ಇಟ್ಟಿಗೆಯೇ ಪವಿತ್ರ..! ಜೀವವಲ್ಲ..!!

ರಾಮನನ್ನು ಅವರವರ ಸ್ಥಳಗಳಲ್ಲಿ ಕಲ್ಪಿಸಿಕೊಂಡು ತಮ್ಮವನನ್ನಾಗಿ ಭಾವಿಸಿಕೊಂಡಿದ್ದ ಜನಮಾನಸಕ್ಕೆ ರಾಮ ಒಂದು ಸ್ಥಳಕ್ಕೆ ಸೀಮಿತವಾದದ್ದನ್ನು ಕಲ್ಪಿಸಿಕೊಳ್ಳುವುದು ಕಷ್ಟ

ಇಟ್ಟಿಗೆಯೇ ಪವಿತ್ರ..! ಜೀವವಲ್ಲ..!!

ನನ್ನ ಹಳೆಯ ಗೆಳೆಯ ಕೈವಾರದ ರಾಜಣ್ಣ ಪೋನ್ ಮಾಡಿ "ಏನಣ್ಣ ಹಿಂಗಾಯ್ತಲ್ಲ.." ಎಂದ. "ಏನಾಯ್ತು..?" ಅಂದೆ. "ಸುಪ್ರೀಂ ಕೋರ್ಟು ತೀರ್ಪು ನೋಡಲಿಲ್ವ..? ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದು ಎಂದು ಹೇಳ್ಬಿಟ್ಟಿದ್ದಾರೆ..!" ಅಂದ. ನಾನು ಚೆನೈನಲ್ಲಿದ್ದೆ, ಮಾಧ್ಯಮಗಳಿಂದ ದೂರವಿದ್ದೆ, ನನಗೆ ವಿವರಗಳೇನು ಗೊತ್ತಿರಲಿಲ್ಲ ಆದರೂ "ಹೌದು ಒಂದು ಧರ್ಮೀಯರ ನಂಬಿಕೆಯನ್ನು ಕೋರ್ಟು ಗೌರವಿಸಿ ಈ ತೀರ್ಪು ನೀಡಿರಬಹುದು.."ಎಂದೆ.  "ಇರಬಹುದಣ್ಣ.. ನಮ್ಮದೂ ನಂಬಿಕೆಯಲ್ಲವೆ..? ನಮ್ಮ ಕೈವಾರದ ಬೆಟ್ಟದಲ್ಲಿ ಸೀತಮ್ಮ ಸ್ನಾನ ಮಾಡಿದ ಹೊಂಡವನ್ನು ನೀವು ನೋಡಿಲ್ಲವೆ? ಸೀತಮ್ಮನ ಸೆರಗು ತಾಕಿದ್ದು ಇನ್ನೂ ಬಂಡೆ ಮೇಲೆ ಅಚ್ಚೊತ್ತಿದಂತೆ ಹಾಗೇ ಉಳಿದಿದೆ..! ನಮ್ಮ ಮಕ್ಕಳಿಗೆ ರಾಮಾಯಣ ನಡೆದದ್ದೇ ನಮ್ಮೂರಿನಲ್ಲಿ ಎಂದು ಹೇಳಿಕೊಂಡು ಬಂದಿದ್ದೇವಲ್ಲ.