ಕೋಲ್ಡ್ ಕಾಫಿ ಹೀರುತ್ತಾ  : ಕೋಲ್ಡ್ ಭೂಮಿಯತ್ತ...

ಇದು ವಾತಾವರಣದ ಬದಲಾವಣೆ ಅಷ್ಟೆ. ಈ ವಾತಾವರಣದ ಬದಲಾವಣೆಗೆ ಮನುಷ್ಯ ಕಾರಣ ಅಲ್ಲವೇ ಅಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಕಾರ್ಖಾನೆಗಳು, ಅದು ಇದು ಎಲ್ಲಾ ಸೇರಿಸಿಕೊಂಡು ವಾತಾವರಣವನ್ನು ಇಂಗಾಲದ ಡೈ ಆಕ್ಸೈಡ್ ಮೂಲಕ ನಾವು ಹಾಳು ಮಾಡುತ್ತಿದ್ದೇವೆ ಎಂಬುದರಲ್ಲೂ ಸತ್ಯವಿಲ್ಲ. ಭೂಮಿಯ ವಾತಾವರಣದ ಮೇಲೆ ಇದರ ದುಷ್ಪರಿಣಾಮ ಕೇವಲ 2 ಪರ್ಸೆಂಟ್‍ಗಿಂತ ಕಮ್ಮೀನೇ! ಗ್ಲೋಬಲ್ ವಾರ್ಮಿಂಗ್‍ನ ಹೆಸರು ಹೇಳಿಕೊಂಡು ಕೆಲವರು ದುಡ್ಡು ಲೂಟಿ ಮಾಡುತ್ತಿದ್ದಾರಷ್ಟೆ.’’

ಕೋಲ್ಡ್ ಕಾಫಿ ಹೀರುತ್ತಾ  : ಕೋಲ್ಡ್ ಭೂಮಿಯತ್ತ...

"ಗ್ಲೋಬಲ್ ವಾರ್ಮಿಂಗ್ , ಭೂಮಿ ಬಿಸಿಯಾಗುತ್ತಿದೆ"

ಇದೆಲ್ಲಾ ಕಟ್ಟುಕಥೆ. ಅತೀ ದೊಡ್ಡ ಸುಳ್ಳು. ಅಭಿವೃದ್ಧಿಯ ಆಸೆ ಹೊತ್ತಿರುವ ದೇಶಗಳನ್ನು ಭಯದಲ್ಲಿಡಲು ಹೂಡಿದ ಜಗತ್ತಿನ ಅತೀ ದೊಡ್ಡ ಕುತಂತ್ರವಿದು ಎಂದರೆ ನೀವು ನಂಬುತ್ತೀರಾ?

ಕಳೆದ ಹಲವಾರು ವರ್ಷಗಳಿಂದ ಇಂತಹ ಭೂಕಾಳಿ ಮಾತುಗಳನ್ನು ನಾವು ಕೇಳುತ್ತಲೇ ಇದ್ದೇವೆ. ಭಯಭೀತರೂ ಆಗಿದ್ದೇವೆ. ಒಂಚೂರು ಸಂಶಯಪಡದಂತೆ ನಂಬಿಕೊಂಡೂ ಬಂದಿದ್ದೇವೆ. ಭೂಮಿ ಬಿಸಿಯಾಗಿದೆ ಎಂತಲೋ ಬಿಸಿಯಾಗುತ್ತಿದೆ ಎಂತಲೋ ಭಾಷಣಗಳನ್ನೂ ಬಿಗಿದು `ಪರಿಸರ ತಜ್ಞ’ರಾದವರೂ ಇದ್ದಾರೆ. ಆದರೆ, ನಿಜವಾಗಲೂ ಭೂಮಿ ಬಿಸಿ ಆಗಿದೆ ಅಥವಾ ಆಗುತ್ತಿದೆ ಎಂಬುದನ್ನು ದೇಶ-ವಿದೇಶದ ಖ್ಯಾತ ವಿಜ್ಞಾನಿಗಳು ಮಾತ್ರ ಒಪ್ಪಲು ತಯಾರಿಲ್ಲ. ಅವರ ಬಳಿ ಅಂತಹ ಯಾವುದೇ ದಾಖಲೆಗಳೂ ಇಲ್ಲ. ವಿಜ್ಞಾನಿಗಳು ಹೇಳುತ್ತಿರುವುದೇ ಬೇರೆ

