ನೋಟು ಅಮಾನ್ಯೀಕರಣ: ಋಣಾತ್ಮಕ ಪರಿಣಾಮಗಳ ವಿಲಯ ನರ್ತನ

 ನೋಟು ಅಮಾನ್ಯೀಕರಣಕ್ಕೀಗ 3 ವರ್ಷ. ಈ ಅವಧಿಯಲ್ಲಿ ಕರ್ನಾಟಕದ ಸಣ್ಣ, ಮಧ್ಯಮ ಕೈಗಾರಿಕೆಗಳ ಉತ್ಪಾದನೆ, ಆದಾಯದಲ್ಲಿನ ಇಳಿಕೆ , ಉದ್ಯೋಗ ಕುಸಿತ ಸೇರಿದಂತೆ ಆರ್ಥಿಕ ಚಟುವಟಿಕೆಗಳ ಮೇಲೆ ದೀರ್ಘಾವಧಿ ಪರಿಣಾಮ ಬೀರಿವೆ ಎಂದು ಅಧ್ಯಯನ ವರದಿ ಹೊರಗೆಡವಿದೆ.

ನೋಟು ಅಮಾನ್ಯೀಕರಣ: ಋಣಾತ್ಮಕ ಪರಿಣಾಮಗಳ ವಿಲಯ ನರ್ತನ

'ಭಯೋತ್ಪಾದಕ ದಾಳಿ' ಎಂಬ ಕಟು ಟೀಕೆಗೆ ಒಳಗಾಗಿರುವ ನೋಟು ಅಮಾನ್ಯೀಕರಣ ಅವಧಿಯಲ್ಲಿ ಕರ್ನಾಟಕದ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳು ಬಹುತೇಕ ನೆಲಕಚ್ಚಿ ಹೋಗಿವೆ. ಉತ್ಪಾದಕತೆಯಲ್ಲಿನ ಇಳಿಕೆ ಮತ್ತು ಉತ್ಪನ್ನಗಳ ಮಾರಾಟದಲ್ಲಿನ ಸ್ಥಗಿತ ಪರಿಸ್ಥಿತಿ, ಕಾರ್ಮಿಕರ ವೇತನಕ್ಕೆ ಭಾರೀ ಪೆಟ್ಟು ಕೊಡುವ ಮೂಲಕ ದೈನಂದಿನ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಬಾಹ್ಯ ಅಧ್ಯಯನ ವರದಿ ಹೊರಗೆಡವಿದೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಬಾಹ್ಯ ಸಂಸ್ಥೆಯ ಮೂಲಕ ನಡೆಸಿರುವ ಸಮೀಕ್ಷೆ ಆಧರಿತ ಅಧ್ಯಯನ, ನೋಟು ಅಮಾನ್ಯೀಕರಣದ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳು, ಉತ್ಪಾದನೆ, ಮಾರಾಟ, ಆದಾಯ ಮತ್ತು ಉದ್ಯೋಗಿಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಆಗಿರುವ ಋಣಾತ್ಮಕ ಬೆಳವಣಿಗೆಗಳನ್ನು ಹೊರಗೆಡವಿದೆ.

ಬೆಂಗಳೂರು ನಗರ ಜಿಲ್ಲೆ ಮತ್ತು ಕಲ್ಬುರ್ಗಿಯಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಪರವಾಗಿ ಪ್ರಾಯೋಗಿಕ ಅಧ್ಯಯನ ನಡೆಸಿರುವ ಕಲ್ಬುರ್ಗಿಯ ಹೈದರಾಬಾದ್‌ ಕರ್ನಾಟಕ ಸೆಂಟರ್‌ ಫಾರ್‌  ಅಡ್ವಾನ್ಸ್‌ಡ್‌ ಲರ್ನಿಂಗ್‌ ಸಂಸ್ಥೆ, ಯೋಜನಾ ಇಲಾಖೆಗೆ ಕೆಲ ದಿನಗಳ ಹಿಂದೆಯಷ್ಟೇ ವರದಿ ಸಲ್ಲಿಸಿದೆ. ಈ ವರದಿಯ ಪ್ರತಿ 'ಡೆಕ್ಕನ್‌'ನ್ಯೂಸ್‌ಗೆ ಲಭ್ಯವಾಗಿದೆ.

