ಹಿಟ್ಲರನ ನ್ಯೂರೆಂಬರ್ಗ್ ಜನಾಂಗೀಯ ಕಾನೂನಿನಂತೆಯೇ ಮೋದಿ ಸರ್ಕಾರದ ಸಿಎಬಿ ಮಸೂದೆ ಕೂಡ: ಸಿಪಿಐ ನಾಯಕ ಡಿ ರಾಜಾ

ದೇಶದ ಇಂದಿನ ಸ್ಥಿತಿಯನ್ನು ಹಿಟ್ಲರನ ಜರ್ಮನಿಗೆ ಹೋಲಿಸಿರುವ ಹಿರಿಯ ಕಮ್ಯುನಿಸ್ಟ್ ಮುಖಂಡರು, ಸಂಸತ್ತಿನ ಮೂಲಕ ದೇಶದ ಸಂವಿಧಾನವನ್ನೇ ಮೋದಿ ಸರ್ಕಾರ ಬುಡಮೇಲು ಮಾಡುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಟ್ಲರನ ನ್ಯೂರೆಂಬರ್ಗ್ ಜನಾಂಗೀಯ ಕಾನೂನಿನಂತೆಯೇ ಮೋದಿ ಸರ್ಕಾರದ ಸಿಎಬಿ ಮಸೂದೆ ಕೂಡ: ಸಿಪಿಐ ನಾಯಕ ಡಿ ರಾಜಾ

ವ್ಯಕ್ತಿಯ ಧರ್ಮದ ಮಟ್ಟಕ್ಕೆ ದೇಶದ ಪೌರತ್ವವನ್ನು ಕುಗ್ಗಿಸಿದ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿಯೂ ಅನುಮೋದನೆ ಪಡೆದ ಮಾರನೇ ದಿನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ನ್ಯಾಷನಲ್ ಹೆರಾಲ್ಡ್ ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸಂದರ್ಶನದಲ್ಲಿ ರಾಜಾ ಅವರು- ಸಿಪಿಎಂ ನ ಮೊದಲ ದಲಿತ ಮುಖ್ಯಸ್ಥರು- ದೇಶದ ಇಂದಿನ ಸ್ಥಿತಿಯನ್ನು ಹಿಟ್ಲರನ ಜರ್ಮನಿಗೆ ಹೋಲಿಸಿದ್ದಾರೆ. ಸಂಸತ್ತಿನ ಮೂಲಕ ದೇಶದ ಸಂವಿಧಾನವನ್ನೇ ಮೋದಿ ಸರ್ಕಾರ ಬುಡಮೇಲು ಮಾಡುತ್ತಿದೆ ಎಂಬುದು ಅವರ ಆತಂಕ.

ಲೋಕಸಭೆಯ ಮೂಲಕ ರಾಜ್ಯಸಭೆ ಕೂಡ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ನಿಮಗೆ ಏನನಿಸುತ್ತೆ ಈ ಬಗ್ಗೆ?

ಇದು ಸಂವಿಧಾನಬಾಹಿರ. ಸರ್ಕಾರ ತನ್ನ ಬಿಜೆಪಿ ಸಿದ್ಧಾಂತದ ಮೇಲೆ ಈ ಶಾಸನವನ್ನು ತಂದಿದೆಯೇ ಹೊರತು, ಸಂವಿಧಾನದ ನೆಲೆಯ ಮೇಲಲ್ಲ. ಅದರ ಹಿಂದಿನ ಹುನ್ನಾರ ಕೂಡ ಸ್ಪಷ್ಟ. ಸಂವಿಧಾನವನ್ನು ಮೂಲೆಗುಂಪು ಮಾಡುವ ಬಿಜೆಪಿ-ಆರ್ ಎಸ್ ಎಸ್ ತಂತ್ರದ ಭಾಗವದು. ಹಾಗಾಗಿ ಸಂಸತ್ತಿನ ಬಲವನ್ನು ಬಳಸಿಕೊಂಡು ಸಂವಿಧಾನವನ್ನೇ ಬುಡಮೇಲು ಮಾಡುವ ಬಿಜೆಪಿಯ ಉದ್ದೇಶ ಸ್ಪಷ್ಟ.