"ಭೂಮಿ ಹಿಂದೆ ಬಿಸಿಯಾಗಿತ್ತು ನಿಜ. ಆದರೆ, ಈಗ ಗ್ಲೋಬಲ್ ವಾರ್ಮಿಂಗ್ ಇಲ್ಲವೇ ಇಲ್ಲ. ಈಗೇನಿದ್ದರೂ ಗ್ಲೋಬಲ್ ಕೂಲಿಂಗ್ ಸಮಯ. ಭೂಮಿ ತಣ್ಣಗಾಗುತ್ತಿದೆ. ಮಿನಿ ಹಿಮಯುಗ ಆರಂಭವಾಗುತ್ತಿದೆ. ಈ ಮಿನಿ ಹಿಮಯುಗ ಇಂದಿನಿಂದಲೇ ಆರಂಭವಾಗಬಹುದು. ನಾಳೆಯಿಂದ, ಮುಂದಿನ ವಾರದಿಂದ, ಒಂದಿಷ್ಟು ತಿಂಗಳುಗಳ ನಂತರದಿಂದ, ಮುಂದಿನ ವರ್ಷದಿಂದ ಅಥವಾ ಒಂದಿಷ್ಟು ವರ್ಷಗಳ ನಂತರದಲ್ಲಿ... ಯಾವಾಗ ಬೇಕಾದರೂ ಆರಂಭವಾಗುಬಹುದು. ಯಾಕೆಂದರೆ, ಭೂಮಿ ತಣ್ಣಗಾಗುತ್ತಿದೆ!’’

ಹಾಗಾದರೆ, ಇಡೀ ಯೂರೋಪ್‍ ನಲ್ಲಿ ಭಯಾನಕವಾಗಿ ಬೀಳುತ್ತಿರುವ ಹಿಮ, ದಾಖಲೆಗಳನ್ನು ಮೀರಿ ಚಳಿ ಆವರಿಸುತ್ತಿರುವುದು Ice age ಅಥವಾ ಹಿಮಯುಗದ ಆಗಮನದ ಸಂಕೇತವಾ? ಭಾರತದಲ್ಲೂ ಕೂಡ ಡಿಸೆಂಬರ್ ನಲ್ಲಿ ಮೂಡಿದ ದಾಖಲೆ ಮಟ್ಟದ ಚಳಿ ಸಹಜವಾಗಿ ನಾಗರೀಕರನ್ನು ಕಂಗೆಡಿಸಿದೆ. ರಾಜಧಾನಿ ದೆಹಲಿಯಲ್ಲಿ ಚಳಿಯ ಹೊಡೆತಕ್ಕೆ ನಾಗರೀಕ ಜಗತ್ತು ಅಲ್ಲೋಲಕಲ್ಲೋಲವಾಗಿದೆ. ಮಂಜು ಮುಸುಕಿದ ರಸ್ತೆಗಳಲ್ಲಿ ಯಮನ ಅಟ್ಟಹಾಸ ಮುಂದುವರೆದಿದೆ. ಚಳಿಗೆ ದೇಹಗಳನ್ನು ಒಗ್ಗಿಸಿಕೊಳ್ಳಲಾಗದೇ ಜನ ಸಾಯತೊಡಗಿದ್ದಾರೆ. ಇದು ಕೇವಲ ದೆಹಲಿಯ ಕಥೆಯಲ್ಲ; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಇದೇ ಕಥೆ. ಇದೆಲ್ಲಾ ಗ್ಲೋಬಲ್ ಕೂಲಿಂಗ್‍ನತ್ತ ಭೂಮಿ ಸಾಗುತ್ತಿರುವ ಹೆಜ್ಜೆ ಗುರುತಾ? ಇದೆಲ್ಲಾ ಪ್ರಶ್ನೆಗಳು ಸಹಜವಾಗಿ ವಿಜ್ಞಾನಿಗಳನ್ನು ಚಿಂತೆಗೀಡುಮಾಡಿರುವುದಂತೂ ಸತ್ಯ!

