ಬರೀ...ಸವ್ಕಾರ್ಗೆ ಭಾರತ್‍ರತ್ನಾ ಕೊಟ್ರ,. ಬಡವರ್ಗೆ ಯಾವರತ್ನಾ ಕೊಡ್ತಾರ್...?

ಎಪ್ಪಾ..... "ಭಾರತ್‍ರತ್ನಾರಿ!, ಸುಮ್ಕಿರ್ರೀ... ಅದು ಸಾಮಾನ್ಯ ಪ್ರಶಸ್ತಿ ಅಲ್ಲಾ!  ಅದಕ್ ಭಾರೀ ಹೆಸ್ರು ಐತೀ"?. ಆ ಪ್ರಶಸ್ತಿ ನೀಡೋದ್ರ ಬಗ್ಗೆ ಎದ್ದೀರೋ ಗದ್ಲ ನೋಡ್ತಿರಿಲ್ಲ!. "ಬಿಜೆಪಿಯವ್ರು ನಾವು ಸಾವರ್ಕರ್ಗ ಭಾರತ್‍ರತ್ನಾ ಕೋಡ್ತವಿ ಅಂದ್ರ, ಕಾಂಗ್ರೆಸ್ ಮುಖಂಡರು ಸಾವರ್ಕರ್ಗ ಕೋಡಬ್ಯಾಡ್ರಿ ಅಂತ್ ಒಬ್ಬರ ಮ್ಯಾಗ ಒಬ್ರು ಹೇಳ್ಕಿ ನೀಡಾಕ ಹತ್ಯಾರ್", ಮಾತಿಗೆ ಮಾತು ಬೆಳ್ದು ಮಾತಿನ್ಯಾಗ ಎರ್ಡು ಪಕ್ಷದ ಮುಖಂಡರು ಗುದ್ದಾಡಾಕ ಹತ್ಯಾರ್".

ಬರೀ...ಸವ್ಕಾರ್ಗೆ ಭಾರತ್‍ರತ್ನಾ ಕೊಟ್ರ,. ಬಡವರ್ಗೆ ಯಾವರತ್ನಾ ಕೊಡ್ತಾರ್...?

 ಬಾರೋ....ಬಸಣ್ಣ, ಬಾ. ಹೆಂಗ್ಯಾತೋ ಮಹಾರಾಷ್ಟ್ರದ ಇಲೇಕ್ಷನ್ನು!, ಕಲೇಕ್ಷನ್ ಜೋರ್....?.

"ಜೋರ್ ಎಲ್ಲೆತರ್ತೀರಿ....!, ಎಲ್ಲಾ ಚೋರ್"!. "ಕಲೇಕ್ಷನ್ ಅಂತಾ ಜೋರ್ ಇಲ್ಲಾ ಬಿಡ್ರಿ!, ಬರೀ ಕನೆಕ್ಷನ್ ಮಾತ್ರ!. 

ಯಾಕೋ...... ಹೋದವಾರ್ ಮುಂಬೈಕ್ ಹೋದಾವಂನಿ. "ಮರಾಟಿ ಬರ್ತತಿ, ಮಹಾರಾಷ್ಟ್ರಾದಾಗ ನಮ್ಮ ಮಂದಿ ಅದಾರ, ಅವ್ರ್ನ ಹಿಡ್ದು.... ಪ್ಯಾಂಟ್‍ಲೆಸ್ ಪಕ್ಷದ ಮುಖಂಡ್ರು, ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಓಟ ಕೊಡ್ಸಬಾ ಅಂತ್ ಅಡ್ಕಿ-ಎಲೆ ಮ್ಯಾಲ್ ಸುಣ್ಣಾನು ಕೊಟ್ಟು ಕರ್ದಾರ ಅಂತ್ ಹೇಳಿ ಹೋದ ಆಸಾಮಿ ಇಷ್ಟ ಲಗೂನ ಬಂದಿಯಲ್ಲ'.......! ಯಾಕೋ.... ಏನಾತೋ.. ಅಂತಾದ್ದು?, ಕಲೇಕ್ಷನ್ ಬ್ಯಾರೆ ಇಲ್ಲಾ ಅಂತೀ..? ಏನ್ ನಿನ್ನ ಹಕಿಕತ್ತು?.

