“ಇನ್ನೋವೇಟಿವ್ ಸ್ಟೇಟ್” ಗರಿಮೆಯಿಂದ ಬಂದ ಭಾಗ್ಯವಾದರೂ ಏನು?

ಹೊಸ ತಂತ್ರಜ್ಞಾನ ಅಥವಾ ಜ್ಞಾನನಗರವಾಗಿರುವ ಬೆಂಗಳೂರು, ಮುಂಬೈ ಹೊರತು ಪಡಿಸಿದರೆ ಹೆಚ್ಚು ಆದಾಯ ಮತ್ತು ಸಂಪನ್ಮೂಲಗಳನ್ನು ಒದಗಿಸಿಕೊಡುವ ಮಹಾನಗರವಾಗಿದೆ. ಇಂತಹ ಅಭಿವೃದ್ಧಿಯ ಸಾಧ್ಯಾಸಾಧ್ಯತೆಗಳನ್ನು ಹೊಸತುಗಳನ್ನು ಪರಿಚಯಿಸುವ ಡೈನಾಮಿಕ್ ಸಿಟಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಮಗ್ರ ಮತ್ತು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಅವಶ್ಯಕತೆ ಇದೆ

 “ಇನ್ನೋವೇಟಿವ್ ಸ್ಟೇಟ್” ಗರಿಮೆಯಿಂದ ಬಂದ ಭಾಗ್ಯವಾದರೂ ಏನು?

ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಚಟುವಟಿಕೆ, ಶೈಕ್ಷಣಿಕ, ತಾಂತ್ರಿಕ ಮತ್ತು ಉದ್ಯೋಗಾವಕಾಶಗಳ ಸಾಧ್ಯತೆ ಮುಂತಾದ ವಿಷಯಗಳ ಬಗೆಗೆ “ನೀತಿ ಆಯೋಗ” ಯಾವ ರಾಜ್ಯ ಹೆಚ್ಚು ಕ್ರಿಯಾಶೀಲ ಮತ್ತು ಹೊಸ ಹೊಸ ಆವಿಷ್ಕಾರಗಳನ್ನು ಕಂಡುಕೊಂಡು ಮುನ್ನಡೆಯುತ್ತಿವೆ ಎನ್ನುವ ಬಗೆಗೆ ಸಮೀಕ್ಷೆ ನಡೆಸಿ ಎರಡು ವಾರಗಳ ಹಿಂದೆ ಪ್ರಕಟಣೆಯೊಂದನ್ನು ಹೊರಡಿಸಿತು. ಇಡೀ ಭಾರತದಲ್ಲೇ “ಕರ್ನಾಟಕ ಇನ್ನೊವೇಟಿವ್ ಸ್ಟೇಟ್” (ಹೊಸ ಆವಿಷ್ಕಾರ, ಕ್ರಿಯಾಶೀಲ ಮತ್ತು ಹೊಸತನಗಳನ್ನು ಕಂಡುಕೊಂಡ ರಾಜ್ಯ) ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವುದಾಗಿ ನೀತಿ ಆಯೋಗ ಪ್ರಕಟಿಸಿತು.

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ ತಿಂಗಳಲ್ಲಿ ಜೋನ್ಸ್ ಲಾಂಗ್ ಲಾಸೆಲ್ಲೆ (ಜೆಎಲ್ ಎಲ್) ಸಂಸ್ಥೆ ದೇಶದ 131 ಮಹಾನಗರಗಳ ಬೆಳವಣಿಗೆ, ಉದ್ಯೋಗಾವಕಾಶ ಮತ್ತು ಹೊಸ ಹೆಜ್ಜೆಯನ್ನು ಕಂಡುಕೊಂಡು ಮುನ್ನಡೆಯುತ್ತಿರುವ ಬಗೆಗೆ ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯಲ್ಲಿ “ಬೆಂಗಳೂರು ಮೋಸ್ಟ್ ಡೈನಾಮಿಕ್ ಸಿಟಿ” ಎನ್ನುವ ಹೆಗ್ಗಳಿಕೆಗೆ ಆಯ್ಕೆಯಾಯಿತು.