ಯೂರೋಪ್‍ನಲ್ಲಿ ಗ್ಲೋಬಲ್ ಕೂಲಿಂಗ್‍ನ ಹೆಜ್ಜೆ ಗುರುತುಗಳು ಸ್ಪಷ್ಟವಾಗತೊಡಗಿವೆ. ಭೀಕರವಾಗಿ ಬೀಳುತ್ತಿರುವ ಹಿಮ ಮತ್ತು ತಾಪಮಾನ ಆಶ್ಚರ್ಯಕರ ರೀತಿಯಲ್ಲಿ ಶೂನ್ಯದಿಂದ 15 ಡಿಗ್ರಿ ಕೆಳಗೆ ಇಳಿಯುತ್ತಿರುವುದರಿಂದ ಜಲವಾಯುವಾಗಿ ಪರಿವರ್ತನೆಯಾಗತೊಡಗಿದೆ. ಇದು ಆತಂಕಕ್ಕೆ ಮೂಲ ಕಾರಣ. ಈ ವರ್ಷ ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಹಿಮಪಾತ ಆಗುತ್ತಿರುವುದರಿಂದ ನೂರೆಂಟು ಅನುಮಾನಗಳಿಗೆ ರೆಕ್ಕೆ ಬಂದಿವೆ.

ಇದು ಕೇವಲ ಕಥೆಯಲ್ಲ. ಜಗದ್ವಿಖ್ಯಾತ ವಿಜ್ಞಾನಿಗಳ ತಂಡವೊಂದು ಕಳೆದ ಒಂದು ದಶಕದಿಂದಲೇ `ಗ್ಲೋಬಲ್ ಕೂಲಿಂಗ್’ನ ಸೂಚನೆಗಳನ್ನು ನೀಡುತ್ತಲೇ ಇದ್ದಾರೆ. ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ ವಿಜ್ಞಾನಿಗಳು ಈ ಗ್ಲೋಬಲ್ ವಾರ್ಮಿಂಗ್ ಮತ್ತು ಗ್ಲೋಬಲ್ ಕೂಲಿಂಗ್ ಬಗ್ಗೆ ಭೂಮಿಯ ಇತಿಹಾಸ ಹೇಗಿದೆ? ಎಂಬುದರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆಂದರೆ ನಿಮಗೆ ಆಶ್ಚರ್ಯವಾಗಲೂಬಹುದು. ಈ ವಿಜ್ಞಾನಿಗಳ ಪ್ರಕಾರ, ಭೂಮಿ ಬಿಸಿಯಾದ ನಂತರದಲ್ಲಿ ತಣ್ಣಗಾಗುತ್ತದೆ. ಇದನ್ನೇ ನಾವು ಹಿಮಯುಗ ಅನ್ನುತ್ತೇವೆ. ಇಂತಹ ಹಿಮಯುಗದ ಸಂದರ್ಭದಲ್ಲಿ ಭೂಮಿಯ ತಾಪಮಾನ ಸಾಕಷ್ಟು ಕಮ್ಮಿಯಾಗಿಬಿಡುತ್ತದೆ. ನಾಲ್ಕೂ ದಿಕ್ಕುಗಳಲ್ಲಿ ಹಿಮಪಾತ/ಚಳಿಯ ರಾಜ್ಯಭಾರ ಆರಂಭವಾಗುತ್ತದೆ. ಆನಂತರದಲ್ಲಿ ಮತ್ತೆ ಸಮುದ್ರದ ಬಿಸಿಯಿಂದ ಭೂಮಿ ಬಿಸಿಯಾಗತೊಡಗುತ್ತದೆ. ಆ ಬಿಸಿಗೆ ಭೂಮಿ ಬೆಟ್ಟಗಳನ್ನು, ಪರ್ವತಗಳನ್ನು ಹಡೆಯುತ್ತದೆ. ಗಂಭೀರ ಅಭ್ಯಾಸದಲ್ಲಿ ತೊಡಗಿರುವ ವಿಜ್ಞಾನಿಗಳೇ ಹೇಳುವಂತೆ, ಭೂಮಿ ಬಿಸಿ ಅಥವಾ ತಣ್ಣಗಾಗುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ.