ದೇಶದ ಜನರ ಮೇಲೆ ಬಿಜೆಪಿ ಮತ್ತು ಆರ್ ಎಸ್ ಎಸ್ ತನ್ನ ಹಿಂದೂರಾಷ್ಟ್ರ ಸಿದ್ಧಾಂತವನ್ನು ಹೇರುತ್ತಿವೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಬೃಹತ್ ಅಜೆಂಡಾದ ಭಾಗ ಅದು.

ನೋಡಿ, ಅವರದು ಚುನಾಯಿತ ಸರ್ಕಾರ. ಸಂವಿಧಾನದ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗಾಗಿ ಸಂವಿಧಾನವನ್ನು ರಕ್ಷಿಸುವುದು ಅವರ ಹೊಣೆಗಾರಿಕೆ. ಆದರೆ, ಅವರು ಮಾಡುತ್ತಿರುವುದು ಅದನ್ನು ಬುಡಮೇಲು ಮಾಡುವ ಕೆಲಸ. ಈ ಮಸೂದೆಯನ್ನು ಅಂಗೀಕರಿಸಿದ್ದಂತೂ ಸ್ಪಷ್ಟವಾಗಿ ಸಂವಿಧಾನದ ಆಶಯಕ್ಕೆ ಸಂಪೂರ್ಣ ತದ್ವಿರುದ್ಧ. ಆ ಕಾರಣಕ್ಕೇ ನಾವು ಇದನ್ನು ವಿರೋಧಿಸುತ್ತಿರುವುದು. ನಮ್ಮ ವಿರೋಧದ ಭಾಗವಾಗಿ ಡಿ.19ರಂದು ದೇಶವ್ಯಾಪಿ ಪ್ರತಿಭಟನೆಗೆ ಎಡಪಕ್ಷಗಳು ಕರೆ ನೀಡಿವೆ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಲು ಬಿಡುವುದಿಲ್ಲ ಎಂದು ಪ್ರತಿಪಕ್ಷಗಳು ಹೇಳಿದ್ದವು. ಆದರೆ, ಬಿಜೆಪಿ ಬಹಳ ಸರಾಗವಾಗಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಯಿತು. ಅದಕ್ಕೆ ಪ್ರತಿಪಕ್ಷಗಳ ತಂತ್ರಗಾರಿಕೆಯ ವೈಫಲ್ಯ ಅಥವಾ ಹೊಂದಾಣಿಕೆಯ ಕೊರತೆ ಅದಕ್ಕೆ ಕಾರಣ ಎನಿಸುತ್ತದೆಯಾ?

ಅವರು ತಮ್ಮ ತಮ್ಮ ಬೆಂಬಲಿತ ಸಂಖ್ಯಾಬಲವನ್ನೂ ತಿರುಚಿದರು. ಸಂಸತ್ತಿನಲ್ಲಿ ಅಭೂತಪೂರ್ವ ಬೆಂಬಲವೇನೂ ಅವರಿಗೆ ಇರಲಿಲ್ಲ. ಅದೊಂದು ಸಮಬಲದ ಸೆಣೆಸಾಟವಾಗಿತ್ತು. ಆದರೆ, ಕೆಲವು ಪಕ್ಷಗಳು ತಮ್ಮ ರಾಜಕೀಯ ಅನಿವಾರ್ಯತೆಯಿಂದಾಗಿ ಸದನದಿಂದ ಹೊರ ನಡೆದರು, ಇಲ್ಲವೇ ಮಸೂದೆಯನ್ನು ಬೆಂಬಲಿಸಿದವು. ಅದರರ್ಥ ಪ್ರತಿಪಕ್ಷಗಳು ಬಿಜೆಪಿಗೆ ಪ್ರತಿತಂತ್ರ ಹೆಣೆಯುವಲ್ಲಿ ವಿಫಲವಾದವು ಅಥವಾ ಹೊಂದಾಣಿಕೆ ಮೂಡಲಿಲ್ಲ ಎಂದೇನಲ್ಲ. ಮಸೂದೆಯನ್ನು ಬೆಂಬಲಿಸಿದವರೊಂದಿಗೆ ನೀವು ಮಾತನಾಡಿದರೆ, ಖಂಡಿತವಾಗಿಯೂ ಅವರು ಅದರ ವಿರುದ್ಧ ಮಾತನಾಡುತ್ತಾರೆ. ಆದಾಗ್ಯೂ ಮತದಾನದ ವೇಳೆ ಅವರು, ಒಂದೋ ಅದನ್ನು ಬೆಂಬಲಿಸಿದರು, ಇಲ್ಲವೇ ಮತದಾನದಿಂದ ಹಿಂದೆ ಸರಿದರು, ಇಲ್ಲವೇ ಸದನದಿಂದ ಹೊರಗುಳಿದರು.