ಭಾರತದಲ್ಲಿನ ಮಹಾನಗರಗಳಲ್ಲಿ ನಂತರದ ಈ ಸ್ಥಾನ ಪಡೆದದ್ದು ಹೈದರಾಬಾದ್, ದೆಹಲಿ, ಪುಣೆ ಮತ್ತು ಕೊಲ್ಕತ್ತಾ ಸೇರಿವೆ. ಈ ರೀತಿಯ ಸಮೀಕ್ಷೆ ಮತ್ತು ಆಯ್ಕೆಗಳನ್ನು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ವಾಣಿಜ್ಯ ಮತ್ತು ಉದ್ಯಮಗಳಿಗೆ ಸಂಬಂಧಿಸಿದ ಕಾರ್ಪೊರೇಟ್ ಸಂಸ್ಥೆಗಳು ಮಾಡುತ್ತಿವೆ. ಹೀಗೆ ಮಾಡುವಾಗ ಹಲವಾರು ಅಂಶಗಳನ್ನು ಸೂಚ್ಯಂಕವಾಗಿ ಪರಿಗಣಿಸಲಾಗುತ್ತದೆ. “ಇನ್ನೋವೇಟಿವ್ ಸ್ಟೇಟ್” ಆಯ್ಕೆಯಲ್ಲಿ ಸಂಬಂಧಿಸಿದ ರಾಜ್ಯದಲ್ಲಿನ ತಾಂತ್ರಿಕತೆ, ಸಂಶೋಧನೆ, ಕ್ರಿಯಾಶೀಲತೆ, ದೂರದೃಷ್ಟಿಯ ಕಲ್ಪನೆ, ಗುರಿ, ಅಭಿವೃದ್ಧಿ ಮತ್ತು ಮುಂದೆ ಎದುರಾಗುವ ಸವಾಲುಗಳು ಯಾವುವು ಎನ್ನುವ ಮಾನದಂಡಗಳನ್ನು ಇಟ್ಟುಕೊಂಡು ಸಮೀಕ್ಷೆ ನಡೆಸಲಾಗುತ್ತದೆ.

“ಇನ್ನೋವೇಟಿವ್ ಸ್ಟೇಟ್” ಆಯ್ಕೆಯನ್ನು ಸಹಾ ಜೆಎಲ್ಎಲ್ ಸಂಸ್ಥೆಯೇ ಸಮೀಕ್ಷೆ ಮೂಲಕ ತನ್ನ ಆಯ್ಕೆಯನ್ನು ಮಾಡಿದೆ. ಈ ರೀತಿಯ ಆಯ್ಕೆಯಿಂದ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸ್ವಾರ್ಥ ಇರಬಹುದು ಅಥವಾ ಪ್ರಾಮಾಣಿಕವಾದ ಉದ್ದೇಶವಿರಬಹುದು. ಇದರಲ್ಲಿ ಮುಖ್ಯವಾಗಿ ಸಾಮಾಜಿಕ-ಆರ್ಥಿಕ ಮತ್ತು ವಾಣಿಜ್ಯ ಹಾಗು ರಿಯಲ್ ಎಸ್ಟೇಟ್ ಉದ್ಯಮದ ಚಟುವಟಿಕೆಯನ್ನೂ ಸಹಾ ಮಾನದಂಡವನ್ನಾಗಿ ಪರಿಗಣಿಸಲಾಗಿದೆ.

ಈ ಅಧ್ಯಯನದ ಸಮೀಕ್ಷೆಯ ಪ್ರಕಾರ ನಂತರದ ಸ್ಥಾನ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗೋವಾ ಮತ್ತು ಆಂಧ್ರಪ್ರದೇಶ ಸೇರಿವೆ. ಕೊನೆಯ ಸ್ಥಾನದಲ್ಲಿ ಬಿಹಾರ, ಜಾರ್ಖಂಡ, ಛತ್ತೀಸ್ ಗಡ ಮತ್ತು ಪಂಜಾಬ್ ರಾಜ್ಯಗಳಿವೆ.

