ಸೊಟ್ಟನಾಗಪ್ಪನ ಗೊರಕೆ ಮತ್ತು ಕಮ್ತ

ಯಾವ ಕಾರಣಕ್ಕೊ ಏನೋ ನಾಗಪ್ಪ ಕೊನೆವರೆಗೂ ಬ್ರಹ್ಮ‌ಚಾರಿಯಾಗಿಯೆ ಉಳಿದ. ಇರುವವರೆಗೂ ಅವರಿವರಿಗಾಗಿಯೆ ಬದುಕಿದ. ಮನೆಯಲ್ಲಿದ್ದಾಗ ಅಣ್ಣತಮ್ಮಂದಿರನ್ನು ಪ್ರೀತಿಸಿದ. ನಮ್ಮ ಮನೆಯಲ್ಲಿದ್ದಾಗ ನಮ್ಮನ್ನೆಲ್ಲ ಪ್ರೀತಿಸಿದ.  ತನಗಾಗಿ ಯಾವುದಕ್ಕೂ ಹಂಬಲಿಸದೇ ಹೋದ ಅವನ ನಿರ್ವ್ಯಾಜ ಪ್ರೇಮ ಇಂದಿಗೂ ಅವನನ್ನು ದೊಡ್ಡವನನ್ನಾಗಿಯೆ ಉಳಿಸಿದೆ.

ಸೊಟ್ಟನಾಗಪ್ಪನ ಗೊರಕೆ ಮತ್ತು ಕಮ್ತ

ನಮ್ಮ ಊರಿನಲ್ಲಿ ಎಷ್ಟೊಂದು ಜನಜನಿತವಾಗಿದ್ದವೆಂದರೆ ಅವು ಇಂದಿಗೂ ಊರ ಜನರ ಬಾಯಲ್ಲಿ ಸಾಂದರ್ಭಿಕ ಉಪಮಾನಗಳಾಗಿ ಬಳಕೆಯಲ್ಲಿವೆ.

ಯಾರಾದರೂ ಕಡದು,(ಕಡದು ಎಂದರೆ ಹೊಲವನ್ನು ಕಡಿದಾಗಿ ಅಂದರೆ ಆಳವಾಗಿ ಉಳುಮೆ ಮಾಡಲು ಮಿಣಿಯನ್ನು ಸಡಿಲುಗೊಳಿಸುವ ಬಗೆ) ಬಳದು( ಬಳದು ಎಂದರೆ ಮಿಣಿಯನ್ನು ಬಿಗಿಗೊಳಿಸಿದಂತೆ ಉಳುಮೆ‌ಯ ಸಾಧನ ನೊಗಕ್ಕೆ ಹತ್ತಿರವಾದಂತೆ ನೆಲದ ಮೇಲ್ಪದರವನ್ನಷ್ಟೆ ಊಳುವ ಬಗೆ) ಸರಿಯಾಗಿ ನೋಡಿಕೊಳ್ಳದೇ, ಹರುಕುಮುರುಕಾಗಿ ಹೊಲ ಹೊಡೆಯುತಿದ್ದರೆ  `ಸೊಟ್ಟನಾಗಪ್ಪ‌ನ ಕಮ್ತ ಎಲ್ಲಿ ಕಲ್ತಲೆ ನೀನು' ಎಂದವರು ಕಂಡವರಿಂದ ಬೈಸಿಕೊಳ್ಳುವುದು ಗ್ಯಾರಂಟಿ. ಏಕೆಂದರೆ, ನಮ್ಮ ಸೊಟ್ಟನಾಗಪ್ಪನ ಕಮ್ತವೆ ಹಾಗಿತ್ತು. ಹೊಲದಲ್ಲಿ ಗಳೇ ಹೂಡಿಕೊಂಡು `ಚಾ ಬಸವಾ' ಅನ್ನುವುದಷ್ಟೇ ಅವನಿಗೆ ಗೊತ್ತಿತ್ತು. ರಂಟೆಯಾಗಲಿ, ಕುಂಟೆಯಾಗಲಿ ನೆಲ ಮಿದುವಿದೆಯೋ, ಯಟ್ಟಿ(ಬಿರುಸು/ಗಟ್ಟಿ) ಯಾಗಿದೆಯೋ, ಅದು ಎತ್ತಿಗೆ ಎಳೆಯಲು ಬಿಗುವಾಗುತ್ತೊ, ಹಗುರವಾಗುತ್ತೋ ಹೇಗೆ? ಕಡದು ಅಥವಾ ಬಳದು ಮಾಡಿಕೊಂಡರೆ ಹೊಲದ ಹೊಡ್ತ ಪಾಡ ಆಗುತ್ತೊ ಏನೋ ಎಂಬುದೊಂದನೂ  ಯೋಚಿಸುವ ಗೊಡವೆಗೆ ನಾಗಪ್ಪ ಹೋಗುತ್ತಲೇ ಇರಲಿಲ್ಲ. ಹೀಗಾಗಿ ಹೊಲ ಹೊಡೆಯಲು ನಾಗಪ್ಪನ ಜೊತೆಗೆ ಒಬ್ಬರು ಹೋಗಲೇಬೇಕಿತ್ತು ಮತ್ತು ಇದಕ್ಕಾಗಿ ಅವನು ಯಾವಾಗಲೂ ಅಜ್ಜ, ಅಪ್ಪನಿಂದ ಬೈಸಿಕೊಳ್ಳುತ್ತಲೆ ಇದ್ದ. ಅವರು ಇವನ ಹೊಲದ ಹೊಡ್ತವನ್ನು ನೋಡಿ `ಕಡದು ಆಗಿದೆ, ಎತ್ತಿಗೆ ಭಾಳ ತ್ಯಗೂ(ತ್ರಾಸು) ಆಕ್ಕತಿ ಬಳದು ಮಾಡ್ಕೊ ನಾಗಪ್ಪ ಅಂದೋ, ತೀರ ಬಳದು ಆಗಿದೆ, ಹುಲ್ಲು ಜಾರ್ತಾ ಇದೆ ಇನ್ನೊಂಚೂರು ಕಡದ ಮಾಡ್ಕೊ' ಎಂದು, ಹೇಳಿದ ಮೇಲೆಯೆ, ನಾಗಪ್ಪ ಅದನ್ನು ತಿದ್ದಿಕೊಂಡು ಹೊಲ ಹೊಡೆಯುತಿದ್ದ.

