ಅಯೋಧ್ಯೆ ವಿವಾದ: ಸುದೀರ್ಘ ವಿಚಾರಣೆಯ ಎರಡನೇ ದಾಖಲೆ

ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಎರಡನೇ ಅತಿ ಸುದೀರ್ಘ ವಿಚಾರಣೆ ಎಂಬ ದಾಖಲೆಗೆ ಅಯೋಧ್ಯೆಯ 2.77 ಎಕರೆ ಭೂಮಿ ವಿವಾದ ಕಾರಣವಾಗಿದೆ..

ಅಯೋಧ್ಯೆ ವಿವಾದ: ಸುದೀರ್ಘ ವಿಚಾರಣೆಯ ಎರಡನೇ ದಾಖಲೆ

ಸಂವಿಧಾನದ ಮೂಲಭೂತ ಹಕ್ಕುಗಳ ಕುರಿತಂತೆ 1973 ರಲ್ಲಿ ಅಭೂತಪೂರ್ವ ತೀರ್ಪನ್ನ 13 ನ್ಯಾಯಾಧೀಶರಿರುವ ಪೀಠ ಕೊಟ್ಟಿದ್ದು ಕೇಶವಾನಂದ ಭಾರತಿ ಪ್ರಕರಣದಲ್ಲಿ. ಇದರ ವಿಚಾರಣೆ 68 ದಿನಗಳು ನಡೆದಿತ್ತು. ಅದಾದ ಬಳಿಕ ಅಯೋಧ್ಯೆ ವಿಚಾರದ್ದೇ 40 ದಿನ ವಿಚಾರಣೆ ಐವರು ನ್ಯಾಯಾಧೀಶರ ಪೀಠದೆದುರು ನಡೆದಿದೆ. ಇದರ ನಂತರದ ಮೂರನೇ ಸ್ಥಾನದಲ್ಲಿ ಆಧಾರ್ ಕಾರ್ಡಿನ ವಿಚಾರದಲ್ಲಿ 38 ದಿನಗಳ ಕಾಲ ನಡೆದಿದ್ದಾಗಿದೆ.

ನವೆಂಬರ್ 17 ಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತರಾಗುತ್ತಿದ್ದು, ಅಷ್ಟರೊಳಗೆ ಐತಿಹಾಸಿಕ ತೀರ್ಪು ಕೊಟ್ಟೇ ಬಿಡಬೇಕೆಂಬ ನಿಲುವಿನಿಂದ ವಿದೇಶ ಪ್ರವಾಸವನ್ನೂ ರದ್ದುಗೊಳಿಸಿ, ಇಂದಿನಿಂದ ಗುಪ್ತ ಕಲಾಪ ನಡೆಸುತ್ತಾರೆ.  ಕಾಯ್ದಿರಿಸಿರುವ ತೀರ್ಪಿನಿಂದಾಗಿ ದೃಶ್ಯ ಸುದ್ದಿ ಮಾಧ್ಯಮಗಳು 1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿ ದ್ವಂಸದ ಘಟನೆಗಳನ್ನ ಪ್ರಸಾರಿಸುವಂತಿಲ್ಲ, ತೀರ್ಪಿನ ಬಳಿಕದ ವಿಜಯೋತ್ಸವ, ಪ್ರತಿಭಟನೆಗಳಂಥವನ್ನ ಪ್ರಸಾರ ಮಾಡಬಾರದು, ಈ ವಿಚಾರದ ಕುರಿತಂತೆ ಚರ್ಚೆಗಳನ್ನ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. 

ಮೊಘಲ್ ಆಳ್ವಿಕೆಯ ಬಾಬರ್ ಈ ಮಸೀದಿ ಕಟ್ಟಿದ ಎಂಬುದಕ್ಕೆ ಆಧಾರಗಳೇನು ಎಂಬುದರಿಂದ ಹಿಡಿದು 1860 ರಲ್ಲಿ ಆಂಗ್ಲರು ಬಾಬರಿ ಮಸೀದಿ ನಿರ್ವಹಣೆಗಾಗಿ ಅನುದಾನ ಕೊಟ್ಟಿದ್ದರು ಎಂಬ ಅಂಶ ಹೇಳಿದರೆ, 1855 ರಿಂದಲೇ ಹಿಂದೂಗಳ ಸ್ವಾಧೀನದಲ್ಲಿ ಈ ಸ್ಥಳ ಇದೆ ಎಂಬುದನ್ನೂ ಉಲ್ಲೇಖಿಸಲಾಗಿದೆ.

ಮಸೀದಿ ಗುಮ್ಮಟವಿದ್ದ ಕೆಳ ಜಾಗವೇ ರಾಮ ಜನ್ಮಸ್ಥಳ ಎಂಬುದಕ್ಕೆ ನಿನ್ನೆಯೂ ಹಿಂದು ಪರವಾಗಿ ವಕೀಲ ವಿಕಾಸ್ ಸಿಂಗ್ ಸಲ್ಲಿಸಿದ ನಕ್ಷೆಸಮೇತದ ಪುಸ್ತಕವನ್ನ ನ್ಯಾಯಾಲಯದ ಗಮನಕ್ಕೆ ತರಲಾಯಿತು, ಮುಸ್ಲಿಂ ಪರವಾಗಿನ ರಾಜೀವ್ ಧವನ್ ಇದನ್ನ ಆಕ್ಷೇಪಿಸಿದರು. ಪೀಠದಲ್ಲಿದ್ದ ನ್ಯಾಯಾಧೀಶರು ಹೇಳಿದ ಮೇರೆ  ಆ ಹಾಳೆಗಳನ್ನ ಧವನ್ ಹರಿದು ಹಾಕಿದರು. ಆದರೆ ಮಾಧ್ಯಮಗಳು ಹಾಳೆ ಹರಿದು ಹಾಕಿದ್ದನ್ನೇ ಪ್ರಧಾನವಾಗಿ ಪ್ರಸಾರ ಮಾಡಿದವೇ ಹೊರತು, ನ್ಯಾಯಾಧೀಶರ ಮಾತಿನ ಮೇರೆಗೆ ಎಂಬುದನ್ನ ಹೇಳಲೇ ಇಲ್ಲ. ಇದನ್ನೂ ಗಮನಿಸಿರುವ ನ್ಯಾಯಾಧೀಶರು ಕೂಡ, ನಾವು ಹೇಳಿದ್ದರ ಮೇರೆಗೆ ಎಂಬುದನ್ನ ಪ್ರಚಾರ ಮಾಡಿ ಎಂದು ಹೇಳಿಯಾಗಿದೆ.

ಇದು ಕೇವಲ 2.77 ಎಕರೆ ಕೇವಲ ಭೂಮಿಯಾಗಿರದೆ ಇಡೀ ಭಾರತದ ರಾಜಕೀಯ ದಿಕ್ಕನ್ನೇ ಬದಲಿಸಿದ ವಿವಾದವಾಗಿದೆ.