ಕಪ್ಪುಕುಳಿಗಳ ನಿಗೂಢ ಲೋಕ: ಈವರೆಗಿನ ನಂಬಿಕೆಯೇ ತಪ್ಪೆಂದು ವಿಜ್ಞಾನಿಗಳೇ ಮೂಕ 

ಕಪ್ಪುಕುಳಿಗಳ ನಿಗೂಢ ಲೋಕ: ಈವರೆಗಿನ ನಂಬಿಕೆಯೇ ತಪ್ಪೆಂದು ವಿಜ್ಞಾನಿಗಳೇ ಮೂಕ 

ಭೇದಿಸುತ್ತಾ ಹೊರಟರೂ, ಪ್ರಕೃತಿಯ ರಹಸ್ಯ ಅದೆಷ್ಟೋ ಹಾಗೆಯೇ ಉಳಿದಿವೆ. ಅಂಥದ್ದರಲ್ಲಿ ಕಪ್ಪು ಕುಳಿ(ಬ್ಲ್ಯಾಕ್ ಹೋಲ್) ಕೂಡ ಒಂದು. ತಾರಾಪುಂಜದಲ್ಲಿನ ನಕ್ಷತ್ರಗಳು ಸಾವನ್ನಪ್ಪುವಾಗ ಅದರ ಅನಿಲ ಮತ್ತು ದ್ರವ್ಯರಾಶಿಗಳು ಕಪ್ಪುಕುಳಿ ನಿರ್ಮಿಸುತ್ತವೆ. ಇದು  ಕಣ್ಣಿಗೆ ಕಾಣಲ್ಲ. ಆದರೆ ತನ್ನ ಬಳಿಗೆ ಹೋದ ಯಾವುದನ್ನೇ ಆದರೂ ಒಳಕ್ಕೆ ಸೆಳೆದುಕೊಂಡು ಬಿಡುತ್ತೆ, ಅಷ್ಟು ಗುರುತ್ವ ಇರುವ ಕಪ್ಪುಕುಳಿಗಳು ಸೂರ್ಯನ ರಾಶಿಗಿಂತಲೂ ಸುಮಾರು 35 ಪಟ್ಟು ಹೆಚ್ಚು ಇರಬಹುದು ಎಂಬ ಅಂದಾಜು ಇದುವರೆಗೂ ಇತ್ತು.

ಆದರೆ ಈ ಲೆಕ್ಕಾಚಾರವನ್ನ ತಲೆಕೆಳಗು ಮಾಡುವಂಥ ಶೋಧನೆಯನ್ನ ಚೀನಾದ ವಿಜ್ಞಾನಿಗಳ ತಂಡ ಮಾಡಿದ್ದು, ಭೂಮಿಯಿಂದ 15 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ, ಸೂರ್ಯನ ರಾಶಿಗಿಂತಲೂ 70 ಪಟ್ಟು ಹೆಚ್ಚು ದೈತ್ಯದ ಕಪ್ಪುಕುಳಿ ಇದೆ ಎಂಬುದನ್ನ ಪ್ರಕಟಿಸಿದೆ. ಮೊದಲೆಲ್ಲ ಇದ್ದ ಅಂದಾಜಿಗಿಂತ ದುಪ್ಪಟ್ಟು ದೊಡ್ಡ ಪ್ರಮಾಣದ ಈ ಕಪ್ಪುಕುಳಿಗೆ ಎಲ್‍ಬಿ-1 ಎಂಬ ಹೆಸರಿಡಲಾಗಿದೆ. ಇಷ್ಟೊಂದು ದೈತ್ಯಾಕಾರದ ಕಪ್ಪುಕುಳಿಯ ಇರುವಿಕೆಯಿಂದಾಗಿ ಖಗೋಳ ವಿಜ್ಞಾನದಲ್ಲೆ ಹೊಸ ಆಯಾಮ ಸೃಷ್ಟಿಸುವಂತಾಗಿ, ಇದರ ಆಧಾರದಲ್ಲೆ ಇನ್ನಷ್ಟು ಸಿದ್ದಾಂತಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ.

