3 ಡಿ ಜೈವಿಕ ಮುದ್ರಣ:ಮಾನವ ಅಂಗಗಳ ಪುನರ್ ಸೃಷ್ಟಿಗೆ ಮುನ್ನುಡಿ

ಪ್ರನಾಳ ಶಿಶು, ತದ್ರೂಪಿ ಸೃಷ್ಟಿಯಂಥದ್ದೆಲ್ಲ ಯಶಸ್ಸಾಗಿರುವುದರ ಬೆನ್ನಲ್ಲೇ, ಮಾನವ ಅಂಗಾಂಗಳನ್ನು ಸೃಷ್ಟಿಸಿಕೊಳ್ಳುವ ಕ್ರಿಯೆಗಳು ಚಾಲನೆಗೆ ಬರುತ್ತಿರುವುದು ವೈದ್ಯಕೀಯ ಕ್ಷೇತ್ರವನ್ನೇ ಬೆರಗುಗೊಳಿಸುತ್ತಿದೆ

3 ಡಿ ಜೈವಿಕ ಮುದ್ರಣ:ಮಾನವ ಅಂಗಗಳ ಪುನರ್ ಸೃಷ್ಟಿಗೆ ಮುನ್ನುಡಿ

ದೇಹದ ಅಂಗಾಂಗ ಕೈಕೊಟ್ಟರೆ ಬೇರೊಬ್ಬರ ಅಂಗಾಂಗ ಜೋಡಿಸುವಂಥ ವೈದ್ಯಕೀಯ ತಂತ್ರಜ್ಞಾನಕ್ಕೀಗ ಅದೇ ಮನುಷ್ಯನ ಜೀವಂತ ಕೋಶಗಳಿಂದ ಅದೇ ಅಂಗಾಂಗ ರೂಪಿಸುವ ಅಚ್ಚರಿದಾಯಕ ಬೆಳವಣಿಗೆಗಳು ಅಂತಿಮ ಘಟ್ಟ ತಲುಪುತ್ತಿವೆ.

ಮೂರು ಆಯಾಮ ಅಥವಾ 3 ಡಿ ಎಂಬುದು ಸಿನಿಮಾ, ಮುದ್ರಣ ಮಾಧ್ಯಮದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಚಾಚಿಕೊಂಡಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಸಿಟಿ, ಎಂಆರ್ ಐ ಸ್ಕ್ಯಾನಿಂಗ್‍ನಲ್ಲೂ ಇದೇ ಬಳಕೆಯಾಗುತ್ತೆ. ಮನುಷ್ಯನ ಜೀವಂತ ಕೋಶಗಳನ್ನ ಪ್ರಯೋಗಾಲಯದಲ್ಲಿ ಬೆಳೆಸಿ,  ಪದರ ಪದರವಾಗಿ ಬೇಕಾದ ಆವಯವ ಮುದ್ರಿಸುವ ನೂತನ ತಂತ್ರಜ್ಞಾನ `3 ಡಿ ಬಯೋಪ್ರಿಂಟಿಂಗ್' ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೆಬ್ಬಿಸಲು ಬರುತ್ತಿದೆ.

ಈ 3ಡಿ ಬಯೋ ಪ್ರಿಂಟಿಂಗ್‍ನಲ್ಲಿ ಮೂರು ಹಂತಗಳಿದ್ದು, ಮೊದಲಿನ ಪೂರ್ವ(ಪ್ರೀ) ಬಯೋಪ್ರಿಂಟಿಂಗ್ ಹಂತದಲ್ಲಿ ಬೇಕಾದ ಜೀವಕೋಶವನ್ನ ಆಯ್ಕೆ ಮಾಡಿಕೊಳ್ಳಲಾಗುತ್ತೆ, ಎರಡನೇ ಹಂತ ಮುದ್ರಣ(ಪ್ರಿಂಟ್) ಬಯೋಆಗಿದ್ದು ಇಲ್ಲಿ ಜೈವಿಕ ವಸ್ತುಗಳನ್ನ ಸುಸ್ಥಿರವಾಗಿ ಬೆಳೆಸಲಾಗುತ್ತೆ. ಮೂರನೇ ಹಂತ ನಂತರ(ಪೋಸ್ಟ್) ಬಯೋಪ್ರಿಂಟಿಂಗ್‍ನಲ್ಲಿ ಆ ವಸ್ತುವನ್ನ ಅನ್ವಯಿಸುವಂಥದ್ದು ಆಗಲಿದೆ.