‌. ಈಗ ಅವರಿಗೇನು ಹೇಳೋದು? ಎಲ್ಲೋ ಇರೋ ಅಯೋಧ್ಯೆಗೆ ನಮ್ಮಂತವರು ಎಲ್ಲಿ ಹೋಗ್ತೀವಿ.. ನಮ್ಮ ಪಾಲಿಗೆ ಶ್ರೀರಾಮಚಂದ್ರ ಹುಟ್ಟಿದ್ದು ನಮ್ಮೂರು ಮತ್ತು ನಮ್ಮ ಪರಿಸರದಲ್ಲೇ.. ಹಂಗಾದರೆ ನಮ್ಮಂತಹವರ ನಂಬಿಕೆಗಳಿಗೆ ಗೌರವವೇ ಇಲ್ಲವೆ..?" ಎಂದು ಹೇಳುತ್ತಲೇ ಇದ್ದ. ತೀರ್ಪಿನ ಬಗ್ಗೆ ಅಪಾರವಾಗಿ ಗೌರವಿಸುತ್ತಾ ನ್ಯಾಯಾಲಯ ಒಂದು ಸಮುದಾಯದ ನಂಬಿಕೆಗಳನ್ನು ಗೌರವಿಸಿದೆ ಎಂದೇ ಹೇಳುತಿದ್ದ ನನಗೆ ರಾಜಣ್ಣ ಕಣ್ಣು ತೆರೆಸಿದ್ದ!? ನಿಜ ಪ್ರತಿ ಊರು, ಕೇರಿಗಳಲ್ಲೂ ರಾಮನ ಕುರುಹುಗಳಿವೆ. ಈ ಕುರುಹುಗಳನ್ನು ಇಟ್ಟುಕೊಂಡೇ ಜನಪದರು ರಾಮ, ಸೀತೆಯರೊಂದಿಗೆ ತಮ್ಮ ಸಂಬಂಧದ ಕತೆಗಳನ್ನು ಹೆಣೆದುಕೊಂಡಿದ್ದಾರೆ. ನಮ್ಮ ಅಲೆಮಾರಿ ಸಮುದಾಯದ ದೊಂಬಿದಾಸ, ಚೆನ್ನದಾಸರು ರಾಮಾಯಣ, ಮಹಾಭಾರತದ ಕತೆಗಳನ್ನು ಹಾಡುಗಳನ್ನು ಹಾಡುತ್ತಲೇ ಈ ಮಹಾಕಾವ್ಯಗಳನ್ನು ನಮ್ಮ ಜನರಲ್ಲಿ ಜೀವಂತವಾಗಿ ಇಟ್ಟುಕೊಂಡು, ಬೆಳೆಸಿಕೊಂಡು ಹೋಗಿದ್ದಾರೆ, ನಮ್ಮ ಹಗಲುವೇಶದಾರರು, ತೊಗಲುಗೊಂಬೆಯವರು ಈ ರಾಮಾಯಣ, ಮಹಾಭಾರತಗಳನ್ನು ಆಡಿಸುತ್ತಲೇ ಆ ಮಹಾಕಾವ್ಯಗಳಿಗೆ ಜೀವ ಸುರಿಯುತ್ತಾ ಬಂದಿದ್ದಾರೆ. ಇಂತಹದ್ದರಲ್ಲಿ ತಮ್ಮ ಜೀವನಾಡಿಯಾದ ರಾಮಚಂದ್ರನನ್ನು ಯಾವುದೋ ಊರಿಗೋ, ಕ್ಷೇತ್ರಕ್ಕೋ ಅಧಿಕೃತವಾಗಿ ಕಟ್ಟಿಹಾಕಿದರೆ ಈ ನಮ್ಮ ಜನಸಾಮಾನ್ಯರ ಗತಿಯೇನಾಗಬೇಕು?