ಹೌದ್ರೀ..., ಕಾಕಾ "ನಾನು ಮುಂಬೈಕ್ ಆ.. ಪ್ಯಾಂಟ್‍ಲೆಸ್ ಪಕ್ಷದ ಮುಖಂಡ್ರು ಕರ್ದ್ರು ಅಂತ್ ಹೋಗಿದ್ದೆ".  ಆದ್ರ...ಅಲ್ಲೆ ನೋಡಿದ್ರ "ನಮ್ಮ ಸಿಎಂ ಈ ಯಡೆಯೂರ್ಸಪ್ಪ, ವಿರೋಧಪಕ್ಷದ ನಾಯ್ಕ ಸಿದ್ದ್ರಾಮಣ್ಣ, ಈ ಸವ್ದಿ, ರವ್ದಿ ಎಲ್ಲಾರೂ ಎಲೇಕ್ಷನ್ ಪ್ರಚಾರಕ್ಕ ಬಂದ್ ಬಿಟ್ಟಾರ್"!. ಎಲ್ಲಾ ಜನ್ರು ಅವ್ರ್ನ ಬೆಟ್ಟಿ ಆಗಾಗ್ ಹೋಗಿದ್ರು, "ಈ ಇಬ್ರು ಹವಾ ಬರೀ ಕರ್ನಾಟಕದಾಗ ಮಾತ್ರ ಐತಿ ಅಂತ್ ನಾತಿಳ್ಕೊಂಡಿದ್ದೆ.!", ಆದ್ರ, ನೋಡ್ರೀ "ಈ ಇಬ್ರು ಹವಾ ಮಾಹಾರಾಷ್ಟ್ರಾದಾಗು ಸಿಕ್ಕಾಪಟ್ಟೆ ಐತಿ"?. "ಈ ಇಬ್ರು ಭಾಷ್ಣಾ ಕೇಳಾಕ ಜನಾ ಸಿಕ್ಕಾಪಟ್ಟೇ ಸೇರಿದ್ರು, ಬೆಲ್ಲಕ್ ಇರ್ಬಿ ಮುತಿಗೆಂಡಂಗ್ ಜನಾ ಇವ್ರ್ನ ಮುತಗೆಂಡ್ ಬಿಟ್ಟಿದ್ರೂ"..... !

ಏ...ಭಾರೀ ಆತಲ್ಲೋ ಇದೂ, ಅಲ್ಗೆ ಬಂದ್ ಇವ್ರೇನ್ ಮಾತಾಡಿದ್ರೋ.....?.

ಏನ್ ಮಾತಾಡ್ತಾರ್ರೀ ಇವ್ರೂ!. ಅದ್ "ಹಾಡಿದ್ದ ಹಾಡೋ ಕಿಸಬಾಯಿ ದಾಸ್" ಅನ್ನೊಹಂಗ್  ಸಿದ್ದ್ರಾಮಣ್ಣ  ಯಥಾ ಪ್ರಕಾರ "ಬಿಜೆಪಿಯವ್ರು ಹಿಟ್ಲರ್ ಸಂಸ್ಕ್ರತಿ ವಾರಸ್ದಾರ ಇದ್ದಂಗ್ ಅದಾರ", "ಯುವ್ಕರಿಗೆ ಉದ್ಯೋಗಗಳಿಲ್ಲ'..., "ಕೈಗಾರಿಕೆಗಳು ಮುಚ್ಚುತ್ತಿವೆ", "ಇವ್ರ್ನ ಆರ್ಸಿ ತರಬ್ಯಾಡ್ರೀ, ಕಮಲ್ದೋರ್ನ ಬೀಡ್ರಿ, ಕೈಪಕ್ಷದವ್ರ್ನ ಆರ್ಸಿ ತರ್ರಿ ಅಂತ್ ಹೇಳಿ ಟಾ..ಟಾ ಮಾಡಿ ಹೋತು"..!

