ಹೆಚ್ಚುತ್ತಿರುವ ಬಂಜರು, ಅರಣ್ಯ ವಿಸ್ತೀರ್ಣ ಇಳಿಮುಖ :  ಎಚ್ಚರ ತಪ್ಪಿದರೆ ಮರುಭೂಮಿ ಆಗಲಿದೆ ಕರ್ನಾಟಕ

ಕರ್ನಾಟಕದಲ್ಲಿಯೂ ಬಂಜರು ಭೂಮಿ ಪ್ರದೇಶ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಮರುಭೂಮೀಕರಣವನ್ನು ಸಂಕೇತಿಸುತ್ತಿದೆ.

ಹೆಚ್ಚುತ್ತಿರುವ ಬಂಜರು, ಅರಣ್ಯ ವಿಸ್ತೀರ್ಣ ಇಳಿಮುಖ :  ಎಚ್ಚರ ತಪ್ಪಿದರೆ ಮರುಭೂಮಿ ಆಗಲಿದೆ ಕರ್ನಾಟಕ

ಗಣಿ ಚಟುವಟಿಕೆ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದ್ದರೆ ಬಂಜರು ಭೂಮಿಯ ವಿಸ್ತೀರ್ಣ ಹೆಚ್ಚುತ್ತಿರುವುದು ಇನ್ನಷ್ಟು ಆತಂಕ ಹುಟ್ಟಿಸಿದೆ.

2030 ರ ವೇಳೆಗೆ ಭಾರತವು 26 ದಶಲಕ್ಷ ಹೆಕ್ಟೇರ್ ಬಂಜರು ಭೂಮಿಯನ್ನು ಪುನಃ  ಉಪಯೋಗ ಯೋಗ್ಯ ಪ್ರದೇಶವನ್ನಾಗಿಸಲಿದೆ ಎಂದು ಮೋದಿ ಘೋಷಿಸಿದ್ದರ ಬೆನ್ನಲ್ಲೇ, ಕರ್ನಾಟಕದಲ್ಲಿಯೂ ಬಂಜರು ಪ್ರದೇಶ ವಿಸ್ತೀರ್ಣ ಹೆಚ್ಚುತ್ತಿರುವ ಮಾಹಿತಿ ಹೊರಬಿದ್ದಿದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ ಅವರಿಗೆ 2019ರ ಡಿಸೆಂಬರ್ 2ರಂದು ಬರೆದಿರುವ ಪತ್ರ, ರಾಜ್ಯದಲ್ಲಿ ಬಂಜರು ಭೂಮಿ ಗಾತ್ರ ಹಿಗ್ಗುತ್ತಿದೆ ಎಂಬುದನ್ನು ಹೊರಗೆಡವಿದೆ.

ರಾಜ್ಯದಲ್ಲಿ ಶೇ.4.38ರಷ್ಟು ಬಂಜರು ಭೂಮಿ ಇದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ 11 ಜಿಲ್ಲೆಗಳಲ್ಲಿ ಬಂಜರು ಭೂಮಿಯ ಪ್ರಮಾಣವು ರಾಜ್ಯದ ಸರಾಸರಿಗಿಂತ ಅಧಿಕವಾಗಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸುಮಾರು 1,478 ಹಳ್ಳಿಗಳಲ್ಲಿ 31, 265ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂಜರು ಭೂಮಿಯನ್ನು ಹೊಂದಿದ್ದಾರೆ.  ಜೈವಿಕ ಇಂಧನ ಜಾತಿಯ ಸಸಿಗಳನ್ನು ನೆಡಲು ಪ್ರೋತ್ಸಾಹ ನೀಡಿದ್ದರೂ ಇನ್ನೂ ಗುಣಮಟ್ಟದ ಫಲಿತಾಂಶ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಸಿರಿಚಂದನ ವನ, ಸಮೃದ್ಧ ಹಸಿರು ಗ್ರಾಮ ಯೋಜನೆ, ದೇವರಕಾಡು, ಸಾಮಾಜಿಕ ಅರಣ್ಯೀಕರಣ, ಮಗುವಿಗೊಂದು ಮರ ಶಾಲೆಗೊಂದು ವನ ಮತ್ತು ನರೇಗಾ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದಲೂ ಅನುಷ್ಠಾನಗೊಳಿಸುತ್ತಿದ್ದರೂ ಬಂಜರು ಭೂಮಿ ವಿಸ್ತೀರ್ಣ ಕುಗ್ಗದಿರುವುದು ಇನ್ನಷ್ಟು ಅಪಾಯದ ಮುನ್ಸೂಚನೆಗಳನ್ನು ನೀಡಿದೆ.

ವಿಸ್ತೀರ್ಣದಲ್ಲಿ ಹಿಗ್ಗುತ್ತಿರುವ ಬಂಜರು ಭೂಮಿ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮರುಭೂಮಿಕರಣಕ್ಕೆ ನಾಂದಿ ಹಾಡುವ ಲಕ್ಷಣಗಳು ಗೋಚರಿಸಿವೆ. ಜೀವ ಜಲ ಮತ್ತು ಭೌಗೋಳಿಕ ಪರಿಸರ ವ್ಯವಸ್ಥೆ ರಕ್ಷಣೆ ಮಾಡುವುದಷ್ಟೇ ಅಲ್ಲದೆ ಇವನ್ನು ಸುಸ್ಥಿರವಾಗಿ ಬಳಸದೇ ಇದ್ದಲ್ಲಿ ಜೈವಿಕ ವೈವಿಧ್ಯತೆಯಲ್ಲಿಯೂ ನಷ್ಟ ಸಂಭವಿಸಬಹುದು ಎಂದು ಬಂಜರು ಭೂಮಿ ವಿಸ್ತೀರ್ಣದಲ್ಲಿನ ಹೆಚ್ಚಳವೇ ಸಂಕೇತಿಸುತ್ತಿದೆ.

'ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಕೇವಲ ಶೇ.22.61ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಪರಿಸರ ಸಂರಕ್ಷಿಸಲು ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಿದೆ,' ಎಂದು ಡಾ ಶಾಲಿನಿ ರಜನೀಶ್ ಅವರು ಪತ್ರದಲ್ಲಿ ವಿವರಿಸಿದ್ದಾರೆ. ಒಟ್ಟು ಅರಣ್ಯ ಪ್ರದೇಶವನ್ನೇ ಪುನರ್ ಪರಿಶೀಲನೆಗೆ ಒಳಪಡಿಸುತ್ತಿರುವ ಸರ್ಕಾರ, ಅರಣ್ಯ ಪ್ರದೇಶವನ್ನು ಕಡಿಮೆ ಮಾಡುತ್ತಲೇ ಬಂದಿದೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು 3.30 ಲಕ್ಷ  ಹೆಕ್ಟೇರ್ ಗೆ ಇಳಿಸಲಾಗಿದೆ.

ದೇಶದ 320 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಶೇ.30ರಷ್ಟು ಅಂದರೆ ಸುಮಾರು 90 ದಶಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಂಜರು ಭೂಮಿ ಪ್ರದೇಶವಿದೆ. ಹೀಗೆ ಬಂಜರು ಬಿದ್ದಿರುವ ಭೂಮಿಯನ್ನೂ ಆರ್ಥಿಕ ಬಳಕೆ ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರವನ್ನೂ ಬರೆದಿದೆ.

ಅರಣ್ಯ ಪ್ರದೇಶಗಳ ಅಭಿವೃದ್ಧಿ ಚಟುವಟಿಕೆಗಳಲ್ಲಿ ಖಾಸಗಿ ವಲಯವೂ ತೊಡಗಿಸಿಕೊಳ್ಳಲು ಆಹ್ವಾನ ನೀಡಿರುವ ಕಾರಣ ಉಪಯೋಗವಾಗದ 21 ದಶಲಕ್ಷ ಹೆಕ್ಟೇರ್ ಪೈಕಿ (ಸುಮಾರು ಶೇ.81) ಅರಣ್ಯ ಭೂಮಿ ಮತ್ತು 5 ದಶಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದ ಹೊರಗಿದೆ.