ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ಪ್ರಿಯಾಂಕಾ ಅತ್ಯಾಚಾರ ಪ್ರಕರಣ..!

ಪ್ರಿಯಾಂಕಾ ರೆಡ್ಡಿಯ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದಂತೆ ಪ್ರಿಯಾಂಕ ಪ್ರಕರಣ ಆಗಲಿಲ್ಲ. ಪ್ರಿಯಾಂಕಾ ರೆಡ್ಡಿ ಕೇಸಿನ ತಪ್ಪಿತಸ್ಥರನ್ನು ಬೀದಿಯಲ್ಲೇ ಸುಡಬೇಕು, ನಡುಬೀದಿಯಲ್ಲಿ ನೇಣುಹಾಕಬೇಕು ಎಂಬಂತೆ ಯಾವ ಮಾಧ್ಯಮವೂ ಜಮಖಂಡಿ ಪ್ರಿಯಾಂಕಾ ಕೇಸಿನಲ್ಲಿ ಒತ್ತಡ ತರಲಿಲ್ಲ. ಯಾರೂ ಮೇಣದ ಬತ್ತಿ ಹಚ್ಚಲಿಲ್ಲ,  ಪಾರ್ಲಿಮೆಂಟಿನಲ್ಲೂ ಚರ್ಚೆಯಾಗಲಿಲ್ಲ. ಯಾಕೆಂದರೆ, ಇವೆಲ್ಲಾ ಆಗುವಷ್ಟು ಪ್ರಿಯಾಂಕ ಪ್ರತಿಷ್ಟಿತ ಜಾತಿಗೆ ಸೇರಿದವಳಲ್ಲ.

ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ಪ್ರಿಯಾಂಕಾ ಅತ್ಯಾಚಾರ ಪ್ರಕರಣ..!

ಹೈದರಾಬಾದಿನ ಪ್ರಿಯಾಂಕಾ ರೆಡ್ಡಿ ರೇಪ್ ಪ್ರಕರಣ ಬೆಳಕಿಗೆ ಬಂದ ದಿನವೇ ಮತ್ತೊಬ್ಬ ಪ್ರಿಯಾಂಕಾ(ಪಕ್ಕದಲ್ಲಿ 'ರೆಡ್ಡಿ' ಇರಲಿಲ್ಲ) ಎಂಬ ಹೆಸರಿನ ಹೆಣ್ಣು ಮಗಳೊಬ್ಬಳ ಅತ್ಯಾಚಾರ ಮತ್ತು ಕೊಲೆ ಕೇಸಿನಲ್ಲಿ ವಿವರ ಕಲೆಹಾಕಿ ಪೊಲೀಸ್ ಮಹಾ ನಿರ್ದೇಶಕರ ಮುಂತಾದವರಿಗೆ ಮನವಿಯೊಂದನ್ನು ನೀಡಲು ನಮ್ಮ ಕಛೇರಿಯಲ್ಲಿ ಕುಳಿತು ಡ್ರಾಪ್ಟ್ ಮಾಡುತ್ತಿದ್ದೆವು. 

ಈ ಪ್ರಿಯಾಂಕಾ ಪ್ರಕರಣ ನಡೆದದ್ದು ಜಮಖಂಡಿಯಲ್ಲಿ, ಈಕೆಯ ಅಪ್ಪ ಒಬ್ಬ ದೇವದಾಸಿಯ ಮಗ. ಈಕೆಯ ತಾಯಿ ಮಾದರ ಕುಲದ ಹೆಣ್ಣುಮಗಳು. ಹೈದರಾಬಾದಿನ ಪ್ರಿಯಾಂಕಾ ರೆಡ್ಡಿ ಪ್ರಕರಣದಲ್ಲಿ ಆರೋಪಿಗಳು ಸಣ್ಣಪುಟ್ಟ ಪೊರಕಿಗಳಾದರೆ, ನಮ್ಮ ಜಮಖಂಡಿಯ ಪ್ರಿಯಾಂಕಾ ಕೇಸಿನ ಆರೋಪಿಗಳು ಪ್ರತಿಷ್ಠಿತರು, ಶಾಸಕರ ಸಂಬಂಧಿಗಳು ಮತ್ತು ಒಂದು ದೊಡ್ಡ ವಿದ್ಯಾಸಂಸ್ಥೆಯ ಮುಖ್ಯಸ್ಥರು.

ಆ ದಿನ ಇದ್ದಕ್ಕಿದ್ದಂತೆ ನಮ್ಮ ಭಾಸ್ಕರ್ ಪ್ರಸಾದ್ ಏಳೆಂಟು ಮಂದಿ ಉತ್ತರ ಕರ್ನಾಟಕದ ಗ್ರಾಮಸ್ಥರನ್ನು ಕರೆದುಕೊಂಡು ನಮ್ಮ ಕಚೇರಿಗೆ ಬಂದರು. "ಸರ್ ಇವರ ಮಗಳ ಅತ್ಯಾಚಾರ ಮತ್ತು ಕೊಲೆಯಾಗಿ ನಾಲ್ಕು ತಿಂಗಳಾಗಿದೆ. ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ವಿಚಾರಣೆ ಕೂಡ ನಡೆಸಿಲ್ಲ. ಮಗಳನ್ನು‌ ಕಳಕೊಂಡ ಈ ನತದೃಷ್ಟರು ನ್ಯಾಯಕ್ಕಾಗಿ ಕಂಬಕಂಬ ಅಲೆಯುತ್ತಿದ್ದಾರೆ. ಇವರನ್ನು ಕೇಳುವವರಿಲ್ಲ. ಅದಕ್ಕೇ ಇಲ್ಲಿಗೆ ಕರೆತಂದೆ ಎಂದರು.‌ ನನಗೆ ತಕ್ಷಣ ಅನಿಸಿದ್ದು "ಭಾಸ್ಕರ್ ಪ್ರಸಾದ್ ಜಮಖಂಡಿಗೆ ಹೋಗಿ ಪ್ರತಿಭಟಿಸದೆ ಇಲ್ಲಿಗೇಕೆ ಬಂದರು ಎಂಬುದು. ಮತ್ತೇ ಮರುಕ್ಷಣದಲ್ಲೇ ಅರ್ಥವಾಯಿತು ವಿಜಾಪುರದ ದಾನಮ್ಮ ಎಂಬ ದಲಿತ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಾಸ್ಕರ್ ಪ್ರಸಾದ್ ವಿಜಾಪುರಕ್ಕೇ ಹೋಗಿ ಆಗಿನ‌ ಆರೋಪಿಗಳ ವಿರುದ್ದ ಪ್ರತಿಭಟಿಸಿ ಜೈಲು ಸೇರಿದ್ದು. ಇಂದಿಗೂ ಆ ಕೇಸಿಗಾಗಿ ವಿಜಾಪುರಕ್ಕೆ ಅಲೆದಾಡುತ್ತಿರುವುದು ನೆನಪಾಯಿತು. ಕಡೆಗೆ ತಾನು ಒಬ್ಬಂಟಿಯಾಗಿಯೂ ಮತ್ತು ಲೇಖಕ ಕಾರ್ಪೆಂಟರ್ ಅವರೊಂದಿಗೆ‌ ಜತೆಗೂಡಿಯೂ ಅನುಭವಿಸುತ್ತಿರುವ ಕಷ್ಟ ನೆನಪಾಯಿತು. ಈಗಲೂ ಅತ್ಯಾಚಾರಕ್ಕೆ ಒಳಗಾಗಿ ಸತ್ತಿರುವುದು ದಲಿತ ಹೆಣ್ಣುಮಗಳೇ, ಈಗಲೂ ಆರೋಪಿ ಸ್ಥಾನದಲ್ಲಿರುವವರು ವಿಜಾಪುರದ ಆರೋಪಿಗಳಿಗಿಂತಲೂ ಪ್ರಭಾವಿತರೇ. ಈ  ಕಾರಣಕ್ಕೆ ಈ ಪ್ರಕರಣದಲ್ಲಿ ಹಿಂದೆ ದುಡುಕಿದಂತೆ ದುಡುಕದೆ ಒಂದಷ್ಟು ಬುದ್ದಿವಂತಿಕೆಯಿಂದ ನಿಭಾಯಿಸಲು ಮತ್ತು‌ ಕಾನೂನಾತ್ಮಕವಾಗಿ ಯೋಚಿಸಲು ನಮ್ಮ ಕಚೇರಿಗೆ ಬಂದಿದ್ದರು ಎನಿಸುತ್ತದೆ.

ಇಡೀ ಪ್ರಕರಣದ ವಿವರ ಅತ್ಯಾಚಾರ ಮತ್ತು ಕೊಲೆಯಾದ ಸಂತ್ರಸ್ಥೆಯ ಹೆತ್ತವರು ಹೇಳುವಂತೆ ಯತಾವತ್ತಾಗಿ, ಸಂಕ್ಷಿಪ್ತವಾಗಿ ಹೀಗಿದೆ.

ಪ್ರಿಯಾಂಕಾ, ಶಾಲಾ ದಿನಗಳಿಂದಲೂ ಚೂಟಿಯಿಂದಿದ್ದ ಹೆಣ್ಣುಮಗಳು, ಓದಿನಲ್ಲಿ ಸದಾ ಮೊದಲ ಸ್ಥಾನ. ಈಕೆ ಎಸ್.ಎಸ್.ಎಲ್.ಸಿ ಯಲ್ಲಿ ತೆಗೆದ ಉತ್ತಮ ಅಂಕ ನೋಡಿ, ಇವಳ ತಾಯಿತಂದೆ ಇವಳ ಓದಿಗೆ ಇನ್ನಷ್ಟು ಪ್ರೋತ್ಸಾಹ ಕೊಡಲು, ಚಿಮ್ಮಡ ಎಂಬ ಕುಗ್ರಾಮದಿಂದ ಜಮಖಂಡಿ ಎಂಬ 'ಷಹರ'ಕ್ಕೆ ಕರೆತಂದು, ಕೂಲಿ-ನಾಲಿ ಮಾಡಿ ಒಂದು ಲಕ್ಷ ರೂಗಳನ್ನು  ಹೊಂದಿಸಿ "ರಾಯಲ್ ಪ್ಯಾಲೆಸ್ ಪಿ.ಯು.ಕಾಲೇಜು ಮತ್ತು ಹಾಸ್ಟೆಲ್ಗೆ ಸೇರಿಸಿದರು. ಈ ವಿದ್ಯಾಸಂಸ್ಥೆ ಸ್ಥಳೀಯ ಕಾಂಗ್ರೆಸ್‍ ಶಾಸಕರಾದ ಆನಂದ ಸಿದ್ದು ನ್ಯಾಮಗೌಡರದು, ಇದರ ಛೇರ್ಮನ್ ಶಾಸಕರ ಸಹೋದರ ಬಸವರಾಜ ಸಿದ್ದು ನ್ಯಾಮಗೌಡರು.

ಪ್ರಿಯಾಂಕಾ ಹೊಸ ಕಲಿಕೆಯ ವಾತಾವರಣದಲ್ಲಿ ಕಲಿಯುತ್ತಾ ಅತ್ಯಂತ ಖುಷಿಯಿಂದಿದ್ದಳು, ಒಂದು ದಿನ ಅಪ್ಪನಿಗೆ ಪೋನ್ ಮಾಡಿ ತನಗೆ ಬಟ್ಟೆ ಕೊಂಡು ಬರುವಂತೆ ಕೇಳಿದಳು. ಅಪ್ಪ-ಅಮ್ಮ ಮಗಳಿಗೆ ಬಟ್ಟೆ ಕೊಡಲು ಹಾಸ್ಟೆಲ್‍ಗೆ ಬಂದರೆ, ಹಾಸ್ಟೆಲ್‍ ನ ದೊಡ್ಡ ಗೇಟ್ ತೆರೆಯಲು ವಾಚಮೆನ್ ಒಪ್ಪಲಿಲ್ಲ. ಅಪ್ಪ ಅಮ್ಮ ಇಬ್ಬರೂ ವಾಚಮೆನ್ ಬಳಿ ಅಂಗಲಾಚುತಿದ್ದದ್ದನ್ನು ನೋಡಿ ಮಗಳು ಪ್ರಿಯಾಂಕಾ ಗೇಟಿನ ಬಳಿ‌ ಓಡಿ ಬಂದು, ಹೆತ್ತವರಿಂದ ಬಟ್ಟೆ ತೆಗೆದುಕೊಳ್ಳುತಿದ್ದಾಗ ಅಧ್ಯಾಪಕರೊಬ್ಬರು ಗೇಟಿನ ಬಳಿ ಬಂದು ಅನಾವಶ್ಯಕವಾಗಿ ಕ್ಯಾತೆ ತೆಗೆದು ಪ್ರಿಯಾಂಕಾಳ ಅಪ್ಪ ಅಮ್ಮನೊಂದಿಗೆ ಪ್ರಿಯಾಂಕಾಳನ್ನೂ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದರು. ಈ ಮದ್ಯೆ ಸದರಿ ಅಧ್ಯಾಪಕ ಮತ್ತು ಪ್ರಿಯಾಂಕಾಳ ಪೋಷಕರ ನಡುವೆ ಒಂದಷ್ಟು ಮಾತಿನ ಚಕಮಕಿ ಕೂಡ ಲಘುವಾಗಿ ನಡೆದು ಹೋಯಿತು. ಕಡೆಗೆ ಪ್ರಿಯಾಂಕಾ ಅಧ್ಯಾಪಕರ ಕ್ಷಮೆ ಕೇಳಿ ಅಧ್ಯಾಪಕರೊಂದಿಗೇ ಒಳ ನಡೆದಳು, ಅಪ್ಪ ಅಮ್ಮ ಊರಿಗೆ ಹಿಂದಿರುಗಿದರು.

ಅದೇ ದಿನ ಸಂಜೆ ಪ್ರಿಯಾಂಕಾಳ ಅಪ್ಪನಿಗೆ ಹಾಸ್ಟೆಲ್‍ನ ವಾಚಮೆನ್ ಪೋನ್ ಮಾಡಿ, "ನಿಮ್ಮ ಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ ಹೊರಟು ಬನ್ನಿ ಎಂದಿದ್ದ. ಪ್ರಿಯಾಂಕಾಳ ಹೆತ್ತವರು ಗಾಬರಿಗೊಂಡು ಓಡಿಬಂದು ಆಸ್ಪತ್ರೆ ತಲುಪವಷ್ಟರಲ್ಲಿ ಪ್ರಿಯಾಂಕಾಳನ್ನು ಡಿಸಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹಾಸ್ಟೆಲ್ಲಿಗೆ ಕರೆದುಕೊಂಡು ಹೋಗಿದ್ದರು. ಪ್ರಿಯಾಂಕಾಳ ಪೋಷಕರು ಹಾಸ್ಟೆಲ್‍ಗೆ ಹೋದಾಗ ತಿಳಿದ ವಿಷಯವೇನೆಂದರೆ, ತಮ್ಮ ಜತೆ ಅಂದು ಬೆಳಿಗ್ಗೆ ಜಗಳವಾಡಿದ್ದ ಅಧ್ಯಾಪಕ  ಕಪಾಳಕ್ಕೆ ಬಲವಾಗಿ ಹೊಡೆದ ಪರಿಣಾಮ ಪ್ರಿಯಾಂಕಾ ಪ್ರಜ್ನೆ ತಪ್ಪಿ ಬಿದ್ದಿದ್ದಳು. ನಂತರ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿ ಹಾಸ್ಟೆಲ್‍ಗೆ ವಾಪಸ್ಸು ಕರೆದೊಯ್ದಿದ್ದರು. ಈ ವಿಷಯ ತಿಳಿದಾಕ್ಷಣ ಪ್ರಿಯಾಂಕಾಳನ್ನು  ಹಾಸ್ಟೆಲ್‍ನಿಂದ ಕರೆದೊಯ್ಯಲು ಅವಳ ಪೋಷಕರು ತೀರ್ಮಾನಿಸಿದರು. ಅಷ್ಟರಲ್ಲಿ ರೀತಾ ಜೈನರ್ ಎಂಬ ಪ್ರಿನ್ಸಿಪಾಲರು ಇವರನ್ನು ಸಮಾದಾನಪಡಿಸಿ ಮುಂದೆ ಈ ರೀತಿಯ ಅನಾಹುತ ಆಗದಂತೆ ಎಚ್ಚರವಹಿಸುವುದಾಗಿ ಧೈರ್ಯ ಹೇಳಿ ಕಳಿಸಿದರು.

ಈ ಘಟನೆಯ ನಂತರ ದಿನಾಂಕ 9ನೇ ಜುಲೈ 2019 ರಂದು ರಾತ್ರಿ 11 ಗಂಟೆಗೆ ಹಾಸ್ಟೆಲ್ ನಿಂದ ಪ್ರಿಯಾಂಕಾ ತಂದೆಗೆ ಪೋನ್ ಮಾಡಿ "ನಿಮ್ಮ ಮಗಳು ಪ್ರಿಯಾಂಕಾ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಸತ್ತಿದ್ದಾಳೆ ಎಂದರು. ಪ್ರಿಯಾಂಕಾಳ ಹೆತ್ತವರು ಎದೆ ಎದೆ ಬಡಕೊಂಡು ಗೋಳಾಡುತ್ತಾ ಅಲ್ಲಿಗೆ ಹೋದರೆ, ಹದಿನೇಳು ವಯಸ್ಸಿನ ಮಗು ಪ್ರಿಯಾಂಕಾಳನ್ನು ಪಕ್ಕಕ್ಕೆ ತಿರುಗಿಸಿ ಮಲಗಿಸಿದಂತೆ ವ್ಯವಸ್ಥೆ ಮಾಡಿದ್ದರು. ಆಕೆಯ ಚಪ್ಪಲಿಗಳನ್ನು ಟೆರೇಸಿನ ಮೇಲೆ ಜೋಡಿಸಿ ಇಡಲಾಗಿತ್ತು. ಅಲ್ಲಿಂದ ಆಚೆ ಜಮಖಂಡಿಯ ಗ್ರಾಮಾಂತರ ಠಾಣೆಯ ಪಿ.ಎಸ್.ಐ, ಸಿ.ಐ.ಪಿ ಮತ್ತು ಡಿ.ವೈ.ಎಸ್.ಪಿ ಗಳು ಈ ಕೇಸನ್ನು ಮುಚ್ಚಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎಲ್ಲಾ ರೀತಿಯ ಕೆಲಸಗಳನ್ನೂ ಮಾಡತೊಡಗಿದರು. ಅಂದು ಪ್ರಿಯಾಂಕಾಳನ್ನು ಹೊಡೆದ ಅಧ್ಯಾಪಕ ಮತ್ತು ಆ ವಿದ್ಯಾಸಂಸ್ಥೆಯಲ್ಲಿನ ಯಾರ ಹೆಸರುಗಳನ್ನೂ ಹೊರಬಾರದಂತೆ ಎಚ್ಚರ ವಹಿಸಿದರು. ದೇಹವನ್ನು ಬೇಗ ಸುಡುವಂತೆ ಹೆತ್ತವರನ್ನು ಒತ್ತಾಯಿಸಿದರು. ತಮಗೆ ಬೇಕಾದಂತೆ ಮರಣೋತ್ತರ ಪರೀಕ್ಷೆ ಮಾಡಿಸಿಕೊಂಡರು. ಮೊದಲಿಗೆ ಹೆತ್ತವರು ಕೊಟ್ಟ 'ರೇಪ್ ಅಂಡ್ ಮರ್ಡರ್' ದೂರನ್ನು ಕೂಡ ದಾಖಲಿಸಲಿಲ್ಲ. ಆ ಸಂದರ್ಭದಲ್ಲಿ ಒಂದಷ್ಟು ದಲಿತ ಸಂಘಟನೆಗಳು ಬಂದಿದ್ದರಿಂದ ಆ ನಂತರ ದೂರು ದಾಖಲಿಸಿಕೊಂಡರು. ಅದರ ನಂತರ ದಲಿತ ಸಂಘಟನೆಗಳು ಕಾರಣಾಂತರದಿಂದ ನಿಷ್ಕ್ರಿಯವಾದವು. ಪ್ರಿಯಾಂಕಳ ಹೆತ್ತವರು ದಿಕ್ಕಿಲ್ಲದವರಾದರು.

ಆಶ್ಚರ್ಯವೆಂದರೆ ಪೊಲೀಸರೇನೋ F.I.R (0102/2019)ದಾಖಲಿಸಿಕೊಂಡಿದ್ದಾರೆ. I.P.C ಸೆಕ್ಷನ್ 376, 302, 34 (ರೇಪ್ ಮತ್ತು ಕೊಲೆ) ಮತ್ತು 'ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಆದರೆ ಅಪಾದಿತರು ಮಾತ್ರ ವ್ಯಕ್ತಿಗಳಲ್ಲ ಬದಲಿಗೆ 'ಜಮಖಂಡಿ ರಾಯಲ್ ಪ್ಯಾಲೆಸ್ ಕಾಲೇಜ್ ಅಡ್ಮಿನಿಸ್ಟ್ರೇಶನ್ ಎಂಬ ಸಂಸ್ಥೆ. ಈ ದೇಶದಲ್ಲಿ ಒಂದು ಸಂಸ್ಥೆ ಕೂಡ ರೇಪ್ ಅಂಡ್ ಮರ್ಡರ್ ಮಾಡುತ್ತದೆ.

ಈ ಘಟನೆ ಆಗಿ ನಾಲ್ಕು ತಿಂಗಳಾದರೂ ಯಾರನ್ನೂ ಈವರೆಗೆ ಅರೆಸ್ಟ್ ಮಾಡುವುದಿರಲಿ ವಿಚಾರಣೆಯನ್ನೂ ಮಾಡಿಲ್ಲ. ಪ್ರಿಯಾಂಕಾ ರೆಡ್ಡಿಯ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದಂತೆ ಪ್ರಿಯಾಂಕಾ ಪ್ರಕರಣ ಆಗಲಿಲ್ಲ. ಪ್ರಿಯಾಂಕಾ ರೆಡ್ಡಿ ಕೇಸಿನ ತಪ್ಪಿತಸ್ಥರನ್ನು ಬೀದಿಯಲ್ಲೇ ಸುಡಬೇಕು, ನಡುಬೀದಿಯಲ್ಲಿ ನೇಣುಹಾಕಬೇಕು ಎಂಬಂತೆ ಯಾವ ಮಾಧ್ಯಮವೂ ಜಮಖಂಡಿ ಪ್ರಿಯಾಂಕಾ ಕೇಸಿನಲ್ಲಿ ಒತ್ತಡ ತರಲಿಲ್ಲ. ಯಾರೂ ಮೇಣದ ಬತ್ತಿ ಹಚ್ಚಲಿಲ್ಲ,  ಪಾರ್ಲಿಮೆಂಟಿನಲ್ಲೂ ಚರ್ಚೆಯಾಗಲಿಲ್ಲ. ಯಾಕೆಂದರೆ, ಇವೆಲ್ಲಾ ಆಗುವಷ್ಟು ಪ್ರಿಯಾಂಕಾ ಪ್ರತಿಷ್ಟಿತ ಜಾತಿಗೆ ಸೇರಿದವಳಲ್ಲ, ಇವೆಲ್ಲಾ ಬೇಡ ಬಿಡಿ. ಪ್ರಿಯಾಂಕಾಳನ್ನು ಹೆತ್ತವರು ಅಂಗಲಾಚಿ ಬೇಡುತಿದ್ದಾರೆ. ಅವರ ಮಗಳ ಅನ್ಯಾಯದ ಸಾವಿಗೆ ಕನಿಷ್ಟ ನ್ಯಾಯಕೊಡಿಸಿ, ಅಷ್ಟು ಸಾಕು...?