ಅಂದಹಾಗೆ ಒಂದು ಜ್ಯೋತಿರ್ವರ್ಷ ಎಂಬುದು ಖಗೋಳ ಶಾಸ್ತ್ರದಲ್ಲಿ ಬೆಳಕು ಒಂದು ವರ್ಷದಲ್ಲಿ ಸಾಗುವ ದೂರ. ಅಂದರೆ ಬೆಳಕಿನ ಕಣ ಮುಕ್ತ ಅವಕಾಶದಲ್ಲಿ ಯಾವುದೇ ಗುರುತ್ವ ಅಥವಾ ಆಯಸ್ಕಾಂತೀಯ ಕ್ಷೇತ್ರದಿಂದ ದೂರವಿರುವಾಗ ಒಂದು ಕ್ಷಣದಲ್ಲಿ ಬೆಳಕು 2.99 ಲಕ್ಷ ಕಿಮೀ ಚಲಿಸುತ್ತೆ. ವರ್ಷದಲ್ಲಿ ಇದು ಸಾಗುವ ದೂರವನ್ನು ಸುಮಾರು  9.4 ಲಕ್ಷ ಕೋಟಿ ಕಿ.ಮೀ. ದೂರಕ್ಕೆ ಸಮ ಎಂದು ಪರಿಗಣಿಸಲಾಗಿದೆ.

ಕಪ್ಪು ಕುಳಿ ಎಂಬುದರ ಬಗ್ಗೆ ಇನ್ನಷ್ಟು ವಿಸ್ತರಿಸಿ ನೋಡುವುದಾದರೆ ಇದು ಸಾಂದ್ರೀಕೃತ ದ್ರವ್ಯರಾಶಿಯಿಂದ ಉಂಟಾಗುವ, ಬಾಹ್ಯಾಕಾಶದ ಪ್ರದೇಶ. ಕಪ್ಪುಕುಳಿ ಸುತ್ತ ಗುರುತಿಗೆ ಸಿಗದ ಹೊರಮೈ ಇದ್ದು, ಇದರೊಳಕ್ಕೆ ಹೋಗಿದ್ದ ಯಾವುದೇ ವಾಪಸ್ಸು ಬರಲ್ಲ, ಎಲ್ಲಾ ಬೆಳಕನ್ನೂ ಹೀರಿಬಿಡುತ್ತೆ. ಏನನ್ನೂ ಬಿಂಬಿಸಲ್ಲ. ಅಸಂಖ್ಯಾತ ಕಪ್ಪುಕುಳಿಗಳಿವೆ ಎಂದು ಖಗೋಳಶಾಸ್ತ್ರಜ್ಞರು ಗುರುತಿಸಿದ್ದು  ಇದರಲ್ಲಿ ಮೊದಲ ಸಾಕ್ಷ್ಯ ಸಿಕ್ಕಿದ್ದು 1988 ರಲ್ಲಿ. ಕ್ಷೀರಪಥ(ಮಿಲ್ಕಿ ವೇ) ಆಕಾಶಗಂಗೆಯ ಮಧ್ಯ ಪ್ರದೇಶದಲ್ಲಿನ ಸ್ಯಾಗಿಟ್ಟಾರಿಯಸ್-ಎ ಎಂಬಲ್ಲಿ 2 ದಶಲಕ್ಷ ಸೌರ ದ್ರವ್ಯರಾಶಿಗಿಂತ ದೊಡ್ಡದಾದ ಬೃಹತ್ ಕಪ್ಪುಕುಳಿ ಇರುವುದನ್ನ ಪತ್ತೆಹಚ್ಚಲಾಗಿತ್ತು.

ಯಾವುದೇ ಕಪ್ಪುಕುಳಿ ಸೂರ್ಯನ ದ್ರವ್ಯರಾಶಿಗಿಂತ 35 ಪಟ್ಟು ಹೆಚ್ಚಿರಬಹುದು ಅಷ್ಟೇ ಎಂಬ ನಿಲುವೇ ಇಲ್ಲಿವರೆಗೂ ಇತ್ತು. ಆದರೀಗ ಸೌರ ವ್ಯವಸ್ಥೆಯ ವಿರುದ್ದಕ್ಕಿರುವ ಗ್ಯಾಲಾಟಿಕ್ ಆಂಟಿ ಸೆಂಟರ್ ನಲ್ಲಿ, ಊಹಿಸಿದಕ್ಕಿಂತಲೂ ದುಪ್ಪಟ್ಟು ದ್ರವ್ಯಮಾನತ್ವದ ಕಪ್ಪುಕುಳಿ ಪತ್ತೆಯಾಗಿದೆ. ಖಗೋಳಶಾಸ್ತ್ರಕ್ಕೊಂದು ಹೊಸ ತಿರುವು ದಕ್ಕಿದೆ.