ಡಾ.ಅಂಬೇಡ್ಕರ್, ಸಂವಿಧಾನ, ಮೀಸಲಾತಿ: ಮತ್ತೆ ಮತ್ತೆ ಅವೇ ಪ್ರಶ್ನೆಗಳು...!?

ಡಾ.ಅಂಬೇಡ್ಕರ್ ರವರೊಬ್ಬರೇ ಸಂವಿಧಾನ ರಚಿಸಿದರೆಂಬುದಕ್ಕೆ ಅನೇಕ ಸಲ ಅನೇಕ ಧಾಖಲೆಗಳನ್ನು ಕೊಟ್ಟು ದೃಶ್ಯ ಮಾಧ್ಯಮದಲ್ಲೂ, ಸಾಮಾಜಿಕ ಜಾಲತಾಣಗಳಲ್ಲೂ ಹೇಳಿದ್ದಾಗಿದೆ. ಆದರೂ ಇವರು ಅರ್ಥಮಾಡಿಕೊಳ್ಳಲು ಕನಿಷ್ಟ ಪ್ರಯತ್ನಿಸುತ್ತಿಲ್ಲ! ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಸಮಯ ವ್ಯರ್ಥಮಾಡಬೇಕಿಲ್ಲ. ಇದು ಉದ್ದೇಶಪೂರಿತ, ಪಿತೂರಿಯ ಅಭಿಯಾನ. ಡಾ.ಅಂಬೇಡ್ಕರ್ ರವರ ವಿರುದ್ದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸದಾ ವಿಷಕಾರುತ್ತಾ ಹೆಡೆಯಾಡುತ್ತಿರುವ ಜಾತಿಯೇ ಇದಕ್ಕೆ ಮುಖ್ಯ ಕಾರಣ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.

ಡಾ.ಅಂಬೇಡ್ಕರ್, ಸಂವಿಧಾನ, ಮೀಸಲಾತಿ: ಮತ್ತೆ ಮತ್ತೆ ಅವೇ ಪ್ರಶ್ನೆಗಳು...!?

ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ ಅಂಬೇಡ್ಕರ್, ಸಂವಿಧಾನ ಮತ್ತು ಮೀಸಲಾತಿ ಕುರಿತಂತೆ ಮೂರು ವಿವಾದಗಳಾಗಿವೆ

1. ಶಿಕ್ಷಣ ಇಲಾಖೆ ಸಂವಿಧಾನ ದಿನಾಚರಣೆ ಆಚರಿಸುವ ನೆಪದಲ್ಲಿ ಡಾ.ಅಂಬೇಡ್ಕರ್ ರವರನ್ನು ಗೌಣಗೊಳಿಸುವ ಷಡ್ಯಂತ್ರ ರೂಪಿಸಿ ಸುತ್ತೊಲೆ ಹೊರಡಿಸಿದ್ದು.

2. 'ನವ ಬೆಂಗಳೂರು' ಎಂಬ ಸಂಸ್ಥೆಯೊಂದು ಸಂವಿಧಾನ ದಿನಾಚರಣೆಯ ಆಹ್ವಾನ ಪತ್ರದಲ್ಲಿ  'ದುರುದ್ದೇಶಪೂರಿತ' ಎಂಬುದು ಮೇಲ್ನೋಟಕ್ಕೆ ಕಾಣುವಂತೆ ಡಾ.ಅಂಬೇಡ್ಕರ್ ಅವರ ಚಿತ್ರ ಇರಬೇಕಾದ  ಜಾಗದಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿಯವರ ಚಿತ್ರ ಹಾಕಿ ವೈರಲ್ ಮಾಡಿದ್ದು.

3. ಸಂಘಪರಿವಾರದ 'ಕಾಮಿಡಿ ಪೀಸ್' ವೊಂದರ ಬಾಯಲ್ಲಿ ಮೀಸಲಾತಿಯನ್ನೇ ರದ್ದುಗೊಳಿಸುವ ಮಾತನಾಡಿಸಿದ್ದು! 

