ಮನೋಬಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು

ನಿಂತಲ್ಲಿ ನಿಲ್ಲದ, ಕುತ್ತಲ್ಲಿ ಕೂರದ ತುಂಟಿ ನಾನು ದೂರುಗಳಿಲ್ಲದೆ ಶಾಲೆಯಿಂದ ಮನೆಗೆ ಬಂದ ಇತಿಹಾಸವೇ ಇಲ್ಲ. ಅಮ್ಮನ ಕೈಯಲ್ಲಿ ಪೆಟ್ಟು ತಿಂದ ದಿನಗಳೇ ಹೆಚ್ಚು. ಹತ್ತರ ಬಾಲ್ಯವನ್ನು ಹೀಗೆ ಆಟ-ಪಾಠಗಳಲ್ಲಿ ಕಳೆಯುತಿದ್ದೆ.

ಮನೋಬಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು

 

 

ನಿಂತಲ್ಲಿ ನಿಲ್ಲದ, ಕುತ್ತಲ್ಲಿ ಕೂರದ ತುಂಟಿ ನಾನು ದೂರುಗಳಿಲ್ಲದೆ ಶಾಲೆಯಿಂದ ಮನೆಗೆ ಬಂದ ಇತಿಹಾಸವೇ ಇಲ್ಲ. ಅಮ್ಮನ ಕೈಯಲ್ಲಿ ಪೆಟ್ಟು ತಿಂದ ದಿನಗಳೇ ಹೆಚ್ಚು. ಹತ್ತರ ಬಾಲ್ಯವನ್ನು ಹೀಗೆ ಆಟ-ಪಾಠಗಳಲ್ಲಿ ಕಳೆಯುತಿದ್ದೆ.

ಅದೊಂದು ದಿನ ಅಮ್ಮ ಅದೆಷ್ಟು ಮುದ್ದಾಗಿ ನನಗೆ ಕೈತುತ್ತು ತಿನ್ನಿಸಿ, ಉದ್ದಾದ ಕೂದಲಿಗೆ ಎರಡು ಜಡೆ ಹಾಕಿ, ಹಣೆಗೆ ಬಿಂದಿ ಇಟ್ಟು ಕೆನ್ನೆಗೆ ಮುತ್ತಿಕ್ಕಿ, ದೃಷ್ಟಿ ತೆಗೆದು ಸ್ಕೂಲ್ ಗೆ ಕಳುಹಿಸಿದ್ದರು. ಇದು ನನಗೆ ತುಂಬಾ ಹೊಸ ಅನುಭವ. ಅಜ್ಜಿಯ ಜೊತೆ ಬೆಳೆದ ನನಗೆ ಅಮ್ಮನ ಜೊತೆ ಅಷ್ಟೇನೂ ಬಾಂಧವ್ಯ ಇರಲಿಲ್ಲ ಆದರೆ ಅಜ್ಜಿ ನನ್ನನ್ನು ಬಿಟ್ಟು ಹೋದ ಮೇಲೆ ಅಮ್ಮನ ಜೊತೆಯಲ್ಲಿ ನಾನು ಇರಬೇಕಾಗಿತ್ತು.  ಆದರಿಂದಲೇ ಇದು ನನಗೆ ಹೊಸ ಅನುಭವ . ಎಂದಿನಂತೆ ಸಂಜೆ ದೂರುಗಳ ಸರಮಾಲೆಯನ್ನು ಹೊತ್ತು ತಂದಿದ್ದೆ. ಬೇರೆ ದಿನದ ಹಾಗೇ ಅದು ಸಾಧಾರಣವಾಗಿ ಮುಗಿಯುವ ದೂರಾಗಿರಲಿಲ್ಲ .ಅದಕ್ಕೆ ಸ್ವಲ್ಪ ಹೆಚ್ಚು ಏಟು ಬೀಳುತ್ತದೆ ಎಂದು ಭಯವಾಗಿತ್ತು. ಅಮ್ಮ ಏನು ಮಾಡುತ್ತಾಳೊ, ಕೋಪ ಬಂದರೆ ಅಮ್ಮ ಕೆಂಡಾಮಂಡಲವಾಗಿ ಬಿಡುತ್ತಾಳೆ. ಸದ್ಯ "ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು"  ಎಂಬ ಗಾದೆ ನೆನಪಾಗಿತ್ತೇನೋ ನನಗೆ ಹೇಗಾದರೂ ಅಮ್ಮನ ಕೈಯಿಂದ ತಪ್ಪಿಸಿಕೊಳ್ಳಬೇಕು. ಎಂದು.

ತಡ ರಾತ್ರಿ ಸುಮಾರು ೭ ಗಂಟೆ ಹೊತ್ತಲ್ಲಿ ಮನೆಯ ಪಕ್ಕದಲ್ಲಿದ್ದ ರೈಲ್ವೆ ಹಳಿಯ ಹತ್ತಿರದ ಗಿಡಗಳ ಮಧ್ಯೆ ಅಡಗಿ ಕೂತೆ. ಎಳೆಯ ವಯಸ್ಸಿನ ಆ ಮುಗ್ಧತೆ ನನನ್ನು ಅಲ್ಲಿ ಅಡಗುವಂತೆ ಮಾಡಿತ್ತು. ಭಯ ಮತ್ತು ಹಸಿವಿನಿಂದ ದೇಹವೆಲ್ಲಾ ಒಣಗಿದ ಎಲೆ ಉದುರುವ ಹಾಗೆ ಮಾಡಿತ್ತು ಪ್ರಜ್ಞೆ ಇಲ್ಲದೆ ಅಲ್ಲೆ ಕುಸಿದು ಬಿದ್ದೆ.

ಪ್ರಜ್ಞೆ ಬಂದು ಎಚ್ಚರವಾದಾಗ ಆಸ್ಪತ್ರೆಯಲ್ಲಿ ಇದ್ದೆ, ನಿಜ ಅಂದು ನನ್ನ ಬಲಗೈ ಮತ್ತು ಬಲಗಾಲಿನ ಬೆರಳುಗಳು ಸಂಪೂರ್ಣ ಜೆಜ್ಜಿ ಹೋಗಿದ್ದವು. ಮುಳ್ಳಿನ ಬೇಲಿಯ ಮೇಲೆ ನೋವಿನಿಂದ ನರುಳಾಡುತ್ತಾ ಬಿದಿದ್ದವಳನ್ನು ಮನೆಯ ಅಕ್ಕ-ಪಕ್ಕದ ಜನರು ಪತ್ತೆ ಮಾಡಿ ಮನೆಗೆ ವಿಷಯ ಮುಟ್ಟಿಸಿದ್ದರು. ಪುಟ್ಟ ಮಗಳನ್ನು ಆ ರೀತಿ ನೋಡಿದ ತಾಯಿ ಕರುಳು ಕಿತ್ತು ಬಂದಾಂತೆ ನೆಲಕ್ಕುರುಳಿದಳು.

ಹಾಸಿಗೆಯ ಮೇಲೆ ೪ ದಿನ ಜೀವಂತ ಹೆಣವಾಗಿ ಮಲಗಿದ್ದೆ ಎಚ್ಚರಗೊಂಡು ಕೈ ಎತ್ತಲು ಹೋದೆ, ತುಂಬಾ ನೋವಾಯಿತು ಆಗ ಗೊತ್ತಾಗಿದ್ದು ನನ್ನ ಕೈಯನ್ನು ಕತ್ತರಿಸಿದ್ದಾರೆ ಎಂಬ ವಿಷಯ. ನೋವು ಜೀವ ಹೋಗುವ ಹಾಗೆ ಇತ್ತು ನರಳಾಡುತ್ತಿದ್ದೆ. ಪಕ್ಕದಲ್ಲಿದ್ದ ಅಮ್ಮ, ದೊಡ್ಡಮ್ಮ ಸಂಬಂಧಿಕರು ಎಲ್ಲಾರ ಕಣ್ಣಲ್ಲಿ ನೀರು. ಮುಂದಿನ ಭವಿಷ್ಯ ಏನೂ ಎಂಬ ಯೋಚನೆ ಎಲ್ಲಾರದಾಗಿತ್ತು.

ತಲೆಯ ಮೇಲೆ ಅನುಕಂಪದ ತೂಗುಗತ್ತಿ ನೇತಾಡುತಿತ್ತು. ನೋಡಲು ಬಂದವರೆಲ್ಲಾ ಧೈರ್ಯ ತುಂಬುವುದಕ್ಕಿಂತ ಅನುಕಂಪ, ಅಸಾಹಯಕತೆಯನ್ನೇ ತೋರುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಮೂರು ತಿಂಗಳು ನಾನು ದೈಹಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಿದ್ದರು ಡಾಕ್ಟರ್, ಮಾನಸಿಕವಾಗಿ ಬದುಕಲು ಬೇಕಾದ ಧೈರ್ಯ ತುಂಬಲು ಯಾರೂ ಪ್ರಯತ್ನಿಸಲಿಲ್ಲ.  ವಿದ್ಯಾಭ್ಯಾಸ ಮುಂದುವರಿಸುವುದು ಹೇಗೆ, ಆಟ ಆಡುವುದು ಹೇಗೆ ಈ ರೀತಿಯ ಹಲವು ಪ್ರಶ್ನೆಗಳು  ಸಮುದ್ರದ ಅಲೆಗಳು ಅಪ್ಪಳಿಸುವ ಹಾಗೆ ಮನಸ್ಸಿನಾಳದಲ್ಲಿ ಅಪ್ಪಳಿಸುತ್ತಿದ್ದವು. ಉತ್ತರದ ಹುಡುಕಾಟ ಪ್ರಾರಂಭಿಸಲು ಮತ್ತೆ ಶಾಲೆಗೆ ಹೋದೆ ಅಲ್ಲಿ ಶಿಕ್ಷಕರು, ಸ್ನೇಹಿತರು ನನ್ನನ್ನು ಕೈ ಇಲ್ಲದವಳಾಗಿ ಒಪ್ಪಿಕೊಳ್ಳಲು ಸ್ವಲ್ಪ ಹಿಂದೇಟು ಹಾಕಿದರು. ತರಗತಿಯಲ್ಲಿ ನನಗೆ ನೋಟ್ಸ್ ಬರೆಯಲು ಬೇರೆಯವರನ್ನು ನೇಮಿಸಿದ್ದರು ಕೆಲವು ದಿನಗಳು ಹಾಗೇ ಕಳೆದೆ.  ಚಿಕ್ಕಂದಿನಲ್ಲೇ ಕೈ,ಕಾಲು ಇಲ್ಲದವರನ್ನು ನೋಡಿದ್ದೆ ಆದರೆ ಆ ಪರಿಸ್ಥಿತಿ ನನಗೆ ಬಂದಾಗ ಅದನ್ನು ಹೇಗೆ ಸ್ವೀಕರಿಸುವುದು ತಿಳಿಯದೇ ಗೊಂದಲದಲ್ಲಿ ಇದ್ದ ದಿನಗಳೇ ಹೆಚ್ಚು. ಹೆಣ್ಣೆಂದರೆ ಪ್ರಕೃತಿ ನೀಡಿರುವ ಕೇಲವು ಕಷ್ಟಗಳನ್ನು ಎದುರಿಸಬೇಕು. ಅಂಗವಿಕಲ ಹೆಣ್ಣಾಗಿದ್ದ ನಾನು ಆ ಕಷ್ಟಗಳಲ್ಲಿ ಒಂದಾದ ಋತುಮತಿಯಾಗುವ ಪ್ರಕ್ರಿಯೆಗೆ ಒಳಗಾದೆ ಆ ಸಮಯದಲ್ಲಿ ಅಮ್ಮ ಚಿಂತೆಯಲ್ಲಿ ಮುಳುಗಿದ್ದರು ತಾನು ಅನುಭವಿಸಿದ ಕಷ್ಟಗಳನ್ನು ಮಗಳು ಹೇಗೆ ಎದುರಿಸುತ್ತಾಳೆ. ಎಂಬ ಯೋಚನೆ ಅವಳದ್ದು.

ಆ ಕ್ಷಣ ನನಗೆ ನನ್ನ ದೇಹದ ಮೇಲೆ ಅತೀವ ಚಿಗುಪ್ಸೆ ಬಂದ ದಿನಗಳು ಇದೆ ರಕ್ತಸ್ತ್ರಾವ ಆಗುವುದನ್ನು ಶುಚಿಗೋಳಿಸಲು ಮತ್ತು ಆ ಐದು ದಿನಗಳ ಕೆಲಸಗಳನ್ನು ಮಾಡುವಾಗ ಆಗುತ್ತಿದ್ದ ಕಹಿ ಅನುಭವ ಭೂಮಿ ಬಾಯಿ ಬಿಟ್ಟು ನನ್ನ ಒಳಗೆಳೆದುಕೊಳ್ಳಬಾರದೆ ಎನ್ನಿಸುತ್ತಿತ್ತು.  ಅಬ್ಬಾ ಅದೆಲ್ಲಾ ಒಂದು ಕಡೆಯಾದರೆ ಮದುವೆಯಾಗದೆ ಈ ಪ್ರಪಂಚದಲ್ಲಿ ಹೇಗೆ ಜೀವನ ನಡೆಸುತ್ತಾಳೆಂದು ಹೆತ್ತವರ ಚಿಂತೆ ಮತ್ತೊಂದು ಕಡೆ. ಸಂಬಂಧಿಕರ ಚುಚ್ಚು ಮಾತು ಎಷ್ಟು ಚೆನ್ನಾಗಿದ್ದರೆ ಏನೂ ಇವಳನ್ನು ಮದುವೆ ಯಾರು ಆಗುತ್ತಾರೆ.

ಸ್ನೇಹಿತರ ಮನೆಗಳ ಸಭೆ ಸಮಾರಂಭದಲ್ಲಿ ಬೇರೆ ಲೋಕದಿಂದ ಬಂದ ಯಾವುದೋ ಬಗೆಯ ಪ್ರಾಣಿಯ ರೀತಿ ನನ್ನನ್ನು ಎಲ್ಲರೂ ನೋಡುತ್ತಿದ್ದರು.ಅವರು ಕೇಳುತ್ತಿದ್ದ ಪ್ರಶ್ನೆಗಳಂತೂ ತಲೆ ಚಚ್ಚಿಕೊಳ್ಳುವಂತಾಗುತ್ತಿತ್ತು. ಇನ್ನೂ ಚನ್ನಾಗಿ ನೆನಪಿದೆ ಅಯ್ಯೋ ಪಾಪ ಒಂದು ಕೈಯಲ್ಲಿ ಏನು ಮಾಡುತ್ತೀಯ?  ಈ ರೀತಿಯ ಪ್ರಶ್ನೆಗಳು ನನಗೆ ಬದುಕಲು ಇದ್ದ ಸ್ವಲ್ಪ ಉತ್ಸಾಹವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದವು.ಈ ರೀತಿಯ ಚುಚ್ಚುಮಾತುಗಳು, ಅನುಕಂಪ,ಅಯ್ಯೋ ಪಾಪಗಳು ಬರಗಾಲದಲ್ಲಿ ಸತ್ತ ಪ್ರಾಣಿಯ ದೇಹವನ್ನು ರಣ ಹದ್ದು ಕಿತ್ತು ತಿನ್ನುವ ಹಾಗೆ ತಿನ್ನುತ್ತಿದ್ದರು. ದೈಹಿಕವಾಗಿ ಅದು ನನ್ನನ್ನೇನು ಅಷ್ಟು ಬಾಧಿಸುತ್ತಿರಲಿಲ್ಲ. ಆದರೆ ಜನರ ವಕ್ರ ನೋಟ ಕೆಟ್ಟಕುತೂಹಲಗಳು ನನ್ನನ್ನು ಅಧೀರಳಾಗುವಂತೆ ಮಾಡುತ್ತಿತ್ತು.

ಅಂತಹ ಸಮಯದಲ್ಲಿ ಕಣ್ಣಿಗೆ ಕತ್ತಲು ಬಡಿದಂತಾಗಿ  ಒಬ್ಬಳೇ ಕೂತು ಗಳಗಳನೆ ಅತ್ತು ಬಿಡುತ್ತಿದ್ದೆ.ನೋವು ಮನಸ್ಸನ್ನೆಲ್ಲ  ಹಿಂಡಿ ಹಿಪ್ಪೆ ಮಾಡುತ್ತಿತ್ತು, ಬದುಕಿನ ಭರವಸೆಯ ಬಾಗಿಲುಗಳೆಲ್ಲ ನನ್ನ ಪಾಲಿಗೆ ಮುಚ್ಚಿವೆ ಎಂದೇ ತಿಳಿದಿದ್ದೆ ನೊಂದಾಗ ನಿಜಕ್ಕೂ ಬೇಕಿರುವುದು ಅನುಕಂಪವಲ್ಲ.ಬದಲಿಗೆ ಹೆಗಲಿಗೆ ಹೆಗಲು ಕೊಟ್ಟು ಮೇಲಕ್ಕೇಳಿಸುವ ಬಲ. ಎಲ್ಲಾ ಅವಮಾನಗಳ ವಿರುದ್ಧ ಸಮರ ಸಾರಲು ನಿರ್ಧರಿಸಿದೆ. ಯಾವುದೇ ಸಹಾಯ ನಮ್ಮನ್ನು ಅಸಾಹಯಕರಂತೆ ಮಾಡಬಾರದು, ಅದು ನಿಜ ನಾನು ಅಸಾಯಕತೆಯನ್ನು ಒಪ್ಪಲು ಸಾಧ್ಯವಿಲ್ಲ ಪ್ರವಾಹದ ವಿರುದ್ಧ ಈಜಲು ನಿರ್ಧರಿಸಿದೆ. ಒಂದು ಕೈ ಇಲ್ಲದೇ ಇದ್ದರೇನಂತೆ ಇಲ್ಲದ ಜೆಸ್ಸಿಕಾ ಹುಟ್ಟುವಾಗಲೇ ತನ್ನ ಎರಡು ಕೈ ಕಳೆದುಕೊಂಡು ಕಾಲಿನಲ್ಲೇ ಬರಿಯುವುದನ್ನು ಕಲಿತು, ಕಾರು ಚಾಲನೆ ಮಾಡುವುದು, ಅಲ್ಲದೆ ವಿಮಾನವನ್ನು ನಡೆಸಿದ್ದಾಳೆ ಆಕೆ ಮನೋಬಲ  ನನಗೆ ಮಾದರಿಯಾಗಿತ್ತು.

.ಯಾವುದೆಲ್ಲ ನನ್ನಿಂದ ಸಾಧ್ಯವಿಲ್ಲವೆಂಧು ನನ್ನನ್ನು ಅಂಚಿಗೆ ತಳ್ಳಿದ್ದರೋ ಅದನ್ನು ಸಾಧಿಸಲು  ಮುಂದಾದೆ.ಒಂದೇ ಕೈಯಲ್ಲಿ ಬರೆಯಲು ಕಲಿತೆ ಎರಡೂ ಕೈ ಇದ್ದರೆ ಮಾತ್ರ ರೇಖಾಗಣಿತದ ಲೆಕ್ಕ ಮಾಡ;ಲು ಸಾಧ್ಯ ಎಂಬ ಸಿದ್ದಮಾದರಿಯನ್ನು ಮುರಿದೆ,ನಮ್ಮ ಮನೆಯಲ್ಲೆ ಪದವಿ ಶಿಕ್ಷಣ ಪಡೆದ ಮೊದಲ ಹೆಣ್ಣುಮಗಳು ನಾನು!! ನನ್ನ ದಿನನಿತ್ಯದ ಎಲ್ಲಾ ಕೆಲಸಗಳನ್ನು ನಾನೆ ಮಾಡಿಕೊಳ್ಳುತ್ತಿದ್ದೆ.ಕವಿಯೊಬ್ಬರು ಹೇಳುತ್ತಾರೆ “ನೀನು ಆತ್ಮಾರ್ಥವಾಗಿ ಏನ್ನನ್ನಾದರು ಮಾಡಬೇಕು ಎಂದು ನಿಶ್ಚಯಿಸಿದ್ದರೆ ಇಡೀ ಬ್ರಹ್ಮಾಂಡವೇ ಸಂಚು ಹೂಡಿ ಅದನ್ನು ನೆರವೇರಿಸುತ್ತವೆ”ಎಂದು. ಖಂಡಿತ ನನ್ನ ವಿಚಾರದಲ್ಲಿ ಈ ಮಾತು ಸತ್ಯವಾಯಿತು. ಅವರಿವರ ಮಾತುಗಳಿಗೆ ನಾನು ನನ್ನೊಳಗೆ ಕುಸಿದು ಹೊಗಿದ್ದಾಗ ಮೈಕೊಡವಿ ಹೇಳುವಂತೆ ಮಾಡಿದ್ದು ನನ್ನೊಳಗಿನ ಅಂತಃಸತ್ವ ಸ್ವಅನುಕಂಪ ಕೂಪವನ್ನು ಬಿಟ್ಟು,ನನಗೆ ಸಂಗಾತಿಯಾಗಿದ್ದು ಪ್ರಗತಿ ಪರ ಸಂಘಟನೆ ಇಲ್ಲಿ ಯಾವೂದು ಯಾವುದಕ್ಕೂ ಅಡ್ದಿಯಲ್ಲ,ಪ್ರಬಲ ಇಚ್ಚಾಶಕ್ತಿಯ ಎದುರು ಎಲ್ಲಾ ಕೊರತೆಗಳೂ ಗೌಣವಾಗುತ್ತವೆ. ಸಂಘಟನೆಯಲ್ಲಿ ತೊಡಗಿಕೊಂಡಂತೆಲ್ಲ ವಿಶಾಲ ಜಗತ್ತಿನೊಂದಿಗೆ ಮುಖಾಮುಖಿಯಾದೆ ನನ್ನೊಳಗಿನ ಭಾವನೆಗಳು ಮತ್ತೆ ಚಿಗುರೊಡೆಯಿತು. ಮನಸ್ಸು ರೆಕ್ಕೆ ಬಿಚ್ಚಿಹಾರಲು ಬಯಸಿತು, ಹೌದು ಕಳೆದುಕೊಂಡೆ ದೇಹದ ಅತೀ ಅವಶ್ಯಕ ಅಂಗವನ್ನು ಬಲವಿಲ್ಲದೆ ಬದುಕುವ ನೋವು ಆ ಕಷ್ಟ ಅನುಭವಿಸಿದವರಿಗಷ್ಟೇ ಅರಿವಿರುತ್ತದೆ. ಆದರೆ ನೆಪಗಳನ್ನು ಹುಡುಕಿದಂತೆಲ್ಲ ಮನಸ್ಸು ಮುದುರಿ ಕೂರುತ್ತದೆ. ಕಳೆದುಕೊಂಡದ್ದನ್ನು ಹೊರತುಪಡಿಸಿ ಬಹಳಷ್ಟು ಇತ್ತು ಪಡೆದುಕೊಂಡಿದ್ದು . ಇಂದು ನಾನು ದಿ ಡೆಕ್ಕನ್  ನ್ಯೂಸ್ ಎಂಬ ಮಾಧ್ಯಮದಲ್ಲಿ ಉಪ ಸಂಪಾದಕೀಯಾಗಿದ್ದೇನೆ, ಮೇಲಾಗಿ ಯಶಸ್ವಿ ಜೀವನ ನಡೆಸಬೇಕೆಂಬ ಕನಸು ಕಟ್ಟಿಕೊಂಡು ಕನಸಿಗೆ ರೆಕ್ಕೆ ಮೊಳೆಸುವಲ್ಲಿ ಶ್ರಮಿಸುತ್ತಿರುವ ಹೆಣ್ಣು, ಹೆಮ್ಮೆ ಪಡುತ್ತೇನೆ ಹೆಣ್ಣಾಗಿ ಹುಟ್ಟಿದ್ದಕ್ಕೆ ನನ್ನೆಲ್ಲ ಕೊರತೆ ಗಡಿಗಳನ್ನು ಮೀರಿದ್ದಕ್ಕೆ  ಅಂದ ಹಾಗೇ ಒಂದು ಮುಖ್ಯ ವಿಷಯ ಹೇಳುವುದೇ ಮರೆತಿದ್ದೆ ಬದುಕು ನನಗಿತ್ತ ಅನಂತ ಕೃಪೆಗಳನ್ನು ನೆನೆದು ಬದುಕಿಗೆ ಕೃತಜ್ಞಳಾಗಿದ್ದೇನೆ. ಬದುಕಬಹುದು ಅಂಗವೈಕಲ್ಯವಿದ್ಗರೂ; ಬದುಕಲಾಗದು ಮನೋವೈಕಲ್ಯದಿಂದ.

ಇಂತಿ ನಿಮ್ಮವಳು.