ಮತ್ತ ನಿಮ್ಮ ಯಡೆಯೂರ್ಸಪ್ಪ ಏನಂತ್ ಭಾಷ್ಣಾ ಮಾಡ್ತು..?.

ತಡ್ರೀ ಸ್ವಲ್ಪ, ಸಾವ್ಕಾಶ ಹೇಳ್ತನಿ. ಮೊದ್ಲ ನಾ ದಮ್ಮಿನ ಮನ್ಷಾ, ನೀವು ಹಿಂಗ್ ಅವ್ಸ್ರಾ ಮಾಡಿದ್ರ ಹೆಂಗ್?,   ಮಾತಾಡಿ ಮಾತಾಡಿ ತೇಕಾಕ್ ಹತ್ತೇನಿ, ಹೇಳ್ತನಿ ತಡ್ರೀ...., ನೋಡ್ರೀ ಕಾಕಾ, ಈ "ರಾಜಾ ಹುಲಿ ಹೇಳಿದ್ರ ಮುಗಿತು, ಹೇಳಿದ್ದನ್ನ ಮಾಡೋದು.... ಮಾಡೋದನ್ನ ಹೇಳೋದು", ಹಂಗ್ ಹೆಲಿಕಾಪ್ಟರ್ನ್ಯಾಗ  ಹಾರಿ ಬಂತ್ ನೋಡ್ರೀ.... ನಮ್ಮ ಸಿಎಂ ಯಡೆಯೂರ್ಸಪ್ಪ ! ಹಂಗ್ ಮಹಾರಾಷ್ಟ್ರಾದಾಗಿನ್ ಜನಾ ಹೂಯ್ಯಿ ಅಂತ್ ಕೇಕಿ ಹೊಡ್ದ್ರು, ಮಾಲಿ, ಹಾರಾ, ತುರಾಯಿ ಹಾಕಿ ಬರಮಾಡಿಕೊಂಡು ಮೆರ್ವಣ್ಗಿ ಮಾಡಿದ್ದ.... ಮಾಡಿದ್ದು....! 

ಅಲ್ಲಲೇ "ಮೆರ್ವಣ್ಗಿ-ಉರಣ್ಗಿ ಯಾವಾಂಗ ಬೇಕಾಗೇತಿ!, ಅಲ್ಲೇನಾತು... ಅನ್ನೋದನ್ನ ಮೊದ್ಲ ಹೇಳೂ"...!

ಅಲ್ಲೇನಾಗಬೇಕ್ರೀ...! ಏನು ಆಗಲಿಲ್ಲ?.  ಆದ್ರ ಪ್ಯಾಂಟ್‍ಲೆಸ್‍ ಪಕ್ಷಕ್ಕ್ ಓಟ ಮಾತ್ರ ಗ್ಯಾರಂಟಿ ಆದ್ವು ನೋಡ್ರೀ?.

ಅದೇಂಗೋ...? "ಇವ್ರ ಬಂದ್ ಕೂಡ್ಲೇ ಹಂಗ್ ಡಬ್ಬ್ಯಾಗ್ ಹೋಟು ಓಡಿಕೊಂಡು ಬಂದ್ ಬಿದ್ವ ಹೆಂಗ್ಯ"?.

ಹಂಗಿತ್ರೀ... ನಮ್ಮ ರಾಜಾಹುಲಿ ಭಾಷ್ಣಾ..!. "ಮಹಾರಾಷ್ಟ್ರದಾಗ್ ಕನ್ನಡಿಗರು ಪ್ಯಾಂಟ್‍ಲೆಸ್ ಪಕ್ಷಕ್ಕ ಓಟಹಾಕಿ ಗೆಲ್ಸಿದ್ರ ಮಹಾರಾಷ್ಟ್ರದಾಗಿನ ಜನಕ್ಕ ಆಲಮಟ್ಟಿ ಡ್ಯಾಮಿನಿಂದ್ ನೀರು ಬಿಡ್ತನೀ ಅಂತ್ ಘೋಷ್ಣಾ ಮಾಡಿದ್ರೂ ನೋಡ್ರೀ". ಹಂಗ್ ಜನಾ ತಟ್ಟಿದ್ದ.... ತಟ್ಟಿದ್ದು..! ಚಪ್ಪಾಳಿನ್, ಅರ್ಧಾತಾಸಾದ್ರು ನಿಲ್ಸವಲ್ರೂ.