ಇವೆಲ್ಲ ಬೇರೆ ಬೇರೆ ಘಟನೆಗಳು ಅನಿಸಿದರೂ ಇವುಗಳ ಉದ್ದೇಶ ಮತ್ತು ಮೂಲ ತಂತ್ರ ಒಂದೇ ಇದ್ದಂತಿದೆ!?

ಮೊದಲನೆಯದಾಗಿ ಗಂಭೀರವಾಗಿ ಪರಿಗಣಿಸಬೇಕಾದುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆ ಬಗ್ಗೆ!? ಮೇಲ್ನೋಟಕ್ಕೆ ಈ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವಂತೆ ಕಂಡರೂ  ಒಳಹೊಕ್ಕು ನೋಡಿದರೆ ಷಡ್ಯಂತ್ರದ ಅನಾವರಣವಾಗುತ್ತದೆ !? 'ಡೆಕ್ಕನ್ ನ್ಯೂಸ್' ವಿವರವಾಗಿ ವಿಷಯ ಸಂಗ್ರಹಿಸಿ, ಪ್ರಕಟಿಸಿದಂತೆ  "ಸಂಘ ಪರಿವಾರದ ಕಾರ್ಯಸೂಚಿ ಇದೇ ನವೆಂಬರ್ 26ರಂದು ಬಯಲಾಗಲಿದೆ. ಸಂವಿಧಾನ ಬರೆದಿದ್ದು ಯಾರು ಎಂಬ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಅಡಗಿರುವ ಕಾರ್ಯಸೂಚಿಯನ್ನೀಗ ಡೆಕ್ಕನ್ ನ್ಯೂಸ್ ಹೊರಗೆಡವುತ್ತಿದೆ". 

"ಭಾರತದ ಸಂವಿಧಾನವನ್ನು 2021ರೊಳಗೆ ಬದಲಾಯಿಸುವ ಸುಳಿವು ನೀಡಿರುವ ಕೇಂದ್ರದ ಬಿಜೆಪಿ ಸರ್ಕಾರ, ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಚಾಲನೆ ನೀಡಿದೆ. ಇದರ ಆರಂಭಿಕ ಭಾಗವಾಗಿ ದೇಶಾದ್ಯಂತ ನವೆಂಬರ್ 26ರಂದು ಆಚರಿಸುವ ಸಂವಿಧಾನ ದಿನವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿರುವ ಬಿಜೆಪಿ ಸರ್ಕಾರ, 'ಡಾ ಬಿ ಆರ್ ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ಬರೆದಿಲ್ಲ' ಎಂದು ದೇಶದಾದ್ಯಂತ ಪ್ರತಿಪಾದನೆ ಮಾಡಲಾರಂಭಿಸಿದೆ."

"ಸಂವಿಧಾನ ದಿನ ಅಭಿಯಾನದ ಅಂಗವಾಗಿ ಹೊರಡಿಸಿರುವ ಕಾರ್ಯಸೂಚಿ ಪಟ್ಟಿಯ 5ನೇ ಪುಟದಲ್ಲಿನ 'ನಮ್ಮ ಸಂವಿಧಾನವನ್ನು ಯಾರು ಬರೆದರು' ಎಂಬ ಉಪ ಶೀರ್ಷಿಕೆ, ಅಂಬೇಡ್ಕರ್ ಅವರ ಹೆಸರನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿಸಿದೆ."