"ಭೂಮಿ ಬಿಸಿಯಾಗುವ ಮತ್ತು ತಣ್ಣಗಾಗುವ ಪ್ರಕ್ರಿಯೆ ಹಗಲು-ರಾತ್ರಿಯಷ್ಟೇ ಸಹಜವಾದುದು. ಈಗ ದೊರಕುತ್ತಿರುವ ದಾಖಲೆಗಳ ಪ್ರಕಾರ, ಭೂಮಿ ತಣ್ಣಗಾಗುವತ್ತ ದಾಪುಗಾಲಿಡುತ್ತಿದೆ. ಕೇವಲ ಯೂರೋಪ್‍ನಲ್ಲಿ ಮಾತ್ರವಲ್ಲ ಬಹಳಷ್ಟು ಕಡೆಗಳಿಂದ ಸಿಗುತ್ತಿರುವ ದಾಖಲೆಗಳು ಇದನ್ನೇ ಪುಷ್ಠೀಕರಿಸುತ್ತವೆ’" ಎನ್ನುತ್ತಾರೆ, ಚಂಡೀಘಡದ ಪ್ಲಾನೆಟ್ ಅಥ್  ಸೆಂಟರ್ ನ ಭೂಗರ್ಭ ಶಾಸ್ತ್ರಜ್ಞ ಪ್ರೊ: ಅರುಣ್‍ದೀಪ್ ಅಹ್ಲುವಾಲಿಯಾ.

"ಗ್ಲೋಬಲ್ ವಾರ್ಮಿಂಗ್ ವಿಷಯದಲ್ಲಿ ನಾವು ಭಯಪಟ್ಟಿದ್ದೇವೆ. ಭಯಪಡಲೆಂದೇ ಗ್ಲೋಬಲ್ ವಾರ್ಮಿಂಗ್ ವಿಷಯವನ್ನು ಸೃಷ್ಟಿಸಲಾಗಿದೆ. ಅದು ಸತ್ಯ ಅಲ್ಲವೇ ಅಲ್ಲ. ಭೂಮಿ ಬಿಸಿಯಾಗುತ್ತಿಲ್ಲ. ಅದು ತಣ್ಣಗಾಗುತ್ತಿದೆ. ಈ ಸತ್ಯವನ್ನು ಎಲ್ಲಾ ವಿಜ್ಞಾನಿಗಳು ಒಪ್ಪುತ್ತಿದ್ದಾರೆ. ವಿಜ್ಞಾನಿಗಳು ಗ್ಲೋಬಲ್ ವಾರ್ಮಿಂಗ್ ವಿಷಯ ಕೈ ಬಿಟ್ಟು ವರ್ಷಗಳೇ ಕಳೆದಿವೆ. ಯಾಕೆಂದರೆ, ಅವರಿಗೆಲ್ಲಾ ಗ್ಲೋಬಲ್ ಕೂಲಿಂಗ್ ವಿಷಯಗೊತ್ತಿದೆ. ಸುಖಾಸುಮ್ಮನೆ ಗ್ಲೋಬಲ್ ವಾರ್ಮಿಂಗ್ ಭೂತವನ್ನು ಬಡದೇಶಗಳ ಮೇಲೆ ಛೂ ಬಿಡುಲಾಗುತ್ತಿದೆ. ಇಂಥ ಬಡದೇಶಗಳ ವಿರುದ್ಧ ಕೇವಲ ಅಸ್ತ್ರವನ್ನಾಗಿ `ಗ್ಲೋಬಲ್ ವಾರ್ಮಿಂಗ್’ ಬಳಕೆಯಾಗುತ್ತಿದೆ. ಭೂಮಿಯಲ್ಲಿ ಇಂತಹ ಪರಿವರ್ತನೆಗಳು ಸಹಜ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಗ್ಲೋಬಲ್ ವಾರ್ಮಿಂಗ್‍ನ 18 ಸಾವಿರ ವರ್ಷಗಳ ಇತಿಹಾಸದಲ್ಲಿ ಎರಡು ಸಣ್ಣ ಹಿಮಯುಗಗಳು ಬಂದು ಹೋಗಿವೆ’’ ಎಂದು ಸ್ಪಷ್ಟಪಡಿಸುತ್ತಾರೆ ಪ್ರೊ: ಅರುಣ್‍ ದೀಪ್ ಅಹ್ಲುವಾಲಿಯಾ.

"ಗ್ಲೋಬಲ್ ವಾರ್ಮಿಂಗ್ ಶುದ್ಧ ಸುಳ್ಳು"

ಗ್ಲೋಬಲ್ ವಾರ್ಮಿಂಗ್‍ನ ಭೂತದಿಂದ ತತ್ತರಿಸುತ್ತಿದ್ದ ಬಡದೇಶಗಳ ಭ್ರಮೆಯನ್ನು ಒಡೆದು ಹಾಕುವಲ್ಲಿ ವಿಶೇಷ ಶ್ರಮವಹಿಸಿದವನು ವಿಲಿಯಂ ಗ್ರೇ ಎಂಬ ಜಗದ್ವಿಖ್ಯಾತ ವಾತಾವರಣ ತಜ್ಞ. ಕೊಲೊರಡೋ ಸ್ಟೇಟ್ ಯೂನಿವರ್ಸಿಟಿಯಲ್ಲಿರುವ ಅಟ್ಮೋಸ್‍ಫೆರಿಕ್ ಸೈನ್ಸ್ ವಿಭಾಗದ ಪ್ರೊಫೆಸರ್ ಆಗಿರುವ ಗ್ರೇ `Global Warming is a hoax’ ಅಂತಾನೆ. ಈ ವಿಷಯವನ್ನೇ ಕೇಂದ್ರವಾಗಿಟ್ಟುಕೊಂಡು ಕಳೆದ ಒಂದು ದಶಕದಿಂದ ಭಾಷಣಗಳನ್ನು ಮಾಡುತ್ತಿದ್ದಾನೆ. ಲೇಖನಗಳನ್ನು ಬರೆಯುತ್ತಿದ್ದಾನೆ. ಕಳೆದ 50 ವರ್ಷಗಳಿಂದ ನಾನು ಭೂಮಿಯ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇನೆ. ಗ್ಲೋಬಲ್ ವಾರ್ಮಿಂಗ್ ಎಂಬ ಭಯಾನಕ ಸುಳ್ಳನ್ನು ಹಬ್ಬಿಸಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಇದು ಕೆಲಸವಿಲ್ಲದವರ ಕೆಲಸ ಎಂದು ಬಹಳ ಕೆಟ್ಟ ಭಾಷೆ ಉಪಯೋಗಿಸಿ, ಕ್ರೋಧದಿಂದಲೇ ಮಾತನಾಡುತ್ತಾನೆ ಗ್ರೇ.

