವೇಸ್ ಈ ಎಲ್ಲ ಬೇಲೌಟ್ ನೆರವು ಪಡೆದು ಪುನಶ್ಚೇತನಗೊಳ್ಳುತ್ತದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಅಂದಹಾಗೆ, ನಮ್ಮ ವಿಮಾನ ಯಾನ ವಲಯದ ಸಂಕಷ್ಟ ಎಲ್ಲಿಗೆ ಮುಟ್ಟುತ್ತದೆಯೋ ಕಾದು ನೋಡಬೇಕು.