ಅಲ್ಲೋ ಇಲ್ಲೇ "ನಮ್ಮ ರಾಜ್ಯದಾಗ ಜನ ಮಳೆ ಹೆಚ್ಚಾಗಿ -ಕಡ್ಮಿ ಆಗಿ ಎರ್ಡು ಕೈಯಿಂದ ಬಾಯಿಬಡ್ಕೊಂಡು ಹೊಯ್ಯಕೊಳ್ಳಾಕ ಹತ್ಯಾರ್"!, "ಅಂತಾದ್ರಾಗ ಯಡೆಯೂರ್ಸಪ್ಪ ಇಲ್ಲೇ ಜನ್ರನ್ ನಡ ನೀರಾಗ ಬಿಟ್ಟು ಅಲ್ಲೆ ಮಹಾರಾಷ್ಟ್ರಾಕ್ಕ ನೀರಬಿಡಾಕ ಹೊಂಟಾನ ಅಂದ್ರ  ಹೆಂಗ್ಯ"..!. "ಅಲ್ಲೋ ನಿಮ್ಮ ಯಡೆಯೂರ್ಸಪ್ಪ್ಗ ಯಡವಟ್ಟಪ್ಪಾ ಅಂತ್ ಹೆಸ್ರಿಟ್ಟಿದ್ರ ಬಾಳಾ ಚಲೋ ಇರ್ತಿತ್ತು ನೋಡೋ"?.

ಅಲ್ರೀ "ಬ್ಯಾಸ್ಗಿಯೋಳ್ಗ ಮಹಾರಾಷ್ಟ್ರಾದವ್ರು ಕೋಯ್ನಾ ಡ್ಯಾಂ ನಿಂದ್ ನಮ್ಮ ರಾಜ್ಯಕ್ಕ ನೀರು ಬಿಡ್ತಾರಲ್ರೀ"!...ಇದು ಹಂಗ್ ಕೊಡುಕೊಳ್ಳಿ ಪದ್ದತಿ, ಇರೋದ ಬಿಡ್ರೀ ಅದಕ್ಕ್ಯಾಗ ಸಿಟ್ಟಾಕ್ಕೀರಿ.

ಸಿಟ್ಟಲ್ಲೋ ಮಂಗ್ಯಾ, "ಭರವಸೆ ನೀಡಾಕು ಒಂದ್ ರೀತಿ-ರೀವಾಜು ಇರ್ತತೀ"!. "ಅದನ್ ಬಿಟ್ಟ ಓಟಿಗಾಗಿ ಆಲಮಟ್ಟಿ ಡ್ಯಾಮಿನಿಂದ ನೀರ್ ಬಿಡ್ತನಿ ಅನ್ನೋ ಮಾತು ಐತಲ್ಲ ಇದು ಸರಿಯಲ್ಲ". "ಇಲ್ಲೆ ನೋಡಿದ್ರ ವಾರದಿಂದಾ ಬೆಂಗಳೂರಾಗ "ಮಹದಾಯಿ ಸಮಸ್ಯಾ ಬಗೆ ಹರ್ಸಿ ನಮ್ಗ ಕುಡ್ಯಾಕ್ ನೀರ್ ಕೊಡ್ಸ್ರೀ", "ನಮ್ಗ ನ್ಯಾಯಾಕೊಡ್ಸ್ರೀ ಅಂತ್ ಗದಗ, ಧಾರವಾಡ-ಹುಬ್ಬಳ್ಳಿ, ನವಲಗುಂದ-ನರಗುಂದ ಕಡಿಂದ ಜನ್ರು ಬಂದು ಹೋರಾಟ ಮಾಡಾಕ ಹತ್ತಿದ್ರು ಅವ್ರಕಡಿಗೆ ತೀರ್ಗಿ ನೋಡಾಕ ಪುರ್ಸತ್ತ ಇಲ್ದ ನಿಮ್ಮ ಮುಖ್ಯಮಂತ್ರಿ, ಹೋಗಿ... ಹೋಗಿ ಮಾಹಾರಾಷ್ಟ್ರಕ್ಕ ನೀರ್ ಬಿಡ್ತನಿ ಅಂದ್ರ ಏನ್ ಹೇಳಬೇಕು"!. "ಇವ್ರಿಗೊಂದು ಭಾರತ್‍ರತ್ನಾ ಕೋಡ್ರೀ ಅಂತ್ ನಿಮ್ಮ ಕೇಂದ್ರ ಸರ್ಕಾರಕ್ಕ ಶಿಫಾರಸ್ ಮಾಡಬೇಕ್ ನೋಡ್"!. 

