ಇನ್ಮುಂದೆ ಹುಟ್ಟೋರೆಲ್ಲ ಗಂಡಸರೇ ಆದ್ರೆ !!!??? 

ಇನ್ಮುಂದೆ ಹುಟ್ಟೋರೆಲ್ಲ ಗಂಡಸರೇ ಆದ್ರೆ !!!??? 

ಹೌದು. ಇನ್ಮುಂದೆ ಹುಟ್ಟೋರೆಲ್ಲ ಗಂಡಸರೇ! ಹಾಗಂತ ಎಚ್ಚರಿಕೆ ನೀಡುತ್ತಿದ್ದಾರೆ ವಿಜ್ಞಾನಿಗಳು. ಗಂಡು ಮಗುವಿಗೆ ಪ್ರಾಶಸ್ತ್ಯ ನೀಡುವುದು, ನಾಗರಿಕತೆಗಳ ಉಗಮದ ಕಾಲದಿಂದಲೂ ನಡೆದು ಬಂದ ವಿಚಾರ. ದೈಹಿಕವಾಗಿ ಬಲಶಾಲಿಯೆಂಬ, ರಾತ್ರಿಯಿಡೀ ನಿರ್ಭೀತಿಯಿಂದ ತಿರುಗಬಲ್ಲವನೆಂಬ ಎರಡು ‘ಅರ್ಹತೆ ‘ ಗಳು ಎಲ್ಲರೂ ಗಂಡು ಮಗುವನ್ನು ಪಡೆಯಲು ಇನ್ನಷ್ಟು ಉತ್ಸುಕತೆ ತೋರುವಂತೆ ಮಾಡಿದೆ. ಆದರೆ ವಿಚಾರ ಅದಲ್ಲ. 

ಕೆಲವೊಂದು ರಾಸಾಯನಿಕಗಳು ಮಾನವನ ವೀರ್ಯದಲ್ಲಿನ ಎಕ್ಸ್ – ಕ್ರೋಮೋಸೋಮ್ ಭರಿತ ವೀರ್ಯಾಣು, ಅಂಡಾಣು ಫಲವೃದ್ದಿ ಮಾಡುವುದನ್ನು ನಿಧಾನಗೊಳಿಸುತ್ತವೆ. ಈ ತಂತ್ರಜ್ಞಾನ ಬಳಸಿ ಕೆಲವೊಂದು ಜೆಲ್ ಗಳು ಮಾರುಕಟ್ಟೆಗೆ ಬಂದು ಗಂಡು ಮಗುವನ್ನೇ ಬಯಸುವ ದಂಪತಿಗಳಿಗೆ ವರವಾಗಬಲ್ಲದು ಎಂದು ಎಚ್ಚರಿಸುತ್ತಿದ್ದಾರೆ ವಿಜ್ಞಾನಿಗಳು. ಇಸ್ಟೊನಿಯಾ ದ ಟಾರ್ಟ್ ಯೂನಿವರ್ಸಿಟಿ ಯ ಆಲಿ ರೇಜ ಫಾಜೇಲಿ ಯವರು ‘ಇದರಿಂದಾಗುವ ಸಾಮಾಜಿಕ ಪರಿಣಾಮದ ಬಗ್ಗೆ’ ಆತಂಕಗೊಂಡಿದ್ದೇನೆ ಎನ್ನುತ್ತಾರೆ. 