ಅಲ್ಲದೆ, ಇತರ ಕೆಲವು ಭಯಗಳು ಇವೆ. ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಹೇಗೆ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಸದೆಬಡಿಯುತ್ತಿದೆ ಎಂಬುದು ನಮಗೆಲ್ಲಾ ಗೊತ್ತಿದೆ.

ಅಗತ್ಯ ಸಂಖ್ಯಾಬಲದ ಪಡೆಯಲು ಬಿಜೆಪಿ ಇಂತಹ ಹತ್ತಾರು ತಂತ್ರಗಳನ್ನು ಪ್ರಯೋಗಿಸಿ ರಾಜಕೀಯ ಪಕ್ಷಗಳನ್ನು ಮಣಿಸಿದೆ. ಆದರೂ ಅವರೇ  ಇಡೀ ದೇಶದ ದನಿ ಅಲ್ಲ. ನೀವು ಈಗಲೂ ಹೋಗಿ ಜನರ ಬಳಿ ಮಾತನಾಡಿದರೆ, ಬಹಳ ದೊಡ್ಡ ಸಂಖ್ಯೆಯ ಹಿಂದೂಗಳು ರಾಷ್ಟ್ರೀಯತೆ ಕುರಿತ ಇವರ ಚಿಂತನೆಯನ್ನು ವಿರೋಧಿಸುತ್ತಾರೆ.

ಈ ಮಸೂದೆಯ ಅಂಗೀಕಾರವನ್ನು ಜನ ಸಂಭ್ರಮಿಸುತ್ತಿರುವುದನ್ನು ಸುದ್ದಿವಾಹಿನಿಗಳು ತೋರಿಸುತ್ತಿವೆಯಲ್ಲ?

ಯಾರೋ ಬೆರಳೆಣಿಕೆಯಷ್ಟು ಮಂದಿ ಸಂಭ್ರಮಿಸಿರಬಹುದು. ಆದರೆ ಅದೇ ವಾಸ್ತವವಲ್ಲ. ಸುದ್ದಿ ವಾಹಿನಿಗಳು ಮತ್ತೊಂದು ಮುಖವನ್ನು ತೋರಿಸುವುದೇ ಇಲ್ಲ. ಇಡೀ ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ ಎಂಬುದನ್ನು ಯಾರೂ ಮರೆಯಬಾರದು. ಬಹುತೇಕ ಹಿಂದೂಗಳು ಧರ್ಮ ದ್ವೇಷ ಹೊಂದಿರುವುದಿಲ್ಲ. ಪರಸ್ಪರ ಸಾಮರಸ್ಯದಿಂದ ಬದುಕುವ ಬಹಳಷ್ಟು ಭಿನ್ನ ಧರ್ಮೀಯರನ್ನು ನಾನು ಕಂಡಿದ್ದೇನೆ. ಆದರೆ, ಬಿಜೆಪಿ ಮತ್ತು ಆರ್ ಎಸ್ ಎಸ್ ತಾವು ಇಡೀ ಹಿಂದೂ ಸಮುದಾಯದ ದನಿ ಎಂದು ಹೇಗೆ ಹೇಳುತ್ತಾರೋ ಗೊತ್ತಿಲ್ಲ.

ಹಿಟ್ಲರನ ಜರ್ಮನಿ ಮತ್ತು ಮೋದಿಯ ಭಾರತದ ನಡುವೆ ನಿಮಗೆ ಹೋಲಿಕೆ ಕಾಣುತ್ತಿದೆಯೇ? ಹಿಟ್ಲರ್ ತನ್ನ ಜನಾಂಗೀಯ ಅಜೆಂಡಾವನ್ನು ಹರಡಲು ಜರ್ಮಿನಿಯ ಸಂಸತ್ತನ್ನು ಬಳಸಿಕೊಂಡಿದ್ದ

