ಡೆಕ್ಕನ್ ನ್ಯೂಸ್ ವರದಿ ಪರಿಣಾಮ: ಅಂಬೇಡ್ಕರ್ ಒಬ್ಬರೇ  ಸಂವಿಧಾನ  ಬರೆದಿಲ್ಲ ಎಂಬ ಸುತ್ತೋಲೆ ಮತ್ತು ಕೈಪಿಡಿ ಹಿಂದೆ ಪಡೆದ ರಾಜ್ಯ ಸರ್ಕಾರ

ಡಾ ಬಿ ಆರ್‌ ಅಂಬೇಡ್ಕರ್‌ ಅವರೊಬ್ಬರೇ ಸಂವಿಧಾನವನ್ನು ಬರೆದಿಲ್ಲ,' ಎಂದು ಹೊರಡಿಸಿದ್ದ ಸುತ್ತೋಲೆ ಮತ್ತು ಕೈಪಿಡಿಯನ್ನು ಬಿಜೆಪಿ ಸರ್ಕಾರ ಇದೀಗ ಅಧಿಕೃತವಾಗಿ ಹಿಂಪಡೆದಿದೆ. ಇದು ಡೆಕ್ಕನ್‌ ನ್ಯೂಸ್‌ ವರದಿ ಪರಿಣಾಮ.

ಡೆಕ್ಕನ್ ನ್ಯೂಸ್ ವರದಿ ಪರಿಣಾಮ: ಅಂಬೇಡ್ಕರ್ ಒಬ್ಬರೇ  ಸಂವಿಧಾನ  ಬರೆದಿಲ್ಲ ಎಂಬ ಸುತ್ತೋಲೆ ಮತ್ತು ಕೈಪಿಡಿ ಹಿಂದೆ ಪಡೆದ ರಾಜ್ಯ ಸರ್ಕಾರ

'ಡಾ. ಬಿ.ಆರ್‌.ಅಂಬೇಡ್ಕರ್‌ ಅವರೊಬ್ಬರೇ ಸಂವಿಧಾನ ಬರೆದಿಲ್ಲ' ಎಂಬ ಪ್ರತಿಪಾದನೆಗೆ ಮುಂದಾಗಿದ್ದ ಬಿಜೆಪಿ ಸರ್ಕಾರ, ಇದೀಗ ಸುತ್ತೋಲೆ ಮತ್ತು ಈ ಸಂಬಂಧ ಶಾಲೆಗಳಿಗೆ ತಲುಪಿಸಿದ್ದ ಕೈಪಿಡಿಯನ್ನು ಅಧಿಕೃತವಾಗಿ ಹಿಂದಕ್ಕೆ ಪಡೆದಿದೆ.

ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ಅಳವಡಿಸಿದ್ದಲ್ಲದೆ ಶಾಲೆಗಳಿಗೆ ಕಳಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ಡೆಕ್ಕನ್‌ ನ್ಯೂಸ್‌ ಮೊದಲ ಬಾರಿಗೆ ವರದಿ ಪ್ರಕಟಿಸಿದ ನಂತರ ಹಲವು ದಲಿತ ಸಂಘಟನೆಗಳು ಇದರ ಬಗ್ಗೆ ದನಿ ಎತ್ತಿದ್ದವು. ಕೈಪಿಡಿಯಲ್ಲಿನ ಅಂಶಗಳ ಕುರಿತು ಸಾರ್ವಜನಿಕ ವಲಯದಲ್ಲಿ ಎದ್ದಿದ್ದ ತೀವ್ರ ವಿರೋಧಕ್ಕೆ ಮಣಿದಿರುವ ಸಚಿವ ಸುರೇಶ್‌ ಕುಮಾರ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಇದೀಗ ಹಿಂದೆ ಹೊರಡಿಸಿದ್ದ ಸುತ್ತೋಲೆ ಮತ್ತು ಕೈಪಿಡಿಯನ್ನು ಹಿಂದಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳಿಗೆ ವಿವರಣೆ ಕೇಳಿ ನೋಟಿಸ್‌ ಜಾರಿಗೊಳಿಸಿರುವ ಇಲಾಖೆ ಆಯುಕ್ತರು, ವಿವರಣೆ ಸಲ್ಲಿಕೆಯಾದ ನಂತರ ಆಂತರಿಕ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ತನಿಖಾ ವರದಿಯಲ್ಲಿ ಅಧಿಕಾರಿ, ಸಿಬ್ಬಂದಿ  ಲೋಪ ಸಾಬೀತಾದ ನಂತರ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತರು 'ಡೆಕ್ಕನ್‌ ನ್ಯೂಸ್‌ 'ಗೆ ಮಾಹಿತಿ ನೀಡಿದರು.