ಮೊದಲಿಗೆ ಎಲ್ಲರೂ ಅಂದುಕೊಂಡಿದ್ದು, ಸಸ್ತನಿಗಳ ಹೆಣ್ಣು ಹಾಗೂ ಗಂಡು ಜೀವದ ಉಗಮಕ್ಕೆ ಕಾರಣವಾಗುವ ವೀರ್ಯಾಣುವು ಒಂದೇ, ಆದರೆ ಅದರಲ್ಲಿನ ಡಿ ಎನ್ ಎ ಮಾತ್ರ ಬೇರೆ ಬೇರೆ ಎಂದು. ಆದರೆ ಜಪಾನ್ ನ ಹಿರೋಷಿಮಾ ವಿಶ್ವ ವಿದ್ಯಾನಿಲಯದ ಮಸಾಯುಕಿ ಷಿಮಾದ ಮತ್ತು ಸಹೋದ್ಯೋಗಿಗಳು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿರುವುದೇನೆಂದರೆ, ವೀರ್ಯದಲ್ಲಿ 500 ಜೀನ್ ಗಳು ಎಕ್ಸ್ ಕ್ರೋಮೋಸೋಮ್ ನಲ್ಲಿ ಕಾರ್ಯೋನ್ಮುಖವಾಗಿದ್ದರೆ ಅದು ಹೆಣ್ಣು ಮಗುವಿನ ಜನನಕ್ಕೂ, ವೈ ಕ್ರೋಮೋಸೋಮ್ ನಲ್ಲಿ ಕಾರ್ಯೋನ್ಮುಖವಾಗಿರದಿದ್ದರೆ  ಗಂಡು ಮಗುವಿನ ಜನನಕ್ಕೆ ಕಾರಣವಾಗುತ್ತದೆ ಎಂದು. ಈ ಜೀನ್ ಗಳ ವೀರ್ಯಾಣುವಿನ ಹೊರ ಮೇಲ್ಮೈಗೆ ಪ್ರೋಟೀನ್ ನ 18ಕೋಡ್ ಗಳು ಅಂಟಿಕೊಂಡಿರುತ್ತವೆ. ಈ ತಂಡವು ಇದಕ್ಕೆ ಸಂಬಂಧಿಸಿದಂತೆ ಪತ್ತೆ ಹಚ್ಚಿರುವುದೇನೆಂದರೆ,  ಈ ಎರಡು ಪ್ರೋಟೀನ್ ಗಳನ್ನು ಒಂದುಗೂಡಿಸುವ ಕೆಲ ರಾಸಾಯನಿಕಗಳು, ವೈ ಕ್ರೋಮೋಸೋಮ್ ಹೊಂದಿರುವ ವೀರ್ಯಾಣುವಿಗೆ ಹಾನಿ ಮಾಡದಂತೆ, ಎಕ್ಸ್ ಕ್ರೋಮೋಸೋಮ್ ಹೊಂದಿರುವ ವೀರ್ಯಾಣುವಿನ ಚಲಿಸುವ ವೇಗವನ್ನು ತಗ್ಗಿಸುತ್ತವೆ. 

ಈ ಸಂಶೋಧನೆಯ ಅನುಸಾರ ವೀರ್ಯಾಣುವು ಯಾವ ಮಗುವನ್ನು ಉತ್ಪಾದಿಸುತ್ತದೆ ಎಂಬುದಾಗಿ ವಿಂಗಡಿಸಬಹುದಾಗಿದೆ. ಸಂಶೋಧಕರು ಈ ವಿಧಾನವನ್ನು ಇಲಿಗಳ ವೀರ್ಯದ ಮೇಲೆ ಪ್ರಯೋಗಿಸಿದಾಗ ಅವರಿಗೆ ಕಂಡು ಬಂದದ್ದೇನೆಂದರೆ, ವೇಗವಾಗಿ ಚಲಿಸಬಲ್ಲ ವೀರ್ಯಾಣುವು ಶೇ.90 ರಷ್ಟು ಗಂಡು ಇಲಿಗಳ ಜನನಕ್ಕೆ ಕಾರಣವಾಗಿತ್ತು. ಹಾಗೆಯೇ ವೀರ್ಯಾಣುವನ್ನು ನಿಧಾನವಾಗಿ ಚಲಿಸುವಂತೆ ಮಾಡಿದಾಗ ಹುಟ್ಟಿದ ಇಲಿಗಳು ಶೇ.81 ರಷ್ಟು  ಹೆಣ್ಣಾಗಿದ್ದವು. 

ಸಂಶೋಧಕರು ಪ್ರಾಣಿಗಳ ಮೇಲೆ ಪ್ರಯೋಗಿಸಿದಾಗ ಅವರಿಗೆ ತಿಳಿದು ಬಂದದ್ದೇನೆಂದರೆ, ಹಸು ಮತ್ತು ಹಂದಿಗಳಲ್ಲಿಇದು  ಯಶಸ್ವಿಯಾಗಿದೆ ಎಂದು. ಆದರೆ ಇದನ್ನು ಅವರು ಮನುಷ್ಯರ ವೀರ್ಯದ ಮೇಲೆ ಪ್ರಯೋಗಿಸಿಲ್ಲ. ಆದರೆ ಷಿಮಾದ ರವರು ‘ಇದು ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ ‘ ಎಂದಿದ್ದಾರೆ.ಕೊಲರಾಡೋ ಸ್ಟೇಟ್ ಯೂನಿವರ್ಸಿಟಿ ಯ ಜಾರ್ಜ್ ಸಿಡೆಲ್ ಹೇಳುವಂತೆ’ ಇದನ್ನು ನಂಬಬಹುದಾಗಿದೆ ‘ ಇನ್ನು ಹತ್ತು ವರ್ಷಗಳಲ್ಲಿ ಮಾನವನ ವೀರ್ಯಾಣು ವಿಂಗಡನೆಯನ್ನು ವಾಣಿಜ್ಯ ಲಾಭಕ್ಕೆ ಬಳಸಿಕೊಳ್ಳಬಹುದು ಎಂದು. 