ಎಪ್ಪಾ..... "ಭಾರತ್‍ರತ್ನಾರಿ!, ಸುಮ್ಕಿರ್ರೀ... ಅದು ಸಾಮಾನ್ಯ ಪ್ರಶಸ್ತಿ ಅಲ್ಲಾ!  ಅದಕ್ ಭಾರೀ ಹೆಸ್ರು ಐತೀ"?. ಆ ಪ್ರಶಸ್ತಿ ನೀಡೋದ್ರ ಬಗ್ಗೆ ಎದ್ದೀರೋ ಗದ್ಲ ನೋಡ್ತಿರಿಲ್ಲ!.   "ಬಿಜೆಪಿಯವ್ರು ನಾವು ಸಾವರ್ಕರ್ಗ ಭಾರತ್‍ರತ್ನಾ ಕೋಡ್ತವಿ ಅಂದ್ರ, ಕಾಂಗ್ರೆಸ್ ಮುಖಂಡರು ಸಾವರ್ಕರ್ಗ ಕೋಡಬ್ಯಾಡ್ರಿ ಅಂತ್ ಒಬ್ಬರ ಮ್ಯಾಗ ಒಬ್ರು ಹೇಳ್ಕಿ ನೀಡಾಕ ಹತ್ಯಾರ್", ಮಾತಿಗೆ ಮಾತು ಬೆಳ್ದು ಮಾತಿನ್ಯಾಗ ಎರ್ಡು ಪಕ್ಷದ ಮುಖಂಡರು ಗುದ್ದಾಡಾಕ ಹತ್ಯಾರ್".  

"ಭಾರತ್‍ರತ್ನಾನ್ ನಮ್ಮ ಸಿದ್ದಗಂಗಾಮಠದ ಡಾ.ಶಿವಕುಮಾರ ಶ್ರೀಗಳಿಗೆ ಕೋಡ್ರೋ" ಅಂತ್ ಇಡಿ ರಾಜ್ಯದ ಜನಾ ಕೂಗಹಾಕಿದ್ರು ಕೋಡ್ಲಿಲ್ಲ ಈ ಮಂದಿ!. ಈಗ ನೋಡಿದ್ರ ಭಾರತ್‍ರತ್ನಾ ಪ್ರಶಸ್ತಿ ಬಗ್ಗೆ ಬಾಯಿಗಿ ಬಂದಂಗ್ ಒದ್ರಾಕ ಹತ್ಯಾರ್!. ನೀವು ನೋಡಿದ್ರ "ಯಡವಟ್ಟಪ್ಪ್ಗ ಭಾರತ್‍ರತ್ನಾ ಕೋಡ್ರೀ ಅಂತ್ ಮತ್ತ ಹೊಸಾರಾಗಾ ತಗಿಬ್ಯಾಡ್ರೀ"?.