ನೋಟು ಅಮಾನ್ಯೀಕರಣಗೊಂಡ ಅವಧಿಯ ಒಂದೇ ತಿಂಗಳಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಘಟಕವೊಂದು 2016ರ ಅಕ್ಟೋಬರ್‌ನಲ್ಲಿ 484.6 ಲಕ್ಷ ರು ಆದಾಯ ಗಳಿಸಿದ್ದರೆ, 2016ರ ನವೆಂಬರ್‌ನಲ್ಲಿ 379.67 ಲಕ್ಷ ರೂ.ಗೆ ಇಳಿಕೆಯಾಗಿದೆ. ಕಲ್ಬುರ್ಗಿಯೊಂದರಲ್ಲೇ ಶೇ.65ರಷ್ಟು ಉದ್ದಿಮೆದಾರರ ನಗದು ಸಾಲ ನಿರ್ವಹಣೆ ಪ್ರಕ್ರಿಯೆಗಳು ಅಸಮರ್ಪಕತೆಗಳಿಂದ ಕೂಡಿತ್ತು ಮತ್ತು ಶೇ.72ರಷ್ಟು ಉದ್ದಿಮೆಗಳು ಉತ್ಪಾದನೆಯಲ್ಲಿ ಇಳಿಕೆ ಕಂಡಿತ್ತು ಎಂದು ಬಹಿರಂಗಗೊಳಿಸಿರುವ ಅಧ್ಯಯನ ವರದಿ, ನೋಟು ಅಮಾನ್ಯೀಕರಣಗೊಂಡ ಅವಧಿಯಲ್ಲಿ ಉದ್ದಿಮೆಗಳ ಮೇಲಾಗಿರುವ ಪರಿಣಾಮಗಳ ಕುರಿತು ವಿಸ್ತೃತ ಅಧ್ಯಯನ ನಡೆಸಬೇಕು ಎಂದು ಶಿಫಾರಸ್ಸು ಮಾಡಿದೆ.

ಅಧ್ಯಯನ ವರದಿ ಪ್ರಕಾರ ಬೆಂಗಳೂರು ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಶೇ.22ರಷ್ಟು ಉದ್ದಿಮೆದಾರರು ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುವುದರಲ್ಲಿ ತೀವ್ರವಾದ ಅಡಚಣೆಗಳನ್ನೆದುರಿಸಿದ್ದಾರೆ. ಶೇ.22ರಷ್ಟು ಸಂಖ್ಯೆ ಏನೂ ಸಣ್ಣ ಪ್ರಮಾಣವಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ. ನೋಟು ಅಮಾನ್ಯೀಕರಣದಿಂದ ತೀವ್ರವಾಗಿ ಬಾಧಿತರಾಗಿರುವ ಕಡಿಮೆ ಕುಶಲತೆ ಮತ್ತು ದಿನಗೂಲಿ ನೌಕರರ ರಕ್ಷಿಸಲು ತಕ್ಷಣವೇ ನೀತಿ ರೂಪಿಸಬೇಕು ಎಂದು ಅಧ್ಯಯನ ತಂಡ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಬೆಂಗಳೂರು ನಗರ ಜಿಲ್ಲೆ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿರುವ ಆಹಾರ ಉತ್ಪಾದನಾ ಘಟಕ, ಪ್ಲಾಸ್ಟಿಕ್ಸ್‌, ರಬ್ಬರ್‌, ಕಲ್ಲು ಪುಡಿ ಮಾಡುವ ಘಟಕ ಮತ್ತು ಕಲ್ಲು ಗಣಿಗಾರಿಕೆ, ಉಡುಪು, ಕಾಗದ, ಮುದ್ರಣ, ಕೆಮಿಕಲ್ಸ್‌, ಲೋಹ ಆಧರಿತ, ಯಾಂತ್ರಿಕ ಉಪಕರಣ, ಎಲೆಕ್ಟ್ರಿಕ್‌ ಉಪಕರಣ, ಪೀಠೋಪಕರಣ ಸಣ್ಣ ಕೈಗಾರಿಕೆಗಳ ಘಟಕಗಳಿಗೆ ಭೇಟಿ ಕೊಟ್ಟಿದ್ದ ಅಧ್ಯಯನ ತಂಡ, ಅಲ್ಲಿನ ಅಸ್ಥಿರತೆ, ಉತ್ಪಾದಕತೆ, ಮಾರಾಟ, ಆದಾಯ, ನಿರುದ್ಯೋಗದ ಕುರಿತು ಉದ್ಯಮಿಗಳು ಮತ್ತು ಉದ್ಯೋಗಿಗಳಿಂದಲೇ ಮಾಹಿತಿ ಕಲೆ ಹಾಕಿ ಅಧ್ಯಯನ ನಡೆಸಿದೆ.

ನಗದು ವ್ಯವಸ್ಥೆಯನ್ನು ದುರ್ಬಲಗೊಳಿಸಿ ಇ-ಪಾವತಿಗಳನ್ನು ಉತ್ತೇಜಿಸಲಿದೆ ಎಂದು ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೇಳಿತ್ತಾದರೂ, ಇ-ಪಾವತಿ ವಿಧಾನ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೈಬರ್‌ ಅಪರಾಧ ಪ್ರಕರಣಗಳನ್ನು ಹೆಚ್ಚಿಸಿದೆ ಎಂದು ವರದಿ ಬಹಿರಂಗಪಡಿಸಿದೆ.

ಹಾಗೆಯೇ ಕರ್ನಾಟಕದಲ್ಲಿರುವ ಒಟ್ಟು 3.82 ಲಕ್ಷ ಸಣ್ಣ ಕೈಗಾರಿಕೆ ಘಟಕಗಳು 22.77 ಲಕ್ಷ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಿತ್ತಾದರೂ, ನೋಟು ಅಮಾನ್ಯೀಕರಣಗೊಂಡ ನಂತರ ಒಟ್ಟು ಘಟಕಗಳ ಪೈಕಿ ಶೇ.14ರಷ್ಟು ಘಟಕಗಳು ಅರೆ ಕಾಲಿಕ ಅಥವಾ ತಾತ್ಕಾಲಿಕ ಉದ್ಯೋಗಿಗಳನ್ನು ತೊಡಗಿಸಿಕೊಳ್ಳಲಿಲ್ಲ. ಈ ಸಂಖ್ಯೆ ಕಲ್ಬುರ್ಗಿಯಲ್ಲೇ ಹೆಚ್ಚಿದೆ. ಇದು ಗ್ರಾಮೀಣ ಭಾಗದಲ್ಲಿದ್ದ ಕಡಿಮೆ ಕುಶಲತೆ ಹೊಂದಿದ ಕಾರ್ಮಿಕರ ಮೇಲೆ  ದೊಡ್ಡ ಆಘಾತ ಎರಗಿದೆ ಎಂಬುದನ್ನು ದೃಢಪಡಿಸಿದೆ. ಅದೇ ರೀತಿ ಬೃಹತ್‌ ಉದ್ದಿಮೆದಾರರು ಕೂಡ ನೋಟು ಅಮಾನ್ಯೀಕರಣ ಒಳ್ಳೆಯ ನಿರ್ಧಾರವಲ್ಲ, ಉತ್ಪಾದನೆ ಮತ್ತು ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ ಎಂದು ಅಧ್ಯಯನ ತಂಡಕ್ಕೆ ವಿವರಿಸಿದ್ದಾರೆ.