ರಾಜ್ಯದ ಎಲ್ಲಾ ಶಾಲೆಗಳಲ್ಲಿ 2019ರ ನವೆಂಬರ್‌ 26ರಂದು ಮತ್ತು 2020ರ ಏಪ್ರಿಲ್‌ ಅಂಬೇಡ್ಕರ್‌ ಜಯಂತಿಯಂದು ಸಂವಿಧಾನ ದಿನ ಮತ್ತು ಇದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2019ರ ಅಕ್ಟೋಬರ್‌ 31ರಂದು ಹೊರಡಿಸಿರುವ ಸುತ್ತೋಲೆ ಮತ್ತು ಮಾರ್ಗಸೂಚಿಯಲ್ಲಿರುವ ಕಾರ್ಯ ಚಟುವಟಿಕೆಗಳ ಪ್ರಕಾರವೇ ನಡೆಸಬೇಕು ಎಂದು ಆದೇಶಿಸಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರ ಅವಧಿಯಿಂದಲೂ ಪ್ರತಿಪಾದನೆ ಮಾಡಲಾಗುತ್ತಿತ್ತಲ್ಲದೆ, ಹಿರಿಯ ಅಧಿಕಾರಿಗಳು ಮತ್ತು ಸಚಿವರ ಅನುಮತಿ ಇಲ್ಲದೆಯೇ ಶಾಲೆಗಳಿಗೆ ಮಾರ್ಗದರ್ಶಿ ಕೈಪಿಡಿ ತಲುಪಿತ್ತು.
ಕಳೆದ 4 ವರ್ಷಗಳಲ್ಲಿ ಕಾಂಗ್ರೆಸ್‌ನ ತನ್ವೀರ್‌ ಸೇಠ್‌, ಬಿಎಸ್ಪಿಯ ಎನ್‌ ಮಹೇಶ್‌, ಎಚ್‌ ಡಿ ಕುಮಾರಸ್ವಾಮಿ ಮತ್ತು ಗುಬ್ಬಿ ಶ್ರೀನಿವಾಸ್‌ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸಚಿವರಾಗಿದ್ದರು.

ಇದೇ ವಿಚಾರ ಕಳೆದ 4 ವರ್ಷಗಳಿಂದಲೂ ಬಿತ್ತಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಎಸ್‌ ಸುರೇಶ್‌ಕುಮಾರ್‌ ಮತ್ತು ಇಲಾಖೆಯ ಅಯುಕ್ತ ಜಗದೀಶ್‌ ಕೂಡ ಒಪ್ಪಿಕೊಂಡಿದ್ದನ್ನು ಸ್ಮರಿಸಬಹುದು.

ಇದೇ ನವೆಂಬರ್‌ 26ರಂದು ಸಂವಿಧಾನ ದಿನಾಚರಣೆ ಆಚರಿಸುವ ಸಲುವಾಗಿ ರವಾನಿಸಲಾಗಿದ್ದ ಮಾರ್ಗದರ್ಶಿ ಕೈಪಿಡಿಯಲ್ಲಿದ್ದ ವಿವಾದಾತ್ಮಕ ಸಾಲುಗಳನ್ನು 'ಡೆಕ್ಕನ್‌ ನ್ಯೂಸ್‌' ಮೊದಲ ಬಾರಿಗೆ ಬಹಿರಂಗಗೊಳಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಶಾಲೆಗಳಿಗೆ ತಲುಪಿರುವ ಕೈಪಿಡಿಯನ್ನು ಸಾಮಾಜಿಕ ಸೇವಾ ಸಂಸ್ಥೆ ಸಿಎಂಸಿಎ ಸಿದ್ಧಪಡಿಸಿತ್ತು. ಸಂವಿಧಾನ ದಿನಾಚರಣೆ ಅಂಗವಾಗಿ ಸಿಎಂಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಷ್‌ ಪಾಟೀಲ್‌ 2019ರ ಅಕ್ಟೋಬರ್‌ 1ರಂದು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿ ಮತ್ತು ಇದರೊಂದಿಗೆ ಸಲ್ಲಿಸಿದ್ದ ಕಾರ್ಯಸೂಚಿಯನ್ನು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳು ಪರಾಮರ್ಶಿಸಿರಲಿಲ್ಲ.

ಸಂವಿಧಾನ ದಿನ ಅಭಿಯಾನದ ಅಂಗವಾಗಿ ಹೊರಡಿಸಿರುವ ಕಾರ್ಯಸೂಚಿ ಪಟ್ಟಿಯ 5ನೇ ಪುಟದಲ್ಲಿನ ನಮ್ಮ ಸಂವಿಧಾನವನ್ನು ಯಾರು ಬರೆದರು ಎಂಬ ಉಪ ಶೀರ್ಷಿಕೆ, ಅಂಬೇಡ್ಕರ್‌ ಅವರ ಹೆಸರನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿಸಲು ನಡೆಸಿರುವ ಯತ್ನಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು.