“ಅನರ್ಹ”ರ ಸೋಲು ಗೆಲುವಿನಲ್ಲಿದೆ ಬಿಜೆಪಿ,ಜೆಡಿಎಸ್ ಲಾಭದ ಪ್ರಶ್ನೆ

ಅಧಿಕಾರ ಹಿಡಿಯಲೇಬೇಕು ಎನ್ನುವ ಏಕೈಕ ಕಾರಣದಿಂದ ರಾಜಕೀಯ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಆಪರೇಷನ್ ಕಮಲದ ಹೆಸರಿನಲ್ಲಿ ಪಕ್ಷಾಂತರ ಮಾಡುವ ಈ ಪ್ರವೃತ್ತಿಗೆ ಕಡಿವಾಣ ಹಾಕುವುದು ಅನಿವಾರ್ಯ

“ಅನರ್ಹ”ರ ಸೋಲು ಗೆಲುವಿನಲ್ಲಿದೆ ಬಿಜೆಪಿ,ಜೆಡಿಎಸ್ ಲಾಭದ ಪ್ರಶ್ನೆ

ಮುಂದಿನ ವಾರದಲ್ಲಿ ವಿಧಾನಸಭೆಯ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲ ಕ್ಷೇತ್ರಗಳನ್ನು ಗೆದ್ದು ತಮ್ಮ ಅಧಿಕಾರ ಉಳಿಸಿಕೊಳ್ಳಬೇಕೆನ್ನುವ ಧಾವಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರದ್ದು. ಅದಕ್ಕಾಗಿ ಅವರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಎಲ್ಲ ಕ್ಷೇತ್ರಗಳಲ್ಲು ಸುತ್ತಾಡುತ್ತಿದ್ದಾರೆ. “ಪಕ್ಷಾಂತರ ಮತ್ತು ಕುತಂತ್ರದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಪತನವಾಗಬೇಕು. ಚುನಾವಣೆ ಫಲಿತಾಂಶ ಬಂದ ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ” ಎಂಬುದಾಗಿ  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದಿದ್ದಾರೆ. 

ಆದರೆ ಈ ಐದಿನೈದು ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಬಿಜೆಪಿಗೆ ಯಡವಟ್ಟಾದರೂ ಸರ್ಕಾರ ಬೀಳುವುದು ಅನುಮಾನ. ಈ ಸರ್ಕಾರದ ರಕ್ಷಣೆಗಾಗಿ ಜೆಡಿಎಸ್ ಟೊಂಕಕಟ್ಟಿ ನಿಂತಿದೆ ಎನ್ನುವುದು ಈಗ ರಹಸ್ಯವಾಗೇನೂ ಉಳಿದಿಲ್ಲ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, “ಬಿಜೆಪಿ ಸರ್ಕಾರ ಬೀಳಲು ನಾನು ಬಿಡುವುದಿಲ್ಲ” ಎನ್ನುವ ಮೂಲಕ ರಾಜ್ಯದ ಜನತೆ ಅಚ್ಚರಿಪಡುವಂತೆ ಮಾಡಿದ್ದಾರೆ. 

ಆದರೂ ಮತ್ತೆ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸುತ್ತಾ, “ನನ್ನ ನೇತೃತ್ವದ ಸರ್ಕಾರ ಬೀಳಿಸಿದವರನ್ನು ಸೋಲಿಸುವುದೇ ನನ್ನ ಗುರಿ” ಎಂದು ಹೇಳುತ್ತಿದ್ದಾರೆ. ಅಂದರೆ ಈ “ಅನರ್ಹ ಶಾಸಕರು” ಎಂದೇ ಖ್ಯಾತರಾಗಿರುವವರು ಸೋತರಷ್ಟೇ ಜನತಾದಳಕ್ಕೆ ಲಾಭ. ಒಂದು ವೇಳೆ ಸರ್ಕಾರ ಉಳಿಯಲು ಬೇಕಾದ ಎಂಟು ಮಂದಿ ಗೆದ್ದರೂ ಜೆಡಿಎಸ್ ಅನ್ನು ಕೇರ್ ಮಾಡುವವರಿಲ್ಲ. ಆ ಕಾರಣಕ್ಕಾಗಿಯೇ ಕುಮಾರ ಸ್ವಾಮಿ ಈ “ಅನರ್ಹ ಶಾಸಕರು ಸೋಲಬೇಕು” ಎಂದು ಬಯಸುತ್ತಾರೆ. ಇವರ ಸೋಲಿನಿಂದ ಅವರ ಗೆಲುವಿದೆ. ಅನಾಯಾಸವಾಗಿ ಅಧಿಕಾರ ತಮ್ಮ ಕಾಲಡಿಗೆ ಬರಲಿದೆ ಎನ್ನುವ ಲೆಕ್ಕಾಚಾರ ಅವರದ್ದು ಎನ್ನಲಾಗಿದೆ.

ಜೆಡಿಎಸ್ ಪ್ರಾದೇಶಿಕ ಪಕ್ಷ. ಇದು ಉಳಿಯಬೇಕು ಮತ್ತು ಬೆಳೆಯಬೇಕು ಎಂದು ವಾದ ಮಾಡುವವರೂ, ಜೆಡಿಎಸ್ ಅಸ್ತಿತ್ವದಿಂದಾಗಿಯೇ ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲು ಕಾರಣವಾಗುತ್ತಿದೆ. ರಾಜಕೀಯ ಅತಂತ್ರ ಸ್ಥಿತಿಯ ಲಾಭವನ್ನು ಜೆಡಿಎಸ್ ಪಡೆಯುತ್ತಿದೆ ಎಂದು ವಿಶ್ಲೇಷಣೆ ಮಾಡುವುದು ನಡೆದಿದೆ. ಹಾಗಾಗಿಯೇ ಕುಮಾರಸ್ವಾಮಿ ಅವರನ್ನು ಬಿಜೆಪಿಯವರು “ಲಕ್ಕಿಡಿಪ್ ಮುಖ್ಯಮಂತ್ರಿ” ಎಂತಲೂ ಅನರ್ಹ ಶಾಸಕರೊಬ್ಬರು “ಇಸ್ಪೀಟ್ ಆಟದಲ್ಲಿ ಜೋಕರ್ ಎಲೆ ಇದ್ದಂತೆ” ಎನ್ನುತ್ತಾರೆ. ಮತ್ತೊಬ್ಬ ಕಾಂಗ್ರೆಸ್ಸಿನ ಪ್ರಮುಖ ನಾಯಕರು “ಜೆಡಿಎಸ್ ನವರು ಒಂದು ರೀತಿಯಲ್ಲಿ ಕೋತಿಗಳಿದ್ದಂತೆ. ಅವರು ಒಂದು ಕಡೆ ಇರುವುದಿಲ್ಲ. ಸಮಯಕ್ಕೆ ತಕ್ಕಂತೆ ಅತ್ತಿಂದಿತ್ತ ಹಾರುತ್ತಾರೆ” ಎಂದು ಗೇಲಿ ಮಾಡುತ್ತಾರೆ. ಈ ನಾಯಕರ ಹೇಳಿಕೆಗಳಲ್ಲಿ ಸತ್ಯ ಇಲ್ಲ ಎನ್ನಲಾಗದು. ಜೆಡಿಎಸ್ ನಾಯಕರು ಮಾಡುವುದೂ ಅದೇ ಆಗಿದೆ. ಹಾಗಾಗಿ ಜೆಡಿಎಸ್  ದಿನೇ ದಿನೇ ಜನರಿಂದ ವಿಶ್ವಾಸ ಕಳೆದುಕೊಳ್ಳುತ್ತಿರುವುದು ದುರಂತ.

ಹದಿನೇಳು ಮಂದಿ ಶಾಸಕರು ತಮ್ಮ ಸ್ವಂತ ಹಿತಾಸಕ್ತಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿದ್ದರಿಂದ ಕುಮಾರಸ್ವಾಮಿ ಸರ್ಕಾರ ಪತನವಾಯಿತೆನ್ನುವುದು ಅಕ್ಷರಶಃ ನಿಜ. ಆದರೆ ಈ ರಾಜಕೀಯ ತಂತ್ರದ ಹಿಂದೆ ಯಾರು ಯಾರಿದ್ದಾರೆ ಎನ್ನುವುದು ಈಗ ಚರ್ಚೆಗಷ್ಟೇ ಗ್ರಾಸ. ಆದರೆ ಅದರಿಂದ ಪ್ರಯೋಜನವೇನಿಲ್ಲ. ಆದರೆ ಅಚ್ಚರಿಪಡುವಂತೆ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ಸಿನಲ್ಲಿದ್ದಾಗ ಹತ್ತಾರು ಉನ್ನತ ಸ್ಥಾನಗಳ ಅಧಿಕಾರ ಅನುಭವಿಸಿ ಮೂರು ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರಿರುವ ಎಸ್. ಎಂ. ಕೃಷ್ಣ ಅವರು “ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಲು ತಾವೂ ಕಾರಣ” ಎಂದಿದ್ದಾರೆ. “ಮುಖ್ಯಮಂತ್ರಿಯಲ್ಲದೇ ಸೂಪರ್ ಮುಖ್ಯಮಂತ್ರಿಯಂತೆ ನಡೆದುಕೊಂಡವರಿಂದಾಗಿ ಸರ್ಕಾರ ಬೀಳಲು ಕಾರಣ” ಎಂದು ಅವರು ಪರೋಕ್ಷವಾಗಿ ಎಚ್.ಡಿ ರೇವಣ್ಣ ಅವರ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.

ನಿಜ ರೇವಣ್ಣ ಅವರ ನಡೆ ಮತ್ತು ಎಲ್ಲ ಇಲಾಖೆಗಳ ಆಡಳಿತದಲ್ಲಿ ವಿಶೇಷವಾಗಿ ಅಧಿಕಾರಿಗಳ ವರ್ಗಾವಣೆಯಲ್ಲಿ ಅವರು ಹಸ್ತಕ್ಷೇಪ ನಡೆಸುತ್ತಿದ್ದರೆನ್ನಲಾದ ದೂರುಗಳಿಂದ ಸಂಬಂಧಪಟ್ಟ ಸಚಿವರು ಮತ್ತು ಶಾಸಕರು ಕುಮಾರಸ್ವಾಮಿ ಅವರ ಆಡಳಿತ ವೈಖರಿಯನ್ನು ಕಂಡು ಒಳಗೊಳಗೇ ಕುದಿಯುತ್ತಿದ್ದರೆನ್ನುವುದೂ ಬಟಾಬಯಲಾಗಿತ್ತು. ಆದರೂ ಕುಮಾರಸ್ವಾಮಿ ಇದೆಲ್ಲ ಗೊತ್ತಿಲ್ಲದಂತೆ ನಡೆಸಿದ “ಜಾಣ ಮೌನ”ವನ್ನು ಪ್ರದರ್ಶಿಸುತ್ತಲೇ ಬಂದರು. ಆದರೆ ಈ “ಜಾಣ ನಡೆ”ಯನ್ನು ಜನರಾರೂ ನಂಬುತ್ತಿರಲಿಲ್ಲ!

ಈ ಹಿನ್ನೆಲೆಯಲ್ಲಿ ಜೆಡಿಎಸ್ ಅನ್ನು ತಮ್ಮ ಕುಟುಂಬದ ಆಸ್ತಿಯಂತೆ ಮಾಡಿಕೊಂಡಿದ್ದಾರೆ ಎನ್ನುವ ರಾಜಕೀಯ ಆರೋಪವನ್ನು ಸುಲಭವಾಗಿ ತಳ್ಳಿಹಾಕುವುದು ಕಷ್ಟ. ತಮ್ಮ ಪಕ್ಷದ ಅಥವಾ ಪಕ್ಷದ ಪಾಲುಗಾರಿಕೆ ಇದ್ದಾಗ ಕುಟುಂಬದ ಹಲವರಿಗೆ ಅಧಿಕಾರ ಹಂಚಿಕೆ ಆಗಬೇಕೆನ್ನುವುದು ನಡೆದು ಬಂದಿರುವ ಸಂಪ್ರದಾಯ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ, ರೇವಣ್ಣ ಪ್ರಭಾವಿ ಖಾತೆಗಳ ಸಚಿವರಾದರೂ, ಇನ್ನೂ ಕೆಲವು ಅಧಿಕಾರವನ್ನು ಅವರ ಕುಟುಂಬದ ಕೆಲವರು ಅನೌಪಚಾರಿಕವಾಗಿ ನಿರ್ವಹಿಸುತ್ತ್ತಿದ್ದಾರೆ ಎನ್ನುವ ಆರೋಪಗಳೂ ಸಾರ್ವಜನಿಕವಾಗಿ ಕೇಳಿ ಬರುತ್ತಿದ್ದವು. ಹಾಗಾಗಿಯೇ ಜನತಾದಳದ ಆಡಳಿತದ ಬಗೆಗೆ ಜನರು ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಇಂತಹ ಆರೋಪಗಳಿಂದ ಜನತಾದಳ ಮುಕ್ತವಾಗಬೇಕಿದೆ. ಇಲ್ಲವಾದರೆ ಸ್ವಂತಶಕ್ತಿಯ ಮೇಲೆ ರಾಜ್ಯದ ಅಧಿಕಾರ ಹಿಡಿಯುವುದು ಮುಂದಿನ ದಿನಗಳಲ್ಲಿ ಕನಸಿನ ಮಾತಾಗಬಹುದು.

ಈಗ ಪ್ರಶ್ನೆ ಇರುವುದು ಈ ಚುನಾವಣೆಯಿಂದ ಯಾರಿಗೆ ಯಾವ ಪಕ್ಷಕ್ಕೆ ಲಾಭ ಮತ್ತು ನಷ್ಟ ಎನ್ನುವುದು. ಜೊತೆಗೆ ರಾಜ್ಯದ ಆಡಳಿತದಲ್ಲಿ ಬದಲಾವಣೆ ತಂದ ಕೀರ್ತಿ ತಮ್ಮದು. ಸ್ವಾಭಿಮಾನಕ್ಕಾಗಿ ತಾವು ಜನತಾ-ಕಾಂಗ್ರೆಸ್ನಲ್ಲಿದ್ದುಕೊಂಡೇ ಆ ಸರ್ಕಾರವನ್ನು ಬೀಳಿಸಿದೆವು ಎಂದು ಈಗ ಮತ್ತೆ ಚುನಾವಣೆ ಎದುರಿಸುತ್ತಿರುವ “ಅನರ್ಹರ” ವಾದ.

ಈ “ಅನರ್ಹರ” ಕಾರ್ಯತಂತ್ರಕ್ಕೆ ಕುಮ್ಮಕ್ಕು ನೀಡಿ ಅನೈತಿಕ ಆಪರೇಷನ್ ಕಮಲ ನಡೆಸಿದ ಬಿಜೆಪಿಯ ಪ್ರತಿಷ್ಠೆಯ ಪ್ರಶ್ನೆ ಈ ಚುನಾವಣೆಯ ಫಲಿತಾಂಶದಲ್ಲಿ ಅಡಗಿದೆ. ಈಗಾಗಲೇ ರಾತ್ರಿ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದಲ್ಲಿ ಆತುರವಾಗಿ ಸರ್ಕಾರ ರಚಿಸಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಬೆಂಬಲ ಸಿಗದೆ ಪದತ್ಯಾಗ ಮಾಡಬೇಕಾದ ರಾಜಕೀಯ ಸೋಲು ಬಿಜೆಪಿಯ ವರ್ಚಸ್ಸು ಕುಸಿಯುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಅಡ್ಡದಾರಿ ಹಿಡಿದು ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರನ್ನು ಖೆಡ್ಡಾಕ್ಕೆ ಕೆಡವಿ ಅಧಿಕಾರ ಹಿಡಿದ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ “ಅನರ್ಹ” ರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಈ “ಅನರ್ಹ”ರಲ್ಲಿ ಎಷ್ಟು ಮಂದಿ ಗೆಲ್ಲಲಿದ್ದಾರೆ ಎನ್ನುವುದೇ ಈಗ ಎಲ್ಲ ಪಕ್ಷವನ್ನೂ ಮತ್ತು ಜನರನ್ನು ಕಾಡುತ್ತಿರುವ ಪ್ರಶ್ನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಮತದಾರರು ಪಕ್ಷಾಂತರಿಗಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಅದೇ ಪಾಠವನ್ನು ಕರ್ನಾಟಕದ ಮತದಾರರೂ ಈ “ಅನರ್ಹ”ರಿಗೆ ಕಲಿಸಬೇಕು. ಹೀಗೆ ಮಾಡುವ ಮೂಲಕ ಮತದಾರರು ತಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳಬೇಕೆನ್ನುವ ಪ್ರಚಾರವೂ ಪ್ರಜ್ಞಾವಂತರೂ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಳುವಳಿಯ ರೂಪದಲ್ಲಿ ನಡೆಸುತ್ತಿದ್ದಾರೆ. ಇಂತಹ ಒಂದು ಚಳುವಳಿಗೆ ಮತದಾರರು ಸ್ಪಂದಿಸಿದರೆ ಒಂದು ಸರ್ಕಾರವನ್ನು ಬೀಳಿಸಿ ತಮಗೆ ಬೇಕಾದಂತೆ ರಾಜಕೀಯ ಆಟ ಆಡುವವರಿಗೆ ನಿಜವಾದ ಒಂದು ಪಾಠ ಕಲಿಸಿದಂತಾಗುತ್ತದೆ. 

ಆಡಳಿತರೂಢ ಬಿಜೆಪಿಯು ಈ ಎಲ್ಲ ಹದಿನೈದು ಕ್ಷೇತ್ರಗಳಲ್ಲಿ ರಹಸ್ಯ ಸಮೀಕ್ಷೆ ನಡೆಸಿದೆ ಎನ್ನಲಾದ ವರದಿಯ ಪ್ರಕಾರ ಬಹುತೇಕ ಕ್ಷೇತ್ರಗಳಲ್ಲಿ “ಅನರ್ಹರಿಗೆ” ಅಂದರೆ ಬಿಜೆಪಿಯ ಅಭ್ಯರ್ಥಿಗಳಿಗೆ ಸೋಲಾಗುವುದು ಖಚಿತ ಎನ್ನುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಹಜವಾಗಿಯೇ ಅಧಿಕಾರ ಕಳೆದುಕೊಳ್ಳುವ ಭೀತಿ ಉಂಟು ಮಾಡಿದೆ. ಅದಕ್ಕಾಗಿ ಅವರು ಹೇಗಾದರೂ ಗೆಲ್ಲಬೇಕೆನ್ನುವ ಹಠದಿಂದ ಪ್ರಚಾರ ಕೈಗೊಂಡಿದ್ದಾರೆ.

“ಅನರ್ಹ” ಬಿಜೆಪಿ ಅಭ್ಯರ್ಥಿಗಳು ನಿಂತಿರುವ ಕಡೆಗಳೆಲ್ಲ ಮತದಾರರ ಆಕ್ರೋಶಕ್ಕೆ ಗುರಿಯಾಗುತ್ತಿರುವ ವರದಿಗಳು ನಿತ್ಯವೂ ಬರುತ್ತಿವೆ. “ಒಮ್ಮೆ ನಿಮ್ಮನ್ನು ಗೆಲ್ಲಿಸಿದ್ದೇವಲ್ಲ: ಈ ಶಾಸಕ ಸ್ಥಾನ ಬೇಕಿಲ್ಲ ಎಂದು ರಾಜೀನಾಮೆ ನೀಡಿ ಮತ್ತೇಕೆ ಚುನಾವಣೆಗೆ ನಿಂತು ನಮ್ಮ ಮತ ಕೇಳುತ್ತಿದ್ದೀರಿ” ಎನ್ನುವ ಮತದಾರರ ಪ್ರಶ್ನೆಗೆ ಉತ್ತರಿಸಲು ತಡವರಿಸುತ್ತಿದ್ದಾರೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಏನೇ ಕಾರಣಕೊಟ್ಟರು ಜನರನ್ನು ಎದುರಿಸುವುದು ಕಷ್ಟವಾಗುತ್ತಿದೆ. ಈ ರೀತಿಯ ಮತದಾರರ ವಿರೋಧ ಅವರ ವಿರುದ್ಧ ಮತವಾಗಿ ಪರಿವರ್ತನೆಯಾದರೇ ಇವರ ಗೆಲುವು ಕಷ್ಟವಾಗಲಿದೆ.

ಇತ್ತ ಬಿಜೆಪಿಯ ರಾಜ್ಯ ಮಟ್ಟದ ಮತ್ತು ಸಚಿವ ಸ್ಥಾನ ಪಡೆದಿರುವವರೂ ಈ “ಅನರ್ಹ”ರು ಗೆಲ್ಲಬೇಕೆಂದು ಬಯಸಿದ್ದರೂ, ಆಯಾ  ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಇವರಿಂದ ಸೋಲು ಕಂಡಿರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಒಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಬಿಜೆಪಿಯ ಅಭ್ಯರ್ಥಿಗಳಾಗಿರುವ ಈ “ಅನರ್ಹರು” ಗೆದ್ದರೆ ಮುಂದೆ ಈ ಕ್ಷೇತ್ರ ಮತ್ತೆ ಅವರ ಪಾಲಾಗಲಿದೆ. ಇದರಿಂದ ನಮ್ಮ ರಾಜಕೀಯ ಅಸ್ತಿತ್ವವೇ ಹೋಗುತ್ತದೆ ಎನ್ನುವ ಆಂತರಿಕ ಲೆಕ್ಕಚಾರ ಬಿಜೆಪಿಯ ಸ್ಥಳೀಯ ನಾಯಕರದು. ರಾಜಕೀಯ ಅಧಿಕಾರದ ದೃಷ್ಟಿಯಿಂದ ಇವರ ಈ ಲೆಕ್ಕಾಚಾರ ತಪ್ಪು ಎಂದು ಹೇಳಲು ಆಗದು.

ಅಧಿಕಾರ ಹಿಡಿಯಲೇಬೇಕು ಎನ್ನುವ ಏಕೈಕ ಕಾರಣದಿಂದ ರಾಜಕೀಯ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಆಪರೇಷನ್ ಕಮಲದ ಹೆಸರಿನಲ್ಲಿ ಪಕ್ಷಾಂತರ ಮಾಡುವ ಈ ಪ್ರವೃತ್ತಿಗೆ ಕಡಿವಾಣ ಹಾಕುವುದು ಅನಿವಾರ್ಯ. ಆದರೆ ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನೇ ಮುಗಿಸಿ ಎಲ್ಲಕಡೆಯೂ ತನ್ನದೇ ರಾಜಕೀಯ ಅಧಿಪತ್ಯ ಇರಬೇಕೆನ್ನುವ ಪಕ್ಷ ಕೇಂದ್ರ ಸರ್ಕಾರದಲ್ಲಿರುವಾಗ ಇಂತಹ ಪರೋಕ್ಷವಾದ ಪಕ್ಷಾಂತರ ಪಿಡುಗನ್ನು ತಡೆಯುವುದನ್ನು ನಿರೀಕ್ಷಿಸಲಾಗದು.

ಮೂರು ದಶಕಗಳ ಹಿಂದೆ ಹರಿಯಾಣ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪಕ್ಷಾಂತರವನ್ನು ತಡೆಯಲು ಆಗಿನ ಪ್ರಧಾನಿ ರಾಜೀವ್ ಗಾಂಧಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಅದನ್ನು ದುರ್ಬಲಗೊಳಿಸುವ ಅಡ್ಡದಾರಿ ನಿರಂತರವಾಗಿ ನಡೆದುಕೊಂಡು ಬಂದಿರುವುದು ನಮ್ಮ ರಾಜಕಾರಣಿಗಳು ಅಧಿಕಾರಕ್ಕಾಗಿ ಏನೆಲ್ಲ ಕುತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎನ್ನುವುದು ನಾಚಿಕೆಗೇಡಿನ ಸಂಗತಿ.

ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಬೇರೆ ಬೇರೆ ರೂಪದಲ್ಲಿ ನಡೆಯುತ್ತಿರುವ ಪಕ್ಷಾಂತರವನ್ನು ತಡೆಯುವ ಕಾರ್ಯ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಾದುದು ನಡೆಯಬೇಕಿದೆ.

ಹಾಗೆ ಮಾಡುವಾಗ ಸದ್ಯಕ್ಕೆ ಒಂದು ಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಶಾಸಕ ತನ್ನ ಅವಧಿ ಮುಗಿಯುವವರೆಗೂ ರಾಜೀನಾಮೆ ಕೊಡಬಾರದು. ಒಂದು ವೇಳೆ ರಾಜಕೀಯ ಅಧಿಕಾರಕ್ಕಾಗಿ ರಾಜೀನಾಮೆ ನೀಡಿ ಮತ್ತೆ ಆ ಕ್ಷೇತ್ರಕ್ಕೆ ಚುನಾವಣೆ ನಡೆಯಲು ಕಾರಣವಾದವರನ್ನು ಜನರು ತಿರಸ್ಕರಿಸುವುದು ಬೇರೆ. ಆದರೆ ಒಮ್ಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಅದೇ ಕ್ಷೇತ್ರದಲ್ಲಿ ಆತನಿಂದ ಖಾಲಿಯಾದ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಅನರ್ಹ ಎನ್ನುವ ತಿದ್ದುಪಡಿಯನ್ನು ಸಂಬಂಧಪಟ್ಟ ಪಕ್ಷಾಂತರ ನಿಷೇಧ ಕಾಯ್ದೆಗೆ ತರಬೇಕಿದೆ. ಇದು ಆ ವಿಧಾನಸಭೆ ಅವಧಿಯವರೆಗೆ ಅನ್ವಯವಾಗಬೇಕು.

ಹೀಗೆ ಚುನಾವಣಾ ಆಯೋಗ ಪಕ್ಷಾಂತರ ಪಿಡುಗನ್ನು ತಡೆಯಲು ಇಂತಹ ಹತ್ತು ಹಲವು ದಾರಿಯನ್ನೂ ಹುಡುಕಬೇಕಿದೆ. ಆ ಮೂಲಕ ಪ್ರಜಾತಂತ್ರ ಮೌಲ್ಯಗಳನ್ನು ರಕ್ಷಿಸುವುದು ಅವಶ್ಯ.