"ಭೂಮಿ ಮತ್ತೆ ತಣ್ಣಗಾಗುತ್ತಿದೆ... the world will begin to cool again’’ಎಂದು ದಾಖಲೆಗಳ ಸಮೇತ ಯು.ಎಸ್. ಸೆನೆಟ್‍ನಲ್ಲಿ ವಾದ ಮಂಡಿಸುತ್ತಾನೆ ಗ್ರೇ. ವಿಲಿಯಂ ಗ್ರೇಗೆ ಈಗ 80 ವರ್ಷದ ಪ್ರಾಯ. "1940ರಿಂದಲೇ ಭೂಮಿಯ ತಾಪಮಾನದ ಲೆವೆಲ್ ಕಡಿಮೆಯಾಗಿದೆ; ಕಡಿಮೆ ಏನು ಸಂಪೂರ್ಣ ಕುಸಿದಿದೆ. ಅಂಟಾರ್ಟಿಕಾದ ಐಸ್‍ ಪ್ಲೇಟ್‍ಗಳು ಅತ್ಯಂತ ಗಟ್ಟಿಯಾಗಿವೆ. ಈಗಲೂ ನಿರಂತರವಾಗಿ ಗಟ್ಟಿಯಾಗುತ್ತಲೇ ಇವೆ. ಈ ಉದಾಹರಣೆಯೊಂದೇ ಸಾಕು’’ ಎನ್ನುತ್ತಾನೆ.

"ಗ್ಲೋಬಲ್ ವಾರ್ಮಿಂಗ್ ಎಲ್ಲಿದೆ? ಅದು ಫೂಲಿಶ್ ಜನರ ಫೂಲಿಶ್ ಕಲ್ಪನೆ. ನಂಬಿಕೆಗೆ ಅರ್ಹವಲ್ಲದ ಅಂಕಿಸಂಖ್ಯೆಗಳ ಸುಳ್ಳು ಮಾದರಿ. ತಲೆ ಇಲ್ಲದವರು ಸೃಷ್ಟಿಸಿದ ಅಸಂಗತ ನಾಟಕ’’ ಎಂದು ಹೇಳುತ್ತಲೇ ಹೋಗುತ್ತಾನೆ ವಿಲಿಯಂ ಗ್ರೇ ಎಂಬ ತಲೆಬಲಿತ ವಿಜ್ಞಾನಿ ಅಜ್ಜ.

'ಗ್ಲೋಬಲ್ ಕೂಲಿಂಗ್ ಕೂಡ, ಭಯಾನಕ ವಿಷಯವೇ’

ಹಾಗಂತ ಹೇಳುತ್ತಾನೆ ವೆಸ್ಟರ್ನ್ ವಾಷಿಂಗ್‍ಟನ್ ಯುನಿವರ್ಸಿಟಿ ಬೆಲ್ಲಿಂಗ್‍ಹ್ಯಾಂನ ಭೂಗರ್ಭ ವಿಜ್ಞಾನಿ ಡಾ. ಡಾನ್ ಈಸ್ಟರ್‍ಬ್ರೂಕ್. ಗ್ಲೋಬಲ್ ವಾರ್ಮಿಂಗ್‍ ಗಿಂತ ಗ್ಲೋಬಲ್ ಕೂಲಿಂಗ್ ಅತೀ ಹೆಚ್ಚು ಭಯ ಹುಟ್ಟಿಸುವ ವಿಚಾರ. ಮನುಷ್ಯನ ದೇಹ ತಾಪಮಾನದ ಬಿಸಿಗೆ ಹೊಂದಿಕೊಂಡಿದೆ. ಚಳಿ ಮನುಷ್ಯನನ್ನು ತಣ್ಣಗೆ ಕೊಲ್ಲುವ ದೊಡ್ಡ ಅಸ್ತ್ರ ಎಂಬುದು ಡಾ.ಬ್ರೂಕ್‍ ನ ಅಭಿಪ್ರಾಯ. ಗ್ಲೋಬಲ್ ವಾರ್ಮಿಂಗ್‍ ನ ಶಾಖ ಓರ್ವನನ್ನು ಕೊಂದರೆ, ಗ್ಲೋಬಲ್ ಕೂಲಿಂಗ್‍ನ ಥಂಡಿ ಇಬ್ಬರನ್ನು ಕೊಲ್ಲಬಲ್ಲಷ್ಟು ಶಕ್ತಿಯುತ ಎಂಬುದು ಆತನ ವಾದ.