ಇಲ್ಲಿ ಜೈವಿಕ ವಸ್ತು ಪ್ರಾಕೃತಿಕವಾದದ್ದೂ ಆಗಿರಬಹುದು, ಕೃತಕವಾದುದೂ ಆಗಿರಬಹುದು. ಈ ಮುದ್ರಣದಲ್ಲಿ ಬಳಕೆಯಾಗುವ ಜೈವಿಕ ಶಾಯಿ(ಬಯೋ ಇಂಕ್)  ಜೈವಿಕ ವಸ್ತು, ಬೆಳವಣಿಗೆಯ ಅಂಶಗಳು(ಗ್ರೌತ್ ಫ್ಯಾಕ್ಟರ್) ಮತ್ತು ಮಾನವ ಜೀವಕೋಶ(ಹ್ಯೂಮನ್ ಸೆಲ್)ಗಳಿಂದ ಆಗಿರುತ್ತೆ.

ಜೈವಿಕ ಜೀವಕೋಶಗಳು ಚರ್ಮ, ಯಕೃತ್ತು ಇತ್ಯಾದಿಯಂಥ ಯಾವುದೇ ಆವಯವದಿಂದ ತೆಗೆದುಕೊಂಡಿದ್ದಾಗಿರಬಹುದು. ಮೂರು ಹಂತಗಳಲ್ಲಿನ ಪ್ರಕ್ರಿಯೆಯಲ್ಲಿ ಮನುಷ್ಯನ ಜೀವಕೋಶಗಳಿಂದಲೇ ಬೇಕಾದ ಅಂಗವನ್ನ ಸೃಷ್ಟಿಸಿಕೊಳ್ಳುವ ಅಭೂತಪೂರ್ವ ಬೆಳವಣಿಗೆ ಇದಾಗಿದೆ.

ಈಗ ಬೇರೆ ಮನುಷ್ಯನ ಅಂಗಗಳನ್ನ ಇನ್ನೊಬ್ಬನಿಗೆ ಅಳವಡಿಸುವಂಥದ್ದು ಆಗುತ್ತಿದೆ. ಕಣ್ಣು, ಹೃದಯ, ಮೂತ್ರಪಿಂಡ ಇವೆಲ್ಲವನ್ನ ದಾನ ಮಾಡುವಂತೆ ದೊಡ್ಡ ಮಟ್ಟದಲ್ಲಿ ಆಂದೋಲನಗಳೇ ನಡೆಯುತ್ತಿದ್ದರೂ, ಅಗತ್ಯವಿರುವಷ್ಟು ಪ್ರಮಾಣದಲ್ಲಿ ಅಂಗಗಳು ಸಿಗುತ್ತಿಲ್ಲ. ವಿಶ್ವದಾದ್ಯಂತ ಲಕ್ಷಾಂತರ ಜನ ಬದಲಿ ಅಂಗ ಅಳವಡಿಕೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಭಾರತದ ಸಂಖ್ಯೆಯೂ ಕಡಿಮೆಯೇನಿಲ್ಲ. ದಾನಿಗಳನ್ನೇ ಕಾಯುವ ಬದಲಿಗೆ, ಅದೇ ವ್ಯಕ್ತಿಯ ಜೀವಕೋಶಗಳಿಂದಲೇ ಅವನಿಗೆ ಬೇಕಿರುವ ಅಂಗವನ್ನ ಪುನರ್ ಸೃಷ್ಟಿ ಮಾಡಿಕೊಳ್ಳಲು `3ಡಿ ಜೈವಿಕ ಮುದ್ರಣ' ಆಗಮಿಸುತ್ತಿದ್ದು, ಇದರಲ್ಲಿ ಇಂಜಿನಿಯರಿಂಗ್, ಮೆಟೀರಿಯಲ್ ಸೈನ್ಸ್, ಜೈವಿಕ ತಂತ್ರಜ್ಞಾನ ಈ ಮೂರೂ ವಿಭಾಗಗಳು ಒಳಗೊಂಡಿದ್ದು, ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದ್ದು, ಇದನ್ನ ಕಡಿಮೆ ವೆಚ್ಚದಲ್ಲೇ ದೊರಕುವಂತೆ ಮಾಡುವ ಪ್ರಯತ್ನಗಳು ಭರದಿಂದ ಸಾಗಿವೆ.

ಪ್ರನಾಳ ಶಿಶು, ತದ್ರೂಪಿ ಸೃಷ್ಟಿಯಂಥದ್ದೆಲ್ಲ ಯಶಸ್ಸಾಗಿರುವುದರ ಬೆನ್ನಲ್ಲೇ, ಮಾನವ ಅಂಗಾಂಗಳನ್ನು ಸೃಷ್ಟಿಸಿಕೊಳ್ಳುವ ಕ್ರಿಯೆಗಳು ಚಾಲನೆಗೆ ಬರುತ್ತಿರುವುದು ವೈದ್ಯಕೀಯ ಕ್ಷೇತ್ರವನ್ನೇ ಬೆರಗುಗೊಳಿಸುತ್ತಿದೆ.