'ನೋಟು ಅಮಾನ್ಯೀಕರಣ ಘೋಷಣೆ ಆದ ದಿನದಿಂದಲೇ ಕಡಿಮೆ ಕುಶಲತೆ ಹೊಂದಿರುವ ಕಾರ್ಮಿಕರು ನಿರುದ್ಯೋಗ ಅನುಭವಿಸಬೇಕಾಯಿತು. ದೈನಂದಿನ ಬದುಕಿನ ಮೇಲೆ ಇದರ ಅಡ್ಡ ಪರಿಣಾಮಗಳನ್ನೂ ಎದುರಿಸಬೇಕಾಯಿತು. ಇಂತಹ ವ್ಯತಿರಿಕ್ತ ಪರಿಣಾಮಗಳು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಕಾಣುವಂತಾಯಿತು. ವಿಶೇಷವಾಗಿ ಕಲ್ಬುರ್ಗಿಯಲ್ಲಿ ತಾತ್ಕಾಲಿಕ ಉದ್ಯೋಗದ ಪ್ರಮಾಣವೂ ಇಳಿಕೆಯಾಯಿತಲ್ಲದೆ, ಮಾಸಿಕ ವೇತನ ಪಡೆಯುವ ಕಾರ್ಮಿಕರು ಮತ್ತು ದಿನಗೂಲಿ ನೌಕರರ ಮೇಲೂ ಭಾರೀ ಪ್ರಮಾಣದಲ್ಲಿ ವ್ಯತಿರಿಕ್ತ ಪರಿಣಾಮಗಳಾಗಿವೆ,' ಎಂದು ಸಂಸ್ಥೆಯ ಅಧ್ಯಯನ ವರದಿ ವಿವರಿಸಿದೆ.

ಕಪ್ಪು ಹಣ ನಿಯಂತ್ರಣ, ಭಯೋತ್ಪಾದಕ ಚಟುವಟಿಕೆಗಳಿಗೆ ಪೂರೈಕೆಯಾಗುತ್ತಿರುವ ಹಣಕ್ಕೆ ಕಡಿವಾಣ ಹಾಕುವುದು ಸೇರಿದಂತೆ ಇನ್ನಿತರೆ ಉದ್ದೇಶಗಳನ್ನು ಸಾಕಾರಗೊಳಿಸಲು ನೋಟು ಅಮಾನ್ಯೀಕರಣ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿಕೆಯನ್ನು ತಳ್ಳಿ ಹಾಕಿರುವ ದೊಡ್ಡ ಸಂಖ್ಯೆಯಲ್ಲಿರುವ ಕರ್ನಾಟಕದ ಸಣ್ಣ ಕೈಗಾರಿಕೆಗಳ ಉದ್ಯಮಿಗಳು, ನೋಟು ಅಮಾನ್ಯೀಕರಣದಿಂದ ಉತ್ಪಾದಕ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿದೆಯಲ್ಲದೆ ಹಣ ಪಾವತಿ ಸೇರಿದಂತೆ ನಗದು ವ್ಯವಸ್ಥೆ ಮೇಲೆ ಹೊಸ ಸಮಸ್ಯೆಗಳಿಗೆ ಹೇಗೆಲ್ಲಾ ಕಾರಣವಾಯಿತು ಎಂದು ಅಧ್ಯಯನ ತಂಡಕ್ಕೆ ವಿವರಿಸಿದ್ದಾರೆ.

ಅಧ್ಯಯನ ವೇಳೆಯಲ್ಲಿ ಯಾವೊಬ್ಬ ಉದ್ಯಮಿ ಮತ್ತು ಉದ್ಯೋಗಿಯೂ ನೋಟು ಅಮಾನ್ಯೀಕರಣ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಬದಲಿಗೆ ಉತ್ಪಾದಕ ಚಟುವಟಿಕೆ ಸೇರಿದಂತೆ ಇದರ ಸುತ್ತಲೂ ಆಗಿರುವ ನಕಾರಾತ್ಮಕ ಬೆಳವಣಿಗೆಗಳನ್ನೇ ಎತ್ತಿ ತೋರಿಸಿದ್ದಾರೆ. ವ್ಯಾಪಾರ ವಹಿವಾಟು ಪ್ರಕ್ರಿಯೆಯಲ್ಲಿ ವೇತನದಾರರಿಗೆ ಪ್ರತಿ ತಿಂಗಳು ನೀಡುವ ವೇತನ ಪಾವತಿಯಲ್ಲಿ ತೊಂದರೆಗಳಾಗಿವೆ. ಅಲ್ಲದೆ, ಕಚ್ಛಾ ಪದಾರ್ಥಗಳನ್ನು ಖರೀದಿಸುವಲ್ಲಿಯೂ ಸಮಸ್ಯೆಗಳನ್ನು ಎದುರಿಸಿರುವ ಉದ್ದಿಮೆದಾರರು, ನೇರ ನಗದು ಮೂಲಕ ಸಾಲ ಪಡೆಯುವುದರಲ್ಲಿಯೂ ಅಡಚಣೆಗಳಾಗಿವೆ ಎಂದು ವರದಿ ಹೇಳಿದೆ.

ಉದ್ಯಮಗಳು ಗಳಿಸಿರುವ ಸರಾಸರಿ ಆದಾಯಕ್ಕೆ ಹೋಲಿಸಿದಲ್ಲಿ ನೋಟು ಅಮಾನ್ಯೀಕರಣಗೊಂಡ ನಂತರ  ಇಳಿಕೆಯಾಗಿದೆ. ಕಲ್ಬುರ್ಗಿಯ ಉತ್ಪಾದನಾ ಘಟಕಗಳು 2016ರ ಅಕ್ಟೋಬರ್‌ನಲ್ಲಿ 484.6 ಲಕ್ಷ ರು.ಗಳಿಸಿದ್ದರೆ, ನೋಟು ಅಮಾನ್ಯೀಕರಣಗೊಂಡ ನಂತರ ಒಂದೇ ತಿಂಗಳಲ್ಲಿ ಅಂದರೆ 2016ರ ನವೆಂಬರ್‌ ಅಂತ್ಯಕ್ಕೆ ಸರಾಸರಿ ಆದಾಯ 379.67 ಲಕ್ಷ ರು.ಗಳಿಗಿಳಿದಿದೆ.

ಬೆಂಗಳೂರು ನಗರದಲ್ಲಿರುವ ಉತ್ಪಾದಕ ಸಂಸ್ಥೆ, ಉದ್ದಿಮೆಗಳ ಉತ್ಪಾದನೆಯಲ್ಲಿ  ಶೇ.18.72 ರಷ್ಟು, ಕಲ್ಬುರ್ಗಿಯಲ್ಲಿ ಶೇ.5.96ರಷ್ಟು ಸೇರಿ ಒಟ್ಟು ಶೇ.24.68ರಷ್ಟು ಪ್ರಮಾಣದಲ್ಲಿ  ಇಳಿಕೆಯಾಗಿದೆ. ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಲ್ಬುರ್ಗಿಯಲ್ಲಿ ಶೇ.70.00 ರಷ್ಟು ಉತ್ಪನ್ನಗಳು ಮಾರಾಟವಾಗಿಲ್ಲ ಎಂಬ ಅಂಶವನ್ನು  ವರದಿ ಹೊರಗೆಡವಿದೆ.