ಲೋಹಿಯಾ ಹೇಳುವಂತೆ "ರಾಮ ಭಾರತದ ಉತ್ತರ ದಕ್ಷಿಣಗಳನ್ನು ಬೆಸೆಯುವ ದೈವವಾಗಿದ್ದ..." ಎನ್ನುವ ಮಾತಿಗೆ ನಮ್ಮ ಕೈವಾರದ ರಾಜಣ್ಣನ ಮಾತು ಅತ್ಯಂತ ಹತ್ತಿರವಾಗಿತ್ತು. ಯಾಕೆಂದರೆ ರಾಮನನ್ನು ಅವರವರ ಸ್ಥಳಗಳಲ್ಲಿ ಕಲ್ಪಿಸಿಕೊಂಡು ತಮ್ಮವನನ್ನಾಗಿ ಭಾವಿಸಿಕೊಂಡಿದ್ದ ಜನಮಾನಸಕ್ಕೆ ರಾಮ ಒಂದು ಸ್ಥಳಕ್ಕೆ ಸೀಮಿತವಾದದ್ದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇದಿಷ್ಟೇ ಅಲ್ಲ, ರಾಮಾಯಣ ಆಧುನಿಕ ಭಾರತೀಯ ಭಾಷೆಗಳ ಮೂಲಸೆಲೆಯೂ ಹೌದು, ಕಂಬನ್ ಬರೆದ ತಮಿಳು ರಾಮಾಯಣ, ಏಕನಾಥರ ಮರಾಠಿ ರಾಮಾಯಣ, ಕೃತ್ತಿವಾಸ ರಚಿಸಿದ ಬಂಗಾಳಿ ರಾಮಾಯಣ, ರಂಗನಾಯಕಮ್ಮ ಬರೆದ ತೆಲಗು ರಾಮಾಯಣ ವಿಷವೃಕ್ಷಂ ಅಂತೆಯೇ ಕುವೆಂಪು ಬರೆದ ರಾಮಾಯಣ ದರ್ಶನಂ ಮುಂತಾದ ರಾಮಾಯಣಗಳು ತಮ್ಮ ತಮ್ಮ ಭಾಷೆಗಳಿಗೆ ಹುಟ್ಟು ಮತ್ತು ಸಂಸ್ಕಾರ ಕೊಟ್ಟವು.  ಈಗಿನ ರಾಮ 'ಪಾನ್ ಇಂಡಿಯನ್' ಆಗಿರುವುದನ್ನು ನಮ್ಮ ಜನಪದರು ಒಪ್ಪಿಕೊಳ್ಳುವುದು ಕಷ್ಟ. ಸಕಲರೆಲ್ಲರಿಗೂ ಸೇರಿದ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನನ್ನು ಧಾರ್ಮಿಕ, ನ್ಯಾಯಿಕ ರಾಜಕಾರಣಕ್ಕೆ ಸೀಮಿತಗೊಳಿಸಿ ವಾದವಿವಾದಗಳ ಮಿತಿಯಲ್ಲಿ ಜಯಿಸುವುದು ನೈತಿಕ ಜಯವೆನಿಸುವುದಿಲ್ಲ!  

ರಾಮಮನೋಹರ ಲೋಹಿಯ ನನಗೆ ಈ ಸಂದರ್ಭದಲ್ಲೂ ಪ್ರಸ್ತುತ ಎನಿಸುತ್ತಾರೆ. ಅವರು ತಮ್ಮ 'ರಾಮಾಯಣ' ಎಂಬ ಲೇಖನದಲ್ಲಿ ಹೇಳುವಂತೆ "ಧರ್ಮ ಮತ್ತು ರಾಜನೀತಿ ಇವೆರಡರ ನಡುವೆ ಇರುವ ಸಂಬಂಧ ಇಂದು ಕೆಟ್ಟುಹೋಗಿದೆ. ಧರ್ಮ ದೀರ್ಘಕಾಲದ ರಾಜನೀತಿಯಾದರೆ, ರಾಜನೀತಿ ಅಲ್ಪಕಾಲದ ಧರ್ಮ. ಧರ್ಮ ಶ್ರೇಯಸ್ಸನ್ನು ಗಳಿಸಿಕೊಳ್ಳುವ ಪ್ರಯತ್ನ ಮಾಡಿದರೆ, ರಾಜನೀತಿ ಕೆಟ್ಟದ್ದರೊಂದಿಗೆ ಹೋರಾಡುತ್ತದೆ. ನಾವು ಇಂದು ಎಂಥ ದೌರ್ಭಾಗ್ಯದ ಪರಿಸ್ಥಿತಿಯಲ್ಲಿದ್ದೇವೆಂದರೆ ಕೆಟ್ಟದ್ದರ ವಿರುದ್ದವಾಗಿ ನಡೆಸುವ ಹೋರಾಟದಲ್ಲಿ ಧರ್ಮದ ಪಾತ್ರ ಏನೇನೂ ಇಲ್ಲವಾಗಿದೆ. ಅದು ನಿರ್ಜೀವವಾಗಿದೆ. ಜೊತೆಗೆ, ರಾಜನೀತಿ ವಿಪರೀತ ಕಲಹಗಳಿಂದ ಕೂಡಿದೆ ಹಾಗೂ ನಿಷ್ಪ್ರಯೋಜಕವಾಗಿದೆ.." ಎನ್ನುವ ಮಾತುಗಳು ಇಂದಿನ, ಧಾರ್ಮಿಕ, ಲೌಕಿಕ, ನಂಬಿಕೆ ಮತ್ತು ರಾಜಕಾರಣದ ಹಿನ್ನೆಲೆಯಲ್ಲಿ ಬಂದ ಇಂದಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೂಡ ಲೋಹಿಯಾರ ಮಾತಿನ ಹಿನ್ನೆಲೆಯಲ್ಲಿ ವಿಸ್ತರಿಸಬೇಕಿತ್ತು ಎನಿಸುತ್ತದೆ.

ಸುಮಾರು 1045 ಪುಟ ಇರುವ ತೀರ್ಪಿನ ಆಳಕ್ಕಿಳಿದು ಪೂರ್ತಿಯಾಗಿ ವಿಶ್ಲೇಷಣೆಗಳೊಂದಿಗೆ ಇನ್ನೂ ಓದಲಾಗಿಲ್ಲ ಆದರೆ ಮೇಲ್ಮಟ್ಟದಲ್ಲಿ ಆಸಕ್ತಿಯಿಂದ ಕಣ್ಣಾಡಿಸಿದ್ದೇನೆ. ಸರ್ವೋಚ್ಚ‌ ನ್ಯಾಯಾಲಯದ ಈ ತೀರ್ಪನ್ನು  ಒಪ್ಪಿಕೊಂಡು ಗೌರವಿಸುತ್ತಲೇ ನನ್ನ ಪ್ರಶ್ನೆಗಳನ್ನು ಅನುಮಾನಗಳನ್ನು ನಮ್ರವಾಗಿ ಮುಂದೊಮ್ಮೆ ಅವಶ್ಯವಿದ್ದಲ್ಲಿ ದಾಖಲಿಸುತ್ತೇನೆ. ಆದರೆ ಮೇಲ್ನೋಟಕ್ಕೆ ನನ್ನ ಅರಿವಿಗೆ ಬಂದದ್ದನ್ನು ಸದ್ಯಕ್ಕೆ ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ. ಈ ತೀರ್ಪು ನಂಬಿಕೆಯ ಆಧಾರದ ಮೇಲೆಯೇ ಆಧಾರವಾಗಿದ್ದರೆ ಇಷ್ಟೂ ದಿನ ಅನೇಕ ತೀರ್ಪುಗಳಲ್ಲಿ ಎತ್ತಿ ಹಿಡಿದ leap of faith ಎನ್ನುವ ಕಾನೂನು ಆಧಾರದ ಅಂಶಕ್ಕೆ ಇಲ್ಲಿ ತೊಡಕಾಗುತ್ತದೆ.!?

ಹಿಂದೊಮ್ಮೆ ನನ್ನ ಭಾಷಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಒಂದನ್ನು ಉದ್ದರಿಸುತ್ತಾ  leap of faith ಬಗ್ಗೆ ಮಾತನಾಡಿದ್ದೆ. ಇದನ್ನು ನಮ್ಮ ಕೆಲ ದೃಶ್ಯ  ಮಾಧ್ಯಮಗಳು  ಬೇಕೆಂತಲೇ ಅಪಾರ್ಥ ಮಾಡಿಕೊಂಡು "ರಾಮ ಹುಟ್ಟಲೇ ಇಲ್ಲವಂತೆ... ರಾಮನಿಗೆ ಹುಟ್ಟಿದ ದಿನಾಂಕವೇ ಇಲ್ಲವಂತೆ.." ಎಂದು ದ್ವಾರಕಾನಾಥ್ ಹೇಳಿದ್ದಾರೆಂದು ದಿನಗಟ್ಟಳೆ ಪ್ರಸಾರ ಮಾಡಿ, ಡಾ.ಕಲಬುರ್ಗಿಯವರ ವಿರುದ್ದ‌ ಇಂತದ್ದೇ ಅಪದ್ದ ಹೊರೆಸಿ ಅವರನ್ನು ಕೊಲೆ ಮಾಡಿಸಲು ಪ್ರೇರೇಪಿಸಿದಂತೆ  ನನ್ನ ವಿರುದ್ದವೂ ಎತ್ತಿಕಟ್ಟಿದ್ದವು! ಸಕಾಲಿಕವಾಗಿ ನಾನು ಬಿಡಿಸಿ ಹೇಳಿದ್ದರಿಂದ ಅವರು ಯಶಸ್ವಿಯಾಗಲಿಲ್ಲ. leap of faith ಎಂದರೆ ಏನು..?

"an act of believing in or attempting something whose existence or outcome cannot be proved or known". ಎಂದರ್ಥ. ಈ ವಿಷಯದ ಆಧಾರದ ಮೇಲೆ ಇಡೀ ತೀರ್ಪನ್ನು ನಾಳೆ ನ್ಯಾಯಾಲಯವೇ ಮರುಪರಿಶೀಲಿಸಬೇಕಾದ ಕಾಲ ಬಂದರು ಆಶ್ಚರ್ಯವಲ್ಲ!  ಈ ಹಿಂದೆ ಕೇಶವಾನಂದ ಭಾರತಿ, ನಂಬೂದರಿಪಾಡ್ ಪ್ರಕರಣಗಳಲ್ಲಿ ಇಂತಹ ಸನ್ನಿವೇಶವನ್ನು ನ್ಯಾಯಾಲಯ ಎದುರಿಸಿದೆ, ಮರುಚಿಂತಿಸಿದೆ.

ಇನ್ನು ಈ ತೀರ್ಪು ಸದರಿ ವಿವಾದಾಸ್ಪದ ಕಟ್ಟಡದ ವಿಷಯಕ್ಕೇ ಸೀಮಿತ ಆಗಿದ್ದರೆ, ಅದನ್ನು  ಸಾಕ್ಷ, ಪುರಾವೆ, ದಾಖಲೆಗಳ ಆಧಾರದಲ್ಲಿ‌ ತೀರ್ಮಾನಿಸಿ ಇಬ್ಬರಲ್ಲಿ ಒಬ್ಬರಿಗೆ ಒಪ್ಪಿಸುತ್ತದೆಯೇ ವಿನಹ ಮತ್ತೊಬ್ಬರಿಗೆ ಯಾವುದೇ ಕಾರಣಕ್ಕೂ ಪರಿಹಾರವನ್ನಾಗಿ ಏನನ್ನೂ ಕೊಡುವುದಿಲ್ಲ. ಇಲ್ಲಿ ಸದರಿ ಜಮೀನು ಸಾಕ್ಷಿ, ಪುರಾವೆ, ದಾಖಲೆಗಳ ಪ್ರಕಾರ ರಾಮಲಲ್ಲಾಗೆ ಸೇರಿದ್ದಾದರೆ ಅವರಿಗೆ ಜಮೀನು ಒಪ್ಪಿಸಿದ್ದು ಸರಿ, ಆದರೆ  ಸುನ್ನಿ ಬೋರ್ಡಿಗೆ ಐದು ಎಕರೆ ಕೊಟ್ಟಿದ್ದಾದರೂ ಯಾಕೆ? ಇಲ್ಲಿ ಅನೇಕ ದ್ವಂದ್ವಗಳೂ, ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಳ್ಳುತ್ತವೆಯಲ್ಲವೆ?

