ಸಂವಿಧಾನ ದಿನಾಚರಣೆ : ಅಂಬೇಡ್ಕರ್ ಹೆಸರು ಮರೆಮಾಚುವ ಸಂಘ ಪರಿವಾರದ ಸಂಚು 

ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರು, ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹೊರಡಿಸಿರುವ ಸುತ್ತೋಲೆ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಹೆಸರು ಪ್ರಜ್ವಲಿಸದಂತೆ ನೇರವಾಗಿ ಸೂಚಿಸಿದೆ.

ಸಂವಿಧಾನ ದಿನಾಚರಣೆ : ಅಂಬೇಡ್ಕರ್ ಹೆಸರು ಮರೆಮಾಚುವ ಸಂಘ ಪರಿವಾರದ ಸಂಚು 

ಸಂಘ ಪರಿವಾರದ ಕಾರ್ಯಸೂಚಿ ಇದೇ ನವೆಂಬರ್ 26ರಂದು ಬಯಲಾಗಲಿದೆ. ಸಂವಿಧಾನ ಬರೆದಿದ್ದು ಯಾರು ಎಂಬ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಅಡಗಿರುವ ಕಾರ್ಯಸೂಚಿಯನ್ನೀಗ ಡೆಕ್ಕನ್ ನ್ಯೂಸ್ ಹೊರಗೆಡವುತ್ತಿದೆ.

ಭಾರತದ ಸಂವಿಧಾನವನ್ನು 2021ರೊಳಗೆ ಬದಲಾಯಿಸುವ ಸುಳಿವು ನೀಡಿರುವ ಕೇಂದ್ರದ ಬಿಜೆಪಿ ಸರ್ಕಾರ, ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಚಾಲನೆ ನೀಡಿದೆ. ಇದರ ಆರಂಭಿಕ ಭಾಗವಾಗಿ ದೇಶಾದ್ಯಂತ ನವೆಂಬರ್ 26ರಂದು ಆಚರಿಸುವ ಸಂವಿಧಾನ ದಿನವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿರುವ ಬಿಜೆಪಿ ಸರ್ಕಾರ, 'ಡಾ ಬಿ ಆರ್ ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ಬರೆದಿಲ್ಲ' ಎಂದು ದೇಶದಾದ್ಯಂತ ಪ್ರತಿಪಾದನೆ ಮಾಡಲಾರಂಭಿಸಿದೆ.

ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿರುವ ಈ ಪ್ರತಿಪಾದನೆಗೆ 'ಡೆಕ್ಕನ್'ನ್ಯೂಸ್' ಬಲವಾದ ಸಾಕ್ಷ್ಯವನ್ನು ಒದಗಿಸುತ್ತಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಂವಿಧಾನ ದಿನದ ಅಭಿಯಾನ(2019-20)ದ 2019ರ ಅಕ್ಟೋಬರ್ 28ರಂದು ಹೊರಡಿಸಿರುವ ಸುತ್ತೋಲೆಯಲ್ಲಿಯೇ ಸಂಘ ಪರಿವಾರದ ಕಾರ್ಯಸೂಚಿಯನ್ನು ಸೇರಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರು, ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹೊರಡಿಸಿರುವ ಸುತ್ತೋಲೆ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಹೆಸರು ಪ್ರಜ್ವಲಿಸದಂತೆ ನೇರವಾಗಿ ಸೂಚಿಸಿದೆ.

ಸಂವಿಧಾನ ದಿನ ಅಭಿಯಾನದ ಅಂಗವಾಗಿ ಹೊರಡಿಸಿರುವ ಕಾರ್ಯಸೂಚಿ ಪಟ್ಟಿಯ 5ನೇ ಪುಟದಲ್ಲಿನ ನಮ್ಮ ಸಂವಿಧಾನವನ್ನು ಯಾರು ಬರೆದರು ಎಂಬ ಉಪ ಶೀರ್ಷಿಕೆ, ಅಂಬೇಡ್ಕರ್ ಅವರ ಹೆಸರನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿಸಿದೆ.

'ಸಾಕಷ್ಟು ಜನರಿಗೆ ತಿಳಿದಿರುವಂತೆ ಡಾ ಅಂಬೇಡ್ಕರ್ ರವರು ಸಂವಿಧಾನದ ಪಿತಾಮಹ ಆಗಿರುತ್ತಾರೆ. ಜತೆಗೆ ಸಂವಿಧಾನವನ್ನು ಅವರೊಬ್ಬರೇ ಬರೆದಿರುವುದಿಲ್ಲ. ನಮ್ಮ ಸಂವಿಧಾನವು ನಮ್ಮ ದೇಶಾದ್ಯಂತ ಇರುವ ವಿವಿಧ ಧರ್ಮ, ಜಾತಿ ಮತ್ತು ಬುಡಕಟ್ಟಿಗೆ ಸೇರಿದಂತಹ ಅನೇಕ ಪುರುಷರು ಮತ್ತು ಮಹಿಳೆಯರು ಸೇರಿ ಮಾಡಿರುವಂತಹ ಒಂದು ಸಾಮೂಹಿಕ ಪ್ರಯತ್ನದ ಫಲವಾಗಿರುತ್ತದೆ. ಈ ಸಂವಿಧಾನ ರಚನೆ ಹಿಂದೆ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಬದಲಾವಣೆಗಳಂತಹ ಅನೇಕ ಕ್ರಿಯೆಗಳು ನಡೆದಿರುತ್ತವೆ,' ಎಂಬ ಸಾಲುಗಳು ಇರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