ಕಲ್ಲುಪುಡಿ ಮಾಡುವ ಮತ್ತು ಪಾಲಿಷಿಂಗ್‌ಮಾಡುವ ಘಟಕಗಳ ಮೇಲೂ ದೀರ್ಘಾವಧಿ ಪರಿಣಾಮ ಬೀರಿವೆ. 2016ರ ಅಕ್ಟೋಬರ್‌ನಲ್ಲಿ 55 ಸಾವಿರ ಮೀಟರ್‌ನಷ್ಟು ಉತ್ಪಾದನೆ ಇದ್ದರೆ, 2016ರ ನವೆಂಬರ್‌, ಡಿಸೆಂಬರ್‌ನಲ್ಲಿ ಇದರ ಪ್ರಮಾಣ 46.75 ಮೀಟರ್‌ಗೆ ಕುಸಿದಿದೆ. ಇನ್ನು 2016ರ ಅಕ್ಟೋಬರ್‌ನಲ್ಲಿ ಘಟಕವೊಂದರ ಆದಾಯ 76.27 ಸಾವಿರ ರು.ಇದ್ದರೆ, 2016ರ ನವೆಂಬರ್‌ನಲ್ಲಿ 65.49 ಸಾವಿರ ರು., ಡಿಸೆಂಬರ್‌ನಲ್ಲಿ 64.28 ಸಾವಿರ ರು.ಗೆ ಇಳಿದಿದೆ. ನೋಟು ಅಮಾನ್ಯೀಕರಣದ ಅವಧಿಯಲ್ಲಿ ಪ್ರತಿ ಘಟಕ ಅಂದಾಜು 10ರಿಂದ 12 ಸಾವಿರ ರು.ಗಳನ್ನು  ಸರಾಸರಿ ಕಳೆದುಕೊಂಡಿದೆ ಎಂದು ವರದಿ ವಿವರಿಸಿದೆ.

ಬೇಳೆ ಉತ್ಪಾದನೆ ಸೇರಿದಂತೆ ಮತ್ತಿತರೆ ಆಹಾರ ಉತ್ಪಾದನೆ ಮತ್ತು ಸಂಸ್ಕರಣೆ ಘಟಕಗಳ ಮೇಲೆ ಆದಾಯದ ಮೇಲೆ ದೂರಗಾಮಿ ಪರಿಣಾಮ ಬೀರಿರುವ ಅಮಾನ್ಯೀಕರಣ, ಒಟ್ಟು ಆದಾಯದ ಮೇಲೂ ಪೆಟ್ಟು ಕೊಟ್ಟಿದೆ. 2016ರ ಏಪ್ರಿಲ್‌ರಿಂದ ಅಕ್ಟೋಬರ್‌2016ರವರೆಗೆ ತಲಾ ಘಟಕ 3 ಟನ್‌ಗಳಷ್ಟು ಉತ್ಪಾದನೆ ಮಾಡುತ್ತಿದ್ದರೆ, ನೋಟು ಅಮಾನ್ಯೀಕರಣಗೊಂಡ ನಂತರದ ವರ್ಷಗಳಲ್ಲಿ 2.5 ಟನ್‌ಗೆ ಇಳಿದಿದೆ.

ಸಿದ್ಧ ಉಡುಪು ತಯಾರಿಸುವ ಘಟಕಗಳನ್ನು ನೋಟು ಅಮಾನ್ಯೀಕರಣ ಮಕಾಡೆ ಮಲಗಿಸಿದೆ.  2016ರ ಅಕ್ಟೋಬರ್‌ನಲ್ಲಿ 19.7 ಸಾವಿರ ಘಟಕಗಳಿದ್ದರೆ, ನೋಟು ಅಮಾನ್ಯೀಕರಣಗೊಂಡ ನಂತರ 16.2 ಸಾವಿರ ಘಟಕಗಳಿಗೆ ಇಳಿಸಿದೆ. ಕಲ್ಬುರ್ಗಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಇಳಿಕೆಯಾಗಿದೆ. ಅದೇ ರೀತಿ 2016ರ ಅಕ್ಟೋಬರ್‌ನಲ್ಲಿ 21.7 ಸಾವಿರ ಸಂಖ್ಯೆಯಲ್ಲಿ ಅಪರೇಲ್ಸ್‌ ಘಟಕಗಳಿದ್ದರೆ, ನವೆಂಬರ್‌2016ರ ಹೊತ್ತಿಗೆ 17.8 ಸಾವಿರ ಸಂಖ್ಯೆಗೆ ಇಳಿದಿವೆ ಎಂದು ವರದಿ ವಿವರಿಸಿದೆ.

ಕಾಗದ ಮುದ್ರಣ ಘಟಕಗಳ ಆದಾಯದಲ್ಲಿನ ಇಳಿಕೆಗೆ ಕಾರಣವಾಗಿರುವ ನೋಟು ಅಮಾನ್ಯೀಕರಣ, 65 ಸಾವಿರ ರು.ಗಳಿಂದ 55 ಸಾವಿರ ರು.ಗಳಿಗೆ ಇಳಿಸಿದೆ. ಕೆಮಿಕಲ್‌ ಉತ್ಪನ್ನ ಮತ್ತು ಇದರ ಉಪ ಉತ್ಪನ್ನಗಳಿಂದ ಉದ್ಯಮಗಳು ಗಳಿಸುತ್ತಿದ್ದ ಆ ದಾಯದ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆಯಲ್ಲದೆ ಘಟಕವೊಂದರ ಅದಾಯ 12.26 ಲಕ್ಷ ರು.ನಿಂದ 10.52 ಲಕ್ಷಕ್ಕೆ (2016 ಅಕ್ಟೋಬರ್‌-2016 ನವೆಂಬರ್‌ಅವಧಿ) ಇಳಿಸಿದೆ.

ಪ್ಲಾಸ್ಟಿಕ್ಸ್‌ಮತ್ತು ರಬ್ಬರ್‌ಉತ್ಪನ್ನ ಘಟಕಗಳ ಮೇಲೂ ಕರಿಛಾಯೆ ಬೀರಿದೆಯಲ್ಲದೆ  ಅಕ್ಟೋಬರ್‌2016ರಲ್ಲಿದ್ದ 40,000 ಘಟಕಗಳು 34,000 ಘಟಕಗಳ ಇಳಿಕೆಗೆ ಕಾರಣವಾಗಿದೆ. ಅದೇ ರೀತಿ 19.46 ಲಕ್ಷ ರು.ನಿಂದ 17.69 ಲಕ್ಷ ರು.ಗೆ ಇಳಿದಿದೆ. ಬೆಂಗಳೂರು ನಗರದಲ್ಲಿರುವ ಪ್ಲಾಸ್ಟಿಕ್‌ಘಟಕಗಳ ಆದಾಯ 9.33 ಲಕ್ಷ ರು.ನಿಂದ 7.34 ಲಕ್ಷ ರು.ಗಿಳಿದಿದೆ. ಕಲ್ಬುರ್ಗಿಯಲ್ಲಿ 16 ಸಾವಿರ ರು.ನಿಂದ 8 ಸಾವಿರ ರು.ಗಿಳಿದಿದೆ.

ಫ್ಯಾಬ್ರಿಕೇಟ್‌ಮತ್ತು ಲೋಹ ಆಧರಿತ ಉದ್ದಿಮೆಗಳ ಆದಾಯ ನೋಟು ಅಮಾನ್ಯೀಕರಣಗೊಂಡ ಒಂದು ತಿಂಗಳ ಅವಧಿಯಲ್ಲಿ 30.13 ಲಕ್ಷ ರು.ನಿಂದ 26.43 ಲಕ್ಷ ರು.ಗೆ ಕುಸಿತ ಕಂಡಿದೆ. ಹಾಗೆಯೇ ಯಂತ್ರೋಪಕರಣ ಉತ್ಪನ್ನ ಘಟಕಗಳ ಆದಾಯ 10.14 ಕೋಟಿ ರು.ನಿಂದ 7.92 ಕೋಟಿ ರು.ಗೆ ಇಳಿದಿದೆ.