ಅಲ್ಲೋ ಬರೀ "ಸವ್ಕಾರ್ಗೆ ಭಾರತ್‍ರತ್ನಾ ಕೊಟ್ರ.. ಬಡವರ್ಗೆ ಯಾವರತ್ನಾ ಕೊಡ್ತಾರ್".... 

ಅಲ್ರೀ... ಗಾದಿಮಾತ್ ಕೇಳಿರಿಲ್ಲ..ಬಡ್ವಾ ನಿ ಮಡ್ಗಿದಂಗ್ ಇರೂ ಅಂತ್" "ಬಡ್ವರಿಗೆ ಹೊಟ್ಟೀ ಕೂಳಿಂದ್ ಚಿಂತಿ, ಇಂದೇನ್ಪಾ, ನಾಳಿದ ಏನ್ಪಾ... ಅನ್ನೋ ಚಿಂತಿಯೋಳ್ಗ ಬಡ್ವರು ಚಿಂತಿಮಾಡಿ...ಮಾಡಿ ಕೂಳಿಲ್ದ ಸಣಕಲ ಆಗಾಕ ಹತ್ಯಾರ್". "ಬಡ್ವರಿಗೆ ಹೊಟ್ಟಿ ಕೂಳಿನ ಚಿಂತ್ಯಾದ್ರ, ಈ ಹೊಟ್ಟಿ ತುಂಬಿರೋ ಡೊಳ್ಳಹೊಟ್ಟಿಮಂದಿಗೆ ಎದ್ರೋ ಚಿಂತಿ ಅನ್ನೋಹಂಗ್ ಆಗೇತಿ.

ಏ ಬಸಣ್ಣ ಈ ಪ್ರಶಸ್ತಿ ಹೆಂಗ್ಯ ಆಗಾವು ಅಂದ್ರ, "ಒಂದಿಷ್ಟ ಮಂದೀ ಈ ಪ್ರಶಸ್ತಿಗಳನ್ನ ಪಡ್ಕೊಂತಾರ್...! ಇನ್ನು ಕೆಲ್ವ್ರು ಹೊಡ್ಕಂತಾರ್". ಅವ್ರರವ್ರ ತಾಕತ್ ಬಿಡೋ! ನಮ್ಗ್ಯಾಕ ಬೇಕ್ಪಾ ಈಪ್ರಶಸ್ತಿ ಸವಾಸ್?. ಹಾಳಾಗಿ ಹೋಗ್ಲಿ ಬಿಡೋ. "ಅಲ್ಲೋ ನಿಮ್ಮ ಸಿ.ಟಿ.ರವಿಗೆ ಏನಾಗೇತಿ?, ಅವಂಗ್ ಸಿ.ಟಿ.ರವಿ ಅನ್ನೋಬದ್ಲು ತೀಟಿ ರವಿ ಅಂತ್ ಹೆಸ್ರರಿಟಿದ್ರ ಹೊಂದತಿತ್ತ್ ನೋಡ್"!. ಅಲ್ಲೋ ಬಸಣ್ಣಾ... "ಅಕಾಡಮಿಗಳ್ಗೆ ಈ ಹಿಂದ್ ನೇಮ್ಕಾ ಆದೋರೆಲ್ಲಾ ಮನೆಹಾಳಜನ್ರು ಅಂತ್ ಟೀಕಾಮಾಡ್ಯಾನಲ್ಲ ಈ ಮನ್ಷ್ಯಾ" , "ಇವ್ರ ಸರ್ಕಾರ ನೇಮ್ಕಾ ಮಾಡೇತಲ್ಪಾ... ಈವ್ರೆಲ್ಲಾ ಎಷ್ಟ ಮನಿ ಉದ್ದಾರ ಮಾಡ್ಯಾರಂತೋ"?. ಇವ್ರೇನು ಕೆಲ್ಸಾ ಮ್ಯಾಡ್ಯಾರ ಅನ್ನೋದನ್ ರಾಜ್ಯದ ಜನ್ರಮುಂದ ಬಿಚ್ಚಿಡಾಕ ಹೇಳೋ!. "ಈ ವ್ಯಕ್ತಿ ಹಿಂಗ್ ಹೇಳ್ಕಿ ನೀಡ್ತಾ ಹೋದ್ರ ಎಲ್ಲೋ ಇರ್ಬೇಕಾದವ್ನ ತಂದು ಮಂತ್ರಿ ಪಟ್ಟಕೊಟ್ಯಾರ್ ಅಂತ್ ಜನ ತಿಳ್ಕಾಬಹ್ದು"!, "ಮಾತಿಗೂ ಒಂದ್ ಮೀತಿ ಇರ್ಬೇಕು"!, "ನಿಮ್ಮ ಮಂತ್ರಿಗೆ ನಿಮ್ಮ ಯಡೆಯೂರ್ಸಪ್ಪ ಹುಡ್ಕಾಡಿ ಸಂಸ್ಕ್ರತಿ ಖಾತೆ ಕೊಟ್ಟಾರ್", "ಎಲ್ಲಾ ಖಾತೆಕ್ಕೂ ಇಂತರ್‍ನ ಮಂತ್ರಿ ಮಾಡಿದ್ರ ಮುಗಿತು, ನಿಮ್ಮ ಸರ್ಕಾದ ಗತಿ ಗೋವಿಂದಾ... ಗೋವಿಂದಾ" "ಇವಂದೇನ ಬಾಯಿ ಅದೇನ್ .......ಬೊಂಬಾಯ್". ಛೇ...ಛೇ... ಅದೇನ ಸಂಸ್ಕ್ರತಿ ಇಲ್ದಂಗ್ ಮಾತಾಡ್ತಾನ್ಪಾ ಈಮನ್ಷ್ಯಾ. ಇವ್ನ ಬಗ್ಗೆ ಮಾತಾಡ್ಯಾಕ್ ಹೋದ್ರ ನಾಲ್ಗಿನ ಹೊಲ್ಸ್ ಆಕೈತಿ"!. 