ಕಮ್ತದ ವಿಷಯದಲ್ಲಿ ನಾಗಪ್ಪ ಕೊನೆವರೆಗೂ ಸುಧಾರಿಸಲೇ ಇಲ್ಲ. ಯಾರು ಎಷ್ಟೆ ಹೇಳಿದರೂ ಅವನು ತನಗೆ ತಿಳಿದಂತೆ, ತಿಳಿದಷ್ಟು ಕೆಲಸ ಮಾಡಿ  ಬರುತಿದ್ದ. ಹೀಗಾಗಿ ಅವನು ಯಾವಾಗಲೂ ಬೈಸಿಕೊಂಡೇ ಇರಬೇಕಾಗಿತ್ತು. ಇದಕ್ಕಾಗಿ ಅವನೆಂದೂ ಬೇಸರಪಟ್ಟಿದ್ದಾಗಲಿ, ನೊಂದಿದ್ದಾಗಲಿ ಯಾರಿಗೂ ಗೊತ್ತಿಲ್ಲ. ಬೈಸಿಕೊಂಡಾಗಲೆಲ್ಲ ` ಪಡಿಪಾಟಲಪ ಮಾರಾಯಾ' ಅಂದುಕೊಳ್ಳುತ್ತ ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಟ್ಟುಬಿಡುತಿದ್ದ. ಮತ್ತೂ ಏನೂ ಆಗಿಯೇ ಇಲ್ಲವೆಂಬಂತೆ ಸಹಜವಾಗಿಯೇ ಇದ್ದುಬಿಡುತಿದ್ದ. ಬೈಸಿಕೊಳ್ಳೊದೆ ತನ್ನ ಆಜನ್ಮ ಸಿದ್ಧ ಹಕ್ಕು ಎಂಬಂತೆ ನಾಗಪ್ಪ ಬೈಗುಳಗಳನ್ನೆಲ್ಲ ಉಢಾಫೆ ಮಾಡಿ ನಕ್ಕು ಬಿಡುತಿದ್ದ. ಬೈದವರನ್ನು  ಬಂಧುಗಳೆಂಬೆ ಎಂಬ ಶರಣರ ವಚನಕ್ಕೆ ಅವನ ಮನೋಭಾವ ಹೇಳಿ ಮಾಡಿಸಿದಂತಿತ್ತು. ತನಗೆ ಬೈದವರನ್ನು ತಾನೇ ಮೊದಲಾಗಿ ಮಾತನಾಡಿಸಿ ಮುದಗೊಳಿಸುತಿದ್ದ. ನಾಗಪ್ಪನ ಈ ಸ್ಥಿತಪ್ರಜ್ಞತೆ ನನಗಿಂದಿಗೂ ಅಚ್ಚರಿಯ ಸಂಗತಿಯಾಗಿಯೆ ಉಳಿದಿದೆ.