ಮೋದಿಯಂತೆ ಹಿಟ್ಲರ್ ಕೂಡ ಮೋಡಿ ಮಾಡುವ ಮಾತುಗಾರನಾಗಿದ್ದ. ರಾಷ್ಟ್ರೀಯ ಸಮಾಜವಾದದ ಬಗ್ಗೆ ಹಿಟ್ಲರ್ ಕೂಡ ಮಾತನಾಡುತ್ತಿದ್ದ. ಆತ ಚುನಾವಣೆಗಳನ್ನು ಗೆಲ್ಲುವ ಮೂಲಕ ಹೇಗೆ ಅಧಿಕಾರಕ್ಕೆ ಏರಿದ್ದ ಎಂಬುದು ನಮಗೆಲ್ಲಾ ಗೊತ್ತಿದೆ. ಆದರೆ, ಅವನೇ ಜರ್ಮನಿಯ ಸಂಸತ್ ಭವನ ರೇಷ್ಟಾಗಿಗೆ ಬೆಂಕಿ ಹಚ್ಚಿ, ಕಮ್ಯುನಿಸ್ಟರ ಮೇಲೆ ಗೂಬೆ ಕೂರಿಸಿದ. ಬಳಿಕ ತನ್ನ ಸೇನಾ ಬಲ ಪ್ರಯೋಗಿಸಿ ಅವರನ್ನೆಲ್ಲಾ ಮುಗಿಸಿದ. ಭಾರತದಲ್ಲಿಯೂ ಅದೇ ರೀತಿ ನಡೆಯುತ್ತಿದೆ.

ನ್ಯೂರೆಂಬರ್ಗ್ ಕಾನೂನು ಜಾರಿ ಮಾಡಲು ಹಿಟ್ಲರ್ ಜರ್ಮನಿಯ ಸಂಸತ್ತನ್ನು ಬಳಸಿಕೊಂಡ. ಮೋದಿ ಸರ್ಕಾರ ಕೂಡ ಅದೇ ರೀತಿ ಮಾಡಿದೆ.  

ಹೀಗೆ ಜರ್ಮನಿಯಲ್ಲಿ ನಾಝಿವಾದ ಅಥವಾ ಫ್ಯಾಸಿಸಂ ಎಂಬುದು ಬೆಳೆಯಿತು. ಜರ್ಮನಿಯಲ್ಲಷ್ಟೇ ಅಲ್ಲದೆ, ಜಗತ್ತಿನ ಇತರ ರಾಷ್ಟ್ರಗಳಲ್ಲೂ ಅದೇ ರೀತಿ ನಡೆಯಿತು. ಆದರೆ, ಇವತ್ತು ನಾವು ಭಾರತದಲ್ಲಿ ಕಾಣುತ್ತಿರುವುದು ಮಾತ್ರ ಫ್ಯಾಸಿಸಂನ ಭಾರತೀಯ ಮಾದರಿ ಅಷ್ಟೇ.

ದೇವರು, ಧರ್ಮದ ಹೆಸರಿನಲ್ಲಿ, ಅಂಬೇಡ್ಕರ್ ಅವರಂಥವರು ಸಂಪೂರ್ಣ ತಿರಸ್ಕರಿಸಿದ್ದ ಮತ್ತು ಜೀವಮಾನವಿಡೀ ಹೋರಾಡಿದ್ದ ಶ್ರೇಣೀಕೃತ ಸಮಾಜವನ್ನು ಮುಂದುವರಿಸುವುದು ಅವರ ಉದ್ದೇಶ. ಹಿಂದೂ ರಾಷ್ಟ್ರ ಸಿದ್ಧಾಂತವನ್ನು ಕೂಡ ಅಂಬೇಡ್ಕರ್ ವಿರೋಧಿಸಿದ್ದರು. ಸಮಾನತೆ, ಸ್ವಾತಂತ್ರ್ಯವನ್ನು ಬೋಧಿಸುವ ಧರ್ಮದ ಬಗ್ಗೆ ಅವರು ಮಾತನಾಡಿದ್ದರು. ಆದರೆ, ಇಂದು ಆರ್ ಎಸ್ ಎಸ್ ಮತ್ತು ಬಿಜೆಪಿ ಮನುಸ್ಮೃತಿ ಬೋಧನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿವೆ.