ಹೋಗ್ಲಿ ಬಿಡ್ರೀ ಕಾಕಾ, "ರಾಜಕೀಯದಾಗ ಎಲ್ಲಾ ನಮೂನಿ ಜನಾನು ಇರ್ತಾರ್"!. "ಹಿಂದ್ ನೇಮ್ಕಾ ಆದೋರೊಳ್ಗ ಒಂದಿಷ್ಟ್ ಮಂದಿ ಚಲೋ ಇದ್ರು, ಒಂದಿಷ್ಟಮಂದಿ ಹೆಸ್ರ ಕೆಡ್ಸಿಕೊಂಡೋರು ಇದ್ರು".ಅದ್ಕ ನಮ್ಮ ಮಂತ್ರಿ ಅಂತೋರ್ನ ಮನಿಹಾಳ ಮಂದಿ ಅಂದಿರಬೋದು"! ಅವ್ರಪಾಡಿಗೆ ಅವ್ರು ಒಂದ್ರಿಕೊಂಡ್ ಹೋಗತೀರ್ತಾರ್. ಇಂತವ್ರ ಮಾತಿಗೆ ಕಿಮ್ಮತ್ತ್ ಕೋಡಬಾರ್ದರೀ. ಹೋಗ್ಲಿ ಬರ್ರೀ. ಮಾತಾಡಿ ಮಾತಾಡಿ ಗಂಟ್ಲಾ ಒಣಗೇತಿ . ಗಂಗಮ್ಮನ ಅಂಗ್ಡಿಗೆ ಹೋಗಿ ಶುಂಠಿ ಕಾಡೆ  ಕುಡೇನ ನಡ್ರೀ ಎಂದ್ ಬಸ್ಯಾನ ಕಾಕಾನ ಜೊತಿಗೆ ಗಂಗಮ್ಮನ ಚಾ ಅಂಗ್ಡಿ ಕಡೆಗೆ ನಡೆದ.