ಯಾವ ಕಾರಣಕ್ಕೊ ಏನೋ ನಾಗಪ್ಪ ಕೊನೆವರೆಗೂ ಬ್ರಹ್ಮ‌ಚಾರಿಯಾಗಿಯೆ ಉಳಿದ. ಇರುವವರೆಗೂ ಅವರಿವರಿಗಾಗಿಯೆ ಬದುಕಿದ. ಮನೆಯಲ್ಲಿದ್ದಾಗ ಅಣ್ಣತಮ್ಮಂದಿರನ್ನು ಪ್ರೀತಿಸಿದ. ನಮ್ಮ ಮನೆಯಲ್ಲಿದ್ದಾಗ ನಮ್ಮನ್ನೆಲ್ಲ ಪ್ರೀತಿಸಿದ.  ತನಗಾಗಿ ಯಾವುದಕ್ಕೂ ಹಂಬಲಿಸದೇ ಹೋದ ಅವನ ನಿರ್ವ್ಯಾಜ ಪ್ರೇಮ ಇಂದಿಗೂ ಅವನನ್ನು ದೊಡ್ಡವನನ್ನಾಗಿಯೆ ಉಳಿಸಿದೆ. ಇದು ಬಹಳ ವಿಶೇಷ ಗುಣವೇ ಎನ್ನಬೇಕು. ಏಕೆಂದರೆ, ಸಮಾಜದಲ್ಲಿ ಎಲ್ಲರೊಡಗೂಡಿ ಒಡನಾಡುತ್ತಲೇ ಸಂನ್ಯಾಸಿಯಂತೆ ಬದುಕುವುದು ಅಷ್ಟೊಂದು ಸುಲಭದ ಸಂಗತಿಯಲ್ಲ, ಈ ಕಾರಣಕ್ಕಾಗಿಯೆ ನಾಗಪ್ಪನ ಬದುಕು ನನಗೆ ಅನೇಕ ಬಾರಿ ಅಖಂಡ ತಪಸ್ಸಿನಂತೆ ಕಂಡಿದೆ. ಆಗೆಲ್ಲ ಈ ಕುರುಚಲು ಗಡ್ಡಧಾರಿ ನನಗೆ ಪುರಾಣಕಾಲದ ನಮ್ಮ ಋಷಿಗಳಂತೆ ಭಾಸವಾಗಿದ್ದೂ ಇದೆ.

ನಾಗಪ್ಪ ನನ್ನನ್ನೋಮ್ಮೆ  ಕುರುವತ್ತಿ ಜಾತ್ರೆಗೆ ಕರೆದುಕೊಂಡು ಹೋಗಿದ್ದ. ಅವರ ಮನೆಯಲ್ಲಿ ಪ್ರತಿ ವರ್ಷ ಕುರುವತ್ತಿ ಜಾತ್ರೆಗೆ ಚಕ್ಕಡಿ ಕಟ್ಟುತಿದ್ದರು. ಏಕೆಂದರೆ, ಅವರ ಮನೆದೇವರು ಕುರುವತ್ತಿ ಬಸವಣ್ಣ. ಕುರುವತ್ತಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಒಂದೂರು. ಸುಪ್ರಸಿದ್ಧ ಮೈಲಾರಕ್ಕೆ ಸಮೀಪವಿದೆ. ಮೈಲಾರ ಮತ್ತು ಕುರುವತ್ತಿ ಎರಡೂ ತುಂಗಭದ್ರಾ ನದಿ ತಟದಲ್ಲೆ ಇವೆ. ಮೈಲಾರದಲ್ಲಿ ಭಾರತ ಹುಣ್ಣಿಮೆ‌ಗೆ ಜಾತ್ರೆ ಆದರೆ, ಕುರವತ್ತಿಯಲ್ಲಿ ತದನಂತರ ಶಿವರಾತ್ರಿಗೆ ಜಾತ್ರೆಯಾಗುತ್ತದೆ. ಎರಡೂ ದೊಡ್ಡ ಜಾತ್ರೆಗಳೆ.