ಇಲ್ಲಿ ನ್ಯಾಯವನ್ನು ನೀಡಬೇಕಾದ ಸಾಂವಿಧಾನಿಕ ಜವಾಬ್ದಾರಿ ನ್ಯಾಯಾಲಯಕ್ಕೆ ಇರುವುದರೊಂದಿಗೆ ಶಾಂತಿ ನೆಲೆಸಲು ಕಾರಣವಾಗಬೇಕಾದ ನೈತಿಕ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡಂತಿದೆ. ಆದ್ದರಿಂದ 'ನ್ಯಾಯ' ಮತ್ತು 'ಶಾಂತಿ'ಯ ನಡುವೆ ಅನುಸಂದಾನ ನಡೆದಂತಾಗಿ ಶಾಂತಿಯ ಕೈ ಮೇಲಾದಂತಿದೆ!

ಹಿಂದೆ ಬಾಬ್ರಿ ಮಸೀದಿ ಧ್ವಂಸವಾಗಿ, ದೇಶಾದ್ಯಂತ ಅನೇಕ ಸಾವುನೋವುಗಳ ನಂತರ,  ರಾಮಮಂದಿರ ಕಟ್ಟಲು ಇಟ್ಟಿಗೆ ಸಂಗ್ರಹಿಸುತಿದ್ದಾಗ ಲಂಕೇಶರು "ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ" ಎಂದಿದ್ದರು. ಇದನ್ನು ನಮ್ಮ ಸಾಹಿತಿಗಳು, ಬರಹಗಾರರು, ಮಾನವತಾವಾದಿಗಳು ಇಲ್ಲೀತನಕ ಹೇಳುತ್ತಾ ಬರುತಿದ್ದೆವು. ಆದರೆ ಲಂಕೇಶರ ಈ ಮಾತು ಈಗಿನ ಸನ್ನಿವೇಶದಲ್ಲಿ ಸತ್ಯಕ್ಕೆ ದೂರವಾದಂತಿದೆ!? ಈ ಸಂದರ್ಭದಲ್ಲಿ ಸಾಬೀತಾದಂತೆ "ಜೀವ ಕಂಡಿತ ಪವಿತ್ರವಲ್ಲ.. ನಿಜಕ್ಕೂ ಇಟ್ಟಿಗೆಯೇ ಪವಿತ್ರ ಎಂಬುದು ಅಪ್ಪಟ ಸತ್ಯ" ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳೋಣ..!! 

ಈ ಎಲ್ಲದರ ನಡುವೆ ತಮಿಳು ನಾಡಿನ ಶ್ರೀರಂಗಂ ಮೂಲದ, ಸಂಪ್ರದಾಯಸ್ಥ ಐಯ್ಯಂಗಾರ್ ಮನೆತನದ ಪ್ರಖ್ಯಾತ ಹಿರಿಯ ವಕೀಲ ಪರಾಸರನ್ ಅವರು ಈ ಪ್ರಕರಣದಲ್ಲಿ ವಾದ ಮಂಡಿಸುತಿದ್ದಾಗ ನ್ಯಾಯಾಲಯ ಪರಾಸರನ್ ಅವರ ತೊಂಬತ್ತು ವರ್ಷ ವಯಸ್ಸನ್ನು ಗಣನೆಗೆ ತೆಗೆದುಕೊಂಡು "ನೀವು ಕುಂತೇ ವಾದ ಮಾಡಬಹುದು" ಎಂದಾಗ ಪರಾಸರನ್ ಹೇಳಿದ ಮಾತು ಇಲ್ಲಿ ಅಪ್ರಸ್ತುತವಾದರೂ ಹೇಳಬೇಕೆನಿಸಿದೆ...

"All my life I stood and argued for my clients , today when the Lord himself is my client,  I cannot sit."