ಇದರ ಮುಂದುವರೆದ ಭಾಗವಾಗಿ ಶಾಲೆಗಳಲ್ಲಿ ತಯಾರಿಸುವ ಪೋಸ್ಟರ್ ಗಳಲ್ಲಿಯೂ ಇದೇ ಅಂಶ ಇರಲಿದೆ. ಸಂವಿಧಾನವನ್ನು ಅಂಬೇಡ್ಕರ್ ಅವರೊಬ್ಬರೇ ಬರೆದಿಲ್ಲ ಎಂಬ ಒಕ್ಕಣೆ ಇರುವ ಪೋಸ್ಟರ್ ಗಳನ್ನು ಶಾಲಾ ಮಕ್ಕಳು ಪ್ರದರ್ಶಿಸಬೇಕು ಎಂದು ಆಯುಕ್ತರು ಶಿಕ್ಷಕರಿಗೆ ಸೂಚಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಈ ಸುತ್ತೋಲೆಗೆ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಚಿಂತಕ ಹಾಗೂ ವಕೀಲ ಡಾ ಸಿ ಎಸ್ ದ್ವಾರಕಾನಾಥ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮೇಲ್ನೋಟಕ್ಕೆ ಇದೊಂದು ಸಂವಿಧಾನದ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವುದು ಎಂದಿದೆಯಾದರೂ ಅಂಬೇಡ್ಕರ್ ಅವರ ಹೆಸರನ್ನು ಮಕ್ಕಳ ಮನಸ್ಸಿನಿಂದಲೇ ತೆಗೆದು ಹಾಕುವ ವ್ಯವಸ್ಥಿತ ಸಂಚು ಇದರಲ್ಲಿ ಅಡಗಿದೆ. ಭಾರತದ ಸಂವಿಧಾನವನ್ನು ಯಾರು ಬರೆದರು ಎಂಬ ಬಗ್ಗೆ ಸಂಸತ್ ಅಸ್ತಿತ್ವಕ್ಕೆ ಬಂದ ದಿನಗಳಲ್ಲಿ ನಡೆದ ಅಧಿವೇಶನಗಳಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದೆ.  ಡಾ ಬಿ ಆರ್ ಅಂಬೇಡ್ಕರ್ ಅವರೇ ಸಂಪೂರ್ಣವಾಗಿ ಸಂವಿಧಾನವನ್ನು ಬರೆದಿದ್ದಾರೆ ಎಂದು ಸಂವಿಧಾನ ರಚನೆ ಸಮಿತಿ ಸದಸ್ಯರೇ ಒಪ್ಪಿಕೊಂಡಿರುವುದು ಅಧಿವೇಶನದ ನಡವಳಿಗಳಲ್ಲಿ ದಾಖಲಾಗಿದೆ. ಹೀಗಿರುವಾಗ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಈ ಸುತ್ತೋಲೆಯನ್ನು ಹೊರಡಿಸಿರುವುದು ನಿಜಕ್ಕೂ ದುರುದ್ದೇಶ ಮಾತ್ರವಲ್ಲ, ಅತಂಕಕಾರಿಯೂ ಹೌದು ' ಎಂದು ಡೆಕ್ಕನ್ ನ್ಯೂಸ್ ಗೆ ಪ್ರತಿಕ್ರಿಯಿಸಿದರು.

ಸಂವಿಧಾನದ ತಿದ್ದುಪಡಿ ಅಥವಾ ಬದಲಾಯಿಸುವ ಬಗ್ಗೆ ಕಳೆದ ಹಲವು ವರ್ಷಗಳಿಂದಲೂ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೀಗ ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳ ಮೂಲಕ ಸಂವಿಧಾನ ರಚನೆ ಮೂಲಕರ್ತೃ ಹೆಸರನ್ನೇ ಅಳಿಸಲು ಹೊರಟಿರುವುದು ಐತಿಹಾಸಿಕ ಅಪಚಾರ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. 5 ಸಂಪುಟಗಳ 7,000 ಪುಟಗಳನ್ನು ಹೊಂದಿರುವ ಸಂವಿಧಾನವನ್ನು ಅಂಬೇಡ್ಕರ್ ಅವರೇ ಸಂಪೂರ್ಣವಾಗಿ ಬರೆದಿದ್ದು ಎಂದು ಅಧಿವೇಶನದಲ್ಲಿಯೇ ದಾಖಲಾಗಿದೆ. ರಚನೆ ಸಮಿತಿ ಸದಸ್ಯರ ಪೈಕಿ ಸಂವಿಧಾನ ರಚನೆ ಕಾರ್ಯ ಪೂರ್ಣಗೊಳ್ಳುವ ಮೊದಲೇ ಕೆಲವರು ನಿಧನರಾಗಿದ್ದರು.

ಇನ್ನಿಬ್ಬರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಇನ್ನೊಬ್ಬರು ವಿದೇಶಕ್ಕೆ ತೆರಳಿದ್ದರು. ಹೀಗಾಗಿ ಅಂಬೇಡ್ಕರ್ ಅವರೊಬ್ಬರನ್ನು ಹೊರತುಪಡಿಸಿ ರಚನೆ ಸಮಿತಿ ಸದಸ್ಯರು ಸಂವಿಧಾನ ರಚನೆ ಪ್ರಕ್ರಿಯೆಯಲ್ಲಿ ಭಾಗಿಯೇ ಆಗಿಲ್ಲ ಎಂದು ಸಂಸತ್ ನಲ್ಲಿಯೇ ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ಒಪ್ಪಿಕೊಂಡಿರುವುದನ್ನು ಸ್ಮರಿಸಬಹುದು.