"ಸಾಕಷ್ಟು ಜನರಿಗೆ ತಿಳಿದಿರುವಂತೆ ಡಾ ಅಂಬೇಡ್ಕರ್ ರವರು ಸಂವಿಧಾನದ ಪಿತಾಮಹ ಆಗಿರುತ್ತಾರೆ. ಜತೆಗೆ ಸಂವಿಧಾನವನ್ನು ಅವರೊಬ್ಬರೇ ಬರೆದಿರುವುದಿಲ್ಲ. ನಮ್ಮ ಸಂವಿಧಾನವು ನಮ್ಮ ದೇಶಾದ್ಯಂತ ಇರುವ ವಿವಿಧ ಧರ್ಮ, ಜಾತಿ ಮತ್ತು ಬುಡಕಟ್ಟಿಗೆ ಸೇರಿದಂತಹ ಅನೇಕ ಪುರುಷರು ಮತ್ತು ಮಹಿಳೆಯರು ಸೇರಿ ಮಾಡಿರುವಂತಹ ಒಂದು ಸಾಮೂಹಿಕ ಪ್ರಯತ್ನದ ಫಲವಾಗಿರುತ್ತದೆ. ಈ ಸಂವಿಧಾನ ರಚನೆ ಹಿಂದೆ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಬದಲಾವಣೆಗಳಂತಹ ಅನೇಕ ಕ್ರಿಯೆಗಳು ನಡೆದಿರುತ್ತವೆ,' ಎಂಬ ಸಾಲುಗಳು ಇರುವುದು ಸುತ್ತೋಲೆಯಿಂದ ತಿಳಿದು ಬಂದಿದೆ..." ಎಂಬ ಸುದ್ದಿ ವೈರಲ್ ಆಗುತಿದ್ದಂತೆ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಜಾಗೃತರಾಗಿ ಸದರಿ ಸುತ್ತೋಲೆಯನ್ನು ವಾಪಸ್ಸು ಪಡೆದಿರುವುದಾಗಿ ತಿಳಿಸಿದರು. "ಸಂವಿಧಾನದ ಬಗ್ಗೆ ಅರಿವು ಮೂಡಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಉದ್ದೇಶಪೂರ್ವಕವಾಗಿ ನಗಣ್ಯಗೊಳಿಸುತ್ತಿರುವುದು ಯಾಕೆ..?" ಅಂದಾಗ "ಅದು ಒಂದು ಖಾಸಗಿ ಸಂಸ್ಥೆಯ ಬರಹ, ಅದನ್ನು ನಮ್ಮ ಅಧಿಕಾರಿಗಳು ಸರಿಯಾಗಿ ನೋಡದೆ ಅಪ್ ಲೋಡ್ ಮಾಡಿಬಿಟ್ಟಿದ್ದಾರೆ.." ಎಂದು ನುಣುಚಿಕೊಂಡರು. ವಿಷಯ ಗಂಭೀರವಾದಾಗ ಒಂದಷ್ಟು ಜನ ಕೆಳ ಧರ್ಜೆಯ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಿ ಅಮಾನತ್ತು ಕೂಡ ಮಾಡಿದರು. ಆದರೆ ಉದ್ದೇಶಪೂರ್ವಕವಾಗಿಯೇ ಕಿಡಿಗೇಡಿತನ ಮಾಡಿದ ಖಾಸಗಿ ಸಂಸ್ಥೆಯ ಮೇಲೆ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ!?

ಎರಡನೆಯದು ಇದೇ 24ರಂದು ಜಯನಗರದ ಆರ್.ವಿ. ಕಾಲೇಜಿನಲ್ಲಿ ನಡೆಸಹೊರಟಿರುವ "ಇಂಡಿಯನ್ ಕಾನ್ಸ್ಟಿಟೂಷನ್ ಡೇ" ಎಂಬ ಹೆಸರಲ್ಲಿ ಪ್ರಕಟವಾಗಿರುವ ಕೇಸರಿ ಬಣ್ಣದ ಆಹ್ವಾನ ಪತ್ರಿಕೆ ?'One nation one constitution'  ಎಂದು ಹಣೆಬರಹವಿರುವ ಈ ಪತ್ರಿಕೆಯಲ್ಲಿ ಡಾ.ಅಂಬೇಡ್ಕರ್ ಇರುವ ಜಾಗದಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿಯ ಚಿತ್ರವನ್ನು ಕಂಡೂ ಕಾಣದ ಹಾಗೆ ಹಾಕಿದ್ದಾರೆ! ಈ ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಯ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಎಲ್.ಸಂತೋಷ್ ಹಾಗೂ ಇನ್ಪೋಸಿಸ್ಸಿನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಭಾಗವಹಿಸುತಿದ್ದಾರೆ.

ಇದ್ದಕ್ಕಿದ್ದಂತೆ ಉದ್ಬವವಾಗಿರುವ "ನವ ಬೆಂಗಳೂರ್ ಪೌಂಡೇಶನ್" ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಮುಖ್ಯಸ್ತ ಎನಿಸಿಕೊಂಡ ಅನಿಲ್ ಶೆಟ್ಟಿ ಎನ್ನುವ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಈ ಕಾರ್ಯಕ್ರಮ ಆಯೋಜಿಸುತಿದ್ದಾರೆ ಎಂಬ ಮಾತುಗಳಿವೆ. ಈ ಕಾರ್ಯಕ್ರಮದ ವಿರುದ್ದ ಧ್ವನಿಗಳೇಳುತಿದ್ದಂತೆ ಈ ಅನಿಲ್ ಶೆಟ್ಟಿ "ಎಷ್ಟು ಹಣ ಸುರಿದಿದ್ದರೂ ನನಗೆ ಇಷ್ಟು ಪಬ್ಲಿಸಿಟಿ ಬರುತ್ತಿರಲಿಲ್ಲ..." ಎಂದು ಖುಷಿಗೊಂಡು "ಈ ದಲಿತರು ಏನು ಮಾಡ್ತಾರೆ ರೀ.. ಒಂದಷ್ಟು ಜನ ಬಂದು ಪ್ರತಿಭಟಿಸಿ ಹೋಗ್ತಾರೆ.. ನನಗೆ ಮತ್ತೊಮ್ಮೆ ಪಬ್ಲಿಸಿಟಿ ಸಿಗುತ್ತೆ.. ಯಾರು ಬಂದರೂ ಈ ಕಾರ್ಯಕ್ರಮ ರದ್ದಾಗಲು ಸಾಧ್ಯವಿಲ್ಲ" ಎಂದು ಉದ್ದಟತನದಿಂದ ಮಾತಾಡುತಿದ್ದಾರೆ ಎಂದು ಆರೆಸೆಸ್ ವಲಯದಲ್ಲಿ ಮಾತುಕತೆಗಳಿವೆ.

ಮೂರನೆಯದು, ಯಾರೂ ಗಂಭೀರವಾಗಿ ಪರಿಗಣಿಸದ "ಕಾಮಿಡಿ ಪೀಸ್" ಎಂದೇ ಜನ ನಗಾಡುವ ಸಂಘಪರಿವಾರದ ವ್ಯಕ್ತಿಯೊಬ್ಬ "ಮೀಸಲಾತಿ ರದ್ದಾಗುತ್ತೆ.. ಈ ಬಗ್ಗೆ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ" ಎನ್ನುವ ವಿಡಿಯೋ ವೈರಲ್ ಆಗಿ ಯಾರೋ ಸಂಘಪರಿವಾರದವರೇ ಈ ಮರ್ಕಟದ ಮೂಲಕ ಇದನ್ನು ಹರಿಬಿಟ್ಟಿದ್ದಾರೆ ಎಂಬ‌ ಗಂಭೀರ ಆರೋಪವಿದೆ.

ಮೇಲ್ಕಂಡ ಮೂರೂ ವಿಷಯಗಳು ಸಂವಿಧಾನ, ಡಾ.ಅಂಬೇಡ್ಕರ್ ಮತ್ತು ಮೀಸಲಾತಿಗೆ ಸಂಭಂದಪಟ್ಟಿರುವುದಾಗಿರುವುದರಿಂದ ತೀವ್ರ ಚರ್ಚೆಗೆ, ವಿವಾದಕ್ಕೆ, ಪ್ರತಿಭಟನೆಗೆ ಕಾರಣವಾಗಿದೆ. ಅನೇಕ ದಲಿತ ಸಂಘಟನೆಗಳು ಇದರ ವಿರುದ್ದ ಹೋರಾಟ ರೂಪಿಸುತ್ತಿವೆ. ದುರಂತವೆಂದರೆ ನಮ್ಮ ಜಾತ್ಯಾತೀತ, ಮೀಸಲಾತಿ ಪರ, ಸಂವಿಧಾನ ಪರ, ಡಾ.ಅಂಬೇಡ್ಕರ್ ರವರನ್ನು 'ಪ್ರೀತಿಸುವ'  ರಾಜಕೀಯ ಪಕ್ಷಗಳೂ ಕೂಡ ಬಾಯಿತೆರೆಯುತ್ತಿಲ್ಲ!?

ಸಂವಿಧಾನ ಮತ್ತು ಮೀಸಲಾತಿಯ ಹಿನ್ನೆಲೆಯಲ್ಲಿ ಡಾ.ಅಂಬೇಡ್ಕರ್ ಅವರನ್ನು ಗೌಣಗೊಳಿಸುವತ್ತ ನಡೆದಿರುವ ಈ ಷಡ್ಯಂತ್ರಕ್ಕೆ ಏನು ಹೇಳುವುದು? ಇದು ಕಾಲಾಂತರದಿಂದಲೂ ನಡೆಯುತ್ತಲೇ ಇದೆ, ಇಂತಹ ವಿವಾದಗಳು ಬಂದಾಗ ದಿನಪತ್ರಿಕೆಗಳಲ್ಲಿ ಪುಟಗಟ್ಟಲೆ ಸಾಕ್ಷಾಧಾರಗಳೊಂದಿಗೆ ಬರೆದು ನಮ್ಮಂತವರು ಉತ್ತರಿಸಿದ್ದೇವೆ. ಡಾ.ಅಂಬೇಡ್ಕರ್ ರವರೊಬ್ಬರೇ ಸಂವಿಧಾನ ರಚಿಸಿದರೆಂಬುದಕ್ಕೆ ಅನೇಕ ಸಲ ಅನೇಕ ಧಾಖಲೆಗಳನ್ನು ಕೊಟ್ಟು ದೃಶ್ಯ ಮಾಧ್ಯಮದಲ್ಲೂ, ಸಾಮಾಜಿಕ ಜಾಲತಾಣಗಳಲ್ಲೂ ಹೇಳಿದ್ದಾಗಿದೆ. ಆದರೂ ಇವರು ಅರ್ಥಮಾಡಿಕೊಳ್ಳಲು ಕನಿಷ್ಟ ಪ್ರಯತ್ನಿಸುತ್ತಿಲ್ಲ! ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಸಮಯ ವ್ಯರ್ಥಮಾಡಬೇಕಿಲ್ಲ. ಇದು ಉದ್ದೇಶಪೂರಿತ, ಪಿತೂರಿಯ ಅಭಿಯಾನ. ಡಾ.ಅಂಬೇಡ್ಕರ್ ರವರ ವಿರುದ್ದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸದಾ ವಿಷಕಾರುತ್ತಾ ಹೆಡೆಯಾಡುತ್ತಿರುವ ಜಾತಿಯೇ ಇದಕ್ಕೆ ಮುಖ್ಯ ಕಾರಣ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.

ಸಂವಿಧಾನ ರಚನೆಯಲ್ಲಿ ಡಾ.ಅಂಬೇಡ್ಕರ್‌ ಅವರ ಪಾತ್ರವನ್ನು ಅದೆಷ್ಟು ಸಲ ಹೇಳಿದರು ಅದನ್ನು ಕೇಳಿಸಿಕೊಳ್ಳುವ, ಸತ್ಯವನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳುವ ಮನಸ್ಸು ಇಲ್ಲದವರಿಗೆ ಕಡೆಯದಾಗಿ ಇಲ್ಲಿ ಇನ್ನೂ ಒಂದು ದಾಖಲೆಯನ್ನು ನೀಡುತಿದ್ದೇನೆ.. 

ಕರಡು ಸಂವಿಧಾನದ ಚರ್ಚೆ, ಗೊತ್ತುವಳಿ ಮತ್ತು ಕರಡು ಸಂವಿಧಾನ ಕುರಿತಂತೆ ರಾಷ್ಟ್ರಾಧ್ಯಕ್ಷರಾದ ಡಾ.ರಾಜೇಂದ್ರಪ್ರಸಾದ್ ರವರು ಸಂವಿಧಾನ ಕತೃ ಡಾ.ಅಂಬೇಡ್ಕರ್ ಅವರನ್ನು ಚರ್ಚೆಯಲ್ಲಿ ತೊಡಗಲು ಕೇಳಿಕೊಂಡಾಗ ಡಾ.ಅಂಬೇಡ್ಕರ್ ಅವರು ಸುದೀರ್ಘವಾಗಿ ಸಂವಿಧಾನ ರಚನೆಯ ಸೂಕ್ಷ್ಮಗಳನ್ನು ವಿವರಿಸುತ್ತಾ.. "ಸಂವಿಧಾನದ ಪ್ರತಿಯನ್ನು ನ್ಯಾಯಶಾಸ್ತ್ರದ ವಿದ್ಯಾರ್ಥಿಯ ಕೈಯಲ್ಲಿಟ್ಟರೆ ಅವನು ಎರಡು ಪ್ರಶ್ನೆಗಳನ್ನು ಕೇಳುತ್ತಾನೆ..  ಮೊದಲನೆಯದಾಗಿ 'ಯಾವ ಬಗೆಯ ಸರ್ಕಾರವನ್ನು ಸಂವಿಧಾನದಲ್ಲಿ ರೂಪಿಸಲಾಗಿದೆ..?' ಎಂಬುದರೊಂದಿಗೆ 'ಸಂವಿಧಾನದ ಸ್ವರೂಪವೇನು..?' ಎಂಬುದು ಇನ್ನೊಂದು ಪ್ರಶ್ನೆ. ಯಾಕೆಂದರೆ ಈ ಎರಡೂ ಮಹತ್ವದ  ಅಂಶಗಳನ್ನು ಸಂವಿಧಾನವೊಂದು ಪರಿಶೀಲಿಸಲೇಬೇಕು ಮತ್ತು  ಅದಕ್ಕೆ ಸಮರ್ಪಕ ಉತ್ತರ ನೀಡಬೇಕು. 

ಈ ಎರಡು ಪ್ರಶ್ನೆಗಳನ್ನಿಟ್ಟುಕೊಂಡು ಡಾ‌.ಅಂಬೇಡ್ಕರ್ ರವರು ವಿಸ್ತೃತವಾಗಿ ವಿಶ್ಲೇಷಿಸುವುದನ್ನು ನೋಡಿದರೆ ಯಾರೂ ಈ ಮೇರು ಪರ್ವತದ ಬಗ್ಗೆ ಪ್ರಶ್ನಿಸಲಾರರು!(ಡಾ.ಅಂಬೇಡ್ಕರ್: ಬರಹಗಳು ಮತ್ತು ಭಾಷಣಗಳು, ಸಂಪುಟ 12, ಪುಟ 44 ರಿಂದ 64) 

ಅದಕ್ಕೂ ಮೀರಿ ಪಂಚೇಂದ್ರಿಯಗಳು ತೀವ್ರವಾಗಿ ಜಖಂಗೊಂಡಿದ್ದರೆ, ಅಂತವರಿಗೆ ಆ ಪರಮಾತ್ಮನು ಪರಲೋಕದಲ್ಲಾದರೂ ಸದ್ಗತಿ ಕೊಡಲೆಂದು ಪ್ರಾರ್ಥಿಸಿ ಸುಮ್ಮನಾಗಬೇಕಷ್ಟೆ...

ತೆಲುಗಿನ ವಿಪ್ಲವ ಕವಿ ಸುಬ್ಬರಾವು ಪಾಣಿಗ್ರಾಹಿ ಹೇಳುವಂತೆ " ಅಂಗೈಯನ್ನು ಅಡ್ಡವಿಟ್ಟು ಸೂರ್ಯಕಾಂತಿ ತಡೆಯಲಾರೆ" ಎನ್ನುವುದೇ ಇವರಿಗೆ ಸರಿ ಉತ್ತರ...