ಮಸೂದೆಯ ಕುರಿತು ಬಿಜೆಪಿಯ ಒಳಗೇ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ. ಈಶಾನ್ಯ ಭಾರತದ ಬಿಜೆಪಿ ನಾಯಕರು ವಿಶೇಷವಾಗಿ ಅದರ ವಿರುದ್ಧ ದನಿ ಎತ್ತಿದ್ದಾರೆ.

ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ. 370ನೇ ವಿಧಿ ರದ್ದು ಮೂಲಕ ಅವರು ಜಮ್ಮು-ಕಾಶ್ಮೀರಕ್ಕೆ ಬೆಂಕಿ ಇಕ್ಕಿದರು. ಇದೀಗ ಈ ಮಸೂದೆಯ ಮೂಲಕ ಇಡೀ ಈಶಾನ್ಯ ಭಾರತವನ್ನು ಕುದಿಕುಲುಮೆ ಮಾಡಿದ್ದಾರೆ. ಅಷ್ಟೇ ಅಲ್ಲ; ದೇಶಾದ್ಯಂತ ಹಿಂದೆಂದೂ ಕಾಣದ ಪ್ರಮಾಣದ ಆತಂಕ ಮತ್ತು ಭೀತಿ ಹಬ್ಬಿದೆ.

ಇಂತಹ ವಿವಾದಿತ ಮಸೂದೆಯ ಮೂಲಕ ಬಿಜೆಪಿ ಏನನ್ನು ಸಾಧಿಸಲು ಹೊರಟಿದೆ ಎಂಬುದು ಪ್ರಶ್ನೆ. ಕೇವಲ ಚುನಾವಣಾ ಲಾಭವಷ್ಟವೇ ? ಅಥವಾ ಅದಕ್ಕಿಂತ ದೊಡ್ಡ ಅಜೆಂಡಾ ಇದೆಯೇ?

ಅವರ ಅಂತಿಮ ಗುರಿಯೇ ದೇಶವನ್ನು ಹಿಂದೂ ರಾಷ್ಟ್ರಮಾಡುವುದು. ಅದಕ್ಕೆ ನಮ್ಮ ವಿರೋಧ ಇದ್ದೇ ಇದೆ. ಆದರೆ, ತತಕ್ಷಣಕ್ಕೆ ಚುನಾವಣಾ ಲಾಭ ಪಡೆಯುವ ಉದ್ದೇಶ ಕೂಡ ಅವರಿಗಿದೆ. ಆದರೆ, ಅವರ ದೀರ್ಘಾವಧಿ ಗುರಿ ಹಿಂದೂ ರಾಷ್ಟ್ರವನ್ನಾಗಿ ಭಾರತವನ್ನು ಪರಿವರ್ತಿಸುವುದೇ ಆಗಿದೆ.

ಈ ವಿಷಯದಲ್ಲಿ ನ್ಯಾಯಾಂಗ ನೆರವಿಗೆ ಬರಬಹುದು ಎಂಬ ಭರವಸೆ ಇದೆಯೇ? ಸಿಎಬಿಯನ್ನು ಪ್ರಶ್ನಿಸಿ ಈಗಾಗಲೇ ಮೂರ್ನಾಲ್ಕು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆಯಲ್ಲ..?

ಸುಪ್ರೀಂಕೋರ್ಟ್ ಏನು ಮಾಡುತ್ತದೆ ನೋಡೋಣ. ಆದರೆ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದನ್ನು ಕೇಳಿ ನನಗೆ ಆಘಾತವಾಗಿದೆ. ನ್ಯಾಯಾಂಗ ಕೂಡ ಮಸೂದೆಯನ್ನು ಎತ್ತಿ ಹಿಡಿಯಲಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಈ ವಿಷಯದಲ್ಲಿ ಅಷ್ಟು ವಿಶ್ವಾಸದಿಂದ ಹೇಗೆ ಆ ಮಾತು ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ನಮ್ಮನ್ನೆಲ್ಲಾ ನಿರಾಶಗೊಳಿಸಿದ ಅಯೋಧ್ಯಾ ತೀರ್ಪಿನಿಂದ ಅವರು ಆ ಭರವಸೆ ಪಡೆದಿದ್ದಾರೆಯೇ? ಆದಾಗ್ಯೂ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವುದು ಬೇಡ. ಭರವಸೆ ಇಡೋಣ.