ಜಾತ್ರೆಯ ತುಂಬ ನನ್ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ತಿರುಗಿದ್ದ ನಾಗಪ್ಪ ತೇರಿನ ದಿನ ನನಗೆ ಮಿರ್ಚಿಮಂಡಕ್ಕಿ, ಮಿಠಾಯಿ ಕೊಡಿಸಿಕೊಂಡು ತೇರು ತೋರಿಸಿ ತಾನೇ ಖುಶಿಪಟ್ಟಿದ್ದ. ಹಾಗೆ ಮುಂದೆ ಬಂದು ಕೊಳಲು, ಲಟಿಕೆ, ಸೀಟಿ ಮೊದಲಾದ ಆಟಿಕೆ ಸಾಮಾನು ಕೊಡಿಸಿ ತಾನೇ ಹಿಗ್ಗಿದ್ದ. ನನಗೆ ಇಷ್ಟೆಲ್ಲ ಕೊಡಿಸಲು ಇವನಿಗೆ ಎಲ್ಲಿಂದ ರೊಕ್ಕ ಬಂದವು ಎಂದು ಆಶ್ಚರ್ಯ! ನನ್ನ ಅನುಮಾನ‌ವನ್ನು ತಾನೇ ಅರ್ಥ‌ಮಾಡಿಕೊಂಡವನಂತೆ ತನಗೆ ರೊಕ್ಕ ಸಿಕ್ಕ ರಹಸ್ಯ‌ವನ್ನೂ ಬಿಚ್ಚಿ ಹೇಳಿಬಿಟ್ಟಿದ್ದ.

ಜಾತ್ರೆಗೆ ಬರುವಾಗ ನಾಗಪ್ಪನ ಬಳಿ ಇದ್ದುದು ನಾಲ್ಕೈದು ರೂಪಾಯಿ ಅಷ್ಟೆ. ಆದರೆ, ಅವನು ಅದರಲ್ಲೇ ಇಸ್ಪೀಟು ಆಡಿ ನಲವತ್ತು ರೂಪಾಯಿ ಗೆದ್ದಿದ್ದನಂತೆ. ತೇರಿನ ದಿನದ ರಾತ್ರಿ ಮತ್ತೆ ಆಡುವುದಾಗಿಯೂ ಮತ್ತೆ ಗೆದ್ದರೆ ನಿನಗೆ ಚಾವಿ ಟ್ರ್ಯಾಕ್ಟರು, ಹೆಲಿಕ್ಯಾಪ್ಟರು, ಕಾರು ಕೊಡಿಸುವುದಾಗಿ ಹೇಳಿ ನನಗೂ ಇಲ್ಲದ ಆಸೆಯನ್ನು ಹಚ್ಚಿಬಿಟ್ಟಿದ್ದ. ಅವತ್ತು ರಾತ್ರಿ ನನಗೆ ನಿದ್ದೆಯೆ ಬಾರದಂತಾಗಿಬಿಟ್ಟಿತು. ನಾಗಪ್ಪ ಮತ್ತೆ ಇಸ್ಪೀಟು ಆಡಿ ಗೆದ್ದಂತೆ, ನಾನು ಚಾವಿ ಟ್ರ್ಯಾಕ್ಟರು ಓಡಿಸಿದಂತೆಯೆ ಕನಸು.

ಊರಿಗೆ ಮರಳುವ ದಿನ ಬೇಸರದ ಮುಖದಲ್ಲೆ ನನ್ನ ಬಳಿ ಬಂದ ನಾಗಪ್ಪ , ತಾನು ನಿನ್ನೆ ರಾತ್ರಿ ಆಟದಲ್ಲಿ ಇನ್ನೂರೈವತ್ತು ರೂಪಾಯಿ ಗೆದ್ದಿದ್ದಾಗಿಯೂ ಅವುಗಳನ್ನು ಮತ್ತೊಂದು ಆಟದಲ್ಲಿ ಸೋತದ್ದಾಗಿಯೂ ಹೇಳಿ ನಕ್ಕು ಬಿಟ್ಟ!

ಜಾತ್ರೆಯಿಂದ ಊರಿಗೆ ಮರಳಿದ ನಂತರ ಬಹಳಷ್ಟು ದಿನಗಳವರೆಗೂ, ನಾಗಪ್ಪ ಆಟದಲ್ಲಿ ಸೋತಿದ್ದಕ್ಕಾಗಿ ಅವನಿಗಿಂತಲೂ ಹೆಚ್ಚಾಗಿ ನಾನೇ ವ್ಯಥೆ ಪಟ್ಟಿದ್ದೆ!