ಮಿನಿ ಹಿಮಯುಗ ಆರಂಭವಾಗಿರುವುದು ನಿಜ. 3000 ವರ್ಷಗಳ ಹಿಂದಿದ್ದ ಭೂಮಿಯ ಬಿಸಿ ಈಗಿಲ್ಲ. ಭೂಮಿಯ ಬಿಸಿಯೌವನ ಈಗ ಮುದಿಯಾಗಿದೆ. ಹಿಮಯುಗದ ಕಂದ ಈಗಾಗಲೇ ನಡೆದಾಡುತ್ತಿದ್ದಾನೆ. ಗ್ಲೋಬಲ್ ಕೂಲಿಂಗ್ ಮಾನವ ಜೀವಕ್ಕಷ್ಟೇ ಹಾನಿಕಾರಕವಲ್ಲ. ಆಹಾರ ಉತ್ಪಾದನೆ ಮೇಲೂ ಪರಿಣಾಮ ಬೀರುತ್ತೆ. ಬಡದೇಶಗಳು ಬರಗಾಲಕ್ಕೆ ತುತ್ತಾಗುತ್ತವೆ. ಎಲ್ಲೆಲ್ಲೂ ಹಾಹಾಕಾರ ಆರಂಭವಾಗುತ್ತೆ. ಮನುಷ್ಯನ ಹುಟ್ಟಿನ ಮೇಲೂ ಭೀಕರ ಪರಿಣಾಮ ಬೀಳುತ್ತೆ ಎಂದು ಗ್ಲೋಬಲ್ ಕೂಲಿಂಗ್‍ನ ದುಷ್ಪರಿಣಾಮಗಳನ್ನು ಈಸ್ಟರ್‍ಬ್ರೂಕ್ ಪಟ್ಟಿ ಮಾಡುತ್ತಾ ಹೋಗುತ್ತಾನೆ.

ಭೂ ವಾತಾವರಣದ ಬದಲಾವಣೆಯನ್ನು ದಾಖಲಿಸಲಾಗಿದೆ. ಗ್ಲೋಬಲ್ ವಾರ್ಮಿಂಗ್ ಮತ್ತು ಗ್ಲೋಬಲ್ ಕೂಲಿಂಗ್ ಎಂಬುದು ನಿರಂತರವಾಗಿ ದಾಖಲಿಸಲ್ಪಟ್ಟಿದೆ. ಕಳೆದ 500 ವರ್ಷಗಳ ಭೂ ವಾತಾವರಣದ ದಾಖಲೆಗಳನ್ನೇ ನೋಡಿದರೆ, ಪ್ರತೀ 25-30 ವರ್ಷಗಳಿಗೊಮ್ಮೆ ಭೂಮಿ ಬಿಸಿಯಾಗುವುದು-ತಣ್ಣಗಾಗುವುದು ನಡೆದೇ ಇದೆ ಎನ್ನುವ ಈಸ್ಟರ್‍ಬ್ರೂಕ್, ನಾವೀಗ ಗ್ಲೋಬಲ್ ಕೂಲಿಂಗ್ ಬಗ್ಗೆ ಜಾಗೃತಿ ವಹಿಸಲೇಬೇಕಾಗಿದೆ ಎಂದು ಗಂಭೀರವಾಗಿ ಹೇಳುತ್ತಾನೆ.

ಬಿಸಿ ತಾಪಮಾನದ ಹೆಸರಲ್ಲಿ, ಮಾನಸಿಕ ಅತ್ಯಾಚಾರ!

ಯುರೋಪಿನ ಅತಿದೊಡ್ಡ ಭೂ ವಿಜ್ಞಾನಿ ಮೈಕಲ್ ಓಲೆರಿ ಹೀಗೆ ಮಾತನಾಡುತ್ತಾನೆ. "ಗ್ಲೋಬಲ್ ವಾರ್ಮಿಂಗ್ ಎಂಬುದೇ ಬುಲ್‍ ಶಿಟ್. ಆಶ್ಚರ್ಯವಾಗುತ್ತೆ, ಪರಿಸರ ಹೋರಾಟಗಾರರು, ಮಾಧ್ಯಮಗಳು ಇನ್ನೂ ಗ್ಲೋಬಲ್ ವಾರ್ಮಿಂಗ್ ಬಗ್ಗೆಯೇ ಪ್ರಚಾರದಲ್ಲಿ ತೊಡಗಿವೆ. ಭೂಮಿಯ ತಾಪಮಾನ ಕಳೆದ 20 ವರ್ಷಗಳಲ್ಲಿ ಏರಲೇ ಇಲ್ಲ! ನಾವು ಹಿಮಯುಗದತ್ತ ನಡೆದಿದ್ದೇವೆ. ಇದು ವಾತಾವರಣದ ಬದಲಾವಣೆ ಅಷ್ಟೆ. ಈ ವಾತಾವರಣದ ಬದಲಾವಣೆಗೆ ಮನುಷ್ಯ ಕಾರಣ ಅಲ್ಲವೇ ಅಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಕಾರ್ಖಾನೆಗಳು, ಅದು ಇದು ಎಲ್ಲಾ ಸೇರಿಸಿಕೊಂಡು ವಾತಾವರಣವನ್ನು ಇಂಗಾಲದ ಡೈ ಆಕ್ಸೈಡ್ ಮೂಲಕ ನಾವು ಹಾಳು ಮಾಡುತ್ತಿದ್ದೇವೆ ಎಂಬುದರಲ್ಲೂ ಸತ್ಯವಿಲ್ಲ. ಭೂಮಿಯ ವಾತಾವರಣದ ಮೇಲೆ ಇದರ ದುಷ್ಪರಿಣಾಮ ಕೇವಲ 2 ಪರ್ಸೆಂಟ್‍ಗಿಂತ ಕಮ್ಮೀನೇ! ಗ್ಲೋಬಲ್ ವಾರ್ಮಿಂಗ್‍ನ ಹೆಸರು ಹೇಳಿಕೊಂಡು ಕೆಲವರು ದುಡ್ಡು ಲೂಟಿ ಮಾಡುತ್ತಿದ್ದಾರಷ್ಟೆ.’’

ಮಧ್ಯಯುಗದಲ್ಲಿ ವಿಜ್ಞಾನಿಗಳೇ ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದರು. ಆ ನಂತರದ ಅತ್ಯಂತ ದೊಡ್ಡ ಸುಳ್ಳೆಂದರೆ ಗ್ಲೋಬಲ್ ವಾರ್ಮಿಂಗ್‍ ನದು. ಯುನೈಟೆಡ್ ನೇಷನ್ಸ್ ನ ಇಂಟರ್ ಗೌರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್‍ ಚೇಂಜ್(IPCC)ಜಗತ್ತಿನ ಅತೀ ದೊಡ್ಡ ಕೆಲಸಕ್ಕೆ ಬಾರದ ಸಂಘಟನೆ. ಇಂಥ ಸಂಘಟನೆಗಳ ಅಪಪ್ರಚಾರದಿಂದಲೇ ಗ್ಲೋಬಲ್ ವಾರ್ಮಿಂಗ್ ಭೂತ ಹೆದರಿಸುತ್ತಿದೆ. ಇದರ ಹಿಂದೆ ಅಂತರರಾಷ್ಟ್ರೀಯ ರಾಜಕಾರಣ ಅಡಗಿಕೊಂಡಿದೆ ಎಂಬುದು ಮೈಕೆಲ್ ಓಲೆರಿ ವಾದ.

ಏನಾದರಾಗಲಿ, ನಾವೂ ಮಿನಿ ಹಿಮಯುಗವನ್ನು ಪ್ರೀತಿಯಿಂದಲೇ ಸ್ವಾಗತಿಸೋಣ!