ಕುಡ ಇಲ್ದೆ ಎಡೆ ಹೊಡ್ದ ದಿವಾನ!

ಇನ್ನೂ ಬಹಳಷ್ಟು ದಿನ ನಮ್ಮೊಂದಿಗೆ ಇರಬೇಕಿದ್ದ ಈ ನಿಸ್ವಾರ್ಥ ಜೀವ ಇಂಥ ವಿಲಕ್ಷಣ ಘಟನೆಯೊಂದರಲ್ಲೆ ಇಹಲೋಕ ತ್ಯಜಿಸಿದ್ದು ನಮ್ಮೆಲ್ಲರನ್ನೂ ಆಘಾತಗೊಳಿಸಿತ್ತು.

ಕುಡ ಇಲ್ದೆ ಎಡೆ ಹೊಡ್ದ ದಿವಾನ!

ನಮ್ಮ ಸೊಟ್ಟ ನಾಗಪ್ಪ ಊರಲ್ಲಿ ಸುದ್ದಿಗಾರನ ಪಾತ್ರ ನಿರ್ವಹಿಸುತಿದ್ದರಿಂದ ಅವನಿಗೆ ಊರವರು ದಿವಾನ ಅಂತಲೂ ಕರೆಯುತಿದ್ದರು. ಅದು ಹೇಗೊ ಅವನಿಗೆ ನಾನು ಬಹಳ ಪ್ರಿಯನಾದುದರಿಂದ ಅವನ ಬಿರುದು ನನಗೂ ಅಂಟಿ, ಜನರು ನನಗು ದಿವಾನ ಎನ್ನುತಿದ್ದರು. ಹೀಗೆ ನಾಗಪ್ಪನ ದೆಸೆಯಿಂದ ಆಗಲೇ ನಾನೂ ದಿವಾನನಾಗಿದ್ದೆ!

ಅಪ್ಪ ಮತ್ತು ಕಾಕ ಬೇರೆಯಾದ ಮೇಲೆ ನಾಗಪ್ಪ ಕಾಕನ ಕಡೆಗಿದ್ದ. ಏಕೊ ಅಪ್ಪನಿಗೂ ನಾಗಪ್ಪನಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ನಾಗಪ್ಪ ಹಚ್ಚಿದ ಕೆಲಸವನ್ನು ಸರಿಯಾಗಿ ನಿಭಾಯಿಸದಿರುವುದು, ಅದಕ್ಕೂ ಹೆಚ್ಚಾಗಿ ಬೊಗಳೆ ಬಿಡುವುದು ಅಪ್ಪನಿಗೆ ಸೇರುತ್ತಿರಲಿಲ್ಲ.

ನಾಗಪ್ಪನ ಕಮ್ತದಂತೆ ಅವನ ಗೊರಕೆ ಕೂಡ ಊರಲ್ಲಿ ಪ್ರಸಿದ್ಧವಾಗಿತ್ತು. ಬೇಸಿಗೆಯ ದಿನಗಳಲ್ಲಿ ಮುಸ್ಸಂಜೆಯ ನಂತರ, ಉಂಡು ಹರಟೆ ಹೊಡೆದು ಅಂಗಳದಲ್ಲಿ ಮಲಗಿದನೆಂದರೆ ಅವನ ಗೊರಕೆ ಓಣಿಗೆಲ್ಲಾ ಕೇಳಿಸುತಿತ್ತು! ಬಹುಶಃ ನಾಗಪ್ಪ ಇರುವುದರಿಂದಲೇ ನಮ್ಮ ಓಣಿಯಲ್ಲಿ ಕಳ್ಳತನದ ಘಟನೆಗಳು ನಡೆಯುತ್ತಿರಲಿಲ್ಲವೆಂದು ಓಣಿಗರು ಅವನೊಂದಿಗೆ ಆಷಾಡುತಿದ್ದರು. 

ನಾಗಪ್ಪ ಕಾಲೆಳೆಯುತ್ತ ಅಡ್ಡಬಡ್ಡ ನಡೆಯುತಿದ್ದರೂ ಬಹುದೂರದ ನಡಿಗೆಯಲ್ಲಿ ಬಹಳ ಗಟ್ಟಿಗನಾಗಿದ್ದ. ಈಗಿನಂತೆ ಆಗ ಎತ್ತು, ಎಮ್ಮೆ ಮೊದಲಾದ ದನಗಳನ್ನು ಟಾಟಾಎಸಿ ಗಾಡಿಗಳಲ್ಲಿ ತುಂಬುತ್ತಿರಲಿಲ್ಲ. ಏನಿದ್ದರೂ ಅವುಗಳೊಂದಿಗೆ ನಡೆದುಕೊಂಡೆ ಸಾಗಾಣಿಕೆ ಮಾಡಬೇಕಿತ್ತು. ದೂರದ ಬಯಲುಸೀಮೆ, ಮಲೆನಾಡಿನ ಜಾತ್ರೆಗಳಲ್ಲಿ ಹೊಸದಾಗಿ ಕೊಂಡುಕೊಂಡ ಎತ್ತುಗಳನ್ನು ಮನೆಗೆ ಆತನೆ ಹೊಡೆದುಕೊಂಡು ಬರುತಿದ್ದ. ಬೀಗರ ಬಳಲಿ(ಬಳುವಳಿ) ಎಮ್ಮೆ, ಆಕಳುಗಳನ್ನು ಹೊಡೆದುಕೊಂಡು ಹೋಗುವುದು ಬರುವುದು ಅವನದೇ ಜವಾಬ್ದಾರಿಯಾಗಿತ್ತು. ಹೀಗೆಲ್ಲ ನಲವತ್ತು, ಐವತ್ತು ಮೈಲಿ ನಡೆದುಬಂದರೂ ಸೊಟ್ಟನಾಗಪ್ಪ ಕೈಕಾಲು ಸೋತಿವೆ ಉಸ್ಸೆಪಾ ಎಂದು ನಿಟ್ಟುಸಿರಿಡುತ್ತಿರಲಿಲ್ಲ. ಮರುದಿನ ಮನೆಯಲ್ಲಿ ಉಳಿದು ವಿಶ್ರಾಂತಿ ಪಡೆಯುತ್ತಿರಲಿಲ್ಲ. ಮತ್ತೆ ಎಂದಿನಂತೆ ಸಹಜವಾಗಿಯೆ ನಗುತ್ತ ಹೊಲ ಹೊಡೆಯಲು ತೆರಳುತಿದ್ದ ಅವನನ್ನು ಕಂಡರೆ ಸೋಜಿಗವಾಗುತಿತ್ತು. ನಡಿಗೆಯಲ್ಲಿ ಅವನಿಗಿದ್ದ ಪ್ರೀತಿ, ತಾಳ್ಮೆ ಮತ್ತು ಪ್ರಶಾಂತ ಮನೋಭಾವ ಈಗಲೂ ಅವನ ಬಗ್ಗೆ ನನಗೆ ಹೆಮ್ಮೆಯನ್ನುಂಟು ಮಾಡುತ್ತವೆ.

ಅಜ್ಜ ಸಂತೆಗೆ ಹೋದನೆಂದರೆ ತನ್ನ ಜತೆಗೆ ನಾಗಪ್ಪನನ್ನೂ ಕರೆದುಕೊಂಡು ಹೋಗುತಿದ್ದ. ಆವಾಗಿನ್ನೂ ಹಳ್ಳಿಗಳಿಗೆ ವಾಹನ ಸೌಕರ್ಯ‌ಗಳಿರಲಿಲ್ಲ. ನಮ್ಮೂರೂ ಹಾಗೇ ಪಟ್ಟಣಕ್ಕೆ ಹತ್ತಿರವಿದ್ದೂ ದ್ವೀಪದಂತಿತ್ತು. ತರಕಾರಿ, ಶೇಂಗಾ, ಹತ್ತಿ, ಜೋಳ ಮಾರುವುದಿದ್ದರೆ ಮಾತ್ರ ರಾಣೇಬೆನ್ನೂರಿಗೆ ಚಕ್ಕಡಿ ಕಟ್ಟುತಿದ್ದರು. ಇಲ್ಲವಾದರೆ, ರಾಣೇಬೆನ್ನೂರಿನ ಸಂತೆಗೆ ನಡೆದುಕೊಂಡೇ ಹೋಗುತಿದ್ದರು. ಅಲ್ಲಿಂದ ಸಂತೆಗಂಟು ಹೊತ್ತುಕೊಂಡು ನಡೆದುಕೊಂಡೆ ಊರಿಗೆ ಮರಳುತಿದ್ದರು. ಅದಕ್ಕೆ ಅಜ್ಜ ಸಂತೆಗಂಟು ಹೊರಲೆಂದೇ ತನ್ನ ಜತೆಗೆ ನಾಗಪ್ಪನನ್ನೂ ಕರೆದುಕೊಂಡು ಹೋಗುತಿದ್ದ. ನಾಗಪ್ಪ ಸಂತೆಗೆ ಹೋದರೆ, ಸಂಜೆಗೆ ನಾನು ಅವನ ದಾರಿಯನ್ನೇ ಕಾಯುತಿದ್ದೆ. ಅಜ್ಜ ಅಡ್ಕಿಯೆಲೆ ಖರ್ಚಿಗೆ ಅಂತ ಕೊಟ್ಟ ಆಣೆ, ಪಾವಲಿಗಳನ್ನೇ ಉಳಿಸಿಕೊಂಡು ನಾಗಪ್ಪ ನನಗೆ ಬೇಸನ್ ಉಂಡಿ, ಜಿಲೇಬಿ ತಂದುಕೊಡುತಿದ್ದುದೇ ಈ ಕಾಯುವಿಕೆಗೆ ಕಾರಣವಾಗಿತ್ತು. ಹೀಗಾಗಿ ಒಮ್ಮೊಮ್ಮೆ ಅಜ್ಜ ಒಬ್ಬನೇ ಸಂತೆಗೆ ಹೊಂಟರೆ ನಾನು ಬೇಸರಪಟ್ಟುಕೊಳ್ಳುತಿದ್ದೆ!

ಸೊಟ್ಟ ನಾಗಪ್ಪ, ಅಪ್ಪ ಮತ್ತು ಇನ್ನೊಬ್ಬ ಆಳುಮಗ ಸೇರಿ ಒಮ್ಮೆ ಬಿಳಿಜೋಳದ ಹೊಲ ಎಡೆ ಹೊಡೆಯಲು ಹೋಗಿದ್ದರಂತೆ. ಶೀಗೆ ಹುಣ್ಣಿವೆಯ ವೇಳೆಗೆ ಜೋಳ ಆಗಲೇ ಮೊಣಕಾಲಿನವರೆಗೆ ಬೆಳೆದಿತ್ತು.

ಒಂದು ದಮ್ಮು ಹೊಲ ಹೊಡೆದಿದ್ದರೇನೋ ಸ್ವಲ್ಪ ಕೂತು, ದಣಿವಾರಿಸಿಕೊಂಡು ನೀರು ಕುಡಿದು ಮತ್ತೆ ಹೊಲ ಹೊಡೆಯತೊಡಗಿದರು. ಆನಂತರ ಆಗಲೇ ಎರಡ್ಮೂರು ತಿರುವು ಹೊಲ ಹೊಡೆದಿದ್ದರೇನೋ..ಕೂಡಲೇ ನಾಗಪ್ಪ `ಯೇ ತಡಿ ತಡೀ..ಹೌಹೌಹೌಹೌ' ಎನ್ನತೊಡಗಿದ. ಎತ್ತು ತರುಬಿ` ಯಾಕೋ ನಾಗಪ್ಪ ಏನಾತು?' ಅಂತ ಕೇಳಿದರೆ `ಅವನೌನ್, ಕುಡಾ ಎಲ್ಲೆ ಉಚ್ಚಿಗೆಂಡ್ ಬಿದ್ದೈತಿ ಬಿಡ ಮಾರಾಯಾ! ಅಂದ ನಾಗಪ್ಪ.

`ಕುಡ ಇಲ್ಲದ ಅದ್ಹೆಂಗ್ ಹೊಲ ಹೊಡ್ಯಾಕ್ಹತ್ತಿಯೋ ಮಾರಾಯಾ..ಏನ್ ಮೇಳಿ ಹಿಡ್ಕಂಡ್ ನಿದ್ದಿ ಮಾಡಕೆಂತ ಬರಾಕ್ಹತ್ತೀಯೇನು? ಅಂತ ಅಪ್ಪ ಗದರಿಸಿದ್ದೇ ತಡ `ಪಡಿಪಾಟಲಾಪ ಮಾರಾಯ' ಅನಕೊಂತ ನಾಗಪ್ಪ ತನ್ನ ಕುಂಟಿ ಹಾದುಬಂದ ಹಾದಿಯನ್ನು ಹುಡುಕಿಹೋದರೆ ಕೂಡ ಇವರುಗಳೇ ತರುಬಿ ನೀರು ಕುಡಿದ ಜಾಗದಲ್ಲೇ ಬಿದ್ದಿತ್ತಂತೆ! ನಾಗಪ್ಪನ ಬದುಕಿನಲ್ಲಿ ಇಂಥ ವಿಲಕ್ಷಣ ಸಂಗತಿಗಳು ಇನ್ನೂ ಎಷ್ಟಿದ್ದವೊ! 

ಇನ್ನೂ ಬಹಳಷ್ಟು ದಿನ ನಮ್ಮೊಂದಿಗೆ ಇರಬೇಕಿದ್ದ ಈ ನಿಸ್ವಾರ್ಥ ಜೀವ ಇಂಥ ವಿಲಕ್ಷಣ ಘಟನೆಯೊಂದರಲ್ಲೆ ಇಹಲೋಕ ತ್ಯಜಿಸಿದ್ದು ನಮ್ಮೆಲ್ಲರನ್ನೂ ಆಘಾತಗೊಳಿಸಿತ್ತು.

ಅದೊಂದು ದಿನ ನಾಗಪ್ಪ ಸೂರ್ಯ ಮೂಡುವ ಮುನ್ನ, ನಸುಕಿನಲ್ಲಿಯೆ ಹೊಲ ಹೊಡೆಯಲು ಹೋಗಿದ್ದ. ದಾರಿ ಮಧ್ಯದ ಹೊಲದವರೊಬ್ಬರು ಜಿಂಕೆಗಳ ಕಾಟಕ್ಕಾಗಿ ಹೊಲದ ಬದುವಿನಗುಂಟ ತಂತಿ ಎಳೆದಿದ್ದರು. ಇದ್ಯಾವುದರ ಪರಿವೆ ಇಲ್ಲದ ನಾಗಪ್ಪ ಅದೇ ದಾರಿಯಲ್ಲಿ ಹೋಗಿಬಿಟ್ಟಿದ್ದ. ತಂತಿ ಆಕಸ್ಮಿಕವಾಗಿ ಎತ್ತುಗಳ ಕಾಲಿಗೆ ತೊಡರಿಬಿಟ್ಟಿತ್ತು. ಎತ್ತುಗಳೇಕೋ ಮಂಡಿಯೂರಿ ಬಿದ್ದವೆಂದು ಅವುಗಳ ಬಾಲ ತಿರುವಿ ಎಬ್ಬಿಸಲು ಹೋದ ನಾಗಪ್ಪ, ತನ್ನ ಎತ್ತುಗಳ ಜೊತೆಗೇ ತಾನೂ ಪ್ರಾಣ ಬಿಟ್ಟಿದ್ದ. ಎತ್ತುಗಳ ಜತೆಗೆ ನಿತ್ಯವೂ ನಡೆಯುತಿದ್ದ ನಾಗಪ್ಪ, ಸಾವಿನಲ್ಲೂ ಅವುಗಳೊಂದಿಗೇ ನಡೆದುಬಿಟ್ಟಿದ್ದ! 

ಅವನ ನಗೆ, ಚೇಷ್ಟೆ, ಮಾತು, ಕೆಲಸ ಎಲ್ಲವೂ ಈಗ ಬರಿ ನೆನಪು!