ಡೈನಾಮಿಕ್ ಸಿಟಿ ಮತ್ತು ಇನ್ನೋವೇಟಿವ್ ಸ್ಟೇಟ್ ಎಂಬ ಹಿರಿಮೆ ಮತ್ತು ಗರಿಮೆಯನ್ನು ನೀಡುವಲ್ಲಿ ರಾಜ್ಯದಲ್ಲಿನ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಜನಸಂಖ್ಯೆ, ಕಾರ್ಪೊರೇಟ್ ಸಂಸ್ಥೆಗಳ ಇರುವಿಕೆ, ಅವುಗಳ ವಾಣಿಜ್ಯ ಉದ್ಯಮ ಕ್ಷೇತ್ರದಲ್ಲಿನ ಚಟುವಟಿಕೆ, ವಿದೇಶಿ ನೇರಬಂಡವಾಳ ಹೂಡಿಕೆಯಂತಹ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ.

ಈ ರೀತಿಯ ಆಯ್ಕೆಯ ಸಾಚಾತನದ ಬಗೆಗೆ ಏನೇ ಶಂಕೆ ಮತ್ತು ಅಂತಹ ಸಂಸ್ಥೆಗಳ ಸ್ವಾರ್ಥ ಇದ್ದಿರಬಹುದಾದರೂ, ಮೇಲ್ನೋಟಕ್ಕೆ ಇಂತಹ ಆಯ್ಕೆಯಲ್ಲಿ ಸತ್ಯಾಂಶ ಇಲ್ಲದೆ ಇರದು. 

ನಾವು ಇಡೀ ಭಾರತವನ್ನು ದೆಹಲಿಯಲ್ಲಿ ನಿಂತು ನೋಡಿದಾಗ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ಹಾಗು ಆರ್ಥಿಕ ಸ್ಥಿತಿಗತಿಯ ಜೊತೆಗೆ ಜನರ ಸಾಂಸ್ಕೃತಿಕ ಬದುಕನ್ನು ಗಮನಿಸಿದಾಗ ಮಹಾರಾಷ್ಟ್ರವನ್ನು ಸೇರಿಸಿಕೊಂಡಂತೆ ದಕ್ಷಿಣದ ರಾಜ್ಯಗಳು ಮುಂದಿವೆ ಎನ್ನುವುದು ಎಂತಹವರಿಗೂ ಮನದಟ್ಟಾಗುತ್ತದೆ. ಆದರೆ ಉತ್ತರದ ರಾಜ್ಯಗಳ ವಾಸ್ತವ ಸ್ಥಿತಿಯೇ ಬೇರೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶವನ್ನು ಸೇರಿಸಿದಂತೆ ಅವುಗಳ ಹಿಂದುಳಿದಿರುವಿಕೆ, ಅರಾಜಕತೆ ಮತ್ತು ಅಸಂಸ್ಕೃತಿಕ ನಡವಳಿಕೆಯ ದೃಷ್ಟಿಯಿಂದ ಅವುಗಳನ್ನು “ಬಿಮಾರು” ರಾಜ್ಯಗಳು ಎಂದೇ ಕರೆಯುವುದು ವಾಡಿಕೆ. ಹಿಂದಿಯಲ್ಲಿ “ಬಿಮಾರು” ಎಂದರೆ ರೋಗಗ್ರಸ್ತ. 

ಈ ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ , ಸಭ್ಯ ನಡವಳಿಕೆ ಮತ್ತು ಅಭಿವೃದ್ಧಿ ಎನ್ನುವುದೆಲ್ಲ ಗಗನ ಕುಸುಮ. ನಾಗರೀಕತೆ ಎನ್ನುವುದು ಈ ರಾಜ್ಯಗಳ ಹಳ್ಳಿಗಳಲ್ಲಿ ಇಲ್ಲವೇ ಇಲ್ಲ. ಎಲ್ಲವೂ ಅರಾಜಕತೆ ಮತ್ತು ಫ್ಯೂಡಲ್ ಮನೋಭಾವದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ  ಇರುವುದು ಕಣ್ಣಿಗೆ ರಾಚುವಂತಿದೆ. ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಸುಮಾರು ನೂರು ವರ್ಷವಾದರೂ ಹಿಂದೆ ಬಿದ್ದಿವೆ. ಇರಲಿ ಈ ರಾಜ್ಯಗಳ ಹಿಂದುಳಿದಿರುವಿಕೆ ಮತ್ತು ಅರಾಜಕತೆಯನ್ನು ಟೀಕಿಸಿ ಪ್ರಯೋಜನವಿಲ್ಲ. ಆದರೆ ಡೈನಾಮಿಕ್ ಮತ್ತು ಇನ್ನೋವೇಟಿವ್ ಸ್ಟೇಟ್ ಗರಿಮೆಯನ್ನು ಗಳಿಸಿದ ನಮ್ಮ ರಾಜ್ಯ ಎಲ್ಲದರಲ್ಲೂ ಸರಿಸಮನಾಗಿದೆ ಎಂದು ಹೇಳಲಾಗದು. 

ಕರ್ನಾಟಕದಲ್ಲೂ ಬಡತನ, ಹಸಿವು, ನೋವು, ಸಂಕಟ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯೂ ಎದ್ದು ಕಾಣುತ್ತದೆ. ಇದರ ಮಧ್ಯೆ ನಾವು ಬೇರೆ ರಾಜ್ಯಗಳಿಗಿಂತ ಒಂದಿಷ್ಟು ಮುಂದಡಿ ಇಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಷ್ಟೆ. ಇಂತಹ ಹೆಸರುಗಳನ್ನು ಪಡೆದು ಬೀಗಿದರೆ ನಮ್ಮ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿದೆಯೇ ಎಂದು ನಮ್ಮನ್ನು ನಾವು ಸ್ವಯಂ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ. ಹಾಗೆ ಮಾಡುವ ಮೂಲಕ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವುದು ಅವಶ್ಯವಿದೆ.

ಇದರಲ್ಲಿ ಸರ್ಕಾರ, ಸಾರ್ವಜನಿಕರ ಪಾತ್ರವೂ ಇದೆ. ಬೆಂಗಳೂರು ನಗರ ಅತ್ಯಂತ ಡೈನಾಮಿಕ್ ನಗರ ಎಂದು ಜೆ ಎಲ್ ಎಲ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಪ್ರಕಟಿಸಿದ ಮೇಲೆ ನಮ್ಮ ನಗರಕ್ಕೆ ಸಿಕ್ಕ ಈ ಗರಿಮೆಯನ್ನು ಉಳಿಸಿ ಮತ್ತಷ್ಟು ಬೆಳೆಸಲು ಈ ನಗರದ ಅಭಿವೃದ್ಧಿಯ ಹೊಣೆ ಹೊತ್ತ ಸಂಬಂಧಪಟ್ಟ ಸಚಿವಾಲಯವಾಗಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಲಿ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಲಿ ಇದುವರೆಗೆ ಈ ದಿಕ್ಕಿನಲ್ಲಿ ಏನು ಮಾಡಿವೆ? ಈ ಬಗೆಗೆ ಚರ್ಚಿಸಿವೆಯೇ ಅಥವಾ ಮುಂದೆ ಮಾಡಬೇಕಾದ ಯೋಜನೆಗಳನ್ನೇನ್ನಾದರೂ ರೂಪಿಸಿವೆಯೇ ಅಥವಾ ಈಗಾಗಲೇ ರೂಪಿಸಿರುವ ಯೋಜನೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಏನು ಕ್ರಮ ಕೈಗೊಂಡಿವೆ ಎನ್ನುವುದನ್ನು ಗಮನಿಸಿದಾಗ ನಿರಾಶೆ ಕಂಡು ಬರುತ್ತದೆ

ಹಾಗೆಯೇ ಕೇಂದ್ರ ಸರ್ಕಾರ ರಚಿಸಿರುವ ತನ್ನ ಅಂಗಸಂಸ್ಥೆ ನೀತಿ ಆಯೋಗವು ರಾಜ್ಯ ಸರ್ಕಾರಗಳು ಸಲ್ಲಿಸಿರುವ ಹಾಗು ಅವುಗಳ ಅಭಿವೃದ್ಧಿಯ ಸೂಚ್ಯಂಕದ ಆಧಾರದ ಮೇಲೆ ನಿರ್ಧರಿಸಿರುವ ಈ ಇನ್ನೊವೇಟಿವ್ ಸ್ಟೇಟ್ ಗರಿಮೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಮತ್ತು ಸಕಾರಾತ್ಮಕವಾಗಿ ತೆಗೆದುಕೊಂಡಿದೆಯೇ ಎನ್ನುವುದು ಸಹಾ ಮುಖ್ಯ.

ಈ ದಿಶೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, “ಇನ್ನೋವೇಟಿವ್ ಪ್ರಾಧಿಕಾರ”ವನ್ನು ರಚಿಸುವ ಮಾತನ್ನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಸ್ಥಿತ್ವಕ್ಕೆ ಬರಲಿರುವ ಈ ಪ್ರಾಧಿಕಾರದ ರಚನೆ ಮತ್ತು ಸ್ವರೂಪ ಹಾಗು ಅದರ ಉದ್ದೇಶ ಏನಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

1991ರಲ್ಲಿ ಐದು ವರ್ಷ ಕಾಲ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿಯನ್ನು ಒಪ್ಪಿಕೊಂಡು ಅದರ ಅನುಕೂಲ ಪಡೆಯಲು ಜಾರಿಗೆ ತಂದ ಕೆಲವೇ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆ ನಂತರದ ವರ್ಷಗಳಲ್ಲಿ ಹಂತ ಹಂತವಾಗಿ ಹೊಸ ಆರ್ಥಿಕ ನೀತಿಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲೇಬೇಕಾಗಿತ್ತು. ಏಕೆಂದರೆ ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಕರ್ನಾಟಕ ದಾಪುಗಾಲು ಇಡಲು ಆರಂಭಿಸಿತ್ತು. ನಮ್ಮ ರಾಜ್ಯದ ನಂತರ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಮುಂದಡಿ ಇಟ್ಟವು. 

ಬೆಂಗಳೂರಿನಲ್ಲಾಗುತ್ತಿದ್ದ ಸಾಫ್ಟ್ ವೇರ್ ತಂತ್ರಜ್ಞಾನದ ಬೆಳವಣಿಗೆ ಅಮೆರಿಕದ ಸಿಲಿಕಾನ್ ಸಿಟಿಯ ಜೊತೆ ಪೈಪೋಟಿಗೆ ಇಳಿದಂತಿತ್ತು. ಅದಕ್ಕಾಗಿಯೇ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ತನ್ನ ದೇಶದ ಯುವಕರಿಗೆ ನೀಡಿದ್ದ ಕರೆ ಎಂದರೆ “ ನೀವು ಬೆಂಗಳೂರು ಮತ್ತು ಬೀಜಿಂಗ್” ಜೊತೆ ಪೈಪೋಟಿ ಮಾಡಿ ಉದ್ಯೋಗಾವಕಾಶಗಳನ್ನು ಪಡೆಯಬೇಕು”. ಅಂದರೆ ಅಷ್ಟರಮಟ್ಟಿಗೆ ಬೆಂಗಳೂರು ಸಾಫ್ಟ್ ವೇರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿತ್ತು. ಅದರ ವೇಗ ಈಗಲೂ ತಗ್ಗಿಲ್ಲ. ಲಕ್ಷಾಂತರ ಯುವಕರಿಗೆ ಈ ಕ್ಷೇತ್ರದಿಂದಾಗಿ ಬೆಂಗಳೂರು ಉದ್ಯೋಗಾವಕಾಶಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಎಲ್ಲ ರಾಜ್ಯಗಳ ಮತ್ತು ಕೆಲವು ದೇಶಗಳ ಯುವಕರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹಾಗಾಗಿ ಇದರ ಅಭಿವೃದ್ಧಿ ಅಂತರರಾಷ್ಟ್ರೀಯ ಗಮನ ಸೆಳೆದಿರುವುದನ್ನು ಅಲ್ಲಗಳೆಯಲಾಗದು.