ಆದರೆ ಫಾಜೇಲಿ ಯೋಚಿಸುವುದೇನೆಂದರೆ ಇದಕ್ಕಾಗಿ ಅತಿವೇಗದ ಅಥವಾ ನಿಧಾನಗತಿಯ ವೀರ್ಯಾಣುವನ್ನು ಆಯ್ಕೆ ಮಾಡುವ ಅವಶ್ಯಕತೆಯಿಲ್ಲ, ಹೇಗೆ ಪ್ರಾಣಿಗಳಲ್ಲಿ ಬೇಕಾದ ಕರುವನ್ನು ಪಡೆಯಲು ಕೃತಕ ಗರ್ಭದಾರಣೆ ವಿಧಾನ ಬಳಸುವಂತೆ, ಈ ಬೇರ್ಪಡಿಸುವ ರಾಸಾಯನಿಕಗಳನ್ನು ಒಂದು ಜೆಲ್ ಅಥವಾ ನೊರೆಯಲ್ಲಿ ಸೇರಿಸಿ ಅದನ್ನು ಗರ್ಭಧಾರಣೆಗೂ ಮುಂಚೆ ಮಹಿಳೆಯರು ಬಳಸಿದಲ್ಲಿ, ಗಂಡು ಮಗುವಿನ ಜನನಕ್ಕೆ ಕಾರಣವಾಗುವ ಅಂಶಗಳನ್ನು ಹಾಗೂ ಪರಿಸ್ಥಿತಿಗಳನ್ನು ಹೆಚ್ಚಿಸಬಹುದು ಎಂದು. ಇದನ್ನು ಸಿಡೆಲ್ ರವರು ಕೂಡ ಒಪ್ಪುತ್ತಾರೆ. 

ಇಂತಹ ಒಂದು ರಾಸಾಯನಿಕ ಸಾಧನಗಳಿಗೆ ಬಹುಶಃ ಹೆಣ್ಣು ಲಿಂಗಾನುಪಾತ ಜಾಸ್ತಿ ಇರುವ ದೇಶಗಳಲ್ಲಿ ಬೇಡಿಕೆ ಬರಬಹುದೇನೋ? !.ಅತಿ ಕಡಿಮೆ ವೆಚ್ಚದ ಹಾಗೂ ಸುಲಭವಾಗಿ ಬಳಸಲ್ಪಡುವ ಸಾಧನಗಳು, ಹೆಣ್ಣು ಮಕ್ಕಳಿಗೆ ಬರವಿರುವ ದೇಶಗಳಲ್ಲಿ ಬಳಕೆಗೆ ಬರುತ್ತವೆ ಎಂದಿದ್ದಾರೆ ನೆದರ್ಲ್ಯಾಂಡ್ ನ ಮಾಸ್ಟ್ರಿಕ್ಟ್ ಯೂನಿವೆರ್ಸಿಟಿಯ ಬಯೋ ಎಥಿಸ್ಟ್ ವಾಯ್ಬೋ ಡಾನ್ ಡಾರ್ಫ್. 

ಈಗಾಗಲೇ ಭ್ರೂಣದ ಲಿಂಗ ಪತ್ತೆಗೆ ಹಲವಾರು ವಿಧಾನಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಪ್ರಿ ಇಂಪ್ಲಾಂಟೇಷನ್ ಜೆನೆಟಿಕ್ ಡಯಗ್ನೋಸಿಸ್ ವಿಧಾನವು ಶೇ.100 ರಷ್ಟು ಪರಿಣಾಮಕಾರಿಯಾಗಿದ್ದು ಬಳಸಲು ದುಬಾರಿಯಾಗಿದೆ. ಇನ್ನೊಂದು ವಿಧಾನವನ್ನು ಸಿಡೆಲ್ ರವರೆ ಅಭಿವೃದ್ಧಿ ಪಡಿಸಿದ್ದು, ಅದರ ಪ್ರಕಾರ ವೀರ್ಯಕ್ಕೆ ಫ್ಲ್ಯೂರೋಸೆಂಟ್ ಡೈ ಯನ್ನು ಹಾಕಿದಾಗ ಡಿ ಎನ್ ಎ ಜಾಸ್ತಿ ಇರುವ ಎಕ್ಸ್ ಕ್ರೋಮೋಸೋಮ್ ವೀರ್ಯಾಣುವು, ಗಾಢ ಬಣ್ಣದ್ದಾಗಿ ಗೋಚರಿಸುತ್ತದೆ. ವೈ ಕ್ರೋಮೋಸೋಮ್ ನಲ್ಲಿ ಡಿ ಎನ್ ಎ ಕಡಿಮೆ ಇರುವ ಕಾರಣ ಅದು ತಿಳಿ ಬಣ್ಣದ್ದಾಗಿ ಕಾಣುತ್ತದೆ. ಈ ಫ್ಲೋ ಸೈಟೊಮೇಟಿರಿ  ವಿಧಾನ ಶೇ.82 ರಷ್ಟು ಗಂಡು ಮಗುವಿನ ಜನನಕ್ಕೆ ಕಾರಣ, ಹಾಗೂ ಶೇ.93. ಹೆಣ್ಣು ಮಗುವಿನ ಜನನಕ್ಕೆ ಕಾರಣವಾಗುವ ವೀರ್ಯಾಣುವನ್ನು ಪತ್ತೆ ಹಚ್ಚುತ್ತದೆ . ಈ ವಿಧಾನದ ಬಳಕೆಗೂ ನುರಿತ ಪರಿಣಿತರ ಹಾಗೂ ಸಲಕರಣೆಗಳ ಅಗತ್ಯವಿರುತ್ತದೆ. 

ಭ್ರೂಣದ ಲಿಂಗ ಪತ್ತೆಯು ವೈದ್ಯಕೀಯೇತರ ಉಪಯೋಗಕ್ಕಾಗಿ ಯುಕೆ, ಆಸ್ಟ್ರೇಲಿಯಾ, ಕೆನಡಾ, ಚೀನಾ ಮತ್ತು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಇನ್ನಿತರ ದೇಶಗಳಲ್ಲಿ ಇದು ಕಾನೂನು ಪ್ರಕಾರ ನ್ಯಾಯಯುತವಾಗಿದ್ದು, ಅಮೆರಿಕವನ್ನೊಳಗೊಂಡಂತೆ ಇದನ್ನು ‘ ಕುಟುಂಬ ಸಮತೋಲನ ‘  ಕ್ಕಾಗಿ ಉಪಯೋಗಿಸಲಾಗುತ್ತಿದೆ. ಷಿಮಾದ ರವರ ಈ ಸಂಶೋಧನೆಯು ವೀರ್ಯಾಣುವಿನ ವಿಂಗಡನೆಯನ್ನು ಸುಲಭಗೊಳಿಸಿ, ಮತ್ತು ಎಲ್ಲರಿಗೂ ಸಿಗುವಂತಾಗಿದ್ದು ದುರ್ಬಳಕೆಗೆ ಒತ್ತು ನೀಡುವಂತಿದೆ. ಷಿಮಾದ ರವರು ‘ಈ ಹೊಸ ಲಿಂಗ ಪತ್ತೆಯು ಪ್ರಸ್ತುತ  ಇರುವ ವಿಧಾನಗಳಿಗಿಂತ ಸುಲಭವಾಗಿದ್ದು, ನಾನೂ ಕೂಡ ಮುಂಬರುವ ಸಮಸ್ಯೆಯ ಪರಿಣಾಮದ ತೀವ್ರತೆಯ ಬಗ್ಗೆ ಚಿಂತಿತನಾಗಿದ್ದೇನೆ ಎಂದಿದ್ದಾರೆ. 

ಒಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಹುಟ್ಟುವ ಮೊದಲೂ ಹುಟ್ಟಿದ ನಂತರವೂ ದೇವರೇ ಕಾಪಾಡಬೇಕು !!!!?