ಎರಡು ದಶಕಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ, ಕರ್ನಾಟಕದ ಮುಖ್ಯಮಂತ್ರಿಯಾಗಿ ಎಸ್. ಎಂ. ಕೃಷ್ಣ ಅವರಿದ್ದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರೇ ಅಚ್ಚರಿ ಪಟ್ಟದ್ದು, “ ಯಾವುದೇ ವಿದೇಶದ ಪ್ರಧಾನಿ ಭಾರತಕ್ಕೆ ಬಂದಾಗ ಅವರು ಮೊದಲು ಬೆಂಗಳೂರಿಗೆ ಆಗಮಿಸುತ್ತಾರೆ. ನಂತರ ತಾವಿರುವ ದೆಹಲಿಗೆ ಬರುತ್ತಾರೆ” ಎಂದಿದ್ದರು. ಅಂದರೆ ಕರ್ನಾಟಕ ಮತ್ತು ಬೆಂಗಳೂರಿನಲ್ಲಿಯ ಸಾಫ್ಟ್ ವೇರ್ ತಂತ್ರಜ್ಞಾನದ ಅಭಿವೃದ್ಧಿಯ ನಾಗಾಲೋಟವನ್ನು ಇದು ಹೇಳುತ್ತದೆ.

ಈ ಹೊಸ ತಂತ್ರಜ್ಞಾನ ಅಥವಾ ಜ್ಞಾನನಗರವಾಗಿರುವ ಬೆಂಗಳೂರು, ಮುಂಬೈ ಹೊರತು ಪಡಿಸಿದರೆ ಹೆಚ್ಚು ಆದಾಯ ಮತ್ತು ಸಂಪನ್ಮೂಲಗಳನ್ನು ಒದಗಿಸಿಕೊಡುವ ಮಹಾನಗರವಾಗಿದೆ. ಇಂತಹ ಅಭಿವೃದ್ಧಿಯ ಸಾಧ್ಯಾಸಾಧ್ಯತೆಗಳನ್ನು ಹೊಸತುಗಳನ್ನು ಪರಿಚಯಿಸುವ ಡೈನಾಮಿಕ್ ಸಿಟಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಮಗ್ರ ಮತ್ತು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಅವಶ್ಯಕತೆ ಇದೆ. ಇದರ ಮಹತ್ವವನ್ನು ರಾಜ್ಯ ಸರ್ಕಾರ ಅರಿತು ಮುನ್ನಡೆಯಬೇಕಿದೆ. ಅದಕ್ಕೆ ಸಮರ್ಥ ಹಾಗು ದೂರದೃಷ್ಟಿಯ ನಾಯಕತ್ವ ಬೇಕಿದೆ. ಆ ದಿಕ್ಕಿನಲ್ಲಿ ರಾಜ್ಯವನ್ನು ಕೊಂಡೊಯ್ಯಬೇಕಾಗಿದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ಮತ್ತು ಆತಂಕಕಾರಿಯಾಗಿರುವ ಆರ್ಥಿಕ ಕುಸಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸುತ್ತಾ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗಬೇಕಿದೆ.